Home Blog Page 2

ಗದಗ: Gen Z ಹೋರಾಟದಲ್ಲಿ ಪಾಲ್ಗೊಂಡ ಬಿಜೆಪಿ ನಗರಸಭೆ ಸದಸ್ಯನಿಗೆ ಶೋಕಾಸ್ ನೋಟಿಸ್!

0

ಗದಗ: ಪಕ್ಷಕ್ಕೆ ಪೂರಕವಲ್ಲದ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಶಿಸ್ತಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ರಾಘವೇಂದ್ರ ಯಳವತ್ತಿ ಅವರಿಗೆ ಬಿಜೆಪಿ ಗದಗ ನಗರ ಮಂಡಲದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.ವಿಶೇಷವೆಂದರೆ, ರಾಘವೇಂದ್ರ ಯಳವತ್ತಿ ಅವರು ಪಾಲ್ಗೊಂಡಿದ್ದ ಹೋರಾಟವು ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ, ಯುವಕರಿಗೆ ಉದ್ಯೋಗ, ರೈತರ ಹಿತದೃಷ್ಟಿಯಿಂದ ಬರಪೀಡಿತ ಪ್ರದೇಶ ಘೋಷಣೆ ಸೇರಿದಂತೆ ಜನೋಪಯೋಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆದಿದ್ದಾಗಿದೆ.ಆಗಸ್ಟ್ 31, 2026ರಂದು ಗದಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಘವೇಂದ್ರ ಯಳವತ್ತಿ ಪಾಲ್ಗೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಬಿಜೆಪಿ ನಗರ ಮಂಡಲದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಪಕ್ಷದ ಜನಪ್ರತಿನಿಧಿಗಳು ಪಕ್ಷಕ್ಕೆ ಪೂರಕವಲ್ಲದ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂದು ಸೂಚಿಸಿರುವ ಬಿಜೆಪಿ, ಈ ಕುರಿತು ಏಳು ದಿನಗಳೊಳಗಾಗಿ ಸೂಕ್ತ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.ಬಿಜೆಪಿ ಗದಗ ನಗರ ಮಂಡಲದ ಅಧ್ಯಕ್ಷ ಸುರೇಶ ಮರಳಪ್ಪನವರ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಚಿತ್ತರಗಿ ಮತ್ತು ಶಂಕರ ಕಾಕಿ ಅವರು ಜಂಟಿಯಾಗಿ ಈ ನೋಟಿಸ್ ನೀಡಿದ್ದಾರೆ.ಜನರ ಸಮಸ್ಯೆಗಾಗಿ ಹೋರಾಟವೂ ಪಕ್ಷ ವಿರೋಧಿ ಚಟುವಟಿಕೆಯೇ?ಗದಗದಲ್ಲಿ Gen Z Voters and Citizens Forum ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಯುವಕರಿಗೆ ಉದ್ಯೋಗಾವಕಾಶ, ರೈತರ ಸಂಕಷ್ಟದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗಿತ್ತು.ಈ ಹೋರಾಟದಲ್ಲಿ ಪಾಲ್ಗೊಂಡಿರುವುದನ್ನೇ ಬಿಜೆಪಿ ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿ ನೋಟಿಸ್ ನೀಡಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.ಸ್ಥಳೀಯವಾಗಿ ಜನರ ಸಮಸ್ಯೆಗಳಿಗಾಗಿ ನಡೆಯುವ ಹೋರಾಟದಲ್ಲಿ ಪಕ್ಷದ ಜನಪ್ರತಿನಿಧಿಗಳು ಭಾಗವಹಿಸುವುದು ತಪ್ಪೇ? ಅಥವಾ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ನಡೆಯುವ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸುವುದೇ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.ರಾಷ್ಟ್ರ ಮಟ್ಟದಲ್ಲಿ Gen Z ಹೋರಾಟದ ಬಗ್ಗೆ ಬದಲಾಗುತ್ತಿರುವ ನಿಲುವು:Gen Z ಹೋರಾಟ ಕೇವಲ ಗದಗ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉದ್ಯೋಗ, ಶಿಕ್ಷಣ, ನೇಮಕಾತಿ ಸೇರಿದಂತೆ ಯುವಕರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶದ ವಿವಿಧೆಡೆ ಯುವಕರು ಪ್ರತಿಭಟನೆ ನಡೆಸಿರುವುದು ಗಮನ ಸೆಳೆದಿದೆ.ಕರ್ನಾಟಕದಲ್ಲಿಯೂ 2025ರ ಸೆಪ್ಟೆಂಬರ್‌ನಲ್ಲಿ ಧಾರವಾಡದಲ್ಲಿ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ನೇಮಕಾತಿಗೆ ವಯೋಮಿತಿ ಸಡಿಲಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಯುವಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ Gen Z ಹೆಸರಿನ ಬ್ಯಾನರ್‌ಗಳು ಕಾಣಿಸಿಕೊಂಡಿದ್ದವು.ಆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ವಾಗ್ದಾಳಿ ತೀವ್ರವಾಗಿತ್ತು. ಯುವಕರ ಉದ್ಯೋಗದ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆದ ಪ್ರತಿಭಟನೆಗೆ ರಾಜಕೀಯ ಬೆಂಬಲವೂ ವ್ಯಕ್ತವಾಗಿತ್ತು. ಆದರೆ ಇದೇ Gen Z ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿದಾಗ ಅದನ್ನು ಪಕ್ಷದ ಶಿಸ್ತು ಉಲ್ಲಂಘನೆ ಎಂದು ನೋಡುವುದು ವೈರುಧ್ಯವಲ್ಲವೇ ಎಂಬ ಚರ್ಚೆ ಗದಗದಲ್ಲಿ ಆರಂಭವಾಗಿದೆ.ಮೋದಿ ಸರ್ಕಾರದಿಂದ Gen Zಗೆ AI ತರಬೇತಿ ಘೋಷಣೆ:ಇನ್ನೊಂದೆಡೆ, ಇತ್ತೀಚಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರನ್ನು ಕೇಂದ್ರೀಕರಿಸಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ಕೌಶಲ ತರಬೇತಿ ನೀಡುವ ಯೋಜನೆಯನ್ನು ಘೋಷಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಯುವಕರಿಗೆ ಉಚಿತ ಆನ್‌ಲೈನ್ ಕೋಚಿಂಗ್ ನೀಡುವ ಕ್ರಮವನ್ನೂ ಪ್ರಕಟಿಸಿದ್ದಾರೆ.ಅಂದರೆ, ದೇಶದ ಯುವಜನರ ಉದ್ಯೋಗ, ಕೌಶಲ ಮತ್ತು ಭವಿಷ್ಯದ ಬಗ್ಗೆ Gen Z ವಿಚಾರಗಳು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಮುಖ ರಾಜಕೀಯ ಹಾಗೂ ಆಡಳಿತಾತ್ಮಕ ಚರ್ಚೆಯ ವಿಷಯವಾಗಿವೆ.‘ಪ್ರತಿಭಟಿಸಿದರೆ ದೇಶದ್ರೋಹಿಗಳಲ್ಲ’ ಎಂದಿದ್ದ ಭಾಗವತ್:ಇದರ ನಡುವೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು Gen Z ಹೋರಾಟಗಾರರ ಕುರಿತು ನೀಡಿದ ಹೇಳಿಕೆಯೂ ಗಮನ ಸೆಳೆದಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ಯುವಕರನ್ನು ದೇಶದ್ರೋಹಿಗಳು ಎಂದು ಕರೆಯಬಾರದು; Gen Z ಮತ್ತು Gen Alpha ದೇಶದ ಬಗ್ಗೆ ಪ್ರಾಮಾಣಿಕತೆ, ದೇಶಭಕ್ತಿ ಹಾಗೂ ಸೇವೆಯ ಮನೋಭಾವ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.ಪ್ರತಿಭಟನೆ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಯುವಕರ ಅಸಮಾಧಾನವನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಬೇಕು ಎಂಬ ನಿಲುವನ್ನು ಭಾಗವತ್ ವ್ಯಕ್ತಪಡಿಸಿದ್ದರು.ಅವರ ಈ ಹೇಳಿಕೆ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಯುವಕರ ಪ್ರತಿಭಟನೆಯನ್ನು ಕೇವಲ ವಿರೋಧದ ದೃಷ್ಟಿಯಿಂದ ನೋಡುವ ಬದಲು, ಅದರ ಹಿಂದಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶವೂ ಇದರಲ್ಲಿ ಅಡಕವಾಗಿತ್ತು.ಗದಗದ ನೋಟಿಸ್‌ ಇದೀಗ ಚರ್ಚೆಯ ಕೇಂದ್ರಬಿಂದು:ರಾಷ್ಟ್ರಮಟ್ಟದಲ್ಲಿ Gen Z ಯುವಕರ ಬೇಡಿಕೆಗಳು, ಪ್ರತಿಭಟನೆಯ ಹಕ್ಕು ಹಾಗೂ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಗದಗದಲ್ಲಿ ಅದೇ ರೀತಿಯ ಯುವಕರ ಹೋರಾಟದಲ್ಲಿ ಭಾಗವಹಿಸಿದ ಬಿಜೆಪಿ ನಗರಸಭೆ ಸದಸ್ಯನಿಗೆ ಪಕ್ಷದಿಂದ ಶೋಕಾಸ್ ನೋಟಿಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.ಜನರ ಕುಡಿಯುವ ನೀರು, ಯುವಕರ ಉದ್ಯೋಗ, ರೈತರ ಸಂಕಷ್ಟ ಮತ್ತು ಬರ ಘೋಷಣೆಯಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆದ ಹೋರಾಟದಲ್ಲಿ ಜನಪ್ರತಿನಿಧಿಯೊಬ್ಬರು ಭಾಗವಹಿಸಿರುವುದು ಜನಪರ ಕಾಳಜಿಯೇ ಅಥವಾ ಪಕ್ಷದ ಶಿಸ್ತು ಉಲ್ಲಂಘನೆಯೇ ಎಂಬುದನ್ನು ಇದೀಗ ರಾಘವೇಂದ್ರ ಯಳವತ್ತಿ ಅವರ ಉತ್ತರವೇ ನಿರ್ಧರಿಸಲಿದೆ.ಏಳು ದಿನಗಳೊಳಗೆ ರಾಘವೇಂದ್ರ ಯಳವತ್ತಿ ಅವರು ನೀಡಲಿರುವ ಸ್ಪಷ್ಟನೆ ಇದೀಗ ಗದಗ ಬಿಜೆಪಿಯಲ್ಲಷ್ಟೇ ಅಲ್ಲ, Gen Z ಹೋರಾಟದ ಕುರಿತಾಗಿ ನಡೆಯುತ್ತಿರುವ ದೊಡ್ಡ ರಾಜಕೀಯ ಚರ್ಚೆಯಲ್ಲೂ ಕುತೂಹಲ ಮೂಡಿಸಿದೆ.ಈ ಕುರಿತು ಗದಗ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಅವರನ್ನು ಸಂಪರ್ಕಿಸಿದಾಗ, ಪಕ್ಷ ಕೈಗೊಳ್ಳುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಇರುವುದು. ಅಂದು ಬೇರೆಬೇರೆ ಸಂಘಟನೆಗಳ ವೇದಿಕೆ ರೂಪಿಸಿರುವ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ನೋಟಿಸ್ ನೀಡಲಾಗಿದೆ. ಜೊತೆಗೆ zen Z ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಗಳು-ಅಳಿಯನ ಜೊತೆ ಊಟ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ; ಸ್ಥಳದಲ್ಲೇ ಸಾವು

0

ರಾಮನಗರ: ಮಗಳು ಹಾಗೂ ಅಳಿಯನೊಂದಿಗೆ ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಚಶೆಟ್ಟಹಳ್ಳಿ ಗ್ರಾಮದ ಶಿವಲಿಂಗಯ್ಯ ಮೃತಪಟ್ಟ ವ್ಯಕ್ತಿ. ಮಗಳು ಹಾಗೂ ಅಳಿಯನೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಕುಸಿದು ಬಿದ್ದ ಶಿವಲಿಂಗಯ್ಯ ಅವರು ಮಗಳು ಹಾಗೂ ಅಳಿಯನ ಕಣ್ಣೆದುರಲ್ಲೇ ಮೃತಪಟ್ಟಿದ್ದಾರೆ.

ಊಟದ ವೇಳೆ ಏಕಾಏಕಿ ಸಂಭವಿಸಿದ ಈ ದುರ್ಘಟನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.

‘ಕೇಸ್‌ ಹಿಂಪಡೆಯಿರಿ’ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಅಭಿಮಾನಿಗಳು! ಆದರೂ ಕ್ಷಮೆಗೆ ಒಪ್ಪದ ನಟಿ

0

ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಪ್ರಕರಣದ ವಿಚಾರಣೆ ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ರಮ್ಯಾ ಅವರ ಬಳಿ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟು ಕ್ಷಮೆಯಾಚಿಸಿದ ಘಟನೆ ನಡೆದಿದೆ. ಆದರೆ, ರಮ್ಯಾ ಅವರು ಯಾವುದೇ ಕಾರಣಕ್ಕೂ ಆರೋಪಿಗಳನ್ನು ಕ್ಷಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಆರೋಪಿಗಳು ಕೋರ್ಟ್ ಆವರಣದಲ್ಲಿ ರಮ್ಯಾ ಅವರ ಕಾಲಿಗೆ ಬಿದ್ದು, ‘ಇದೊಂದು ಬಾರಿ ಕ್ಷಮಿಸಿ, ನಮ್ಮಿಂದ ದೊಡ್ಡ ತಪ್ಪಾಗಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಿಚಾರಣೆಯ ಸಂದರ್ಭದಲ್ಲೂ ಆರೋಪಿಗಳು ಪ್ರಕರಣವನ್ನು ವಾಪಸ್ ಪಡೆಯುವಂತೆ ರಮ್ಯಾ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಈ ಬಾರಿ ಆರೋಪಿಗಳ ಕುಟುಂಬಸ್ಥರೂ ಕೂಡ ರಮ್ಯಾ ಅವರನ್ನು ಭೇಟಿಯಾಗಿ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಮನವಿಗೆ ರಮ್ಯಾ ಅವರು ಯಾವುದೇ ರೀತಿಯ ಸಮ್ಮತಿ ಸೂಚಿಸಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಇದೆ ಎಂಬ ಕಾರಣಕ್ಕೆ ಯಾರ ವಿರುದ್ಧ ಬೇಕಾದರೂ ಅಶ್ಲೀಲವಾಗಿ ಹಾಗೂ ಅವಾಚ್ಯವಾಗಿ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ರಮ್ಯಾ ಖಡಕ್ ಆಗಿ ಹೇಳಿದ್ದಾರೆ. ‘ನಾನು ಯಾವುದೇ ಕಾರಣಕ್ಕೂ ಈ ಕೇಸ್ ವಾಪಸ್ ಪಡೆಯುವುದಿಲ್ಲ’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾ ಟ್ರೋಲ್ ಮತ್ತು ಸೈಬರ್ ದೌರ್ಜನ್ಯದ ವಿರುದ್ಧ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ರಮ್ಯಾ ತಿಳಿಸಿದ್ದಾರೆ. ನ್ಯಾಯಾಲಯ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ಹಾಜರಾಗಲು ಸಿದ್ಧವಿರುವುದಾಗಿ ಹೇಳಿರುವ ಅವರು, ಆರೋಪಿಗಳಿಗೆ ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಪಾಠವಾಗಬೇಕು ಎಂಬುದು ರಮ್ಯಾ ಅವರ ನಿಲುವಾಗಿದೆ. ಮತ್ತೊಬ್ಬ ಮಹಿಳೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಅಥವಾ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಯೋಚಿಸುವಂತಾಗಬೇಕು ಎಂದು ಅವರು ಹೇಳಿದ್ದಾರೆ.

ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಈ ಸಂಬಂಧ ರಮ್ಯಾ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ನಡೆಸಿ, ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ವಿಚಾರಣೆ ಮುಂದುವರಿದಿದೆ.

ದುಲೀಪ್ ಟ್ರೋಫಿ ಫೈನಲ್: ಟಾಸ್ ಗೆದ್ದ ಇಶಾನ್ ಕಿಶನ್, ಸೌತ್ ಝೋನ್ ವಿರುದ್ಧ ಬ್ಯಾಟಿಂಗ್ ಆಯ್ಕೆ

0

ಚೆನ್ನೈ: ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯ ಆರಂಭಗೊಂಡಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ತಿಲಕ್ ವರ್ಮಾ ನಾಯಕತ್ವದ ಸೌತ್ ಝೋನ್ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿರುವ ಈಸ್ಟ್ ಝೋನ್, ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಇನ್ನು ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮೇಲೆ ವಿಶೇಷ ನಿರೀಕ್ಷೆ ಮೂಡಿದೆ.

ವೈಭವ್ ಅವರೊಂದಿಗೆ ಅಭಿಮನ್ಯು ಈಶ್ವರನ್, ಕುಮಾರ್ ಕುಶಾಗ್ರಾ ಹಾಗೂ ಸುದೀಪ್ ಕುಮಾರ್ ಘರಾಮಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಮಿ ಜೊತೆಗೆ ಮುಖೇಶ್ ಕುಮಾರ್ ಮತ್ತು ಅಭಿಜಿತ್ ಕೆ. ಸರ್ಕಾರ್ ಇದ್ದಾರೆ. ಸ್ಪಿನ್ ಆಲ್‌ರೌಂಡರ್‌ಗಳಾದ ಶಹಬಾಝ್ ಅಹ್ಮದ್ ಹಾಗೂ ಅನುಕೂಲ್ ರಾಯ್ ಕೂಡ ತಂಡದ ಸಮತೋಲನ ಹೆಚ್ಚಿಸಿದ್ದಾರೆ.

ಈ ಫೈನಲ್‌ನಲ್ಲಿ ಕಣಕ್ಕಿಳಿಯಬೇಕಿದ್ದ ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ವೈಯಕ್ತಿಕ ಕಾರಣಗಳಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ.

ಇತ್ತ ಸೌತ್ ಝೋನ್ ತಂಡವೂ ಸ್ಟಾರ್ ಆಟಗಾರರಿಂದ ಕೂಡಿದೆ. ನಾಯಕ ತಿಲಕ್ ವರ್ಮಾ ತಂಡವನ್ನು ಮುನ್ನಡೆಸುತ್ತಿದ್ದು, ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಅಸ್ತ್ರವಾಗಿದ್ದಾರೆ. ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ ಸೇರಿದಂತೆ ಪ್ರತಿಭಾವಂತ ಹಾಗೂ ಅನುಭವಿ ಬ್ಯಾಟರ್‌ಗಳು ತಂಡದಲ್ಲಿದ್ದಾರೆ.

ಹೀಗಾಗಿ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಈಸ್ಟ್ ಝೋನ್ ಹಾಗೂ ಸೌತ್ ಝೋನ್ ನಡುವಿನ ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಈಸ್ಟ್ ಝೋನ್ ಪ್ಲೇಯಿಂಗ್ XI:

ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ), ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ. ಸರ್ಕಾರ್, ಮುಖೇಶ್ ಕುಮಾರ್.

ಸೌತ್ ಝೋನ್ ಪ್ಲೇಯಿಂಗ್ XI:

ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ. ಮಿಲಿಂದ್, ಎಂಡಿ ನಿಧೀಶ್.

ಹೊಸ ಏರ್ʼಪೋರ್ಟ್ ನಿರ್ಮಾಣಕ್ಕೆ ವಿಜಯ್ ಸರ್ಕಾರದ ಮಹತ್ವದ ಹೆಜ್ಜೆ! ಎರಡು ಸ್ಥಳಗಳು ಶಾರ್ಟ್ʼಲಿಸ್ಟ್

0

ಚೆನ್ನೈ: ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ ಸ್ಥಾಪಿಸಲು ಎರಡು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪರಂದೂರು ಏರ್‌ಪೋರ್ಟ್ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟ ನಂತರ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಹೊಸ ವಿಮಾನ ನಿಲ್ದಾಣಕ್ಕಾಗಿ ಸಿಎಂ ವಿಜಯ್ ನೇತೃತ್ವದ ಸರ್ಕಾರ ಮಾನೆಲ್ಲೂರು ಹಾಗೂ ಚೆಯ್ಯೂರು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಪರಂದೂರು ಯೋಜನೆ ಕೈಬಿಟ್ಟ ಒಂದೇ ವಾರದಲ್ಲಿ ಈ ಎರಡೂ ಸ್ಥಳಗಳನ್ನು ಗುರುತಿಸಲಾಗಿದೆ.

ಮಾನೆಲ್ಲೂರು ಚೆನ್ನೈನಿಂದ ಸುಮಾರು 60 ಕಿ.ಮೀ. ದೂರದಲ್ಲಿದ್ದರೆ, ಚೆಯ್ಯೂರು ನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರಸ್ತಾವಿತ ವಿಮಾನ ನಿಲ್ದಾಣ ಚೆನ್ನೈ ಮಹಾನಗರ ಪ್ರದೇಶಕ್ಕೆ (ಸಿಎಂಎ) ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ.

ಚೆನ್ನೈ ಬಳಿಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಕೈಬಿಟ್ಟ ನಿರ್ಧಾರ ಘೋಷಿಸಿದ ನಂತರ ವಿಜಯ್ ಸರ್ಕಾರ ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿದೆ.

Breaking News: ಬೆಂಗಳೂರಲ್ಲಿ ತಡರಾತ್ರಿ ಅಗ್ನಿ ಅವಘಡ; 5 ಬೈಕ್‌ಗಳು ಬೆಂಕಿಗಾಹುತಿ!

0

ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಾಗಮಂಗಲದ ಕೇಂಬ್ರಿಡ್ಜ್ ಶಾಲೆ ಬಳಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಐದು ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬಾಡಿಗೆದಾರರು ನಿಲ್ಲಿಸಿದ್ದ ಬೈಕ್‌ಗಳು ಏಕಾಏಕಿ ಹೊತ್ತಿ ಉರಿದಿವೆ. ಬೈಕ್‌ಗಳ ಜೊತೆಗೆ ಎಲೆಕ್ಟ್ರಿಕ್ ಮೀಟರ್ ಬೋರ್ಡ್‌ಗೂ ಬೆಂಕಿ ತಗುಲಿದ್ದು, ಮನೆಯ ಬಾಗಿಲು ಹಾಗೂ ಕಿಟಕಿಗಳಿಗೂ ಬೆಂಕಿ ಆವರಿಸಿದೆ.

ಅಚ್ಚರಿ ಎಂಬಂತೆ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಜೊತೆಗೆ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್‌ಗೂ ಬೆಂಕಿ ತಗುಲಿದೆ. ಹೀಗಾಗಿ ಬೆಂಕಿ ಅವಘಡದ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿತೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಬಾಡಿಗೆ ಮನೆಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

BMW ಬೈಕ್ ಡಿಕ್ಕಿ: ಸ್ವಿಫ್ಟ್ ಕಾರಿನಲ್ಲಿದ್ದ 25 ವರ್ಷದ ಯುವಕ ಸಾವು!

ಚಿಕ್ಕಬಳ್ಳಾಪುರ: ಸ್ವಿಫ್ಟ್ ಕಾರಿಗೆ BMW RR ಬೈಕ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಯುವಕ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ನಡೆದಿದೆ.

ಮೃತ ಯುವಕನನ್ನು ದೇವನಹಳ್ಳಿ ತಾಲೂಕಿನ ನರಗನಹಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (25) ಎಂದು ಗುರುತಿಸಲಾಗಿದೆ.

ಚಿಕ್ಕಸಣ್ಣೆ ಗೇಟ್ ಸಿಗ್ನಲ್ ಬಳಿ ಸ್ವಿಫ್ಟ್ ಕಾರು ತೆರಳುತ್ತಿದ್ದ ವೇಳೆ BMW RR ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನವೀನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ BMW ಬೈಕ್ ಸವಾರ ರಾಕೇಶ್ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾರಿನಲ್ಲಿ ಏಕಾಏಕಿ ಬೆಂಕಿ; ಎಚ್ಚೆತ್ತು ಕೆಳಗಿಳಿದ ಇಬ್ಬರು, ವಾಹನ ಸುಟ್ಟು ಭಸ್ಮ!

ಮಂಡ್ಯ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದ ಕಾರೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಮಂಡ್ಯ ಹೊರವಲಯದ ಇಂಡುವಾಳು ಬಳಿ ನಡೆದಿದೆ.

ಅದೃಷ್ಟವಶಾತ್‌ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಲ್ಲಿ ನೆಲೆಸಿರುವ ಸ್ಕನದ್‌ ಎಂಬುವವರಿಗೆ ಸೇರಿದ KA-05 ME-7634 ನೋಂದಣಿ ಸಂಖ್ಯೆಯ ಕಾರು ಬೆಂಕಿಗಾಹುತಿಯಾಗಿದೆ. ಸ್ಕನದ್‌ ಹಾಗೂ ಮತ್ತೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಬಟ್ಟೆ ವ್ಯಾಪಾರ ಮುಗಿಸಿಕೊಂಡು ಮೈಸೂರಿನತ್ತ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಇಬ್ಬರೂ ಕಾರಿನಿಂದ ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಇಬ್ಬರೂ ಕಾರಿನಿಂದ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ವಾಹನಕ್ಕೆ ವ್ಯಾಪಿಸಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ.

ಗರ್ಭಿಣಿಯರ ತೂಕ ಏಕೆ ಹೆಚ್ಚಾಗುತ್ತೆ? ಕಾರಣ ಮಗು ಮಾತ್ರವಲ್ಲ; ಇಲ್ಲಿದೆ ಸಂಪೂರ್ಣ ಮಾಹಿತಿ

0

ಗರ್ಭಧಾರಣೆಯ ನಂತರ ಮಹಿಳೆಯ ದೇಹದಲ್ಲಿ ಹಲವು ಸಹಜ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ಹೊಟ್ಟೆ ದೊಡ್ಡದಾಗುವುದು, ಸ್ತನಗಳ ಗಾತ್ರ ಹೆಚ್ಚಾಗುವುದು ಹಾಗೂ ದೇಹದ ಆಕಾರದಲ್ಲಿ ಬದಲಾವಣೆ ಉಂಟಾಗುವುದರ ಜೊತೆಗೆ ತೂಕವೂ ಹೆಚ್ಚಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದಕ್ಕೆ ಕೇವಲ ಗರ್ಭದಲ್ಲಿರುವ ಮಗು ಬೆಳೆಯುವುದು ಮಾತ್ರ ಕಾರಣವಲ್ಲ.

ಗರ್ಭದಲ್ಲಿರುವ ಮಗು ಬೆಳೆಯುತ್ತಾ ಹೋದಂತೆ ಅದರ ತೂಕ ಹೆಚ್ಚಾಗುತ್ತದೆ. ಮಗುವಿಗೆ ಪೋಷಕಾಂಶ ಹಾಗೂ ಆಮ್ಲಜನಕ ಒದಗಿಸುವ ಪ್ಲಾಸೆಂಟಾ, ಮಗುವನ್ನು ಸುತ್ತುವರಿದಿರುವ ಆಮ್ನಿಯೋಟಿಕ್ ದ್ರವ ಮತ್ತು ಮಗುವಿಗೆ ಸ್ಥಳ ಕಲ್ಪಿಸಲು ದೊಡ್ಡದಾಗುವ ಗರ್ಭಕೋಶ ಕೂಡ ಒಟ್ಟು ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.

ಇದರ ಜೊತೆಗೆ ಗರ್ಭಾವಸ್ಥೆಯಲ್ಲಿ ದೇಹದಲ್ಲಿನ ರಕ್ತದ ಪ್ರಮಾಣವೂ ಹೆಚ್ಚಾಗುತ್ತದೆ. ಬೆಳೆಯುತ್ತಿರುವ ಮಗುವಿಗೆ ಅಗತ್ಯವಾದ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ತಲುಪಿಸಲು ಹೆಚ್ಚಿನ ರಕ್ತಪರಿಚಲನೆ ಅಗತ್ಯವಾಗುತ್ತದೆ. ದೇಹದಲ್ಲಿ ನೀರು ಮತ್ತು ಇತರ ದ್ರವಗಳ ಪ್ರಮಾಣವೂ ಹೆಚ್ಚಾಗಬಹುದು. ಇದರಿಂದ ಕೆಲ ಮಹಿಳೆಯರಲ್ಲಿ ಕೈ, ಕಾಲು ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳಬಹುದು.

ಸ್ತನ ಮತ್ತು ದೇಹದಲ್ಲಿ ಕೊಬ್ಬಿನ ಪ್ರಮಾಣವೂ ಹೆಚ್ಚಳ:

ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ದೇಹ ಸಿದ್ಧವಾಗುವ ಸಂದರ್ಭದಲ್ಲಿ ಸ್ತನದ ಅಂಗಾಂಶಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಇದೇ ವೇಳೆ ಗರ್ಭಾವಸ್ಥೆಯಲ್ಲಿ ದೇಹವು ನಿರ್ದಿಷ್ಟ ಪ್ರಮಾಣದ ಕೊಬ್ಬನ್ನು ಸಂಗ್ರಹಿಸಿಕೊಳ್ಳುತ್ತದೆ. ಇದು ತಾಯಿ ಮತ್ತು ಮಗುವಿಗೆ ಅಗತ್ಯವಾಗುವ ಹೆಚ್ಚುವರಿ ಶಕ್ತಿಯ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ.

ಗರ್ಭಿಣಿಯರು ಎಷ್ಟು ತೂಕ ಹೆಚ್ಚಿಸಿಕೊಳ್ಳಬೇಕು?

ಗರ್ಭಾವಸ್ಥೆಯಲ್ಲಿ ಎಷ್ಟು ತೂಕ ಹೆಚ್ಚಾಗಬೇಕು ಎಂಬುದು ಎಲ್ಲ ಮಹಿಳೆಯರಿಗೂ ಒಂದೇ ಆಗಿರುವುದಿಲ್ಲ. ಗರ್ಭಧಾರಣೆಗೆ ಮುನ್ನದ ತೂಕ ಮತ್ತು BMI ಆಧರಿಸಿ ಸೂಕ್ತ ತೂಕ ಹೆಚ್ಚಳದ ಪ್ರಮಾಣ ಬದಲಾಗುತ್ತದೆ.

ಸಾಮಾನ್ಯ ತೂಕ ಹೊಂದಿರುವ ಮಹಿಳೆಯರು ಒಂದೇ ಮಗುವಿನ ಗರ್ಭಧಾರಣೆಯಲ್ಲಿ ಸಾಮಾನ್ಯವಾಗಿ 11ರಿಂದ 16 ಕೆ.ಜಿ. ವರೆಗೆ ತೂಕ ಹೆಚ್ಚಿಸಿಕೊಳ್ಳುವುದು ಶಿಫಾರಸು ಮಾಡಲಾಗುತ್ತದೆ. ಕಡಿಮೆ ತೂಕ ಅಥವಾ ಅಧಿಕ ತೂಕ ಹೊಂದಿರುವ ಮಹಿಳೆಯರಲ್ಲಿ ಈ ಪ್ರಮಾಣ ಭಿನ್ನವಾಗಿರಬಹುದು.

ಹೀಗಾಗಿ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ಕೇವಲ ‘ದಪ್ಪವಾಗುವುದು’ ಎಂದು ಪರಿಗಣಿಸುವ ಅಗತ್ಯವಿಲ್ಲ. ಮಗು ಬೆಳೆಯಲು, ಹೆರಿಗೆಗೆ ಸಿದ್ಧವಾಗಲು ಮತ್ತು ಹೆರಿಗೆಯ ನಂತರ ಮಗುವಿಗೆ ಹಾಲುಣಿಸಲು ದೇಹ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳುವ ಸಹಜ ಪ್ರಕ್ರಿಯೆಯೇ ಇದು.

ಆದರೆ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತೂಕ ಹೆಚ್ಚಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಸಮತೋಲಿತ ಆಹಾರ ಹಾಗೂ ವೈದ್ಯರು ಅನುಮತಿಸಿದ ಸುರಕ್ಷಿತ ದೈಹಿಕ ಚಟುವಟಿಕೆ ಆರೋಗ್ಯಕರ ಗರ್ಭಾವಸ್ಥೆಗೆ ಸಹಾಯ ಮಾಡಬಹುದು.

ಅಂತಾರಾಜ್ಯ ಕಾರು ಕಳ್ಳರ ಜಾಲ ಭೇದಿಸಿದ ಗದಗ ಪೊಲೀಸರು: ಇಬ್ಬರ ಬಂಧನ

0

ಗದಗ: ರಾತ್ರಿ ವೇಳೆ ನಿಲ್ಲಿಸಿದ್ದ ಕಾರುಗಳ ಬಾಗಿಲು ಲಾಕ್‌ಗಳನ್ನು ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಕೀ-ಪ್ರೋಗ್ರಾಮಿಂಗ್‌ ಸಾಧನದ ಮೂಲಕ ತೆರೆದು ಕಾರುಗಳನ್ನು ಕಳವು ಮಾಡುತ್ತಿದ್ದ ಅಂತಾರಾಜ್ಯ ಕಾರು ಕಳ್ಳರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಅವರಿಂದ ಎರಡು ಕಾರುಗಳು, ಕಾರು ಕಳವಿಗೆ ಬಳಸುತ್ತಿದ್ದ ವೃತ್ತಿಪರ ಕೀ-ಪ್ರೋಗ್ರಾಮಿಂಗ್‌ ಸಾಧನ ಸೇರಿದಂತೆ ಒಟ್ಟು ₹27.15 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕರ್ನಾಟಕ ಗೃಹ ಮಂಡಳಿ ಬಡಾವಣೆಯಲ್ಲಿ ಗುದ್ನಯ್ಯಸ್ವಾಮಿ ತಂದೆ ವೀರಯ್ಯ ಅಜ್ಜನವರಮಠ ಅವರಿಗೆ ಸೇರಿದ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು (KA-35/N-5642) ಜುಲೈ 31ರ ರಾತ್ರಿ 11ರಿಂದ ಆಗಸ್ಟ್‌ 1ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳವಾಗಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 199/2026, ಕಲಂ 303(2) ಬಿ.ಎನ್.ಎಸ್.-2023 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರಿನ ಎಂಜಿನ್‌ ನಂ. SJF4G14119, ಚಾಸಿಸ್‌ ನಂ. MA1TA2SJXF2G45551 ಎಂದು ದಾಖಲಾಗಿದೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಅಂದಿನ ಪೊಲೀಸ್‌ ಅಧೀಕ್ಷಕ ರೋಹನ್‌ ಜಗದೀಶ್, ಐಪಿಎಸ್, ಗದಗ ಹಾಗೂ ಗದಗ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಗದಗ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿತು.

ಆ.28ರಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು, ಪೆಟ್ರೋಲಿಂಗ್‌ ಮಾಡುತ್ತ ಸಾರಿಗೆ ನಗರ ಕಡೆಗೆ ತೆರಳುತ್ತಿದ್ದಾಗ ಕಳಸಾಪುರ ಕ್ರಾಸ್‌ ಹತ್ತಿರ ಹೆದ್ದಾರಿಯಲ್ಲಿ ಬಿಳಿ ಬಣ್ಣದ ಗುಜರಾತ್‌ ಪಾಸಿಂಗ್‌ ಇರುವ ಕ್ರೇಟಾ ಕಾರೊಂದು ನಿಂತಿರುವುದು ಕಂಡುಬಂದಿದೆ.

ಕಾರಿನ ಬಳಿಗೆ ತೆರಳಿ ಪರಿಶೀಲಿಸಿದಾಗ ಅದರೊಳಗೆ ಇಬ್ಬರು ವ್ಯಕ್ತಿಗಳು ಮಲಗಿರುವುದು ಕಂಡುಬಂದಿದೆ. ಅವರನ್ನು ಎಬ್ಬಿಸಿ ಹೆಸರು-ವಿಳಾಸ ವಿಚಾರಿಸಿದಾಗ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ವಾಹನದ ದಾಖಲೆಗಳನ್ನೂ ಹಾಜರುಪಡಿಸದ ಹಿನ್ನೆಲೆಯಲ್ಲಿ ಇಬ್ಬರನ್ನೂ ಠಾಣೆಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ ಅವರು ತಮ್ಮ ಹೆಸರು ಅರವಿಂದಕುಮಾರ ತಂದೆ ಗಂಗಾರಾಮ್‌ ಬಿಷ್ಣೋಯಿ (35), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಚಾಲಕ, ಸಾ. ಸಿಲ್ಲು, ತಾ. ಗುಡಾಮಾಲಾನಿ, ಜಿ. ಬಾರಮೇರ್‌, ರಾಜಸ್ಥಾನ, ಹಾಗೂ ರಾಮಜೀವನ್‌ ತಂದೆ ಕೃಷ್ಣಾರಾಮ್‌ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ಕೋಜಾ, ತಾ. ಗುಡಾಮಾಲಾನಿ, ಜಿ. ಬಾರಮೇರ್‌, ರಾಜಸ್ಥಾನ ಎಂದು ತಿಳಿಸಿದ್ದಾರೆ.

ವಿಚಾರಣೆಯಲ್ಲಿ ಮತ್ತೋರ್ವ ಆರೋಪಿ ವಿಕಾಸ್‌ಕುಮಾರ @ ವಿಕ್ಕಿ ತಂದೆ ಲೇಕರಾಜ್‌ ಬಿಷ್ಣೋಯಿ (30), ಜಾತಿ ಹಿಂದೂ ಬಿಷ್ಣೋಯಿ, ವೃತ್ತಿ ಕೃಷಿಕ, ಸಾ. ದಾತಾ, ತಾ. ಸಾಂಚೋರ್‌, ಜಿ. ಜಾಲೋರ್‌, ರಾಜಸ್ಥಾನ ಎಂಬಾತನೂ ತಮ್ಮೊಂದಿಗೆ ಸೇರಿಕೊಂಡಿದ್ದಾನೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಹೇಳಿಕೆಯಂತೆ, ಜುಲೈ 31ರಂದು ರಾತ್ರಿ ಸುಮಾರು 1 ಗಂಟೆ ವೇಳೆಗೆ ಹುಲಕೋಟಿಗೆ ಬಂದಿದ್ದ ಅವರು Autel ಕಂಪನಿಯ Professional Key Programming Tools ಬಳಸಿ ಸ್ಕಾರ್ಪಿಯೋ ಕಾರಿನ ಡೋರ್‌ ಲಾಕ್‌ ತೆರೆಯುವ ಮೂಲಕ ಕಾರನ್ನು ಕಳವು ಮಾಡಿದ್ದಾರೆ. ಬಳಿಕ ಗ್ರಾಮಗಳ ಮಾರ್ಗವಾಗಿ ನರಗುಂದ ದಾಟಿ ಯರಗಟ್ಟಿ ಕಡೆಗೆ ತೆರಳುತ್ತಿದ್ದಾಗ ಕಾರು ಕೆಟ್ಟು ನಿಂತಿದೆ.

ಕಾರು ಸ್ಥಳದಲ್ಲೇ ನಿಲ್ಲಿಸಿ ತಾವು ತೆಗೆದುಕೊಂಡು ಬಂದಿದ್ದ ಕ್ರೇಟಾ ಕಾರಿನಲ್ಲಿ ರಾಜಸ್ಥಾನದತ್ತ ತೆರಳಿದ್ದರು. ಸುಮಾರು 5–6 ದಿನಗಳ ಹಿಂದೆ ಅರವಿಂದಕುಮಾರ ಮತ್ತು ರಾಮಜೀವನ್‌ ಇದೇ ಕ್ರೇಟಾ ಕಾರನ್ನು ಬಳಸಿಕೊಂಡು ಕರ್ನಾಟಕಕ್ಕೆ ಬಂದು ಈ ಹಿಂದೆ ಸ್ಕಾರ್ಪಿಯೋ ಕಾರು ಕಳವು ಮಾಡಿದ್ದರು ಎನ್ನಲಾಗಿದೆ. ಕಳವು ಮಾಡಿದ ಕಾರನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗಿದ್ದು, ನಂತರ ಅದನ್ನು ಯಾರಾದರೂ ಮೆಕ್ಯಾನಿಕ್‌ ಹುಡುಕಿ ಚಾಲನೆ ಮಾಡಿಕೊಂಡು ತೆಗೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಗದಗಕ್ಕೆ ಮೆಕ್ಯಾನಿಕ್‌ ಹುಡುಕಲು ಬಂದಿದ್ದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ
ಮಹೀಂದ್ರಾ ಸ್ಕಾರ್ಪಿಯೋ ಕಾರು — ಬಿಳಿ ಬಣ್ಣ, ನೋಂದಣಿ ಸಂಖ್ಯೆ KA-35/N-5642, ಎಂಜಿನ್‌ ನಂ. SJF4G14119, ಚಾಸಿಸ್‌ ನಂ. MA1TA2SJXF2G45551. ಅಂದಾಜು ಮೌಲ್ಯ ₹8.15 ಲಕ್ಷ, ಹ್ಯುಂಡೈ ಕ್ರೇಟಾ ಕಾರು — ಬಿಳಿ ಬಣ್ಣ, ನೋಂದಣಿ ಫಲಕ ಇಲ್ಲ, ಕೀ ಸಮೇತ. ಎಂಜಿನ್‌ ನಂ. D4FARM285428, ಚಾಸಿಸ್‌ ನಂ. MALPB813LRM095165. ಅಂದಾಜು ಮೌಲ್ಯ ₹18 ಲಕ್ಷ, AUTEL ಕಂಪನಿಯ ನೀಲಿ ಮತ್ತು ಕಪ್ಪು ಬಣ್ಣದ Professional Key Programming Tool — ಅಂದಾಜು ಮೌಲ್ಯ ₹1 ಲಕ್ಷ,
ಕಳ್ಳತನಕ್ಕೆ ಬಳಸಿದ್ದ ಗುಲಾಬಿ ಬಣ್ಣದ ಒಂದು ಹಾಗೂ ಹಸಿರು ಬಣ್ಣದ ಒಂದು ಸ್ಕ್ರೂ ಡ್ರೈವರ್‌ ಹಾಗೂ
ಆರೋಪಿಗಳು ಹಾಜರುಪಡಿಸಿದ ಸ್ಕಾರ್ಪಿಯೋ ಕಾರಿನ ನಕಲಿ ಕೀ ಸೇರಿದಂತೆ ಒಟ್ಟು ₹27,15,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗದಗ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐಗಳಾದ ಎಸ್‌.ಬಿ. ಕವಲೂರ, ಪ್ರದೀಪ್‌ ತೋಟಗೇರ, ಸಿಬ್ಬಂದಿಗಳಾದ ಎಂ.ಬಿ. ವಡ್ಡಟ್ಟಿ, ಪ್ರಕಾಶ ಗಾಣಿಗೇರ, ಅನೀಲ ಬನ್ನಿಕೊಪ್ಪ, ಮಹೇಶ ಗೊಳಗೊಳಕಿ, ಎಂ.ಐ. ಪಾಟೀಲ, ಗುರು ಬೂದಿಹಾಳ ಹಾಗೂ ಗದಗದ ಎ.ಆರ್‌.ಎಸ್‌.ಐ. ಟೆಕ್ನಿಕಲ್‌ ಸೆಲ್‌ನ ಸಂಜು ಕೊರಡೂರ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪೊಲೀಸ್‌ ತಂಡದ ಉತ್ತಮ ಕಾರ್ಯಕ್ಕೆ ಗದಗ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.