Home Blog Page 31

ಸರ್ವರ್ ಸ್ತಬ್ಧ… ಅನ್ನಭಾಗ್ಯಕ್ಕಾಗಿ ಜನರ ಪರದಾಟ!

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ದೊರೆಯುವ ಪಡಿತರ ಅಕ್ಕಿಗಾಗಿ ಫಲಾನುಭವಿಗಳು ಶನಿವಾರ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಪರದಾಡಿದ ದೃಶ್ಯ ಮುಳಗುಂದ ಪಟ್ಟಣದ ನ್ಯಾಯಬೆಲೆ ಅಂಗಡಿಗಳ ಮುಂದೆ ಕಂಡುಬಂತು.

ಆನ್‌ಲೈನ್ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಉಂಟಾದ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳ ದೃಢೀಕರಣ ಹಾಗೂ ಪಡಿತರ ವಿತರಣೆಯಲ್ಲಿ ವಿಳಂಬ ಉಂಟಾಗಿತ್ತು. ಪರಿಣಾಮವಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಪಡಿತರ ಅಕ್ಕಿ ಪಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸಿದರು.

ಕೆಲವರು ಶನಿವಾರ ಬೆಳಗ್ಗೆ 5 ಗಂಟೆಯಿಂದಲೇ ನ್ಯಾಯಬೆಲೆ ಅಂಗಡಿಗಳ ಮುಂದೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ 10 ಗಂಟೆಯಾದರೂ ಕೆಲವರಿಗೆ ತಮ್ಮ ಸರದಿ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಅನ್ನಭಾಗ್ಯದ ಅಕ್ಕಿಗಾಗಿ ಇಡೀ ದಿನ ಕಾಯಬೇಕಾದ ದುಸ್ಥಿತಿ ಫಲಾನುಭವಿಗಳದ್ದಾಗಿತ್ತು.

ಸರ್ವರ್ ಸಮಸ್ಯೆಯಿಂದ ವಿತರಣೆ ವಿಳಂಬ

ಪಡಿತರ ವಿತರಣೆಗೆ ಅಗತ್ಯವಿರುವ ಆನ್‌ಲೈನ್ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಫಲಾನುಭವಿಗಳ ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ವಿತರಣಾ ಪ್ರಕ್ರಿಯೆಗೆ ತೀವ್ರ ಅಡ್ಡಿಯಾಗಿತ್ತು. ಗಂಟೆಗಟ್ಟಲೆ ಕಾಯುತ್ತಿದ್ದರೂ ಅಕ್ಕಿ ಪಡೆಯಲು ಸಾಧ್ಯವಾಗದೆ ಅನೇಕ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದರು.

ವೃದ್ಧರು, ಮಹಿಳೆಯರ ಗೋಳು

ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತವರಲ್ಲಿ ಹೆಚ್ಚಿನವರು ವೃದ್ಧರು ಹಾಗೂ ಮಹಿಳೆಯರಾಗಿದ್ದರು. ದೀರ್ಘಕಾಲ ನಿಂತುಕೊಳ್ಳಲಾಗದೆ ಕೆಲ ವೃದ್ಧರು ಅಸ್ವಸ್ಥಗೊಂಡು ಮನೆಗೆ ಮರಳುವಂತಾಗಿತ್ತು.

ಈ ತಿಂಗಳ ಪಡಿತರ ಅಕ್ಕಿ ದೊರೆಯುತ್ತದೆಯೋ ಇಲ್ಲವೋ ಎಂಬ ಆತಂಕವೂ ಫಲಾನುಭವಿಗಳನ್ನು ಕಾಡುತ್ತಿತ್ತು. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ಕುಟುಂಬಗಳು ಅನ್ನಭಾಗ್ಯದ ಅಕ್ಕಿಯನ್ನೇ ನಂಬಿಕೊಂಡಿರುವುದರಿಂದ ಸರ್ವರ್ ಸಮಸ್ಯೆ ಅವರ ಜೀವನದ ಮೇಲೆ ನೇರ ಪರಿಣಾಮ ಬೀರುವಂತಾಗಿತ್ತು.

ದುಡಿಮೆ ಬಿಟ್ಟು ಪಡಿತರಕ್ಕಾಗಿ ಕಾಯುವ ಸ್ಥಿತಿ

ಮುಳಗುಂದ ಪ್ರದೇಶವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಪ್ರಸಕ್ತ ವರ್ಷ ಸಮರ್ಪಕ ಮುಂಗಾರು ಮಳೆಯಾಗದೆ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪಸ್ವಲ್ಪ ಉಳಿದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲೇ, ಅನೇಕ ಕುಟುಂಬಗಳು ತಮ್ಮ ದಿನನಿತ್ಯದ ಜೀವನಕ್ಕಾಗಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅವಲಂಬಿಸಿವೆ.

ಆದರೆ ಶನಿವಾರ ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರು ತಮ್ಮ ದಿನದ ಕೆಲಸಕ್ಕೆ ತೆರಳದೆ ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ದುಡಿಮೆ ಇಲ್ಲ, ಇನ್ನೊಂದೆಡೆ ಪಡಿತರವೂ ಸಿಗುತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದವು.

“ನಮ್ಮ ಗೋಳು ಕೇಳುವವರು ಯಾರು?” ಎಂಬ ಪ್ರಶ್ನೆ ಫಲಾನುಭವಿಗಳಿಂದ ಕೇಳಿಬರುತ್ತಿತ್ತು.

ಪಡಿತರ ಅಕ್ಕಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಾಕಷ್ಟು ಕುಟುಂಬಗಳು, ಈ ತಿಂಗಳ ಅಕ್ಕಿ ದೊರೆಯದಿದ್ದರೆ ದಿನನಿತ್ಯದ ಜೀವನ ನಿರ್ವಹಣೆ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಡಿತರ ವಿತರಣೆಯಲ್ಲಿ ಪದೇಪದೇ ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳು ಉಂಟಾಗುತ್ತಿರುವುದರಿಂದ ಸರ್ಕಾರ ಮತ್ತು ಆಹಾರ ಇಲಾಖೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಫಲಾನುಭವಿಗಳ ಒತ್ತಾಯವಾಗಿತ್ತು.

ಕೂಲಿ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ದಿನವಿಡೀ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ತೆರೆ ಎಳೆಯಬೇಕು. ಪಡಿತರ ವಿತರಣೆಗೆ ಸುಗಮವಾದ ತಾಂತ್ರಿಕ ವ್ಯವಸ್ಥೆ ಕಲ್ಪಿಸಿ, ಯಾವುದೇ ಫಲಾನುಭವಿಯೂ ಪಡಿತರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಗದಗ ಜಿಲ್ಲೆಯಲ್ಲಿ ಪಡಿತರ ವಿತರಣೆಯ ಶೇ.79ರಷ್ಟು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಶೇ.21ರಷ್ಟು ವಿತರಣೆಯನ್ನು ಮುಂದಿನ ಮೂರು ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು.

— ಎಸ್.ಡಿ. ಪಾಟೀಲ, ಆಹಾರ ಇಲಾಖೆ ಉಪನಿರ್ದೇಶಕ

ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ದಿನದ ಕೆಲಸ ಬಿಟ್ಟು ಪಡಿತರಕ್ಕಾಗಿ ಕಾಯಬೇಕಾಗಿದೆ. ಫಲಾನುಭವಿಗಳಿಗೆ ತೊಂದರೆಯಾಗದಂತೆ ಸುಗಮವಾದ ಸರ್ವರ್ ವ್ಯವಸ್ಥೆ ಕಲ್ಪಿಸಬೇಕು.

— ರಿಯಾಜ್ ಮುಲ್ಲಾ, ಫಲಾನುಭವಿ, ಮುಳಗುಂದ

ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗುಗ್ಗಳೋತ್ಸವ

0

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಗುಗ್ಗಳೋತ್ಸವವು ವಿಜೃಂಭಣೆಯಿಂದ ಹಾಗೂ ಭಕ್ತಿಭಾವದಿಂದ ಜರುಗಿತು.

ಕಳೆದ ಸುಮಾರು 10 ವರ್ಷಗಳಿಂದ ದೇವಸ್ಥಾನದಲ್ಲಿ ಗುಗ್ಗಳೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಏಳು ಕುಟುಂಬಗಳ ಗುಗ್ಗಳ ಸೇವೆ ನೆರವೇರಿಸಲಾಯಿತು.

ಶ್ರೀ ವೀರಭದ್ರನ ಉಡುಪಾದ ಕಾಶಿ ಧರಿಸಿದ ಬಾಲ ಪುರವಂತರ ನೃತ್ಯ ಹಾಗೂ ವಡುಪು ಹೇಳುವ ವಿಶಿಷ್ಟ ಶೈಲಿ ನೆರೆದಿದ್ದ ಭಕ್ತರ ಗಮನ ಸೆಳೆಯಿತು. ವೀರ ಪುರವಂತರ ಕಾಶಿ ಧರಿಸಿದ ಅಲಂಕಾರದಲ್ಲಿ ಶ್ರೀ ವೀರಭದ್ರಸ್ವಾಮಿಯು ಕಂಗೊಳಿಸುತ್ತಿದ್ದು, ಇಡೀ ದೇವಸ್ಥಾನ ಆವರಣ ಭಕ್ತಿಮಯ ವಾತಾವರಣದಿಂದ ತುಂಬಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಗುಗ್ಗಳದ ಹಿನ್ನೆಲೆ, ಅದರ ಪರಂಪರೆ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಶರತ್ ಘಾರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಯಳವತ್ತಿ ಕಾರ್ಯಕ್ರಮ ನಿರೂಪಿಸಿದರು.

ಗುಗ್ಗಳೋತ್ಸವದಲ್ಲಿ ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿಯ ಸರ್ವ ಸದಸ್ಯರು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಕಾರ್ಯಕ್ರಮದ ಬಳಿಕ ಸಮಸ್ತ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯ ಶ್ರೀ ಪ್ರಭು ರಾಮಚಂದ್ರ ಪುರಂತರ ಪರಿವಾರದವರು ಅನ್ನಪ್ರಸಾದ ಸೇವೆ ನೆರವೇರಿಸಿದರು.

ಧಾರ್ಮಿಕ ಪರಂಪರೆ, ಭಕ್ತಿ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಸಾರಿದ ಸಾಮೂಹಿಕ ಗುಗ್ಗಳೋತ್ಸವವು ಭಕ್ತಾದಿಗಳಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.

ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸುವ ಜ್ಞಾನ ಅಗತ್ಯ: ಶಂಭುಲಿಂಗಯ್ಯ ಕಲ್ಮಠ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಅರಿಯುವ ವಿವೇಕ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಶಂಭುಲಿಂಗಯ್ಯ ಕಲ್ಮಠ ಹೇಳಿದರು.

ಗದುಗಿನ ಸರ್ಕಾರಿ ಪ್ರಾಥಮಿಕ ಶಾಲೆ ನಂ.6 ಹಾಗೂ ಉರ್ದು ಪ್ರಾಥಮಿಕ ಶಾಲೆ ನಂ.3ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ಅಮೃತಭೋಜನ-ಜ್ಞಾನಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಯುತ ಬದುಕಿನ ದಾರಿ ತೋರಿಸುವುದು ದೊಡ್ಡ ಆಸ್ತಿಯಾಗಿದ್ದು, ಹಿರಿಯರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಮುಖ್ಯ ಅತಿಥಿ ಚಂಪಾ ಪಾಟೀಲ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ, ಮಾನವೀಯತೆ, ಸಹಕಾರ ಹಾಗೂ ದೇಶಪ್ರೇಮವನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು. ಸುಮತಿ ಗದಗಿನಮಠ ಅವರು ಶರಣರ ವಚನಗಳನ್ನು ಓದಿ ಅವುಗಳ ತತ್ವದಂತೆ ಬದುಕಬೇಕು ಎಂದರು.

ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಎಂ.ಎ. ಕಂದಗಲ್ಲ ಸ್ವಾಗತಿಸಿದರು. ಎಸ್.ಎಸ್. ಕುಷ್ಟಗಿ ನಿರೂಪಿಸಿದರು. ಎ.ಎಸ್. ಮಸೂತಿ ವಂದಿಸಿದರು.

ಅಕ್ಷತಾ ವಿಲ್ಲಾಯತ್, ಎಂ.ಐ. ಜಮಾಲಸಾಬನವರ, ಬಿ. ಹೂಗಾರ, ಸಾವಿತ್ರಿ ಬಳ್ಳಾರಿ, ಮಹೇಶ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತಿಭಟನೆ ಸಾಕು… ಮೊದಲು ರೈತರ ಸಾಲ ಮನ್ನಾ ಮಾಡಿಸಿ ತೋರಿಸಿ: ಸೈಯದ್ ಖಾಲಿದ್ ಕೊಪ್ಪಳ ಸವಾಲು

0

ವಿಜಯಸಾಕ್ಷಿ ಸುದ್ದಿ, ಗದಗ: ಬರಗಾಲದ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೊದಲು ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿಸಿ, ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ಹಾಗೂ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಲಿ ಎಂದು ಕಾಂಗ್ರೆಸ್ ಯುವ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ಸವಾಲು ಹಾಕಿದ್ದಾರೆ.

ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇವಲ ಪ್ರತಿಭಟನೆ ನಡೆಸಿ ರಾಜಕೀಯ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ರೈತರಿಗೆ ನಿಜವಾದ ನೆರವು ದೊರೆಯಬೇಕಾದರೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಹಾಗೂ ಪರಿಹಾರ ಬಿಡುಗಡೆ ಮಾಡಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರೈತರ ಸಾಲ ಮನ್ನಾ ವಿಚಾರದಲ್ಲಿಯೂ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ರೈತರ ಪರವಾಗಿ ಮಾತನಾಡುವ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮಟ್ಟದಲ್ಲಿ ರೈತರಿಗೆ ಅಗತ್ಯ ನೆರವು, ಪರಿಹಾರ ಹಾಗೂ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ವಿವಿಧ ಜನಪರ ಯೋಜನೆಗಳ ಮೂಲಕ ರೈತರು, ಮಹಿಳೆಯರು ಹಾಗೂ ಸಾಮಾನ್ಯ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ರೈತರ ಕಲ್ಯಾಣ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳು ಜನಜೀವನಕ್ಕೆ ಸಹಕಾರಿಯಾಗುತ್ತಿವೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಎಚ್.ಕೆ. ಪಾಟೀಲ ಅವರಂತಹ ನಾಯಕರು ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಕ್ಷೇತ್ರದ ಪ್ರಗತಿ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಅವರು ನಿರಂತರವಾಗಿ ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಸೈಯದ್ ಖಾಲಿದ್ ಕೊಪ್ಪಳ ತಿಳಿಸಿದ್ದಾರೆ.

ಬರಗಾಲದ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕಿಂತ ರೈತರ ನೆರವಿಗೆ ಕೇಂದ್ರ ಸರ್ಕಾರದಿಂದ ಅನುದಾನ ಹಾಗೂ ಸಾಲ ಮನ್ನಾ ಮಾಡಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರೈತರ ಹಿತಾಸಕ್ತಿಯೇ ಎಲ್ಲ ರಾಜಕೀಯಕ್ಕಿಂತ ಮುಖ್ಯ ಎಂದು ಕಾಂಗ್ರೆಸ್ ಯುವ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ನಾಡಿಮಿಡಿತದಿಂದಲೇ ರೋಗ ಪತ್ತೆಹಚ್ಚಿ ಗುಣಪಡಿಸುತ್ತಿದ್ದರು: ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಲಿಂ. ಡಾ. ಎಸ್.ಎಫ್. ಹಿರೇಮಠ ಅವರು ರೋಗಿಗಳ ನಾಡಿಮಿಡಿತದಿಂದಲೇ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಅಪರೂಪದ ಕಲೆ ಹೊಂದಿದ್ದರು. ವಿಷಜಂತುಗಳ ಕಡಿತಕ್ಕೊಳಗಾದ ರೋಗಿಗಳನ್ನೂ ಗುಣಪಡಿಸುತ್ತಿದ್ದ ಅವರು ಈ ಭಾಗದ ನಡೆದಾಡುವ ವೈದ್ಯ ದೇವರೆಂದೇ ಪ್ರಖ್ಯಾತಿ ಹೊಂದಿದ್ದರು ಎಂದು ಬನ್ನಿಕೊಪ್ಪದ ಬೃಹನ್ಮಠ ಹಾಗೂ ಮೈಸೂರಿನ ಜಪದಕಟ್ಟೆ ಅರಮನೆಯ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಲಿಂ. ಡಾ. ಎಸ್.ಎಫ್. ಹಿರೇಮಠ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ಉಚಿತ ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷವೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಲಿಂ. ಡಾ. ಹಿರೇಮಠ ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿರುಪಾಪುರದ ಸ್ವಾಮೀಜಿ ಹಾಗೂ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಡಾ. ಚಂದ್ರು ಲಮಾಣಿ, ಶಿವಪ್ರಕಾಶ ಮಹಾಜನಶೆಟ್ಟರ, ಕೊಟ್ರಯ್ಯ ಹೊಂಬಾಳಿಮಠ, ಬಾಬಣ್ಣ ಕಲಾಲ, ಜಂಬಯ್ಯ ಹಿರೇಮಠ, ವೈ.ಬಿ. ಹೊಸೂರ, ಆರ್.ಆರ್. ಗಡ್ಡದ್ದೇವರಮಠ, ಡಾ. ಪ್ರಕಾಶ ಹೊಸಮನಿ, ಡಾ. ಶಂಭು ಪುರದ, ಡಾ. ಪ್ರಭುಗೌಡರ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಮಹೇಶ ಬಡ್ನಿ, ಶಂಕರ ಮೇಟಿ, ಶಂಭು ಮಠದ, ಎಂ.ಸಿ. ಮರಡೂರಮಠ, ಅಶೋಕ ಹಿರೇಹೊಳಿ, ಗಿರೀಶ ಕೊಡಬಾಳ, ಅಶೋಕ ನಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಿಂ. ಡಾ. ಎಸ್.ಎಫ್. ಹಿರೇಮಠ ಅವರು ಹೊಂದಿದ್ದ ವೈದ್ಯಕೀಯ ಸೇವಾ ಮನೋಭಾವ ಮತ್ತು ಅಪರೂಪದ ಚಿಕಿತ್ಸಾ ಕಲೆ ಇಂದಿನ ಪೀಳಿಗೆಗೆ ಆದರ್ಶವಾಗಿದೆ. ಅವರ ಸ್ಮರಣಾರ್ಥ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ

ಶಿರಹಟ್ಟಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸಮರ್ಪಕ ಬೆಳೆ ಪರಿಹಾರ, ಸಾಲದ ನೆರವು ಹಾಗೂ ಜಾನುವಾರುಗಳ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಚನಬಸವಗೌಡ ಪಾಟೀಲ ಹಾಗೂ ರಮೇಶ ಕೋಳಿವಾಡ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಗದಗ ಜಿಲ್ಲೆಯಲ್ಲಿ ಮಾತ್ರ ಕೇವಲ ಒಂದು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಹಟ್ಟಿ ತಾಲೂಕು ಕೂಡ ಬರದ ಸಂಕಷ್ಟವನ್ನು ಎದುರಿಸುತ್ತಿದ್ದು, ಕೆರೆ–ಕಟ್ಟೆಗಳು ಹಾಗೂ ಇತರೆ ಜಲಮೂಲಗಳಲ್ಲಿನ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಕೃಷಿ ಚಟುವಟಿಕೆ ಸಂಪೂರ್ಣ ಹಿನ್ನಡೆ ಕಂಡಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.

ಆದ್ದರಿಂದ ಸರ್ಕಾರ ಕೂಡಲೇ ಶಿರಹಟ್ಟಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ನಷ್ಟದ ಪರಿಹಾರ ವಿತರಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಸಾಲದ ನೆರವು ನೀಡುವುದರೊಂದಿಗೆ ಜಾನುವಾರುಗಳ ರಕ್ಷಣೆಗಾಗಿ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಫಕ್ಕೀರೇಶ ಕಟ್ಟಿಮನಿ, ಎಸ್.ವಿ. ನೆಲಗುಡ್ಡದ, ಫಕ್ಕೀರೇಶ ಹೊಸಮನಿ, ಕೃಷ್ಣಸಾಬ ದೊಡ್ಡಮನಿ, ಪೀರಸಾಬ ನದಾಫ, ಎಸ್.ಎನ್. ದಲಾಲಿ, ವೀರಣ್ಣ ಮಜ್ಜಗಿ, ಸುರೇಶ ಸೂರಣಗಿ, ರಾಮನಗೌಡ ಪಾಟೀಲ, ವೀರೇಶ ಶಿವಶಿಂಪಿ, ಫಕ್ಕೀರಗೌಡ ಪಾಟೀಲ, ದೇವಪ್ಪ ಉಪ್ಪಾರ, ಜಿ.ಬಿ. ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿರಹಟ್ಟಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆ–ಕಟ್ಟೆಗಳ ನೀರಿನ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆ ಹಿನ್ನಡೆ ಕಂಡಿದೆ. ರೈತರ ಸಂಕಷ್ಟವನ್ನು ಪರಿಗಣಿಸಿ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡಬೇಕು.

ಚನಬಸವಗೌಡ ಪಾಟೀಲ ಹಾಗೂ ರಮೇಶ ಕೋಳಿವಾಡ, ರೈತ ಮುಖಂಡರು

ಬರ ಘೋಷಣೆಯಲ್ಲಿ ತಾರತಮ್ಯ ಆರೋಪ: ಸಿಎಂ ಡಿ.ಕೆ. ಶಿವಕುಮಾರರಿಗೆ ಕಪ್ಪು ಭಾವುಟದ ಎಚ್ಚರಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ತೀವ್ರ ಬರಗಾಲದಿಂದ ಗದಗ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದರೂ ಗಜೇಂದ್ರಗಡ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಸೆಪ್ಟೆಂಬರ್ 1ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕಪ್ಪು ಭಾವುಟ ಪ್ರದರ್ಶಿಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡ್ರ ಎಚ್ಚರಿಸಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಬರ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಜಾನುವಾರುಗಳು ಸಂಕಷ್ಟಕ್ಕೀಡಾಗಿದ್ದು, ಬೆಳೆ ಹಾನಿಯಿಂದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಒಂದು ವಾರದೊಳಗೆ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದ ಅವರು, ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಎಂದರು.

ರೈತರ ಪರವಾಗಿ ನಿಲ್ಲದ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಗಿರೀಶ್ ಹೊಸಮನಿ, ನಾಗರಾಜ ಕಳ್ಳಿಹಾಳ, ರಾಮಣ್ಣ ಕಮ್ಮಾರ, ಬಸವರಾಜ ಮರಾಠೆ, ಶರಣಪ್ಪ ಕಮ್ಮಾರ, ರವಿ ವಗ್ಗನವರ್ ಸೇರಿದಂತೆ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.

ತೀವ್ರ ಬರಗಾಲದಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಕೇವಲ ಗಜೇಂದ್ರಗಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವುದು ಖಂಡನೀಯ. ಕೂಡಲೇ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಇಲ್ಲವಾದರೆ ಮುಖ್ಯಮಂತ್ರಿ ಅವರಿಗೆ ಕಪ್ಪು ಭಾವುಟ ಪ್ರದರ್ಶಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು.

ಶಂಕರಗೌಡ ಜಾಯನಗೌಡ್ರ, ಅಧ್ಯಕ್ಷರು, ರೈತ ಸಂಘ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮರಲಿಂಗ ಬಸವೇಶ್ವರ ಮಹಾರಥೋತ್ಸವ ವೈಭವ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಡಿ.ಎಸ್. ಹಡಗಲಿ ಗ್ರಾಮದ ಶ್ರೀ ಅಮರಲಿಂಗ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಮಹಾರಥೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿತು.

ಗ್ರಾಮದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಶ್ರೀ ಅಮರಲಿಂಗ ಬಸವೇಶ್ವರರ ದರ್ಶನ ಪಡೆದು, ಭಕ್ತಿಭಾವದಿಂದ ಮಹಾರಥೋತ್ಸವದಲ್ಲಿ ಪಾಲ್ಗೊಂಡರು. ಜೈಕಾರ, ಭಜನೆ ಹಾಗೂ ಧಾರ್ಮಿಕ ಘೋಷಣೆಗಳ ಮಧ್ಯೆ ರಥೋತ್ಸವ ಸಾಗಿದ್ದು, ಗ್ರಾಮದಲ್ಲಿ ಭಕ್ತಿಯ ಸಂಭ್ರಮ ಮನೆಮಾಡಿತ್ತು.

ಸೆ.1ರಂದು ಗದಗಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸೆಪ್ಟೆಂಬರ್ 1ರಂದು ಗದಗ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಿದ್ದಾರೆ.

ಸೆ.1ರಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು, ಬೆಳಿಗ್ಗೆ 10.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಗದಗಕ್ಕೆ ಆಗಮಿಸುವ ಮುಖ್ಯಮಂತ್ರಿ ಅವರು ಬೆಳಿಗ್ಗೆ 11.15ಕ್ಕೆ ಗದಗ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಲಿದ್ದಾರೆ. ಬಳಿಕ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಮಧ್ಯಾಹ್ನ 1.15ಕ್ಕೆ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಅವರು ಕೃಷಿ ವಿಜ್ಞಾನಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ನಂತರ ಮಧ್ಯಾಹ್ನ 2.30ಕ್ಕೆ ಗದಗ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಹಾಗೂ ಚರ್ಚೆ ನಡೆಸಲಿದ್ದಾರೆ.

ಮಧ್ಯಾಹ್ನ 3.30ಕ್ಕೆ ಗದಗ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೆಲಿಕಾಪ್ಟರ್ ಮೂಲಕ ಲಕ್ಷ್ಮೇಶ್ವರದ ಉಮಾ ಪಿಯು ಕಾಲೇಜು ಆವರಣಕ್ಕೆ ತೆರಳಲಿದ್ದಾರೆ.

ಬಳಿಕ 3.50ಕ್ಕೆ ಶ್ರೀ ಮುಕ್ತಿ ಮಂದಿರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಅವರು ನಂತರ ಲಕ್ಷ್ಮೇಶ್ವರಕ್ಕೆ ಆಗಮಿಸಲಿದ್ದಾರೆ.

ಅಲ್ಲಿಂದ ಸಂಜೆ 4.30ಕ್ಕೆ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಸಂಜೆ 5.05ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಾಫಿ ಎಸ್ಟೇಟ್‌ನಲ್ಲಿ ದುರಂತ: ಬಂದೂಕಿನಿಂದ ಗುಂಡು ಸಿಡಿದು 61 ವರ್ಷದ ರೈತ ಸಾವು

0

ಹಾಸನ: ಕಾಫಿ ಎಸ್ಟೇಟ್‌ನಲ್ಲಿ ಗುಂಡೇಟಿನಿಂದ ಕಾಫಿ ಬೆಳೆಗಾರನೊಬ್ಬ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಕೇಶವಶೆಟ್ಟಿ (61) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಬಂದೂಕು ಹಿಡಿದು ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕೈಯಲ್ಲಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಕೇಶವಶೆಟ್ಟಿ ಅವರ ಮೃತದೇಹ ಪತ್ತೆಯಾಗಿದೆ. ಗುಂಡು ಸಿಡಿದ ಬಳಿಕ ಗಾಯಗೊಂಡ ಅವರು ಕೆಲ ದೂರ ನಡೆದುಕೊಂಡು ಬಂದು ನಂತರ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಗುಂಡು ಸಿಡಿದ ಸ್ಥಳದಲ್ಲಿ ಅವರ ಮೊಬೈಲ್ ಪತ್ತೆಯಾಗಿದ್ದು, ಮೃತದೇಹ ಬಿದ್ದಿದ್ದ ಸ್ಥಳದಿಂದ ಕೆಲ ಮೀಟರ್ ಹಿಂದೆ ಬಂದೂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿ ತಿಳಿದು ಸ್ಥಳಕ್ಕೆ SOCO ತಂಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.