ಬೆಂಗಳೂರು: ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿರಂಗ ಧ್ವಜ ಹಾಗೂ ಕೇಸರಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಬಿಎಲ್ ಸಂತೋಷ್, ದೇಶದ ಇತಿಹಾಸ ಹಾಗೂ ಆರ್‌ಎಸ್‌ಎಸ್‌ನ ಕೊಡುಗೆಗಳ ಬಗ್ಗೆ ದೇಶಾಭಿಮಾನಿಗಳಿಗೆ ತಿಳಿದಿದೆ ಎಂದು ಹೇಳಿದರು.
“ಆರ್‌ಎಸ್‌ಎಸ್ ನೋಂದಣಿ ಮಾಡಿಲ್ಲ, ಮಾಡೋದೂ ಇಲ್ಲ. ನೋಂದಣಿ ಮಾಡಿಕೊಂಡಿರುವ ಸಂಘಟನೆಗಳು ಏನೇನು ಮಾಡುತ್ತಿವೆ ಎಂಬುದು ನಮಗೆ ಗೊತ್ತಿದೆ” ಎಂದು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ತಾವು ಬಿಜೆಪಿ ಕಾರ್ಯಕರ್ತರಾಗಿದ್ದರೂ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ ಎಂದು ಹೇಳಿದ ಬಿಎಲ್ ಸಂತೋಷ್, ಬೆಂಗಳೂರಿನ ಶಿವಾಜಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 20 ವರ್ಷಗಳಿಂದ ಹಿಂದೂ ಪ್ರತಿನಿಧಿಯನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
“ಈ ಎರಡು ಕ್ಷೇತ್ರಗಳಲ್ಲಿ ಹಿಂದೂ ನಾಯಕನನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ನೋಡೋಣ” ಎಂದು ಸವಾಲು ಹಾಕಿದರು.
ಆರ್‌ಎಸ್‌ಎಸ್ ನೋಂದಣಿ ಮಾಡಿಕೊಂಡಿದೆಯೇ ಎಂಬುದು ಸಂಘಟನೆಯ ಕಾರ್ಯವನ್ನು ಅಳೆಯುವ ಮಾನದಂಡವಲ್ಲ. ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರೂ ಎಲ್ಲದಕ್ಕೂ ಮಾನದಂಡವಲ್ಲ ಎಂದು ಸಂತೋಷ್ ಟೀಕಿಸಿದರು.
ಪ್ರಿಯಾಂಕ್ ಖರ್ಗೆ ಅವರ ಕುಟುಂಬದ ಹಿನ್ನೆಲೆಯನ್ನು ಉಲ್ಲೇಖಿಸಿದ ಬಿಎಲ್ ಸಂತೋಷ್, ರಜಾಕರ ದಾಳಿಯ ಸಂದರ್ಭದಲ್ಲಿ ಅವರ ಕುಟುಂಬ ಕಲಬುರಗಿಗೆ ಬಂದಿದ್ದ ವಿಚಾರವನ್ನು ಪ್ರಸ್ತಾಪಿಸಿದರು.
ರಜಾಕರ ದಾಳಿಗೆ ಹೆದರಿ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ಬಂದಿದ್ದರು. ಆ ಸಂದರ್ಭದಲ್ಲಿ ರಜಾಕರ ವಿರುದ್ಧ ನಿಂತಿದ್ದು ಆರ್‌ಎಸ್‌ಎಸ್ ಕಾರ್ಯಕರ್ತರು ಎಂದು ಸಂತೋಷ್ ಹೇಳಿದರು.
“ನಿಮ್ಮ ಕುಟುಂಬ ಇಲ್ಲಿ ನೆಮ್ಮದಿಯಾಗಿ ವಾಸ ಮಾಡಲು ಹಿಂದೂಗಳು ಕಾರಣ. ಆಗ ರಜಾಕರ ವಿರುದ್ಧ ನಿಂತಿದ್ದು ಇದೇ ಆರ್‌ಎಸ್‌ಎಸ್. ಅಂದು ನಿಮ್ಮ ಪೊಲೀಸರು ಬಂದಿಲ್ಲ, ನಿಮ್ಮ ರಾಜಕಾರಣಿಗಳು ಬಂದಿಲ್ಲ. ಆರ್‌ಎಸ್‌ಎಸ್‌ನ ಯುವಕರು ರಸ್ತೆಗಳಲ್ಲಿ ನಿಂತಿದ್ದರು. ಇದನ್ನು ನೀವು ನೆನಪಿಟ್ಟುಕೊಳ್ಳಬೇಕು” ಎಂದು ಬಿಎಲ್ ಸಂತೋಷ್ ಹೇಳಿದರು.
ಆರ್‌ಎಸ್‌ಎಸ್‌ನ ನೋಂದಣಿ ವಿಚಾರಕ್ಕಿಂತ ಅದರ ಸಾಮಾಜಿಕ ಹಾಗೂ ರಾಷ್ಟ್ರೀಯ ಕಾರ್ಯಚಟುವಟಿಕೆಗಳನ್ನು ಗಮನಿಸಬೇಕು ಎಂದು ಅವರು ಪ್ರತಿಪಾದಿಸಿದರು.

