Home Blog Page 27

₹1.10 ಕೋಟಿ ಹೂಡಿಕೆ, ವಾಪಸ್ ಬಂದದ್ದು ₹34.97 ಕೋಟಿ: ಸೂರ್ಯವಂಶಿಗೆ ಜಾಕ್ ಪಾಟ್!

ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲೇ ಟೂರ್ನಿಯ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ವಿವಿಧ ಪ್ರಶಸ್ತಿಗಳು, ಪಂದ್ಯ ಶುಲ್ಕ ಹಾಗೂ ನಗದು ಬಹುಮಾನಗಳ ಮೂಲಕ ಒಟ್ಟು 3.10 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿರುವುದಾಗಿ ವರದಿಯಾಗಿದೆ.

2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 1.10 ಕೋಟಿ ರೂ. ಮೊತ್ತಕ್ಕೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆ ಹೂಡಿಕೆಗೆ ತಕ್ಕ ಪ್ರತಿಫಲವಾಗಿ ವೈಭವ್ ಇಡೀ ಟೂರ್ನಿಯಲ್ಲಿ ಬ್ಯಾಟ್‌ನಿಂದ ರನ್ ಮಳೆ ಸುರಿಸಿದರು. 776 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡ ಅವರು, ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (ಎಂವಿಪಿ) ಪ್ರಶಸ್ತಿಯನ್ನೂ ಗೆದ್ದರು.

ಆರೆಂಜ್ ಕ್ಯಾಪ್ ವಿಜೇತರಾಗಿ 10 ಲಕ್ಷ ರೂ. ನಗದು ಬಹುಮಾನ ಪಡೆದ ವೈಭವ್, ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ 15 ಲಕ್ಷ ರೂ. ಬಹುಮಾನ ಪಡೆದರು. ಜೊತೆಗೆ ಅತ್ಯುತ್ತಮ ಸ್ಟ್ರೈಕ್‌ರೇಟ್ ದಾಖಲಿಸಿ ‘ಸೂಪರ್ ಸ್ಟ್ರೈಕರ್’ ಗೌರವಕ್ಕೂ ಪಾತ್ರರಾದರು. ಈ ಪ್ರಶಸ್ತಿಯೊಂದಿಗೆ ಟಾಟಾ ಸಿಯೆರಾ ಕಾರು ಕೂಡ ಅವರಿಗೆ ಲಭಿಸಿದೆ.

ಇದೇ ವೇಳೆ, ಟೂರ್ನಿಯಲ್ಲಿ 75 ಸಿಕ್ಸರ್‌ಗಳನ್ನು ಸಿಡಿಸಿ ‘ಸೂಪರ್ ಸಿಕ್ಸರ್’ ಪ್ರಶಸ್ತಿಯನ್ನು ಗೆದ್ದ ಅವರು 10 ಲಕ್ಷ ರೂ. ನಗದು ಬಹುಮಾನ ಪಡೆದರು. ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ವೈಭವ್ ಪಾಲಾಗಿದ್ದು, ಇದಕ್ಕಾಗಿ ಮತ್ತೊಂದು 10 ಲಕ್ಷ ರೂ. ಬಹುಮಾನ ದೊರಕಿದೆ.

ರಾಜಸ್ಥಾನ ರಾಯಲ್ಸ್ ಪರ ಆಡಿದ 16 ಪಂದ್ಯಗಳಿಗೆ ಪಂದ್ಯ ಶುಲ್ಕ ಹಾಗೂ ಪ್ಲೇಆಫ್ ಬೋನಸ್ ಸೇರಿ ಸುಮಾರು 1.20 ಕೋಟಿ ರೂ. ಗಳಿಸಿದ್ದಾರೆ. ಇದಲ್ಲದೆ, ವಿವಿಧ ಪಂದ್ಯಗಳಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಸೇರಿದಂತೆ ಪಡೆದ ವೈಯಕ್ತಿಕ ಪ್ರಶಸ್ತಿಗಳ ನಗದು ಮೊತ್ತವೂ ಅವರ ಒಟ್ಟು ಆದಾಯವನ್ನು 3.10 ಕೋಟಿ ರೂ. ಗಡಿ ದಾಟಿಸಿದೆ.

ವೈಭವ್ ಸೂರ್ಯವಂಶಿ ಈ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಪವರ್‌ಪ್ಲೇ ಅವಧಿಯಲ್ಲೇ 500ಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇನ್ನೂ ಒಂದೇ ಐಪಿಎಲ್ ಸೀಸನ್‌ನಲ್ಲಿ 72ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಬ್ಯಾಟಿಂಗ್‌ನಲ್ಲಿ ತೋರಿದ ಅಸಾಧಾರಣ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್ ಹೂಡಿಕೆ ಮಾಡಿದ 1.10 ಕೋಟಿ ರೂ. ಮೊತ್ತಕ್ಕೆ ಪ್ರತಿಯಾಗಿ ಸುಮಾರು 34.97 ಕೋಟಿ ರೂ. ಮೌಲ್ಯದ ಪ್ರದರ್ಶನ ನೀಡಿದ್ದಾರೆ ಎಂದು ಕ್ರೀಡಾ ವಿಶ್ಲೇಷಕರು ಅಂದಾಜಿಸಿದ್ದಾರೆ.

ಈ ಅಂಕಿ-ಅಂಶಗಳ ಆಧಾರದಲ್ಲಿ ಐಪಿಎಲ್ 2026ರಲ್ಲಿ ಅತ್ಯಂತ ಲಾಭದಾಯಕ ಹೂಡಿಕೆಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಶುಭಮನ್ ಗಿಲ್ ಮೊದಲ ಹಾಗೂ ರಜತ್ ಪಾಟಿದಾರ್ ಎರಡನೇ ಸ್ಥಾನದಲ್ಲಿದ್ದಾರೆ. ಯುವ ವಯಸ್ಸಿನಲ್ಲೇ ವೈಭವ್ ತೋರಿದ ಈ ಸಾಧನೆ ಭಾರತೀಯ ಕ್ರಿಕೆಟ್ ಭವಿಷ್ಯದ ಭರವಸೆಯ ಸಂಕೇತವೆಂದು ಪರಿಗಣಿಸಲಾಗುತ್ತಿದೆ.

ಐಪಿಎಲ್ ಬೆಟ್ಟಿಂಗ್‌ಗೆ ಬಿಗ್ ಶಾಕ್: 8,750 ಅಕ್ರಮ ವೆಬ್‌ಸೈಟ್‌ಗಳು ಬಂದ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯದ ವೇಳೆ ಅಕ್ರಮ ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಚಟುವಟಿಕೆಗಳ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಸೈಬರ್ ಕ್ರೈಮ್ ವಿಭಾಗ ಭಾರಿ ಕಾರ್ಯಾಚರಣೆ ನಡೆಸಿದ್ದು, ದೇಶಾದ್ಯಂತ ಸಕ್ರಿಯವಾಗಿದ್ದ 8,750ಕ್ಕೂ ಹೆಚ್ಚು ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳು ಮತ್ತು ಲಿಂಕ್‌ಗಳನ್ನು ಬ್ಲಾಕ್ ಮಾಡಲಾಗಿದೆ.

ಐಪಿಎಲ್ ಫೈನಲ್ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ಕ್ರೈಮ್ ಅಧಿಕಾರಿಗಳು ವಿಶೇಷ ನಿಗಾ ವಹಿಸಿದ್ದರು. ತಾಂತ್ರಿಕ ವಿಶ್ಲೇಷಣೆ ಮೂಲಕ ಸಾರ್ವಜನಿಕರನ್ನು ಹಣದ ಆಮಿಷಕ್ಕೆ ಸೆಳೆದು ವಂಚಿಸುತ್ತಿದ್ದ ಸಾವಿರಾರು ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಪತ್ತೆ ಹಚ್ಚಲಾಗಿದೆ.

ಕರ್ನಾಟಕ ಪೊಲೀಸರ ವರದಿ ಮತ್ತು ಶಿಫಾರಸಿನ ಆಧಾರದ ಮೇಲೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ದೇಶಾದ್ಯಂತ ಈ ಅಕ್ರಮ ವೆಬ್‌ಸೈಟ್‌ಗಳ ವಿರುದ್ಧ ನಿರ್ಬಂಧ ಕ್ರಮ ಜಾರಿಗೆ ತಂದಿದೆ.

ಅನಧಿಕೃತ ಬೆಟ್ಟಿಂಗ್ ತಾಣಗಳು ಹಣದ ನಷ್ಟದ ಜೊತೆಗೆ ಬ್ಯಾಂಕಿಂಗ್ ಮಾಹಿತಿ ಹಾಗೂ ವೈಯಕ್ತಿಕ ಡೇಟಾ ಕಳವು ಸೇರಿದಂತೆ ಸೈಬರ್ ವಂಚನೆಗಳಿಗೆ ಕಾರಣವಾಗುತ್ತಿವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಆನ್‌ಲೈನ್ ಬೆಟ್ಟಿಂಗ್ ಜಾಲಗಳಿಗೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಗಳ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸೈಬರ್ ಕ್ರೈಮ್ ವಿಭಾಗ ತಿಳಿಸಿದೆ.

ಹಸು ಮೇಯ್ದ ವಿಚಾರಕ್ಕೆ ಗಲಾಟೆ: ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಸಾವು

ರಾಮನಗರ: ತರಕಾರಿ ಗಿಡಗಳನ್ನು ಹಸು ಮೇಯ್ದ ವಿಚಾರಕ್ಕೆ ನೆರೆಮನೆಯವರ ನಡುವೆ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಗೇರಿಯಲ್ಲಿ ನಡೆದಿದೆ.

ಮೃತರನ್ನು ಜಯಮ್ಮ (55) ಎಂದು ಗುರುತಿಸಲಾಗಿದೆ. ಜಯಮ್ಮ ಹಾಗೂ ಪಕ್ಕದ ಮನೆಯ ನಿವಾಸಿ ಶ್ರೀನಿವಾಸ್ ಕುಟುಂಬದ ನಡುವೆ ಈ ಹಿಂದೆ ಕೂಡ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಇತ್ತು ಎನ್ನಲಾಗಿದೆ.

ಘಟನೆ ದಿನ ಜಯಮ್ಮ ತಮ್ಮ ಮನೆಯ ಪಕ್ಕದಲ್ಲಿ ಬೆಳೆಸಿದ್ದ ತರಕಾರಿ ಗಿಡಗಳನ್ನು ಶ್ರೀನಿವಾಸ್‌ಗೆ ಸೇರಿದ ಹಸು ಮೇಯ್ದಿದೆ. ಇದನ್ನು ಪ್ರಶ್ನಿಸಿದ ವೇಳೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿ ಗಲಾಟೆಗೆ ತಿರುಗಿದೆ.

ಗಲಾಟೆ ವೇಳೆ ಶ್ರೀನಿವಾಸ್ ಜಯಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದು, ಕಪಾಳಕ್ಕೆ ಹೊಡೆದ ಪರಿಣಾಮ ಅವರು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶ್ರೀನಿವಾಸ್‌ನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಟೌನ್ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗ್ರಾಮಸ್ಥರಿಂದ ವಸೂಲಿ ಮಾಡಿದ್ದ ₹80 ಲಕ್ಷ ಹಿಂತಿರುಗಿಸಿದ ಟಿಎಂಸಿ ಕಾರ್ಯಕರ್ತರು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭೂ ವಿವಾದ ಬಗೆಹರಿಸುವುದಾಗಿ ಹೇಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಹಣವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಮತ್ತು ಕಾರ್ಯಕರ್ತರು ಹಿಂತಿರುಗಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಂಚಾಗಢ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರ್ ಕುತ್ತಿ ಪ್ರದೇಶದ ಶಾಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ ಟಿಎಂಸಿ ಮುಖಂಡರು, ಗ್ರಾಮಸ್ಥರಿಗೆ ಹಣ ವಾಪಸ್ ನೀಡಿದ್ದಾರೆ. ಬೂತ್ ಅಧ್ಯಕ್ಷ ತಪನ್ ಡೇ ಅವರು ಹಲವು ಗ್ರಾಮಸ್ಥರಿಂದ ಪಡೆದಿದ್ದ ಹಣವನ್ನು ಹಿಂತಿರುಗಿಸಿದರೆ, ತಲೆಮರೆಸಿಕೊಂಡಿರುವ ಸ್ಥಳೀಯ ಮುಖಂಡ ಬಾಬೈ ಬರ್ಮನ್ ಪರವಾಗಿ ಅವರ ತಂದೆ ಹಣ ಮರಳಿಸಿದ್ದಾರೆ.

ಪಂಚಾಯಿತಿ ಸದಸ್ಯರು ಹಾಗೂ ಕೆಲ ಟಿಎಂಸಿ ನಾಯಕರು ಸೇರಿ ಗ್ರಾಮಸ್ಥರಿಂದ ಸುಮಾರು ₹80 ಲಕ್ಷ ಸಂಗ್ರಹಿಸಿದ್ದರು ಎನ್ನಲಾಗಿದೆ. ಭೂ ವಿವಾದ ಬಗೆಹರಿಸುವ ಭರವಸೆ ನೀಡಿ ಹಣ ಪಡೆದಿದ್ದರೂ ಯಾವುದೇ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಅಧ್ಯಕ್ಷ ಸುರೇಂದ್ರ ಬರ್ಮನ್, ಕಾನೂನು ಕ್ರಮದ ಭಯದಿಂದಲೇ ಟಿಎಂಸಿ ನಾಯಕರು ಹಣ ವಾಪಸ್ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಹಣ ಮರಳಿ ಸಿಕ್ಕಿರುವುದಕ್ಕೆ ಕೆಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಬೆಳವಣಿಗೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ: ನಿತಿನ್ ನಬಿನ್‌ಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ

ನವದೆಹಲಿ: ತಮಿಳುನಾಡು ಬಿಜೆಪಿ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಉನ್ನತ ನಾಯಕತ್ವದೊಂದಿಗೆ ಅಣ್ಣಾಮಲೈ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ವಿಶೇಷವಾಗಿ ಎಐಎಡಿಎಂಕೆ ಪಕ್ಷವನ್ನು ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ನಿರ್ಧಾರದ ಬಳಿಕ ಅಣ್ಣಾಮಲೈ ಅವರನ್ನು ಪಕ್ಷದ ಪ್ರಮುಖ ನಿರ್ಧಾರಗಳಿಂದ ದೂರವಿಡಲಾಗುತ್ತಿದೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.

ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗಳಿಂದಲೂ ಅವರು ಹಿಂದೆ ಸರಿದಿದ್ದರು. ಇದಾದ ಬಳಿಕ ಪಕ್ಷದ ಎರಡು ಪ್ರಮುಖ ರಾಜ್ಯ ಕಾರ್ಯಕಾರಿ ಸಭೆಗಳಿಗೆ ಗೈರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಇದೀಗ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ‘ಮಕ್ಕಳ್ ಶಕ್ತಿ ಇಯಕ್ಕಂ’ ಹೆಸರಿನ ಹೊಸ ಜನಪರ ಚಳವಳಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತ್ರಿಭಾಷಾ ನೀತಿ ಸೇರಿದಂತೆ ಕೆಲವು ವಿಷಯಗಳಲ್ಲಿ ಕೇಂದ್ರ ನಾಯಕತ್ವದ ನಿಲುವಿಗೆ ವಿರುದ್ಧವಾಗಿ ಅಣ್ಣಾಮಲೈ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದೂ ಅವರ ಮತ್ತು ಪಕ್ಷದ ನಡುವಿನ ಅಂತರ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.

ಇದರ ನಡುವೆ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಭಾವಚಿತ್ರವಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶ ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ರಾಜ್ಯದಲ್ಲಿ ಪಕ್ಷದ ವಿಸ್ತರಣೆಗೆ ಪ್ರಮುಖ ಮುಖವಾಗಿದ್ದರು.

ಜಯಲಲಿತಾ ಸಹೋದರ ಎನ್.ಜೆ. ವಾಸುದೇವನ್ ನಿಧನ

0

ಮೈಸೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ (92) ಅವರು ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಚಾಮನಹಳ್ಳಿಯಲ್ಲಿರುವ ಸಾಕು ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಸುದೇವನ್ ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅಂತ್ಯಕ್ರಿಯೆ ಇಂದು ಸಂಜೆ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ವಿಶೇಷವೆಂದರೆ, ಜಯಲಲಿತಾ ಕುಟುಂಬದ ಆಂತರಿಕ ಸಂಬಂಧಗಳು ಮತ್ತು ಆಸ್ತಿ ವಿವಾದಗಳ ಹಿನ್ನೆಲೆಯಲ್ಲಿ ವಾಸುದೇವನ್ ಅವರ ಹೆಸರು ಹಿಂದೆ ಕಾನೂನು ಚರ್ಚೆಗಳಲ್ಲೂ ಪ್ರಸ್ತಾಪವಾಗಿತ್ತು. ಜಯಲಲಿತಾ ಅವರ ನಿಧನದ ನಂತರ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಅರ್ಜಿ ಗಮನ ಸೆಳೆದಿತ್ತು.

ಕಾನೂನು ಹೋರಾಟದಲ್ಲಿ ಅವರು ಜಯಲಲಿತಾ ಅವರ ನೇರ ವಾರಸುದಾರರು ಎಂದು ಹೇಳಿಕೊಂಡಿದ್ದರು. ಆದರೆ ನ್ಯಾಯಾಲಯವು ಜ. ದೀಪಾ ಮತ್ತು ಜ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಗುರುತಿಸಿತ್ತು.

ಇದೀಗ ಅವರ ನಿಧನದೊಂದಿಗೆ ಜಯಲಲಿತಾ ಕುಟುಂಬದ ಮತ್ತೊಂದು ಅಧ್ಯಾಯ ಅಂತ್ಯಗೊಂಡಂತಾಗಿದೆ ಎಂದು ಹೇಳಲಾಗುತ್ತಿದೆ.

 

ವೀಸಾ ನಿಯಮಗಳಲ್ಲಿ ಬದಲಾವಣೆ: 180 ದಿನಗಳಿಗಿಂತ ಹೆಚ್ಚು ಭಾರತದಲ್ಲಿ ಉಳಿಯಲು ನೋಂದಣಿ ಕಡ್ಡಾಯ

ನವದೆಹಲಿ: ವಿದೇಶಿ ನಾಗರಿಕರ ವಾಸ್ತವ್ಯ ಮತ್ತು ವೀಸಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ವಲಸೆ ಮತ್ತು ವಿದೇಶಿಗರ ನಿಯಮಗಳು–2025 ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚು ಅವಧಿ ವಾಸಿಸಲು ಬಯಸುವ ವಿದೇಶಿ ನಾಗರಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ನೋಂದಣಿಯನ್ನು 180 ದಿನಗಳ ಅವಧಿ ಪೂರ್ಣಗೊಳ್ಳುವ ಮುನ್ನವೇ ಯಾವುದೇ ಸಮಯದಲ್ಲಿ ಮಾಡಿಸಬಹುದಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಹೊಸ ನಿಯಮಗಳ ಅನ್ವಯ, ವೀಸಾ ಅವಧಿ ಮುಗಿದ ಬಳಿಕ ದೇಶದಲ್ಲಿ ಮುಂದುವರೆಯಲು ಬಯಸುವವರು ನಿಗದಿತ ಅವಧಿಯೊಳಗೆ ನೋಂದಣಿ ಹಾಗೂ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. 180 ದಿನಗಳ ವಾಸ್ತವ್ಯ ಅವಧಿ ಪೂರ್ಣಗೊಂಡ ನಂತರ 14 ದಿನಗಳೊಳಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿದೆ.

ವಾಸ್ತವ್ಯ ಮಿತಿಗೆ ಒತ್ತು

ಸಚಿವಾಲಯದ ಪ್ರಕಾರ, ವಿದೇಶಿ ನಾಗರಿಕರು ಭಾರತದಲ್ಲಿ ಒಂದೇ ಬಾರಿ ಅಥವಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ, ಮುಂಚಿತವಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೊಸ ನಿಯಮದಡಿ ವಿಶೇಷ ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರ ಕೆಲವು ವಿನಾಯಿತಿಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಮಕ್ಕಳಿಗೆ ನಿಯಮಗಳಲ್ಲಿ ಸಡಿಲಿಕೆ

ಈ ತಿದ್ದುಪಡಿಯಲ್ಲಿ ಭಾರತದಲ್ಲಿ ಜನಿಸುವ ಕೆಲವು ಮಕ್ಕಳಿಗೆ ವಿಶೇಷ ವಿನಾಯಿತಿಯನ್ನೂ ನೀಡಲಾಗಿದೆ. ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರೂ ವಿದೇಶಿ ನಾಗರಿಕರಾಗಿರುವ ಸಂದರ್ಭಗಳಲ್ಲಿ, ಮಗುವಿನ ನೋಂದಣಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.

ಈ ಹಿಂದೆ, ಮಗುವಿನ ಜನನದ ಬಳಿಕ 30 ದಿನಗಳೊಳಗೆ ಸಂಬಂಧಿತ ಅಧಿಕಾರಿಗಳಿಗೆ ಆನ್‌ಲೈನ್ ಮೂಲಕ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು. ಜೊತೆಗೆ, ಹೊಸ ವೀಸಾ ಮಂಜೂರು ಹಾಗೂ ನಿರ್ಗಮನ ಅನುಮತಿ ಸೇರಿದಂತೆ ವಿವಿಧ ಸೇವೆಗಳನ್ನು ಸರ್ಕಾರದ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಪಡೆಯಬೇಕಾಗುತ್ತಿತ್ತು.

ಭಾರತೀಯ ಪೌರತ್ವ ಹೊಂದಿರುವ ಪೋಷಕರಿಗೆ ವಿನಾಯಿತಿ

ಹೊಸ ಅಧಿಸೂಚನೆಯ ಪ್ರಕಾರ, ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದು, ಮಗುವಿಗೆ ಭಾರತೀಯ ಪೌರತ್ವ ಮುಂದುವರಿಸಲು ಬಯಸಿದರೆ ಈ ನಿಯಮ ಅನ್ವಯವಾಗುವುದಿಲ್ಲ. ಅಂದರೆ, ಅಂತಹ ಮಕ್ಕಳಿಗೆ ವಿದೇಶಿಗರ ನೋಂದಣಿ ಸಂಬಂಧಿತ ಕೆಲವು ಕಡ್ಡಾಯ ನಿಯಮಗಳಿಂದ ವಿನಾಯಿತಿ ದೊರೆಯಲಿದೆ.

ವಿದೇಶಿ ಪೌರತ್ವ ಪಡೆದರೆ ಮಾಹಿತಿ ಕಡ್ಡಾಯ

ಭಾರತದಲ್ಲಿರುವ ಮಗುವು ನಂತರದ ಹಂತದಲ್ಲಿ ವಿದೇಶಿ ಪೌರತ್ವ ಪಡೆದರೆ, ಆ ವಿಷಯವನ್ನು 30 ದಿನಗಳೊಳಗೆ ಸಂಬಂಧಿತ ನೋಂದಣಿ ಅಧಿಕಾರಿಗಳಿಗೆ ತಿಳಿಸುವುದು ಕಡ್ಡಾಯವಾಗಿದೆ. ಈ ಜವಾಬ್ದಾರಿಯನ್ನು ಪೋಷಕರಲ್ಲಿ ಯಾರಾದರೂ ಒಬ್ಬರು ನಿರ್ವಹಿಸಬೇಕು ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ವಿದೇಶಿಗರ ವಾಸ್ತವ್ಯ, ವೀಸಾ ನಿರ್ವಹಣೆ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಬೆಳಗಾವಿಯಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಜಾಲ ಬಯಲು; 13 ಆರೋಪಿಗಳ ಬಂಧನ, 9 ಪಿಸ್ತೂಲ್ ಜಪ್ತಿ

ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ 13 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 9 ಕಂಟ್ರಿ ಪಿಸ್ತೂಲ್‌ಗಳು ಹಾಗೂ ಶಸ್ತ್ರಾಸ್ತ್ರ ತಯಾರಿಕೆಗೆ ಬಳಸಲಾಗುತ್ತಿದ್ದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಸೇರಿದಂತೆ 13 ಮಂದಿ ಎಂದು ಗುರುತಿಸಲಾಗಿದೆ.

ಖಾನಾಪುರ ತಾಲೂಕಿನಲ್ಲಿನ ಕೊಲೆ ಪ್ರಕರಣವೊಂದರ ತನಿಖೆ ವೇಳೆ ಕಂಟ್ರಿ ಪಿಸ್ತೂಲ್ ಬಳಸಿ ಹತ್ಯೆ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಈ ಸುಳಿವಿನ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ, ಕಾಟಗಾಳಿ ಗ್ರಾಮದಲ್ಲಿ 2024ರಿಂದಲೇ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ಪ್ರಮುಖ ಆರೋಪಿ ಮಾರುತಿ ಸುತಾರ ಸಿಂಗಲ್ ಲೋಡೆಡ್ ಹಾಗೂ ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್‌ಗಳನ್ನು ತಯಾರಿಸುತ್ತಿದ್ದ ಎನ್ನಲಾಗಿದೆ. ಈ ಅಕ್ರಮ ಚಟುವಟಿಕೆಗೆ ಮರಿಯಪ್ಪ ನಾಯಕ ಆರ್ಥಿಕ ನೆರವು ನೀಡುತ್ತಿದ್ದರೆ, ವಿಶ್ವನಾಥ ದೇಸಾಯಿ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ಪೂರೈಸುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಇನ್ನೂ ವಿಶ್ವನಾಥ ದೇಸಾಯಿ ತನ್ನ ಬುಕ್‌ಸ್ಟಾಲ್ ಮೂಲಕ ಬಂದೂಕಿನ ಬಿಡಿಭಾಗಗಳು ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನಿಂದ 21 ಟ್ರಿಗರ್‌ಗಳು, 5 ಹೆಡ್‌ಗಳು, 15 ನಿಪ್ಪಲ್‌ಗಳು, ಒಂದು ಸೀಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೆಟ್‌ಗಳು, 499 ಸೀಸದ ಗೋಲಿಗಳು, 420 ಕೇಪ್‌ಗಳು ಹಾಗೂ 48 ಜೀವಂತ ಕಾರ್ತೂಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ ತಯಾರಿಕಾ ಹಂತದಲ್ಲಿದ್ದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿವಿಧ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದ್ದ ಎಂಟು ಕಂಟ್ರಿ ಪಿಸ್ತೂಲ್‌ಗಳನ್ನು ಸೇರಿ ಒಟ್ಟು ಒಂಬತ್ತು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಂಟ್ರಿ ಪಿಸ್ತೂಲ್‌ಗಳನ್ನು ಮುಖ್ಯವಾಗಿ ಬೇಟೆ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದು, ಅಕ್ರಮ ಶಸ್ತ್ರಾಸ್ತ್ರ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಅಕ್ರಮ ವಾಸ: 30 ಭಾರತೀಯ ಟ್ರಕ್ ಚಾಲಕರ ಬಂಧನ, ಗಡೀಪಾರಿಗೆ ಸಿದ್ಧತೆ

ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದು ವಾಣಿಜ್ಯ ಟ್ರಕ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುಮಾರು 30 ಭಾರತೀಯರನ್ನು ಫೆಡರಲ್ ಅಧಿಕಾರಿಗಳು ಬಂಧಿಸಿದ್ದು, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ (CBP) ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅಧಿಕಾರಿಗಳು, ಮೇ 11ರಿಂದ 15ರವರೆಗೆ ಅರಿಜೋನಾದ ಯುಮಾ ಗಡಿ ವಲಯದಲ್ಲಿ ನಡೆಸಲಾದ ‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ವೇಳೆ ಒಟ್ಟು 52 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧಿತರ ಪೈಕಿ 36 ಮಂದಿ ವಾಣಿಜ್ಯ ಸೆಮಿ-ಟ್ರಕ್‌ಗಳನ್ನು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ 36 ಟ್ರಕ್ ಚಾಲಕರಲ್ಲಿ 30 ಮಂದಿ ಭಾರತೀಯ ಮೂಲದವರಾಗಿದ್ದು, ಉಳಿದವರು ಮೆಕ್ಸಿಕೊ, ಎಲ್‌ ಸಾಲ್ವಡಾರ್ ಮತ್ತು ರಷ್ಯಾ ದೇಶಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಕೆಲವರು ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ವಾಷಿಂಗ್ಟನ್ ಹಾಗೂ ವರ್ಜೀನಿಯಾ ರಾಜ್ಯಗಳಲ್ಲಿ ನೀಡಲಾದ ವಾಣಿಜ್ಯ ಚಾಲನಾ ಪರವಾನಗಿಗಳನ್ನು ಹೊಂದಿದ್ದರೆ, ಕೆಲವರ ಬಳಿ ಯಾವುದೇ ಮಾನ್ಯ ಚಾಲನಾ ಪರವಾನಗಿಯೂ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಂಧಿತರ ಪೈಕಿ ಹಲವರು ಹಿಂದಿನ ಆಡಳಿತದ ಅವಧಿಯಲ್ಲಿ ಪಡೆದಿದ್ದ ಉದ್ಯೋಗ ದೃಢೀಕರಣ ದಾಖಲೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಉಳಿದುಕೊಂಡಿರುವುದು ಪತ್ತೆಯಾಗಿದೆ. ಆದರೆ ಆ ದಾಖಲೆಗಳ ಮಾನ್ಯತೆ ಈಗ ಮುಕ್ತಾಯಗೊಂಡಿರುವುದಾಗಿ ತಿಳಿಸಲಾಗಿದೆ.

ಫೆಡರಲ್ ಕಾನೂನುಗಳ ಪ್ರಕಾರ ಎಲ್ಲ ಬಂಧಿತರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

‘ಆಪರೇಷನ್ ಚೆಕ್‌ಮೇಟ್’ ಕಾರ್ಯಾಚರಣೆಯ ಉದ್ದೇಶ ಅಮೆರಿಕದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ಹಾಗೂ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಮಾ ಗಡಿ ವಲಯದ ಹಂಗಾಮಿ ಮುಖ್ಯ ಗಡಿ ಗಸ್ತು ಅಧಿಕಾರಿ ಡಸ್ಟಿನ್ ಕೌಡ್ಲ್ ಪ್ರತಿಕ್ರಿಯಿಸಿ, “ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಅಕ್ರಮ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆ. ಸಮುದಾಯಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟಲು ನಮ್ಮ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ವಾಣಿಜ್ಯ ಟ್ರಕ್ ಹಾಗೂ ಬಸ್‌ಗಳನ್ನು ಚಾಲನೆ ಮಾಡಲು ಅರ್ಹತೆ ಇಲ್ಲದ ವಿದೇಶಿ ನಾಗರಿಕರಿಗೆ ಪರವಾನಗಿ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಡ್ರಾಮಾ: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರು: ನಗರದಲ್ಲಿ ರಾಜ್ಯಪಾಲರ ವಿಐಪಿ ಸಂಚಾರದ ವೇಳೆ ಟ್ರಾಫಿಕ್ ತಡೆದ ಕಾರಣ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಅಡ್ಡಿಯಾಗಿದೆ ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದ ಯುವಕನ ಪ್ರಕರಣ ಇದೀಗ ಸಂಪೂರ್ಣ ಹೊಸ ತಿರುವು ಪಡೆದುಕೊಂಡಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಎಎಲ್ (HAL) ಠಾಣೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪ್ರತಿಭಟನೆ ನಡೆಸಿದ್ದ ಮೋಹಿತ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲೇ ಘಟನೆ ಕುರಿತು ಹೇಳಲಾಗಿದ್ದ ‘ಗರ್ಭಿಣಿ ಪತ್ನಿ’ ವಿಚಾರವೇ ಸುಳ್ಳು ಎಂದು ಪೊಲೀಸರು ದೃಢಪಡಿಸಿದ್ದಾರೆ.

ವಿಚಾರಣೆ ವೇಳೆ ಮೋಹಿತ್ ನೀಡಿದ ಹೇಳಿಕೆಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆತ ಕಾರಿನಲ್ಲಿ ಒಬ್ಬನೇ ಪ್ರಯಾಣಿಸುತ್ತಿದ್ದ. ವಿಐಪಿ ಮೂವ್‌ಮೆಂಟ್ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್‌ನಲ್ಲಿ ಸುಮಾರು 15 ನಿಮಿಷ ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.

ಟ್ರಾಫಿಕ್ ವಿಳಂಬದಿಂದ ಕೋಪಗೊಂಡು ತುರ್ತು ಪರಿಸ್ಥಿತಿ ಇದೆ ಎಂಬಂತೆ ತೋರಿಸಲು ತಾನು ಪತ್ನಿ ಗರ್ಭಿಣಿ ಎಂದು ಸುಳ್ಳು ಹೇಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಗಿ ಆತ ಸ್ಪಷ್ಟಪಡಿಸಿದ್ದಾನೆ. ಪೊಲೀಸರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಅಥವಾ ಉದ್ದೇಶ ಇರಲಿಲ್ಲವೆಂದು ಸಹ ಆತ ಹೇಳಿಕೆ ನೀಡಿದ್ದಾನೆ.

ಸದ್ಯಕ್ಕೆ ಮೋಹಿತ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಆತನಿಂದ ಲಿಖಿತ ಹೇಳಿಕೆ ಪಡೆದು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಇಂತಹ ಘಟನೆಗಳಲ್ಲಿ ದೃಢೀಕರಿಸದ ಮಾಹಿತಿಯನ್ನು ನಂಬಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

error: Content is protected !!