ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದ ನಾಲ್ವರು ಮಕ್ಕಳು ದಾರುಣ ಅಂತ್ಯ ಕಂಡಿರುವ ಘಟನೆ ಜರುಗಿದೆ.
6 ವರ್ಷದ ಕಿರಣ್, 11 ವರ್ಷದ ಬಸಮ್ಮ, 6 ವರ್ಷದ ಶರತ್, 7 ವರ್ಷದ ಹನುಮೇಶ್ ಮೃತರು. ಶಾಲೆಗೆ ರಜೆ ಇದ್ದಿದ್ದರಿಂದ ನಾಲ್ವರು ಮಕ್ಕಳು ಒಟ್ಟಾಗಿ ಈಜಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ದುರಂತ ಸಂಭವಿಸಿದೆ.
ಮೃತ ಮಕ್ಕಳೆಲ್ಲರೂ ತೀರಾ ಚಿಕ್ಕ ವಯಸ್ಸಿನವರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಕೊಪ್ಪಳ:- ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್-ಡೀಸೆಲ್ ಸಿಗಲ್ಲ ಎಂಬ ವದಂತಿ ಹರಿದಾಡ್ತಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಂಕ್ ಗಳ ಮುಂದೆ ರಾತ್ರಿಯಿಡಿ ಕ್ಯೂ ನಿಂತು ಜನತೆ ಪೆಟ್ರೋಲ್ ಸ್ಟಾಕ್ ಮಾಡಿಕೊಳ್ತಿದ್ದಾರೆ. ಇದೀಗ ಕೊಪ್ಪಳದಲ್ಲಿಯೂ ಡ್ರಮ್, ಕ್ಯಾನ್ ಗಳಿಗೆ ಡೀಸೆಲ್, ಪೆಟ್ರೋಲ್ ಹಾಕಿಸಿಕೊಂಡು ಸ್ಟಾಕ್ ಮಾಡಲು ಮುಂದಾಗಿದ್ದಾರೆ.
ಗಂಗಾವತಿ ತಾಲ್ಲೂಕಿನ ಪೆಟ್ರೋಲ್ ಬಂಕ್‌ಗಳಿಗೆ ಜನರು ಡ್ರಮ್, ಕ್ಯಾನ್ ತಂದು, ಹೆಚ್ಚಿನ ಪ್ರಮಾಣದಲ್ಲಿ ಡಿಸೇಲ್ ತುಂಬಿಸಿಕೊಂಡಿದ್ದಾರೆ. ಪೆಟ್ರೋಲ್ ಸಿಬ್ಬಂದಿ ಯಾವುದೇ ಸಮಸ್ಯೆ ಇಲ್ಲ ಅಂತ ಹೇಳುತ್ತಿದ್ದರೂ ಜನ ಮಾತ್ರ ಅದಕ್ಕೆ ಕಿವಿಗೊಡದೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.
ಸ್ಥಳೀಯ ಅಧಿಕಾರಿಗಳು ಮತ್ತು ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ, ಜನರನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹಿಸಿಕೊಳ್ಳಬೇಡಿ ಎಂದು ಎಚ್ಚರಿಸುತ್ತಿದ್ದಾರೆ.
ಗದಗ: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗಿನ ಜಾವ ಗೃಹೋಪಯೋಗಿ ಅನಿಲ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಘಟನೆ ನಂತರ ಕೆಲಕಾಲ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಭಾರತ್ ಗ್ಯಾಸ್ ಕಂಪನಿಗೆ ಸೇರಿದ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ, ರೋಣ–ಗಜೇಂದ್ರಗಡ ರಸ್ತೆಯಲ್ಲಿ ಪಟ್ಟಣದ ಶೇಖರಯ್ಯ ಅಜ್ಜನ ಮಠದ ಸಮೀಪ ಪಲ್ಟಿಯಾಗಿದೆ. ಗಜೇಂದ್ರಗಡ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ರಸ್ತೆ ಪಕ್ಕದ ಗುಂಡಿಗೆ ಜಾರಿದ್ದು, ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿ ತುಂಬಿದ್ದ ಅನಿಲ ಸಿಲಿಂಡರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್‌ಗಳಿಂದ ಸೋರಿಕೆ ಆಗದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದು ಬಂದಿದೆ. ರೋಣ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಮನಗರ: ಅಕ್ರಮಗಳನ್ನು ತಡೆಯಬೇಕಿದ್ದ ಅಧಿಕಾರಿಗಳೇ ಮದ್ಯ ಮಾರಾಟ ವಿಚಾರವಾಗಿ ಕಳ್ಳಾಟ ಆಡುತ್ತಿರುವ ಪ್ರಸಂಗವೊಂದು ರಾಮನಗರದಲ್ಲಿ ಬೆಳಕಿಗೆ ಬಂದಿದೆ.
ಐಜೂರು ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ಹಣದಾಸೆಗೆ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ನಡೆಯುತ್ತಿರೋದು ಆಘಾತ ಮೂಡಿಸಿದೆ. ನಿಗಮದ ಸೂಪರ್ ವೈಸರ್ ಸುರೇಶ್ ಮನೆಯಲ್ಲಿಯೇ ಇವು ಪತ್ತೆಯಾಗಿದ್ದು, ವಿವಿಧ ಕಂಪನಿಗಳ 20 ಬಾಕ್ಸ್ ಮದ್ಯ ಕಂಡುಬಂದಿದೆ. ಹಲವೆಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಅವಧಿಮೀರಿದ ಮದ್ಯವನ್ನು ನಾಶಪಡಿಸುವ ಬದಲು ಕರ್ನಾಟಕ ಪಾನೀಯ ನಿಗಮದ ಗೋದಾಮಿನಿಂದ ಅವನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಲಾಗಿತ್ತು. ಇವನ್ನು ಗ್ರಾಮೀಣ ಭಾಗದಲ್ಲಿ ಮಾರಲು ಪ್ಲ್ಯಾನ್ ನಡೆದಿತ್ತು ಎನ್ನಲಾಗಿದೆ.
ಅವಧಿಮೀರಿದ ಯುಬಿ ಎಕ್ಸ್ಪರ್ಟ್ ಪ್ರಿಮಿಯಂ ಸ್ಟ್ರಾಂಗ್ ಬಿಯರ್, ಕಿಂಗ್ ಫಿಶರ್, ಆಲ್ಟ್ರಾ ಪ್ರಿಮಿಯಂ ಸ್ಟ್ರಾಂಗ್ ಬಿಯರ್ ಹಾಗೂ ಮ್ಯಾಜಿಕ್ ಮೂಮೆಂಟ್ ವೋಡ್ಕಾ ಕಾಕೈಟ್ನ ಸಿಬ್ಬಂದಿ ಸೀಜ್ ಮಾಡಿದ್ದರು. ಈಗಾಗಲೇ ಮದ್ಯದ ಅವಧಿಮೀರಿ ಮೂರ್ನಾಲ್ಕು ತಿಂಗಳು ಕಳೆದಿದ್ದು, ಸೀಜ್ ಮಾಡಿದ್ದ ಅವನ್ನು ನಾಶಪಡಿಸಲು ಅಬಕಾರಿ ಡಿಸಿ ಸೂಚಿಸಿದ್ದರು. ಹೀಗಿದ್ದರೂ ಗೋದಾಮಿನ ಸಿಸಿಟಿವಿ ಆಫ್ ಮಾಡಿಸಿ 640 ಬಾಕ್ಸ್ಗಳಲ್ಲಿ 20 ಬಾಕ್ಸ್ಗಳನ್ನು ನಾಶಪಡಿಸದೇ ತಂದು ಸಂಗ್ರಹ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.
ರಾಮನಗರದ ಅರ್ಚಕರಹಳ್ಳಿ ಬಳಿಯಿರುವ ಪಾನೀಯ ನಿಗಮದ ಗೋದಾಮಿನಿಂದ ಮದ್ಯ ಸಾಗಾಟದ ವೇಳೆ ಸೂಪರ್ ವೈಸರ್ ಸುರೇಶ್ಗೆ ಗೋದಾಮು ಅಧಿಕಾರಿಗಳು, ಸಿಬ್ಬಂದಿ ಸಾಥ್ ನೀಡಿದ್ದರು. ಹಣದಾಸೆಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದ್ದು, ಐಜೂರು ಪೊಲೀಸರಿಂದ ಸೂಪರ್ ವೈಸರ್ ಸುರೇಶ್(52) ಬಂಧಿಸಲಾಗಿದೆ. ಬಳಿಕ ಸ್ಟೇಷನ್ ಬೇಲ್ ನೀಡಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಪ್ರಕರಣದ ಬಗ್ಗೆ ಐಜೂರು ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸುಲಭವಾಗಿ ಮಣಿಸಿದ RCB ಗೆಲುವಿನ ಶುಭಾರಂಭ ಮಾಡಿದೆ.
ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದ ಎಸ್ಆರ್ಹೆಚ್ ತಂಡವನ್ನು ಮಕಾಡೆ ಮಲಗಿಸಿದ ಆರ್ಸಿಬಿ ಕೇವಲ 15.4 ಓವರ್ಗಳಲ್ಲಿ 202 ರನ್ ಬೆನ್ನಟ್ಟಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 201 ರನ್ ಕಲೆಹಾಕಿತು. ಗೆಲುವಿಗೆ 202 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಆರ್ಸಿಬಿ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು.
ಪಂದ್ಯದಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು. ಈ 69 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ. ಶೊಯೆಬ್ ಮಲಿಕ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದೀಗ ಕೇವಲ 398 ಟಿ20 ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.
ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಏರಿಕೆಯಾಗಿದೆ.
ಕಳೆದ 3–4 ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಹೆಚ್ಚುತ್ತಿದ್ದು, ವಾರಾಂತ್ಯದಲ್ಲಿ ಗ್ರಾಂಗೆ ಸುಮಾರು 310 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ 5 ರೂ. ಏರಿಕೆ ಕಂಡು ಬಂದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,090 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,35,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಭದ್ರತಾ ಲೋಪ ಬಹಿರಂಗವಾಗಿದ್ದು, ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮಗಳಿಂದ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದ್ದರೂ, ಈ ಘಟನೆ ಮತ್ತೆ ಆತಂಕ ಹುಟ್ಟಿಸಿದೆ. ವೈರಲ್ ವಿಡಿಯೋದಲ್ಲಿ ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ಸೌಲಭ್ಯಗಳಿರುವುದಾಗಿ ಹೇಳಲಾಗಿದೆ.
ವಿಡಿಯೋ ವೈರಲ್ ಆದ ತಕ್ಷಣ ಅಧಿಕಾರಿಗಳು ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, 9ನೇ ಬ್ಯಾರಕ್‌ನ ಡ್ರೈನೇಜ್ ಮಾರ್ಗದಲ್ಲಿ ಹಾಲಿನ ಪ್ಯಾಕೆಟ್‌ಗಳಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ.
ತನಿಖೆಯಲ್ಲಿ ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರು ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಹೆಸರನ್ನು ಬಳಸಿಕೊಂಡು ವಿಡಿಯೋ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನೂ ಕ್ವಾರಂಟೈನ್ ಸೆಲ್‌ಗೆ ಸ್ಥಳಾಂತರಿಸಲಾಗಿದೆ.
ಘಟನೆ ಬೆನ್ನಲ್ಲೇ ವಾರ್ಡರ್‌ಗಳಾದ ಶಿವಾನಂದ ಕರ್ಲಬಟ್ಟಿ, ನಿರಂಜನ ಎ. ಕಾಮತ್ ಮತ್ತು ಹನುಮಂತಪ್ಪ ಹಡಪದ್ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಜೈಲರ್ ವಿರುದ್ಧವೂ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಉಡುಪಿ: ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ನಡೆದ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿದ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಐವರನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಕಾರ್ಕಳದ ಹಂಚಿಕಟ್ಟೆ ಸಮೀಪ ಸಂಶಯಾಸ್ಪದ ಕಾರನ್ನು ತಡೆಹಿಡಿಯಲು ಯತ್ನಿಸಿದ ವೇಳೆ, ಆರೋಪಿಗಳು ವಾಹನವನ್ನು ನಿಲ್ಲಿಸದೆ ಪೊಲೀಸರ ಮೇಲೆಯೇ ಹರಿಸಲು ಯತ್ನಿಸಿದ್ದು ಗಂಭೀರ ಆರೋಪವಾಗಿದೆ.
ನಂತರ ಶಿರ್ವ ಪ್ರದೇಶದಲ್ಲಿ ಅದೇ ಕಾರನ್ನು ತಡೆಹಿಡಿಯಲು ಪೊಲೀಸರು ಪ್ರಯತ್ನಿಸಿದಾಗ ಚಾಲಕ ಅಧಿಕಾರಿಯನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುಧರ್ಷನ್ ಶೆಟ್ಟಿ (29), ಕಾರ್ತವ್ಯ ಶೆಟ್ಟಿ (27), ಅರುಣ್ ಶೆಟ್ಟಿ (29), ತೇಜಸ್ (28) ಮತ್ತು ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ತನಿಖೆಯಲ್ಲಿ ಇವರು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಜನರನ್ನು ವಂಚಿಸುತ್ತಿದ್ದ ಅಂಶ ಬಹಿರಂಗವಾಗಿದೆ.
ಈ ಪ್ರಕರಣವು ಅಕ್ರಮ ಬೆಟ್ಟಿಂಗ್ ಜಾಲದ ವಿರುದ್ಧ ಪೊಲೀಸರ ಕಠಿಣ ಕ್ರಮಕ್ಕೆ ಉದಾಹರಣೆಯಾಗಿದೆ.
ಮಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಎನ್‌ಐಎ ವಿಶೇಷ ನ್ಯಾಯಾಲಯವು ಆತನ ತಪ್ಪೊಪ್ಪಿಗೆ ಅರ್ಜಿಯನ್ನು ಅಂಗೀಕರಿಸಿದೆ.
2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಟೈಮರ್ ದೋಷದಿಂದ ಶಾರೀಕ್ ಮಡಿಲಲ್ಲೇ ಸ್ಫೋಟಗೊಂಡಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದ. ಈ ಘಟನೆಯಲ್ಲಿ ಆಟೋ ಚಾಲಕನಿಗೂ ಗಾಯಗಳಾಗಿದ್ದವು.
ಮೊದಲಿಗೆ ತನ್ನ ನಿರಪರಾಧಿತ್ವವನ್ನು ಹೇಳಿದ್ದ ಶಾರೀಕ್, ಬಳಿಕ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ, “ನಾನು ಐಇಡಿ ಬಳಸಿ ಸ್ಫೋಟ ಮಾಡಿದ್ದೇನೆ” ಎಂದು ಒಪ್ಪಿಕೊಂಡಿದ್ದಾನೆ.
ಎನ್‌ಐಎ ತನಿಖೆ ಶಾರೀಕ್ ಐಸಿಸ್ ಪ್ರೇರಿತ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ಬಹಿರಂಗಪಡಿಸಿದೆ. 2020ರಿಂದಲೇ ಆತ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಶಿವಮೊಗ್ಗ ಐಇಡಿ ಪರೀಕ್ಷೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದಲ್ಲದೆ, ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಆತನ ಸಂಪರ್ಕದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯಕ್ಕೆ ಆತ ಕುಕ್ಕರ್ ಬಾಂಬ್ ಪ್ರಕರಣದಲ್ಲಷ್ಟೇ ತಪ್ಪೊಪ್ಪಿಕೊಂಡಿದ್ದಾನೆ.
ಮಂಗಳವಾರ ನಾಪತ್ತೆಯಾಗಿದ್ದ ಯುವಕ-ಶನಿವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆ!
ಗದಗ: ಜಿಲ್ಲೆಯ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಯುವಕನೊಬ್ಬನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
27 ವರ್ಷದ ಚಂದ್ರು ಕುರಿ ಎಂಬ ಯುವಕ ಮಂಗಳವಾರ ರಾತ್ರಿ ಮನೆಯಿಂದ ಹೊರಟಿದ್ದಾನೆ. ಆದರೆ, ಮುಂದಿನ ದಿನ ಗ್ರಾಮ ಹೊರವಲಯದ ಬ್ರಿಡ್ಜ್ ಕೆಳಗೆ ಅವನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯು ಕುಟುಂಬಸ್ಥರನ್ನು ದುಃಖದ ಸಾಗರಕ್ಕೆ ತಳ್ಳಿದೆ.
ಕುಟುಂಬಸ್ಥರ ಆರೋಪ – ಕೊಲೆ ಮಾಡಿ ಸುಟ್ಟಿದ್ದಾರೆ
ಮೃತನ ಕುಟುಂಬದವರು ಇದೊಂದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ಎದುರು ಮನೆಯ ಕುಟುಂಬದವರ ಮೇಲೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.
ಚಂದ್ರು ಎದುರು ಮನೆಯ ಹೆಣ್ಣುಮಕ್ಕಳನ್ನು ನೋಡುತ್ತಿದ್ದನೆಂಬ ಅನುಮಾನದಿಂದಾಗಿ ಹಿಂದಿನಿಂದಲೂ ಜಗಳಗಳು ನಡೆದಿದ್ದವು ಎಂದು ಕುಟುಂಬಸ್ಥರು ಹೇಳಿದ್ದಾರೆ. ಕೆಲವೊಮ್ಮೆ ಬೈಕ್ ಹತ್ತಿಸಲು ಪ್ರಯತ್ನಿಸಿದ ಘಟನೆಗಳೂ ನಡೆದಿದ್ದವು ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಆ ಕುಟುಂಬದವರೇ ಕೊಲೆ ಮಾಡಿ ನಂತರ ಶವವನ್ನು ಸುಟ್ಟಿದ್ದಾರೆ ಎಂದು ಮೃತನ ಕುಟುಂಬದವರು ದೂರಿದ್ದಾರೆ.
ತಂದೆಯ ಆಕ್ರೋಶ – “ಕೊಲೆ ಮಾಡಿದವರನ್ನು ಬಿಡಲ್ಲ”
ಮೃತ ಚಂದ್ರುವಿನ ತಂದೆ ಬಸವರಾಜ್ ದುಃಖ ಮತ್ತು ಆಕ್ರೋಶದಲ್ಲಿ ಮಾತನಾಡಿ, “ನನ್ನ ಮಗ ಒಳ್ಳೆಯ ಹುಡುಗ. ಯಾರ ಜೊತೆಗೂ ತಕರಾರು ಮಾಡಲಿಲ್ಲ. ದಿನವೂ ಕೆಲಸಕ್ಕೆ ಹೋಗುವಾಗ 100 ರೂಪಾಯಿ ಕೇಳುತ್ತಿದ್ದ. ಅಂತಹ ಮಗನನ್ನು ಕಳೆದುಕೊಂಡಿದ್ದೇನೆ. ಕೊಲೆ ಮಾಡಿದವರನ್ನು ಬಿಡುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇನೆ” ಎಂದು ಕಣ್ಣೀರಿನಲ್ಲಿ ಪ್ರತಿಜ್ಞೆ ಮಾಡಿದ್ದಾರೆ.
ಇನ್ನೂ ಅವರು, “ನನ್ನ ಬಳಿ ಮೂರು ಎಕರೆ ಹೊಲ ಇದೆ. ಅದು ಹೋದರೂ ಪರವಾಗಿಲ್ಲ, ಆದರೆ ನನ್ನ ಮಗನ ಸಾವಿಗೆ ನ್ಯಾಯ ತರುತ್ತೇನೆ” ಎಂದು ಹೇಳಿದ್ದಾರೆ.
ಮದುವೆ ಕನಸು ನುಚ್ಚುನೂರು!
ಚಂದ್ರು ಮನೆಯ ಹಿರಿಯ ಮಗನಾಗಿದ್ದು, ಅವನ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು. ಬೀಳಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಿ ಮದುವೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಆದರೆ ಈ ದುರ್ಘಟನೆ ಅವರ ಕನಸುಗಳನ್ನು ಭಗ್ನಗೊಳಿಸಿದೆ.
ಪೊಲೀಸರ ತನಿಖೆ ಆರಂಭ
ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ಸಮಗ್ರ ತನಿಖೆಯ ಬಳಿಕವೇ ನಿಜಾಂಶ ಹೊರಬರುವ ನಿರೀಕ್ಷೆ ಇದೆ.