Home Blog Page 20

ನಿರ್ಬಂಧದ ನಡುವೆಯೂ ಅಂಜನಾದ್ರಿ ಬೆಟ್ಟ ಏರಿದ ಪುನೀತ್ ಕೆರೆಹಳ್ಳಿ: ಪೊಲೀಸರೊಂದಿಗೆ ವಾಗ್ವಾದ

0

ಕೊಪ್ಪಳ: ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ವಿಧಿಸಿದ್ದ ಪ್ರವೇಶ ನಿರ್ಬಂಧಕ್ಕೂ ಸವಾಲು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶ್ರೀರಾಮ ಸೇನೆಯ ಕಾರ್ಯಕರ್ತ ಪುನೀತ್ ಕೆರಹಳ್ಳಿ, ನಿಷೇಧವನ್ನು ಲೆಕ್ಕಿಸದೆ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮಾರ್ಚ್ 21ರಿಂದ 23ರವರೆಗೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿಗೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಆದೇಶ ಹೊರಡಿಸಿದ್ದರು. ಶಿವಾಜಿ ಜಯಂತೋತ್ಸವದ ಹಿನ್ನೆಲೆಯಲ್ಲಿ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಆದರೆ ಈ ಆದೇಶವನ್ನು ಪ್ರಶ್ನಿಸಿದ ಕೆರಹಳ್ಳಿ, ಅಂಜನಾದ್ರಿ ಬೆಟ್ಟಕ್ಕೆ ತೆರಳಿ, ನೋಟಿಸ್ ನೀಡಲು ಬಂದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. “ಇದು ನಕಲಿ ನೋಟಿಸ್” ಎಂದು ಹೇಳಿ, ದರ್ಶನ ಮಾಡುವುದಾಗಿ ಹಠ ಹಿಡಿದರು. ಪರಿಸ್ಥಿತಿ ತೀವ್ರಗೊಂಡಿದ್ದರೂ, ಕೊನೆಗೆ ಪೊಲೀಸರ ಸಮ್ಮುಖದಲ್ಲೇ ಅವರು ಬೆಟ್ಟ ಏರಿದ್ದಾರೆ.

ಕನಕಗಿರಿಯಲ್ಲಿ ನಡೆದ ಹಿಂದಿನ ಕಾರ್ಯಕ್ರಮದಲ್ಲಿ ನೀಡಿದ ಪ್ರಚೋದನಾತ್ಮಕ ಭಾಷಣದಿಂದಲೇ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಹಿನ್ನೆಲೆ ಈ ಬಾರಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕಠಿಣ ನಿರ್ಬಂಧ ವಿಧಿಸಿತ್ತು.

ಈ ಘಟನೆ ಕಾನೂನು ಜಾರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎಬ್ಬಿಸುವುದರ ಜೊತೆಗೆ, ಸಾರ್ವಜನಿಕ ಶಾಂತಿ ಕಾಪಾಡುವಲ್ಲಿ ಆಡಳಿತದ ಸವಾಲುಗಳನ್ನೂ ಮತ್ತೆ ಬೆಳಕಿಗೆ ತಂದಿದೆ.

ಹೂ ಬೆಳೆಗಾರರ ಕಣ್ಣೀರು: ಅಕಾಲಿಕ ಮಳೆಯಿಂದ ಕೈ ಸುಟ್ಟುಕೊಂಡ ರೈತರು

0

ಗದಗ: ಯುಗಾದಿ ಹಬ್ಬದ ಹೂವಿನ ಸುವಾಸನೆ ಬದಲು ಈ ಬಾರಿ ಗದಗ ಜಿಲ್ಲೆಯ ರೈತರ ಮನೆಯಲ್ಲಿ ದುಃಖದ ವಾಸನೆ ಹರಡಿದೆ. ಅಕಾಲಿಕ ಮಳೆ ಹೂ ಬೆಳೆಗಾರರ ಬದುಕಿನ ಮೇಲೆ ಭಾರೀ ಪ್ರಹಾರ ಬೀರಿದೆ.

ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಹಾಗೂ ಕಪ್ಪತ್ತಗುಡ್ಡ ಪಾದಭಾಗದ ಗ್ರಾಮಗಳಲ್ಲಿ ವರ್ಷಪೂರ್ತಿ ಹೂ ಬೆಳೆಸುತ್ತಿದ್ದ ರೈತರು, ಈ ಬಾರಿ ಯುಗಾದಿಗೆ ದೊಡ್ಡ ಕನಸು ಕಂಡಿದ್ದರು. ಕಳೆದ ದೀಪಾವಳಿಯಲ್ಲಿ ಉತ್ತಮ ಲಾಭ ಕಂಡಿದ್ದ ಅವರು, ಮತ್ತೆ ಅದೇ ಯಶಸ್ಸಿನ ನಿರೀಕ್ಷೆಯಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆ ಬೆಳೆದಿದ್ದರು.

ಪಕ್ಕದ ಜಿಲ್ಲೆಗಳಿಂದ ದೊಡ್ಡ ಆರ್ಡರ್‌ಗಳೂ ಬಂದಿದ್ದವು. ಆದರೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆ ಎಲ್ಲ ನಿರೀಕ್ಷೆಗಳನ್ನೂ ನೆಲಕಚ್ಚಿಸಿದೆ. ತೇವಾಂಶದಿಂದ ಹೂಗಳು ಕೊಳೆತು, ಮಾರಾಟಕ್ಕೇ ಬಾರದ ಸ್ಥಿತಿ ನಿರ್ಮಾಣವಾಗಿದೆ.

ಒಮ್ಮೆ 300 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಈಗ 150 ರೂ.ಗೂ ಸಿಗದ ಸ್ಥಿತಿ. ಯುಗಾದಿ ವೇಳೆಯಲ್ಲಿ 500–700 ರೂ. ತಲುಪುತ್ತಿದ್ದ ಬೆಲೆ ಈ ಬಾರಿ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಚಂಡು ಹೂ ಬೆಲೆ ಕೂಡ 350ರಿಂದ 100ಕ್ಕೆ ಕುಸಿದಿದೆ.

ಗುಣಮಟ್ಟ ಕುಸಿತ, ಬೆಲೆ ಪತನ—ಇದರ ಮಧ್ಯೆ ರೈತರು ಹೂಗಳನ್ನು ಕಸವಾಗಿಸುವ ಪರಿಸ್ಥಿತಿಯಲ್ಲಿದ್ದಾರೆ. ಹಬ್ಬದ ಸಮಯದಲ್ಲೇ ಅನ್ನದಾತನ ಕೈ ಖಾಲಿಯಾಗಿರುವುದು ದುಃಖದ ಸಂಗತಿ.

ಇನ್ನೊಂದೆಡೆ, ರಾಜ್ಯಾದ್ಯಂತ ಸುರಿದ ಆಲಿಕಲ್ಲು ಮಳೆ ರೈತರ ಸಂಕಷ್ಟವನ್ನು ಇನ್ನಷ್ಟು ಗಂಭೀರಗೊಳಿಸಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು 56,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಹೇಳಿ, ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಟಕದಿಂದ ದಕ್ಷಿಣ ಭಾಗದವರೆಗೆ ಜೋಳ, ಕಡಲೆ, ಗೋಧಿ, ಮೆಕ್ಕೆಜೋಳ, ಮಾವು, ಹಲಸು, ಕಲ್ಲಂಗಡಿ ಸೇರಿದಂತೆ ಅನೇಕ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆ, ರೈತರಿಗೆ ತಕ್ಷಣ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯ ತುರ್ತು ಎಂದು ಒತ್ತಡ ಹೆಚ್ಚಾಗಿದೆ.

ಗೋಲ್ಡ್ ಪ್ರಿಯರಿಗೆ ಶುಭ ಸುದ್ದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ!

ಚಿನ್ನ, ಬೆಳ್ಳಿ ದರಗಳ ಇಳಿಕೆ ಮುಂದುವರಿದಿದ್ದು, ಕಳೆದ ಮೂರು ವಾರಗಳಿಂದ ಸಿಕ್ಕಾಪಟ್ಟೆ ಬೆಲೆ ತಗ್ಗಿದೆ. ಇದರಿಂದ ಗೋಲ್ಡ್ ಪ್ರಿಯರು ಸಂತಸಗೊಂಡಿದ್ದಾರೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,970 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,597 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,380 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,948 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,597 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,380 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ.

ಸಮವಸ್ತ್ರದಲ್ಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ: ಇನ್ಸ್​ಪೆಕ್ಟರ್ ಸಂದೇಶ್​​ಗೆ ಬಿಗ್​​ ಶಾಕ್​​: ರೇಪ್ ಕೇಸ್ ದಾಖಲು!

ಮಂಗಳೂರು: ಸಮವಸ್ತ್ರದಲ್ಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ ಬಿಗ್​​ ಶಾಕ್​​ ಎದುರಾಗಿದೆ.

ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ದೂರಿನಲ್ಲಿ, 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.

2020ರಲ್ಲಿ ಸಂದೇಶ್​​​ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್​​​ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.

ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಪಿಐ​ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ ಎಂದು ನಿನ್ನೆಯಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಈಗ ಸಂದೇಶ್​​ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಬಂಧನ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಗ್ಲಿ ಗ್ರಾಮದಲ್ಲಿ ಫೆ. 2 ರಂದು ಹಾಗೂ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಟ್ಟಿಯಲ್ಲಿ ನಡೆದ ಹಗಲು ಮನೆ ಕಳ್ಳತನ ಪ್ರಕರಣಗಳಲ್ಲಿ ಭಯ ಮೂಡಿಸಿದ್ದ ಕಳ್ಳನನ್ನು ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ರಾಮಾಪುರ ಗ್ರಾಮದ ನಿವಾಸಿ ಚಮನಸಾಬ್ ಚ. ಪಾಟೀಲ ಎಂದು ಗುರುತಿಸಲಾಗಿದೆ. ಆರೋಪಿಯಿಂದ 21 ಗ್ರಾಂ ಬಂಗಾರ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಮತ್ತು ₹14,000 ನಗದು ವಶಪಡಿಸಲಾಯಿತು.

ಗದಗ ಜಿಲ್ಲೆ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮತ್ತು ಗದಗ ಉತ್ತರ ವಿಭಾಗದ ಡಿಎಸ್‌ಪಿ ಮುರ್ತಜಾ ಖಾದ್ರಿ ಮಾರ್ಗದರ್ಶನದಲ್ಲಿ, ಸಿಪಿಐ ಬಿ.ವಿ. ನ್ಯಾಮಗೌಡ ನೇತೃತ್ವದಲ್ಲಿ, ಪಿಎಸ್‌ಐ ನಾಗರಾಜ್ ಗಡ್ಡ ಮತ್ತು ಪಿಎಸ್‌ಐ ಟಿ.ಕೆ. ರಾಠೋಡ್ ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಲಕ್ಷ್ಮೇಶ್ವರ ಪೊಲೀಸ್ ಸಿಬ್ಬಂದಿ, ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ್, ಎಮ್.ಎಸ್. ಬಳ್ಳಾರಿ, ಆನಂದ್ ಕಮ್ಮಾರ್, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಎಚ್.ಐ. ಕಲ್ಲಣ್ಣವರ, ಪಾಂಡುರಂಗ್ ರಾವ್, ಮದುಚಂದ್ರ ಧಾರವಾಡ, ಮಾರ್ತಾಂಡ ಉಪ್ಪಾರ, ಮಾಂತೇಶ ಐಗಾರ, ಗುರು ಬೂದಿಹಾಳ ಮತ್ತು ಟೆಕ್ನಿಕಲ್ ಸೆಲ್ ಗದಗದ ಸಂಜು ಕೊರಡೂರು ಸೇರಿದಂತೆ ತಂಡದೊಂದಿಗೆ ಕಾರ್ಯನಿರ್ವಹಿಸಿದರು.

ಈ ಕಾರ್ಯಕ್ಕೆ ಎಸ್‌ಪಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ದಳದ ಸಮರ್ಪಣೆ ಮತ್ತು ಧೈರ್ಯವನ್ನು ಪ್ರಶಂಸಿಸಿದ್ದಾರೆ.

ತಂದೆಯ ಧೂಮಪಾನ ಮಕ್ಕಳಿಗೂ ಅಪಾಯ: ಆತಂಕಕಾರಿ ಮಾಹಿತಿ ಬಹಿರಂಗ!

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇತ್ತೀಚಿನ ಅಧ್ಯಯನವು ತಂದೆಯ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಗೊಂಡಿದ್ದು, ತಂದೆ ಧೂಮಪಾನ ಮಾಡುವವರಾಗಿದ್ದರೆ ಅವರ ಮಕ್ಕಳಲ್ಲಿ ಟೈಪ್-2 ಮಧುಮೇಹ, ಲಿವರ್ ಸಮಸ್ಯೆಗಳು ಸೇರಿದಂತೆ ಹಲವು ಮೆಟಾಬಾಲಿಕ್ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ, ಧೂಮಪಾನ ಮಾಡುವ ಪುರುಷರ ಸ್ಪರ್ಮ್‌ನಲ್ಲಿ ಉಂಟಾಗುವ ಬದಲಾವಣೆಗಳು ಮಗುವಿನ ದೇಹದ ಶುಗರ್ ಮೆಟಾಬಾಲಿಸಮ್ ಹಾಗೂ ಇನ್ಸುಲಿನ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಸುಮಾರು 1000 ಧೂಮಪಾನಿಗಳ ಮೇಲೆ ನಡೆದ ಈ ಅಧ್ಯಯನದಲ್ಲಿ, ಅವರ ಮಕ್ಕಳಲ್ಲಿ ಸುಮಾರು 30% ಮಂದಿಗೆ ಮಧುಮೇಹದ ಲಕ್ಷಣಗಳು ಹಾಗೂ ಲಿವರ್ ಸಮಸ್ಯೆಗಳು ಕಂಡುಬಂದಿವೆ.

ಇದಲ್ಲದೆ, ಧೂಮಪಾನದ ವೇಳೆ ದೇಹಕ್ಕೆ ಸೇರುವ ನಿಕೋಟಿನ್ ಮೆಟಾಬಾಲಿಸಮ್ ಸಂಬಂಧಿತ ಪ್ರಮುಖ ಪ್ರಕ್ರಿಯೆಗಳನ್ನು ಹಾನಿಗೊಳಿಸಿ, ಇನ್ಸುಲಿನ್ ಕಾರ್ಯವಿಧಾನವನ್ನು ಬದಲಾಯಿಸುತ್ತದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಮಕ್ಕಳಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆದರೆ ಈ ಅಧ್ಯಯನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಹೆಚ್ಚಿನ ಮಟ್ಟದ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ತಂದೆಯಾಗಲು ಬಯಸುವವರು ಧೂಮಪಾನದಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ರಂಜಾನ್ ಸಂಭ್ರಮ: ವಿವಾದಿತ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಜನರಿಂದ ಪ್ರಾರ್ಥನೆ!

ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ವಿವಾದಿತ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಮುಸ್ಲಿಮರು ಏಕಕಾಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಹಿನ್ನೆಲೆ ನಗರದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಹೊಸೂರು ಹಾಗೂ ಕಮರಿಪೇಟೆ ಸೇರಿದಂತೆ ಪ್ರಮುಖ ವೃತ್ತಿಗಳಲ್ಲಿ ಸಂಚಾರ ಬಂದ್ ಮಾಡಿ, ಭಕ್ತರಿಗೆ ಅನುಕೂಲ ಕಲ್ಪಿಸಲಾಗಿತ್ತು.

ಪ್ರಾರ್ಥನೆ ಬಳಿಕ ಅಂಜುಮನ್ ಇಸ್ಲಾಮಿಕ್ ಸಂಸ್ಥೆಯ ಮುಖಂಡರು ಹಾಗೂ ಮುಸ್ಲಿಂ ನಾಯಕರು 3 ಸಾವಿರ ಮಠಕ್ಕೆ ತೆರಳಿ ದೇವರ ದರ್ಶನ ಪಡೆದು ಭಾವೈಕ್ಯತೆ ಮೆರೆದರು. ಮಠದ ಪೀಠಾಧಿಪತಿ ಗೈರಾಗಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಭಕ್ತರಿಗೆ ಆಶೀರ್ವಾದ ನೀಡಿ ಹಬ್ಬದ ಶುಭಾಶಯ ಕೋರಿದರು.

 

ಬಿಳೂರು ಗ್ರಾಮದಲ್ಲಿ ಅದ್ಧೂರಿ ಕೆರೆ ಬೇಟೆ: 800ಕ್ಕೂ ಹೆಚ್ಚು ಜನ ಭಾಗಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಳೂರು ಗ್ರಾಮದಲ್ಲಿ ಸಂಪ್ರದಾಯಬದ್ಧ ಕೆರೆ ಬೇಟೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ದೂರದ ಊರುಗಳಿಂದ 800ಕ್ಕೂ ಹೆಚ್ಚು ಜನರು ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಕುಣಿಗಳನ್ನು ಹಿಡಿದು ಮೀನು ಶಿಕಾರಿಗೆ ಇಳಿದಿದ್ದರು. ಬಿಳೂರು ಶ್ರೀ ಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿ ಕುಣಿಗೆ 800 ರೂಪಾಯಿ ಶುಲ್ಕ ನಿಗದಿಪಡಿಸಲಾಗಿತ್ತು.

ಮೀನುಗಾರರಲ್ಲಿ ಕೆಲವರಿಗೆ ಉತ್ತಮ ಪ್ರಮಾಣದಲ್ಲಿ ಮೀನು ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದ್ದು ಕಂಡುಬಂತು. ಕೆಲವರು ಮೀನು ಸಿಗದೇ ಹಿಂತಿರುಗಿದರೂ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಮ್ಮ ಕೊಡುಗೆ ನೀಡಿದ ಸಂತೋಷದಲ್ಲಿ ಮನೆಮಾತಾದರು. ಕಳೆದ ವರ್ಷ ಇದೇ ಕೆರೆ ಬೇಟೆಯಲ್ಲಿ ಹೆಚ್ಚು ಮೀನು ಸಿಕ್ಕಿದ್ದನ್ನು ಸ್ಥಳೀಯರು ಸ್ಮರಿಸಿದರು.

ಕಾರ್ಯಕ್ರಮವನ್ನು ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಯುತವಾಗಿ ಮುಕ್ತಾಯಗೊಂಡಿತು. ಒಟ್ಟಾರೆ, ಬಿಳೂರಿನ ಕೆರೆ ಬೇಟೆ ಸಂಭ್ರಮವು ಸಂಪ್ರದಾಯ, ಸಹಕಾರ ಮತ್ತು ಭಕ್ತಿಯ ಸಂಕೇತವಾಗಿ ಮತ್ತೊಮ್ಮೆ ಯಶಸ್ವಿಯಾಗಿ ನೆರವೇರಿತು.

ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ: ಐವರು ಗಂಭೀರ, 25ಕ್ಕೂ ಹೆಚ್ಚು ಜನರಿಗೆ ಗಾಯ!

ದಾವಣಗೆರೆ: ತಾಲೂಕಿನ ಆನಗೋಡು ಸಮೀಪ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಸುಮಾರು 800ಕ್ಕೂ ಅಧಿಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ, ಕೆಲ ಯುವಕರು ಹೆಜ್ಜೇನು ಗೂಡಿಗೆ ಕಲ್ಲು ಹೊಡೆದ ಪರಿಣಾಮ ಏಕಾಏಕಿ ಜೇನು ಹುಳಗಳು ದಾಳಿ ನಡೆಸಿವೆ.

ದಾಳಿಯಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಹೆಜ್ಜೇನು ದಾಳಿಯ ತೀವ್ರತೆಯಿಂದ 80ಕ್ಕೂ ಹೆಚ್ಚು ಜನರಿಗೆ ತೊಂದರೆ ಉಂಟಾಗಿದ್ದು, ಸ್ಥಳೀಯರು ಒಣ ಹುಲ್ಲಿಗೆ ಬೆಂಕಿ ಹಚ್ಚಿ ಹೊಗೆ ಮೂಲಕ ಜೇನು ಹುಳಗಳನ್ನು ಓಡಿಸಿದ್ದಾರೆ. ಮಾಯಕೊಂಡ ಶಾಸಕ ಬಸವಂತಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆಗೆ ಸಹಕಾರ ನೀಡಿದ್ದಾರೆ.

ಏಕಾಏಕಿ ಹೊತ್ತಿಕೊಂಡ ಬೆಂಕಿ: 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟುಕರಕಲು!

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ 400ಕ್ಕೂ ಅಧಿಕ ಹತ್ತಿ ಚೀಲಗಳು ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.

ಘಟನೆಯಲ್ಲಿ ನಾಗಯ್ಯ ಮಿಣಜಗಿ ಎಂಬ ರೈತನಿಗೆ ಸೇರಿದ್ದ ಹತ್ತಿ ಚೀಲಗಳು ಬೆಂಕಿಗಾಹುತಿಯಾಗಿದೆ. ಹಳೆಯ ಪಾಳುಬಿದ್ದ ಶಾಲೆಯ ಕಟ್ಟಡದಲ್ಲಿ ನಾಗಯ್ಯ ಅವರು ಹತ್ತಿ ಚೀಲಗಳನ್ನು ಸಂಗ್ರಹಸಿಟ್ಟಿದ್ದರು.

ಏಕಾಏಕಿ ಹತ್ತಿ ಚೀಲಗಳಿಗೆ ಬೆಂಕಿ ಆವರಿಸಿದ ಪರಿಣಾಮ 400ಕ್ಕೂ ಅಧಿಕ ಚೀಲಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!