Home Blog Page 179

ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವ ಅಭ್ಯಾಸವೇ ಕಿಡ್ನಿ ಸ್ಟೋನ್‌ಗೆ ಕಾರಣವೇ? ಇಲ್ಲಿದೆ ಉತ್ತರ

0

ಕೆಲವರಿಗೆ ನೀರು ಕುಡಿಯುವುದು ಎಂದರೆ ಅಸಹ್ಯ ಅಥವಾ ನಿರ್ಲಕ್ಷ್ಯ. ಒತ್ತಡದ ಜೀವನಶೈಲಿ, ಕೆಲಸದ ಚಿಂತೆ, ಬಾಯಾರಿಕೆ ಅನಿಸದಿರುವುದು ಮೊದಲಾದ ಕಾರಣಗಳಿಂದ ಹಲವರು ದಿನಕ್ಕೆ ಅಗತ್ಯವಿರುವಷ್ಟು ನೀರನ್ನು ಸೇವಿಸುವುದಿಲ್ಲ.

ಆದರೆ ದೇಹಕ್ಕೆ ಬೇಕಾದಷ್ಟು ನೀರು ಕುಡಿಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ.

ನೀರು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಪ್ರಮುಖ ಪಾತ್ರ ವಹಿಸುತ್ತದೆ. ನೀರಿನ ಪ್ರಮಾಣ ಕಡಿಮೆಯಾದಾಗ ದೇಹದ ಒಳ ಸಮತೋಲನ ಹದಗೆಡಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೂ, ಅವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನೀರು ಕಡಿಮೆ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಹೇಗೆ ಉಂಟಾಗುತ್ತದೆ?

ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಹಿಮಾಂಶು ವರ್ಮಾ ಅವರ ಪ್ರಕಾರ, ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದಾಗ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮೂತ್ರಪಿಂಡಗಳಲ್ಲಿ ಖನಿಜಗಳು ಮತ್ತು ಲವಣಗಳು ಸರಿಯಾಗಿ ಹೊರಹಾಕಲಾಗದೇ ಸಂಗ್ರಹವಾಗುತ್ತವೆ. ಈ ಸಂಗ್ರಹವೇ ಕ್ರಮೇಣ ಕಲ್ಲುಗಳಾಗಿ ರೂಪುಗೊಳ್ಳುತ್ತದೆ.

ನಿರಂತರವಾಗಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರ ಹೆಚ್ಚು ಕೇಂದ್ರೀಕೃತವಾಗುತ್ತದೆ. ಇದರಿಂದ ಕಲ್ಲುಗಳ ನಿರ್ಮಾಣದ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಕಡಿಮೆ ಬೆವರು ಬರುವವರು, ಉಪ್ಪು ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸುವವರು, ದೀರ್ಘಕಾಲ ಮೂತ್ರವನ್ನು ಹಿಡಿದಿಟ್ಟುಕೊಳ್ಳುವವರು ಹಾಗೂ ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವವರಲ್ಲಿ ಈ ಅಪಾಯ ಹೆಚ್ಚು ಕಂಡುಬರುತ್ತದೆ.

ನೀರಿನ ಕೊರತೆಯ ಲಕ್ಷಣಗಳು

ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪದೇಪದೇ ದಣಿವು, ಒಣ ಬಾಯಿ, ತಲೆನೋವು ಸಾಮಾನ್ಯವಾಗಿವೆ. ಗಾಢ ಹಳದಿ ಬಣ್ಣದ ಮೂತ್ರ ಬರುವುದು ನಿರ್ಜಲೀಕರಣದ ಪ್ರಮುಖ ಸೂಚಕವಾಗಿದೆ.

ಕೆಲವರಿಗೆ ತಲೆತಿರುಗುವಿಕೆ, ಮಲಬದ್ಧತೆ, ಒಣ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ಮೂತ್ರಪಿಂಡ ಸಂಬಂಧಿತ ತೊಂದರೆಗಳು ಮತ್ತು ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.

 ಕಿಡ್ನಿ ಸ್ಟೋನ್ ತಡೆಯುವುದು ಹೇಗೆ?

ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು

ಬಾಯಾರಿಕೆ ಆಗುವ ಮೊದಲು ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು

ಚಳಿಗಾಲದಲ್ಲಿಯೂ ನೀರಿನ ಸೇವನೆಯನ್ನು ಕಡಿಮೆ ಮಾಡಬಾರದು

ಅತಿಯಾದ ಉಪ್ಪು ಮತ್ತು ಜಂಕ್ ಫುಡ್ ಸೇವನೆ ತಪ್ಪಿಸಬೇಕು

ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಡಬೇಕು

ಸಾಕಷ್ಟು ನೀರು ಕುಡಿಯುವ ಸರಳ ಅಭ್ಯಾಸವೇ ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಸಮಸ್ಯೆಗಳಿಂದ ದೂರ ಇರಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

“ನಿಧಿ ಬೇಡ, ಬದುಕು ಬೇಕು” – ಸರ್ಕಾರದ ಮುಂದೆ ಲಕ್ಕುಂಡಿ ಕುಟುಂಬಸ್ಥರ ಮನವಿ

0

ಲಕ್ಕುಂಡಿ: ಇಂದು ಸಚಿವ ಎಚ್.ಕೆ.ಪಾಟೀಲ್ ಲಕ್ಕುಂಡಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ, ನಿಧಿ ಸಿಕ್ಕ ಕುಟುಂಬದ ಮಾತು ಈಗ ಜನರ ಮನಸ್ಸು ಕದಲಿಸಿದೆ. ತಾಯಿ ಕಸ್ತೂರವ್ವ ರಿತ್ತಿ ಮಾತನಾಡಿ, “ನಮಗೆ ನಿಧಿ ಬೇಡ. ಆ ಚಿನ್ನ ಬೇಡ. ಆ ಜಾಗ ಕೂಡ ಬೇಡ” ಎಂದು ಭಾವುಕರಾಗಿದ್ದಾರೆ.

“ನಮಗೆ ಬೇಕಾಗಿರುವುದು ಮನೆ. ಮಗನಿಗೆ ಶಿಕ್ಷಣ. ಮುಂದೆ ಸರ್ಕಾರಿ ಉದ್ಯೋಗ. ಇದಕ್ಕಿಂತ ಹೆಚ್ಚು ಏನೂ ಬೇಡ” ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

“ನಿಧಿ ಸಿಕ್ಕ ಜಾಗದಲ್ಲಿ ಭಯವಾಗುತ್ತದೆ. ಅಲ್ಲಿ ಉಳಿಯಲು ಸಾಧ್ಯವಿಲ್ಲ. ಬೇರೆ ಕಡೆ ಜಾಗ ಕೊಡಿ, ಮನೆ ಕಟ್ಟಿಸಿಕೊಡಿ” ಎಂದು ಕುಟುಂಬ ಸರ್ಕಾರಕ್ಕೆ ನೇರ ಮನವಿ ಮಾಡಿದೆ.

ಕುಟುಂಬದ ನಂಬಿಕೆಯ ಪ್ರಕಾರ, “ನಿಧಿ ಯಾರಿಗೂ ಒಳ್ಳೆಯದಾಗಿಲ್ಲ. ಕೊಟ್ಟವರು ಕೊಟ್ಟಿದ್ದಾರೆ, ಇಟ್ಟುಕೊಂಡವರು ನಷ್ಟ ಅನುಭವಿಸಿದ್ದಾರೆ. ನಿಧಿ ಅನ್ನೋದೇ ಅಪಶಕುನ. ನಮಗೆ ಅದು ದಕ್ಕೋದಿಲ್ಲ” ಎಂಬ ಭಾವನೆ ಮನೆಮಾತಾಗಿದೆ.

ಇಷ್ಟೆಲ್ಲಾ ಆತಂಕದ ನಡುವೆ, “ಸರ್ಕಾರದವರು ನಮ್ಮ ಮಗಳಿಗೆ ನೆರಳಾಗಿ ನಿಲ್ಲಬೇಕು. ನಮ್ಮ ಬದುಕಿಗೆ ಭದ್ರತೆ ಕೊಡಬೇಕು” ಎಂದು ರಿತ್ತಿ ಕುಟುಂಭಸ್ಥರು ಬೇಡಿಕೆ ಇಟ್ಟಿದ್ದಾರೆ.

‘ಇದೇನಾ ಫ್ಯಾಮಿಲಿ ಕಂಫರ್ಟ್?’ – ‘ಟಾಕ್ಸಿಕ್’ ಟೀಸರ್‌ಗೆ AAP ಮಹಿಳಾ ಘಟಕ ಗಂಭೀರ ಆಕ್ಷೇಪ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಬಳಿಕ ದೇಶಾದ್ಯಂತ ಚರ್ಚೆ ಸೃಷ್ಟಿಯಾಗಿದ್ದರೆ, ಇದೀಗ ಅದು ವಿವಾದದ ಕೇಂದ್ರಬಿಂದು ಆಗಿದೆ. ಟೀಸರ್‌ನಲ್ಲಿರುವ ಕೆಲ ದೃಶ್ಯಗಳು ಅಶ್ಲೀಲವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಉಂಟು ಮಾಡುತ್ತಿವೆ ಎಂಬ ಆರೋಪದೊಂದಿಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ರಾಜ್ಯ ಮಹಿಳಾ ಆಯೋಗದ ಮುಂದೆ ಅಧಿಕೃತ ದೂರು ದಾಖಲಿಸಿದೆ.

ಬೆಂಗಳೂರುದಲ್ಲಿರುವ ಮಹಿಳಾ ಆಯೋಗದ ಕಚೇರಿಗೆ ತೆರಳಿ ಟೀಸರ್‌ನಲ್ಲಿನ ವಿವಾದಾಸ್ಪದ ದೃಶ್ಯಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಲಾಗಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಗೈರಿನಲ್ಲಿ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ಸಲ್ಲಿಸಲಾಗಿದೆ. ಟೀಸರ್ ಕನ್ನಡ ಸಾಂಸ್ಕೃತಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿರುವ AAP, ರಾಜ್ಯ ಸರ್ಕಾರ ಟೀಸರ್ ರದ್ದುಪಡಿಸುವಂತೆ ನಿರ್ದೇಶನ ನೀಡಬೇಕು ಹಾಗೂ ಸೆನ್ಸಾರ್ ಮಂಡಳಿ ಕಡ್ಡಾಯವಾಗಿ ಈ ವಿಷಯ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದೆ.

ಈ ಕುರಿತು AAP ಮಹಿಳಾ ಘಟಕದ ಕಾರ್ಯದರ್ಶಿ ಉಷಾ ನೀಡಿದ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. “ಯಶ್ ಅವರು ‘ನಾನು ಮಾಡುವ ಸಿನಿಮಾ ಫ್ಯಾಮಿಲಿ ಜೊತೆ ಕುಳಿತು ನೋಡುವಂತಿರಬೇಕು’ ಎಂದು ಹೇಳುತ್ತಾರೆ. ಹಾಗಾದರೆ ಟೀಸರ್‌ನಲ್ಲಿರುವ ದೃಶ್ಯಗಳಲ್ಲಿ ಆ ಮೌಲ್ಯ ಎಲ್ಲಿದೆ? ಕನ್ನಡ ಸಿನಿಮಾವನ್ನು ಹಾಲಿವುಡ್ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದರೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಈ ರೀತಿಯ ಕಂಟೆಂಟ್ ಮೂಲಕ ಅಲ್ಲ” ಎಂದು ಅವರು ಕಟುವಾಗಿ ಹೇಳಿದ್ದಾರೆ.

‘ಟಾಕ್ಸಿಕ್’ ಹವಾ ನಡುವೆ ರಾಕಿಂಗ್ ಸ್ಟಾರ್ ಯಶ್ ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ – ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ

‘ಟಾಕ್ಸಿಕ್’ ಟೀಸರ್ ರಿಲೀಸ್ ಆದ ನಂತರ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್, ಸೋಮವಾರ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡು ಮತ್ತೆ ಗಮನ ಸೆಳೆದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಕಾರ್ ಕಡೆ ಸಾಗುವ ವೇಳೆ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದ ಯಶ್, ಕೆಲ ಕ್ಷಣ ನಿಂತು ಫೋಟೊಗಳಿಗೆ ಪೋಸ್ ನೀಡಿ ಬಳಿಕ ಕೈಮುಗಿದು ಗೌರವ ತೋರಿಸಿ ಕಾರ್ ಹತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಶ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಲೋ-ಪ್ರೊಫೈಲ್‌ನಲ್ಲಿ ಇದ್ದರು. ಬಹಳ ದಿನಗಳ ನಂತರ ಮುಂಬೈನಲ್ಲಿ ಅವರು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‘ಟಾಕ್ಸಿಕ್’ ಟೀಸರ್‌ಗೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದರೂ, ಚಿತ್ರದ ಮೇಲಿನ ನಿರೀಕ್ಷೆ ಮಾತ್ರ ದಿನದಿಂದ ದಿನಕ್ಕೆ ಮತ್ತಷ್ಟು ಬಲವಾಗುತ್ತಿದೆ.

ಸದ್ಯ ಯಶ್ ‘ಟಾಕ್ಸಿಕ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುತ್ತಿರುವ ಪೋಸ್ಟ್ ಪ್ರೊಡಕ್ಷನ್ ಔಟ್‌ಪುಟ್‌ನ್ನು ಅವರು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಕೆಲವು ತಿಂಗಳಿಂದ ಮುಂಬೈನಲ್ಲೇ ಅವರು ವಾಸ್ತವ್ಯ ಮಾಡಿಕೊಂಡಿದ್ದಾರೆ. ಸದಾ ಕ್ಯಾಮೆರಾದಿಂದ ದೂರ ಉಳಿಯುವ ಯಶ್ ಈಗ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿದೆ.

ಮೈಸೂರಿನಲ್ಲಿ ಖದೀಮರ ಹಾವಳಿ: ಪ್ರಾವಿಷನ್ ಸ್ಟೋರ್‌ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ!

0

ಮೈಸೂರು:- ಮೈಸೂರಿನಲ್ಲಿ ಖದೀಮರ ಕಾಟ ದಿನೇದಿನೇ ಹೆಚ್ಚಾಗುತ್ತಿದ್ದು, ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿ ಗ್ರಾಮದ ಕೆ.ಆರ್. ನಗರ ಮುಖ್ಯ ರಸ್ತೆಯಲ್ಲಿರುವ ಪ್ರಾವಿಷನ್ ಸ್ಟೋರ್‌ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ.

ಮೊಬೈಲ್ ಬ್ಯಾಟರಿ ಬೆಳಕು ಬಳಸಿ ಅಂಗಡಿಗೆ ನುಗ್ಗಲು ಯತ್ನಿಸಿದ ಕಳ್ಳನನ್ನು ಅಂಗಡಿ ಮಾಲೀಕ ಗಮನಿಸಿದ ತಕ್ಷಣವೇ ಆತ ಎಚ್ಚರಗೊಂಡು, ಮಾಲೀಕನನ್ನು ಕಂಡು ಬರಿಗೈಲಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ ಸಂಪೂರ್ಣ ದೃಶ್ಯ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಹುಣಸೂರಿನ ಚಿನ್ನದ ಅಂಗಡಿಯಲ್ಲಿ ಹಾಡುಹಗಲೇ ದರೋಡೆ ನಡೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಇದಲ್ಲದೆ ಮೈಸೂರು ನಗರದಲ್ಲಿ ಬೈಕ್ ಕಳ್ಳತನ, ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಅಡಿಕೆ ತೋಟ ಹಾಗೂ ಮೊಬೈಲ್ ಅಂಗಡಿಗೆ ಕನ್ನ, ನಂಜನಗೂಡಿನಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ನಿರಂತರ ಕಳ್ಳತನ–ದರೋಡೆಗಳಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದು, ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಕುರುಬ ಸಮಾಜ ಬಾಂಧವರಿಂದ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಕುರುಬ ಸಮಾಜದ ರಿತ್ತಿ ಕುಟುಂಬಕ್ಕೆ ಆಕಸ್ಮಿಕವಾಗಿ ದೊರೆತ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿ ಹಾಗೂ ಕುಟುಂಬದವರನ್ನು ಕಂಬಳಿ ಹೊದೆಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡ ರಮೇಶ್ ಎನ್.ಸಜ್ಜಗಾರ, ಹಾಲುಮತ ಸಮಾಜಕ್ಕೆ ಭಾರತದಲ್ಲಿ ತನ್ನದೇ ಆದ ವಿಶೇಷತೆಯಿದೆ. ಹಿಂದಿನ ಕಾಲದಿಂದಲೂ ಕುರುಬರು ಕಂಬಳಿ ಬೀಸಿದರೆ ಮಳೆರಾಯ ಧರೆಗೆ ಬರುವನು ಎಂಬ ಪ್ರತೀತಿ ಇದೆ. ಇದೆಲ್ಲಕ್ಕೂ ನಿದರ್ಶನವಾದದ್ದು ಲಕ್ಕುಂಡಿ ಗ್ರಾಮದ ಕುರುಬ ಸಮಾಜದ ಕಡು ಬಡತನದಲ್ಲಿರುವ ಕುಟುಂಬದವರಿಗೆ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ರಿತ್ತಿ ಕುಟುಂಬದ ನಿಸ್ವಾರ್ಥತೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ ಎಂದರು.

ಪ್ರಾಮಾಣಿಕತೆ ಮೆರೆದ ಕುಟುಂಬವನ್ನು ದೆಹಲಿಗೆ ಕರೆಸಿ ಗೌರವಿಸಿ ಸಮಾಜಕ್ಕೆ ಪ್ರೇರಣಾ ಸಂದೇಶ ನೀಡಲು ಇದಕ್ಕೆ ಸಹಕಾರವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಇವರಿಗೆ ಈ ಸಂದರ್ಭದಲ್ಲಿ ಕುರುಬ ಸಮಾಜದ ಪರವಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಶಿವು ಡಂಬಳ, ಜಯಕುಮಾರ ಉಮಚಗಿ, ಚಂದ್ರಹಾಸ್ ಕಟ್ಟಿಗಾರ ಹಾಗೂ ಲಕ್ಕುಂಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಚಾಮರಾಜನಗರ: ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಹಸು ಬಲಿ, ಗ್ರಾಮಸ್ಥರಲ್ಲಿ ಆತಂಕ!

0

ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಕೊಟ್ಟಿಗೆಯಲ್ಲಿದ್ದ ಹಸುವನ್ನು ಬಲಿ ಪಡೆದ ಘಟನೆ ನಡೆದಿದೆ.

ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಹಸುವೇ ಚಿರತೆ ದಾಳಿಗೆ ಬಲಿಯಾಗಿದ್ದು, ಘಟನೆ ಬಳಿಕ ಗ್ರಾಮದಲ್ಲಿ ಭೀತಿ ಆವರಿಸಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಹುಲಿ ಕಾಟ ಹೆಚ್ಚಾಗಿದ್ದು, ಸುಮಾರು 15 ದಿನಗಳ ಹಿಂದಷ್ಟೇ ಹುಲಿ ಬೋನಿಗೆ ಬಿದ್ದಿತ್ತು. ಇದೀಗ ಮತ್ತೆ ಚಿರತೆ ದಾಳಿ ನಡೆದಿರುವುದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಹಸು ಕಳೆದುಕೊಂಡ ರೈತನಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಕಡಿಮೆಯಾದ ಚಳಿ, ಮೋಡಕವಿದ ವಾತಾವರಣ; ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ!

0

ಬೆಂಗಳೂರು:- ತಮಿಳುನಾಡು ಕರಾವಳಿಯಲ್ಲಿ ಚಂಡಮಾರುತದ ಪ್ರಭಾವದಿಂದ ಕರ್ನಾಟಕದಲ್ಲಿ ಚಳಿ ಕಡಿಮೆಯಾಗಿ, ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.

ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೀದರ್​ನಲ್ಲಿ 12.5 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನ ಎಚ್​ಎಎಲ್​ನಲ್ಲಿ 23.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 23.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 23.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ; ಆಟೋ ಚಾಲಕನನ್ನು ಇರಿದು ಕೊಂದ ದುಷ್ಕರ್ಮಿಗಳು

0

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಗಳು ಮುಂದುವರಿದಿದೆ.

ದಕ್ಷಿಣ ಬಾಂಗ್ಲದ ಫೆನಿ ಜಿಲ್ಲೆಯ ಧಗನ್​ಭುಯಾನ್​ನಲ್ಲಿ ಅಪರಿಚಿತ ದುಷ್ಕರ್ಮಿಗಳು 28 ವರ್ಷದ ಆಟೋ ಚಾಲಕನನ್ನು ಇರಿದು ಹತ್ಯೆ ಮಾಡಿದ್ದಾರೆ. ಮೃತನನ್ನು ಸಮೀರ್ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಮೀರ್‌ನನ್ನು ಕೊಂದು, ಆತನ ಆಟೋರಿಕ್ಷಾವನ್ನೂ ಕಳವು ಮಾಡಲಾಗಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆಗೆ ಸಮೀರ್ ಆಟೋರಿಕ್ಷಾದಲ್ಲಿ ಮನೆಯಿಂದ ಹೊರಟಿದ್ದರು. ತಡರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದರು. ಬಳಿಕ ಸೋಮವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರು ಸಮೀರ್‌ನ ಶವವನ್ನು ಪತ್ತೆ ಮಾಡಿದ್ದಾರೆ.

ದಗನ್‌ಭುಯಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಹತ್ಯೆಗೆ ಮನೆಯಲ್ಲಿ ತಯಾರಿಸಿದ ಹರಿತವಾದ ಆಯುಧಗಳನ್ನು ಬಳಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆ ಪೂರ್ವ ಯೋಜಿತವಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಇದು ಕಳೆದ 23 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಳನೇ ಹಿಂದೂ ಹತ್ಯೆ ಎನ್ನಲಾಗಿದೆ.

ಪತ್ನಿಗೆ ದ್ರೋಹ, ಪ್ರಿಯತಮೆ ಜೊತೆ ಪಲ್ಲಂಗದಲ್ಲಿರುವಾಗಲೇ ಸಿಕ್ಕಿಬಿದ್ದ ಟೆಕ್ಕಿ ಅರೆಸ್ಟ್!

0

ಬೆಂಗಳೂರು: ಮೊದಲ ಪತ್ನಿಗೆ ವಂಚನೆ ಮಾಡಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜೆಡ್ರೆಲಾ ಜಬ್ ಆರೂಪ್ ಅಲಿಯಾಸ್ ಜಾಕೂಬ್ ಎಂದು ಗುರುತಿಸಲಾಗಿದೆ. ಬೆಂಗಳೂರು ಡಿಸಿಆರ್‌ಇ ಪಶ್ಚಿಮ ವಿಭಾಗ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಆರೋಪಿಯು ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಪತ್ನಿ ಖಾಸಗಿ ಸಂಸ್ಥೆಯೊಂದರಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಟೆಕ್ಕಿಯಾಗಿದ್ದ ಪತಿಗೆ ಕೆಲಸ ಇಲ್ಲದ ಹಿನ್ನೆಲೆ, ಲಕ್ಷಾಂತರ ರೂ. ಸಂಬಳ ಬರುತ್ತಿದ್ದ ತನ್ನ ಉದ್ಯೋಗವನ್ನು ಪತ್ನಿ ತ್ಯಜಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಒಂದು ಮಗುವಾದ ಬಳಿಕ ಪತ್ನಿಗೆ ಜಾತಿ ನಿಂದನೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರೋಪಿ ಆರಂಭಿಸಿದ್ದಾನೆ. ಅಲ್ಲದೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರುವ ಜೊತೆಗೆ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಕಿರುಕುಳ ತಾಳಲಾರದೇ ಪತ್ನಿ, ಪತಿಯ ವಿರುದ್ಧ ಅಟ್ರಾಸಿಟಿ ಹಾಗೂ ಹಲ್ಲೆ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪ್ರೇಯಸಿಯ ಮನೆಯಲ್ಲಿ ಅಡಗಿದ್ದ ಮಾಹಿತಿ ಪಡೆದು ಅಲ್ಲಿ ದಾಳಿ ನಡೆಸಿ ಜಾಕೂಬ್‌ನನ್ನು ಬಂಧಿಸಿದ್ದಾರೆ.

ಡಿಸಿಆರ್‌ಇ ಪೊಲೀಸ್ ಠಾಣೆ ಜಾರಿಗೆ ಬಂದ ಬಳಿಕ ಕರ್ನಾಟಕದಲ್ಲಿ ಅಟ್ರಾಸಿಟಿ ಕಾಯ್ದೆಯಡಿ ನಡೆದ ಮೊದಲ ಬಂಧನ ಪ್ರಕರಣ ಇದಾಗಿದೆ.

ಏನಿದು ಡಿಸಿಆರ್‌ಇ?
ಡಿಸಿಆರ್‌ಇ ಎಂದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಜಾತಿ ನಿಂದನೆ, ದೌರ್ಜನ್ಯ ಮತ್ತು ತಾರತಮ್ಯ ಪ್ರಕರಣಗಳ ತನಿಖೆ ನಡೆಸುವ ವಿಶೇಷ ಪೊಲೀಸ್ ಘಟಕವಾಗಿದೆ.

error: Content is protected !!