Home Blog Page 157

ಶಿವಳ್ಳಿಯಲ್ಲಿ ‘ಪಂಚಾಯಿತಿ’ ಕನ್ನಡ ಚಿತ್ರದ ಚಿತ್ರೀಕರಣ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ನೇಟಿವ್ ಕ್ರಿಯೇಷನ್ಸ್ ಅಡಿಯಲ್ಲಿ ದೊಡ್ಡ ನಾಗಯ್ಯ ನಿರ್ಮಿಸುತ್ತಿರುವ ಹಾಗೂ ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದ ‘ಪಂಚಾಯಿತಿ’ ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡ ಸಮೀಪದ ಶಿವಳ್ಳಿಯಲ್ಲಿ ಭರದಿಂದ ಸಾಗಿದೆ.

ಹುಬ್ಬಳ್ಳಿ, ಶಿವಳ್ಳಿ, ಹೆಬಸೂರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಚಿತ್ರದ ಕಥೆ ಉತ್ತರ ಕರ್ನಾಟಕದ ಹಾಲಳ್ಳಿ ಎಂಬ ಗ್ರಾಮದ ಗ್ರಾಮ ಪಂಚಾಯಿತಿ ಚುನಾವಣೆಯ ಸುತ್ತ ಹೆಣೆದಿದೆ. ಪಂಚಾಯಿತಿ ಅಧ್ಯಕ್ಷರ ಹಠಾತ್ ನಿಧನದಿಂದ ಆರಂಭವಾಗುವ ಸಂಘರ್ಷ ಕ್ರಮೇಣ ಇಡೀ ಗ್ರಾಮದ ರಾಜಕೀಯ ಸ್ವರೂಪವನ್ನೇ ಬದಲಿಸುವ ಕಥಾವಸ್ತುವನ್ನು ಹೊಂದಿದೆ.

ಚುನಾವಣಾ ಕಣಕ್ಕೆ ಸ್ಥಳೀಯ ಶಾಸಕರ ಪ್ರವೇಶ, ಹಣದ ಪ್ರಭಾವ, ಜಾತಿ ಹಾಗೂ ಸಾಮಾಜಿಕ ಸಮೀಕರಣಗಳು ಮತ್ತು ಸ್ಥಳೀಯ ಅಸಮಾಧಾನಗಳು ಕಥೆಯಲ್ಲಿ ಪ್ರಮುಖವಾಗಿ ಮೂಡಿಬರಲಿವೆ. ಚಿತ್ರದ ಪ್ರಮುಖ ಪಾತ್ರವಾದ ‘ಪಾಟೀಲ’ ಇಂದಿನ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದೆ.

ಚಿತ್ರದ ಕಥೆಯನ್ನು ಅರವಿಂದ ಮಿತ್ರ ಬರೆದಿದ್ದು, ಪಿ. ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್ ಕಾಶಿ ಛಾಯಾಗ್ರಹಣ ಹಾಗೂ ಕೆಂಪರಾಜ್ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.

ಚಿತ್ರದಲ್ಲಿ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಗೋಕುಲ್ ರಾಜ್, ಬಿಂದು, ಜಗದೀಶ್ ಮೂಕಿ, ಶ್ರುತಿ ಬಿಸರಹಳ್ಳಿ ಹಾಗೂ ಬಸವರಾಜ್ ತಿರ್ಲಾಪುರ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ಸಹ ನಿರ್ದೇಶಕರಾಗಿ ಟಿ.ಆರ್. ಪ್ರಭು, ವಿದ್ಯಾಶ್ರೀ ಹಾಗೂ ಪ್ರಕಾಶ್‌ರಾಜಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ್ ಹಂಡಿಗಿ ಪಿಆರ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ದೊಡ್ಡ ನಾಗಯ್ಯ ಬಂಡವಾಳ ಹೂಡಿದ್ದಾರೆ.

ಸೆ.25ಕ್ಕೆ ‘ಕಾಮನ್ ಮ್ಯಾನ್ ನಾನೇ ಸಿಎಂ’ ತೆರೆಗೆ

ವಿಜಯಸಾಕ್ಷಿ ಸುದ್ದಿ, ಗದಗ: ಸುರಭಿ ಫಿಲಂಸ್‌ನ ‘ಕಾಮನ್ ಮ್ಯಾನ್ ನಾನೇ ಸಿಎಂ’ ಚಿತ್ರ ಸೆ.25ರಂದು ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ಕಥೆ ರಚನಾಕಾರ ಡಾ. ಎನ್. ನರಸಿಂಹಮೂರ್ತಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ವ್ಯಕ್ತಿಯೊಬ್ಬ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿ ಹುದ್ದೆಗೇರಿದರೆ ಏನೆಲ್ಲ ಬದಲಾವಣೆ ತರಬಹುದು ಎಂಬುದನ್ನು ವಿಭಿನ್ನ ಕಥಾಹಂದರದ ಮೂಲಕ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಚಿತ್ರದ ನಾಯಕ ವೃತ್ತಿಯಲ್ಲಿ ವಕೀಲನಾಗಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆ. ಬಳಿಕ ಸಮಾಜದಲ್ಲಿ ಸುಧಾರಣೆ ತರಲು ಆತ ಕೈಗೊಳ್ಳುವ ಪ್ರಯತ್ನಗಳು ಹಾಗೂ ಎದುರಾಗುವ ಸನ್ನಿವೇಶಗಳನ್ನು ಕುತೂಹಲಕರವಾಗಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು.

‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೋರ್ವ ನಟಿಯೂ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ ಮಾಡಿದ್ದು, ಇದು ಅವರ ನಿರ್ದೇಶನದ 106ನೇ ಚಿತ್ರವಾಗಿದೆ. ವಿನಯ ಚಂದ್ರ ಸಂಗೀತ ನಿರ್ದೇಶನ, ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.

ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಬಹುದಾಗಿದ್ದು, ಕಲಾಪೋಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುವ ಮೂಲಕ ಕಲಾವಿದರು ಹಾಗೂ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಟಿ ಸೋನಾ ಲದ್ವಾ ಮಾತನಾಡಿ, ತಾವು ಮೂಲತಃ ರಾಣೆಬೆನ್ನೂರಿನವರಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ತಮ್ಮನ್ನು ಚಿತ್ರದಲ್ಲಿ ನಟಿಸಲು ಡಾ. ನರಸಿಂಹಮೂರ್ತಿ ಅವರು ಅವಕಾಶ ನೀಡಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ವೀಕ್ಷಿಸುವಂತೆ ಮನವಿ ಮಾಡಿದರು.

ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ, ಡಾ. ಎನ್. ನರಸಿಂಹಮೂರ್ತಿ ಅವರು ಬಡತನದಲ್ಲಿ ಬೆಳೆದು ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಆದಾಯದ ಶೇ.40ರಷ್ಟನ್ನು ಸಮಾಜಕ್ಕಾಗಿ ವ್ಯಯಿಸುತ್ತಿದ್ದಾರೆ. ಅವರ ಜೀವನ ಚರಿತ್ರೆಯನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಆತ್ಮಚರಿತ್ರೆ ಹೊರತರುವ ಚಿಂತನೆ ಕದಂಬ ಸೈನ್ಯದ್ದಾಗಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಸೈನ್ಯದ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ, ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ ಎಲೆಕೇರಿ ಚನ್ನಪಟ್ಟಣ, ಬನಶಂಕರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪಣ್ಣ ಬಸೆಟ್ಟೆಪ್ಪ ನೂರೊಂದಪ್ಪ ಹುಂಡೇಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೋಟ್

“ಒಬ್ಬ ಸಾಮಾನ್ಯ ಮನುಷ್ಯ ರಾಜಕಾರಣಕ್ಕೆ ಬರುವುದು ಸುಲಭವಲ್ಲ. ಸಮಾಜದಲ್ಲಿ ಎದುರಾದ ಅವಮಾನವನ್ನೇ ಅವಕಾಶವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಗೇರುವ ಕಥೆ ಚಿತ್ರದಲ್ಲಿದೆ. ಇದು ವಿಭಿನ್ನ ಕಥೆಯಾಗಿದ್ದು, ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ.”

– ಡಾ. ಎನ್. ನರಸಿಂಹಮೂರ್ತಿ, ನಿರ್ಮಾಪಕ ಹಾಗೂ ಕಥೆ ರಚನಾಕಾರ

ಗುರುಗಳ ಋಣ, ಸ್ನೇಹದ ಬಂಧ ಜೀವನಪರ್ಯಂತ ಉಳಿಯಲಿ: ಮುಪ್ಪಿನ ಬಸವಲಿಂಗ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ನೇಹದಲ್ಲಿ ಅಧಿಕಾರ, ಅಂತಸ್ತು, ಶ್ರೇಷ್ಠ–ಕನಿಷ್ಠ ಎಂಬ ಭಾವನೆಗಳಿಗೆ ಅವಕಾಶವಿರಬಾರದು. ಬಾಲ್ಯದಲ್ಲಿ ಬೆಳೆಸಿಕೊಂಡ ಸ್ನೇಹದ ಬಂಧ ಜೀವನದ ಕೊನೆಯ ಉಸಿರಿನವರೆಗೂ ಉಳಿಯಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ 2003–04ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಂದೇ ಶಾಲೆಯ ಮೈದಾನದಲ್ಲಿ ಆಟವಾಡಿ, ಪಾಠ ಕಲಿತು ಬಾಲ್ಯದ ದಿನಗಳನ್ನು ಕಳೆದ ವಿದ್ಯಾರ್ಥಿಗಳು ಇಂದು ರೈತರು, ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳು, ಗುತ್ತಿಗೆದಾರರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಶಾಲಾ ದಿನಗಳ ಸ್ನೇಹ ಹಾಗೂ ಆತ್ಮೀಯತೆಯನ್ನು ಮರೆಯಬಾರದು. ವೃತ್ತಿ, ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಗತಿಗಳು ಸ್ನೇಹಕ್ಕೆ ಅಳತೆಗೋಲಾಗಬಾರದು ಎಂದರು.

ಹಲವು ವರ್ಷಗಳ ಬಳಿಕ ಹಳೆಯ ಸ್ನೇಹಿತರೆಲ್ಲ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಭೌತಿಕ ಅಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಅನ್ನದಾನ ಮಹಾಶಿವಯೋಗಿಗಳು ಗ್ರಾಮೀಣ ಹಾಗೂ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅವರ ಶಿಕ್ಷಣ ಸೇವೆ ಹಾಗೂ ದೂರದೃಷ್ಟಿ ಇಂದಿಗೂ ಮಾದರಿಯಾಗಿದೆ. ಶಿಕ್ಷಣವು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ, ವಿಚಾರಶಕ್ತಿ, ವಿವೇಕ ಹಾಗೂ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದರು.

ಗುರುಗಳು ವಿದ್ಯಾರ್ಥಿಗಳ ಶಿಸ್ತಿಗಾಗಿ ಕೆಲವೊಮ್ಮೆ ಶಿಕ್ಷೆ ನೀಡಿದ್ದರೂ, ಅದರ ಹಿಂದೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಕಾಳಜಿ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಗುರುಗಳ ಸೇವೆ ಹಾಗೂ ಮಾರ್ಗದರ್ಶನವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‌ಎವಿವಿಪಿ ಸಮಿತಿ ನರೇಗಲ್ಲ–ನಿಡಗುಂದಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ನಿಡಗುಂದಿ ಪ್ರಾಚೀನ ಕಾಲದಿಂದಲೂ ಅಗ್ರಹಾರವಾಗಿ ಗುರುತಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಪ್ರಮುಖ ಕೇಂದ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಜಗದೀಶ ಕರಡಿ, ಶಾಲೆ ಹಾಗೂ ಶಿಕ್ಷಕರು ಸಮಾಜದಲ್ಲಿ ಪವಿತ್ರ ಸ್ಥಾನ ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಬೇಕು ಎಂದರು.

ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪ ಶ್ರೀಮಠದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ನಿರಂತರವಾಗಿ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದು ಇಲ್ಲಿನ ಶಿಕ್ಷಣ ಪರಂಪರೆ ಹಾಗೂ ಗುರುಗಳ ಸೇವೆಗೆ ಸಾಕ್ಷಿಯಾಗಿದೆ ಎಂದರು.

ಧರ್ಮರಮಠದ ನಾಗಪ್ಪಜ್ಜನವರು ಧರ್ಮರ, ನಿವೃತ್ತ ಶಿಕ್ಷಕ ಪಿ.ಕೆ. ಕರಡಿ, ಶಿಕ್ಷಕ ಎಸ್.ವಿ. ಹಳ್ಳಿಕೇರಿ ಹಾಗೂ ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಅಶೋಕ ಸರ್ವಿ, ರಮೇಶ ಉಳ್ಳಾಗಡ್ಡಿ, ಮಂಜುಳಾ ಕರಡಿ, ನೀಲಮ್ಮ ಲಗುಬಗಿ ಹಾಗೂ ಶಕೀನಾ ಅಂಗಡಿ ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಎಂ.ಎಂ. ಸರ್ವಿ, ಎಂ.ಕೆ. ಸರ್ವಿ, ಕೆ.ಬಿ. ಗಡಾದ, ಬಿ.ಪಿ. ಕಾಗಿ, ಗುರುಮೂರ್ತಿ ಮಂಟಯ್ಯನವರಮಠ, ಎಸ್.ಬಿ. ಹಿರೇಮಠ, ನಂದಾ ಮೆಣಸಗಿ, ಧರ್ಮಾಯತ, ಪೂಜಾ ಅಂಗಡಿ, ಚೇತನ್ ಭೂಸನೂರಮಠ, ವೀರಪ್ಪ ಅರಮನಿ ಸೇರಿದಂತೆ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕ ಗೋಪಾಲ ಗೋಂದಳೆ ಸ್ವಾಗತಿಸಿದರು. ತಿಪ್ಪನಗೌಡ ಪಾಟೀಲ ವಂದಿಸಿದರು. ಎಚ್.ಬಿ. ಕಟ್ಟಿಮನಿ ನಿರೂಪಿಸಿದರು.

ಹಳೆಯ ವಿದ್ಯಾರ್ಥಿಗಳೆಲ್ಲ ಹಲವು ವರ್ಷಗಳ ಬಳಿಕ ಒಂದೆಡೆ ಸೇರಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಿರುವುದು ಸಂತಸದ ಸಂಗತಿ. ಇಂತಹ ಸಮ್ಮಿಲನಗಳು ನಿರಂತರವಾಗಿ ನಡೆಯಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು.

– ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ

ಸ್ವಾತಂತ್ರ್ಯೋತ್ಸವಕ್ಕೆ ಜಿಲ್ಲಾಡಳಿತ ಸಜ್ಜು

0

ವಿಜಯಸಾಕ್ಷಿ ಸುದ್ದಿ, ಗದಗ: ಆ.15ರಂದು ಜಿಲ್ಲಾಮಟ್ಟದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣ, ಶಿಸ್ತುಬದ್ಧ ಹಾಗೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶ್ರೀಧರ್ ಅವರ ನೇತೃತ್ವದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕ್ರಮದ ವಿವಿಧ ವ್ಯವಸ್ಥೆಗಳ ಕುರಿತು ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಯಿತು.

ರಾಷ್ಟ್ರೀಯ ಹಬ್ಬದ ಆಚರಣೆಯಲ್ಲಿ ಶಿಷ್ಟಾಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗಣ್ಯರು, ಜನಪ್ರತಿನಿಧಿಗಳು ಹಾಗೂ ಅತಿಥಿಗಳಿಗೆ ಆಮಂತ್ರಣ ಪತ್ರಿಕೆಗಳನ್ನು ಸಕಾಲದಲ್ಲಿ ತಲುಪಿಸುವುದು, ಆಸನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.

ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಮುಖ್ಯ ಸಮಾರಂಭದ ವೇದಿಕೆಯನ್ನು ಆಕರ್ಷಕವಾಗಿ ಸಿದ್ಧಪಡಿಸುವುದರೊಂದಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಅತಿಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕ್ರೀಡಾಂಗಣದ ಒಳ ಹಾಗೂ ಹೊರ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಸೂಚಿಸಲಾಯಿತು.

ಮಕ್ಕಳ ಸುರಕ್ಷತೆಗೆ ಆದ್ಯತೆ

ಸ್ವಾತಂತ್ರ್ಯೋತ್ಸವಕ್ಕೆ ವಿವಿಧ ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕ್ರೀಡಾಂಗಣಕ್ಕೆ ಕರೆತಂದು, ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ತೊಂದರೆಯಾಗದಂತೆ ಮರಳಿ ಕಳುಹಿಸುವ ಕುರಿತು ವಿಶೇಷ ಚರ್ಚೆ ನಡೆಯಿತು. ಶಿಕ್ಷಣ, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರಿಗೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಲಾಯಿತು.

ಪಥಸಂಚಲನಕ್ಕೆ ಪೂರ್ವಾಭ್ಯಾಸ

ಸಮಾರಂಭದ ಪ್ರಮುಖ ಆಕರ್ಷಣೆಯಾದ ಪಥಸಂಚಲನವನ್ನು ಶಿಸ್ತುಬದ್ಧವಾಗಿ ಹಾಗೂ ಆಕರ್ಷಕವಾಗಿ ಆಯೋಜಿಸಲು ಪೂರ್ವಾಭ್ಯಾಸ ನಡೆಸುವಂತೆ ತಿಳಿಸಲಾಯಿತು. ಪೊಲೀಸ್ ಇಲಾಖೆ, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಹಾಗೂ ಶಾಲಾ ಮಕ್ಕಳು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಾಗೂ ಸಚಿವರ ಸ್ವಾತಂತ್ರ್ಯೋತ್ಸವ ಸಂದೇಶದ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲೆಯ ಅಭಿವೃದ್ಧಿ, ಜನಪರ ಯೋಜನೆಗಳು, ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ಸಂದೇಶ ಒಳಗೊಂಡಂತೆ ಭಾಷಣ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ. ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

“ಸ್ವಾತಂತ್ರ್ಯೋತ್ಸವದ ಪ್ರತಿಯೊಂದು ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಕೈಗೊಳ್ಳಬೇಕು. ಶಿಷ್ಟಾಚಾರ ಪಾಲನೆಯೊಂದಿಗೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ನಿಗದಿತ ಅವಧಿಯೊಳಗೆ ಸಿದ್ಧತೆ ಪೂರ್ಣಗೊಳಿಸಬೇಕು.”

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಅರ್ಹರಿಗೆ ಪಂಚ ಗ್ಯಾರಂಟಿ ಸೌಲಭ್ಯ ಸಕಾಲಕ್ಕೆ ತಲುಪಲಿ: ಅಶೋಕ ಮಂದಾಲಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಬೇಕು. ಸೌಲಭ್ಯ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶ ಹೊಂದಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತನಾಗದಂತೆ ಅಧಿಕಾರಿಗಳು ಕ್ರಿಯಾಶೀಲತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಯಾವುದೇ ಅರ್ಹ ಮಹಿಳೆ ವಂಚಿತರಾಗದಂತೆ ನೋಡಿಕೊಳ್ಳಬೇಕು. ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗುವ ಪ್ರಕರಣಗಳನ್ನು ತಡೆಗಟ್ಟಬೇಕು. ಯುವನಿಧಿ ಯೋಜನೆಯಿಂದ ಅರ್ಹರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಅನ್ನಭಾಗ್ಯ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಯುವನಿಧಿ ಯೋಜನೆಯಡಿ ಜೂನ್ 2026ರವರೆಗೆ ಗದಗ ತಾಲೂಕಿನಲ್ಲಿ 3,112 ಅಭ್ಯರ್ಥಿಗಳು ನೋಂದಣಿಯಾಗಿದ್ದು, 2,819 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಏಪ್ರಿಲ್ 2026ರವರೆಗೆ 84,037 ಅರ್ಜಿಗಳು ನೋಂದಣಿಯಾಗಿದ್ದು, 75,133 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ. ಮೇ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ.

ಗೃಹಜ್ಯೋತಿ ಯೋಜನೆಯಡಿ ಜುಲೈ 31ರವರೆಗೆ ಗದಗ ಶಹರದಲ್ಲಿ ಅರ್ಹ 46,484 ಸ್ಥಾವರಗಳ ಪೈಕಿ 46,260 ನೋಂದಣಿಯಾಗಿದ್ದು, ಶೇ.99.52ರಷ್ಟು ಪ್ರಗತಿ ಸಾಧಿಸಲಾಗಿದೆ. ಗದಗ ಗ್ರಾಮೀಣ ಉಪವಿಭಾಗದಲ್ಲಿ ಅರ್ಹ 53,324 ಸ್ಥಾವರಗಳ ಪೈಕಿ 53,110 ನೋಂದಣಿಯಾಗಿದ್ದು, ಶೇ.99.60ರಷ್ಟು ಪ್ರಗತಿ ಸಾಧಿಸಲಾಗಿದೆ.

ಶಕ್ತಿ ಯೋಜನೆಯಡಿ 2023ರ ಜೂನ್ 11ರಿಂದ 2026ರ ಆಗಸ್ಟ್ 3ರವರೆಗೆ ಗದಗ ಘಟಕದಲ್ಲಿ ಮಹಿಳಾ ಪ್ರಯಾಣಿಕರಿಂದ ₹10,625.33 ಲಕ್ಷ ಹಾಗೂ ಬೆಟಗೇರಿ ಘಟಕದಲ್ಲಿ ₹6,297.67 ಲಕ್ಷ ಆದಾಯವಾಗಿದೆ.

ಅನ್ನಭಾಗ್ಯ ಯೋಜನೆಯಡಿ ಜುಲೈ 2026ರಲ್ಲಿ ಗದಗ ಶಹರದ 32,699 ಪಡಿತರ ಕಾರ್ಡುದಾರರಿಗೆ ಕೇಂದ್ರದ ಎನ್‌ಎಸ್‌ಎಫ್‌ಎ ಅಡಿ 2,250.98 ಕ್ವಿಂಟಲ್ ಅಕ್ಕಿ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 3,578.82 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಅನ್ನಭಾಗ್ಯ ಅಕ್ಕಿ ಹಂಚಿಕೆ ಯೋಜನೆಯಡಿ ಗದಗ ಶಹರದ 32,699 ಕಾರ್ಡುದಾರರಿಗೆ 5,360.95 ಕ್ವಿಂಟಲ್ ಹಾಗೂ ಗ್ರಾಮೀಣ ಭಾಗದ 48,483 ಕಾರ್ಡುದಾರರಿಗೆ 7,521.35 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ತಾಲೂಕು ಸಮಿತಿ ಸದಸ್ಯರಾದ ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗು ಕರಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಎಚ್.ಎಸ್. ಜಿನಗ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

“ಪಂಚ ಗ್ಯಾರಂಟಿ ಯೋಜನೆಗಳು ಬಡಜನರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಯಾಗಿವೆ. ಯಾವುದೇ ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಿ, ಅನುಷ್ಠಾನದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು.”

— ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ

ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ: ರೈತ ಮುಖಂಡ ಶಂಕರಗೌಡ ಜಯನಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಕೈಕೊಟ್ಟು ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತ ಮುಖಂಡ ಶಂಕರಗೌಡ ಜಯನಗೌಡ್ರ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿದ ರೈತರು, ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಂಕರಗೌಡ ಜಯನಗೌಡ್ರ, ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ಬೆಳೆಗಳು ನಷ್ಟವಾಗಿವೆ. ಬಿತ್ತನೆ, ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಹಣ ಖರ್ಚು ಮಾಡಿರುವ ರೈತರು ಇದೀಗ ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬರಪೀಡಿತ ಪ್ರದೇಶದ ನಿಯಮದಂತೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇರುವುದರಿಂದ ಪ್ರತಿ ಹೋಬಳಿ ಮಟ್ಟದಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯಬೇಕು. ರೈತರು ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಬರಗಾಲದ ಹಿನ್ನೆಲೆಯಲ್ಲಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

2025–26ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಹಲವು ರೈತರು ವಿಮೆ ಪಾವತಿಸಿದ್ದರೂ, ತಾಂತ್ರಿಕ ಹಾಗೂ ಇತರೆ ಕಾರಣಗಳಿಂದ ಕೆಲವರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ. ಈ ಕುರಿತು ಕೂಡಲೇ ಪರಿಶೀಲನೆ ನಡೆಸಿ, ಅರ್ಹ ರೈತರಿಗೆ ಸಂಪೂರ್ಣ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು. ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಪುನರ್‌ಪರಿಶೀಲಿಸಿ ಅರ್ಹರಿಗೆ ನ್ಯಾಯ ದೊರಕಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

1978ರಿಂದ ಅರಣ್ಯ ಒತ್ತುವರಿದಾರರು ಹಾಗೂ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆಯದೆ ಇರುವ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹರಿಗೆ ಅರಣ್ಯ ಹಕ್ಕುಪತ್ರ ಹಾಗೂ ಪಟ್ಟಾ ನೀಡಬೇಕು. ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಾಗೂ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ದೊರೆಯಬೇಕಾದ ಸಹಾಯಧನ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಅರ್ಹ ರೇಷ್ಮೆ ಬೆಳೆಗಾರರಿಗೆ ಕೂಡಲೇ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಭ್ರಷ್ಟ ಅಧಿಕಾರಿಗಳಿಂದಾಗಿ ಅವು ನಿಜವಾದ ರೈತರಿಗೆ ತಲುಪದಿರುವುದು ವಿಪರ್ಯಾಸ. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.”

— ಶಂಕರಗೌಡ ಜಯನಗೌಡ್ರ, ರೈತ ಸಂಘದ ಜಿಲ್ಲಾಧ್ಯಕ್ಷ

‘ಭೂಮಾನಂದ ಹಂತಕರಿಗೆ ಗಲ್ಲು ಶಿಕ್ಷೆ ನೀಡಿ’: ಮಾದಿಗ ಮಹಾಸಭಾದಿಂದ ಸರ್ಕಾರಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಯಚೂರು ಜಿಲ್ಲೆಯ ಸಂಕೇಶ್ವರಹಾಳದಲ್ಲಿ ಮಾದಿಗ ಸಮಾಜದ ಮುಖಂಡ ಭೂಮಾನಂದ ಹಬ್ಬಿನಹಾಳ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಉಡಚಪ್ಪ ಹಳ್ಳಿಕೇರಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಾನಂದ ಹಬ್ಬಿನಹಾಳ ಅವರ ಹತ್ಯೆ ಖಂಡನೀಯ. ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶೀಘ್ರ ತೀರ್ಪು ನೀಡುವ ಮೂಲಕ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮೃತರ ಕುಟುಂಬಕ್ಕೆ ಸರ್ಕಾರದಿಂದ ₹50 ಲಕ್ಷ ಪರಿಹಾರ, 10 ಎಕರೆ ಜಮೀನು ಮಂಜೂರು ಮಾಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ರಾಯಚೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ರೋಣ ತಾಲೂಕಿನಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಗಡಿಪಾರು ಮಾಡಬೇಕು. ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕುಂಬಾರಕೊಪ್ಪದಲ್ಲಿ ಮಾದಿಗ ಸಮಾಜದ ವ್ಯಕ್ತಿಯ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ದಾವಣಗೆರೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸವಡಿಯ ಮರುಳಸಿದ್ದ ಸ್ವಾಮೀಜಿ, ಮಾದಿಗ ಮಹಾಸಭಾದ ಗೌರವಾಧ್ಯಕ್ಷ ವಿಜಯ ಕಲ್ಮನಿ, ಮೈಲಾರಪ್ಪ, ಚಂದ್ರು, ಸುನಿಲ್ ಬಂಡೆನ್ನವರ, ರಾಘವೇಂದ್ರ ಹಾಗೂ ವಿನಾಯಕ ಕಟ್ಟಿಮನಿ ಉಪಸ್ಥಿತರಿದ್ದರು.

“ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳು ಕಳೆದರೂ ದಲಿತರ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಶಾಂತಿಸಭೆ, ಮುಂಜಾಗ್ರತಾ ಕ್ರಮ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.”

— ಉಡಚಪ್ಪ ಹಳ್ಳಿಕೇರಿ, ಅಧ್ಯಕ್ಷರು, ಮಾದಿಗ ಮಹಾಸಭಾ ಜಿಲ್ಲಾ ಘಟಕ

30 ವರ್ಷಗಳ ಬಳಿಕ ಒಂದಾದ ಗುರು–ಶಿಷ್ಯರು

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 1996–99ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಗುರು–ಶಿಷ್ಯರ ಭಾವನಾತ್ಮಕ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

ಸುಮಾರು ಮೂರು ದಶಕಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಪಾದಪೂಜೆ ನೆರವೇರಿಸಿ, ಸನ್ಮಾನಿಸಿ ಗೌರವಿಸಿದರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಗುರು–ಶಿಷ್ಯರು ಪರಸ್ಪರ ಭಾವುಕರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ತು.ಕ. ಶಂಕ್ರಯ್ಯ, ಅಂದಿನ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಹಾಗೂ ಕ್ರಿಯಾಶೀಲತೆಯಿಂದ ಉಪನ್ಯಾಸಕರು ಕೂಡ ಹೆಚ್ಚು ಅಧ್ಯಯನಶೀಲರಾಗುತ್ತಿದ್ದೆವು. ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು ಎಂಬುದು ಸಂತಸದ ಸಂಗತಿ ಎಂದರು.

ವಾಣಿಜ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಪನ್ನಂಗದರ ಮಾತನಾಡಿ, ಹಗರಿಬೊಮ್ಮನಹಳ್ಳಿಯಲ್ಲಿ ಅಂದಿನ ಕಾಲದಲ್ಲಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಹಾಗೂ ಬೆಳವಣಿಗೆಯಲ್ಲಿ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸ್ತುತ ಪ್ರಾಂಶುಪಾಲ ಮಂಜುನಾಥ ಉಲವತ್ತಿ ಶೆಟ್ಟರ್ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎನ್.ವಿ. ಹನುಮಂತಯ್ಯ, ಹುರಕಡ್ಲಿ ಬಸಪ್ಪ, ಬಿ. ಮಾರುತೇಶ್, ಜಿ. ಮಲ್ಲಿಕಾರ್ಜುನ, ಅಪ್ಪೇನಹಳ್ಳಿ ಹೇಮರೆಡ್ಡಿ, ನಿವೃತ್ತ ಗ್ರಂಥಪಾಲಕ ಕೆ. ರಾಮಲಿಂಗಪ್ಪ, ಕಾಲೇಜಿನ ಪ್ರಸ್ತುತ ಸೂಪರಿಂಟೆಂಡೆಂಟ್ ಸುರೇಶ್, ದಿವಂಗತ ಕೃಷ್ಣ ನಾಯಕ್ ಅವರ ಧರ್ಮಪತ್ನಿ ಪುಷ್ಪಾ ಕೃಷ್ಣ ನಾಯಕ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ವಾಣಿಶ್ರೀ ಹಾಗೂ ನಾಗಲಕ್ಷ್ಮಿ ಸ್ವಾಗತಿಸಿದರು. ಎಂ.ಪಿ.ಎಂ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ. ಶಿವಕುಮಾರ್ ವಂದಿಸಿದರು. ಉಪನ್ಯಾಸಕ ಬೆಟ್ಟಪ್ಪ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮುಖಂಡ ಎನ್.ಎಂ. ಗೌಸ್ ಕಾರ್ಯಕ್ರಮದ ಆಯೋಜನೆ ಹಾಗೂ ಅಂದಿನ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ನೀಲಪ್ಪ, ಗುಡ್ಡಪ್ಪ, ರೇವಣಸಿದ್ದನಗೌಡ, ಡಿ. ಇಬ್ರಾಹಿಂ, ಡಿ.ಕೆ. ಕೊಟ್ರೇಶ್, ಅಕ್ಕಿ ಮಲ್ಲಿಕಾರ್ಜುನ, ಬಿ. ಶ್ರೀನಿವಾಸ್, ಸಿ.ಎಂ. ಶ್ರೀನಿವಾಸ್, ಮಮತಾ, ವಾಸಂತಿ, ಎಸ್. ಬಾನು, ಎ. ಯಶೋಧ, ಭದ್ರವಾಡಿ ನಾಗವೇಣಿ, ಎಸ್.ಎಂ. ಶೈಲಜಾ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

“30 ವರ್ಷಗಳ ಬಳಿಕ ನಮ್ಮನ್ನೆಲ್ಲ ಕರೆಸಿ ಗುರುಭಕ್ತಿಯನ್ನು ಮೆರೆದಿರುವುದು ನಮ್ಮ ವೃತ್ತಿ ಜೀವನವನ್ನೇ ಸಾರ್ಥಕಗೊಳಿಸಿದೆ. ವಿದ್ಯಾರ್ಥಿಗಳ ಈ ಪ್ರೀತಿ ಮತ್ತು ಗೌರವ ಎಂದಿಗೂ ಮರೆಯಲಾಗದು.”

— ಐ. ಬಸವರಾಜ್, ನಿವೃತ್ತ ಪ್ರಾಚಾರ್ಯ

ದೇವದಾಸಿ ಮಹಿಳೆಯರ ಗಣತಿ ಪೂರ್ಣಗೊಳಿಸಿ: ಕೆ. ಅಂಜಿನಮ್ಮ

0

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಒಂದು, ಎರಡು ಮತ್ತು ಮೂರು ತಲೆಮಾರುಗಳ ಕುಟುಂಬ ಸದಸ್ಯರ ಗಣತಿ ಕಾರ್ಯವನ್ನು ಸರ್ಕಾರ ಸಮಗ್ರವಾಗಿ ಪೂರ್ಣಗೊಳಿಸಿ, ಅರ್ಹ ಎಲ್ಲ ಕುಟುಂಬಗಳನ್ನು ಅಧಿಕೃತವಾಗಿ ಗುರುತಿಸಬೇಕು ಎಂದು ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಕೆ. ಅಂಜಿನಮ್ಮ ಒತ್ತಾಯಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಇತ್ತೀಚೆಗೆ ಕೈಗೊಂಡಿರುವ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರುಗಳ ಕುಟುಂಬ ಸದಸ್ಯರ ಗಣತಿ ಕಾರ್ಯ ಇನ್ನೂ ಅಪೂರ್ಣವಾಗಿದ್ದು, ಸಮಗ್ರವಾಗಿ ನಡೆದಿಲ್ಲ ಎಂದು ಆರೋಪಿಸಿದರು.

2007ರಲ್ಲಿ ನಡೆದ ಗಣತಿ ಅಸಮರ್ಪಕವಾಗಿದ್ದು, ಆಗ ಸುಮಾರು 46,800 ಮಹಿಳೆಯರನ್ನು ಗುರುತಿಸಲಾಗಿತ್ತು. ಆದರೆ ಅಂದಾಜು 20 ಸಾವಿರಕ್ಕೂ ಅಧಿಕ ಮಹಿಳೆಯರು ಗಣತಿಯಿಂದ ಹೊರಗುಳಿದಿದ್ದರು. 1982ರಲ್ಲಿ ಅಥವಾ ನಂತರ ದೇವದಾಸಿ ಮಹಿಳೆಯರಾಗಿದ್ದವರನ್ನೂ ಆ ಗಣತಿಯಲ್ಲಿ ಪರಿಗಣಿಸಿರಲಿಲ್ಲ ಎಂದು ಅವರು ಹೇಳಿದರು.

ಮಾಜಿ ದೇವದಾಸಿ ಮಹಿಳೆಯರಿಗೆ ಸಮರ್ಪಕ ವಸತಿ ಸೌಲಭ್ಯ ಕಲ್ಪಿಸಬೇಕು. ಪಿಂಚಣಿ ಮೊತ್ತವನ್ನು ತಿಂಗಳಿಗೆ ₹6,000ಕ್ಕೆ ಹೆಚ್ಚಿಸಬೇಕು. ಮಾಜಿ ದೇವದಾಸಿಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಹಗರಿಬೊಮ್ಮನಹಳ್ಳಿ ತಾಲೂಕೊಂದರಲ್ಲೇ ಸುಮಾರು 1,950 ಮಾಜಿ ದೇವದಾಸಿ ಮಹಿಳೆಯರು ಇದ್ದು, ಅವರ ಯೋಗಕ್ಷೇಮ ಹಾಗೂ ಕುಂದುಕೊರತೆಗಳನ್ನು ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ನಂತರ ತಾಲೂಕು ಉಪ ತಹಶೀಲ್ದಾರ್ ಕೆ. ಶಿವಕುಮಾರ್ ಗೌಡ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದೇವದಾಸಿ ವಿಮೋಚನಾ ಸಂಘದ ಕಾರ್ಯದರ್ಶಿ ಪಿ. ಚಾಂದ್, ತಾಲೂಕು ಸಮಿತಿ ಮುಖಂಡರಾದ ಸತ್ಯಮ್ಮ, ಕೆ. ಹನುಮಂತಮ್ಮ, ತಿಮ್ಮಕ್ಕ, ನೀಲಮ್ಮ, ದುರ್ಗಮ್ಮ, ಪದ್ಮಮ್ಮ, ಶಿವಗಂಗಮ್ಮ, ದೊಡ್ಡಬಸಮ್ಮ, ಎಂ. ಗಂಗಮ್ಮ, ಜಿ. ಪಾರ್ವತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಸರ್ಕಾರ ನಡೆಸುತ್ತಿರುವ ಗಣತಿ ಕಾರ್ಯವನ್ನು ಯಾವುದೇ ಲೋಪವಿಲ್ಲದೆ ಸಮಗ್ರವಾಗಿ ಪೂರ್ಣಗೊಳಿಸಬೇಕು. ಗಣತಿಯಿಂದ ಹೊರಗುಳಿದಿರುವ ಮಾಜಿ ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬ ಸದಸ್ಯರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು.”

— ಕೆ. ಅಂಜಿನಮ್ಮ, ಅಧ್ಯಕ್ಷೆ, ತಾಲೂಕು ದೇವದಾಸಿ ಮಹಿಳೆಯರ ವಿಮೋಚನಾ ಸಂಘ

ವೀರಣ್ಣ ಪವಾಡದ ಅವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಉದ್ಯಮಿ ವೀರಣ್ಣ ಹಾಲಪ್ಪ ಪವಾಡದ ಅವರು 2026–27ನೇ ಸಾಲಿನ ಶ್ರೇಷ್ಠ ಉದ್ಯಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆ.14ರಿಂದ 18ರವರೆಗೆ ಗದಗ ಎಪಿಎಂಸಿ ಯಾರ್ಡ್‌ನ ಶ್ರೀ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯಲಿರುವ ‘ಗದಗ ಉತ್ಸವ–2026’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಶಿಗ್ಲಿ ಗ್ರಾಮದ ಶ್ರೀಮದ್ ರಂಭಾಪುರಿ ಟೆಕ್ಸ್‌ಟೈಲ್ಸ್ ಮಾಲೀಕರಾಗಿರುವ ವೀರಣ್ಣ ಹಾಲಪ್ಪ ಪವಾಡದ ಅವರು ಕೈಮಗ್ಗದ ಸೀರೆ ಉದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ವಿಶೇಷ ಸಾಧನೆ ಮಾಡಿದ್ದಾರೆ. ಅವರ ಉದ್ಯಮ ಕ್ಷೇತ್ರದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಶ್ರೇಷ್ಠ ಉದ್ಯಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗದಗದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಗಣ್ಯರು, ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳಿಂದ ವೀರಣ್ಣ ಪವಾಡದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವೀರಣ್ಣ ಪವಾಡದ ಅವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಲಭಿಸಿರುವುದಕ್ಕೆ ಶಿಗ್ಲಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.