Home Blog Page 21

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಏರಿಳಿತದ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ.

ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದ್ದರೆ, ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಹಾಗೂ ಕಬಿನಿಯಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿದೆ.

ಕೆಆರ್‌ಎಸ್ ಜಲಾಶಯ: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಇಂದು 105.62 ಅಡಿ ನೀರು ದಾಖಲಾಗಿದೆ. ಜಲಾಶಯಕ್ಕೆ 4,934 ಕ್ಯೂಸೆಕ್ ಒಳಹರಿವು ಇದ್ದರೆ, 5,215 ಕ್ಯೂಸೆಕ್ ಹೊರಹರಿವು ಇದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 27.581 ಟಿಎಂಸಿ ನೀರು ಸಂಗ್ರಹವಾಗಿದೆ.

ಕಬಿನಿ ಜಲಾಶಯ: ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಪ್ರಸ್ತುತ 68.47 ಅಡಿ ನೀರಿದೆ. ಒಟ್ಟು 19.52 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 10.94 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 1,091 ಕ್ಯೂಸೆಕ್ ಇದ್ದು, ಒಟ್ಟು 1,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. 519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಜಲಾಶಯದಲ್ಲಿ ಇಂದು 519.51 ಮೀಟರ್ ನೀರಿನ ಮಟ್ಟ ದಾಖಲಾಗಿದೆ. 14,212 ಕ್ಯೂಸೆಕ್ ಹೊರಹರಿವು ಇದ್ದು, ಜಲಾಶಯ ಉತ್ತಮ ನೀರಿನ ಮಟ್ಟ ಕಾಯ್ದುಕೊಂಡಿದೆ.

ಒಟ್ಟಾರೆ, ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದ್ದರೆ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಒಳಹರಿವಿಗಿಂತ ಹೊರಹರಿವು ಹೆಚ್ಚಿರುವುದು ಗಮನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹಾಗೂ ಒಳಹರಿವಿನ ಆಧಾರದ ಮೇಲೆ ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ.

ಬಾಗಲಗುಂಟೆಯಲ್ಲಿ ಮಳೆ ಅವಾಂತರ; ಹಲವು ಮನೆಗಳಿಗೆ ನುಗ್ಗಿದ ನೀರು, ಬೈಕ್‌ಗಳು ಮುಳುಗಡೆ

0

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬಾಗಲಗುಂಟೆಯ ಭೈರವೇಶ್ವರ ಬಡಾವಣೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಸುರಿದ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ನೀರು ಬಡಾವಣೆಯ ಮನೆಗಳಿಗೆ ನುಗ್ಗಿದೆ. ರಾಜಕಾಲುವೆ ಕಾಮಗಾರಿ ವೇಳೆ ನಡೆದಿರುವ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೂಳೆತ್ತುವ ಕಾಮಗಾರಿ ಹಾಗೂ ರಿಟೈನಿಂಗ್ ವಾಲ್ ನಿರ್ಮಾಣದ ವೇಳೆ ಮಣ್ಣನ್ನು ಅಡ್ಡಲಾಗಿ ಹಾಕಲಾಗಿತ್ತು. ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೆ, ಏಕಾಏಕಿ ಬಡಾವಣೆಯತ್ತ ನುಗ್ಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಮನೆಗಳ ಒಳಭಾಗ ಹಾಗೂ ನೆಲಮಾಳಿಗೆಯಲ್ಲಿ ನೀರು ತುಂಬಿಕೊಂಡಿದ್ದು, ಐದರಿಂದ ಆರು ಬೈಕ್‌ಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಕೆಲ ಮನೆಗಳ ನೆಲಮಾಳಿಗೆಯಲ್ಲಿ ಸುಮಾರು ಎಂಟು ಅಡಿಗಳಷ್ಟು ನೀರು ನಿಂತಿದೆ.

ನೀರಿನಿಂದಾಗಿ ಹಲವು ವಸ್ತುಗಳು ಹಾನಿಯಾಗಿದ್ದು, ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಸ್ಥಳೀಯರೇ ಸ್ವತಃ ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದು, ಮಳೆ ಅವಾಂತರದಿಂದ ಬಡಾವಣೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಪತ್ತೆ; ಬ್ರಾಂಡೆಡ್ ಆಹಾರಗಳ ಮೇಲೂ ಆರೋಗ್ಯ ಇಲಾಖೆ ನಿಗಾ

0

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಾಗಿದೆ.

ಕಲಬೆರಕೆ ಆಹಾರ ಪದಾರ್ಥಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಶೀಲನೆಗೆ ಮುಂದಾಗಿದೆ.

ಇತ್ತೀಚೆಗೆ ಕೋಲಾರದಲ್ಲಿ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಅಡಿಕೆಯನ್ನು ಮುಳಬಾಗಿಲು ಟಿಎಚ್‌ಒ ಡಾ. ಸುಗುಣ ನೇತೃತ್ವದ ಆರೋಗ್ಯ ಸುರಕ್ಷತಾ ಅಧಿಕಾರಿಗಳ ತಂಡ ವಶಕ್ಕೆ ಪಡೆದಿದೆ.

ಅಡಿಕೆಯಲ್ಲಿ ಕಲರಿಂಗ್ ಏಜೆಂಟ್‌ಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಲ್ಯಾಬ್ ವರದಿ ಬಂದ ಬಳಿಕ ಅಡಿಕೆಯಲ್ಲಿ ಯಾವ ರೀತಿಯ ರಾಸಾಯನಿಕ ಬಳಸಲಾಗಿದೆ ಎಂಬುದು ಸ್ಪಷ್ಟವಾಗಲಿದೆ.

ಬ್ರಾಂಡೆಡ್ ಆಹಾರಗಳ ಮೇಲೂ ನಿಗಾ:

ಅಡಿಕೆಯ ಜೊತೆಗೆ ಮಕ್ಕಳಲ್ಲಿ ಜನಪ್ರಿಯವಾಗಿರುವ ಟೆಟ್ರಾಪ್ಯಾಕ್ ಜ್ಯೂಸ್, ಬಿಸ್ಕತ್, ಚಿಪ್ಸ್, ಚಾಕೋಲೇಟ್ ಹಾಗೂ ಕೇಕ್ ಸೇರಿದಂತೆ ವಿವಿಧ ಪ್ಯಾಕೇಜ್ಡ್ ಆಹಾರಗಳ ಗುಣಮಟ್ಟದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುವ ಮುನ್ನ ಅಗತ್ಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಬೇಕಿದ್ದರೂ, ಕೆಲವು ಖಾಸಗಿ ಲ್ಯಾಬ್‌ಗಳು ಹಾಗೂ ಕಂಪನಿಗಳ ವಿರುದ್ಧ ಅಕ್ರಮದ ಆರೋಪಗಳು ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವಿವಿಧ ಬ್ರಾಂಡೆಡ್ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಮರುಪರಿಶೀಲನೆ ನಡೆಸಲು ಮುಂದಾಗಿದೆ.

ಆರೋಗ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಎಫ್‌ಡಿಎ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಆಹಾರ ಕಲಬೆರಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನಕ್ಸಲ್ ಹೆಸರಿನಲ್ಲಿ ಬೆದರಿಕೆ; ಬೆಟ್ಟದಲ್ಲಿ ಅಡಗಿದ್ದ ಕನಕಲಬಂಡೆ ವೆಂಕಟೇಶ್ ಬಂಧನ!

0

ತುಮಕೂರು: ಕಳೆದ ಹಲವು ತಿಂಗಳಿಂದ ಪಾವಗಡ ತಾಲೂಕಿನ ಕನಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ವೆಂಕಟೇಶ್ ಅರೆಬೆತ್ತಲೆಯಾಗಿ ಮದ್ಯ ಸೇವಿಸುತ್ತಾ ಚಿಕನ್ ತಿನ್ನುತ್ತಿದ್ದ ಎನ್ನಲಾಗಿದೆ.

ಕಳೆದ ಕೆಲ ತಿಂಗಳಿಂದ ಕನಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ವೆಂಕಟೇಶ್ ವಿರುದ್ಧ ಕೇಳಿಬಂದಿತ್ತು. ಆ.29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿತ್ತು.

ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತರೊಬ್ಬರಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ವೆಂಕಟೇಶ್ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಅಡಿಷನಲ್ ಎಸ್‌ಪಿ ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವೆಂಕಟೇಶ್ ಬಂಧನದಿಂದ ಕನಕಲಬಂಡೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಫ್ರಿಡ್ಜ್ ಬ್ಲಾಸ್ಟ್‌: ಗದಗ ಮಾರ್ಟ್‌ನಲ್ಲಿ ಭಾರೀ ಬೆಂಕಿ

0

ಗದಗ: ನಗರದ ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿರುವ ಗದಗ ಮಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದೆ. ಮಾರ್ಟ್‌ನಲ್ಲಿದ್ದ ಫ್ರಿಡ್ಜ್‌ ಬ್ಲಾಸ್ಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಅಂಗಡಿಯಲ್ಲಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.

ಅಗ್ನಿ ಅವಘಡದಿಂದ ಮಾರ್ಟ್‌ನಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು, ನಿಖರವಾಗಿ ಎಷ್ಟು ಪ್ರಮಾಣದ ನಷ್ಟವಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆ ಗದಗ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲಾ ಬ್ಯಾಗ್‌ನಲ್ಲಿ 38 ಕೆಜಿ ಗಾಂಜಾ ಸಾಗಾಟ; ಮೂವರು ಅಪ್ರಾಪ್ತರು ಸೇರಿ ಐವರ ಬಂಧನ

0

ಪಾಟ್ನಾ: ವಿದ್ಯಾರ್ಥಿಯೊಬ್ಬನ ಶಾಲಾ ಬ್ಯಾಗ್‌ನಲ್ಲಿ ಗಾಂಜಾವನ್ನು ಅಡಗಿಸಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಮುಜಫರ್‌ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್ಸನ್ನು ಭಗವಾನ್‌ಪುರ ಅಡ್ಡಾ ಚೌಕ್‌ನಲ್ಲಿ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮಾನಾಸ್ಪದ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ, ಅಪ್ರಾಪ್ತರ ಶಾಲಾ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಗಿದೆ.

ಭಗವಾನ್‌ಪುರ ಪೊಲೀಸರು ಹಾಗೂ ಮದ್ಯಪಾನ ನಿಷೇಧ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 38 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

‘ಆಪರೇಷನ್ ನೀಲಕಂಠ’ದ ಅಡಿಯಲ್ಲಿ ಐವರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಆರಂಭಿಸಲಾಗಿದೆ. ಬಂಧಿತರು ಮಾದಕ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಪಾಟ್ನಾಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತರಲ್ಲಿ ಮೂವರು ಅಪ್ರಾಪ್ತರಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಹಾಸನದಲ್ಲಿ ದುರಂತ; ಕೆರೆಯಲ್ಲಿ ಜಾನುವಾರು ಮೈತೊಳೆಯಲು ಹೋದ ಇಬ್ಬರು ದಾರುಣ ಸಾವು!

0

ಹಾಸನ: ಜಾನುವಾರು ಮೈತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರ ತಾಲೂಕಿನ ಬಂಡಿಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಕೆಂಗೇಗೌಡ (60) ಹಾಗೂ ಕುಮಾರ (30) ಎಂದು ಗುರುತಿಸಲಾಗಿದೆ. ಕೆಂಗೇಗೌಡ ಅವರು ಕೆರೆಯಲ್ಲಿ ಮುಳುಗುತ್ತಿದ್ದ ವೇಳೆ ಅವರನ್ನು ರಕ್ಷಿಸಲು ಕುಮಾರ ತೆರಳಿದ್ದರು ಎನ್ನಲಾಗಿದೆ. ಆದರೆ ಇಬ್ಬರೂ ಕೆರೆಯಿಂದ ಹೊರಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರೂ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆರೆ ಬಳಿ ತೆರಳಿದ್ದರು ಎನ್ನಲಾಗಿದೆ. ಘಟನೆ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶವಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಣೇಶ ಮೆರವಣಿಗೆಯಲ್ಲಿ ಕಿರಿಕ್; ಎರಡು ಗುಂಪುಗಳ ನಡುವೆ ಮಾರಾಮಾರಿ, 19 ಜನರ ವಿರುದ್ಧ FIR

0

ಯಾದಗಿರಿ: ಗಣೇಶೋತ್ಸವ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಬಳಿಕ ಕಲ್ಲುತೂರಾಟ ಹಾಗೂ ದೊಣ್ಣೆಗಳಿಂದ ಮಾರಾಮಾರಿ ನಡೆದಿರುವ ಘಟನೆ ಯಾದಗಿರಿ ನಗರದ ದುರ್ಗಾದೇವಿ ಮಂದಿರದ ಬಳಿ ನಡೆದಿದೆ.

ಘಟನೆ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗಣೇಶ ಮೂರ್ತಿ ಮೆರವಣಿಗೆ ಸಾಗುತ್ತಿದ್ದ ವೇಳೆ ಒಂದು ಗುಂಪಿನ ಯುವಕನ ಮೇಲೆ ಬೈಕ್ ಹಾದುಹೋಗಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ.

ಈ ವೇಳೆ ಮತ್ತೊಂದು ಗುಂಪಿನವರು, “ನಮ್ಮ ಏರಿಯಾದಲ್ಲಿ ಗಣೇಶ ಮೂರ್ತಿಯನ್ನು ಹೇಗೆ ಪ್ರತಿಷ್ಠಾಪನೆ ಮಾಡುತ್ತೀರಾ ನೋಡ್ತೀವಿ. ನಾವು ಹೇಳಿದಂತೆಯೇ ನಡೆಯಬೇಕು” ಎಂದು ಬೆದರಿಕೆ ಹಾಕಿ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ.

ವಿವಾದ ತಾರಕಕ್ಕೇರಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ದೊಣ್ಣೆಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಘಟನೆ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೂಲಿಗಾಗಿ ವಲಸೆ ತಪ್ಪಿಸಲು ಗ್ರಾಮದಲ್ಲೇ ಉದ್ಯೋಗ : ಫಾರ್ಮ್ ನಂ.6 ಸಲ್ಲಿಕೆಗೆ ವಿಶೇಷ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮದಲ್ಲೇ ಉದ್ಯೋಗ ಸಿಗಲಿ, ಕೂಲಿಗಾಗಿ ದೂರದ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಲಿ ಎಂಬ ಉದ್ದೇಶದಿಂದ ರೋಣ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಫಾರ್ಮ್ ನಂ.6 ಮೂಲಕ ಉದ್ಯೋಗ ಬೇಡಿಕೆ ಸಲ್ಲಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವಿಬಿ-ಜಿ ರಾಮ್ (ಜಿ) ಯೋಜನೆಯಡಿ ಉದ್ಯೋಗ ಪಡೆಯಲು ಇಚ್ಛಿಸುವ ಗ್ರಾಮೀಣ ಕುಟುಂಬಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ತೆರಳಿ ಫಾರ್ಮ್ ನಂ.6 ಸಲ್ಲಿಸಬೇಕು. ಕೆಲಸದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ, ಲಭ್ಯವಿರುವ ಕಾಮಗಾರಿಗಳ ಆಧಾರದ ಮೇಲೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಈ ಹಿಂದೆ ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಹೊಸ ಯೋಜನೆಯಡಿ ಉದ್ಯೋಗ ಪಡೆಯಲು ಅವಕಾಶವಿದೆ. ಈ-ಕೆವೈಸಿ ಪೂರ್ಣಗೊಂಡಿರುವ ಹಳೆಯ ಉದ್ಯೋಗ ಚೀಟಿಗಳನ್ನು ಆರಂಭಿಕ ಹಂತದಲ್ಲಿ ಮಾನ್ಯಗೊಳಿಸಲಾಗಿದ್ದು, ಹೊಸದಾಗಿ ಉದ್ಯೋಗ ಬಯಸುವ ಕುಟುಂಬಗಳಿಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಫಾರ್ಮ್ ನಂ.6 ಸಲ್ಲಿಸಿದ ಬಳಿಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಕುಟುಂಬಗಳ ವಿವರ ದಾಖಲಿಸಿಕೊಳ್ಳಲಿದ್ದಾರೆ. ಹೀಗಾಗಿ ಉದ್ಯೋಗ ಚೀಟಿ ಹೊಂದಿರುವುದರ ಜತೆಗೆ ಕೆಲಸದ ಬೇಡಿಕೆಯನ್ನೂ ಅಧಿಕೃತವಾಗಿ ಸಲ್ಲಿಸುವುದು ಅಗತ್ಯವಾಗಿದೆ.

ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಗರಿಷ್ಠ 125 ದಿನಗಳವರೆಗೆ ಉದ್ಯೋಗ ಕಲ್ಪಿಸುವ ಉದ್ದೇಶವಿದೆ. ಜಲಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಹಾಗೂ ಹವಾಮಾನ ಸಂಬಂಧಿತ ವಿವಿಧ ಕಾಮಗಾರಿಗಳಲ್ಲಿ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದೆ.

ಕೃಷಿ ಕೆಲಸ ಕಡಿಮೆಯಾಗುವ ಅವಧಿಯಲ್ಲಿ ಗ್ರಾಮದಲ್ಲಿಯೇ ಉದ್ಯೋಗ ದೊರೆಯುವುದರಿಂದ ಕುಟುಂಬಗಳ ಆದಾಯಕ್ಕೆ ನೆರವಾಗುವುದರ ಜತೆಗೆ, ಉದ್ಯೋಗಕ್ಕಾಗಿ ನಗರ ಹಾಗೂ ಹೊರ ಜಿಲ್ಲೆಗಳಿಗೆ ವಲಸೆ ಹೋಗುವ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆಯಿದೆ.

ಕೆಲಸದ ಅಗತ್ಯವಿರುವವರು ಗ್ರಾಮ ಪಂಚಾಯಿತಿಗೆ ತೆರಳಿ ಫಾರ್ಮ್ ನಂ.6 ಮೂಲಕ ಅರ್ಜಿ ಸಲ್ಲಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ನಿಯಮಾನುಸಾರ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ರೋಣ

ಧರ್ಮ ರಕ್ಷಣೆಯೇ ವೀರಭದ್ರನ ಸಂದೇಶ: ರಂಭಾಪುರಿ ಜಗದ್ಗುರು

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಸಮಾಜದಲ್ಲಿ ಅಸಮಾನತೆ, ಅಶಾಂತಿ ಹಾಗೂ ಮೌಲ್ಯಗಳ ಕುಸಿತ ಹೆಚ್ಚುತ್ತಿರುವ ಸಂದರ್ಭದಲ್ಲಿ ಶ್ರೀ ವೀರಭದ್ರಸ್ವಾಮಿಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಯುವಕರು ಧರ್ಮದ ಜತೆಗೆ ಆಧುನಿಕ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ವಿದ್ಯಾನಗರದಲ್ಲಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ನಡೆದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಭದ್ರ ಎಂದರೆ ಕೇವಲ ಶಸ್ತ್ರಧಾರಿ ದೈವದ ರೂಪವಲ್ಲ. ಧರ್ಮ ರಕ್ಷಣೆ ಹಾಗೂ ದುಷ್ಟ ಶಕ್ತಿಗಳ ದಮನವೇ ವೀರಭದ್ರಸ್ವಾಮಿಯ ಅವತಾರದ ಮೂಲ ಉದ್ದೇಶ. ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ಧರ್ಮಬದ್ಧ ಜೀವನವೇ ನಿಜವಾದ ವೀರತ್ವವಾಗಿದೆ ಎಂದರು.

ವೀರಭದ್ರೇಶ್ವರ ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ. ಅವು ಜನಪರ ಸಂಸ್ಕೃತಿ, ಶೈವ ಪರಂಪರೆ, ಕಲೆ, ಆಚರಣೆಗಳು ಹಾಗೂ ಸಮುದಾಯದ ಐತಿಹಾಸಿಕ ನೆನಪುಗಳನ್ನು ಉಳಿಸಿಕೊಂಡಿರುವ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಶ್ರೀ ವೀರಭದ್ರಸ್ವಾಮಿ ರಂಭಾಪುರಿ ಪೀಠದ ಕ್ಷೇತ್ರನಾಥ ಹಾಗೂ ಗೋತ್ರಪುರುಷನಾಗಿ ಪೂಜೆಗೊಳ್ಳುತ್ತಿದ್ದಾನೆ. ನಾಡಿನ ಯಾವುದೇ ಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ನೆಲೆಗೊಂಡಿದ್ದರೂ, ಆತನ ಮೂಲ ಶಕ್ತಿಕೇಂದ್ರ ರಂಭಾಪುರಿ ಕ್ಷೇತ್ರವಾಗಿದೆ ಎಂದು ತಿಳಿಸಿದರು.

ಜಾತಿ, ಪ್ರದೇಶ ಹಾಗೂ ಪಕ್ಷಭೇದಗಳನ್ನು ಮೀರಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ಕಟ್ಟುವ ಸಂಕಲ್ಪವನ್ನು ಜಯಂತ್ಯುತ್ಸವದ ಮೂಲಕ ಕೈಗೊಳ್ಳಬೇಕು. ವೀರಭದ್ರನ ಶೌರ್ಯ ನಮ್ಮಲ್ಲಿ ಧೈರ್ಯ, ಶಿವನ ತತ್ವ ಜ್ಞಾನ ಹಾಗೂ ಧರ್ಮದ ಮಾರ್ಗ ಸದಾಚಾರವನ್ನು ಬೆಳೆಸಲಿ ಎಂದು ಜಗದ್ಗುರುಗಳು ಆಶಿಸಿದರು.

ಸದಾನಂದ ಡಂಗನವರ, ಚಂದ್ರಶೇಖರ ಜುಟ್ಟಲ, ವಿ.ಜಿ. ಪಾಟೀಲ, ಆರ್.ಎಂ. ಹಿರೇಮಠ, ಬಂಗಾರೇಶ ಹಿರೇಮಠ, ಬಸವರಾಜ ಸುಳ್ಳದ, ಡಾ. ರಾಮು ಮೂಲಗಿ, ಸಂಶಿ ಉಮೇಶ, ಸುಮಂಗಲಾ ಹಿರೇಮಠ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಮ್ಯಾನೇಜರ್ ಜಿ.ವಿ. ಹಿರೇಮಠ ಸ್ವಾಗತಿಸಿ, ನಿರೂಪಿಸಿದರು.

ವಿವೇಕ, ಧೈರ್ಯ, ಶಿಸ್ತು, ಕರ್ತವ್ಯನಿಷ್ಠೆ ಮತ್ತು ಧರ್ಮಬದ್ಧ ಜೀವನವೇ ನಿಜವಾದ ವೀರತ್ವ. ವೀರಭದ್ರನ ಆದರ್ಶಗಳನ್ನು ಯುವಕರು ಬದುಕಿನಲ್ಲಿ ಅಳವಡಿಸಿಕೊಂಡು ಧರ್ಮ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು.

— ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು