Home Blog Page 192

ಕಾಂಗ್ರೆಸ್ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯಲ್ಲಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಮಿತಿಮೀರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಹುಬ್ಬಳ್ಳಿ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಂ  ಹಿರೇಮಠ, ಸಿದ್ದಣ್ಣ ಪಲ್ಲೇದ, ಎಂ.ಎಸ್. ಕರಿಗೌಡ್ರ, ನಿರ್ಮಲ ಕೊಳ್ಳಿ, ಶ್ರೀಪತಿ ಉಡುಪಿ, ಅಶೋಕ ಸಂಕಣ್ಣವರ, ಜಗನ್ನಾಥಸಾ ಭಾಂಡಗೆ, ಸುರೇಶ್ ಮರಳಪ್ಪನವರ್, ಅನಿಲ್ ಅಬ್ಬಿಗೇರಿ, ಸುರೇಶ್ ಚಿತ್ತರಗಿ, ಸಂತೋಷ ಅಕ್ಕಿ, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ಶಾರದಾ ಸಜ್ಜನರ, ಪಾರ್ವತಿ ಪಟ್ಟಣಶೆಟ್ಟಿ, ಪದ್ಮಿನಿ ಮುಟ್ಟಲದಿನ್ನಿ, ರೇಖಾ ಗವಳಿ, ರೇಖಾ ಬಂಗಾರ ಶೆಟ್ಟರ್, ರಾಜೇಶ್ವರಿ ಹಾದಿಮನಿ, ಶಾಂತ ತಿಮ್ಮಾಪುರ ಮುಂತಾದವರಿದ್ದರು.

ಜನಾರ್ದನ ರೆಡ್ಡಿ ಮನೆ ಮೇಲೆ ಫೈರಿಂಗ್: ಆಂಜನೇಯನ ಮೊರೆ ಹೋದ ಪತ್ನಿ ಅರುಣಾ ಲಕ್ಷ್ಮೀ, ಘಟನೆ ಬಗ್ಗೆ ಹೇಳಿದ್ದೇನು?

0

ಕೊಪ್ಪಳ: ಜನಾರ್ದನ ರೆಡ್ಡಿ ನಿವಾಸದ ಮೇಲೆ ನಡೆದ ಫೈರಿಂಗ್ ಘಟನೆ ಬಳಿಕ, ಅದರ ಭೀತಿಯಿಂದ ಇನ್ನೂ ಹೊರಬರಲಾಗದೆ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಸಂಕಟ ಅನುಭವಿಸುತ್ತಿದ್ದಾರೆ.

ನಾಳೆ ಶಾಸಕ ಜನಾರ್ದನ ರೆಡ್ಡಿ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ, ಪತಿಯ ಯೋಗಕ್ಷೇಮಕ್ಕಾಗಿ ಅರುಣಾ ಲಕ್ಷ್ಮೀ ಆಂಜನೇಯನ ಮೊರೆ ಹೋಗಿದ್ದಾರೆ. ಘಟನೆ ನಡೆದ ಬಳಿಕ ಎರಡನೇ ಬಾರಿ ಆಂಜನೇಯ ಬೆಟ್ಟ ಏರಿದ ಅವರು, 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ದರ್ಶನದ ನಂತರ ಮಾತನಾಡಿದ ಅರುಣಾ ಲಕ್ಷ್ಮೀ, ಬಳ್ಳಾರಿಯಲ್ಲಿ ನಡೆದ ದುರ್ಘಟನೆಯ ನೆನಪುಗಳು ಇನ್ನೂ ಕಾಡುತ್ತಿವೆ, ಘಟನೆ ನೆನಸಿಕೊಂಡರೆ ಮೈ ನಡುಗುತ್ತದೆ. ಘಟನೆ ನಡೆದು 10 ದಿನಗಳಾದರೂ ತಾವು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ ಎಂದರು. ಘಟನೆ ನಡೆದ ಸಂದರ್ಭದಲ್ಲಿ ತಾವು ಮತ್ತು ತಮ್ಮ ಮಗ ಮನೆಯಲ್ಲೇ ಇದ್ದೆವು. ಭರತ್ ರೆಡ್ಡಿಯ ಗೂಂಡಾಗಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಾಲಿ ಶಾಸಕರಾದ ತಮ್ಮ ಪತಿಯ ಮನೆ ಮೇಲೆ ದಾಳಿ ಮಾಡುವಂತಹ ದುಸ್ಸಾಹಸಕ್ಕೆ ಭರತ್ ರೆಡ್ಡಿ ಕೈ ಹಾಕಿದ್ದಾರೆ ಎಂದು ಅವರು ಹೇಳಿದರು.

ಭರತ್ ರೆಡ್ಡಿ ಪರ ಡಿಕೆ ಶಿವಕುಮಾರ್ ನಿಲ್ಲುವ ವಿಚಾರವೂ ತಮ್ಮನ್ನು ಇನ್ನಷ್ಟು ನೋಯಿಸಿದೆ, ಡಿಕೆಶಿಯ ಮಾತುಗಳು ಆ ಘಟನೆಯ ನೋವಿನಿಂದ ಹೊರಬರಲು ಅಡ್ಡಿಯಾಗಿವೆ. ತಮ್ಮ ಪತಿ ಹಾಗೂ ಜನತೆಗೆ ಯಾವುದೇ ಅಪಾಯ ಆಗಬಾರದೆಂಬ ಕಾರಣಕ್ಕೆ ಆಂಜನೇಯ ದರ್ಶನಕ್ಕೆ ಬಂದಿದ್ದೇನೆ ಎಂದು ಅರುಣಾ ಲಕ್ಷ್ಮೀ ಸ್ಪಷ್ಟಪಡಿಸಿದರು. ಜೊತೆಗೆ, ಘಟನೆ ಬಳಿಕ ರೆಡ್ಡಿ ಬ್ರದರ್ಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿ, ಮೊದಲಿನಿಂದಲೂ ನಾವು ಒಂದಾಗಿದ್ದೇವೆ, ಮುಂದೆಯೂ ಒಂದಾಗಿರುತ್ತೇವೆ ಎಂದರು.

ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು, ಪ್ರಸ್ತುತ ಸರ್ಕಾರದಿಂದ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ, ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಅರುಣಾ ಲಕ್ಷ್ಮೀ ಆಗ್ರಹಿಸಿದರು.

ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್; ಯಶಸ್ವಿನಿ ಬರೆದಿದ್ದ ಡೆತ್ ನೋಟ್ ಪತ್ತೆ!

0

ಆನೇಕಲ್:- ಕಳೆದ ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದ್ದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ.

ಈ ಹಿಂದೆ ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಕ್ಲಾಸ್‌ನಲ್ಲಿ ಅವಮಾನಿಸಿದ್ದಾರೆ ಹಾಗೂ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಆದರೆ ಇದೀಗ ಡೆತ್‌ನೋಟ್ ಸಿಕ್ಕಿದೆ.

ಮೃತ ಯಶಸ್ವಿನಿ ಡೆತ್‌ನೋಟ್‌ನಲ್ಲಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ Thank You So Much ಎಂದು ಬರೆದಿದ್ದಾಳೆ. ಇನ್ನೂ ಕಾಲೇಜಿನಲ್ಲಿ ಮೃತ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ ಯಶಸ್ವಿನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬರೋದು ಸ್ಲಂನಿಂದ ಕೋತಿಯ ಹಾಗೆ ಇದ್ದೀಯಾ ಎಂದು ಅವಮಾನಿಸಿದ್ದರು. ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ!

0

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಗಂಡನ ಮನೆಯಲ್ಲಿ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸುನೀತಾ ದೊಡ್ಡಮನಿ (35) ಎಂದು ಗುರುತಿಸಲಾಗಿದೆ. ಮದುವೆಯಾಗಿ ಕೇವಲ 9 ತಿಂಗಳಾಗಿದ್ದು, ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಸುನೀತಾ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳ ಕಾರಣವಾಗಿದೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಪತಿ ಗಿರೇಶ ದೊಡ್ಡಮನಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ತರುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕಿರುಕುಳದಿಂದಲೇ ಸುನೀತಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಗಳ ಸಾವಿನ ಸುದ್ದಿ ತಿಳಿದ ತಾಯಿ ಸೇರಿದಂತೆ ಕುಟುಂಬದವರು ತೀವ್ರವಾಗಿ ಗೋಳಾಡಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆ ಮುಂದೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ ಕರಾವಳಿ ಪ್ರಗತಿಯೇ ನಮ್ಮ ಸಂಕಲ್ಪ: ಡಿ.ಕೆ. ಶಿವಕುಮಾರ್

0

ಮಂಗಳೂರು: “ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ.

ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

“ನಮ್ಮಲ್ಲಿ 320 ಕಿ ಮೀ ಕರಾವಳಿ ಪ್ರದೇಶವಿದೆ. ಇಲ್ಲಿ ಪ್ರಕೃತಿ ಸಂಪತ್ತಿನ ಜೊತೆಗೆ, ಈ ಭಾಗದ ಹಿರಿಯರು ದೇಶಕ್ಕೆ ಅನೇಕ ಬ್ಯಾಂಕುಗಳನ್ನು ಕೊಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಶಿಸ್ತು ಕೊಟ್ಟ ಜನ ನೀವು. ಪ್ರಪಂಚದಾದ್ಯಂತ ಈ ಕರಾವಳಿ ಭಾಗದ ಜನ ಕೆಲಸ ಮಾಡುತ್ತಿದ್ದಾರೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ.

ಇಲ್ಲಿರುವಷ್ಟು ಮೆಡಿಕಲ್, ಇಂಜಿನಿಯರ್, ಪಿಯುಸಿ ಕಾಲೇಜು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ. ನೀವು ಹೆಚ್ಚು ಮಾನವ ಸಂಪನ್ಮೂಲವನ್ನು ತಯಾರು ಮಾಡುತ್ತಿದ್ದೀರಿ. ಆದರೂ ಈ ಭಾಗದ ಪ್ರತಿಭಾವಂತ ಜನರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಪಂಚದ ಮೂಲೆ ಮೂಲೆಗೆ ಹೋಗುತ್ತಿದ್ದಾರೆ” ಎಂದು ತಿಳಿಸಿದರು.

“ಈ ಭಾಗದಲ್ಲಿ ಸುಂದರ ಸಮುದ್ರ ತೀರವಿದೆ. ಗೋವಾ ಹಾಗೂ ನಮಗೆ ಇರುವ ವ್ಯತ್ಯಾಸವೇನು? ಅಲ್ಲಿರುವ ಸೌಂದರ್ಯ ನಮ್ಮಲ್ಲೂ ಇವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಏಳೆಂಟು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚೆ ಮಾಡಲಾಯಿತು.

ಆಗ ಪ್ರವಾಸೋದ್ಯಮ ಅಂತಿಮ ನೀತಿಯನ್ನು ತಡೆ ಹಿಡಿಯುವಂತೆ ಹೇಳಿದೆ. ಕರಾವಳಿ ಭಾಗದಲ್ಲಿ ನಾವು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಇಲ್ಲಿರುವ ಅಡಚಣೆ ಹೇಗೆ ಸರಿಪಡಿಸಬಹುದು. ಕಾನೂನು ಚೌಕಟ್ಟಿನಲ್ಲಿ ನಿವಾರಣೆ ಮಾಡಿ ನೂತನ ನೀತಿ ತರಬೇಕು ಎಂದು ಹೇಳಿದೆ” ಎಂದರು.

“ಬಹಳಷ್ಟು ಮಂದಿ ವಿದೇಶದಲ್ಲಿ ಇರುವವರು, ಮುಂಬೈ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿಗಳು ತಮ್ಮ ಸ್ವಂತ ಊರಲ್ಲಿ ಏನಾದರೂ ಮಾಡಬೇಕು ಎನ್ನುವ ಆಸಕ್ತಿ ಹೊಂದಿದ್ದಾರೆ. ಅವರುಗಳು ಸರ್ಕಾರದಿಂದ ಅನುಕೂಲ ಮಾಡಿಕೊಟ್ಟರೆ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ. ಈ ಕಾರಣಕ್ಕೆ ನಾನು ವಿಧಾನಸಭೆ ಸೇರಿದಂತೆ ಹಲವಾರು ಕಡೆ ಇದರ ಬಗ್ಗೆ ಮಾತನಾಡಿದ್ದೇನೆ” ಎಂದರು.

ಕೌಟುಂಬಿಕ ಕಲಹಕ್ಕೆ: 10 ತಿಂಗಳ ಮಗುವಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

ಹೈದರಾಬಾದ್: ಕೌಟುಂಬಿಕ ಕಲಹದಿಂದ ಬೇಸತ್ತ 27 ವರ್ಷದ ಮಹಿಳೆಯೊಬ್ಬಳು ತನ್ನ 10 ತಿಂಗಳ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ತಾಯಿಮಗು ಸಾವಿನ ಆಘಾತದಿಂದ ಮಗುವಿನ ಅಜ್ಜಿ ಕೂಡ ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿದುಬಂದಿದೆ.

ಮೃತ ಮಹಿಳೆಯನ್ನು ಸುಷ್ಮಾ (27) ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದ ಸುಷ್ಮಾ, ಇತ್ತೀಚಿನ ದಿನಗಳಲ್ಲಿ ಪತಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಶಾಪಿಂಗ್ ನೆಪದಲ್ಲಿ ಸುಷ್ಮಾ ತನ್ನ ತಾಯಿ ಲಲಿತಾ (44) ಮನೆಗೆ ಮಗುವಿನೊಂದಿಗೆ ತೆರಳಿದ್ದರು. ಅಲ್ಲಿ ಮತ್ತೊಂದು ಕೋಣೆಗೆ ಹೋಗಿ, ಮಗುವಿಗೆ ವಿಷ ನೀಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ. ವೇಳೆ ಸುಷ್ಮಾ ಮತ್ತು ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನೆ ಕಂಡು ತಾಯಿ ಲಲಿತಾ ತೀವ್ರ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

2028ರವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಜಮೀರ್ ಅಹ್ಮದ್ ಸ್ಪಷ್ಟನೆ

0

ಚಿಕ್ಕಬಳ್ಳಾಪುರ: 2028ರವರೆಗೂ ಸಿದ್ದರಾಮಯ್ಯ ಅವರೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ರಾಜ್ಯ ಸರ್ಕಾರದ ವಕ್ಫ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆ ಮಾಡಬೇಕಾದರೆ ನಮ್ಮಿಂದಲೂ ನಿಮ್ಮಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ, ಅದನ್ನು ನಾವು ಎಲ್ಲರೂ ಪಾಲಿಸುತ್ತೇವೆ. ನನ್ನ ಅಭಿಪ್ರಾಯವನ್ನು ನಾನು ಈಗಾಗಲೇ ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಜಮೀರ್, “ಡಿ.ಕೆ. ಶಿವಕುಮಾರ್ ಅವರಿಗೆ ದೇಶದ ಅನೇಕ ರಾಜ್ಯಗಳಲ್ಲಿ ಡಿಮ್ಯಾಂಡ್ ಇದೆ. ಚುನಾವಣೆ ನಡೆಸುವ ತಂತ್ರ ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಅವರನ್ನು ಅಸ್ಸಾಂ ಚುನಾವಣೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ” ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “2019ರಿಂದ 2023ರವರೆಗೆ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಅವರ ಆಡಳಿತಾವಧಿಯಲ್ಲಿ ಸ್ಲಂ ಬೋರ್ಡ್ ಮೂಲಕ ಒಂದು ಮನೆ ಕೊಟ್ಟಿದ್ದರೆ, ನಾನು ರಾಜಕೀಯದಿಂದ ನಿವೃತ್ತಿ ಪಡೆದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ” ಎಂದು ಸವಾಲು ಹಾಕಿದರು.

ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸಿಹಿ ಸುದ್ದಿ: ಗಣರಾಜ್ಯೋತ್ಸವ ದಿನವೇ ಸರ್ಕಾರಿ ಉದ್ಯೋಗ ಆದೇಶ

0

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊನೆಗೂ ನ್ಯಾಯ ಒದಗಿಸಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದ್ದು, ಜನವರಿ 26ರ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.

2021ರ ಮೇ 3ರಂದು ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಕೋವಿಡ್ ರೋಗಿಗಳು ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸಂತ್ರಸ್ತ ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸುತ್ತಿದ್ದರು.

ಅಂದು ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಿದ್ದು, ವಿಶೇಷವಾಗಿ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವುದಾಗಿ ಘೋಷಿಸಿತ್ತು. ಇದೇ ಭರವಸೆಯನ್ನು ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪುನರುಚ್ಚರಿಸಿದ್ದರು.

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆ, ನೀಡಿದ್ದ ಭರವಸೆಯನ್ನು ಈಡೇರಿಸಿ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೀಡುವ ಮೂಲಕ ಸರ್ಕಾರ ಆಶಾಕಿರಣ ಮೂಡಿಸಿದೆ.

ಸಿಎಂ ಬದಲಾವಣೆ ಸಾಧ್ಯವೇ ಇಲ್ಲ! ಯುಗಾದಿವರೆಗೂ ಸ್ಥಿರ ಸರ್ಕಾರ – ಕೋಡಿಮಠ ಶ್ರೀಗಳ ಭವಿಷ್ಯ

0

ಬೀದರ್: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ, ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, “ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ. ಅವರಾಗಿಯೇ ಅಧಿಕಾರ ಬಿಟ್ಟರೆ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಯುಗಾದಿವರೆಗೂ ಯಾವುದೇ ಬದಲಾವಣೆ ನಡೆಯದು” ಎಂದು ನೇರವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಹಾಲುಮತ ಸಮಾಜದ ಹಿನ್ನೆಲೆ ಕುರಿತು ಮಾತನಾಡಿದ ಶ್ರೀಗಳು, “ಹಾಲುಮತ ಸಮಾಜದವರಿಗೆ ಅಧಿಕಾರ ಸಿಕ್ಕರೆ ಅದನ್ನು ಬಿಡಿಸಿಕೊಳ್ಳುವುದು ಸುಲಭವಲ್ಲ. ಹಕ್ಕ-ಬುಕ್ಕ, ಛತ್ರಪತಿ ಶಿವಾಜಿ, ಅಹಲ್ಯಾಬಾಯಿ ಹೋಳ್ಕರ್ ಇದೇ ಸಮಾಜದವರು. ಸಿದ್ದರಾಮಯ್ಯ ಈ ಸಮಾಜದ ಮೊದಲ ಸಿಎಂ. ಅವರನ್ನು ಕೆಳಗಿಳಿಸುವುದು ಸುಲಭವಲ್ಲ” ಎಂದು ವಿಶ್ಲೇಷಣೆ ನೀಡಿದರು.

ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, “ಅವರು ನಮಗೆ ಆತ್ಮೀಯರು. ಆದರೆ ಈಗಲೇ ಅವರ ಸಿಎಂ ಪಟ್ಟದ ಬಗ್ಗೆ ಮಾತನಾಡುವ ಸಮಯ ಬಂದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

ಇನ್ನು ರಾಜಕೀಯದ ಹೊರತಾಗಿ ದೇಶದ ಭವಿಷ್ಯ ಕುರಿತು ಆತಂಕಕಾರಿ ಮುನ್ಸೂಚನೆ ನೀಡಿದ ಶ್ರೀಗಳು,
“ದೇಶಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ಕಾದಿದೆ. ಜನಸಾಮಾನ್ಯರಿಗೆ ಸಾವು-ನೋವು ಸಂಭವಿಸುವ ಸೂಚನೆಗಳಿವೆ. ಜೊತೆಗೆ ದೇಶದ ಇಬ್ಬರು ಮಹಾನ್ ವ್ಯಕ್ತಿಗಳು ಮರಣ ಹೊಂದುವ ಸಾಧ್ಯತೆ ಇದೆ” ಎಂದು ಹೇಳಿ ಜನರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿದ್ದಾರೆ.

ನೆಹರೂ ವಿರೋಧದ ನಡುವೆಯೂ ಸೋಮನಾಥ ಮಂದಿರ ಪುನರ್ ನಿರ್ಮಾಣ: ಗೋವಿಂದ ಕಾರಜೋಳ

0

ಬೆಂಗಳೂರು: ಪಂಡಿತ್ ಜವಾಹರಲಾಲ್ ನೆಹರೂ ಅವರ ಒಪ್ಪಿಗೆಗೆ ವಿರುದ್ಧವಾಗಿಯೇ ಐತಿಹಾಸಿಕ ಸೋಮನಾಥ ಮಂದಿರದ ಪುನರ್ ನಿರ್ಮಾಣ ನಡೆದಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.

“ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ ಅವರು, ಸೋಮನಾಥ ದೇವಾಲಯವು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಮತ್ತು ಮಹತ್ವದ ದೇವಾಲಯ ಎಂದು ಹೇಳಿದರು.

ಸೋಮನಾಥ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ 1951ರಲ್ಲಿ ದೇವಾಲಯವನ್ನು ಪುನರ್ ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ಇಂದಿನ ದಿನದಲ್ಲಿ ದೇಶದ 140 ಕೋಟಿ ಜನರು ಸೋಮನಾಥ ದೇವಾಲಯಕ್ಕೆ ಭಕ್ತಿ ಹಾಗೂ ಶ್ರದ್ಧೆಯಿಂದ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇಂದು ಬಿಜೆಪಿ ಮಾತ್ರವಲ್ಲದೆ, ದೇಶಾದ್ಯಂತ ಹಿಂದೂ ಸಮುದಾಯವು ಸೋಮನಾಥ ಮಂದಿರದ ಪುನರ್ ನಿರ್ಮಾಣದ ಸ್ಮರಣಾರ್ಥವಾಗಿ ತಮ್ಮ ತಮ್ಮ ಊರುಗಳಲ್ಲಿ ಶಿವನ ಪೂಜೆ ನಡೆಸುತ್ತಿದೆ. ಅದೇ ರೀತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇಂದು ವಿಶೇಷ ಪೂಜೆ ನಡೆಸಿದ್ದೇವೆ ಎಂದು ಕಾರಜೋಳ ತಿಳಿಸಿದರು.

ಶ್ರದ್ಧೆ ಮತ್ತು ಭಕ್ತಿಯಿಂದ “ಓಂ ನಮಃ ಶಿವಾಯ” ಧ್ಯಾನ ಮಾಡಿದ್ದು, ಭಗವಂತನು ಎಲ್ಲರಿಗೂ ಒಳಿತನ್ನು ನೀಡಲಿ, ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

error: Content is protected !!