Home Blog Page 209

ಜಿ.ಎಸ್. ಪಾಟೀಲ್ ಸ್ಪೀಕರ್, ಪೊನ್ನಣ್ಣ ಡೆಪ್ಯುಟಿ ಸ್ಪೀಕರ್; ಸಲೀಂ ಅಹ್ಮದ್, ಉಮಾಶ್ರೀಗೆ ವಿಧಾನ ಪರಿಷತ್ ಜವಾಬ್ದಾರಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ನೂತನ ಸಚಿವರು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಜೊತೆಗೆ ವಿಧಾನಸಭೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳಿಗೂ ಎಐಸಿಸಿ ಅಂತಿಮ ನಿರ್ಧಾರ ಕೈಗೊಂಡಿದೆ.

ವಿಧಾನಸಭೆ ಸ್ಪೀಕರ್ ಆಗಿ ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ವಿಧಾನ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ಅವರು ಈಗಾಗಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನು ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿದ್ದ ರುದ್ರಪ್ಪ ಲಮಾಣಿ ಅವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ತಮ್ಮ ಹಾಲಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ವಿಧಾನ ಪರಿಷತ್ ಸಭಾಪತಿಯಾಗಿ ಪ್ರಸ್ತುತ ಬಸವರಾಜ ಹೊರಟ್ಟಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಐಸಿಸಿ ಹೊಸ ನಿರ್ಧಾರದ ಹಿನ್ನೆಲೆಯಲ್ಲಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ಸ್ಥಾನ ತ್ಯಜಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ವರದಿಗಳನ್ನು ಹೊರಟ್ಟಿ ನಿರಾಕರಿಸಿದ್ದರು.

ಬಸವರಾಜ ಹೊರಟ್ಟಿ ಅವರು ಬಿಜೆಪಿ ಬೆಂಬಲದಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಬಹುಮತದ ಕೊರತೆ ಇರುವ ಸಂದರ್ಭದಲ್ಲಿ ಸಭಾಪತಿ ಸ್ಥಾನದಿಂದ ಹಿಂದೆ ಸರಿಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ಕೆಲವು ನಾಯಕರು ವ್ಯಕ್ತಪಡಿಸಿದ್ದರು.

ಇದೇ ವೇಳೆ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ತೀರ್ಪು ನೀಡಿದ ಬಳಿಕ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಹೀಗಾಗಿ ತೆರವಾಗಿರುವ ಉಪಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.

ವಿಚ್ಛೇದನದ ಬಳಿಕ ಖಿನ್ನತೆಗೆ ಒಳಗಾಗಿದ್ದ ಮನೋವೈದ್ಯೆ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ!

0

ಲಕ್ನೋ: ಪತಿಯಿಂದ ವಿಚ್ಛೇದನ ಪಡೆದ ಬಳಿಕ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದ ಮನೋವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಮೃತರನ್ನು 40 ವರ್ಷದ ಡಾ. ಹೆಮಿಕಾ ಅಗರ್ವಾಲ್ ಎಂದು ಗುರುತಿಸಲಾಗಿದೆ. ರಾಜ್ ನಗರ ಎಕ್ಸ್‌ಟೆನ್ಷನ್‌ನಲ್ಲಿರುವ ಆಫೀಸರ್ಸ್ ಸಿಟಿ-2 ಅಪಾರ್ಟ್‌ಮೆಂಟ್ನ ಐದನೇ ಮಹಡಿಯಿಂದ ಬಿದ್ದು ಅವರು ಮೃತಪಟ್ಟಿದ್ದಾರೆ.

ಘಟನೆ ಭಾನುವಾರ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಡಾ. ಹೆಮಿಕಾ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕುಟುಂಬದವರ ಮಾಹಿತಿ ಪ್ರಕಾರ, ಸುಮಾರು ಒಂದೂವರೆ ವರ್ಷದ ಹಿಂದೆ ಡಾ. ಹೆಮಿಕಾ ಅವರಿಗೆ ವಿಚ್ಛೇದನವಾಗಿತ್ತು. ಬಳಿಕ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅವರ ತಂದೆ ಖ್ಯಾತ ಮನೋವೈದ್ಯ ಡಾ. ಆರ್. ಚಂದ್ರ ಅವರು, ಮಗಳು ಕಳೆದ ಕೆಲವು ತಿಂಗಳುಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಇದುವರೆಗೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿರುವ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ನೀಡಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ಗುಡ್ ನ್ಯೂಸ್; ಸಂಪೂರ್ಣ ಗ್ರಾಚ್ಯುಟಿ ತಡೆಹಿಡಿಯಲು ಸಾಧ್ಯವಿಲ್ಲ – ಸುಪ್ರೀಂ ಸ್ಪಷ್ಟನೆ

0

ನವದೆಹಲಿ: ಗ್ರಾಚ್ಯುಟಿ (Gratuity) ಹಣವನ್ನು ತಡೆಹಿಡಿಯುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಉದ್ಯೋಗಿಗಳ ಹಕ್ಕುಗಳಿಗೆ ಬಲ ನೀಡಿದೆ. ಯಾವುದೇ ಸಮರ್ಪಕ ಕಾರಣವಿಲ್ಲದೆ ಕಂಪನಿಗಳು ಉದ್ಯೋಗಿಯ ಸಂಪೂರ್ಣ ಗ್ರಾಚ್ಯುಟಿ ಮೊತ್ತವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಉದ್ಯೋಗಿಯ ನಿರ್ಲಕ್ಷ್ಯ, ಕರ್ತವ್ಯ ಲೋಪ ಅಥವಾ ದುರ್ವರ್ತನೆಯಿಂದ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಿರುವುದು ದಾಖಲೆಗಳ ಮೂಲಕ ಸಾಬೀತಾದರೆ ಮಾತ್ರ ಆ ನಷ್ಟಕ್ಕೆ ಸಮಾನವಾದ ಮೊತ್ತವನ್ನು ಗ್ರಾಚ್ಯುಟಿ ಹಣದಿಂದ ಕಡಿತಗೊಳಿಸಬಹುದು. ಆದರೆ, ಸಂಪೂರ್ಣ ಗ್ರಾಚ್ಯುಟಿ ಮೊತ್ತವನ್ನು ಜಪ್ತಿ ಮಾಡುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ.

ಉದಾಹರಣೆಗೆ, ಉದ್ಯೋಗಿಯಿಂದ ಕಂಪನಿಗೆ ₹5,000 ನಷ್ಟವಾಗಿದ್ದು, ಆತನಿಗೆ ₹50,000 ಗ್ರಾಚ್ಯುಟಿ ಬರಬೇಕಿದ್ದರೆ, ಕಂಪನಿ ₹5,000 ಮಾತ್ರ ಕಡಿತಗೊಳಿಸಿ ಉಳಿದ ₹45,000 ಹಣವನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಗ್ರಾಚ್ಯುಟಿ ಪಾವತಿ ಕಾಯ್ದೆ-1972 (Payment of Gratuity Act, 1972) ಪ್ರಕಾರ, ಉದ್ಯೋಗಿಯ ತಪ್ಪಿನಿಂದ ಕಂಪನಿಯ ಆಸ್ತಿಗೆ ಹಾನಿ ಅಥವಾ ಆರ್ಥಿಕ ನಷ್ಟ ಉಂಟಾದರೆ, ಆ ನಷ್ಟದ ಮೊತ್ತವನ್ನು ಮಾತ್ರ ವಸೂಲಿ ಮಾಡಬಹುದು. ಸಂಪೂರ್ಣ ಗ್ರಾಚ್ಯುಟಿ ಹಣವನ್ನು ತಡೆಹಿಡಿಯಲು ಅವಕಾಶವಿಲ್ಲ.

ಇದರ ಜೊತೆಗೆ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಉದ್ಯೋಗಿಗೆ ನೋಟಿಸ್ ನೀಡುವುದು ಹಾಗೂ ಅವರ ವಿವರಣೆಯನ್ನು ಆಲಿಸುವುದು ಕಡ್ಡಾಯವಾಗಿದೆ. ಉದ್ಯೋಗಿಯು ತನ್ನ ಪರವಾಗಿ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಸಮಯ ಕೋರಿದರೆ, ಅದಕ್ಕೂ ಸೂಕ್ತ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಉದ್ಯೋಗಿಯನ್ನು ಹಿಂಸಾಚಾರ, ನೈತಿಕ ಭ್ರಷ್ಟಾಚಾರ, ಗಂಭೀರ ದುರ್ವರ್ತನೆ ಅಥವಾ ಗಂಭೀರ ಅಪರಾಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿದ ಸಂದರ್ಭಗಳಲ್ಲಿ ಮಾತ್ರ ಸಂಪೂರ್ಣ ಗ್ರಾಚ್ಯುಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ಮಹತ್ವದ ರಕ್ಷಣೆ ಒದಗಿಸಿದೆ. ವೈಯಕ್ತಿಕ ದ್ವೇಷ ಅಥವಾ ಸಣ್ಣಪುಟ್ಟ ಕಾರಣಗಳನ್ನು ನೆಪವಿಟ್ಟು ಗ್ರಾಚ್ಯುಟಿ ಹಣವನ್ನು ತಡೆಹಿಡಿಯುವ ಕಂಪನಿಗಳ ಕ್ರಮಕ್ಕೆ ನ್ಯಾಯಾಲಯ ಸ್ಪಷ್ಟವಾದ ತಡೆ ನೀಡಿದ್ದು, ಉದ್ಯೋಗಿಗಳ ಕಾನೂನುಬದ್ಧ ಹಕ್ಕುಗಳನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಎರಡು ದಿನಗಳ ಬಳಿಕ ಪತ್ತೆ

ಬಂಟ್ವಾಳ: ಧಾರಾಕಾರ ಮಳೆಯ ನಡುವೆ ಮಿನಿ ಸೇತುವೆ ದಾಟುತ್ತಿದ್ದ ವೇಳೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಜೀವನ್ ಪಿಂಟೊ (48) ಅವರ ಮೃತದೇಹ ಅರಳ ಗ್ರಾಮದ ಪಂಬದಗದ್ದೆ ಬಳಿ ಪತ್ತೆಯಾಗಿದ್ದು, ಎರಡು ದಿನಗಳ ಶೋಧ ಕಾರ್ಯಾಚರಣೆ ದುರಂತ ಅಂತ್ಯ ಕಂಡಿದೆ.

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿಯಾಗಿದ್ದ ಜೀವನ್ ಪಿಂಟೊ ಆಗಸ್ಟ್ 1ರ ರಾತ್ರಿ ಮಾವನ ಮನೆಗೆ ನಡೆದುಕೊಂಡು ತೆರಳಿದ್ದರು. ಮಳೆ ಮತ್ತು ಕತ್ತಲಿನ ನಡುವೆಯೇ ಟಾರ್ಚ್ ಹಿಡಿದು ಮಿನಿ ಸೇತುವೆ ದಾಟುತ್ತಿದ್ದ ವೇಳೆ ಅವರು ನಾಪತ್ತೆಯಾಗಿದ್ದರು. ಬಳಿಕ ತೋಡಿನ ಬಳಿ ಅವರ ಚಪ್ಪಲಿ ಮತ್ತು ಟಾರ್ಚ್ ಪತ್ತೆಯಾಗಿದ್ದರಿಂದ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ತಂಡ ಹಾಗೂ ಸ್ಥಳೀಯರು ನಿರಂತರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ನೀರಿನ ಹರಿವು ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾದರೂ ಹುಡುಕಾಟ ಮುಂದುವರಿಸಲಾಗಿತ್ತು.

ಸೋಮವಾರ ಬೆಳಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪ ಜೀವನ್ ಪಿಂಟೊ ಅವರ ಮೃತದೇಹ ಪತ್ತೆಯಾಗಿದ್ದು, ಎನ್‌ಡಿಆರ್‌ಎಫ್ ತಂಡ ಮೃತದೇಹವನ್ನು ಮೇಲಕ್ಕೆತ್ತಿ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ಘಟನೆಯಿಂದ ಕುಟುಂಬಸ್ಥರು ತೀವ್ರ ದುಃಖಕ್ಕೊಳಗಾಗಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮಳೆಗಾಲದಲ್ಲಿ ಹೊಳೆ, ಹಳ್ಳ ಹಾಗೂ ತೋಡುಗಳ ಬಳಿ ಅನಗತ್ಯವಾಗಿ ಓಡಾಟ ಮಾಡದಂತೆ ಹಾಗೂ ನೀರಿನ ಹರಿವು ಹೆಚ್ಚಿರುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಚಾಮುಂಡೇಶ್ವರಿ ಕರಗ ಮಹೋತ್ಸವ ಆರಂಭ: ದೇವಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ ಶಾಸಕ ಇಕ್ಬಾಲ್ ಹುಸೇನ್

0

ರಾಮನಗರ: ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದ್ದು, ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸಿದರು. ರಾಮನಗರದಲ್ಲಿ ಸಾಂಸ್ಕೃತಿಕ ವೈಭವದೊಂದಿಗೆ ಮಹೋತ್ಸವ ಆರಂಭವಾಗಿದೆ.

ಮಹೋತ್ಸವದ ಅಂಗವಾಗಿ ನಗರದ 16 ದೇವಾಲಯಗಳಿಗೆ ಮಡಿಲಕ್ಕಿ ಸಲ್ಲಿಸಿದ ಶಾಸಕ ಇಕ್ಬಾಲ್ ಹುಸೇನ್, ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರಿದರು. ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿದ್ದರೂ ಪ್ರತಿವರ್ಷ ಈ ಸಂಪ್ರದಾಯವನ್ನು ಮುಂದುವರಿಸುತ್ತಿರುವುದು ಗಮನಾರ್ಹವಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಟ ಕಿಚ್ಚ ಸುದೀಪ್, ನಿನಾಸಂ ಸತೀಶ್, ಗಿಲ್ಲಿ ಚಿತ್ರದ ನಟ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿ ಮನರಂಜನೆ ನೀಡಲಿದ್ದಾರೆ.

ಮಂಗಳವಾರ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಹಲವು ಶಾಸಕರು ಪಾಲ್ಗೊಳ್ಳಲಿದ್ದಾರೆ.

ಮಹೋತ್ಸವ ಸುಗಮವಾಗಿ ನಡೆಯಲು 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರಾದ್ಯಂತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ʼಗೆ ಖುಲಾಸೆ!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಬ್ರಿಜ್‌ಭೂಷಣ್ ಶರಣ್ ಸಿಂಗ್ ಹಾಗೂ ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿದೆ.

ಆರು ಮಂದಿ ಮಹಿಳಾ ಕುಸ್ತಿಪಟುಗಳು ನೀಡಿದ್ದ ದೂರುಗಳ ಆಧಾರದ ಮೇಲೆ ದಾಖಲಾದ ಪ್ರಕರಣದಲ್ಲಿ ಸುಮಾರು ಎರಡು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿತ್ತು. ಸಾಕ್ಷ್ಯಾಧಾರಗಳು ಹಾಗೂ ಎರಡೂ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್‌ಭೂಷಣ್ ಶರಣ್ ಸಿಂಗ್, “ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ನ್ಯಾಯಾಲಯದ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇನೆ” ಎಂದು ಪ್ರತಿಕ್ರಿಯಿಸಿದರು.

2023ರಲ್ಲಿ ಒಲಿಂಪಿಯನ್ ಹಾಗೂ ಅಂತರರಾಷ್ಟ್ರೀಯ ಪದಕ ವಿಜೇತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವು ಕ್ರೀಡಾಪಟುಗಳು ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಗಳ ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ (POCSO) ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.

ರಾಜಕೀಯದ ಮೇಲೂ ಬೀರಿತ್ತು ಪರಿಣಾಮ

ಪ್ರಕರಣದ ಹಿನ್ನೆಲೆಯಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕೈಸರ್‌ಗಂಜ್ ಕ್ಷೇತ್ರದಿಂದ ಬ್ರಿಜ್‌ಭೂಷಣ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಬದಲಾಗಿ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದು, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

ಮುಂದೇನು?

ನ್ಯಾಯಾಲಯದಿಂದ ಖುಲಾಸೆ ದೊರೆತಿರುವ ಹಿನ್ನೆಲೆಯಲ್ಲಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ. ಮತ್ತೊಂದೆಡೆ, ದೂರು ನೀಡಿದ್ದ ಮಹಿಳಾ ಕುಸ್ತಿಪಟುಗಳು ಅಥವಾ ಸಂಬಂಧಪಟ್ಟ ಪಕ್ಷಗಳು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯ ಕುರಿತೂ ಚರ್ಚೆಗಳು ನಡೆಯುತ್ತಿವೆ.

ಈ ವಿವಾದದ ಬಳಿಕ ಭಾರತೀಯ ಕುಸ್ತಿ ಫೆಡರೇಶನ್ ಆಡಳಿತದಲ್ಲಿ ಹಲವು ಬದಲಾವಣೆಗಳು ನಡೆದಿದ್ದು, ಜಾಗತಿಕ ಕುಸ್ತಿ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಲಾಗಿತ್ತು.

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ತೆರೆ; ಇಂದು ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ, ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು: ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದೆ. ಕಾವೇರಿ ನೀರು ಹಂಚಿಕೆ ವಿವಾದ, ಪ್ರವಾಹ ಪರಿಸ್ಥಿತಿ ಹಾಗೂ ದೆಹಲಿಯಲ್ಲಿ ನಡೆದ ಸರಣಿ ಸಭೆಗಳ ನಡುವೆ ನಡೆದ ರಾಜಕೀಯ ಬೆಳವಣಿಗೆಗಳಿಗೆ ಅಂತ್ಯ ಹಾಡಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಸಚಿವ ಸ್ಥಾನಕ್ಕಾಗಿ ಆಡಳಿತ ಪಕ್ಷದ ಶಾಸಕರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ, ಪ್ರಾದೇಶಿಕ ಸಮೀಕರಣ ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದೆ.

ಆರಂಭದಲ್ಲಿ ಹಲವು ಹಿರಿಯ ನಾಯಕರ ಹೆಸರುಗಳು ಸಚಿವ ಸ್ಥಾನಕ್ಕೆ ಕೇಳಿಬಂದಿದ್ದರೂ, ಕೊನೆಗೆ ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಲ್ಲಿ ಹೊಸ ಹಾಗೂ ಅನುಭವಿ ಮುಖಗಳಿಗೆ ಅವಕಾಶ ನೀಡಲಾಗಿದೆ. ಪ್ರಮಾಣವಚನ ಸಮಾರಂಭದ ಬಳಿಕ ಖಾತೆ ಹಂಚಿಕೆ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಸಚಿವ ಸಂಪುಟ ಸೇರಲಿರುವ ನೂತನ ಸಚಿವರು

  • ಪಿ.ಎಂ. ನಾರಾಯಣಸ್ವಾಮಿ
  • ಶಿವರಾಜ್ ತಂಗಡಗಿ
  • ರುದ್ರಪ್ಪ ಲಮಾಣಿ
  • ಟಿ. ರಘುಮೂರ್ತಿ
  • ಬಿ. ನಾಗೇಂದ್ರ
  • ಜಮೀರ್ ಅಹ್ಮದ್ ಖಾನ್
  • ರಿಜ್ವಾನ್ ಅರ್ಷದ್
  • ಸಂತೋಷ್ ಲಾಡ್
  • ಮಧು ಬಂಗಾರಪ್ಪ
  • ಪುಟ್ಟರಂಗಶೆಟ್ಟಿ
  • ಮಂಕಾಳ್ ವೈದ್ಯ
  • ಅಜಯ್ ಸಿಂಗ್
  • ಚೆಲುವರಾಯಸ್ವಾಮಿ
  • ಎಂ. ಶಿವಲಿಂಗೇಗೌಡ
  • ಹೆಚ್.ಸಿ. ಬಾಲಕೃಷ್ಣ
  • ಶಾಂತವೀರೇಗೌಡ
  • ವಿಜಯಾನಂದ ಕಾಶಪ್ಪನವರ್
  • ಲಕ್ಷ್ಮಣ್ ಸವದಿ
  • ಬಸವರಾಜ್ ರಾಯರೆಡ್ಡಿ

ಸಚಿವರ ಪ್ರಮಾಣವಚನದ ಬಳಿಕ ಖಾತೆ ಹಂಚಿಕೆ ಹೇಗಿರಲಿದೆ, ಯಾವ ಸಚಿವರಿಗೆ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮನೆ ಮಾಡಿದೆ. ಹೊಸ ಸಚಿವರ ಸೇರ್ಪಡೆಯೊಂದಿಗೆ ರಾಜ್ಯ ಸರ್ಕಾರದ ಆಡಳಿತಕ್ಕೆ ಹೊಸ ಚೈತನ್ಯ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತಕ್ಕೆ; ಡಿ.ಕೆ. ಶಿವಕುಮಾರ್ ಕೈ ಸೇರಿದ ಸಂಭಾವ್ಯ ಸಚಿವರ ಪಟ್ಟಿ?

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಸಿದ್ಧತೆ ನಡೆಸಿದ್ದು, ನೂತನ ಸಚಿವರ ಪಟ್ಟಿ ಇಂದು ಅಥವಾ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ. ಇದೇ ವೇಳೆ, ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆಯೂ ಇದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಲ್ಲಿಸಿರುವ ಪ್ರತ್ಯೇಕ ಪಟ್ಟಿಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಬೆಳಗ್ಗೆ ಮಹತ್ವದ ಸಭೆ ನಡೆಸಿದೆ ಎನ್ನಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮ ಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ಸಿದ್ಧಪಡಿಸಿರುವ ಸಂಭಾವ್ಯ ಸಚಿವರ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಸೇರಿದೆ ಎನ್ನಲಾಗುತ್ತಿದ್ದು, ಅಧಿಕೃತ ಘೋಷಣೆಗೆ ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ.

ಇದೇ ವೇಳೆ, ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರಿಗೆ ವಿಧಾನಸಭೆ ಸ್ಪೀಕರ್ ಸ್ಥಾನ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಜೂನ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ 13 ಮಂದಿ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮೂಲಕ ಇನ್ನಷ್ಟು ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.

ಸಂಭಾವ್ಯ ಸಚಿವರ ಪಟ್ಟಿ

  • ಚೆಲುವರಾಯಸ್ವಾಮಿ
  • ಬಾಲಕೃಷ್ಣ
  • ಜಮೀರ್ ಅಹ್ಮದ್ ಖಾನ್
  • ಲಕ್ಷ್ಮಣ ಸವದಿ
  • ಗಾಯತ್ರಿ ಶಾಂತೇಗೌಡ
  • ಮಧು ಬಂಗಾರಪ್ಪ
  • ಅಜಯ್ ಸಿಂಗ್
  • ಶಿವರಾಜ್ ತಂಗಡಗಿ
  • ರುದ್ರಪ್ಪ ಲಮಾಣಿ
  • ರಘುಮೂರ್ತಿ
  • ರಿಜ್ವಾನ್ ಅರ್ಷದ್
  • ಶಿವಲಿಂಗೇಗೌಡ
  • ಪುಟ್ಟರಂಗಶೆಟ್ಟಿ
  • ಸಂತೋಷ್ ಲಾಡ್
  • ವಿಜಯಾನಂದ ಕಾಶಪ್ಪನವರ್

ಸಂಭಾವ್ಯ ವಿಧಾನಸಭೆ ಹುದ್ದೆಗಳು

  • ಜಿ.ಎಸ್. ಪಾಟೀಲ್ – ಸ್ಪೀಕರ್
  • ಪೊನ್ನಣ್ಣ – ಉಪಸಭಾಧ್ಯಕ್ಷ (ಡೆಪ್ಯುಟಿ ಸ್ಪೀಕರ್)

ಮನೆ ಮಾಲಕಿ ಸ್ನಾನದ ವಿಡಿಯೋ ರಹಸ್ಯ ಚಿತ್ರೀಕರಣ: ಸಾಫ್ಟ್‌ವೇರ್ ಎಂಜಿನಿಯರ್ ಬಂಧನ

0

ಬೆಂಗಳೂರು: ಬಾಡಿಗೆ ಮನೆಯಲ್ಲೇ ವಾಸವಿದ್ದ ಸಾಫ್ಟ್‌ವೇರ್ ಎಂಜಿನಿಯರ್, ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಖಾಸಗಿತನಕ್ಕೆ ಧಕ್ಕೆ ತರುವ ಮತ್ತೊಂದು ಗಂಭೀರ ಪ್ರಕರಣವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಆತ ಕಳೆದ ಐದು ವರ್ಷಗಳಿಂದ ಅದೇ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದನು. ಜುಲೈ 27ರಂದು ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯ ಬಳಿ ಯಾರೋ ಮೊಬೈಲ್ ಹಿಡಿದು ನಿಂತಿರುವ ಅನುಮಾನ ಅವರಿಗೆ ಮೂಡಿತ್ತು.

ಸಂದೇಹ ವ್ಯಕ್ತವಾದ ಬಳಿಕ ಮನೆ ಮಾಲಕಿ ಪಕ್ಕದ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಆರೋಪಿ ಮಂಜುನಾಥ್ ಅಲ್ಲಿಂದ ಓಡಿ ಹೋಗುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ತಕ್ಷಣವೇ ಬೇಗೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆತನ ಮೊಬೈಲ್ ಪರಿಶೀಲಿಸಲಾಗಿದೆ. ಪರಿಶೀಲನೆ ವೇಳೆ ಮನೆ ಮಾಲಕಿ ಸ್ನಾನ ಮಾಡುತ್ತಿದ್ದ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಇಂತಹ ವಿಡಿಯೋಗಳನ್ನು ಇನ್ನೆಲ್ಲೆಡೆ ಬಳಸಿದ್ದಾನೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಾನಾ ಪಟೋಲೆ ಪಾದ ಪೂಜೆ ವಿಡಿಯೋ ವೈರಲ್! ‘ಕಾಂಗ್ರೆಸ್ ಸಂಸ್ಕೃತಿ’ ಎಂದು ಬಿಜೆಪಿ ವಾಗ್ದಾಳಿ

0

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಅವರ ಪಾದಗಳನ್ನು ಇಬ್ಬರು ಯುವಕರು ತೊಳೆದು ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದರೆ, ಇದು ಗುರು ಪೂರ್ಣಿಮೆಯ ಸಂಪ್ರದಾಯದ ಭಾಗ ಎಂದು ನಾನಾ ಪಟೋಲೆ ಸ್ಪಷ್ಟನೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ ನಾನಾ ಪಟೋಲೆ ಸೋಫಾದಲ್ಲಿ ಕುಳಿತಿರುವಾಗ ಇಬ್ಬರು ಯುವಕರು ಅವರ ಪಾದಗಳನ್ನು ತೊಳೆದು, ಹೂವು ಹಾಗೂ ಹಣ್ಣುಗಳನ್ನು ಅರ್ಪಿಸಿ ಸಾಂಪ್ರದಾಯಿಕ ಗುರು ಪೂಜೆ ನಡೆಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ಬಿಜೆಪಿ ನಾಯಕರು ಇದನ್ನು ‘ವಿಐಪಿ ಸಂಸ್ಕೃತಿ’ ಎಂದು ಟೀಕಿಸಿದ್ದಾರೆ.

ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬಾವಂಕುಳೆ ಪ್ರತಿಕ್ರಿಯಿಸಿ, ಇಂತಹ ದೃಶ್ಯಗಳು ಕಾಂಗ್ರೆಸ್ ನಾಯಕರ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಸಾರ್ವಜನಿಕ ಜೀವನದಲ್ಲಿರುವವರು ಇಂತಹ ವಿವಾದಾತ್ಮಕ ನಡೆಗಳಿಂದ ದೂರವಿರಬೇಕು ಎಂದು ವಾಗ್ದಾಳಿ ನಡೆಸಿದರು.

ಆದರೆ ಆರೋಪಗಳನ್ನು ತಳ್ಳಿಹಾಕಿರುವ ನಾನಾ ಪಟೋಲೆ, ಗುರು ಪೂರ್ಣಿಮೆಯಂದು ತಮ್ಮ ಕುಟುಂಬದ ಇಬ್ಬರು ಕಿರಿಯ ಸದಸ್ಯರು ತಮ್ಮನ್ನು ಗುರು ಎಂದು ಭಾವಿಸಿ ಸ್ವಯಂಪ್ರೇರಿತರಾಗಿ ಪಾದ ಪೂಜೆ ಮಾಡಿದರು. ಇದಕ್ಕೆ ನಾನು ಯಾರನ್ನೂ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಿಜೆಪಿಗೆ ತಿರುಗೇಟು ನೀಡಿದ ಅವರು, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಉಪದೇಶ ನೀಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ಹೇಳಿದರು. ಶ್ರೀರಾಮ ಮಂದಿರ ದೇಣಿಗೆ ವಿಚಾರವನ್ನೂ ಉಲ್ಲೇಖಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಿಡಿಯೋದಲ್ಲಿ ಕಾಣಿಸಿಕೊಂಡ ಅನಿಲ್ ಪಾಟೀಲ್ ಚಿಮೇಗಾಂವ್ಕರ್ ಹಾಗೂ ಮಾಧವರಾವ್ ಪವಳೆ ಕೂಡ ಪ್ರತಿಕ್ರಿಯಿಸಿ, ಪಟೋಲೆ ಅವರು ಪಾದ ಪೂಜೆ ಮಾಡಲು ಕೇಳಿರಲಿಲ್ಲ. ತಾವೇ ಗೌರವ ಮತ್ತು ನಂಬಿಕೆಯಿಂದ ಈ ಆಚರಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.