Home Blog Page 255

ಕರ್ನಾಟಕದಲ್ಲಿ 56 ಸಾವಿರಕ್ಕೂ ಹೆಚ್ಚು ಮಂದಿಗೆ ತಮಗೇ ತಿಳಿಯದೆ HIV ಸೋಂಕು: ಪತ್ತೆಗಾಗಿ ಆರೋಗ್ಯ ಇಲಾಖೆಯ ವಿಶೇಷ ಅಭಿಯಾನ

ಬೆಂಗಳೂರು: ರಾಜ್ಯದಲ್ಲಿ ಹೆಚ್‌ಐವಿ ಮುಕ್ತ ಸಮಾಜ ನಿರ್ಮಾಣದ ಗುರಿಯೊಂದಿಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಕೆಎಸ್‌ಎಪಿಎಸ್) ಹಮ್ಮಿಕೊಂಡಿರುವ ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ’ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ಹೆಚ್‌ಐವಿ ಸೋಂಕಿತರನ್ನು ಗುರುತಿಸಿ, ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವ ಮೂಲಕ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಜೂನ್ 28, 2026ರವರೆಗಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 2,05,350 ಮಂದಿ ಹೆಚ್‌ಐವಿ ಸೋಂಕಿತರು ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದರೆ, ಸುಮಾರು 56,406 ಮಂದಿ ತಮ್ಮ ಹೆಚ್‌ಐವಿ ಸೋಂಕಿನ ಬಗ್ಗೆ ಅರಿವಿಲ್ಲದೆ ಇರುವ ಸಾಧ್ಯತೆ ಇದೆ ಎಂದು ಸಂಸ್ಥೆ ತಿಳಿಸಿದೆ. ಇಂತಹವರನ್ನು ಪತ್ತೆಹಚ್ಚಿ ಚಿಕಿತ್ಸೆ ವ್ಯಾಪ್ತಿಗೆ ತರುವುದು ಅಭಿಯಾನದ ಪ್ರಮುಖ ಗುರಿಯಾಗಿದೆ.

ಸಮಾಜದಲ್ಲಿ ಹೆಚ್‌ಐವಿ ಸೋಂಕಿತರ ಬಗ್ಗೆ ಇರುವ ತಾರತಮ್ಯ ಹಾಗೂ ಕೀಳರಿಮೆಯ ಮನೋಭಾವವನ್ನು ನಿವಾರಿಸುವ ಉದ್ದೇಶದಿಂದ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಎಂಬ ಸಂದೇಶದಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಯಂಪ್ರೇರಿತ ಹಾಗೂ ಸಂಪೂರ್ಣ ಗೌಪ್ಯತೆಯೊಂದಿಗೆ ಹೆಚ್‌ಐವಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಂಸ್ಥೆ ಕರೆ ನೀಡಿದೆ.

ಹೆಚ್‌ಐವಿಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಕೆಎಸ್‌ಎಪಿಎಸ್ ತಿಳಿಸಿದೆ. ಇದೇ ವೇಳೆ ‘ಪತ್ತೆಯಾಗದಿದ್ದರೆ = ಹರಡುವುದಿಲ್ಲ (Undetectable = Untransmittable – U=U)’ ಎಂಬ ವೈಜ್ಞಾನಿಕ ಸಂದೇಶಕ್ಕೂ ಅಭಿಯಾನದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಅದರಂತೆ, ಹೆಚ್‌ಐವಿ ಸೋಂಕಿತರು ನಿಯಮಿತವಾಗಿ ಎಆರ್‌ಟಿ ಚಿಕಿತ್ಸೆ ಪಡೆದು ವೈರಸ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ, ಅವರಿಂದ ಲೈಂಗಿಕ ಸಂಗಾತಿಗೆ ಸೋಂಕು ಹರಡುವುದಿಲ್ಲ. ಇದರಿಂದ ಸೋಂಕಿತರು ದೀರ್ಘಕಾಲ ಆರೋಗ್ಯಕರ ಹಾಗೂ ಉತ್ಪಾದಕ ಜೀವನ ನಡೆಸಬಹುದು ಎಂದು ಸಂಸ್ಥೆ ವಿವರಿಸಿದೆ.

ಅಭಿಯಾನದ ಭಾಗವಾಗಿ ‘ಬ್ರೇಕ್‌ಫ್ರೀ ಕ್ಯೂಆರ್ ಕೋಡ್’ ಅನ್ನು ಪರಿಚಯಿಸಲಾಗಿದ್ದು, ಸಾರ್ವಜನಿಕರು ಇದನ್ನು ಸ್ಕ್ಯಾನ್ ಮಾಡುವ ಮೂಲಕ ಹೆಚ್‌ಐವಿ ಅಪಾಯದ ಕುರಿತು ಮಾಹಿತಿ ಪಡೆಯಬಹುದು. ಜೊತೆಗೆ ಗೌಪ್ಯ ಆಪ್ತ ಸಮಾಲೋಚನೆ ಹಾಗೂ ತಪಾಸಣಾ ಕೇಂದ್ರಗಳ ಮಾಹಿತಿಯನ್ನೂ ಸುಲಭವಾಗಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬ ವಯಸ್ಕರೂ ತಮ್ಮ ಹೆಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಗರ್ಭಿಣಿಯರು ಕಡ್ಡಾಯವಾಗಿ ಹೆಚ್‌ಐವಿ ಹಾಗೂ ಸಿಫಿಲಿಸ್ ತಪಾಸಣೆಗೆ ಒಳಗಾಗಬೇಕು. ಲೈಂಗಿಕ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಕರುನಾಡಿಗೆ ಜೀವಕಳೆ ತಂದ ಮುಂಗಾರು ಮಳೆ; KRS ಡ್ಯಾಂ ಒಳಹರಿವು 4,291 ಕ್ಯೂಸೆಕ್ʼಗೆ ಏರಿಕೆ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸುಮಾರು ಆರು ತಿಂಗಳ ಬಳಿಕ ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ರೈತರು ಹಾಗೂ ಜನರಲ್ಲಿ ಆಶಾಭಾವನೆ ಮೂಡಿಸಿದೆ.

ನಿನ್ನೆ 1,449 ಕ್ಯೂಸೆಕ್ ಇದ್ದ ಒಳಹರಿವು ಇಂದು 4,291 ಕ್ಯೂಸೆಕ್ಗೆ ಏರಿಕೆಯಾಗಿದೆ. ಕಾವೇರಿ ಕೊಳ್ಳದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೆಆರ್‌ಎಸ್‌ಗೆ ಮತ್ತೆ ಜೀವಕಳೆ ಬಂದಂತಾಗಿದೆ.

ಪ್ರಸ್ತುತ ಜಲಾಶಯದಲ್ಲಿ 764 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಆಗಿದ್ದು, ಸದ್ಯ 80.90 ಅಡಿ ನೀರು ಸಂಗ್ರಹವಾಗಿದೆ.

ಕೆಆರ್‌ಎಸ್ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 11.487 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಎಸ್ ಜಲಾಶಯದ ಇಂದಿನ ಮಾಹಿತಿ:

  • ಗರಿಷ್ಠ ನೀರಿನ ಮಟ್ಟ: 124.80 ಅಡಿ
  • ಪ್ರಸ್ತುತ ನೀರಿನ ಮಟ್ಟ: 80.90 ಅಡಿ
  • ಒಳಹರಿವು: 4,291 ಕ್ಯೂಸೆಕ್
  • ಹೊರಹರಿವು: 764 ಕ್ಯೂಸೆಕ್
  • ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
  • ಪ್ರಸ್ತುತ ನೀರಿನ ಸಂಗ್ರಹ: 11.487 ಟಿಎಂಸಿ

ದೇವಸ್ಥಾನದಲ್ಲೇ ಕೋಟ್ಯಾಂತರ ರೂ.ಮೌಲ್ಯದ ಬೆಳ್ಳಿ ದೋಚಿದ ಕಳ್ಳರು..! ಸಾಧು-ಸಂತರು ಮಲಗಿದ್ದಾಗಲೇ ಕಳ್ಳರ ಕೈಚಳಕ

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಭಾರೀ ಕಳ್ಳತನ ಎಸಗಿದ್ದು, ಸುಮಾರು ₹1.20 ಕೋಟಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ಪೂಜಾ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ತಡರಾತ್ರಿ ನಡೆದ ಈ ಕಳ್ಳತನ ಬೆಳಿಗ್ಗೆ ದೇವಸ್ಥಾನ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 35 ಕೆಜಿ ತೂಕದ ಬೆಳ್ಳಿಯ ದೇವರ ಮುಖ, 10 ಕೆಜಿ ತೂಕದ ಬೆಳ್ಳಿಯ ದೇವರ ಮೂರ್ತಿ ಹಾಗೂ 60 ಕೆಜಿಗೂ ಅಧಿಕ ತೂಕದ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವೇಳೆ ದೇವಸ್ಥಾನದಲ್ಲೇ ಸಾಧು-ಸಂತರು ಮಲಗಿದ್ದರೂ, ಯಾರಿಗೂ ಸುಳಿವು ಸಿಗದಂತೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಅಲ್ಲದೆ, ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳು ಬಂದ್ ಆಗಿದ್ದರಿಂದ ತನಿಖೆಗೆ ತೊಂದರೆಯಾಗಿದ್ದು, ಕಳ್ಳರು ಇದನ್ನೇ ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಂತಾಮಣಿಯಲ್ಲಿ ಡಬಲ್ ಮರ್ಡರ್! ಪತ್ನಿ-ನಾದಿನಿಯ ಕತ್ತು ಕೊಯ್ದು ಮಕ್ಕಳೊಂದಿಗೆ ಎಸ್ಕೇಪ್ ಆದ ಪತಿ

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಜೆ.ಜೆ. ಕಾಲೋನಿಯಲ್ಲಿ ನಡೆದ ಭೀಕರ ಡಬಲ್ ಮರ್ಡರ್ ಪ್ರಕರಣ ಆತಂಕ ಸೃಷ್ಟಿಸಿದೆ. 25 ವರ್ಷದ ಶಮಾ ಹಾಗೂ 21 ವರ್ಷದ ರೇಷ್ಮಾ ಎಂಬ ಅಕ್ಕ-ತಂಗಿಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪ್ರಕರಣದಲ್ಲಿ ಶಮಾ ಅವರ ಪತಿ ಏಜಾಜ್ ಪ್ರಮುಖ ಶಂಕಿತನಾಗಿದ್ದು, ಕೃತ್ಯ ಎಸಗಿದ ಬಳಿಕ ಮೂವರು ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿಯ ಬಂಧನಕ್ಕಾಗಿ ಚಿಂತಾಮಣಿ ನಗರ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಮೃತರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಗಾಂಜಾ ಸೇವನೆಯ ಮತ್ತಿನಲ್ಲೇ ಆರೋಪಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಇತ್ತ, ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದು ಆರೋಪಿಯ ಬಂಧನದ ಬಳಿಕವೇ ಸ್ಪಷ್ಟವಾಗಲಿದೆ.

ಜಮೀನು ವಿವಾದ: ಶಿವಶರಣ ಹರಳಯ್ಯ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ ಹಲ್ಲೆ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ದಲಿತ ಸಮುದಾಯದ ಶಿವಶರಣ ಹರಳಯ್ಯ ಮಠದ ಪೀಠಾಧಿಪತಿ ಬಸವ ಹರಳಯ್ಯ ಶ್ರೀಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಠದ ಪಕ್ಕದ ಜಮೀನಿನ ವಿವಾದವೇ ಹಲ್ಲೆಗೆ ಕಾರಣ ಎನ್ನಲಾಗಿದ್ದು, ಜಮೀನಿನ ಮಾಲೀಕ ಸಿದ್ದೇಶ್ವರ ಹಾಗೂ ಆತನ ಸಹಚರರ ವಿರುದ್ಧ ಆರೋಪ ಕೇಳಿಬಂದಿದೆ.

ಸುಮಾರು ಒಂದು ವರ್ಷದಿಂದ ಮಠದ ಪ್ರವೇಶ ದ್ವಾರದ ಜಾಗಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಭಾನುವಾರ ರಾತ್ರಿ ಆರೋಪಿಗಳು ಮಠಕ್ಕೆ ನುಗ್ಗಿ ಹರಳಯ್ಯ ಶ್ರೀಗಳು ಹಾಗೂ ಶಾಲಾ ಬಸ್ ಚಾಲಕ ಭೀಮರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಮೂಗು ಮತ್ತು ಬಾಯಿಗೆ ತೀವ್ರ ಪೆಟ್ಟಾಗಿದೆ.

ಹಲ್ಲೆಯ ಬಳಿಕ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದ ಶ್ರೀಗಳ ಹಿಂದೆ ಠಾಣೆಗೂ ನುಗ್ಗಿದ ಆರೋಪಿಗಳು ಅಲ್ಲಿಯೂ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ಶ್ರೀಗಳು ಕುಳಿತಿದ್ದ ಕುರ್ಚಿಯನ್ನು ಒದ್ದು ಮುರಿದು ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಗಾಯಾಳುಗಳಾದ ಹರಳಯ್ಯ ಶ್ರೀಗಳು ಹಾಗೂ ಚಾಲಕ ಭೀಮರಾಜ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಪೊಲೀಸ್ ಠಾಣೆಗೆ ಬಂದರೂ ರಕ್ಷಣೆ ಸಿಗುತ್ತಿಲ್ಲ. ಸ್ವಾಮೀಜಿಯೇ ಸುರಕ್ಷಿತರಲ್ಲದಿದ್ದರೆ ಸಾಮಾನ್ಯ ಜನರ ಸ್ಥಿತಿ ಏನು?” ಎಂದು ಹರಳಯ್ಯ ಶ್ರೀಗಳು ಪ್ರಶ್ನಿಸಿದ್ದು, ಐಮಂಗಲ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಗುಡ್ಡಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಲಾರ್ಡ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ: 7ನೇ ಟಿ20 ವಿಶ್ವಕಪ್ ಕಿರೀಟದೊಂದಿಗೆ ಹೊಸ ದಾಖಲೆ

ಲಾರ್ಡ್ಸ್: 2026ರ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಏಳನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಏಳು ಏಕದಿನ ವಿಶ್ವಕಪ್ ಹಾಗೂ ಏಳು ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.

ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ, ಆಸ್ಟ್ರೇಲಿಯಾಕ್ಕೆ 151 ರನ್‌ಗಳ ಗುರಿ ನೀಡಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ನಡೆಸಿತು. ಫೋಬೆ ಲಿಚ್‌ಫೀಲ್ಡ್ 48 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ಅನುಭವಿ ಬೆತ್ ಮೂನಿ 64 ರನ್‌ಗಳ ಅಮೋಘ ಪ್ರದರ್ಶನ ನೀಡಿ ಗೆಲುವಿನ ಭದ್ರ ಬುನಾದಿ ಹಾಕಿದರು. ಅಂತಿಮವಾಗಿ ಆಸ್ಟ್ರೇಲಿಯಾ 17 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇಂಗ್ಲೆಂಡ್ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ 53 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿ ತಂಡವನ್ನು ಗೌರವಯುತ ಮೊತ್ತದತ್ತ ಕೊಂಡೊಯ್ದರು. ಫ್ರೇಯಾ ಕೆಂಪ್ 28 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಆದರೆ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ಆಮಿ ಜೋನ್ಸ್ 6 ರನ್ ಮತ್ತು ಡ್ಯಾನಿ ವ್ಯಾಟ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆಸ್ಟ್ರೇಲಿಯಾ ಪರ ಕಿಮ್ ಗಾರ್ಥ್, ಲೂಸಿ ಹ್ಯಾಮಿಲ್ಟನ್ ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಹಿಳಾ ತಂಡ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದು, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ ಏಳನೇ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

 

ಮಹಾಮಳೆಗೆ ಮುಂಬೈ ತತ್ತರ: 8 ಸಾವು, ಭೂಕುಸಿತದಿಂದ ಮುಂಬೈ–ಪುಣೆ ಸಂಪರ್ಕ ಕಡಿತ, 16 ರೈಲುಗಳ ಸಂಚಾರ ರದ್ದು

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದಿದ್ದು, ನಗರದ ವಿವಿಧ ಭಾಗಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಯ ಪರಿಣಾಮ ಭಾನುವಾರ ಒಂದೇ ದಿನ ನಡೆದ ವಿವಿಧ ಘಟನೆಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮರ ಬಿದ್ದು ಒಬ್ಬರು ಸಾವನ್ನಪ್ಪಿದರೆ, ಮತ್ತೊಂದು ಪ್ರದೇಶದಲ್ಲಿ ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಕುಸಿದು ಬಿದ್ದ ಪರಿಣಾಮ ಮತ್ತೊಬ್ಬರು ಮೃತಪಟ್ಟಿದ್ದಾರೆ.

ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ರೈಲು ಹಾಗೂ ರಸ್ತೆ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ ಮತ್ತು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಮುಂಬೈ ಮತ್ತು ಪುಣೆ ನಡುವಿನ ಸಂಪರ್ಕಕ್ಕೆ ತೀವ್ರ ಹೊಡೆತ ಬಿದ್ದಿದೆ.

ಭಾರೀ ಮಳೆಯ ಪರಿಣಾಮ ನಗರಕ್ಕೆ ಆಗಮಿಸುವ ಹಾಗೂ ನಗರದಿಂದ ಹೊರಡುವ 16 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಒಂಬತ್ತು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇಂದು ಮುಂಜಾನೆ 3.05ರ ಸುಮಾರಿಗೆ ಕರ್ಜತ್–ಲೋನಾವಾಲ ನಡುವಿನ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಬಳಿ ಭೂಕುಸಿತ ಸಂಭವಿಸಿದೆ. ಬಳಿಕ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆಯೂ ಮತ್ತೊಂದು ಭೂಕುಸಿತ ವರದಿಯಾಗಿದೆ.

ನಿರಂತರ ಮಳೆಯಿಂದ ಭೋರ್ ಘಾಟ್ ಪ್ರದೇಶದ ಪ್ರಮುಖ ರೈಲು ಹಳಿಗಳಾದ ಅಪ್ ಲೈನ್, ಡೌನ್ ಲೈನ್ ಹಾಗೂ ಮಧ್ಯ ಮಾರ್ಗದ ಮೇಲೂ ಭೂಕುಸಿತ ಸಂಭವಿಸಿದ್ದು, ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕರ್ಜತ್ ಮತ್ತು ಲೋನಾವಾಲ ನಡುವಿನ ಘಾಟ್ ವಿಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಹಲವು ದೂರ ಪ್ರಯಾಣದ ರೈಲುಗಳನ್ನು ರದ್ದುಗೊಳಿಸಿದ್ದು, ಅಗತ್ಯವಿರುವ ರೈಲುಗಳ ಮಾರ್ಗಗಳನ್ನು ಬದಲಾಯಿಸಿ ಸಂಚಾರವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.

ಮುಂಬೈನಲ್ಲಿ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆಡಳಿತವು ಸಾರ್ವಜನಿಕರು ಅಗತ್ಯವಿಲ್ಲದಿದ್ದರೆ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದ್ದು, ತುರ್ತು ಸೇವಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ.

ಸ್ಟಾರ್ ಜೋಡಿ ಶಾಕಿಂಗ್ ಬ್ರೇಕಪ್! ನಟಿ ತನ್ವಿ ಠಕ್ಕರ್-ಆದಿತ್ಯ ಕಪಾಡಿಯಾ ದಾಂಪತ್ಯಕ್ಕೆ ತೆರೆ; ಭಾವುಕ ಪೋಸ್ಟ್ ವೈರಲ್

ಕಿರುತೆರೆ ಲೋಕದಲ್ಲಿ ಮತ್ತೊಂದು ಸ್ಟಾರ್ ದಂಪತಿ ಬೇರ್ಪಟ್ಟಿದೆ. ‘ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ ಖ್ಯಾತಿಯ ನಟಿ ತನ್ವಿ ಠಕ್ಕರ್ ಹಾಗೂ ನಟ ಆದಿತ್ಯ ಕಪಾಡಿಯಾ ತಮ್ಮ ಐದು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ವಿಷಯವನ್ನು ಸ್ವತಃ ತನ್ವಿ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ತಮ್ಮ ಭಾವುಕ ಪೋಸ್ಟ್‌ನಲ್ಲಿ ಮಾತನಾಡಿರುವ ತನ್ವಿ, ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಸಾಕಷ್ಟು ಯೋಚನೆ, ಚರ್ಚೆ ಮತ್ತು ಪರಸ್ಪರ ಗೌರವದೊಂದಿಗೆ ಈ ಹೆಜ್ಜೆ ಇಟ್ಟಿದ್ದೇವೆ. ನಮ್ಮ ನಡುವೆ ಯಾವುದೇ ಜಗಳ ಅಥವಾ ದ್ವೇಷ ಇಲ್ಲ. ಮುಂದಿನ ಜೀವನದಲ್ಲಿ ಇಬ್ಬರೂ ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಈ ಸಮಯದಲ್ಲಿ ತಮ್ಮ ಹಾಗೂ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿರುವ ಅವರು, ವಿಚ್ಛೇದನದ ಕುರಿತು ಯಾವುದೇ ಊಹಾಪೋಹ ಅಥವಾ ಪ್ರಶ್ನೆಗಳನ್ನು ಕೇಳದಂತೆ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ವಿನಂತಿಸಿಕೊಂಡಿದ್ದಾರೆ.

‘ಏಕ್ ದೂಸ್ರೆ ಸೆ ಕರ್ತೆ ಹೈ ಪ್ಯಾರ್ ಹಮ್’ ಧಾರಾವಾಹಿ ಸೆಟ್‌ನಲ್ಲಿ ಆರಂಭವಾದ ಪರಿಚಯ ಪ್ರೀತಿಗೆ ತಿರುಗಿ, 2013ರಲ್ಲಿ ನಿಶ್ಚಿತಾರ್ಥ ಹಾಗೂ 2021ರಲ್ಲಿ ವಿವಾಹವಾಗಿ ಒಂದಾಗಿದ್ದ ಈ ಜೋಡಿ, ಈಗ ಅಧಿಕೃತವಾಗಿ ತಮ್ಮ ಸಂಬಂಧಕ್ಕೆ ತೆರೆ ಎಳೆದಿದೆ. ತನ್ವಿ ‘ಬಾಹು ಹಮಾರಿ ರಜನೀಕಾಂತ್’ ಹಾಗೂ ‘ಘುಮ್ ಹೈ ಕಿಸಿಕೇ ಪ್ಯಾರ್ ಮೇಯಿನ್’ ಮೂಲಕ ಜನಪ್ರಿಯರಾಗಿದ್ದರೆ, ಆದಿತ್ಯ ಕಪಾಡಿಯಾ ಬಾಲನಟನಾಗಿ ‘ಜಸ್ಟ್ ಮೊಹಬ್ಬತ್’, ‘ಶಾಕಾ ಲಾಕಾ ಬೂಮ್ ಬೂಮ್’ ಸೇರಿದಂತೆ ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ.

ಮುದ್ದು ಮಗನೊಂದಿಗೆ ಡಾಲಿ ಧನಂಜಯ್ ಮೊದಲ ಫೋಟೋ ವೈರಲ್: ತಂದೆಯ ಸಂಭ್ರಮದಲ್ಲೇ ‘ಮದರ್ ಪ್ರಾಮಿಸ್’ ಸಿನಿಮಾಗೆ ಭರ್ಜರಿ ಪ್ರಚಾರ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಬದುಕಿನಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ. ಒಂದೆಡೆ ತಂದೆಯಾದ ಖುಷಿ, ಮತ್ತೊಂದೆಡೆ ‘ಮದರ್ ಪ್ರಾಮಿಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಟ ತಮ್ಮ ಮುದ್ದು ಮಗನ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಗುವನ್ನು ಮುದ್ದಾಗಿ ಮಲಗಿಸಿ ಆಡಿಸುತ್ತಿರುವ ಧನಂಜಯ್ ಅವರ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರೆ, ಅವರು ಧರಿಸಿರುವ ‘Mother Promise’ ಶರ್ಟ್ ಸಿನಿಮಾ ಪ್ರಚಾರಕ್ಕೆ ಹೊಸ ಟಚ್ ನೀಡಿದೆ. ಮಗುವಿನ ಆಗಮನದ ಸಂಭ್ರಮವನ್ನೇ ಸಿನಿಮಾ ಪ್ರಮೋಷನ್‌ಗೆ ಬಳಸಿರುವ ನಟನ ಕ್ರಿಯೇಟಿವಿಟಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಧನ್ಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಧನಂಜಯ್, ಇದೀಗ ತಂದೆಯಾಗಿ ಹೊಸ ಜವಾಬ್ದಾರಿ ಸ್ವೀಕರಿಸಿದ್ದಾರೆ. ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.

ಜುಲೈ 10ರಂದು ಬಿಡುಗಡೆಯಾಗಲಿರುವ ‘ಮದರ್ ಪ್ರಾಮಿಸ್’ ಕಾಮಿಡಿ-ಥ್ರಿಲ್ಲರ್ ಚಿತ್ರವನ್ನು ಧನಂಜಯ್ ಅವರೇ ನಿರ್ಮಿಸಿದ್ದು, ಪೂರ್ಣಚಂದ್ರ ಮೈಸೂರು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಜೂಜುಕೋರನೊಬ್ಬ ಅಪಾಯಕಾರಿ ಗ್ಯಾಂಗ್‌ಸ್ಟರ್‌ಗಳು ಮತ್ತು ಕಳ್ಳಸಾಗಣೆ ಜಾಲದಿಂದ ತಪ್ಪಿಸಿಕೊಳ್ಳುವ ರೋಚಕ ಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರದಲ್ಲಿ ಗೀತಾ, ವಿನಯಾ ಪ್ರಸಾದ್, ಗುರುದತ್ ಹಾಗೂ ನಾಗಭೂಷಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ ಮದುವೆ ಸಂಭ್ರಮ: ನಟಿ ಕೃತಿ ಗೌಡ ಜೊತೆ ಸಪ್ತಪದಿ ತುಳಿದ ನಟ

ಕನ್ನಡ ಕಿರುತೆರೆಯ ಜನಪ್ರಿಯ ಹಾಸ್ಯ ನಟ ಹಾಗೂ ‘ಗಿಚ್ಚಿ ಗಿಲಿಗಿಲಿ’ ಸ್ಟಾರ್ ಪ್ರಶಾಂತ್ ಗೌಡ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಭಾನುವಾರ (ಜುಲೈ 5) ನಡೆದ ಅದ್ದೂರಿ ಸಮಾರಂಭದಲ್ಲಿ ನಟಿ ಕೃತಿ ಗೌಡ ಅವರನ್ನು ವರಿಸಿ ಹೊಸ ಬದುಕಿನ ಪಯಣ ಆರಂಭಿಸಿದ್ದಾರೆ.

ಮದುವೆ ಸಮಾರಂಭದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಕಿರುತೆರೆ ಮತ್ತು ಚಿತ್ರರಂಗದ ಹಲವು ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವದಂಪತಿಯನ್ನು ಆಶೀರ್ವದಿಸಿದರು.

ಪ್ರಶಾಂತ್ ಗೌಡ ಅವರ ಪತ್ನಿ ಕೃತಿ ಗೌಡ ಕೂಡ ಕಲಾರಂಗದವರೇ ಆಗಿದ್ದು, ‘ಬ್ರೇಕ್ ಫೇಲ್ಯೂರ್’ ಸಿನಿಮಾದ ಮೂಲಕ ಗಮನ ಸೆಳೆದಿದ್ದರು. ಪರಿಚಯದಿಂದ ಆರಂಭವಾದ ಇವರ ಸ್ನೇಹ, ಬಳಿಕ ಪ್ರೀತಿಗೆ ತಿರುಗಿ ಈಗ ವಿವಾಹ ಬಂಧನದಲ್ಲಿ ಒಂದಾಗಿದೆ.

‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದ ಸಹ ಕಲಾವಿದರು ಹಾಗೂ ಆಪ್ತರು ಮದುವೆಯಲ್ಲಿ ಭಾಗವಹಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಹಾಡು, ನೃತ್ಯ ಹಾಗೂ ಸಂಭ್ರಮದ ಕ್ಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ಅದ್ಭುತ ಕಾಮಿಡಿ ಟೈಮಿಂಗ್ ಮೂಲಕ ಕನ್ನಡಿಗರ ಮನೆಮಾತಾಗಿರುವ ಪ್ರಶಾಂತ್ ಗೌಡ ಅವರ ಹೊಸ ಜೀವನ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.