Home Blog Page 289

ಕಲ್ಲಂಗಡಿ ಮೂತ್ರಪಿಂಡಕ್ಕೆ ಹಾನಿಕಾರಕವೇ? ಬೇಸಿಗೆಯಲ್ಲಿ ತಿನ್ನುವ ಮೊದಲು ತಿಳಿಯಲೇಬೇಕಾದ ಸತ್ಯ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನವರು ನೀರಿನ ಅಂಶ ಇರುವ ಹಣ್ಣುಗಳನ್ನು ಸೇವಿಸುತ್ತಾರೆ. ಅವುಗಳಲ್ಲಿ ಕಲ್ಲಂಗಡಿ ಪ್ರಮುಖವಾಗಿದೆ.

ದೇಹದಲ್ಲಿ ನೀರಿನ ಕೊರತೆಯನ್ನು ತಡೆಯಲು ಇದು ಸಹಾಯಕವಾದರೂ, ಕೆಲವರು ಇದು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ ಎಂಬ ಅನುಮಾನ ಹೊಂದಿದ್ದಾರೆ. ಈ ಬಗ್ಗೆ ತಜ್ಞರು ನೀಡಿರುವ ಮಾಹಿತಿಯಿದು.

ಕಲ್ಲಂಗಡಿ ಮೂತ್ರಪಿಂಡಕ್ಕೆ ಹಾನಿಕಾರಕವೇ?

ಆರೋಗ್ಯ ತಜ್ಞರ ಪ್ರಕಾರ, ಮಿತವಾಗಿ ಕಲ್ಲಂಗಡಿ ಸೇವಿಸುವುದು ಮೂತ್ರಪಿಂಡಗಳಿಗೆ ಹಾನಿಕಾರಕವಲ್ಲ. ಇದರಲ್ಲಿ ಸುಮಾರು 90% ನೀರಿನ ಅಂಶವಿದ್ದು, ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ.

ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಳ್ಳುವುದರಿಂದ ಮೂತ್ರಪಿಂಡಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ. ಜೊತೆಗೆ, ಇದರಲ್ಲಿ ವಿಟಮಿನ್ C, ಪೊಟ್ಯಾಸಿಯಮ್ ಮತ್ತು ಅಮೈನೋ ಆಮ್ಲಗಳೂ ಇರುವುದರಿಂದ ದೇಹದ ಸಮತೋಲನವನ್ನು ಉಳಿಸಲು ನೆರವಾಗುತ್ತದೆ.

ಕಿಡ್ನಿ ರೋಗಿಗಳು ತಿನ್ನಬಹುದೇ?

ಮೂತ್ರಪಿಂಡ ಸಮಸ್ಯೆ ಇರುವವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಕಲ್ಲಂಗಡಿ ಸೇವಿಸಬೇಕು. ಸಾಮಾನ್ಯ ಸ್ಥಿತಿಯಲ್ಲಿ ಮಿತ ಪ್ರಮಾಣದಲ್ಲಿ ತಿನ್ನುವುದು ಸಮಸ್ಯೆಯಾಗುವುದಿಲ್ಲ. ಆದರೆ ತೀವ್ರ ಕಿಡ್ನಿ ಕಾಯಿಲೆ ಇರುವವರು ಆಹಾರ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಕಲ್ಲಂಗಡಿ ‘ಕಿಡ್ನಿ ಕ್ಲೀನ್’ ಮಾಡುತ್ತದೆಯೇ?

ಬಹಳವರು ಕಲ್ಲಂಗಡಿ ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ ಎಂದು ನಂಬುತ್ತಾರೆ. ಆದರೆ ವೈದ್ಯಕೀಯವಾಗಿ ಇದು ಸಂಪೂರ್ಣ ಸತ್ಯವಲ್ಲ. ಮೂತ್ರಪಿಂಡಗಳು ಸ್ವತಃ ದೇಹದ ವಿಷಗಳನ್ನು ಹೊರಹಾಕುವ ಅಂಗವಾಗಿವೆ. ಕಲ್ಲಂಗಡಿ ದೇಹಕ್ಕೆ ತೇವಾಂಶ ಒದಗಿಸುವುದರಲ್ಲಿ ಸಹಾಯ ಮಾಡುತ್ತದೆ, ಆದರೆ ‘ಡಿಟಾಕ್ಸ್’ ಮಾಡುವ ವಿಶೇಷ ಶಕ್ತಿ ಹೊಂದಿಲ್ಲ.

ಜಾಗ್ರತೆ ಅಗತ್ಯ!

ಕಲ್ಲಂಗಡಿ ಆರೋಗ್ಯಕರ ಹಣ್ಣು ಆಗಿದ್ದರೂ, ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ, ವಿಶೇಷವಾಗಿ ಮಧುಮೇಹ ಇರುವವರು ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.

ಒಟ್ಟಿನಲ್ಲಿ ಕಲ್ಲಂಗಡಿ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಯಾವುದೇ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆದು ಆಹಾರ ಕ್ರಮವನ್ನು ಅನುಸರಿಸುವುದು ಅತ್ಯುತ್ತಮ.

ಕುಲದೇವರ ಸ್ಮರಣೆಯೊಂದಿಗೆ ಹುಂಡಿ ಪೂಜೆ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ!

ಕುಟುಂಬದ ಆರ್ಥಿಕ ಸ್ಥಿರತೆ ಮತ್ತು ಹಣದ ಕೊರತೆ ತಪ್ಪಿಸಲು ಸರಳ ವಾಸ್ತು ಕ್ರಮವೊಂದು ಗಮನ ಸೆಳೆಯುತ್ತಿದೆ.

ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಹುಂಡಿಯನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸುವುದರಿಂದ ಹಣದ ಹರಿವು ಉತ್ತಮವಾಗುತ್ತದೆ ಎಂಬ ನಂಬಿಕೆ ವ್ಯಕ್ತವಾಗುತ್ತಿದೆ.

ಈ ಕ್ರಮದ ಪ್ರಕಾರ, ಹುಂಡಿಯನ್ನು ಮೊದಲು ಅರಿಶಿನ ಹಾಗೂ ಕುಂಕುಮದಿಂದ ಪೂಜಿಸಿ, ಅದರ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಲಾಗುತ್ತದೆ. ಬಳಿಕ ತಾಮ್ರದ ನಾಣ್ಯವನ್ನು ಹಾಕಿ, ಅಗತ್ಯವಿದ್ದರೆ ಇತರ ನಾಣ್ಯಗಳನ್ನೂ ಸೇರಿಸಲಾಗುತ್ತದೆ.

ವಾರಕ್ಕೆ ಕನಿಷ್ಠ ಒಂದು ಬಾರಿ, ವಿಶೇಷವಾಗಿ ಶುಕ್ರವಾರದಂದು, ನಾಣ್ಯ ಅಥವಾ ನೋಟನ್ನು ಭಕ್ತಿಯಿಂದ ಹುಂಡಿಗೆ ಹಾಕುವ ಪದ್ಧತಿಯನ್ನು ಪಾಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಹಣ ಹಾಕುವ ಸಂದರ್ಭದಲ್ಲಿ ಕುಟುಂಬದ ಕುಲದೇವರನ್ನು ಸ್ಮರಿಸುವುದರಿಂದ ಶುಭ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ವರ್ಷಕ್ಕೊಮ್ಮೆ ಈ ಮಣ್ಣಿನ ಹುಂಡಿಯನ್ನು ತೆರೆಯಲಾಗುತ್ತದೆ. ಸಂಗ್ರಹಿತ ಹಣವನ್ನು ಮಕ್ಕಳ ಶಿಕ್ಷಣ, ಮನೆ ಅಗತ್ಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ. ನಂತರ ಹೊಸ ಹುಂಡಿಯನ್ನು ಮತ್ತೆ ಅದೇ ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸುವ ಪದ್ಧತಿಯನ್ನು ಅನುಸರಿಸಲಾಗುತ್ತದೆ.

ಈ ಸರಳ ವಿಧಾನದಿಂದ ಮನೆಯಲ್ಲಿನ ಹಣದ ಹರಿವು ನಿರಂತರವಾಗಿರುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಜನರಲ್ಲಿ ಪ್ರಚಲಿತವಾಗಿದೆ.

ಮತ ಎಣಿಕೆ ದಿನ ತಿರುಪತಿಯಲ್ಲಿ ನಟಿ ತ್ರಿಷಾ ವಿಶೇಷ ಪೂಜೆ

ಚೆನ್ನೈ: ತಮಿಳುನಾಡು ಚುನಾವಣಾ ಫಲಿತಾಂಶದ ದಿನ ರಾಜಕೀಯ ಜೊತೆಗೆ ಸಿನಿ ವಲಯದಲ್ಲೂ ಚರ್ಚೆ ತೀವ್ರಗೊಂಡಿದೆ. ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸಿರುವ ನಟ ವಿಜಯ್ಗೆ ಇಂದು ನಿರ್ಣಾಯಕ ಕ್ಷಣವಾಗಿದೆ.

ಇದೀಗ ನಟಿ ತ್ರಿಷಾ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ಹೊಸ ಕುತೂಹಲಕ್ಕೆ ಕಾರಣವಾಗಿದೆ. ಮತ ಎಣಿಕೆ ಆರಂಭಕ್ಕೂ ಮುನ್ನ ಈ ಪೂಜೆ ನಡೆದಿರುವುದರಿಂದ, ಇದು ವಿಜಯ್ ಗೆ ಶುಭಕೋರಿಕೆಯೇ ಎಂಬ ಚರ್ಚೆ ಜೋರಾಗಿದೆ.

ವಿಜಯ್ ರಾಜಕೀಯ ಪ್ರವೇಶದಿಂದಲೇ ಈ ಚುನಾವಣೆ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದು, ತ್ರಿಷಾ ಅವರ ಈ ನಡೆ ಇನ್ನಷ್ಟು ಹೈಪ್ ಸೃಷ್ಟಿಸಿದೆ.

IPL 2026: ಇಂದು ವಾಂಖೆಡೆಯಲ್ಲಿ MI–LSG ಹೈವೋಲ್ಟೇಜ್ ಕದನ; ಸೋತ ತಂಡ ಟೂರ್ನಿಯಿಂದ ಔಟ್!

ಇಂಡಿಯನ್ ಪ್ರೀಮಿಯರ್ ಲೀಗ್ 2026ರ 47ನೇ ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ.

ಪ್ಲೇಆಫ್ ಆಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ 8 ಪಂದ್ಯಗಳಲ್ಲಿ 6 ಸೋಲು ಕಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು, ಸತತ ಐದು ಸೋಲುಗಳಿಂದ ಸಂಕಷ್ಟದಲ್ಲಿದೆ. ರಿಷಭ್ ಪಂತ್ ನೇತೃತ್ವದ ತಂಡ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದು, ಬೌಲಿಂಗ್ ವಿಭಾಗದಲ್ಲಿ ಮಾತ್ರ ಸ್ವಲ್ಪ ಸ್ಥಿರತೆ ಕಾಣುತ್ತಿದೆ.

ಮುಂಬೈ ಇಂಡಿಯನ್ಸ್ ಕೂಡ 9 ಪಂದ್ಯಗಳಲ್ಲಿ 7 ಸೋಲು ಕಂಡು ಒತ್ತಡದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಇತ್ತೀಚಿನ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಸೋಲಾದರೆ ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಭೀತಿ ಎದುರಾಗಲಿದೆ.

ಮುಂಬೈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ರೋಹಿತ್ ಶರ್ಮಾ ಗಾಯದ ಕಾರಣದಿಂದ ಅನುಪಸ್ಥಿತಿಯಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಲಕ್ನೋ 6 ಪಂದ್ಯಗಳನ್ನು ಗೆದ್ದಿರುವುದು ಗಮನಾರ್ಹವಾಗಿದೆ.

ಇಂದಿನ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಪ್ಲೇಆಫ್ ಆಸೆಗೆ ಜೀವಂತಿಕೆ ಸಿಗಲಿದ್ದು, ಸೋಲುವ ತಂಡಕ್ಕೆ ಟೂರ್ನಿಯಿಂದ ಹೊರಬೀಳುವ ಭೀತಿ ಹೆಚ್ಚಲಿದೆ ಎಂದು ಕ್ರಿಕೆಟ್ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ತೋಂಟದಾರ್ಯ ಜಾತ್ರೆಯಲ್ಲಿ ಅವಘಡ: ವಿನಾಯಕ ಮಾನ್ವಿ ಸೇರಿ ಹಲವರ ವಿರುದ್ಧ ಕ್ರಿಮಿನಲ್ ಕೇಸ್!

ಗದಗ: ಜಿಲ್ಲೆಯ ಪ್ರಸಿದ್ಧ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಜಾತ್ರೆಯ ಅತಿ ದೊಡ್ಡ ಆಕರ್ಷಣೆಯಾಗಿದ್ದ ‘ಡ್ಯಾನ್ಸಿಂಗ್ ಫ್ಲೋರ್’ ಮನರಂಜನಾ ಯಂತ್ರವು ಚಾಲನೆಯಲ್ಲಿರುವಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದಿದ್ದು, ಕನಿಷ್ಠ 21 ಜನರು ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಲ್ಲಿ ಜಹೀರ ಅಹ್ಮದ್ ತಂದೆ ನಜೀರ ಅಹ್ಮದ್ ಖಾಜಿ (42 ವರ್ಷ), ಕಲಂದರ ತಂದೆ ಜಹೀರ ಅಹ್ಮದ್ ಖಾಜಿ (15 ವರ್ಷ), ಶಿಫಾ ತಂದೆ ಜಹೀರ ಅಹ್ಮದ್ ಖಾಜಿ (16 ವರ್ಷ), ಸಮೀನಾ ಕೋಂ. ಮೆಹಬೂಬ್ ಭಾಷಾ ಗಂಗಾವತಿ (18 ವರ್ಷ), ಸನಾ ತಂದೆ ಮೆಹಬೂಬ್ ಭಾಷಾ ಖಾಜಿ (15 ವರ್ಷ), ಸಗುಪ್ತಾ ತಂದೆ ಸಾದಿಕ್ ಭಾಷಾ ಖಾಜಿ (14 ವರ್ಷ), ಜ್ಯೋತಿ ತಂದೆ ರಾಜಪ್ಪ ಗಬ್ಬೂರ (18 ವರ್ಷ), ನಾಜಿಯಾ ಕೋಂ. ಸುಲೇಮಾನ್ ತೋಟಿಗಾರ (20 ವರ್ಷ), ಕಿರಣ ತಂದೆ ಉಮೇಶ ಹುಲ್ಲೂರ (25 ವರ್ಷ), ದೀಪಕ ತಂದೆ ಅನುರಾಜ ಹುಬ್ಬಳ್ಳಿ (29 ವರ್ಷ), ರಾಜೇಸಾಬ ತಂದೆ ಇಮಾಮಸಾಬ ಅಣ್ಣಿಗೇರಿ (23 ವರ್ಷ), ಸುಮನ್ ಕೋಂ. ಮಂಜು ನವಲಗುಂದ (28 ವರ್ಷ), ವಿಶಾಲ ತಂದೆ ಮಂಜು ನವಲಗುಂದ (06 ವರ್ಷ), ಸಲ್ಮಾ ತಂದೆ ಅಬಾದವುಲ್ಲಾ ಹಂದೂರ (17 ವರ್ಷ), ಖುಷಿ ತಂದೆ ಗಿರೀಶ ದಲಬಂಜನ (14 ವರ್ಷ), ಕಿರಣ ತಂದೆ ರಮೇಶ ಕಬಾಡಿ (21 ವರ್ಷ), ಮಾಹೀನ್ ತಂದೆ ಶಬ್ಬೀರ ಕಂದಗಲ್ (10 ವರ್ಷ), ರುಬಿನಾ ಕೋಂ. ಶಬ್ಬೀರ ಅಹ್ಮದ ಕಂದಗಲ್ (36 ವರ್ಷ), ಮುಸ್ತಾಕ ತಂದೆ ಬಾಬು ಸಾಬ ಹಳೆಮನಿ (25 ವರ್ಷ), ಪ್ರದೀಪಕುಮಾರ ತಂದೆ ಮಂಜುನಾಥ ಕಮ್ಮಾರ (25 ವರ್ಷ), ಸತೀಶ ಗಬ್ಬೂರ (22 ವರ್ಷ) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.

ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಮ್.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರು ವಿರುದ್ಧ ಪ್ರಕರಣ ದಾಖಲಾಗಿದೆ.

ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಕಲಂ 289, 125(A), 125(B) ಹಾಗೂ 292 ರಡಿ ಮೊಕದ್ದಮೆ ಹೂಡಲಾಗಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಮುಖಂಡ ರಾಜು ಖಾನಪ್ಪನವರ ‌ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕಿ ಆರ್.ಆರ್. ಮುಂಡೆವಾಡಗಿ ಅವರು ಕೈಗೊಂಡಿದ್ದಾರೆ.

ಉತ್ತರ ಕನ್ನಡದಲ್ಲಿ ಹೃದಯವಿದ್ರಾವಕ ಘಟನೆ: 13 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಉತ್ತರ ಕನ್ನಡ: ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಆಘಾತಕಾರಿ ಘಟನೆ ನಡೆದಿದೆ.

13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಗಂಗುಕವಳಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ವಿದ್ಯಾರ್ಥಿನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೂ ಅಕಸ್ಮಾತ್ ಈ ದುರಂತ ಸಂಭವಿಸಿದೆ. ಸಾವಿಗೆ ಮುನ್ನ ದಿನ ಸಂಜೆಯವರೆಗೂ ಆಕೆ ಸಹಜವಾಗಿ ಆಟವಾಡಿ ಸಂತೋಷದಿಂದ ಇದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ಆದರೆ ಮರುದಿನ ಬೆಳಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಚಾನಕ್ ಅಸ್ವಸ್ಥಗೊಂಡು ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಅಕಾಲಿಕ ಮರಣದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಜಾತ್ರೆಯಲ್ಲಿ ಅವಘಡ ಕೇಸ್: ಮಠದ ಆಡಳಿತದ ವಿರುಧ್ದ ಸಂಬಂಧಿಕರ ಆಕ್ರೋಶ! ಆಸ್ಪತ್ರೆ ಮುಂದೆ ಮುಗಿಲುಮುಟ್ಟಿದ ಆಕ್ರಂದನ!

ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಸಂಭವಿಸಿದ ಭೀಕರ ಅವಘಡದಲ್ಲಿ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್​ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಗಾಯಾಳು ಸಂಬಂಧಿಗಳ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿದೆ.

“ನಮ್ಮವರ ಕಣ್ಣೆದುರೇ ತೊಟ್ಟಿಲು ಕಳಚಿ ಬಿತ್ತು. ಜನರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ಮರೆಯಲಾಗದು. ಮಕ್ಕಳು, ಮಹಿಳೆಯರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ತುಂಬಾ ಭಯಾನಕವಾಗಿತ್ತು. ಕೆಲವರು ರಕ್ತದ ಗಾಯಗಳೊಂದಿಗೆ ನರಳುತ್ತಿದ್ದರು. ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ತರಬೇಕಾಯಿತು,” ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಈ ಘಟನೆಗೆ ತೋಂಟದಾರ್ಯ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಜಾತ್ರೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಷ್ಟೇ ಅಲ್ಲದೆ ರಾತ್ರಿಯೇ ಮಠದ ಆವರಣದಲ್ಲಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೋಂಟದಾರ್ಯ ಮಠದ ಧನದಾಹಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ತಿಂಗಳುಗಳ ಕಾಲ ಜಾತ್ರೆ ನಡೆಸುವ ಅಗತ್ಯ ಹಾಗೂ ಸರಕಾರಿ ಜಾಗೆಯ ದುರ್ಬಳಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ಇಂತಹ ಆಟೋಟಗಳಿಗೆ ಪರವಾನಗಿ ಕೊಟ್ಟವರು ಯಾರು ಎಂದು ‌ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಮಳೆ ಅಲರ್ಟ್: ಮುಂದಿನ 3 ದಿನ ಗುಡುಗು ಸಹಿತ ಮಳೆಯ ಮುನ್ಸೂಚನೆ!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯ ಆರ್ಭಟಿಸಿದ್ದು, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ದಿಢೀರನೆ ಭಾರೀ ಮಳೆಯಾಗಿದೆ.

ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆ ಇರುವುದಾಗಿ ತಿಳಿಸಿದೆ.

ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಬೀದರ್, ಕಲ್ಬುರ್ಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 5 ಮತ್ತು ಮೇ 7ರಂದು ಸಹ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ತೋಂಟದಾರ್ಯ ಜಾತ್ರೆಯಲ್ಲಿ ಭಾರಿ ಅವಘಡ: ಟೋರಾ-ಟೋರಾ ತೊಟ್ಟಿಲು ಮುರಿದು 18 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಗದಗ: ತೋಂಟದಾರ್ಯ ಮಠ ಜಾತ್ರೆಯಲ್ಲಿ ಭಾನುವಾರ ರಾತ್ರಿ ಭಾರಿ ಅವಘಡ ಸಂಭವಿಸಿದ್ದು, ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 18 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಜಾತ್ರೆಯಲ್ಲಿ ಜನಪ್ರಿಯವಾಗಿರುವ ‘ಟೋರಾ-ಟೋರಾ’ (ಡ್ಯಾನ್ಸಿಂಗ್ ಫ್ಲೈ ಜೋಕಾಲಿ) ಆಟದಲ್ಲಿ ತೊಟ್ಟಿಲುಗಳ ವೀಲ್ ಏಕಾಏಕಿ ಕಟ್ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತೊಟ್ಟಿಲುಗಳು ಮುರಿದು ಬಿದ್ದಿದ್ದು, ಅಲ್ಲಿ ಇದ್ದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗಾಯಾಳುಗಳನ್ನು ತಕ್ಷಣವೇ ಅಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸ್ಥಳದಲ್ಲಿ ಇದ್ದ ಪೋಷಕರು ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದರು.

ಘಟನೆ ನಡೆದ ಸ್ಥಳಕ್ಕೆ ಗದಗ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ದಾಳಿ: ವ್ಯಕ್ತಿಗೆ ಗಂಭೀರ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕಾಳಿ ನದಿಯಲ್ಲಿ ಮೊಸಳೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ದಾಂಡೇಲಿಯ ಕುಳಗಿ ರಸ್ತೆಯ ನಿವಾಸಿ ಆನಂದ ಲಲ್ಲೂಜಿ ಮಣ್ಣವಡ್ಡರ (42) ದಾಳಿಗೆ ಒಳಗಾದವರು. ಸಾರ್ವಜನಿಕ ಶೌಚಾಲಯ ಹದಗೆಟ್ಟಿರುವ ಹಿನ್ನೆಲೆ ನಿತ್ಯಕರ್ಮಕ್ಕಾಗಿ ಅವರು ಕಾಳಿ ನದಿಗೆ ಇಳಿದಿದ್ದ ವೇಳೆ ಮೊಸಳೆ ಏಕಾಏಕಿ ದಾಳಿ ನಡೆಸಿದೆ.

ದಾಳಿಯಿಂದ ಗಾಯಗೊಂಡ ಆನಂದ ಕಿರುಚಾಡಿದ ಧ್ವನಿ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮೊಸಳೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ. ದಾಳಿಯಲ್ಲಿ ಅವರ ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ.

ಗಾಯಾಳುವಿಗೆ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್‌ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.