Home Blog Page 164

14 ವರ್ಷ ಜೈಲಿನಲ್ಲಿದ್ದರೂ ಪೆರೋಲ್ʼಗೆ ಅರ್ಹತೆ ಸಿಗುವುದಿಲ್ಲ: ಅಪರಾಧಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಜೈಲು ಶಿಕ್ಷೆ ಅನುಭವಿಸಿದ ಅವಧಿಯನ್ನೇ ಆಧಾರವನ್ನಾಗಿ ಮಾಡಿಕೊಂಡು ಅಪರಾಧಿಗಳಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಂಬೈನಿಂದ ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ಅಪರಾಧಿ ಅಂಬರೀಶ್ ಎಸ್. ಕಪಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರ ಕಪಾಡಿಯಾ ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಳೆದ 14 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದೇನೆ. ಆದ್ದರಿಂದ ಪೆರೋಲ್ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ನ್ಯಾಯಪೀಠ, ಅರ್ಜಿದಾರರು ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಇದು ಪುನರಾವರ್ತಿತ ಅಪರಾಧ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ದಾಖಲೆಗಳಲ್ಲಿ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ದುರುಪಯೋಗದಂತಹ ಗಂಭೀರ ಆರ್ಥಿಕ ಅಪರಾಧಗಳ ಆರೋಪಗಳು ಸಾಬೀತಾಗಿವೆ. ಇಂತಹ ಪ್ರಕರಣಗಳು ಸಾರ್ವಜನಿಕ ವಿಶ್ವಾಸದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಪೀಠ ತಿಳಿಸಿದೆ.

ಇದಲ್ಲದೆ, ಒಂದು ಪ್ರಕರಣ ಸಿಬಿಐ ತನಿಖಾ ವ್ಯಾಪ್ತಿಗೆ ಒಳಪಟ್ಟಿರುವುದೂ ಅಪರಾಧಗಳ ಗಂಭೀರತೆ ಹಾಗೂ ಸಂಕೀರ್ಣತೆಯನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಹಿಂದಿನ ನಡವಳಿಕೆಯನ್ನು ಪರಿಗಣಿಸಿದರೆ, ತಾತ್ಕಾಲಿಕ ಪೆರೋಲ್ ಸೌಲಭ್ಯ ನೀಡಲು ವಿಶ್ವಾಸ ಮೂಡುವುದಿಲ್ಲ. 14 ವರ್ಷಗಳ ಕಾಲ ಜೈಲಿನಲ್ಲಿದ್ದೇನೆ ಎಂಬ ವಾದವನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಪರಾಧದ ಸ್ವರೂಪ, ಹಿನ್ನೆಲೆ ಹಾಗೂ ಗಂಭೀರತೆಯನ್ನು ಗಮನಿಸಬೇಕಾಗುತ್ತದೆ. ಶಿಕ್ಷೆಯ ಅವಧಿಯೇ ಪೆರೋಲ್ ಪಡೆಯಲು ಏಕೈಕ ಮಾನದಂಡವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2020ರ ನವೆಂಬರ್‌ನಲ್ಲಿ ಹೈಕೋರ್ಟ್ ಪೆರೋಲ್ ಅರ್ಜಿಯನ್ನು ಪರಿಗಣಿಸಲು ನಿರ್ದೇಶಿಸಿತ್ತು. ಆದರೆ ಸಿಬಿಐ ಪ್ರಕರಣದ ಹಿನ್ನೆಲೆಯಲ್ಲಿ ಕಪಾಡಿಯಾರನ್ನು ಅಹಮದಾಬಾದ್ ಜೈಲಿಗೆ ವರ್ಗಾಯಿಸಿದ್ದರಿಂದ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದರು. ಹೀಗಾಗಿ ಎರಡು ತಿಂಗಳ ಪೆರೋಲ್ ಮಂಜೂರು ಮಾಡಲು ಕಾರಾಗೃಹ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಅರ್ಜಿದಾರರು ಆರು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ಕರ್ನಾಟಕ ಜೈಲು ನಿಯಮಗಳು–1974ರ ನಿಯಮ 192(2)(1)(ಜಿ) ಪ್ರಕಾರ ಪೆರೋಲ್ ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯಕ್ಕೆ ವಾದ ಮಂಡಿಸಿದರು.

ಲಸಿಕೆ ಇಲ್ಲದ ಅಪರೂಪದ ಎಬೋಲಾ ತಳಿ ಪತ್ತೆ: WHO ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ ಬಳಿಕ ಭಾರತದಲ್ಲೂ ಎಚ್ಚರಿಕೆ!

ದೆಹಲಿ: ಜಗತ್ತು ಕೋವಿಡ್ ಮಹಾಮಾರಿಯ ಪರಿಣಾಮಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನಡುವೆಯೇ, ಇದೀಗ ಮತ್ತೊಂದು ಅಪಾಯಕಾರಿ ವೈರಸ್ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ. ಆಫ್ರಿಕಾ ಖಂಡದಲ್ಲಿ ವೇಗವಾಗಿ ಹರಡುತ್ತಿರುವ ಎಬೋಲಾ ವೈರಸ್‌ನ ಬುಂಡಿಬುಗ್ಯೊ ತಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

ಆರೋಗ್ಯ ತಜ್ಞರ ಪ್ರಕಾರ, ಪ್ರಸ್ತುತ ಹರಡುತ್ತಿರುವ ಎಬೋಲಾ ಬುಂಡಿಬುಗ್ಯೊ ತಳಿಗೆ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಸೋಂಕಿನ ತೀವ್ರತೆ ಹೆಚ್ಚಿದರೆ ಸಾವಿನ ಪ್ರಮಾಣವೂ ಗಂಭೀರವಾಗಿರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಆದರೆ, ಈ ವೈರಸ್ ಕೋವಿಡ್‌ನಂತೆ ಗಾಳಿಯ ಮೂಲಕ ವೇಗವಾಗಿ ಹರಡುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಎಬೋಲಾ ವೈರಸ್ ಮುಖ್ಯವಾಗಿ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕದಿಂದ ಮತ್ತೊಬ್ಬರಿಗೆ ಸೋಂಕು ತಗುಲುವ ಸಾಧ್ಯತೆ ಇದೆ.

ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ ಕಾಂಗೋ, ಉಗಾಂಡ ಸೇರಿದಂತೆ ಅಪಾಯ ಹೆಚ್ಚಿರುವ ಆಫ್ರಿಕಾ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆ, ಅಗತ್ಯವಿದ್ದರೆ ಕ್ವಾರಂಟೈನ್ ವ್ಯವಸ್ಥೆ ಜಾರಿಗೊಳಿಸುವುದು ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸಾರ್ವಜನಿಕರು ಸದ್ಯಕ್ಕೆ ಆಫ್ರಿಕಾ ದೇಶಗಳ ಪ್ರವಾಸದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳು:
ಎಬೋಲಾ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ತೀವ್ರ ಜ್ವರ, ತಲೆನೋವು, ಮೈಕೈನೋವು, ವಾಂತಿ ಹಾಗೂ ಭೇದಿ ಸೇರಿವೆ. ಸೋಂಕು ಗಂಭೀರ ಸ್ವರೂಪ ಪಡೆದರೆ ಲಿವರ್ ಮತ್ತು ಶ್ವಾಸಕೋಶ ವೈಫಲ್ಯ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಇದೆ.

“ಆನ್‌ಲೈನ್ ಔಷಧ ಮಾರಾಟ ಬಂದ್ ಮಾಡಿ”

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಜ್ಯಾದ್ಯಂತ ನಡೆದ ಔಷಧ ವ್ಯಾಪಾರ ಬಂದ್‌ಗೆ ಹಗರಿಬೊಮ್ಮನಹಳ್ಳಿ ತಾಲೂಕು ಔಷಧ ವ್ಯಾಪಾರಿಗಳ ಸಂಘ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಮೆಡಿಕಲ್ ಶಾಪ್‌ಗಳು ಬಂದ್ ಆಗಿ ವ್ಯಾಪಾರ ಸ್ಥಗಿತಗೊಂಡಿತು. ಆನ್‌ಲೈನ್ ಮೂಲಕ ನಿಯಂತ್ರಣರಹಿತ ಔಷಧ ಮಾರಾಟ ನಡೆಯುತ್ತಿರುವುದನ್ನು ಖಂಡಿಸಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ್ ರೆಡ್ಡಿ ಮಾತನಾಡಿ, “ಆನ್‌ಲೈನ್ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಪ್ರದಾಯಿಕ ಔಷಧ ಅಂಗಡಿಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಸಾವಿರಾರು ಸಣ್ಣ ಹಾಗೂ ಮಧ್ಯಮ ಮಟ್ಟದ ಔಷಧ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ಥಳೀಯ ವ್ಯಾಪಾರಿಗಳ ಹಿತ ಕಾಪಾಡಬೇಕು” ಎಂದು ಆಗ್ರಹಿಸಿದರು.

ತಾಲೂಕು ಉಪಾಧ್ಯಕ್ಷ ಚಂದ್ರಶೇಖರ್ ರೆಡ್ಡಿ ಮಾತನಾಡಿ, “ಆನ್‌ಲೈನ್‌ನಲ್ಲಿ ನಿಯಮ ಉಲ್ಲಂಘಿಸಿ ಔಷಧ ಮಾರಾಟ ಮಾಡುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ವೈದ್ಯರ ಸಲಹೆ ಇಲ್ಲದೆ ಔಷಧ ಖರೀದಿ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.

ಔಷಧ ವ್ಯಾಪಾರಿಗಳ ಹಿತಾಸಕ್ತಿ ಹಾಗೂ ಸಾರ್ವಜನಿಕರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲಾ ಔಷಧ ಅಂಗಡಿಗಳು ಬಂದ್‌ಗೆ ಬೆಂಬಲ ಸೂಚಿಸಿ ಸಹಕರಿಸಿವೆ ಎಂದು ಸಂಘ ತಿಳಿಸಿದೆ.

ಆನ್‌ಲೈನ್ ಔಷಧ ಮಾರಾಟದ ಮೇಲೆ ಸರ್ಕಾರ ಕಠಿಣ ನಿಯಂತ್ರಣ ಹೇರಬೇಕು. ನಿಯಮಬಾಹಿರ ಮಾರಾಟ ತಡೆಯುವ ಜೊತೆಗೆ ಸ್ಥಳೀಯ ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವೆಂಕಟೇಶ್, ವಾಹಿದ್ ಸಾಹೇಬ್ (ಕಾರ್ಯದರ್ಶಿ), ಬಂಡ್ರಿ ವಿನಾಯಕ, ಈಕೆ ರಾಘವೇಂದ್ರ, ವಿರುಪಾಕ್ಷಪ್ಪ ರೆಡ್ಡಿ, ಕೆ. ಬಸವರಾಜ್, ಸತೀಶ್ ಜಿ., ಗುರುರಾಜ, ಗೋಪಾಲಕೃಷ್ಣ, ಪ್ರವೀಣ್ ಕಡ್ಲಿ ಸೇರಿದಂತೆ ವಿವಿಧ ಮೆಡಿಕಲ್ ಶಾಪ್ ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.

ಮತ್ತೊಂದು ಪೈಶಾಚಿಕ ಕೃತ್ಯ : ಪಾರ್ಟಿಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಡಿವಾಳ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಜೊತೆಗೆ ಮೋಮೋಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಈ ವೇಳೆ ಗೋಶ್ ಮತ್ತು ಅತುಲ್ ಎಂಬವರೊಂದಿಗೆ ಆಕೆಗೆ ಪರಿಚಯವಾಗಿತ್ತು ಎನ್ನಲಾಗಿದೆ.

ಮೂವರು ಸೇರಿ ಪಾರ್ಟಿ ಮಾಡಿದ್ದ ವೇಳೆ ಘಟನೆ ನಡೆದಿರುವ ಆರೋಪ ಕೇಳಿಬಂದಿದೆ. ಪಾರ್ಟಿ ಬಳಿಕ ಗೋಶ್ ಹಾಗೂ ಅತುಲ್ ಊಟ ತರಲು ಹೊರಗೆ ತೆರಳಿದ್ದ ಸಂದರ್ಭದಲ್ಲಿ, ಹೈನಾಸ್ ಎಂಬ ವ್ಯಕ್ತಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ವಕ್ಫ್ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ದಾಳಿ

0

ರಾಯಚೂರು: ವಕ್ಫ್ ಅನುದಾನ ದುರ್ಬಳಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ವ್ಯಕ್ತಿಯ ಮೇಲೆ ದ್ವೇಷದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ತಲಮಾರಿ ಗ್ರಾಮದ ಸನಾವುಲ್ಲಾ ಎಂಬುವವರು, ಮಸೀದಿ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 26 ಲಕ್ಷ ರೂಪಾಯಿ ಅನುದಾನದಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಕುರಿತು ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು.

ತನಿಖೆ ನಡೆದ ಬೆನ್ನಲ್ಲೇ, ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಸನಾವುಲ್ಲಾನನ್ನು ತಹಶಿಲ್ದಾರ್ ಕಚೇರಿ ಬಳಿ ಕರೆಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲಿ ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದ ಸುಮಾರು 30 ಜನರ ಗುಂಪು ಏಕಾಏಕಿ ದಾಳಿ ನಡೆಸಿದೆ.

ಚಾಕು, ಭರ್ಜಿ ಮತ್ತು ಕಲ್ಲುಗಳಿಂದ ನಡೆದ ದಾಳಿಯಲ್ಲಿ ಸನಾವುಲ್ಲಾ ತೀವ್ರವಾಗಿ ಗಾಯಗೊಂಡಿದ್ದು, ಅವರ ದೇಹಕ್ಕೆ 24 ಹೊಲಿಗೆ ಹಾಕಲಾಗಿದೆ. ಜೊತೆಗೆ ಅವರ ಸ್ನೇಹಿತರಿಗೂ ಗಾಯಗಳಾಗಿವೆ.

ಪ್ರಸ್ತುತ ಸನಾವುಲ್ಲಾಗೆ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಕಡೆಯವರೂ ಕೌಂಟರ್ ಕೇಸ್ ದಾಖಲಿಸಿದ್ದು, ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಗರಹೊಳೆ ಸಫಾರಿಯಲ್ಲಿ ಜೋಡಿ ಹುಲಿಗಳ ದರ್ಶನ; ಪ್ರವಾಸಿಗರು ಫುಲ್ ಖುಷ್!

ಮೈಸೂರು: ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಆಸಕ್ತರಿಗೆ ಖುಷಿ ನೀಡುವ ಬೆಳವಣಿಗೆಯೊಂದು ರಾಜ್ಯದ ಅರಣ್ಯ ವಲಯದಲ್ಲಿ ಗಮನ ಸೆಳೆದಿದೆ.

ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆಯ ಕಠಿಣ ಸುರಕ್ಷತಾ ಕ್ರಮಗಳು, ಅರಣ್ಯ ಸಂರಕ್ಷಣೆ ಹಾಗೂ ಪೂರಕ ಪರಿಸರ ವ್ಯವಸ್ಥೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹುಲಿಗಳ ದರ್ಶನವೂ ಹೆಚ್ಚಾಗಿ ಸಿಗತೊಡಗಿದೆ.

ಇತ್ತೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಅಪರೂಪದ ಮತ್ತು ರೋಮಾಂಚನಕಾರಿ ದೃಶ್ಯವೊಂದು ಕಣ್ಮನ ಸೆಳೆದಿದೆ. ಅರಣ್ಯದ ಹಸಿರು ವಾತಾವರಣದ ಮಧ್ಯೆ ಎರಡು ಭಾರೀ ಗಾತ್ರದ ಹುಲಿಗಳು ರಾಜಗಾಂಭೀರ್ಯದಿಂದ ವಿಹರಿಸುತ್ತಿದ್ದ ದೃಶ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.

ಸಫಾರಿ ವಾಹನ ಸಮೀಪದಲ್ಲಿದ್ದರೂ ಯಾವುದೇ ಆತಂಕವಿಲ್ಲದೆ ಈ ಜೋಡಿ ಹುಲಿಗಳು ನಿಧಾನವಾಗಿ ಹೆಜ್ಜೆ ಹಾಕುತ್ತಾ ಕ್ಯಾಮೆರಾಗಳಿಗೆ ಬಿಂದಾಸ್ ಪೋಸ್ ನೀಡಿವೆ. ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಹುಲಿಗಳ ದರ್ಶನ ಸಿಗುವುದೇ ಅಪರೂಪ. ಅದರಲ್ಲೂ ಒಂದೇ ವೇಳೆ ಎರಡು ಹುಲಿಗಳು ಹತ್ತಿರದಿಂದ ಕಾಣಿಸಿಕೊಂಡು ಕೆಲಕಾಲ ಅರಣ್ಯ ಪ್ರದೇಶದಲ್ಲೇ ಸಂಚರಿಸಿದ್ದರಿಂದ ಪ್ರವಾಸಿಗರ ಸಂತಸಕ್ಕೆ ಪಾರವೇ ಇರಲಿಲ್ಲ.

ಸಫಾರಿಯಲ್ಲಿ ಭಾಗವಹಿಸಿದ್ದ ಹಲವರು ತಮ್ಮ ಮೊಬೈಲ್ ಹಾಗೂ ವೃತ್ತಿಪರ ಕ್ಯಾಮೆರಾಗಳಲ್ಲಿ ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ವನ್ಯಜೀವಿ ಪ್ರೇಮಿಗಳ ಗಮನ ಸೆಳೆಯುತ್ತಿವೆ.

ಇನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ನೀಡಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರಾಜ್ಯದ ಅರಣ್ಯ ಪ್ರವಾಸೋದ್ಯಮಕ್ಕೆ ಇದು ಮತ್ತಷ್ಟು ಬಲ ತುಂಬುತ್ತಿದೆ.

ರಾಜ್ಯಾದ್ಯಂತ ನಾಲ್ಕು ದಿನ ಭಾರೀ ಮಳೆ ಎಚ್ಚರಿಕೆ; ಬೆಂಗಳೂರಿಗೆ ಆರೆಂಜ್ ಅಲರ್ಟ್!

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದರ ಬೆನ್ನಲ್ಲೇ ಹಲವು ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನು ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೇ 22ರಂದು ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೇ 23ರಂದು ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿರಲಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

 

ಸಂಕೇಶ್ವರ ಬಳಿ ಭೀಕರ ಅಪಘಾತ; ಲಾರಿ-ಕಾರು ಡಿಕ್ಕಿಗೆ ಓರ್ವ ಸಾವು!

ಚಿಕ್ಕೋಡಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ–ಗೋಟುರ ರಸ್ತೆಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಪೂನಾ ಮೂಲದ ಹಣಮಂತ ಪಾಯಾಳ (55) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

ಕಾಲು ಕಳೆದುಕೊಂಡರೂ ಛಲ ಕಳೆದುಕೊಳ್ಳಲಿಲ್ಲ: ಸ್ಟ್ರೇಚರ್‌ನಲ್ಲೇ ಪರೀಕ್ಷೆ ಬರೆದು ಕುಸುಮಾಗೆ ಸಿಕ್ತು ಬಂಪರ್‌ ಗಿಫ್ಟ್

0

ಕೋಲಾರಾ: ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಶಿಕ್ಷಣದ ಕನಸನ್ನು ಕೈಬಿಡದ ವಿದ್ಯಾರ್ಥಿನಿಯೊಬ್ಬಳ ಸಾಧನೆ ಇದೀಗ ಎಲ್ಲರ ಮನ ಗೆದ್ದಿದೆ. ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿಯ ಕುಸುಮಾ ಎಂಬ ವಿದ್ಯಾರ್ಥಿನಿ ಸ್ಟ್ರೇಚರ್‌ನಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.

ಭೀಕರ ರಸ್ತೆ ಅಪಘಾತದಲ್ಲಿ ತನ್ನ ಒಂದು ಕಾಲು ಕಳೆದುಕೊಂಡಿದ್ದ ಕುಸುಮಾ, ಚಿಕಿತ್ಸೆ ನಡುವೆಯೇ ಪರೀಕ್ಷೆ ಬರೆಯಲು ನಿರ್ಧರಿಸಿದ್ದಳು. ವೈದ್ಯರ ಸಲಹೆ ನಡುವೆಯೂ ಧೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಎದುರಿಸಿದ್ದಳು.

ಇದೀಗ ಫಲಿತಾಂಶ ಪ್ರಕಟವಾಗಿದ್ದು, ಕುಸುಮಾ ಉತ್ತಮ ಅಂಕಗಳೊಂದಿಗೆ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾಳೆ. ಆಕೆಯ ಹೋರಾಟ ಮತ್ತು ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ವಿಷಯ ತಿಳಿದ ಕೆಜಿಎಫ್ ಶಾಸಕಿಯರಾದ ರೂಪಕಲಾ ಶಶಿಧರ್ ಅವರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸೆ ಹಾಗೂ ರೋಬೋಟಿಕ್ ಕೃತಕ ಕಾಲು ಅಳವಡಿಕೆಗೆ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

‘ಲೈಫ್ ಸೇವರ್’ ಸಂಸ್ಥೆಯ ಸಹಯೋಗದಲ್ಲಿ ಕುಸುಮಾಗೆ ಅತ್ಯಾಧುನಿಕ ಕೃತಕ ಕಾಲು ಅಳವಡಿಸುವ ಕಾರ್ಯ ನಡೆಯಲಿದ್ದು, ಬಾಲಕಿಯ ಜೀವನಕ್ಕೆ ಹೊಸ ಭರವಸೆ ಮೂಡಿದೆ.

ಗದಗ| ಲಕ್ಕುಂಡಿಯ ಅಡಗಿದ ಇತಿಹಾಸ ಪತ್ತೆಗೆ ಸ್ಯಾಟಲೈಟ್ ಸರ್ವೆ!

ಗದಗ/ಬೆಂಗಳೂರು: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗದಗ ಜಿಲ್ಲೆಯ ಲಕ್ಕುಂಡಿಯ ಪಾರಂಪರಿಕ ವೈಭವವನ್ನು ಮರು ಅನಾವರಣಗೊಳಿಸಲು ಇದೀಗ ಉಪಗ್ರಹ ತಂತ್ರಜ್ಞಾನದ ನೆರವು ಪಡೆಯಲು ಸರ್ಕಾರ ಮುಂದಾಗಿದೆ.

ಮಣ್ಣಿನಡಿ ಅಡಗಿರುವ ಪುರಾತತ್ವ ಸಂಪತ್ತು, ಉತ್ಖನನ ಸ್ಥಳಗಳು ಹಾಗೂ “ನೂರೊಂದು ಗುಡಿ–ನೂರೊಂದು ಭಾವಿ”ಗಳ ಗುರುತು ಪತ್ತೆಗಾಗಿ ಸ್ಯಾಟಲೈಟ್ ಇಮೇಜಿಂಗ್ ತಂತ್ರಜ್ಞಾನ ಬಳಕೆಯ ಕುರಿತು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಿತು.

ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಎನ್‌ಐಎಎಸ್‌ (NIAS) ಸಂಸ್ಥೆಯ ತಜ್ಞರು ಭಾಗವಹಿಸಿ, ಲಕ್ಕುಂಡಿ ಪ್ರದೇಶದ ಪುರಾತತ್ವ ಅಧ್ಯಯನವನ್ನು ವೈಜ್ಞಾನಿಕವಾಗಿ ಕೈಗೊಳ್ಳುವ ಕುರಿತು ಸಮಗ್ರ ಚರ್ಚೆ ನಡೆಸಿದರು.

ಸಭೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಅಧ್ಯಕ್ಷ ಡಾ. ಕೆ. ಕಿರಣಕುಮಾರ ಉಪಸ್ಥಿತರಿದ್ದು, ಉಪಗ್ರಹ ಚಿತ್ರಣ ತಂತ್ರಜ್ಞಾನದ ಮೂಲಕ ನೆಲದಡಿ ಅಡಗಿರುವ ಪುರಾತನ ದೇವಾಲಯಗಳು, ಪಾರಂಪರಿಕ ಕಟ್ಟಡಗಳು ಹಾಗೂ ಜಲಸಂಪನ್ಮೂಲಗಳನ್ನು ಪತ್ತೆಹಚ್ಚುವ ತಾಂತ್ರಿಕ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.

ಲಕ್ಕುಂಡಿಯ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಜೊತೆಗೆ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಆಧುನಿಕ ತಂತ್ರಜ್ಞಾನ ಬಳಕೆಯ ಅಗತ್ಯತೆಯನ್ನು ಸಭೆಯಲ್ಲಿ ಒತ್ತಿಹೇಳಲಾಯಿತು.

“ಲಕ್ಕುಂಡಿ ಕೇವಲ ಐತಿಹಾಸಿಕ ಗ್ರಾಮವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕ. ಅದರ ಅಡಗಿರುವ ಇತಿಹಾಸವನ್ನು ಜಗತ್ತಿನ ಮುಂದಿಡುವ ಕೆಲಸ ನಡೆಯಬೇಕು” ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ ಲಕ್ಕುಂಡಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಉಪಸ್ಥಿತರಿದ್ದರು.

error: Content is protected !!