Home Blog Page 3

ನಾನು ಹಿಂದೂಸ್ತಾನಿ, ನಾನು ಕನ್ನಡಿಗ: ದೇಶಾಭಿಮಾನ ಬಿಜೆಪಿಯವರಿಂದ ಕಲಿಯಬೇಕಿಲ್ಲ – ಜಮೀರ್ ಅಹ್ಮದ್ ತಿರುಗೇಟು

0

ಬೆಂಗಳೂರು: ದೇಶಾಭಿಮಾನವನ್ನು ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್‌ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ವಿಶ್ವನಾಥ್‌ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್‌, ವಿಜಯನಗರ ಜಿಲ್ಲೆಯಲ್ಲಿ ಧ್ವಜಾರೋಹಣದಿಂದ ವಿನಾಯಿತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.

ಧ್ವಜಾರೋಹಣ ಮಾಡುವುದು ಸೌಭಾಗ್ಯ. ಈ ಹಿಂದೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿತ್ತು. ಎರಡು ವರ್ಷ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಜಿಲ್ಲಾ ಉಸ್ತುವಾರಿ ಬೇಡ ಎಂದು ಹೇಳಿದ್ದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಬಗ್ಗೆ ತಿಳಿಸಿದ್ದೆ ಎಂದು ಹೇಳಿದರು.

ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬಸಂತಪ್ಪ ಅವರಿಗೆ ಧ್ವಜಾರೋಹಣದ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಅಷ್ಟೇ ಹೊರತು ಧ್ವಜಾರೋಹಣದಿಂದ ಹಿಂದೆ ಸರಿಯುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಜಮೀರ್ ಅಹ್ಮದ್ ಖಾನ್‌ ಸ್ಪಷ್ಟಪಡಿಸಿದರು.

ಮಂತ್ರಿಯಾದ ಬಳಿಕ ಧ್ವಜಾರೋಹಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ತಾವು 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲೂ ಸಚಿವರಾಗಿದ್ದೆ ಎಂದು ಅವರು ಇದೇ ವೇಳೆ ನೆನಪಿಸಿಕೊಂಡರು.

ದೇಶದ್ರೋಹಿ ಯಾರು ಎಂಬುದು ಜನರಿಗೆ ಗೊತ್ತಿದೆ. ದೇಶಾಭಿಮಾನವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಯಾರಿಂದ ಬಂದಿದೆ ಎಂಬುದು ದೇಶಕ್ಕೆ ಗೊತ್ತಿದೆ. ಅವರಿಂದ ನಾನು ದೇಶಾಭಿಮಾನ ಕಲಿಯುವುದಿಲ್ಲ. ನಾನು ಹಿಂದೂಸ್ತಾನಿ, ನಾನು ಕನ್ನಡಿಗ ಎಂದು ಜಮೀರ್ ಅಹ್ಮದ್ ಖಾನ್‌ ತಿರುಗೇಟು ನೀಡಿದರು.

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ: ಇಬ್ಬರು ಸಾವು, ಸುನಾಮಿ ಎಚ್ಚರಿಕೆ

0

ಜಕಾರ್ತ: ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಭೂಕಂಪದ ಬೆನ್ನಲ್ಲೇ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದು, ಕರಾವಳಿ ಪ್ರದೇಶಗಳಲ್ಲಿದ್ದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಆಗಸ್ಟ್ 15ರಂದು ಸ್ಥಳೀಯ ಕಾಲಮಾನ ಬೆಳಗ್ಗೆ 5:58ರ ಸುಮಾರಿಗೆ ಪೂರ್ವ ನುಸಾ ತೇಂಗಾರಾ ಪ್ರಾಂತ್ಯದ ಎಂಡೆ ನಗರದಿಂದ ಸುಮಾರು 68 ಕಿ.ಮೀ. ಉತ್ತರ-ವಾಯುವ್ಯ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ.

ಭೂಕಂಪದ ಪ್ರಬಲ ಕಂಪನವು ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲೂ ಅನುಭವವಾಗಿದೆ. ಘಟನೆಯಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮುಂದುವರಿದಿವೆ.

ಭೂಕಂಪದ ಬಳಿಕ ಇಂಡೋನೇಷ್ಯಾ ಅಧಿಕಾರಿಗಳು ಸುನಾಮಿ ಎಚ್ಚರಿಕೆ ಹೊರಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೋರೆಸ್ ದ್ವೀಪದ ಮೌಮೇರೆ ಪಟ್ಟಣದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಭೂಕಂಪದ ಪರಿಣಾಮ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾನಿಗೊಳಗಾದ ಕಟ್ಟಡಗಳು ಹಾಗೂ ಭೂಕಂಪದ ದೃಶ್ಯಗಳು ಹರಿದಾಡುತ್ತಿವೆ.

ಇಂಡೋನೇಷ್ಯಾ ಮತ್ತು ಅದರ ಸುತ್ತಮುತ್ತಲಿನ ದೇಶಗಳು ಜಪಾನ್‌ನಿಂದ ಆಗ್ನೇಯ ಏಷ್ಯಾ ಹಾಗೂ ಪೆಸಿಫಿಕ್ ಪ್ರದೇಶದವರೆಗೆ ವ್ಯಾಪಿಸಿರುವ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ವಲಯದಲ್ಲಿವೆ. ಈ ಕಾರಣದಿಂದಾಗಿ ಈ ಪ್ರದೇಶದಲ್ಲಿ ಆಗಾಗ್ಗೆ ಪ್ರಬಲ ಭೂಕಂಪಗಳು ಹಾಗೂ ಜ್ವಾಲಾಮುಖಿ ಚಟುವಟಿಕೆಗಳು ಸಂಭವಿಸುತ್ತಿರುತ್ತವೆ.

ಇಂಡೋನೇಷ್ಯಾದಲ್ಲಿ 2000ರ ಬಳಿಕ ಸಂಭವಿಸಿದ ಅತ್ಯಂತ ಮಾರಣಾಂತಿಕ ಭೂಕಂಪವೆಂದರೆ 2004ರಲ್ಲಿ ಸುಮಾತ್ರಾ ಕರಾವಳಿ ಬಳಿ ಸಂಭವಿಸಿದ 9.1 ತೀವ್ರತೆಯ ಭೂಕಂಪ. ಇದರಿಂದ ಉಂಟಾದ ಭೀಕರ ಸುನಾಮಿಯಲ್ಲಿ ಈ ಪ್ರದೇಶದಲ್ಲಿ ಸುಮಾರು 2.2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

Gen Zಗೆ ಮೋದಿ ಬಂಪರ್ ಗಿಫ್ಟ್: 1 ಕೋಟಿ ಯುವಕರಿಗೆ AI ತರಬೇತಿ ಘೋಷಣೆ

0

ನವದೆಹಲಿ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಮುಂದಿನ ವರ್ಷದಲ್ಲಿ ದೇಶದ 1 ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದ್ದಾರೆ.

ದೇಶದ ಅಭಿವೃದ್ಧಿಯ ಪಯಣದಲ್ಲಿ ಯುವಜನರನ್ನು ಕೇಂದ್ರಬಿಂದುವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ, ಭಾರತದ ಯುವ ಪೀಳಿಗೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು. ಯುವಶಕ್ತಿ, ಮಹಿಳೆಯರು, ರೈತರು ಹಾಗೂ ಕಾರ್ಮಿಕರ ಸಹಕಾರದೊಂದಿಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಕನಸುಗಳನ್ನು ನನಸಾಗಿಸುವಲ್ಲಿ Gen Z ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ ಪ್ರಧಾನಿ, ದೇಶದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸುಧಾರಣೆಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವಿದೆ ಎಂದರು.

ಯುವಜನರು, ತಾಯಂದಿರು ಮತ್ತು ಸಹೋದರಿಯರು, ರೈತರು ಹಾಗೂ ಕಾರ್ಮಿಕರ ಸಾಮರ್ಥ್ಯದ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಭಾರತದ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಕೆಂಪುಕೋಟೆಯಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’:

ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ ವಿಶೇಷ ಗಮನ ಸೆಳೆಯಿತು. ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ‘ವಂದೇ ಮಾತರಂ’ ಗೀತೆಯನ್ನು ವಿಶೇಷವಾಗಿ ಪ್ರಸ್ತುತಪಡಿಸಲಾಯಿತು.

ಧ್ವಜಾರೋಹಣದ ಬಳಿಕ ಸೇನಾ ಬ್ಯಾಂಡ್ ‘ವಂದೇ ಮಾತರಂ’ ಗೀತೆಯನ್ನು ನುಡಿಸಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಅತಿಥಿಗಳು ಗೀತೆಯನ್ನು ಹಾಡಿದರು. ಬಳಿಕ ರಾಷ್ಟ್ರಗೀತೆ ಮೊಳಗಿತು.

‘ವಂದೇ ಮಾತರಂ’ ಆಕಾರದಲ್ಲಿ ಕುಳಿತ ಕ್ಯಾಡೆಟ್‌ಗಳು:

ಈ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದರು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ 2,500 ಬಾಲಕ ಮತ್ತು ಬಾಲಕಿಯರ ಕ್ಯಾಡೆಟ್‌ಗಳು ಹಾಗೂ ‘ಮೈ ಭಾರತ್’ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕ್ಯಾಡೆಟ್‌ಗಳು ಜ್ಞಾನಪಥದಲ್ಲಿ ಕುಳಿತು ‘ವಂದೇ ಮಾತರಂ’ ಪದದ ಆಕಾರವನ್ನು ರೂಪಿಸುವ ಮೂಲಕ ಗಮನ ಸೆಳೆದರು. ಯುವಜನರ ಹೆಚ್ಚಿನ ಭಾಗವಹಿಸುವಿಕೆಯಿಂದ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮತ್ತಷ್ಟು ವಿಶೇಷವಾಗಿತ್ತು.

ರೈತರಿಗೆ ₹30 ಸಾವಿರ ಕೋಟಿ ಸಾಲ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿಕೆಶಿ ಬಂಪರ್ ಘೋಷಣೆ

0

ಬೆಂಗಳೂರು: ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ ರಾಜ್ಯದ ಆಡಳಿತ, ಆರ್ಥಿಕ ಪ್ರಗತಿ, ಬರ ನಿರ್ವಹಣೆ, ಗ್ಯಾರಂಟಿ ಯೋಜನೆಗಳು, ರೈತರು, ವಿದ್ಯಾರ್ಥಿಗಳು ಹಾಗೂ ಯುವಜನರ ಭವಿಷ್ಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಮಾಹಿತಿ ನೀಡಿದರು.

ಕಳೆದ ಎರಡು ತಿಂಗಳಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಪಂಚಾಯಿತಿ ಮತ್ತು ಹೋಬಳಿ ಮಟ್ಟದಲ್ಲಿ ಶಾಸಕರು ಸಭೆ ನಡೆಸಿ ಜನರ ಕುಂದುಕೊರತೆಗಳನ್ನು ಆಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.

ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪರಿಸ್ಥಿತಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಲು ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಕೆರೆ-ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಕರ್ನಾಟಕದ ಆರ್ಥಿಕತೆಗೆ 3 ಟ್ರಿಲಿಯನ್ ಡಾಲರ್ ಗುರಿ:

ಕರ್ನಾಟಕದ ತಲಾದಾಯ ಪ್ರಸ್ತುತ 4.33 ಲಕ್ಷ ರೂ. ತಲುಪಿದೆ ಎಂದು ಸಿಎಂ ಹೇಳಿದರು. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಕರ್ನಾಟಕದ ಆರ್ಥಿಕತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದು, ಅದಕ್ಕಾಗಿ ಬೃಹತ್ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಘೋಷಿಸಿದರು.

ಗ್ಯಾರಂಟಿ ಯೋಜನೆಗಳ ಪ್ರಸ್ತಾಪ:

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 15 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಿಎಂ ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಯುವಕರಿಗೆ AI ಶಿಕ್ಷಣ:

ಯುವಜನರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಉದ್ಯೋಗ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಶಿಕ್ಷಣವನ್ನು ಪರಿಚಯಿಸುವ ನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಯುವಜನರಲ್ಲಿ ದೇಶಭಕ್ತಿ, ಸಮಾನತೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ 10 ಸಾವಿರ ಭಾರತ್ ಜೋಡೋ ತಂಡಗಳನ್ನು ರಚಿಸುವ ಬೃಹತ್ ಯೋಜನೆ ಕೈಗೊಳ್ಳಲಾಗುವುದು ಎಂದರು.

ಯುವಕರಿಗೆ ಅಗತ್ಯವಿರುವ ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರ ಆದ್ಯತೆಯ ಮೇಲೆ ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದು ಹೇಳಿದರು.

ರೈತರಿಗೆ ಪರಿಹಾರ, ಸಾಲ ಸೌಲಭ್ಯ:

ಬೆಳೆ ವಿಮೆ ಯೋಜನೆಯಡಿ 12.35 ಲಕ್ಷ ರೈತರಿಗೆ 1,300 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಳೆದ ಒಂದು ವರ್ಷದಲ್ಲಿ 9 ಲಕ್ಷ ಹಾಲು ಉತ್ಪಾದಕ ರೈತರ ಖಾತೆಗಳಿಗೆ 2,600 ಕೋಟಿ ರೂ. ಪ್ರೋತ್ಸಾಹಧನ ವರ್ಗಾಯಿಸಲಾಗಿದೆ ಎಂದರು.

ಸಹಕಾರ ಕ್ಷೇತ್ರದಿಂದ ಪ್ರತಿದಿನ 1.10 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ‘ನಂದಿನಿ’ ಬ್ರ್ಯಾಂಡ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ರೈತರ ಮನೆ ಬಾಗಿಲಿಗೆ ಪಶುವೈದ್ಯಕೀಯ ಸೇವೆ ಒದಗಿಸಲು 275 ಸಂಚಾರಿ ಪಶುವೈದ್ಯಕೀಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಈ ವರ್ಷ 38 ಲಕ್ಷ ರೈತರಿಗೆ 30 ಸಾವಿರ ಕೋಟಿ ರೂ. ಸಾಲ ಸೌಲಭ್ಯ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

ಪರೀಕ್ಷಾ ಅಕ್ರಮ ತಡೆಗೆ ಹೊಸ ವ್ಯವಸ್ಥೆ:

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳ ಕುರಿತು ಮಾತನಾಡಿದ ಸಿಎಂ, ವಿದ್ಯಾರ್ಥಿಗಳ ಆತಂಕವನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಪರೀಕ್ಷಾ ವ್ಯವಸ್ಥೆಯಲ್ಲಿ ವೈಜ್ಞಾನಿಕ ಬದಲಾವಣೆ ತರಲು ಪರಿಣಿತ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಎರಡು ತಿಂಗಳಲ್ಲಿ ವರದಿ ನೀಡಲಿದ್ದು, ಅದರ ಆಧಾರದ ಮೇಲೆ ದೇಶಕ್ಕೇ ಮಾದರಿಯಾಗುವ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕೆ:

ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಸ್ಥಳೀಯವಾಗಿ ಕೈಗಾರಿಕೆಗಳು ಸ್ಥಾಪನೆಯಾದರೆ ಅಲ್ಲಿನ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಇದರಿಂದ ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಒತ್ತು:

ಕಲ್ಯಾಣ ಕರ್ನಾಟಕ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಸಿಎಂ ಹೇಳಿದರು.

‘ಕಲ್ಯಾಣಪಥ’ ಯೋಜನೆಯಡಿ 1,150 ಕಿಲೋಮೀಟರ್ ಉದ್ದದ ರಸ್ತೆಗಳ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಬಸವಣ್ಣನವರ ತತ್ವಗಳಿಗೆ ಆದ್ಯತೆ:

ಸರ್ಕಾರ ಬಸವಣ್ಣನವರ ತತ್ವಾದರ್ಶಗಳನ್ನು ಆಧಾರವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಮೌಲಾನಾ ಆಜಾದ್ ಅವರನ್ನು ಸ್ಮರಿಸಿದರು.

ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಯುವಜನತೆಯ ಭವಿಷ್ಯವನ್ನು ಉಜ್ವಲಗೊಳಿಸುವುದು ಹಾಗೂ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಗಣೇಶ ಚತುರ್ಥಿಯಂದು ಭಾರತ-ಅಫ್ಘಾನಿಸ್ತಾನ ಟಿ20 ಪಂದ್ಯ? ವೇಳಾಪಟ್ಟಿ ಬದಲಾವಣೆಗೆ ACB ಮನವಿ

0

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಬಹುನಿರೀಕ್ಷಿತ ಟಿ20 ಸರಣಿಗೆ ವೇದಿಕೆ ಸಿದ್ಧವಾಗುತ್ತಿದೆ. ಮುಂಬರುವ ಏಷ್ಯನ್ ಗೇಮ್ಸ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿ ಮಹತ್ವದ ಅಭ್ಯಾಸ ಸರಣಿಯಾಗಿದ್ದು, ಪಂದ್ಯಗಳ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡುವಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ಮನವಿ ಮಾಡಿದೆ.

ಐಸಿಸಿಯ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (FTP) ಪ್ರಕಾರ, ಈ ಸರಣಿ ಅಫ್ಘಾನಿಸ್ತಾನದ ‘ತವರು ಸರಣಿ’ಯಾಗಿದೆ. ಅಫ್ಘಾನಿಸ್ತಾನದಲ್ಲಿ ಭದ್ರತಾ ಕಾರಣಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕಳೆದ ಕೆಲವು ವರ್ಷಗಳಿಂದ ಭಾರತವನ್ನೇ ಅಫ್ಘಾನಿಸ್ತಾನ ತನ್ನ ತವರು ತಾಣವಾಗಿ ಬಳಸಿಕೊಳ್ಳುತ್ತಿದೆ.

ಈ ಸರಣಿಯ ಮೂರು ಟಿ20 ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಎರಡನೇ ಟಿ20 ಪಂದ್ಯ ಸೆಪ್ಟೆಂಬರ್ 15ರಂದು ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 17ರಂದು ನಡೆಯಬೇಕಿದೆ.

ಆದರೆ, ಸೆಪ್ಟೆಂಬರ್ 13 ಅಥವಾ 15ರಂದು ನಡೆಯಬೇಕಿರುವ ಪಂದ್ಯವನ್ನು ಸೆಪ್ಟೆಂಬರ್ 14ರ ಸೋಮವಾರಕ್ಕೆ ಸ್ಥಳಾಂತರಿಸುವಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮನವಿ ಮಾಡಿದೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪಂದ್ಯ ಬದಲಾವಣೆಗೆ ಮನವಿ

ಸಾಮಾನ್ಯವಾಗಿ ಸೋಮವಾರ ಪಂದ್ಯ ಆಯೋಜಿಸಿದರೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತಮ್ಮ ಕೆಲಸ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾರಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಆಗಮಿಸಲಿದ್ದಾರೆ ಎಂಬುದು ಎಸಿಬಿಯ ಲೆಕ್ಕಾಚಾರ.

ಹೀಗಾಗಿ ಬಿಸಿಸಿಐ ಪ್ರಸ್ತಾವನೆಗೆ ಅಂತಿಮ ಒಪ್ಪಿಗೆ ನೀಡಿದರೆ, ಗಣೇಶ ಚತುರ್ಥಿಯ ದಿನ ದೆಹಲಿಯಲ್ಲಿ ಭಾರತ-ಅಫ್ಘಾನಿಸ್ತಾನ ನಡುವಿನ ರೋಚಕ ಟಿ20 ಪಂದ್ಯ ನಡೆಯುವ ಸಾಧ್ಯತೆಯಿದೆ. ಇದರಿಂದ ಪಂದ್ಯಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯೂ ಇದೆ.

ಭಾರತ-ಬಾಂಗ್ಲಾದೇಶ ಸರಣಿಗೆ ಬ್ರೇಕ್?

ಇದೇ ವೇಳೆ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಸಾಧ್ಯತೆಗಳು ಮತ್ತಷ್ಟು ಮಸುಕಾಗಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್ 1ರಿಂದ 6ರವರೆಗೆ ಮೂರು ಏಕದಿನ ಹಾಗೂ ಸೆಪ್ಟೆಂಬರ್ 9ರಿಂದ 13ರವರೆಗೆ ಮೂರು ಟಿ20 ಪಂದ್ಯಗಳ ಸರಣಿ ಆಯೋಜಿಸಲು ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ ಉಭಯ ದೇಶಗಳ ನಡುವಿನ ಪ್ರಸ್ತುತ ರಾಜಕೀಯ ಹಾಗೂ ಗಡಿ ಸಂಬಂಧಿತ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಸರಣಿಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿತ್ತು. ಸರ್ಕಾರದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಭಾರತ-ಬಾಂಗ್ಲಾದೇಶ ಸರಣಿ ನಡೆಯುವ ಸಾಧ್ಯತೆ ಬಹುತೇಕ ಕ್ಷೀಣಿಸಿದೆ ಎನ್ನಲಾಗುತ್ತಿದೆ.

ಭಾರತ-ಅಫ್ಘಾನಿಸ್ತಾನ ಸರಣಿಯ ಪ್ರಸಾರ ಹಕ್ಕುಗಳಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಾತುಕತೆಗಳನ್ನು ಆರಂಭಿಸಿದೆ ಎನ್ನಲಾಗಿದೆ. ಟಿವಿ ಪ್ರಸಾರಕ್ಕಾಗಿ ಸೋನಿ ಸ್ಪೋರ್ಟ್ಸ್‌ನೊಂದಿಗೆ ಎಸಿಬಿ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಡಿಜಿಟಲ್ ಪ್ರಸಾರದ ವಿಚಾರದಲ್ಲಿ ಫ್ಯಾನ್‌ಕೋಡ್ ಮೂಲಕ ಪಂದ್ಯಗಳ ನೇರ ಪ್ರಸಾರವಾಗುವ ಸಾಧ್ಯತೆಯೂ ಇದೆ.

ಏಷ್ಯನ್ ಗೇಮ್ಸ್‌ಗೆ ಮುನ್ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳಿಗೆ ಇದು ಪ್ರಮುಖ ತಯಾರಿ ಸರಣಿಯಾಗಿರುವುದರಿಂದ, ಈ ಮೂರು ಪಂದ್ಯಗಳ ಮೇಲೆ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ. ವೇಳಾಪಟ್ಟಿ ಬದಲಾವಣೆಗೆ ಬಿಸಿಸಿಐ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Independence Day 2026: ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿಕೆಶಿ!

0

ಬೆಂಗಳೂರು: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಮುಖ್ಯಮಂತ್ರಿಯಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದ ವಿಶೇಷ ಕ್ಷಣಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಸಿಎಂ, ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದರು. ಧ್ವಜಾರೋಹಣದ ತಕ್ಷಣ ವಂದೇ ಮಾತರಂ ಗೀತೆ ಮೊಳಗಿದರೆ, ಬಳಿಕ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿತು.

ತೆರೆದ ಜೀಪಿನಲ್ಲಿ ಗೌರವ ವಂದನೆ ಸ್ವೀಕರಿಸಿದ ಸಿಎಂ:

ಧ್ವಜಾರೋಹಣದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರೆದ ಜೀಪಿನಲ್ಲಿ ಪಥಸಂಚಲನ ಪರಿಶೀಲಿಸಿ ಪೊಲೀಸ್, ಸಶಸ್ತ್ರ ಪಡೆ ಹಾಗೂ ವಿವಿಧ ತಂಡಗಳಿಂದ ಸಲ್ಲಿಸಲಾದ ಗೌರವ ವಂದನೆಯನ್ನು ಸ್ವೀಕರಿಸಿದರು. ಈ ಬಾರಿ ರಾಜ್ಯ ಸರ್ಕಾರ ಸಾರ್ವಜನಿಕರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಭ್ರಮ:

ಸಿಎಂ ಭಾಷಣದ ಬಳಿಕ ಮಾಣೆಕ್ ಷಾ ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಮತ್ತು ವಿವಿಧ ಕಲಾ ತಂಡಗಳು ದೇಶಭಕ್ತಿ ಗೀತೆಗಳು ಹಾಗೂ ನೃತ್ಯ ಪ್ರದರ್ಶನಗಳ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು.

ಇದೇ ವೇಳೆ, ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಕರ್ನಾಟಕದಲ್ಲೂ ರಾಜ್ಯಮಟ್ಟದ ಆಚರಣೆಯ ಮೂಲಕ 80ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗದಗ: ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ಗರ್ಭಪಾತಕ್ಕೆ ಸಹಕರಿಸಿದ ಆರ್‌ಎಂಪಿ ವೈದ್ಯ, ನರ್ಸ್ ಸೇರಿ ಐವರು ಬಂಧನ

0

ಗದಗ: 26 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಬಂಧಿಸಲಾಗಿದ್ದ ಇಬ್ಬರು ಆರೋಪಿಗಳ ಬಳಿಕ ಮತ್ತೂ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಗದಗ ಎಸ್.ಎಂ. ಕೃಷ್ಣನಗರದ ನಿವಾಸಿಯಾದ ಯುವತಿ ಮೇಲೆ ಇಬ್ಬರು ಆರೋಪಿಗಳು ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜು.26ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿ ಮೂರು ತಿಂಗಳ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಗರ್ಭಪಾತ ಮಾಡಿಸಲು ಕೆಲವರು ಸಹಕರಿಸಿರುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗರ್ಭಪಾತಕ್ಕೆ ಸಹಕಾರ ಆರೋಪ:

ಪ್ರಕರಣದ ಮುಂದಿನ ತನಿಖೆಯಲ್ಲಿ ಗರ್ಭಪಾತದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆನ್ನಲಾದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಆರ್‌ಎಂಪಿ ವೈದ್ಯ ಹಾಗೂ ನರ್ಸ್ ಕೂಡ ಸೇರಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಆರ್‌ಎಮ್‌ಪಿ ವೈದ್ಯ, ನರ್ಸ್ ಬಂಧನ:

ಪೊಲೀಸ್ ಪ್ರಕಟಣೆಯ ಪ್ರಕಾರ, ಬೆಟಗೇರಿಯ ಸಿಕಂದರ್ ಗುಲಾಬಸಾಬ ಬೇಪಾರಿ, ಶಬ್ಬೀರ ಅಹ್ಮದ್ @ ಜೂನಸಾಬ್ ಮಹ್ಮದ್ ರಫೀಕ್ ಲಂಗೂಟಿ, ಪ್ರದೀಪ್ ತಂದೆ ಸಾಗರ ನವಲೇಕರ್, ಭರತ ತಂದೆ ಮಹಾದೇವಪ್ಪ ಕೊರವರ, ಸಂದೀಪ್ ತಂದೆ ಸಾಗರ ನವಲೇಕರ್, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ಆರ್‌ಎಂಪಿ ವೈದ್ಯ ನಾಗರಾಜ ತಂದೆ ಚಿದಾನಂದ ಕಮತರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ಸ್ಟಾಫ್ ನರ್ಸ್ ರೇಖಾ ತಂದೆ ಫಕೀರಪ್ಪ ಶಿರಹಟ್ಟಿ ಎಂಬ ಏಳು ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ತನಿಖೆಯ ವೇಳೆ ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.

Bengaluru Terror Suspect Arrest: ಹೆಬ್ಬಗೋಡಿಯಲ್ಲಿ ಶಂಕಿತ ಉಗ್ರ ಬಂಧನ, TTP ಸಂಪರ್ಕ ಶಂಕೆ?

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಅಸಾಫುಲ್ ಮಲ್ಲಿಕ್ ಎಂಬಾತನನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಸಂಪರ್ಕ ಸಾಧಿಸಲು ಆರೋಪಿ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅಫ್ಘಾನಿಸ್ತಾನ ಮೂಲದ ಇಮ್ರಾನ್ ಸೈದರ್ ಎಂಬಾತನೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.

ಆರೋಪಿ ಅಫ್ಘಾನಿಸ್ತಾನಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸಿದ್ದರೂ, ಕುಟುಂಬದ ಕಾರಣ ಹಾಗೂ ಇತರ ತೊಂದರೆಗಳಿಂದ ಆ ಯೋಜನೆಯನ್ನು ಕೈಬಿಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮೊಬೈಲ್ ಪರಿಶೀಲನೆಯಲ್ಲಿ ಬಯಲಾದ ಮಾಹಿತಿ:

ಆರೋಪಿಯ ಮೊಬೈಲ್, ವಾಟ್ಸಾಪ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಪರಿಶೀಲಿಸಿದ ವೇಳೆ ಇಮ್ರಾನ್ ಸೈದರ್ ಜೊತೆಗಿನ ಚಾಟಿಂಗ್, ಹಲವು ವಾಯ್ಸ್ ಕಾಲ್‌ಗಳು ಮತ್ತು ಆಡಿಯೋ ಸಂದೇಶಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಅಸಾಫುಲ್ ಮಲ್ಲಿಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಬಂಧಿತ ಆರೋಪಿ ಹೆಬ್ಬಗೋಡಿ ಸಮೀಪದ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

KRS Dam Water Release Today: ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುಗಡೆ!

0

ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಪ್ರಕ್ರಿಯೆ ಮುಂದುವರಿದಿದ್ದು, ಇದೀಗ ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ  ಜಲಾಶಯದಿಂದಲೂ ನೀರು ಹರಿಸಲಾಗುತ್ತಿದೆ. ಇದುವರೆಗೆ ಕೇವಲ ಕಬಿನಿ ಜಲಾಶಯದಿಂದ ಮಾತ್ರ ನೀರು ಬಿಡಲಾಗುತ್ತಿತ್ತು.

ಕಬಿನಿ ಜಲಾಶಯಕ್ಕೆ ಇತ್ತೀಚಿನ ದಿನಗಳಲ್ಲಿ ಒಳಹರಿವಿನ ಪ್ರಮಾಣ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ನೀರಿನ ಹರಿವನ್ನು ಸಮತೋಲನಗೊಳಿಸಲು KRS ಜಲಾಶಯದಿಂದ ನೀರು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಸರ್ಕಾರದ ಸೂಚನೆಯಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶುಕ್ರವಾರ ರಾತ್ರಿ থেকেই ನೀರು ಬಿಡುವ ಕಾರ್ಯ ಆರಂಭಿಸಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, KRS ಜಲಾಶಯದ 80ಕ್ಕೂ ಹೆಚ್ಚು ಕ್ರಸ್ಟ್ ಗೇಟ್‌ಗಳ ಮೂಲಕ ಸುಮಾರು 3,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ. ಕಬಿನಿಯಿಂದ ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ಕಾರಣ, KRS‌ನಿಂದ ನೀರು ಹರಿಸಿ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ.

80ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ!

0

ನವದೆಹಲಿ: ದೇಶಾದ್ಯಂತ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಸತತ 13ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಮೊಳಗಿದರೆ, 21 ಗನ್ ಸಲ್ಯೂಟ್ ನೀಡಲಾಯಿತು. ಇದೇ ವೇಳೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಠಿ ನಡೆಸಲಾಯಿತು.

ಇದಕ್ಕೂ ಮುನ್ನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಬಳಿಕ ಕೆಂಪುಕೋಟೆಗೆ ಆಗಮಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರನ್ನು ಸ್ವಾಗತಿಸಿದರು. ನಂತರ ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ರಾಜೇಶ್ ಸೇಥಿ ಅವರನ್ನು ಪ್ರಧಾನಿಗೆ ಪರಿಚಯಿಸಲಾಯಿತು.

ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ವಿಶೇಷವೆಂದರೆ, ಈ ಬಾರಿ ವಂದೇ ಮಾತರಂ ಗೀತೆಗೆ 150ನೇ ವರ್ಷಾಚರಣೆ ಹಿನ್ನೆಲೆ ರಾಷ್ಟ್ರಗೀತೆಗೆ ಮುನ್ನ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ವಂದೇ ಮಾತರಂ ಗೀತೆ ಮೊಳಗಿಸಲಾಯಿತು.

ಸಮಾರಂಭಕ್ಕೆ ದೇಶದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಯುವ ಆವಿಷ್ಕಾರಕರು, ‘ಮೈ ಭಾರತ್’ ಸ್ವಯಂಸೇವಕರು, ವಿದ್ಯಾರ್ಥಿಗಳು, ಸ್ವಚ್ಛತಾ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಪಿಎಂ ವಿಶ್ವಕರ್ಮಾ ಯೋಜನೆ ಫಲಾನುಭವಿಗಳು ಸೇರಿದಂತೆ ವಿವಿಧ ವರ್ಗದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.