Home Blog Page 25

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವನ್ನು ದೇಶಕ್ಕೇ ಮಾದರಿಯಾಗಿಸುತ್ತೇನೆ: ಕುಲಪತಿ ಡಾ. ಎಸ್.ವಿ. ನಾಡಗೌಡರ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮಗಳ ಅಭಿವೃದ್ಧಿಯಲ್ಲೇ ದೇಶದ ಅಭಿವೃದ್ಧಿ ಅಡಗಿದೆ ಎಂಬ ಮಹಾತ್ಮ ಗಾಂಧೀಜಿಯವರ ಚಿಂತನೆಗೆ ಅನುಗುಣವಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ದೇಶಕ್ಕೇ ಮಾದರಿಯಾಗುವ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಕುಲಪತಿ ಡಾ. ಎಸ್.ವಿ. ನಾಡಗೌಡರ ಹೇಳಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಗದಗ ಜಿಲ್ಲಾ ಘಟಕ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಪ್ರಾಚಾರ್ಯರ ಸಂಘದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ, ಸ್ಥಳೀಯ ಆಡಳಿತ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜಮುಖಿ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಇಲಾಖೆ ಹಾಗೂ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುವಂತೆ ವಿಶೇಷ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಬಿ.ಜಿ. ಗಿರಿತಮ್ಮಣ್ಣವರ, ಐ.ಬಿ. ಹಾದಿಮನಿ, ಡಾ. ಬಿ.ಎಸ್. ರಾಥೋಡ್, ಎಸ್.ಬಿ. ಹಾವೇರಿ, ರವಿ ಕುಲಕರ್ಣಿ, ಎಸ್.ಎಂ. ಗುಳಗುಳಿ, ಉಪನ್ಯಾಸಕರಾದ ಡಾ. ವೈ.ಆರ್. ಬೇಲೇರಿ, ಎಸ್.ಐ. ಮೇಟಿ, ಶ್ರೀಶೈಲ್ ಬೀರಕಬ್ಬಿ, ಕೆ.ಎಸ್. ಗಂಗನಗೌಡ್ರ, ಬಿ.ಬಿ. ಮಿರ್ಜಿ, ಶರಣು ಚೇಗರೆಡ್ಡಿ, ನಿವೃತ್ತ ಉಪನ್ಯಾಸಕರಾದ ಜಿ.ಎಂ. ಹಕಾರಿ ಉಪಸ್ಥಿತರಿದ್ದರು.

ಪ್ರಾಚಾರ್ಯ ಅಶೋಕ ಅಂಗಡಿ ಸ್ವಾಗತಿಸಿದರು. ಎಂ.ಸಿ. ಕಟ್ಟಿಮನಿ ವಂದಿಸಿದರು.

“ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಮಾದರಿಯಾಗುವ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.”

– ಡಾ. ಎಸ್.ವಿ. ನಾಡಗೌಡರ, ಕುಲಪತಿ

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ? ಸರ್ಕಾರದ ಮುಂದಿದೆ ಹೊಸ ಪ್ರಸ್ತಾಪ!

ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಮಹತ್ವದ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆದಿದೆ.

ನಾಡಗೀತೆಯಲ್ಲಿ ಜೈನ ಧರ್ಮದ ಜೊತೆಗೆ ‘ಬೌದ್ಧ ಧರ್ಮ’ದ ಹೆಸರನ್ನೂ ಸೇರಿಸಲು ಪ್ರಸ್ತಾಪಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿ ಈ ಸಲಹೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಪ್ರಸ್ತುತ ನಾಡಗೀತೆಯಲ್ಲಿ “ಜೈನರ ಪೂಜ್ಯ ಉದ್ಯಾನ” ಎಂಬ ಸಾಲಿದೆ. ಈ ಸಾಲಿನಲ್ಲಿ ಬೌದ್ಧ ಧರ್ಮದ ಹೆಸರನ್ನೂ ಸೇರಿಸುವ ಕುರಿತು ಸಮಿತಿ ಸಲಹೆ ನೀಡಿದೆ. “ಜೈನ ಬೌದ್ಧರ ಪೂಜ್ಯ ಉದ್ಯಾನ” ಅಥವಾ “ಜೈನರುದ್ಯಾನದ ಜೊತೆಗೆ ಬೌದ್ಧರುದ್ಯಾನ” ಎಂದು ಬದಲಾವಣೆ ಮಾಡಲು ಪ್ರಸ್ತಾಪಿಸಲಾಗಿದೆ.

ಎಲ್ಲ ಧರ್ಮಗಳ ಸಮಾನತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಬೌದ್ಧ ಧರ್ಮದ ಹೆಸರನ್ನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.

ಸಮಿತಿಯ ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಾಗಿದ್ದು, ರಾಜ್ಯ ಸರ್ಕಾರ ಒಪ್ಪಿಗೆ ನೀಡಿದರೆ ನಾಡಗೀತೆಯಲ್ಲಿ ಬದಲಾವಣೆ ಜಾರಿಯಾಗುವ ಸಾಧ್ಯತೆ ಇದೆ. ಬಳಿಕ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪರಿಷ್ಕೃತ ನಾಡಗೀತೆ ಬಳಕೆಗೆ ಬರಬಹುದು.

ರಂಗೋಲಿಯ ಮೂಲಕ ಸಂಸ್ಕೃತಿ ಅರಳಿಸಿದ ಮಹಿಳಾ ಮಂಡಳ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸರಾಫ್ ಬಜಾರ್‌ನ ಸಹಸ್ರಾರ್ಜುನ ಸಮುದಾಯ ಭವನದಲ್ಲಿ ಎಸ್‌ಎಸ್‌ಎಸ್‌ಕೆ ಶ್ರೀ ಜಗದಂಬಾ ಮಹಿಳಾ ಮಂಡಳದ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ಸಂಸ್ಕಾರ ಭಾರತಿ ರಂಗೋಲಿ ತರಬೇತಿ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಜುಲೈ 10ರಿಂದ 12ರವರೆಗೆ ಪ್ರತಿದಿನ ಸಂಜೆ 5ರಿಂದ 8 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಮಾಜದ ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಎಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಸುಮನ್ ಪಾಟೀಲ (ಕುಲಕರ್ಣಿ) ತರಬೇತಿ ನೀಡಿದರು.

ಮೊದಲ ದಿನ ಸಂಸ್ಕಾರ ಭಾರತಿ ರಂಗೋಲಿಯ ಮೂಲಭೂತ ಅಂಶಗಳಾದ ಚುಕ್ಕಿ, ವೃತ್ತ, ಗೋಪಾದ ಹಾಗೂ ತುರಾಯಿ ವಿನ್ಯಾಸಗಳನ್ನು ಪರಿಚಯಿಸಿದರು. ಎರಡನೇ ದಿನ ಸ್ವಸ್ತಿಕ್, ಗಣೇಶ ಹಾಗೂ ಓಂ ವಿನ್ಯಾಸಗಳನ್ನು ಬಿಡಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಮೂರನೇ ದಿನ ಬಣ್ಣಗಳ ಬಳಕೆ, ಬಣ್ಣಗಳ ಸಂಯೋಜನೆ ಹಾಗೂ ಆಕರ್ಷಕ ರಂಗೋಲಿ ವಿನ್ಯಾಸಗಳ ಕುರಿತು ವಿವರವಾಗಿ ತರಬೇತಿ ನೀಡಿದರು.

ಶಿಬಿರದಲ್ಲಿ ಸುಮಾರು 45ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಸಂಸ್ಕಾರ ಭಾರತಿ ರಂಗೋಲಿ ಕಲೆಯ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆದುಕೊಂಡರು.

Bengaluru Fire News: ಆಪರೇಷನ್ ಥಿಯೇಟರ್‌ನಲ್ಲಿ ಬೆಂಕಿ, ತಪ್ಪಿದ ಭಾರೀ ಅನಾಹುತ!

ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸುತ್ತಿದ್ದಂತೆ ರೋಗಿಗಳು ಭಯಗೊಂಡು ಆಸ್ಪತ್ರೆಯಿಂದ ಹೊರಗೆ ಓಡಿ ಬಂದಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಹೊಗೆ ಕಾಣಿಸುತ್ತಿದ್ದಂತೆಯೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಕೆಳ ಮಹಡಿಯಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ಕೆಲಕಾಲ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ವೇಳೆ ಆಪರೇಷನ್ ಥಿಯೇಟರ್‌ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬಳಿಕ ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದ್ದು, ಎರಡು ಗಂಟೆ ಕಳೆದರೂ ತಾಲೂಕು ಆರೋಗ್ಯ ಅಧಿಕಾರಿ (THO) ರವಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.

ಕಸ ವಿಲೇವಾರಿ ವಾಹನಗಳ ನಡುವೆ ಅಪಘಾತ: ಪೌರಕಾರ್ಮಿಕ ಸಾವು

ಕೋಲಾರ: ಕಸ ವಿಲೇವಾರಿ ಮಾಡುವ ವೇಳೆ ಎರಡು ಕಸ ಸಾಗಿಸುವ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪೌರಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳಾ ಪೌರಕಾರ್ಮಿಕರು ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ಶ್ರೀನಿವಾಸಪುರದ ಇಂದಿರಾನಗರದಲ್ಲಿ ಕಸ ವಿಲೇವಾರಿ ಕಾರ್ಯ ನಡೆಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪೌರಕಾರ್ಮಿಕರಾದ ಸಂಪತ್ (35) ಹಾಗೂ ಭೂಲಕ್ಷ್ಮಿ ಗಾಯಗೊಂಡಿದ್ದರು.

ಗಾಯಗೊಂಡ ಇಬ್ಬರನ್ನೂ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸಂಪತ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.

ಭೂಲಕ್ಷ್ಮಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣ ಏನೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೌರಕಾರ್ಮಿಕನ ಸಾವಿನಿಂದ ಪುರಸಭೆ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಪರಿಸರ ನಿಯಮ ಉಲ್ಲಂಘನೆಗೆ ‘ಕಲ್ಯಾಣಿ ಸ್ಟೀಲ್ಸ್’ಗೆ ಬೀಗ: ಪವರ್ ಕಟ್‌ಗೆ ಆದೇಶ

0

ಕೊಪ್ಪಳ: ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಗಿಣಿಗೇರಾ ಸಮೀಪದ ‘ಕಲ್ಯಾಣಿ ಸ್ಟೀಲ್ಸ್’ ಕಾರ್ಖಾನೆಯ ವಿರುದ್ಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಕಠಿಣ ಕ್ರಮಕ್ಕೆ ಮುಂದಾಗಿದೆ. ಕಾರ್ಖಾನೆಯನ್ನು ಸೀಜ್ ಮಾಡುವಂತೆ ಆದೇಶ ಹೊರಡಿಸಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಕಡಿತಗೊಳಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಪರಿಶೀಲನೆಯಲ್ಲಿ ಸಂಸ್ಥೆ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇದರ ಆಧಾರದ ಮೇಲೆ ಕಾರ್ಖಾನೆಯ ಸಂಪೂರ್ಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ.

ಡಿಸಿ ಆದೇಶದ ತಕ್ಷಣ ಜೆಸ್ಕಾಂ ಅಧಿಕಾರಿಗಳ ತಂಡ ಕಾರ್ಖಾನೆ ಆವರಣಕ್ಕೆ ಭೇಟಿ ನೀಡಿ, ಹೈಟೆನ್ಷನ್ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.

ಗಮನಾರ್ಹವಾಗಿ, ಪರಿಸರ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳ ವಿರುದ್ಧ ಕೊಪ್ಪಳ ಜಿಲ್ಲಾಡಳಿತ ನಡೆಸುತ್ತಿರುವ ಕಟ್ಟುನಿಟ್ಟಿನ ಕಾರ್ಯಾಚರಣೆಯಲ್ಲಿ ಇದು ನಾಲ್ಕನೇ ಪ್ರಮುಖ ಕಾರ್ಖಾನೆಯಾಗಿದೆ. ಈ ಹಿಂದೆ ಹೊಸಪೇಟೆ ಇಸ್ಪಾತ್ ಹಾಗೂ ಪಿಬಿಎಸ್–1 ಸೇರಿದಂತೆ ಹಲವು ಕೈಗಾರಿಕೆಗಳ ವಿರುದ್ಧವೂ ಇದೇ ಮಾದರಿಯ ಕಠಿಣ ಕ್ರಮ ಜಾರಿಗೊಳಿಸಲಾಗಿತ್ತು.

ಹೆಂಡತಿ-ಮಾವನ ಮೇಲೆ ಮಚ್ಚಿನಿಂದ ಹಲ್ಲೆ ಯತ್ನ ಆರೋಪ: PSI ಭೈರಪ್ಪ ಅರೆಸ್ಟ್

0

ಬೆಂಗಳೂರು: ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಹಾಗೂ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಭೈರಪ್ಪ ಅವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಪಿಎಸ್‌ಐ ಭೈರಪ್ಪ ಅವರು ಕಳೆದ ಕೆಲವು ಸಮಯದಿಂದ ಪತ್ನಿಗೆ ಹಣ ಮತ್ತು ವರದಕ್ಷಿಣೆ ವಿಚಾರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೌಟುಂಬಿಕ ಕಲಹ ತೀವ್ರಗೊಂಡ ವೇಳೆ ಮನೆಯಲ್ಲಿದ್ದ ಮಚ್ಚನ್ನು ಹಿಡಿದು ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾಗಿ ಆರೋಪಿಸಲಾಗಿದೆ.

ಘಟನೆಯ ಬಳಿಕ ಸಂತ್ರಸ್ತೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ಎನ್‌ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಬಳಿಕ ಪ್ರಾಥಮಿಕ ತನಿಖೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಭೈರಪ್ಪ ವಿರುದ್ಧ ಕೊಲೆ ಯತ್ನ, ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ ಹಲ್ಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಗೆ ಮಚ್ಚು ಬಳಸಿರುವ ಆರೋಪವೂ ಪ್ರಕರಣದಲ್ಲಿ ಉಲ್ಲೇಖವಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕರಣ ಬಹಿರಂಗವಾದ ಬಳಿಕ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು, ಪಿಎಸ್‌ಐ ಭೈರಪ್ಪ ಅವರನ್ನು ಬಂಧಿಸಿ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಬಿಡದಿ ಟೌನ್‌ಶಿಪ್‌ ಯೋಜನೆ ವಿವಾದ: ಮಂಡಲಹಳ್ಳಿಯಲ್ಲಿ ಸರ್ವೆ ಸ್ಥಗಿತ, ಬಿಗಿ ಪೊಲೀಸ್ ಭದ್ರತೆ

0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ರೈತರ ಹೋರಾಟ ನಿರ್ಣಾಯಕ ಹಂತ ತಲುಪಿದ್ದು, ಮಂಡಲಹಳ್ಳಿ ಗ್ರಾಮದಲ್ಲಿ ನಡೆದ ಹಿಂಸಾತ್ಮಕ ಘಟನೆ ಬಳಿಕ ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಸರ್ವೆ ನಡೆಸಲು ತೆರಳಿದ್ದ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ವಿಶೇಷ ಶೋಧ ಕಾರ್ಯ ಮುಂದುವರಿದಿದೆ.

ಘಟನೆಯ ಬಳಿಕ ಅಧಿಕಾರಿಗಳು ಸರ್ವೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೆ ಸರ್ಕಾರ ಮತ್ತೆ ಸರ್ವೆ ಆರಂಭಿಸಲು ಮುಂದಾದರೆ ಅದನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಉಗ್ರ ಪ್ರತಿಭಟನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಅಧಿಕಾರಿಗಳು ಯಾವುದೇ ಪೂರ್ವ ಸೂಚನೆ ನೀಡದೆ ಗ್ರಾಮಕ್ಕೆ ಬಂದು ಭೂಸರ್ವೆ ನಡೆಸಲು ಮುಂದಾದದ್ದೇ ಸಂಘರ್ಷಕ್ಕೆ ಕಾರಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಮಂಡಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್‌ ಕಣ್ಗಾವಲು ಹೆಚ್ಚಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಆದಿಚುಂಚನಗಿರಿ ಮಠದ ಜಮೀನು ಕಬಳಿಸಲೆತ್ನಿಸಿದ 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಬಂಧನ

ಬೆಂಗಳೂರು: ಸ್ಮಶಾನದಲ್ಲಿದ್ದ ಸಮಾಧಿಯಿಂದ ಹೆಸರು ಸಂಗ್ರಹಿಸಿ, ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ವಾರಸುದಾರರನ್ನು ಸೃಷ್ಟಿಸಿ ಆದಿಚುಂಚನಗಿರಿ ಮಠಕ್ಕೆ ಸೇರಿದ ₹120 ಕೋಟಿ ಮೌಲ್ಯದ ಜಮೀನನ್ನು ಕಬಳಿಸಿದ ಹೈಟೆಕ್ ವಂಚನೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದು, 6 ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದಾರೆ.

ಕೆಂಗೇರಿ ಹೋಬಳಿಯ ಕಂಬಳಿಪುರ ಗ್ರಾಮದ ಸರ್ವೇ ನಂ.43ರಲ್ಲಿ ಮಠಕ್ಕೆ ದಾನವಾಗಿ ಬಂದಿದ್ದ 45 ಎಕರೆ ಜಮೀನಿನ ಪೈಕಿ 6 ಎಕರೆ ಜಮೀನನ್ನು ಕಬಳಿಸಲು ಮಾಸ್ಟರ್ ಮೈಂಡ್ ನರೇಶ್ ಗೌಡ ಮತ್ತು ಆತನ ಸಹಚರರು ಸೂಕ್ಷ್ಮ ಸಂಚು ರೂಪಿಸಿದ್ದರು.

ಮೂಲ ಮಾಲೀಕರ ಹೆಸರಿನಲ್ಲೇ ಮೃತಪಟ್ಟಿದ್ದ ವ್ಯಕ್ತಿಯ ಸಮಾಧಿಯನ್ನು ಪತ್ತೆಹಚ್ಚಿದ ಆರೋಪಿಗಳು, ಆತನ ಕುಟುಂಬದ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ರೌಡಿ ಶೀಟರ್ ಫ್ರಾನ್ಸಿಸ್ ಹಾಗೂ ಜೋಸ್ವಾನ್ ಅವರನ್ನು ವಾರಸುದಾರರೆಂದು ತೋರಿಸಿ ನಕಲಿ ವಂಶವೃಕ್ಷ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದರು.

ಈ ಅಕ್ರಮಕ್ಕೆ ಬೇಗೂರು ಹಾಗೂ ಕೆಂಗೇರಿ ಕಂದಾಯ ಇಲಾಖೆಯ ಅಧಿಕಾರಿಗಳೇ ಕೈಜೋಡಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದು ವಿಲೇಜ್ ಅಕೌಂಟೆಂಟ್‌ಗಳು, ರೆವಿನ್ಯೂ ಇನ್ಸ್‌ಪೆಕ್ಟರ್‌ಗಳು ಹಾಗೂ ಡೆಪ್ಯೂಟಿ ತಹಶೀಲ್ದಾರ್‌ಗಳು ನಕಲಿ ದಾಖಲೆಗಳನ್ನು ಸಿದ್ಧಪಡಿಸಿ, ಖಾತೆ ಬದಲಾವಣೆಗೂ ಅನುಮೋದನೆ ನೀಡಿದ್ದರು.

ನಂತರ ಜಮೀನನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ಆರೋಪಿಗಳು ಭಾರೀ ಹಣ ಸಂಪಾದಿಸಿದ್ದರು. ಜಮೀನು ಅಕ್ರಮವಾಗಿ ವರ್ಗಾವಣೆಯಾಗಿರುವ ಮಾಹಿತಿ ತಿಳಿದ ಮಠದ ಆಡಳಿತ ಮಂಡಳಿ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆಯಲ್ಲಿ ಸಂಪೂರ್ಣ ಸಂಚು ಬಯಲಾಗಿದೆ.

ಪ್ರಸ್ತುತ 11 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ನರೇಶ್ ಗೌಡನಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

India vs England: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ: ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ

0

ಬರ್ಮಿಂಗ್‌ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಮಂಗಳವಾರ ಚಾಲನೆ ದೊರೆತಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುತ್ತಿದೆ.

ಟಿ20 ಸರಣಿಯ ಸೋಲಿನ ನಿರಾಸೆಯಿಂದ ಹೊರಬರಲು ಭಾರತ ಈ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿ ಹೊಂದಿದೆ. ಇದೇ ವೇಳೆ, 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡದ ಸಿದ್ಧತೆಯ ದೃಷ್ಟಿಯಿಂದಲೂ ಈ ಸರಣಿ ಮಹತ್ವದ್ದಾಗಿದೆ.

ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ಮತ್ತೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಿಗೆ ಕಣಕ್ಕಿಳಿದಿದ್ದಾರೆ. ಈ ಮೂವರು ಅನುಭವಿ ಆಟಗಾರರ ಪ್ರದರ್ಶನದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದರು. ಇದರೊಂದಿಗೆ ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಅಧಿಕೃತವಾಗಿ ಪ್ರಕಟಗೊಂಡಿದೆ. ಇಂಗ್ಲೆಂಡ್ ತಂಡ ಒಂದು ದಿನ ಮುಂಚೆಯೇ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು.

ಮುಖಾಮುಖಿ ದಾಖಲೆ

ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ 110 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 61 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ಇಂಗ್ಲೆಂಡ್ ನೆಲದಲ್ಲಿ ಭಾರತ ಇದುವರೆಗೆ 86 ಏಕದಿನ ಪಂದ್ಯಗಳನ್ನು ಆಡಿದ್ದು, 45 ಪಂದ್ಯಗಳಲ್ಲಿ ಗೆಲುವು ಹಾಗೂ 37 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದ್ದು, ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ 12 ಏಕದಿನ ಪಂದ್ಯಗಳನ್ನು ಆಡಿದ್ದು, ಎಂಟರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲು ಅನುಭವಿಸಿದೆ.

ಇಂಗ್ಲೆಂಡ್ ಪ್ಲೇಯಿಂಗ್ XI:
ಜಾಕೋಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್ ಹಾಗೂ ಆದಿಲ್ ರಶೀದ್.

ಭಾರತದ ಪ್ಲೇಯಿಂಗ್ XI:
ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್.