ರಾಮನಗರ: ತರಕಾರಿ ಗಿಡಗಳನ್ನು ಹಸು ಮೇಯ್ದ ವಿಚಾರಕ್ಕೆ ನೆರೆಮನೆಯವರ ನಡುವೆ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಗೇರಿಯಲ್ಲಿ ನಡೆದಿದೆ.
ಮೃತರನ್ನು ಜಯಮ್ಮ (55) ಎಂದು ಗುರುತಿಸಲಾಗಿದೆ. ಜಯಮ್ಮ ಹಾಗೂ ಪಕ್ಕದ ಮನೆಯ ನಿವಾಸಿ ಶ್ರೀನಿವಾಸ್ ಕುಟುಂಬದ ನಡುವೆ ಈ ಹಿಂದೆ ಕೂಡ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಇತ್ತು ಎನ್ನಲಾಗಿದೆ.
ಘಟನೆ ದಿನ ಜಯಮ್ಮ ತಮ್ಮ ಮನೆಯ ಪಕ್ಕದಲ್ಲಿ ಬೆಳೆಸಿದ್ದ ತರಕಾರಿ ಗಿಡಗಳನ್ನು ಶ್ರೀನಿವಾಸ್ಗೆ ಸೇರಿದ ಹಸು ಮೇಯ್ದಿದೆ. ಇದನ್ನು ಪ್ರಶ್ನಿಸಿದ ವೇಳೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿ ಗಲಾಟೆಗೆ ತಿರುಗಿದೆ.
ಗಲಾಟೆ ವೇಳೆ ಶ್ರೀನಿವಾಸ್ ಜಯಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದು, ಕಪಾಳಕ್ಕೆ ಹೊಡೆದ ಪರಿಣಾಮ ಅವರು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಶ್ರೀನಿವಾಸ್ನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಟೌನ್ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



