Home Blog Page 196

ಎಸ್‌ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜೋಗಿ ಹನುಮಂತಪ್ಪ ನೇಮಕ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆ ಭಾರತೀಯ ಜನತಾ ಪಾರ್ಟಿ ಎಸ್‌ಟಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜೋಗಿ ಹನುಮಂತಪ್ಪ ಅವರನ್ನು ನೇಮಕ ಮಾಡಲಾಗಿದೆ.

ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಈ ನೇಮಕಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಜೋಗಿ ಹನುಮಂತಪ್ಪ ಅವರು ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಸೇವಾ ಮನೋಭಾವ, ಸಂಘಟನಾ ಸಾಮರ್ಥ್ಯ ಹಾಗೂ ಕಾರ್ಯಕರ್ತರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ ರಾಜ್ಯ ನಾಯಕರು, ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳಿಗೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಜೋಗಿ ಹನುಮಂತಪ್ಪ ತಿಳಿಸಿದ್ದಾರೆ.

“ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಎಸ್‌ಟಿ ಸಮುದಾಯದ ಅಭಿವೃದ್ಧಿ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. ಆಶೀರ್ವಾದ ಮಾಡಿದ ಹಗರಿಬೊಮ್ಮನಹಳ್ಳಿ ರಾಮನಗರ–ಕುರದಗಡ್ಡಿ ವಾರ್ಡ್‌ನ ಸಮಸ್ತ ಮತಬಾಂಧವರಿಗೆ ಕೃತಜ್ಞನಾಗಿದ್ದೇನೆ.”

ಜೋಗಿ ಹನುಮಂತಪ್ಪ, ಪುರಸಭೆ ಸದಸ್ಯರು

“ಕಾಳಜಿ ಕೇಂದ್ರಕ್ಕೂ ಬೀಗ”: ಗಂಗಿಮಡಿ ಸಂತ್ರಸ್ತರನ್ನು ಬೀದಿಗೆ ತಳ್ಳಿದರಾ ಅಧಿಕಾರಿಗಳು?

ಗದಗ: ಮೇ 17ರಂದು ಸುರಿದ ಭಾರಿ ಗಾಳಿ-ಮಳೆಗೆ ಮನೆಗಳ ಮೇಲ್ಚಾವಣಿ ಕಳೆದುಕೊಂಡು ಬೀದಿಗಿಳಿದ ಗಂಗಿಮಡಿ ಪ್ರದೇಶದ ನೂರಾರು ಕುಟುಂಬಗಳಿಗೆ ಜಿಲ್ಲಾಡಳಿತ ಆರಂಭಿಸಿದ್ದ ಕಾಳಜಿ ಕೇಂದ್ರವೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಶೆಡ್‌ಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಏಕಾಏಕಿ ಕಾಳಜಿ ಕೇಂದ್ರಕ್ಕೆ ಬೀಗ ಜಡಿದು ಸಂತ್ರಸ್ತರನ್ನು ಹೊರಹಾಕಿರುವ ಆರೋಪ ಕೇಳಿಬಂದಿದ್ದು, ಜಿಲ್ಲಾಡಳಿತದ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಭಾರಿ ಗಾಳಿ-ಮಳೆಯಿಂದ 30ಕ್ಕೂ ಹೆಚ್ಚು ಶೆಡ್‌ಗಳ ಶೀಟುಗಳು ಹಾರಿ ಹೋಗಿದ್ದರಿಂದ ಅನೇಕ ಕುಟುಂಬಗಳು ಆಶ್ರಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗಂಗಿಮಡಿ ಶಾಲೆಯಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಆರಂಭಿಸಿತ್ತು. ಆದರೆ, ಇನ್ನೂ ಮನೆಗಳ ದುರಸ್ತಿ ಪೂರ್ಣಗೊಳ್ಳದಿದ್ದರೂ ಏಕಾಏಕಿ ಕೇಂದ್ರವನ್ನು ಬಂದ್ ಮಾಡಿ ಜನರನ್ನು ಹೊರಹಾಕಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಕಾಳಜಿ ಕೇಂದ್ರದಿಂದ ಹೊರಹಾಕಿದ ಬಳಿಕ ಗರ್ಭಿಣಿ ಮಹಿಳೆಯರು, ವೃದ್ಧರು, ಮಕ್ಕಳು ಸೇರಿ ನೂರಾರು ಮಂದಿ ಶಾಲೆಯ ಆವರಣದಲ್ಲೇ ರಾತ್ರಿಯಿಡೀ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವಿದ್ಯುತ್ ವ್ಯವಸ್ಥೆಯಿಲ್ಲದೆ ಕತ್ತಲಲ್ಲೇ ಕುಳಿತ ಮಹಿಳೆಯರು ಹಾಗೂ ಮಕ್ಕಳಲ್ಲಿ ವಿಷಜಂತುಗಳ ಭಯ ಹೆಚ್ಚಾಗಿತ್ತು.

ಸಂತ್ರಸ್ತರ ಆರೋಪದ ಪ್ರಕಾರ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಹಾಗೂ ನಗರಸಭೆ ಆಯುಕ್ತ ರಾಜಾರಾಮ ಪವಾರ ಸ್ಥಳಕ್ಕೆ ಬಂದು ಶಾಲೆಗೆ ಬೀಗ ಜಡಿಸಿ ಹೊರಹಾಕಿದ್ದಾರೆ ಎನ್ನಲಾಗಿದೆ.

ಕೆಲವರಿಗೆ ₹5 ಸಾವಿರ ಪರಿಹಾರ ನೀಡಿದ್ದರೂ ಇನ್ನೂ ಅನೇಕ ಕುಟುಂಬಗಳಿಗೆ ಪರಿಹಾರ ತಲುಪಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಳೆ ಮತ್ತೆ ಬರಬಹುದಾದ ಪರಿಸ್ಥಿತಿ ಇದೆ. ನಮ್ಮ ಶೆಡ್‌ಗಳು ಇನ್ನೂ ರಿಪೇರಿ ಆಗಿಲ್ಲ. ಇಂತಹ ಸಮಯದಲ್ಲಿ ನಮ್ಮನ್ನು ಹೊರಹಾಕಿರುವುದು ಮಾನವೀಯತೆಯೇ?” ಎಂದು ಮಹಿಳೆಯರು ಕಣ್ಣೀರಿಟ್ಟರು.

ಕಾಳಜಿ ಕೇಂದ್ರದ ಆವರಣದಲ್ಲೇ ಉಪವಾಸ ಸತ್ಯಾಗ್ರಹದಂತ ವಾತಾವರಣ ನಿರ್ಮಾಣವಾಗಿದ್ದು, ಬೆಳಗ್ಗೆ 10 ಗಂಟೆಯಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಚಹಾ, ನೀರು, ಉಪಹಾರವೂ ಇಲ್ಲದೆ ಮಕ್ಕಳು ಹಾಗೂ ವೃದ್ಧರು ನರಳಾಡಿದ ದೃಶ್ಯ ಮನಕಲಕುವಂತಿತ್ತು. ಈ ವೇಳೆ ಒಬ್ಬ ಮಹಿಳೆ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದ ಘಟನೆ ಕೂಡ ಆತಂಕ ಹೆಚ್ಚಿಸಿತು.

ಇದೇ ವೇಳೆ ಸಂತ್ರಸ್ತರು ಶೆಡ್‌ಗಳ ತುರ್ತು ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸುವಂತೆ, ಎಲ್ಲ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಹಾಗೂ ಮಳೆಗಾಲ ಮುಗಿಯುವವರೆಗೂ ಸುರಕ್ಷಿತ ಆಶ್ರಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಬೇಕೆಂದು ಕೂಡ ಒತ್ತಾಯಿಸಿದ್ದಾರೆ.

ಗಂಗಿಮಡಿ ಸಂತ್ರಸ್ತರ ಈ ದುಸ್ಥಿತಿ ಜಿಲ್ಲಾಡಳಿತದ ತುರ್ತು ಸ್ಪಂದನೆ ಹಾಗೂ ಮಾನವೀಯ ನಡೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

“ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ನಮ್ಮ ಶೆಡ್‌ಗಳು ರಿಪೇರಿ ಆಗುವವರೆಗೂ ಶಾಲೆಯಲ್ಲಿ ಆಶ್ರಯ ನೀಡಲಿ. ಮಳೆ ಬಂದರೆ ನಾವು ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕು?”

ಗಂಗಿಮಡಿ ಸಂತ್ರಸ್ತ ಮಹಿಳೆಯರ ಅಳಲು

ಬಾದಾಮಿ ಅಗಸ್ತ್ಯ ಹೊಂಡದಲ್ಲಿ ಈಜಲು ಹೋದ ಯುವಕ ನಾಪತ್ತೆ: ಮುಂದುವರೆದ ಶೋಧ ಕಾರ್ಯ

0

ಬಾದಾಮಿ: ಜಿಲ್ಲೆಯ ಐತಿಹಾಸಿಕ ಅಗಸ್ತ್ಯ ಹೊಂಡದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಜಯನಗರ ನಿವಾಸಿ ಮನೋಜ್ ಪ್ರಕಾಶ್ ಕಂಬ್ಳೇಕರ್ (19) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಮನೋಜ್ ತನ್ನ ಬಟ್ಟೆಗಳನ್ನು ಹೊಂಡದ ಬದಿಯಲ್ಲಿ ಬಿಟ್ಟು ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಆದರೆ ಸಾಕಷ್ಟು ಸಮಯ ಕಳೆದರೂ ಆತ ಮೇಲಕ್ಕೆ ಬರದ ಹಿನ್ನೆಲೆಯಲ್ಲಿ ಸ್ಥಳೀಯರು ಅನುಮಾನಗೊಂಡು ತಕ್ಷಣ 112 ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕುಟುಂಬ ಸದಸ್ಯರ ಸಹಾಯದಿಂದ ಯುವಕನ ಗುರುತು ದೃಢಪಡಿಸಿದ್ದಾರೆ.

ಇದೀಗ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಹೊಂಡದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಇನ್ನೂ ಯುವಕನ ಪತ್ತೆಯಾಗಿಲ್ಲ. ಘಟನೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

11 ಗಂಟೆಗೆ ಮೋದಿ ಮೆಗಾ ಘೋಷಣೆ! 51 ಸಾವಿರ ಯುವಕರಿಗೆ ಇಂದು ಸರ್ಕಾರಿ ಉದ್ಯೋಗದ ಗಿಫ್ಟ್

ನವದೆಹಲಿ: ದೇಶಾದ್ಯಂತ ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿರುವ 19ನೇ ಆವೃತ್ತಿಯ ರೋಜ್‌ಗಾರ್ ಮೇಳ ಇಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಆರಂಭವಾಗಲಿರುವ ಈ ಉದ್ಯೋಗ ಮೇಳ ದೇಶದ 42 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ವಿವಿಧ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ನೇರವಾಗಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದಾರೆ.

ರೈಲ್ವೇ, ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಹುದ್ದೆಗಳಿಗೆ ಯುವಕರು ನೇಮಕಗೊಳ್ಳಲಿದ್ದಾರೆ.

ಪ್ರಧಾನಮಂತ್ರಿ ಕಚೇರಿ ಮಾಹಿತಿ ಪ್ರಕಾರ, ಈವರೆಗೆ ನಡೆದಿರುವ 18 ರೋಜ್‌ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಉದ್ಯೋಗ ಸೃಷ್ಟಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿರುವುದರ ಭಾಗವಾಗಿ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ.

ಈ ಕುರಿತು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಯುವಕರ ಸಬಲೀಕರಣ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.


 

ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ: ವಿಟಿಯು ಸ್ಪೀಡ್‌ಗೆ ವಿದ್ಯಾರ್ಥಿಗಳೇ ಶಾಕ್

0

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಅಚ್ಚರಿಯ ದಾಖಲೆ ನಿರ್ಮಿಸಿದೆ. ಬೆಳಗಾವಿಯ ವಿಟಿಯು, ಬಿಇ ಮತ್ತು ಬಿಟೆಕ್ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಪ್ರಕಟಿಸಿ ಹೊಸ ಮೈಲಿಗಲ್ಲು ಸಾಧಿಸಿದೆ.

ಇಂದು ನಡೆದ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಜೆ 5:30ಕ್ಕೆ ಪರೀಕ್ಷೆ ಅಂತ್ಯಗೊಂಡ ತಕ್ಷಣವೇ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದ ವಿವಿ, 5:40ಕ್ಕೆ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದೆ.

ಈ ಬಾರಿ ವಿಶ್ವವಿದ್ಯಾಲಯ ಶೇ.99.98ರಷ್ಟು ಫಲಿತಾಂಶ ದಾಖಲಿಸಿದ್ದು, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವೇಗದ ಮೌಲ್ಯಮಾಪನ ವ್ಯವಸ್ಥೆಗೆ ಹೊಸ ಮಾದರಿಯಾಗಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳ ವಾಟ್ಸಪ್ ಸಂಖ್ಯೆಗಳಿಗೂ ನೇರವಾಗಿ ಕಳುಹಿಸಿರುವುದು ಮತ್ತೊಂದು ವಿಶೇಷ.

ಡಿಜಿಟಲ್ ಟೆಕ್ನಾಲಜಿ ಮತ್ತು ಸ್ವಯಂಚಾಲಿತ ಮೌಲ್ಯಮಾಪನ ವ್ಯವಸ್ಥೆ ಬಳಸಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ. ಪರೀಕ್ಷಾ ವಿಭಾಗದ ಸಿಬ್ಬಂದಿ ಹಾಗೂ ತಾಂತ್ರಿಕ ತಂಡದ ಕಾರ್ಯಕ್ಕೆ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ಅಭಿನಂದನೆ ಸಲ್ಲಿಸಿದ್ದಾರೆ.

IAS ಅಧಿಕಾರಿಗಳ ಮಕ್ಕಳಿಗೂ ಮೀಸಲಾತಿ ಬೇಕಾ? ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ತಂದೆ ಮತ್ತು ತಾಯಿ ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದರೆ, ಅವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ.

ಹಿಂದುಳಿದ ವರ್ಗಗಳಲ್ಲಿನ ‘ಕೆನೆಪದರ’ ನಿಯಮಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದಿಂದ ಒಂದು ಕುಟುಂಬ ಈಗಾಗಲೇ ಸಾಮಾಜಿಕವಾಗಿ ಮುನ್ನಡೆ ಸಾಧಿಸಿರುತ್ತದೆ. ಇಂತಹ ಕುಟುಂಬಗಳ ಮುಂದಿನ ಪೀಳಿಗೆಯೂ ನಿರಂತರವಾಗಿ ಮೀಸಲಾತಿ ಪಡೆಯುತ್ತಲೇ ಇದ್ದರೆ, ಈ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಮೀಸಲಾತಿಯ ಲಾಭ ಪಡೆದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತ ಮಟ್ಟ ತಲುಪಿರುವ ಕುಟುಂಬಗಳು ಸ್ವಯಂಪ್ರೇರಿತವಾಗಿ ಮೀಸಲಾತಿಯಿಂದ ಹೊರಗುಳಿಯಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮಾಜದ ತಳಮಟ್ಟದಲ್ಲಿರುವ ಬಡ ಮತ್ತು ಸೌಲಭ್ಯಗಳಿಂದ ವಂಚಿತ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಅವಕಾಶಗಳನ್ನು ಸಬಲ ವರ್ಗದವರು ಕಸಿದುಕೊಳ್ಳಬಾರದು ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಒಂದು ಕುಟುಂಬ ಮೀಸಲಾತಿಯ ಲಾಭ ಪಡೆದು ಉನ್ನತ ಶಿಕ್ಷಣ, ಆರ್ಥಿಕ ಸ್ಥಿರತೆ ಮತ್ತು ಪ್ರಭಾವಿ ಹುದ್ದೆಗಳನ್ನು ಪಡೆದ ಬಳಿಕವೂ ಅವರ ಮಕ್ಕಳು ಅದೇ ಸೌಲಭ್ಯ ಪಡೆಯುತ್ತಲೇ ಇದ್ದರೆ, ಸಮಾನತೆ ಸಾಧಿಸುವ ಉದ್ದೇಶವೇ ಹಾಳಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿದೆ.

ಏನಿದು ಪ್ರಕರಣ?
ಕರ್ನಾಟಕದ ಕುರುಬ ಸಮುದಾಯಕ್ಕೆ ಸೇರಿದ ರಾಘವೇಂದ್ರ ಫಕೀರಪ್ಪ ಚಂದ್ರನಾವರ್ ಅವರು ಕೆಪಿಟಿಸಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗೆ ಮೀಸಲಾತಿ ಅಡಿಯಲ್ಲಿ ಆಯ್ಕೆಯಾಗಿದ್ದರು. ಆದರೆ, ಅವರ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮಿತಿಯನ್ನು ಮೀರಿತ್ತು.

ಈ ಹಿನ್ನೆಲೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಅವರನ್ನು ‘ಕೆನೆಪದರ’ ವ್ಯಾಪ್ತಿಗೆ ಸೇರಿಸಿ ಜಾತಿ ಪ್ರಮಾಣಪತ್ರ ರದ್ದುಗೊಳಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸಹ ಮಾನ್ಯ ಮಾಡಿತ್ತು. ಬಳಿಕ ಅಭ್ಯರ್ಥಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

NEET UG 2026 ಪ್ರಶ್ನೆಪತ್ರಿಕೆ ಸೋರಿಕೆ; ಎನ್‌ಟಿಎ ತಜ್ಞೆ ಬಂಧನ!

ನವದೆಹಲಿ: ನೀಟ್ ಯುಜಿ 2026 ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ತಜ್ಞರೊಬ್ಬರನ್ನು ಸಿಬಿಐ ಬಂಧಿಸಿದೆ.

ಬಂಧಿತ ಆರೋಪಿಯನ್ನು ಮನೀಷಾ ಸಂಜಯ್ ಹವಾಲ್ದಾರ್ ಎಂದು ಗುರುತಿಸಲಾಗಿದ್ದು, ಅವರು ಮಹಾರಾಷ್ಟ್ರದ ಪುಣೆಯ ಸೇಥ್ ಹಿರಾಲಾಲ್ ಸರಾಫ್ ಪ್ರಶಾಲಾದಲ್ಲಿ ಉದ್ಯೋಗದಲ್ಲಿದ್ದರು. ಜೊತೆಗೆ, ಎನ್‌ಟಿಎ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಸಿಬಿಐ ತನಿಖೆ ವೇಳೆ, ಹವಾಲ್ದಾರ್ ಅವರು ಮೇ 16ರಂದು ಬಂಧಿತಳಾಗಿದ್ದ ಸಹ-ಆರೋಪಿ ಮನೀಷಾ ಮಾಂಧರೆ ಜೊತೆ ನೀಟ್ ಯುಜಿ ಪರೀಕ್ಷೆಯ ಭೌತಶಾಸ್ತ್ರ ಪ್ರಶ್ನೆಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಹಂಚಿಕೊಂಡಿದ್ದ ಪ್ರಶ್ನೆಗಳು ನೀಟ್ ಯುಜಿ 2026ರ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಬಂದ ಪ್ರಶ್ನೆಗಳೊಂದಿಗೆ ಹೊಂದಿಕೆಯಾಗಿವೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹವಾಲ್ದಾರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸಿಬಿಐ ಶಂಕಿಸಿದೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಮಾಂಧರೆಯನ್ನು ಮೇ 16ರಂದು ಸಿಬಿಐ ಬಂಧಿಸಿತ್ತು. ಇದೀಗ ಮತ್ತೊಬ್ಬ ಎನ್‌ಟಿಎ ತಜ್ಞರ ಬಂಧನದಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪ್ರಕರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿದ್ದು, ಇನ್ನಷ್ಟು ಆರೋಪಿಗಳ ಸಂಪರ್ಕದ ಕುರಿತು ಮಾಹಿತಿ ಕಲೆಹಾಕುತ್ತಿದೆ.

ಕಲಬುರಗಿಯಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ಐವರು ಸಾವು!

ಕಲಬುರಗಿ: ಕ್ರೂಸರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಶಾ (48), ಮೈಬೂಬ್ ಅಲಿ (45), ರಸೂಲ್ ಬೀ (42) ಹಾಗೂ ಫಾತೀಮಾ ಅಲೀ (38) ಮೃತಪಟ್ಟಿದ್ದಾರೆ. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸಾಗುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಭಾರೀ ವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿಯ ತೀವ್ರತೆಗೆ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಲಾರಿ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾದ ಟಿಟಿ; 12 ಮಂದಿಗೆ ಗಾಯ, 2 ವರ್ಷದ ಮಗು ಸ್ಥಿತಿ ಗಂಭೀರ

ಕೊಪ್ಪಳ: ಜಿಲ್ಲೆಯ ಹೊರವಲಯದ ಚುಕ್ಕನಕಲ್ ಬಳಿ ಶುಕ್ರವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಚಲಿಸುತ್ತಿದ್ದ ಟಿಟಿ (ಟೆಂಪೋ ಟ್ರಾವೆಲರ್) ವಾಹನದ ಟೈರ್ ದಿಢೀರ್ ಬ್ಲಾಸ್ಟ್ ಆದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಅಪಘಾತದಲ್ಲಿ ವಾಹನದಲ್ಲಿದ್ದ 12 ಪ್ರಯಾಣಿಕರು ಗಾಯಗೊಂಡಿದ್ದು, ಇವರಲ್ಲಿ 2 ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೈದರಾಬಾದ್‌ನಿಂದ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ, ವಾಹನದಲ್ಲಿದ್ದವರನ್ನು ಹೊರತೆಗೆದರು.

ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ; ವಾಹನ ಸವಾರರಿಗೆ ಶಾಕ್!

ನವದೆಹಲಿ: ವಾಹನ ಸವಾರರಿಗೆ ಮತ್ತೆ ಇಂಧನ ಶಾಕ್ ಎದುರಾಗಿದೆ.

ಕಳೆದ 10 ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರ 91 ಪೈಸೆ ಹೆಚ್ಚಳವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.14 ರೂ. ಆಗಿದ್ದರೆ, ಡೀಸೆಲ್ ದರ 95.04 ರೂ. ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 99.51 ರೂ. ಹಾಗೂ ಡೀಸೆಲ್ ದರ 92.49 ರೂ. ಆಗಿದೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ದೇಶೀಯ ಇಂಧನ ದರದಲ್ಲೂ ಏರಿಕೆ ಕಂಡುಬಂದಿದೆ. ಮೇ 15ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತ ಹಂತವಾಗಿ ದರ ಹೆಚ್ಚಿಸುತ್ತಿವೆ.

ಮೇ 15ರಂದು ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ದರ ಏರಿಕೆಯಾಗಿ, ಒಟ್ಟು 10 ದಿನಗಳಲ್ಲಿ ಲೀಟರ್‌ಗೆ ಸುಮಾರು 5 ರೂ.ವರೆಗೆ ಹೆಚ್ಚಳವಾಗಿದೆ.

ಪ್ರಮುಖ ನಗರಗಳ ಪೆಟ್ರೋಲ್ ದರ

  • ದೆಹಲಿ – 99.51 ರೂ. (+0.87)
  • ಕೋಲ್ಕತ್ತಾ – 110.64 ರೂ. (+0.94)
  • ಮುಂಬೈ – 108.49 ರೂ. (+0.90)
  • ಚೆನ್ನೈ – 105.31 ರೂ. (+0.82)

ಪ್ರಮುಖ ನಗರಗಳ ಡೀಸೆಲ್ ದರ

  • ದೆಹಲಿ – 92.49 ರೂ. (+0.91)
  • ಕೋಲ್ಕತ್ತಾ – 97.02 ರೂ. (+0.95)
  • ಮುಂಬೈ – 95.02 ರೂ. (+0.94)
  • ಚೆನ್ನೈ – 96.98 ರೂ. (+0.87)