Home Blog Page 3

ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್: ತನಿಖಾ ವರದಿಯಲ್ಲಿ ಸೂಸೈಡ್ʼಗೆ ಕಾರಣ ರಿವೀಲ್!

0

ಬೆಂಗಳೂರು: ಖ್ಯಾತ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಲ್ಲಿ ಆತ್ಮಹತ್ಯೆ ಹಿಂದಿನ ಹಲವು ಕಾರಣಗಳು ಮೇಲ್ನೋಟಕ್ಕೆ ಬಹಿರಂಗವಾಗಿವೆ.

ಸಿ.ಜೆ. ರಾಯ್ ಒಂದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಬದಲಾಗಿ ವೈಭವಯುತ ಜೀವನ ಶೈಲಿ (ಲ್ಯಾವಿಷ್ ಲೈಫ್), ಮಾನಸಿಕ ಒತ್ತಡ, ವ್ಯವಹಾರ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ತನಿಖೆಯನ್ನು ಇನ್ನಷ್ಟು ಸಮಗ್ರಗೊಳಿಸಲು, ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಿಂದ ವಶಪಡಿಸಿಕೊಂಡ ಡೈರಿ, ಬಳಸಿದ ಪಿಸ್ತೂಲ್, ಮೊಬೈಲ್ ಫೋನ್, ಕೊಠಡಿ ಬಾಗಿಲಿನ ಲಾಕರ್ ಸೇರಿದಂತೆ 30ಕ್ಕೂ ಹೆಚ್ಚು ವಸ್ತುಗಳನ್ನು ಫರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ (ಎಫ್‌ಎಸ್‌ಎಲ್)ಗೆ ಕಳುಹಿಸಲಾಗಿದೆ.

ಮುಂದಿನ ವಾರದೊಳಗೆ ಎಫ್‌ಎಸ್‌ಎಲ್ ವರದಿ ಎಸ್‌ಐಟಿ ಅಧಿಕಾರಿಗಳ ಕೈ ಸೇರಲಿದ್ದು, ವರದಿ ಆಧರಿಸಿ ಅಂತಿಮ ತನಿಖಾ ವರದಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ.

ರಾಜ್ ಕಾರಣದಿಂದ ಡಿವೋರ್ಸ್ ಅಲ್ಲ: ‘ನನ್ನ ಜೀವನದ ಕತ್ತಲಲ್ಲಿ ಬೆಳಕು ತಂದವರು ರಾಜ್’ – ಸಮಂತಾ

ನಟಿ ಸಮಂತಾ ರುತ್ ಪ್ರಭು ತಮ್ಮ ವೈಯಕ್ತಿಕ ಜೀವನದ ಕುರಿತು ಮತ್ತೆ ಬಾಯ್ಬಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಜೊತೆಗಿನ ಎರಡನೇ ಮದುವೆಯ ಬಳಿಕ ಹಬ್ಬಿದ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ನಾಗ ಚೈತನ್ಯ ಜೊತೆ ವಿಚ್ಛೇದನ ಪಡೆದ ಸಮಂತಾ, 2019ರಲ್ಲಿ ರಾಜ್ ಪರಿಚಯವಾಗಿದ್ದ ಕಾರಣದಿಂದಲೇ ಕೆಲವರು ತಪ್ಪು ಅರ್ಥೈಸಿಕೊಂಡಿದ್ದರು. ರಾಜ್ ಜೊತೆಗಿನ ಪ್ರೀತಿಯೇ ಡಿವೋರ್ಸ್‌ಗೆ ಕಾರಣ ಎನ್ನುವ ಊಹೆಗಳಿಗೆ ಸಮಂತಾ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

“ವಿಚ್ಛೇದನ ಸಮಯದಲ್ಲಿ ನಾನು ಸಂಪೂರ್ಣವಾಗಿ ಒಳಗೆ ಕುಸಿದು ಹೋಗಿದ್ದೆ. ಹೊರ ಜಗತ್ತಿನಿಂದ ದೂರ ಉಳಿದಿದ್ದೆ. ಆದರೆ ರಾಜ್ ನೀಡಿದ ಪ್ರೀತಿ ಮತ್ತು ಆಪ್ಯಾಯತೆ ನನ್ನನ್ನು ಮತ್ತೆ ಬದುಕಿನತ್ತ ಕರೆದುಕೊಂಡು ಬಂತು,” ಎಂದು ಹೇಳಿದ್ದಾರೆ.

“ಮತ್ತೆ ಪ್ರೀತಿಯಲ್ಲಿ ಬೀಳಬಹುದು ಎಂದು ನಾನು ಭಾವಿಸಿರಲಿಲ್ಲ. ಆದರೆ ಜೀವನದಲ್ಲಿ ಕೆಲವು ಸಂಬಂಧಗಳು ನಮ್ಮ ದೃಷ್ಟಿಕೋನವನ್ನು ಬದಲಿಸುತ್ತವೆ,” ಎಂದು ಸಮಂತಾ ತಿಳಿಸಿದ್ದಾರೆ.

ಈ ಹೇಳಿಕೆಯಿಂದ ನಾಗ ಚೈತನ್ಯ ಜೊತೆ ಸಂಬಂಧದಲ್ಲಿದ್ದ ಅವಧಿಯಲ್ಲಿ ರಾಜ್ ಜೊತೆ ಕೇವಲ ವೃತ್ತಿಪರ ಸಂಬಂಧವಷ್ಟೇ ಇತ್ತು ಎಂಬುದು ಸ್ಪಷ್ಟವಾಗಿದೆ. ಸಮಂತಾ ಸ್ಪಷ್ಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಆರೋಪಗಳು ಗಪ್ ಚುಪ್ ಆಗಿವೆ.

ಎಐ ಶೃಂಗಸಭೆಯಲ್ಲಿ ಶರ್ಟ್‌ಲೆಸ್ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥಉದಯ್ ಭಾನು ಚಿಬ್ ಬಂಧನ

0

ನವದೆಹಲಿ‌: ನವದೆಹಲಿ‌ಯಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಶರ್ಟ್‌ಬಿಚ್ಚಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಸುಮಾರು 15 ಗಂಟೆಗಳ ವಿಚಾರಣೆಯ ನಂತರ ಚಿಬ್ ಅವರನ್ನು ಬಂಧಿಸಲಾಗಿದೆ. ಚಿಬ್ ವಿಚಾರಣೆಯ ಸಮಯದಲ್ಲಿ ಸಹಕರಿಸಲಿಲ್ಲ. ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ.

ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇದು ಎಂಟನೇ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಶೇಷಾದ್ರಿಪುರಂ ಕೆನರಾ ಬ್ಯಾಂಕ್‌ನಲ್ಲಿ ಕಳ್ಳತನ ಯತ್ನ ವಿಫಲ!

0

ಬೆಂಗಳೂರು: ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಭಾನುವಾರ ಮಧ್ಯರಾತ್ರಿ ಕಳ್ಳತನ ಯತ್ನ ವಿಫಲವಾಗಿದೆ.

ಕಳ್ಳರು ಬ್ಯಾಂಕಿನ ಎಡಭಾಗದ ಕಿಟಕಿ ಗ್ರಿಲ್ ಮುರಿದು ಒಳಗೆ ನುಗ್ಗಿದ್ದರು. ಅವರು ಸಿಸಿಟಿವಿ ವೈರ್‌ಗಳನ್ನು ಕತ್ತರಿಸಲು ಪ್ರಯತ್ನಿಸಿದಾಗ ಅಲಾರಂ ಮೊಳಗಿದ್ದು, ಕಳ್ಳರು ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸಮಯದಲ್ಲಿ ಬ್ಯಾಂಕಿನ ಭದ್ರತಾ ಸಿಬ್ಬಂದಿ ಅಲಾರಂ ಶಬ್ದವನ್ನು ಪರಿಶೀಲಿಸಿದ್ದರೂ, ಕಿಟಕಿಯ ಬಳಿ ಹೋಗಿ ನೋಡದೇ ನಿರ್ಲಕ್ಷಿಸಿದರು. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದಾಗ ಕಳ್ಳತನ ಯತ್ನದ ಬಗ್ಗೆ ತಿಳಿದುಬಂದಿತು.

ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಜೀವನದಲ್ಲಿ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು!

0

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಚಾರಗಳಷ್ಟೇ ಅಲ್ಲ, ಜೀವನದ ನಿತ್ಯದ ಅಂಶಗಳ ಕುರಿತು ಸಹ ಬಹಳ ಮುಖ್ಯವಾದ ಸಲಹೆಗಳನ್ನು ನೀಡಿದ್ದಾರೆ.

ಯಶಸ್ಸು, ಶ್ರೀಮಂತಿಕೆ, ದಾಂಪತ್ಯ ಜೀವನ ಸುಖಕರವಾಗಿರಲು ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದರ ಜೊತೆಗೆ, ಅವರು ಕೆಲವೊಂದು ಅಪಾಯಕರ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ವಿಶೇಷವಾಗಿ ಹಾವು, ಬೆಂಕಿ ಮತ್ತು ನೀರು – ಈ ಮೂರು ಅಂಶಗಳನ್ನು ಅವಗಾಹಿಸದೆ ತಮಾಷೆ ಮಾಡಿದರೆ ಅಥವಾ ಅಜಾಗರೂಕತೆಯಿಂದ ಹತ್ತಿರ ಹೋದರೆ, ಅದರಿಂದ ಗಂಭೀರ ಅಪಾಯ ಸಂಭವಿಸಬಹುದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ.

ಹಾವುಗಳು ಕೆಲವೊಮ್ಮೆ ಸೇಹಪರವಾಗಿ ಕಂಡರೂ, ಯಾವಾಗ ಕಚ್ಚುವುದು ಎಂಬುದನ್ನು ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಹಾವಿನ ಹತ್ತಿರ ತಮಾಷೆ ಮಾಡಬಾರದು ಮತ್ತು ಹಾವುಗಳಿಂದ ದೂರವಿರುವುದು ಸುರಕ್ಷಿತ. ಬೆಂಕಿಯ ವಿಚಾರದಲ್ಲಿಯೂ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಬೆಂಕಿಯೊಂದಿಗೆ ಆಟವಾಡುವುದು ಅಥವಾ ಅದರ ಹತ್ತಿರ ಅಜಾಗರೂಕತೆಯಿಂದ ನಡೆದುಕೊಳ್ಳುವುದು ಕ್ಷಣಗಳಲ್ಲಿ ಭೀಕರ ಹಾನಿಯನ್ನುಂಟುಮಾಡಬಹುದು. ಅದೇ ರೀತಿ, ನೀರಿನ ವಿಷಯವೂ ಹೀಗೆ – ನದಿ, ಸಮುದ್ರ ಅಥವಾ ನೀರಿನ ಇತರ ಹತ್ತಿರದ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ನಡೆದುಕೊಂಡರೆ ಜೀವಕ್ಕೆ ಅಪಾಯ ಬರುತ್ತದೆ.

ಚಾಣಕ್ಯರ ಪ್ರಕಾರ, ಈ ಮೂರು ಅಂಶಗಳಲ್ಲಿ ಸ್ವಲ್ಪವೂ ಅಜಾಗರೂಕತೆಯನ್ನು ತೋರಿದರೆ, ಅದು ನಿಮ್ಮ ಪ್ರಾಣಕ್ಕೆ ನೇರದ ಅಪಾಯವನ್ನುಂಟುಮಾಡಬಹುದು. ಹೀಗಾಗಿ ಹಾವು, ಬೆಂಕಿ, ನೀರು – ಈ ಮೂರು ಅಂಶಗಳ ಹತ್ತಿರ ಯಾವಾಗಲೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಮತ್ತು ತಮಾಷೆ ಮಾಡಬಾರದು. ಅವರ ನುಡಿಗಳಿಂದ ಜೀವನದಲ್ಲಿ ಜಾಗರೂಕತೆ, ದೃಢನಿರ್ಣಯ ಮತ್ತು ಸ್ವಯಂ ರಕ್ಷಣೆ ಮುಖ್ಯವಾಗಿದೆ ಎಂದು ನಮಗೆ ತಿಳಿದುಬರುತ್ತದೆ.

‘ಮನೆಯೂಟ ಬೇಕು’: ವಿಚಾರಣೆ ವೇಳೆ ಕೋರ್ಟ್ ಹಾಜರಿಗೆ ದರ್ಶನ್ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ವೇಳೆ ನಟ ದರ್ಶನ್ ನೇರವಾಗಿ ಕೋರ್ಟ್‌ಗೆ ಹಾಜರಾಗಲು ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣವನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಟಿವಿ ಸೌಲಭ್ಯ ನೀಡಿರುವುದಕ್ಕೆ ನ್ಯಾಯಾಧೀಶರಿಗೆ ದರ್ಶನ್ ಧನ್ಯವಾದ ಹೇಳಿದರು. ಆದರೆ ನ್ಯಾಯಾಧೀಶರು, “ನಾವು ಕರ್ತವ್ಯ ಮಾಡಿದ್ದೇವೆ, ಧನ್ಯವಾದ ಅಗತ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.

ವಿಚಾರಣೆ ವೇಳೆ ದರ್ಶನ್ ಕುಟುಂಬದವರು ಭೇಟಿ ನೀಡುವಾಗ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಜೊತೆಗೆ ಒಂದು ದಿನವಾದರೂ ಖುದ್ದಾಗಿ ಕೋರ್ಟ್‌ಗೆ ಹಾಜರಾಗಲು ಸೂಚನೆ ನೀಡಬೇಕು ಎಂದು ವಕೀಲರ ಮೂಲಕ ಅರ್ಜಿ ಮಂಡಿಸಲಾಯಿತು.

“ಜೈಲಿನ ಊಟ ಸಾಕಾಗುತ್ತಿಲ್ಲ. ಕೋರ್ಟ್‌ಗೆ ಹಾಜರಾದರೆ ಮನೆಯೂಟ ಸಿಗುತ್ತದೆ” ಎಂದು ದರ್ಶನ್ ನ್ಯಾಯಾಲಯಕ್ಕೆ ತಿಳಿಸಿದರು. ಆರೋಪಿಗಳಿಗೆ ಭೇಟಿ ಸಮಯವೂ ಕಡಿಮೆ ಸಿಗುತ್ತಿದೆ ಎಂದು ವಕೀಲರು ವಾದಿಸಿದರು.

ಮನವಿ ಆಲಿಸಿದ ನ್ಯಾಯಾಧೀಶರು, ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅರ್ಜಿ ಸಲ್ಲಿಸಲು ಸೂಚಿಸಿದರು. ಪ್ರಕರಣದ ಮುಂದಿನ ವಿಚಾರಣೆ ಕಾದುನೋಡಲಾಗುತ್ತಿದೆ.

ವೀಳ್ಯದೆಲೆ ತಿನ್ನುವುದರಿಂದ ಸಿಗುವ ಪ್ರಯೋಜನಗಳು: ಕೇಳಿದ್ರೆ ನೀವೇ ಶಾಕ್​ ಆಗ್ತೀರಿ!

0

ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ ವಿಶೇಷ ಸ್ಥಾನ ಹೊಂದಿದೆ. ಪೂಜೆ, ವಿವಾಹ ಸಮಾರಂಭಗಳು ಸೇರಿದಂತೆ ಪ್ರತಿಯೊಂದು ಶುಭಕಾರ್ಯದಲ್ಲೂ ವೀಳ್ಯದ ಎಲೆ ಅನಿವಾರ್ಯವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ, ವೀಳ್ಯದೆಲೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.

ಇದು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆ ಸುಧಾರಿಸಲು, ಬಾಯಿಯ ದುರ್ವಾಸನೆ ನಿವಾರಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಹಿರಿಯರು ಊಟದ ಬಳಿಕ ವೀಳ್ಯದೆಲೆ ಅಡಿಕೆ ಜಗಿಯುವ ಪದ್ಧತಿ ಅನುಸರಿಸುತ್ತಿದ್ದರು.

ವೀಳ್ಯದೆಲೆ ತಿನ್ನುವುದರಿಂದ ಲಭಿಸುವ ಪ್ರಯೋಜನಗಳು

ಜೀರ್ಣಕ್ರಿಯೆ ಸುಧಾರಣೆ:
ವೀಳ್ಯದೆಲೆಯಲ್ಲಿ ಇರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಹೊಟ್ಟೆಯುಬ್ಬರ ಮತ್ತು ಆಮ್ಲೀಯತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆ:
ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಊಟದ ನಂತರ ವೀಳ್ಯದ ಎಲೆ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದರಿಂದ ಮಧುಮೇಹದ ಅಪಾಯ ಕಡಿಮೆಯಾಗಬಹುದು.

ಬಾಯಿ ದುರ್ವಾಸನೆ ನಿವಾರಣೆ:
ವೀಳ್ಯದ ಎಲೆಗಳ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬೆಳೆಯುವ ಹಾನಿಕಾರಕ ಜೀವಾಣುಗಳನ್ನು ಕಡಿಮೆ ಮಾಡುತ್ತವೆ. ಇದು ನೈಸರ್ಗಿಕ ಮೌತ್ ಫ್ರೆಶ್ನರ್‌ನಂತೆ ಕಾರ್ಯನಿರ್ವಹಿಸುತ್ತದೆ.

ದಂತ ಆರೋಗ್ಯ:
ಹಲ್ಲುನೋವು ಮತ್ತು ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಉಪಕಾರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯುವುದರಿಂದ ಒಸಡುಗಳು ಬಲಗೊಳ್ಳಬಹುದು.

ದೇಹದ ನಿರ್ವಿಷೀಕರಣ:
ವೀಳ್ಯದೆಲೆಯಲ್ಲಿ ಇರುವ ಟ್ಯಾನಿನ್‌ಗಳು ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಳ:
ಕೆಲವು ಸಂಶೋಧನೆಗಳ ಪ್ರಕಾರ, ವೀಳ್ಯದೆಲೆಗಳು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಆಯುರ್ವೇದದಲ್ಲಿ ಪರಂಪರೆಯಿಂದ ಬಳಸಲಾಗುತ್ತಿದೆ.

ಸಿಎಂ, ಡಿಸಿಎಂ ಜೊತೆ ಸುರ್ಜೇವಾಲಾ ಕ್ಲೋಸ್‌ ಡೋರ್‌ ಮೀಟಿಂಗ್‌- ಡಿಕೆಶಿ ಜೊತೆ ಒಂದು ಗಂಟೆ ಪ್ರತ್ಯೇಕ ಮಾತುಕತೆ

0

ಬೆಂಗಳೂರು: ಒಂದೇ ದಿನದ ಪ್ರವಾಸಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಎರಡು ಮಹತ್ವದ ಕ್ಲೋಸ್ ಡೋರ್ ಸಭೆಗಳನ್ನು ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಆಯೋಜನೆಗೊಂಡಿದ್ದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ದೆಹಲಿಗೆ ತೆರಳಲು ಜಕ್ಕೂರು ಏರೋಡ್ರೋಮ್‌ಗೆ ಆಗಮಿಸಿದರು.

ಈ ವೇಳೆ ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಅದಾದ ಬಳಿಕ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಸುಮಾರು ಒಂದು ಗಂಟೆ ಕಾಲ ಕ್ಲೋಸ್ ಡೋರ್ ಸಭೆ ನಡೆಸಿ ನಂತರ ದೆಹಲಿಯತ್ತ ಪ್ರಯಾಣ ಬೆಳೆಸಿದರು.

ಸಭೆಯ ವಿಷಯಾವಳಿ ಬಹಿರಂಗವಾಗಿಲ್ಲದಿದ್ದರೂ, ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆಗಳು ಮಹತ್ವ ಪಡೆದುಕೊಂಡಿವೆ.

ರಾಂಚಿ ಬಳಿ ಏರ್ ಅಂಬುಲೆನ್ಸ್ ಪತನ: ಪೈಲೆಟ್ ಸೇರಿ 7 ಮಂದಿ ಸಾವಿನ ಶಂಕೆ

0

ರಾಂಚಿ: ಜಾರ್ಖಂಡ್ ರಾಜ್ಯದ ಛತ್ರಾ ಜಿಲ್ಲೆ ಸಮೀಪ ಏರ್ ಅಂಬುಲೆನ್ಸ್ ವಿಮಾನ ಪತನಗೊಂಡಿರುವ ದುರ್ಘಟನೆ ಸಂಭವಿಸಿದೆ. ರಾಂಚಿಯಿಂದ ದೆಹಲಿಯತ್ತ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರೆಡಾರ್ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 7:34ರ ಸುಮಾರಿಗೆ ಎಟಿಸಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ. ವಿಮಾನದಲ್ಲಿ ಪೈಲೆಟ್ ಸೇರಿ ಒಟ್ಟು 7 ಮಂದಿ ಇದ್ದರು. ಇವರಲ್ಲಿ ರೋಗಿ, ವೈದ್ಯರು ಹಾಗೂ ನರ್ಸ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಈ ವಿಮಾನವು ರೆಡ್‌ಬರ್ಡ್ ಏರ್‌ವೇಸ್ ಪ್ರೈ.ಲಿ ಸಂಸ್ಥೆಗೆ ಸೇರಿದ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನವಾಗಿದೆ.

ಪೊಲೀಸರು ಹಾಗೂ ರಕ್ಷಣಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಲಕ್ನೋದಲ್ಲಿ ತಂದೆ ಹತ್ಯೆ: ಗುಂಡಿಕ್ಕಿ ಕೊಂದು ಶವ ತುಂಡರಿಸಿದ ಪುತ್ರ ಬಂಧನ

0

ಲಕ್ನೋ: ಹೃದಯ ಕಲುಕುವ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತುಂಡರಿಸಿ ವಿಲೇವಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಔಷಧ ಮತ್ತು ಮದ್ಯ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಮನೆಗೆ ಭೇಟಿ ನೀಡಿದ ಪೊಲೀಸರಿಗೆ ಬ್ಯಾರೆಲ್‌ನಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ. ಅನುಮಾನಾಸ್ಪದ ಸ್ಥಿತಿಯಲ್ಲಿ ಪುತ್ರ ಅಕ್ಷತ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮನ್ವೇಂದ್ರ ಸಿಂಗ್ ತಮ್ಮ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿ ಮುಂದುವರಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಅಕ್ಷತ್ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಷಯವಾಗಿ ತಂದೆ-ಮಗನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.

ಇತ್ತೀಚೆಗೆ ಮತ್ತೆ ಉಂಟಾದ ಜಗಳದ ವೇಳೆ ಅಕ್ಷತ್ ತನ್ನ ತಂದೆಗೆ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ಕೆಳಮಹಡಿಗೆ ಕೊಂಡೊಯ್ದು ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾನೆ.

ಸಹೋದರಿಯ ಮುಂದೆಯೇ ತಂದೆಯ ದೇಹವನ್ನು ತುಂಡರಿಸಿದ್ದು, ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಿ ವಿಲೇವಾರಿ ಮಾಡಿದ್ದಾನೆ. ಮುಂಡ ಸೇರಿದಂತೆ ಕೆಲವು ಅಂಗಾಂಗಗಳನ್ನು ಮನೆಯಲ್ಲಿ ಇಟ್ಟಿದ್ದ ನೀಲಿ ಡ್ರಮ್‌ನಲ್ಲಿ ಸಂಗ್ರಹಿಸಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.

error: Content is protected !!