Home Blog Page 20

ಅನೈತಿಕ ಸಂಬಂಧ ಶಂಕೆ; ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಗಂಡ!

0

ರಾಮನಗರ:- ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಜರುಗಿದೆ.

21 ವರ್ಷದ ಸಿಂಚನ ಕೊಲೆಯಾದ ಮಹಿಳೆ. ರೇಣುಕಯ್ಯ ಕೊಲೆಗೈದ ಪಾಪಿ ಪತಿ. ಪತ್ನಿಯ ಶೀಲ ಶಂಕಿಸಿ ಆಗಾಗೆ ರೇಣುಕಯ್ಯ ಗಲಾಟೆ ಮಾಡ್ತಿದ್ದ. ಅದರಂತೆ ಶುಕ್ರವಾರವೂ ಕೂಡ ಗಲಾಟೆ ನಡೆಸಿ ಮನೆಮುಂದೆಯೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ; ಇಂದಿನ ಹವಾಮಾನ ವರದಿ ಹೀಗಿದೆ!

0

ಬೆಂಗಳೂರು: ಕಳೆದ ಹಲವಾರು ದಿನಗಳಿಂದ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ ಆವರಿಸಿದ್ದು, ಆದರೆ ಇಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯದಲ್ಲಿ ಗುಡಗು ಸಹಿತ ಸಾಧಾರಣ ಮಳೆಯಾಗಬಹುದೆಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ| ಭೀಕರ ಅಪಘಾತ; ಟ್ರ್ಯಾಕ್ಟರ್​ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು

0

ಬಾಗಲಕೋಟೆ:– ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಟ್ಟೆ ಕೆರೆ ಸಮೀಪ ಜರುಗಿದೆ.

ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಮೃತರು. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮೃತರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ನಿವಾಸಿಗಳಾಗಿದ್ದು, ಕಬ್ಬಿನ ಕಟಾವು ಕೆಲಸಕ್ಕಾಗಿ ಜಮಖಂಡಿ ಭಾಗಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಸಚಿವರದ್ದು ಎನ್ನಲಾದ ಆಡಿಯೋ ವೈರಲ್ – “ಪರಿಶೀಲನೆ ಆಗಲಿ” ಎಂದ ಡಾ.ಎಂ.ಸಿ.ಸುಧಾಕರ್

0

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿರುವ ಹಿನ್ನೆಲೆ, ಆಡಿಯೋ ನಿಜವಾಗಿಯೂ ತಮ್ಮದೇನಾ ಅಥವಾ ಅಲ್ಲವಾ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಶಿಡ್ಲಘಟ್ಟದಲ್ಲಿ ಉಚ್ಛಾಟಿತ ಕಾಂಗ್ರೆಸ್ ಮುಖಂಡ ರಾಜೀವಗೌಡ ಹಾಗೂ ಅವರ ಬೆಂಬಲಿಗರು ಆಡಿಯೋವನ್ನು ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಜೈಲು ಸೇರಿ ಬಂದಿದ್ದ ರಾಜೀವಗೌಡ ಅವರ ಹೆಸರು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಇದೇ ಹಿನ್ನೆಲೆ ಸಚಿವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಡಿಯೋದಲ್ಲಿ ತಮ್ಮ ಬೆಂಬಲಿಗರ ಜೊತೆ ಮಾತನಾಡುವ ವೇಳೆ ಮಹಿಳಾ ಅಧಿಕಾರಿಗೆ ನಿಂದನೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ. ಸುಧಾಕರ್, “ಆಡಿಯೋ ನನ್ನದೋ ಅಲ್ಲವೋ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕು. ಯಾರಾದರೂ ನನ್ನ ಘನತೆಗೆ ಕುಂದು ತರುವ ಉದ್ದೇಶದಿಂದ ಹಂಚಿಕೆ ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿ ಸಚಿವರ ಬೆಂಬಲಿಗರು ಕೂಡ ಆಡಿಯೋ ವೈರಲ್ ಮಾಡಿ ಸಚಿವರ ಗೌರವಕ್ಕೆ ಧಕ್ಕೆ ತಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪ್ರಕರಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆ; ಬೆಚ್ಚಿಬಿದ್ದ ಸ್ಥಳೀಯರು

0

ಕಾರವಾರ: ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆಯಾಗಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯದಲ್ಲಿ ಜರುಗಿದೆ.

ಘಟನೆ ಹಿನ್ನೆಲೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಂದು ಸಂಜೆ ವೇಳೆ ರುಂಡವಿಲ್ಲದ ಮಹಿಳೆಯ ಮೃತದೇಹ ಪತ್ತೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುಂಡಗೋಡು ಪೊಲೀಸರು ದೌಡಾಯಿಸಿದ್ದಾರೆ. ಎರಡು ದಿನದ ಹಿಂದೆ ಅತ್ಯಾಚಾರ ಮಾಡಿ ಬಳಿಕ ಹತ್ಯೆ ಮಾಡಿ ಮೃತದೇಹವನ್ನು ಅರಣ್ಯದಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು,

ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನೂ ಮಹಿಳೆಯ ಗುರುತು ಪತ್ತೆಯಾಗಿಲ್ಲ. ರುಂಡವನ್ನು ಮೃತದೇಹದ ಸುತ್ತಮುತ್ತ ಬಿಸಾಡಿರಬಹುದೆಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸರ್ವಜ್ಞರ ವಚನಗಳು ಸಮಾಜಕ್ಕೆ ದಾರಿದೀಪ: ಬಸವರಾಜ ಕುರಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿವೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಯತ್ನ ವಚನಗಳ ಮೂಲಕ ನಡೆದಿದೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಬಸವರಾಜ ಕುರಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಚರಿಸಲಾದ ಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿದ ಕವಿ ಸರ್ವಜ್ಞನ ವಚನಗಳು ಇಂದಿನ ಮಕ್ಕಳು, ಯುವಜನಾಂಗ ಹಾಗೂ ಸಮಾಜಕ್ಕೆ ದಾರಿದೀಪವಾಗಿವೆ. ಕವಿ ಸರ್ವಜ್ಞನ ವಚನಗಳು ಸಮಾಜ ಸುಧಾರಣೆಯ, ಜಾತ್ಯಾತೀತ, ಮಾನವೀಯ ಮೌಲ್ಯ ಹಾಗೂ ಸರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ವಚನಗಳಾಗಿವೆ. ಸರಳ, ಸಜ್ಜನಿಕೆ ಹಾಗೂ ಆದರ್ಶ ಗುಣಗಳನ್ನು ಹೊಂದಿದ್ದ ಸರ್ವಜ್ಞ ಸುಂದರ ಹಾಗೂ ಆದರ್ಶ ಸಮಾಜ ನಿರ್ಮಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಎಂದರು.

ಜೆ.ಎ. ಪಾಟೀಲ, ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಎಸ್.ಐ. ಜಗಾಪುರ, ರಾಜೇಶ್ವರಿ ಗವಳಿ, ಶಿಕ್ಷಕ ಡಿ.ವಿ. ಕಳ್ಳಿ ಇದ್ದರು.

ಬೂದಿಹಾಳ ಶಾಲೆಯಲ್ಲಿ: ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂತ ಕವಿ ಸರ್ವಜ್ಞ ಜಯಂತ್ಯುತ್ಸವ ಆಚರಿಸಲಾಯಿತು.

ಮುಖ್ಯ ಶಿಕ್ಷಕರಾದ ಸಿ.ಕೆ. ಕೇಸರಿ ಮಾತನಾಡಿ, ಕವಿ ಸರ್ವಜ್ಞ ಸೌಜನ್ಯಶೀಲ, ವಿಧೇಯ, ಗೌರವಯುತವಾಗಿ ಬದುಕಿ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದರು. ಅತಿಥಿ ಶಿಕ್ಷಕಿಯರಾದ ದೀಪಾ ಪೂಜಾರ, ಸರಸ್ವತಿ ಪೂಜಾರ, ದೀಪಾ ತುಕ್ಕೋಜಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.

ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ನರೇಗಲ್ಲ ಪಟ್ಟಣದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕವಿ ಸರ್ವಜ್ಞ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ, ಎಂ.ವಿ. ಕಡೆತೋಟದ, ವಿ.ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ವಿ.ಎಸ್. ಜಾದವ್, ಎಸ್.ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಂ.ಎನ್. ಸಿಳ್ಳಿನ್, ಗೀತಾ ಶಿಂಧೆ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಂ.ಎಸ್. ಧರ್ಮಾಯತ, ಎಸ್.ಎ. ಚೋಳಿನ, ಪಿ.ಎಸ್. ಅಂಗಡಿ, ಪದ್ಮಾವತಿ ಅಂಬಿಗೇರ, ಶ್ವೇತಾ ಹಿರೇಮಠ, ನೇತ್ರಾ ಸೋಬಾನದ, ನಂದಿತಾ ರಾಜೂರ ಸೇರಿದಂತೆ ಸಿಬ್ಬಂದಿ ಇದ್ದರು.

ಶ್ರೀಮತಿ ರತ್ನಾ ಯಳಮಲಿ ನಿಧನ; ನೇತ್ರದಾನದಿಂದ ಸಾರ್ಥಕತೆ

0

ರತ್ನಾ ಸಿ.ಯಳಮಲಿ ನಿಧನ; ನೇತ್ರದಾನ

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ರಾಜೀವ ಗಾಂಧಿ ನಗರದ ಈಶ್ವರ ಬಡಾವಣೆಯ (4ನೇ ಅಡ್ಡರಸ್ತೆ) ನಿವಾಸಿ ಶ್ರೀಮತಿ ರತ್ನಾ ಸಿದ್ಧರಾಮಪ್ಪ ಯಳಮಲಿ (82) ಅವರು ಫೆ. 20ರಂದು ಸಂಜೆ 4 ಗಂಟೆಗೆ ನಿಧನರಾದರು. ಮೃತರಿಗೆ ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳಿದ್ದಾರೆ. ಗದಗ ಜಿಲ್ಲಾ ಗೃಹರಕ್ಷಕ ದಳದ ಮಾಜಿ ಸಮಾದೇಶಕರಾದ ವಿಶ್ವನಾಥ ಯಳಮಲಿ ಮೃತರ ಪುತ್ರರಲ್ಲಿ ಓರ್ವರಾಗಿದ್ದಾರೆ.

ದೇಹದಾನ ಹಾಗೂ ನೇತ್ರದಾನದ ಪತ್ರಕ್ಕೆ ಸ್ವಯಂಸ್ಫೂರ್ತಿಯಿಂದ ಒಪ್ಪಿಗೆಯ ಸಹಿ ಮಾಡಿದ್ದ ಶ್ರೀಮತಿ ರತ್ನಾ ಅವರ ಇಚ್ಛೆಯಂತೆ ನೇತ್ರದಾನ ಮಾತ್ರ ಮಾಡಲು ಅವಕಾಶವಾಯಿತು. ಫೆ. 21ರಂದು ಶನಿವಾರ ಮುಂಜಾನೆ 11 ಗಂಟೆಗೆ ಈಶ್ವರ ಬಡಾವಣೆಯ ಮೃತರ ನಿವಾಸದಿಂದ ಅಂತ್ಯಯಾತ್ರೆ ಹೊರಡಲಿದೆ.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‌ನ ಪ್ರೇರಣೆಯಿಂದಾಗಿ ಕುಟುಂಬಸ್ಥರು ಮೃತರ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದು, ಗದಗ ಜಿಮ್ಸ್‌ನ ನೇತ್ರ ತಜ್ಞರ ತಂಡ ನೇತ್ರದಾನ ಪ್ರಕ್ರಿಯೆ ಕೈಗೊಂಡರು. ಈ ಸಂದರ್ಭದಲ್ಲಿ ವಿಶ್ವನಾಥ ಯಳಮಲಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ರಮೇಶ್ ಶಿಗ್ಲಿ ಹಾಗೂ ಕುಟುಂಬದ ಸದಸ್ಯರಿದ್ದರು.

ಮೃತ ವ್ಯಕ್ತಿಯ ನೇತ್ರದಾನ ಮಾಡಿ ಮಾನವೀಯತೆ ಮೆರೆಯುವ ಮೂಲಕ ಅಂಧರು ಕಣ್ತೆರೆಯುವಂತೆ ನೇತ್ರದಾನವನ್ನು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಅಂಗರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡುಕೊಳ್ಳುವ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕ್ಲಬ್ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಯಾಕೆ ಹೀಗಾಗುತ್ತೆ; ಜೋಶಿ ಪ್ರಶ್ನೆ!

0

ರಾಯಚೂರು:- ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ನಿಮ್ಮ ಸರ್ಕಾರ ಬಂದಾಗಲೇ ಯಾಕೇ ಹೀಗಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

ಬಾಂಬ್ ಹಾಕಿದವರನ್ನು ಬ್ರದರ್ಸ್ ಅಂತೀರಿ. ಗಣೇಶನ ವಿಗ್ರಹಕ್ಕೂ ಮಸೀದಿಯಿಂದ ಕಲ್ಲು ಬಿತ್ತು. ಶಿವಾಜಿ ಮೆರವಣಿಗೆಯಲ್ಲೂ ಮಸೀದಿಯಿಂದ ಕಲ್ಲು ಬೀಳುತ್ತೆ. ಕಲ್ಲು ಹೊಡೆದವರನ್ನ ಅರೆಸ್ಟ್ ಮಾಡೊದಿಲ್ಲ. ಅಕ್ರಮ ಮಸೀದಿ ಎಂದವರ ಮೇಲೆ ಕೇಸ್ ಹಾಕಿದ್ರಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಹೀಗೆ ಆಗಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪೊಲೀಸರ ಮೇಲೆ ಹಿಡಿತ ಇಟ್ಟುಕೊಂಡಿದೆ. ಕಾಂಗ್ರೆಸ್ ತುಷ್ಟಿಕರಣದಿಂದ ಹೀಗೆ ಆಗುತ್ತಿದೆ. ತುಷ್ಟಿಕರಣ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತವೆ. ಪೊಲೀಸ್ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದಕ್ಕೆ ಇಂತಹ ಘಟನೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ವಜ್ಞರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಂತ ಕವಿ ಸರ್ವಜ್ಞರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗೆ ಶ್ರಮಿಸಬೇಕೆಂದು ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್ ಹೇಳಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜರುಗಿದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಕವಿ ಸರ್ವಜ್ಞರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅವರ ಆದರ್ಶಗಳನ್ನು ಪಾಲಿಸಬೇಕು. ಈಗಿನ ಮಕ್ಕಳಿಗೆ ಸರ್ವಜ್ಞರ ವಚನಗಳು, ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಸರ್ವಜ್ಞರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕು, ಮೂಢನಂಬಿಕೆಗಳನ್ನು ಹೋಗಲಾಡಿಸಿ ಲೋಕಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕು ಎಂದರು.

ಶಿವಾನಂದ ಚಕ್ರಸಾಲಿ ಉಪನ್ಯಾಸ ನೀಡಿ, ಸರ್ವಜ್ಞನ ವಿಚಾರಗಳು ಇಂದಿಗೂ ಪ್ರಸ್ತುತ. ಸಮಾಜದಲ್ಲಿನ ಜಾತಿ ಪದ್ಧತಿ, ಧಾರ್ಮಿಕ ಅಸಹಿಷ್ಣುತೆ, ಮತ್ತು ಮೌಲ್ಯಗಳ ಕುಸಿತವನ್ನು ಸರಿಪಡಿಸಲು ಸರ್ವಜ್ಞನ ತ್ರಿಪದಿಗಳು ದಿಕ್ಸೂಚಿಯಂತೆ ಇಂದಿಗೂ ಕೆಲಸ ಮಾಡುತ್ತವೆ. ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪುಸ್ತಕದ ಜ್ಞಾನ ನೀಡುತ್ತಿದೆ. ಆದರೆ ಸರ್ವಜ್ಞ ಹೇಳಿದ ಅನುಭವದ ಶಿಕ್ಷಣ ನಮಗೆ ಬೇಕಾಗಿದೆ. `ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಅವರ ಮಾತು ಇಂದಿನ ಒತ್ತಡದ ಬದುಕಿಗೆ ಮತ್ತು ಆರೋಗ್ಯಕ್ಕೆ ಸಂಜೀವಿನಿಯಂತಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ವಿ.ಆರ್. ಕುಂಬಾರ, ಮುರಿಗೆಪ್ಪ ಕೇರಿ, ಯಲ್ಲಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಶರಣಮ್ಮ, ಈಶ್ವರಪ್ಪ ಕುಂಬಾರ, ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ವೀರಣ್ಣ ಅಂಗಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಚಕ್ರಸಾಲಿ ಮಾತನಾಡಿ, ಸಂತ ಕವಿ ಸರ್ವಜ್ಞ ಸುಮಾರು 16ನೇ ಶತಮಾನದಲ್ಲಿ ಜನಿಸಿದವರು. ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಅಬಲೂರು ಗ್ರಾಮದವರು. ತಂದೆ ಬಸವರಸ ಮತ್ತು ತಾಯಿ ಮಾಳೆಯ ಪುತ್ರನಾಗಿ ಜನಿಸಿದ ಇವರ ಮೂಲ ಹೆಸರು ಪುಷ್ಪದತ್ತ. ಲೋಕಸಂಚಾರ ಮಾಡುತ್ತಾ, ತಮ್ಮ ಅನುಭವದೊಂದಿಗೆ ಬೆಂದು, ಜ್ಞಾನವನ್ನೇ ಉಸಿರಾಗಿಸಿಕೊಂಡು ಅವರು ‘ಸರ್ವಜ್ಞ’ರಾಗಿ ರೂಪುಗೊಂಡರು.

ಬಾಲ್ ಎಂದು ನಾಡಬಾಂಬ್ ಎಸೆದ ಬಾಲಕ; ಬ್ಯಾಟ್‌ ಬೀಸಿದಾಗ ಸ್ಫೋಟ, ಓರ್ವನಿಗೆ ಗಾಯ!

0

ಮಂಗಳೂರು:- ಕಾಡುಹಂದಿ ಬೇಟೆಗೆ ಆಡಲು ಇಟ್ಟಿದ್ದ ನಾಡಬಾಂಬ್‌ ಅನ್ನು ಬಾಲ್‌ ಎಂದು ತಿಳಿದು ಬಾಲಕರಿಬ್ಬರು ಅದರಲ್ಲಿ ಕ್ರಿಕೆಟ್‌ ಆಡಿದ್ದು, ಈ ವೇಳೆ ಬಾಂಬ್‌ ಸ್ಫೋಟಗೊಂಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಜರುಗಿದೆ.

ಓರ್ವ ಬಾಲಕ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಅಭೀಶ್ ಎಂದು ಗುರುತಿಸಲಾಗಿದೆ. ಬಾಲಕನಿಗೆ ಸರ್ಕಾರಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ.

ಅಭೀಶ್ ಹಾಗೂ ಮತ್ತೊಬ್ಬ ಬಾಲಕ ಮನೆಯ ಮುಂಭಾಗದಲ್ಲಿ ಕ್ರಿಕೆಟ್ ಆಡುವ ವೇಳೆ ಕಾಡುಹಂದಿಗೆ ಇಟ್ಟಿದ್ದ ಬಾಲ್‌ ತರಹದ ಸ್ಫೋಟಕ ಸಿಕ್ಕಿದೆ. ಅದನ್ನು ಅಭೀಶ್ ಗೆಳೆಯ ಚೆಂಡೆಂದು ತಿಳಿದು ಹಾಕಿದ್ದಾನೆ. ಬ್ಯಾಟ್‌ನಿಂದ ಅದಕ್ಕೆ ಹೊಡೆದಾಗ ಅದು ಸ್ಫೋಟವಾಗಿದೆ. ಸ್ಟೋಟ ಅಷ್ಟೊಂದು ತೀವ್ರತೆ ಇಲ್ಲದ ಕಾರಣ, ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.

ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

error: Content is protected !!