Home Blog Page 238

ನೀಟ್‌ ಹೆಸರಿನಲ್ಲಿ ದೇಶದ್ರೋಹಿಗಳ ಷಡ್ಯಂತ್ರ: ವಿಜಯಕುಮಾರ ಗಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ನೀಟ್‌ ಪರೀಕ್ಷೆ ವಿಚಾರವಾಗಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಜನಪ್ರಿಯತೆಗೆ ಧಕ್ಕೆ ತರಲು ನಡೆಸಿದ ರಾಜಕೀಯ ಷಡ್ಯಂತ್ರವಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನೀಟ್‌ ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದ ತಕ್ಷಣ ಕೇಂದ್ರ ಸರ್ಕಾರ ಮರು ಪರೀಕ್ಷೆ ನಡೆಸಿ, ಶೀಘ್ರ ಫಲಿತಾಂಶ ಪ್ರಕಟಿಸಿದ್ದಲ್ಲದೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದು ರಾಜಕೀಯ ಪ್ರೇರಿತ ನಡೆ ಎಂದು ಆರೋಪಿಸಿದ ಅವರು, ಪ್ರತಿಭಟನೆಯ ಹೆಸರಿನಲ್ಲಿ ಪ್ರಧಾನಿ ನಿವಾಸದ ಮುಂದೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ನೀಟ್‌ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಬಹುತೇಕರಿಗೆ ಪರೀಕ್ಷೆಯೊಂದಿಗೆ ನೇರ ಸಂಬಂಧವೇ ಇಲ್ಲ. ಕೇಂದ್ರ ಸರ್ಕಾರವನ್ನು ವಿರೋಧಿಸುವ ಉದ್ದೇಶದಿಂದ ನೀಟ್‌ ವಿಷಯವನ್ನು ಬಳಸಿಕೊಂಡು ಹಿಂಸಾತ್ಮಕ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.

ದೇಶವನ್ನು ಪ್ರಾದೇಶಿಕತೆ ಮತ್ತು ರಾಜಕೀಯ ಉದ್ದೇಶಗಳ ಹೆಸರಿನಲ್ಲಿ ವಿಭಜಿಸಲು ಕೆಲ ಶಕ್ತಿಗಳು ಯತ್ನಿಸುತ್ತಿದ್ದು, ಇಂತಹ ದುರುದ್ದೇಶದ ಪ್ರತಿಭಟನೆಗಳಿಗೆ ಜನ ಬೆಂಬಲ ನೀಡುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬ್ಬಿಗೇರಿಯಲ್ಲಿ ₹20 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (CMIAP) ಅಡಿಯಲ್ಲಿ ₹20 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು. ಇದೇ ವೇಳೆ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅನುದಾನದಲ್ಲಿ ಮಂಜೂರಾಗಿರುವ ಎರಡು ಬಸ್ ಶೆಲ್ಟರ್‌ಗಳ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಯಿತು.

ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಿಥುನ ಪಾಟೀಲ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಅವರು ಎರಡು ಬಸ್ ಶೆಲ್ಟರ್‌ಗಳನ್ನು ಮಂಜೂರು ಮಾಡಿಸಿದ್ದು, ಇದೀಗ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು.

2023ರಲ್ಲಿ ಶಾಸಕರಾದ ಬಳಿಕ ಜಿ.ಎಸ್. ಪಾಟೀಲ ಅವರು ರಸ್ತೆ, ಚರಂಡಿ, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಅಬ್ಬಿಗೇರಿ ಗ್ರಾಮದಲ್ಲಿಯೂ ಈಗಾಗಲೇ ಹಲವು ಸಿಸಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ದಿನಗಳಲ್ಲಿ ₹80 ಲಕ್ಷ ವೆಚ್ಚದ ಮತ್ತೊಂದು ಸಿಸಿ ರಸ್ತೆ ಕಾಮಗಾರಿಗೂ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದರು.

ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ನಿರ್ಮಾಣಗೊಳ್ಳುತ್ತಿರುವ ಎರಡು ಬಸ್ ಶೆಲ್ಟರ್‌ಗಳ ಕಾಮಗಾರಿ ಸುಮಾರು ಎರಡು ತಿಂಗಳೊಳಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಯಲ್ಲಾಲಿಂಗೇಶ್ವರ ಮಠದ ಬಸವರಾಜ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಪಲ್ಲೇದ, ಗುರುನಾಥ ಅವರಡ್ಡಿ, ಬಸವರಾಜ ತಳವಾರ, ಎಚ್.ಟಿ. ದ್ವಾಸಲ, ಅಂದಪ್ಪ ವೀರಾಪೂರ, ಸುರೇಶ ಬಸವರಡ್ಡೇರ, ಸಿ.ಕೆ. ಕಾಳಗಿ, ಸಕ್ರಗೌಡ ಪಾಟೀಲ, ಎಂ.ಕೆ. ಅಂಗಡಿ, ಸುರೇಶ ಶಿರೋಳ, ರಾಮನಗೌಡ ಹಲಕುರ್ಕಿ, ಮಹಾಂತೇಶ ತಳವಾರ, ಶರಣಪ್ಪಗೌಡ ಮಾದಿನೂರ, ಮಲಕಾಜಪ್ಪ ಕಲ್ಲೆಶ್ಯಾಣಿ, ಸೋಮು ಶಿರೋಳ, ಮುತ್ತಣ್ಣ ಕುಕನೂರ, ಸಿದ್ದು ಹನುಮನಾಳ, ಬಸವರಾಜ ಕಮ್ಮಾರ, ಬಾಬು ಬನ್ನಿಕೊಪ್ಪ, ಶಿವಾನಂದ ಗುಗ್ಗರಿ, ಬಸವರಾಜ ಗುಗ್ಗರಿ, ಶಶಿ ಸಂಗನಾಳ, ತಿರುಮಲಿ ಬಂಡಿವಡ್ಡರ, ರಮೇಶ ಕುಡಗುಂಟಿ, ಶಂಕರ ಐಹೋಳಿ, ಸುಭಾಷ ಕೆಂಗಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಶಾಲೆಗಳ ಸುತ್ತ ತಂಬಾಕು ಮಾರಾಟಕ್ಕೆ ಬ್ರೇಕ್: ನಿಯಮ ಉಲ್ಲಂಘಿಸಿದವರಿಗೆ ದಂಡ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣಕ್ಕೆ ಶಿರಹಟ್ಟಿಯಲ್ಲಿ ಗುರುವಾರ ಕೋಟ್ಪಾ (COTPA-2003) ಕಾಯ್ದೆಯಡಿ ವಿಶೇಷ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ ಮಾರಾಟಗಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಅಂಗಡಿಗಳನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ತಹಸೀಲ್ದಾರ್ ಕೆ. ರಾಘವೇಂದ್ರರಾವ್, ಕೋಟ್ಪಾ ಕಾಯ್ದೆಯ ಸೆಕ್ಷನ್ 6(ಬಿ) ಪ್ರಕಾರ ಶಾಲೆ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಆದರೂ ಕೆಲವು ಅಂಗಡಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಅಂತಹ ಅಂಗಡಿಗಳಿಗೆ ದಂಡ ವಿಧಿಸಿ ತಕ್ಷಣವೇ ಮಾರಾಟ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ಉಗುಳುವುದೂ ನಿಷೇಧವಾಗಿದೆ. ಹೋಟೆಲ್, ಪಾನ್‌ಬೀಡಾ ಅಂಗಡಿ, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ತಂಬಾಕು ನಿಷೇಧಿತ ಪ್ರದೇಶ ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನ ಮಾರಾಟ ನಿಷೇಧದ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ನಿಯಮ ಉಲ್ಲಂಘನೆ ಮುಂದುವರಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಂಬಾಕು ಸೇವನೆ ಮತ್ತು ಪರೋಕ್ಷ ಧೂಮಪಾನದಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಜಾಗೃತಿ ಮೂಡಿಸಲಾಯಿತು.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಗೋಪಾಲ ಸುರಪುರ, ಡಾ. ಪವನ ಪಾಯದೆ, ಎಎಸ್‌ಐ ಎಂ.ಎನ್. ಅಯ್ಯನಗೌಡರ, ಎಂ.ಹೆಚ್. ನಾಯ್ಕರ್, ಬಸಮ್ಮ ಚಿತ್ತರಗಿ, ಗಿರೀಶ್ ವೀರನಗೌಡರ, ರಮೇಶ್, ಎಸ್. ಮಹೇಶ್, ಅಭಿನಂದನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

“ಶಾಲೆ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.”

– ಕೆ. ರಾಘವೇಂದ್ರರಾವ್, ತಹಸೀಲ್ದಾರ್, ಶಿರಹಟ್ಟಿ

40 ವರ್ಷಗಳಿಂದ ಗುಡಿಸಲು… ಇನ್ನೂ ಸ್ವಂತ ಸೂರು ಇಲ್ಲ!

0
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ನಾವೂ ನಿಮ್ಮಂತೆ ಮನುಷ್ಯರಲ್ಲವೇ? ನಮಗೂ ಈ ನೆಲದಲ್ಲಿ ಬದುಕುವ ಹಕ್ಕಿಲ್ಲವೇ?” ಇದು ಲಕ್ಷ್ಮೇಶ್ವರ ಪಟ್ಟಣದ ದೊಡ್ಡೂರ ರಸ್ತೆ ಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಹತ್ತಾರು ಕುಟುಂಬಗಳ ಹೃದಯವಿದ್ರಾವಕ ಪ್ರಶ್ನೆ.
ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕಾಗಿ ತಾವು ವಾಸಿಸುತ್ತಿರುವ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ, “ನಮಗೆ ಸ್ವಂತ ಸೂರು ಕಲ್ಪಿಸದೇ ಮತ್ತೆ ಬೀದಿಗೆ ತಳ್ಳಬೇಡಿ” ಎಂದು ಗುಡಿಸಲು ನಿವಾಸಿಗಳು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮುಂದೆ ಮನವಿ ಮಾಡಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ಕಲಾಯಿ ಕೆಲಸಗಾರರು, ಸುಡಗಾಡ ಸಿದ್ಧರು, ದುರ್ಗಮುರಿಗರು, ಮೋಡಿಕಾರರು, ಕುಂಚಿಕೋರರು, ಬಗರಿಕಾರರು ಸೇರಿದಂತೆ ಹಲವು ಸಮುದಾಯಗಳ ಕುಟುಂಬಗಳು ಉದ್ಯೋಗ ಅರಸಿ ಲಕ್ಷ್ಮೇಶ್ವರಕ್ಕೆ ವಲಸೆ ಬಂದಿದ್ದವು. ಆರಂಭದಲ್ಲಿ ಹಳೆಯ ಬಸ್ ನಿಲ್ದಾಣದ ಸುತ್ತಮುತ್ತ ನೆಲೆಸಿದ್ದ ಇವರನ್ನು ಅಲ್ಲಿಂದ ತೆರವುಗೊಳಿಸಿದ ಬಳಿಕ ಹೊಸ ಬಸ್ ನಿಲ್ದಾಣದ ಹಿಂಭಾಗದ ಕಂದಾಯ ಇಲಾಖೆಯ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದಲೂ ತೆರವುಗೊಳಿಸಿದ ನಂತರ ಕಳೆದ ಹಲವು ವರ್ಷಗಳಿಂದ ದೊಡ್ಡೂರ ರಸ್ತೆ ಪಕ್ಕದ ಪುರಸಭೆ ಮೈದಾನದಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಈಗ ಇದೇ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ದೊರೆತಿರುವುದರಿಂದ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿ ಅವರನ್ನು ಕಾಡುತ್ತಿದೆ.
ಗುಡಿಸಲು ನಿವಾಸಿಗಳಲ್ಲಿ ಬಹುತೇಕರ ಬಳಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳಿದ್ದರೂ, ಸ್ವಂತ ಸೂರಿನ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಸರ್ಕಾರಗಳು ಗುಡಿಸಲು ಮುಕ್ತ ರಾಜ್ಯ, ಎಲ್ಲರಿಗೂ ಮನೆ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯಗಳ ಭರವಸೆ ನೀಡುತ್ತಾ ಬಂದರೂ, ತಮ್ಮ ಬದುಕಿನಲ್ಲಿ ಅದರ ಅನುಭವವಾಗಿಲ್ಲ ಎಂಬುದು ನಿವಾಸಿಗಳ ನೋವಾಗಿದೆ.
ಆದರೆ, ಈ ಪ್ರದೇಶದಲ್ಲಿ ವಾಸಿಸುವ ಕೆಲವರು ಬೇರೆಡೆ ಮನೆ ಹೊಂದಿದ್ದಾರೆ ಎಂಬ ಆರೋಪಗಳೂ ಕೇಳಿವ ಬಂದಿವೆ. ಹೀಗಾಗಿ ನಿಜವಾದ ನಿವೇಶನ ರಹಿತ ಹಾಗೂ ನಿರಾಶ್ರಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ಶಾಶ್ವತ ನೆಲೆ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
 “ಬಾಲ್ಯದಿಂದಲೇ ಗುಡಿಸಲಿನಲ್ಲೇ ಬದುಕುತ್ತಿದ್ದೇವೆ. ಮತದಾರರ ಚೀಟಿ, ಆಧಾರ್, ರೇಷನ್ ಕಾರ್ಡ್ ಎಲ್ಲವೂ ಇದೆ. ಆದರೆ ಸ್ವಂತ ಮನೆ ಮಾತ್ರ ಸಿಕ್ಕಿಲ್ಲ. ಈಗ ಮತ್ತೆ ಇಲ್ಲಿಂದ ತೆರವುಗೊಳಿಸುತ್ತಿದ್ದಾರೆ. ನಾವು ಎಲ್ಲಿ ಹೋಗಬೇಕು? ನಮಗೂ ಒಂದು ಸೂರು ಕಲ್ಪಿಸಿ.”
– ಶಾಂತವ್ವ ಬಗರಕೇರ ಸೇರಿದಂತೆ ಗುಡಿಸಲು ನಿವಾಸಿಗಳು
“ಪ್ರಜಾಸೌಧ ನಿರ್ಮಾಣವಾಗಲಿರುವ ಜಾಗದಲ್ಲಿರುವ ಗುಡಿಸಲು ನಿವಾಸಿಗಳಿಗೆ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾವಕಾಶ ಕಲ್ಪಿಸಲು ಸೂಚಿಸಲಾಗಿದೆ. ನಿಜವಾದ ನಿರಾಶ್ರಿತರಿಗೆ ಶಿಗ್ಲಿ ರಸ್ತೆ ಹಾಗೂ ಕೆಂಪಿಗೆರೆ ಬಳಿಯ ಪುರಸಭೆ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಕುರಿತು ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.”
– ಧನಂಜಯ ಎಂ., ತಹಸೀಲ್ದಾರ್, ಲಕ್ಷ್ಮೇಶ್ವರ

ಗದಗದಿಂದ ರೈಲು ಸಂಚಾರ ವಿಸ್ತರಣೆಗೆ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗದಗ–ಹರಪನಹಳ್ಳಿ ನೂತನ ರೈಲು ಮಾರ್ಗದ ಕಾಮಗಾರಿ ತ್ವರಿತಗೊಳಿಸುವುದು, ಬಳ್ಳಾರಿ–ಗದಗ–ಹುಬ್ಬಳ್ಳಿ ಹಾಗೂ ವಿಜಯಪುರ ಮಾರ್ಗಗಳಿಗೆ ಹೊಸ ರೈಲುಗಳನ್ನು ಆರಂಭಿಸುವುದು ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಗದಗ ಜಿಲ್ಲಾ ವಿಕಾಸ ವೇದಿಕೆ ನೈರುತ್ಯ ರೈಲ್ವೆ ಇಲಾಖೆಯ ಮುಂದೆ ಮಂಡಿಸಿದೆ.

ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅವರು ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಯಾದ ಮನೋಜ್ ಬಾಗಡೆ ಅವರಿಗೆ ಮನವಿ ಸಲ್ಲಿಸಿ, ಗದಗ–ಹರಪನಹಳ್ಳಿ ರೈಲು ಮಾರ್ಗದ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಗದಗ–ಯಲವಗಿ, ಗದಗ–ವಾಡಿ ಹಾಗೂ ಗದಗ–ಕೃಷ್ಣ ಮಾರ್ಗಗಳ ಸರ್ವೆಗೆ ಈಗಾಗಲೇ ಅನುದಾನ ಘೋಷಣೆಯಾಗಿದ್ದು, ವಿಳಂಬ ಮಾಡದೆ ಸರ್ವೆ ಕಾರ್ಯ ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಂಡರಾಪುರ–ವಿಜಯಪುರ–ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಹಿಂದಿನಂತೆ ಗದಗ–ಹುಬ್ಬಳ್ಳಿ ಮುಖ್ಯ ಜಂಕ್ಷನ್ ಮೂಲಕವೇ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಸಾವಿರಾರು ಭಕ್ತರು ಪಂಡರಾಪುರಕ್ಕೆ ಸಂಚರಿಸುವ ಹಿನ್ನೆಲೆಯಲ್ಲಿ ಈ ರೈಲು ಮಾರ್ಗ ಅತ್ಯಂತ ಅವಶ್ಯಕವಾಗಿದೆ ಎಂದು ವಿವರಿಸಿದರು.

ಬಳ್ಳಾರಿಯಿಂದ ಗದಗ, ಹುಬ್ಬಳ್ಳಿ, ಬಾಗಲಕೋಟೆ ಹಾಗೂ ವಿಜಯಪುರ ಕಡೆಗೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಮರ್ಪಕ ರೈಲುಗಳಿಲ್ಲ. ಬೆಳಿಗ್ಗೆ 6 ಗಂಟೆಯ ನಂತರ ಮಧ್ಯಾಹ್ನ 3.55ರವರೆಗೆ ಹುಬ್ಬಳ್ಳಿ ಮಾರ್ಗಕ್ಕೆ ಯಾವುದೇ ರೈಲು ಇಲ್ಲದಿರುವುದು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ. ಆದ್ದರಿಂದ ಗುಂತಕಲ್ ಅಥವಾ ಚಿತ್ರದುರ್ಗ–ರಾಯದುರ್ಗ–ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ ಮಾರ್ಗವಾಗಿ ಹೊಸ ರೈಲುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಗದಗ ಈಗ ಪ್ರಮುಖ ರೈಲ್ವೆ ಜಂಕ್ಷನ್ ಆಗಿದ್ದು, ಬಾಗಲಕೋಟೆ ಹಾಗೂ ವಿಜಯಪುರ ಮಾರ್ಗಕ್ಕೂ ಹೊಸ ರೈಲುಗಳನ್ನು ನೀಡಿದರೆ ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಸಂಚಾರಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಪೂರ್ಣಗೊಂಡಿರುವ ಗದಗ–ಸೊಲ್ಲಾಪುರ ಡಬ್ಲಿಂಗ್ ಯೋಜನೆ ಉದ್ಘಾಟನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಆಹ್ವಾನಿಸಿ, ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ರೈಲು ಸೌಲಭ್ಯಗಳನ್ನು ಘೋಷಿಸುವಂತೆ ಮನವಿ ಮಾಡಲಾಗಿದೆ ಎಂದರು.

ಈ ಹಿಂದೆ ವಿಜಯನಗರ ಜಿಲ್ಲೆಯ ಅಧಿಕಾರಿಗಳು, ಬಳ್ಳಾರಿ ಲೋಕಸಭಾ ಸದಸ್ಯ ಈ. ತುಕಾರಾಂ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಅವರಿಗೂ ಇದೇ ಬೇಡಿಕೆ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದರು.

ಈ ಸಂದರ್ಭದಲ್ಲಿ ಗದಗ–ಹರಪನಹಳ್ಳಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ನವಲಗುಂದ, ರವಿಗೌಡ ಪಾಟೀಲ, ಧ್ರುವಕುಮಾರ ಹೂಗಾರ, ಬಸಪ್ಪ ವಡ್ಡರ, ಅಂದಾನಗೌಡ ಕುಲಕರ್ಣಿ, ವೀರಭದ್ರಪ್ಪ ಕಬ್ಬಿಣದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗದಗ ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ಹರಪನಹಳ್ಳಿ ಹೊಸ ರೈಲು ಮಾರ್ಗದ ಕಾಮಗಾರಿ ತ್ವರಿತಗೊಳಿಸುವುದರ ಜೊತೆಗೆ ಬಳ್ಳಾರಿ, ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಹೆಚ್ಚಿನ ರೈಲುಗಳನ್ನು ಆರಂಭಿಸಿದರೆ ಈ ಭಾಗದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.”

– ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ನೀಟ್ ಅಕ್ರಮಕ್ಕೆ ಕಡಿವಾಣ ಹಾಕಿ: ಎಂ.ಎಸ್. ನಾಗರಕಟ್ಟೆ

0

ವಿಜಯಸಾಕ್ಷಿ ಸುದ್ದಿ, ಗದಗ: ನೀಟ್ (NEET) ಪರೀಕ್ಷೆಯಲ್ಲಿ ಕೇಳಿಬಂದಿರುವ ಅಕ್ರಮಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಬೀರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯರಾಗುವ ಕನಸಿನೊಂದಿಗೆ ವರ್ಷಗಳ ಕಾಲ ಕಠಿಣ ಪರಿಶ್ರಮ ಪಡುವ ಲಕ್ಷಾಂತರ ವಿದ್ಯಾರ್ಥಿಗಳ ಶ್ರಮಕ್ಕೆ ನ್ಯಾಯ ಸಿಗಬೇಕು. ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಅಥವಾ ಲೋಪಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷೆಯ ಪಾರದರ್ಶಕತೆಯೇ ವಿದ್ಯಾರ್ಥಿಗಳ ಭವಿಷ್ಯದ ಭದ್ರತೆಗೆ ಮೂಲಾಧಾರವಾಗಿದೆ ಎಂದು ಅವರು ಹೇಳಿದ್ದಾರೆ.

ನೀಟ್ ಅಕ್ರಮದಲ್ಲಿ ಭಾಗಿಯಾಗಿರುವ ಹಾಗೂ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಪ್ರಕರಣದ ನೈತಿಕ ಹೊಣೆ ಹೊತ್ತು ಸಂಬಂಧಿತ ಸಚಿವರು ರಾಜೀನಾಮೆ ನೀಡಬೇಕು. ಹಗರಣದ ಸಂಪೂರ್ಣ ಸತ್ಯ ಹೊರಬರಲು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಷ್ಟಪಟ್ಟು ವ್ಯಾಸಂಗ ಮಾಡಿದ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ತಕ್ಷಣವೇ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ಕ್ರಮಗಳನ್ನು ಪ್ರಕಟಿಸಬೇಕು. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಶಿಕ್ಷಣ ವ್ಯವಸ್ಥೆ ನಿರ್ಮಾಣ ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಅಹಿಂಸಾತ್ಮಕ ಹೋರಾಟಗಳಿಗೆ ವಿಶೇಷ ಸ್ಥಾನವಿದ್ದು, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ವಿದ್ಯಾರ್ಥಿಗಳ ಆತಂಕ ನಿವಾರಿಸಬೇಕು ಎಂದು ಎಂ.ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.

“ನೀಟ್ ಅಕ್ರಮಕ್ಕೆ ಕಾರಣರಾದ ಎಲ್ಲ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಸಂಬಂಧಿತ ಸಚಿವರ ರಾಜೀನಾಮೆ ಪಡೆಯಬೇಕು. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು.”

– ಎಂ.ಎಸ್. ನಾಗರಕಟ್ಟೆ , ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಪದವೀಧರ ಒಕ್ಕೂಟ

ಇನ್‌ಸ್ಟಾಗ್ರಾಂ ಜಾಹೀರಾತಿನ ಸೋಪು ಆರ್ಡರ್ ಮಾಡಿ ₹2.97 ಲಕ್ಷ ಕಳೆದುಕೊಂಡ ಶಿವಮೊಗ್ಗ ವ್ಯಕ್ತಿ!

ಶಿವಮೊಗ್ಗ: ಆನ್‌ಲೈನ್ ಖರೀದಿ ವೇಳೆ ಸೈಬರ್ ವಂಚಕರ ಬಲೆಗೆ ಬಿದ್ದ ಶಿವಮೊಗ್ಗ ನಗರದ ಎಲೆಕ್ಟ್ರಿಶಿಯನ್‌ವೊಬ್ಬರು ಬರೋಬ್ಬರಿ ₹2.97 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.

ಶಿವಮೊಗ್ಗ ನಗರದ ಗಾಂಧಿಬಜಾರ್ ನಿವಾಸಿ 38 ವರ್ಷದ ಎಲೆಕ್ಟ್ರಿಶಿಯನ್ ಹಣ ಕಳೆದುಕೊಂಡಿದ್ದಾರೆ. ಜುಲೈ 7ರಂದು ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ ಸೋಪಿನ ಜಾಹೀರಾತು ಕಂಡಿದ್ದು, ಅದನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದರು.

ಆದರೆ, ಆರ್ಡರ್ ಮಾಡಿದ ಸೋಪು ನಿಗದಿತ ಸಮಯಕ್ಕೆ ತಲುಪದ ಹಿನ್ನೆಲೆಯಲ್ಲಿ ಗೂಗಲ್‌ನಲ್ಲಿ ದೊರೆತ ಕೊರಿಯರ್ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೊರಿಯರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ.

ಅದರಂತೆ ಲಿಂಕ್ ತೆರೆದ ಕೆಲವೇ ಕ್ಷಣಗಳಲ್ಲಿ ಎಲೆಕ್ಟ್ರಿಶಿಯನ್ ಅವರ ಮೊಬೈಲ್‌ಗೆ ಹಲವು ಸಂದೇಶಗಳು ಬಂದಿದ್ದು, ಅನುಮಾನಗೊಂಡ ಅವರು ಲಿಂಕ್ ಅನ್ನು ಡಿಲೀಟ್ ಮಾಡಿದ್ದಾರೆ.

ಬಳಿಕ ಮಗನ ಶಾಲಾ ಶುಲ್ಕ ಪಾವತಿಸಲು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ, ವಂಚಕರು ಎರಡು ಬಾರಿ ತಲಾ ₹1 ಲಕ್ಷ ಹಾಗೂ ಮತ್ತೊಂದು ಬಾರಿ ₹97 ಸಾವಿರ ಸೇರಿ ಒಟ್ಟು ₹2.97 ಲಕ್ಷ ಹಣವನ್ನು ಖಾತೆಯಿಂದ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಎಲೆಕ್ಟ್ರಿಶಿಯನ್ ಅವರು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ‘ವಿಘ್ನೇಶ್’ ಗೂಂಡಾ ಕಾಯ್ದೆಯಡಿ ಅರೆಸ್ಟ್!

ಬೆಂಗಳೂರು: ರಾಜಧಾನಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಂಗೇರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕುಖ್ಯಾತ ರೌಡಿಶೀಟರ್ ವಿಘ್ನೇಶ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಬಂಧಿತ ವಿಘ್ನೇಶ್ ವಿರುದ್ಧ ಕೊಲೆ ಯತ್ನ, ಅತ್ಯಾಚಾರ, ದರೋಡೆ, ಮಾರಣಾಂತಿಕ ಹಲ್ಲೆ ಸೇರಿದಂತೆ 11ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನಿನ ಮೇಲೆ ಹೊರಬಂದ ಬಳಿಕವೂ ವಿಘ್ನೇಶ್ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಪೊಲೀಸರು ವಿಶೇಷ ನಿಗಾ ವಹಿಸಿದ್ದು, ಮುಂದಿನ ದಿನಗಳಲ್ಲೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

ಗದಗ ಪೊಲೀಸರ ಕರ್ತವ್ಯನಿಷ್ಠೆಗೆ ಗೌರವ: ಪಿಎಸ್‌ಐ ಮಾರುತಿ ಜೋಗದಂಡಕರ್, ಬಡಿಗೇರ, ಮಂಜುನಾಥ್‌ಗೆ ಡಿಜಿ-ಐಜಿಪಿ ಕಮೆಂಡೇಷನ್ ಡಿಸ್ಕ್ ಪ್ರದಾನ!

0

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ದಕ್ಷ ಸೇವೆಗಾಗಿ ನೀಡಲಾಗುವ ಪ್ರತಿಷ್ಠಿತ ‘ಡಿಜಿ-ಐಜಿಪಿ ಕಮೆಂಡೇಷನ್ ಡಿಸ್ಕ್–2025-26’ ಪ್ರಶಸ್ತಿಗೆ ಗದಗ ಜಿಲ್ಲೆಯ ಪಿಎಸ್ ಐ ಸೇರಿದಂತೆ ಸಿಬ್ಬಂದಿ ಭಾಜನರಾಗಿದ್ದಾರೆ.

ಬೆಂಗಳೂರು ನಗರದ ಕೋರಮಂಗಲದಲ್ಲಿರುವ 3ನೇ ಪಡೆ ಕೆಎಸ್‌ಆರ್‌ಪಿ ಮೈದಾನದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗೌರವ ಪ್ರದಾನ ಹಾಗೂ ಪಥಸಂಚಲನ ಸಮಾರಂಭದಲ್ಲಿ ಬೆಟಗೇರಿ ಬಡಾವಣೆ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ್, ಗ್ರಾಮೀಣ ಪೊಲೀಸ್ ಠಾಣೆಯ ವಿಶ್ವನಾಥ ಬಡಿಗೇರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಬಂಡಿಹಾಳ ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ (ಡಿಜಿ-ಐಜಿಪಿ) ವತಿಯಿಂದ ಪ್ರತಿಷ್ಠಿತ ಕಮೆಂಡೇಷನ್ ಡಿಸ್ಕ್ ಪ್ರದಾನ ಮಾಡಿ ಗೌರವಿಸಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆಕರ್ಷಕ ಪಥಸಂಚಲನ, ಶಿಸ್ತಿನ ಕವಾಯತು ಹಾಗೂ ಗೌರವ ವಂದನೆಯೊಂದಿಗೆ ಸಮಾರಂಭ ವೈಭವದಿಂದ ನಡೆಯಿತು.

ಕರ್ತವ್ಯ ನಿರ್ವಹಣೆಯಲ್ಲಿ ತೋರಿದ ದಕ್ಷತೆ, ಸಾರ್ವಜನಿಕ ಸೇವೆಯಲ್ಲಿನ ಬದ್ಧತೆ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಗದಗ ಜಿಲ್ಲಾ ಪೊಲೀಸ್ ಇಲಾಖೆಗೆ ಇದು ಹೆಮ್ಮೆಯ ಕ್ಷಣವಾಗಿದೆ. ಪ್ರಶಸ್ತಿ ಪುರಸ್ಕೃತ ಮೂವರು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿಎಸ್ಪಿಗಳಾದ ಮುರ್ತುಜಾ ಖಾದ್ರಿ, ಮಹಾಂತೇಶ್ ಸಜ್ಜನರ ಹಾಗೂ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು ಎಸಿಪಿ ಎಲ್.ವೈ. ರಾಜೇಶ್‌ಗೆ ಡಿಜಿ ಪದಕ: ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಗೌರವ!

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಿಸಿಬಿ ಎಸಿಪಿಯಾಗಿರುವ ಎಲ್.ವೈ. ರಾಜೇಶ್ ಅವರಿಗೆ ಅತ್ಯುತ್ತಮ ಸೇವೆಗಾಗಿ ಪ್ರತಿಷ್ಠಿತ ಡಿಜಿ ಪದಕ ಪ್ರದಾನ ಮಾಡಲಾಗಿದೆ.

ಡ್ರಗ್ಸ್ ಮುಕ್ತ ಬೆಂಗಳೂರಿನ ನಿರ್ಮಾಣಕ್ಕೆ ನೀಡಿದ ಕೊಡುಗೆ, ಸಮಾಜಮುಖಿ ಕಾರ್ಯಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ನಟ ಜಯಸೂರ್ಯ ಅವರ ತಂದೆಯಾಗಿರುವ ಎಲ್.ವೈ. ರಾಜೇಶ್, ಪೊಲೀಸ್ ಸೇವೆಯ ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ.