Home Blog Page 31

ದೇವರ ಆಶೀರ್ವಾದ ಇದ್ದರೆ ಎಲ್ಲವೂ ಸರಿ: ಡಿಕೆಶಿ ಕುರಿತು ಮಹತ್ವದ ಹೇಳಿಕೆ ನೀಡಿದ ಮುಕ್ತಿಮಂದಿರ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕೂರಲಿದ್ದಾರೆಯೇ ಎಂಬ ಪ್ರಶ್ನೆಗೆ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದ ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಏನೂ ಹೇಳಲ್ಲ. ಬೇಕಾದಷ್ಟು ಜನ ಈಗಾಗಲೇ ಹೇಳಿದ್ದಾರೆ. ದೇವರ ಆಶೀರ್ವಾದ ಇರುವ ತನಕ ಎಲ್ಲವೂ ಸರಿಯಾಗುತ್ತದೆ, ಒಳ್ಳೆಯದಾಗುತ್ತದೆ ಎಂದು ಶ್ರೀಗಳು ಹೇಳಿದರು.

ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮುಕ್ತಿಮಂದಿರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಗದ್ಗುರು ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಪ್ರಸನ್ನ ರೇಣುಕ ವೀರಗಂಗಾಧರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದರು. ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಗಳ ಸ್ಮರಣೆ ಮಾಡಿದರು.

ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಕೈ-ಕಾಲು ತೊಳೆದುಕೊಂಡು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಠದ ನೋಣವಿನಕೆರೆ ಶ್ರೀಗಳು ಹಾಗೂ ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಹಿಂದೆ ನೀಡಿದ್ದ ರುದ್ರಾಕ್ಷಿ, ಅಜ್ಜನವರ ಮೂರ್ತಿ

ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಜ್ಜನವರ ರುದ್ರಾಕ್ಷಿ ಹಾಗೂ ಅಜ್ಜನವರ ಮೂರ್ತಿಯನ್ನು ನೀಡಲಾಗಿತ್ತು ಎಂದು ಜಗದ್ಗುರು ಶ್ರೀ 1008 ವಿಮಲ ರೇಣುಕ ವೀರಗಂಗಾಧರ ಸ್ವಾಮೀಜಿ ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರು ಭಸ್ಮವನ್ನು ತೆಗೆದುಕೊಂಡಿದ್ದು, ಅವರು ಭಸ್ಮ ಹಚ್ಚಿಕೊಂಡು ಅಜ್ಜನವರನ್ನು ಸ್ಮರಿಸುತ್ತಾರೆ ಎಂದೂ ಹೇಳಿದರು.

ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯೆ ನಿರಾಕರಣೆ

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, “ಬೇಕಾದವರು ಬೇಕಾದ ರೀತಿಯಲ್ಲಿ ಮಾತನಾಡುತ್ತಾರೆ. ರಾಜಕೀಯದಲ್ಲಿ ಎಲ್ಲರೂ ಒಂದೇ ಧರ್ಮದವರಲ್ಲ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.

ನಮ್ಮ ಗುರುಗಳು ಮಾನವ ಧರ್ಮ ಒಂದೇ ಎಂದು ಹೇಳಿದ್ದಾರೆ. ಸರ್ವಧರ್ಮ ಸಮನ್ವಯದ ಮೂರ್ತಿಗಳನ್ನು ನಮ್ಮ ಮಠದಲ್ಲಿ ಅಜ್ಜನವರು ಸ್ಥಾಪಿಸಿದ್ದಾರೆ ಎಂದು ಅವರು ತಿಳಿಸಿದರು.

“ಯಾರಾದರೂ ಮಠದಲ್ಲಿ ಮಹಮ್ಮದ್ ಪೈಗಂಬರ್ ಅವರ ಮೂರ್ತಿ ಸ್ಥಾಪಿಸಿರುವುದನ್ನು ನೋಡಿದ್ದೀರಾ? ನಮ್ಮ ಮಠದಲ್ಲಿ ಇದೆ. ನಾವು ಅದರ ಬಗ್ಗೆ ಮಾತಾಡಲ್ಲ. ಮುಂದೆ ಏನೇನು ಆಗಬೇಕೋ ಆಗುತ್ತದೆ” ಎಂದರು.

ದೇವರಾಜ ಅರಸು ಪ್ರಸಂಗ ನೆನಪಿಸಿದ ಶ್ರೀಗಳು

ಯಾರೂ ಸ್ಥಿರವಾಗಿರುವುದಿಲ್ಲ, ಮನುಷ್ಯ ಎಂದ ಮೇಲೆ ಹುಟ್ಟು-ಸಾವು ಇದ್ದೇ ಇರುತ್ತದೆ ಎಂದು ಹೇಳಿದ ಶ್ರೀಗಳು, ಹಿಂದೆ ದೇವರಾಜ ಅರಸು ಅವರು 11 ವರ್ಷ ಮುಖ್ಯಮಂತ್ರಿಯಾಗಿದ್ದ ಪ್ರಸಂಗವನ್ನು ನೆನಪಿಸಿಕೊಂಡರು.

1971ರಲ್ಲಿ ದೇವರಾಜ ಅರಸು ಅವರು ಮುಕ್ತಿಮಂದಿರಕ್ಕೆ ಭೇಟಿ ನೀಡಿದ್ದರು. ಆಗ ಅಜ್ಜನವರು ಅವರಿಗೆ ಬಂಗಾರದ ರುದ್ರಾಕ್ಷಿ, ಎರಡು ವಿಭೂತಿ ಹಾಗೂ ರೇಣುಕ ದೇವಿಯ ಮೂರ್ತಿಯನ್ನು ನೀಡಿದ್ದರು ಎಂದು ಶ್ರೀಗಳು ಹೇಳಿದರು.

ರೇಣುಕ ದೇವಿಯ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ ಪೂಜೆ ಮಾಡುವಂತೆ ಅರಸು ಅವರಿಗೆ ತಿಳಿಸಲಾಗಿತ್ತು. ಅಲ್ಲದೆ, ಅವರ ಕೊರಳಿಗೆ ಮಾಲೆ ಹಾಕಿ, ಕೊರಳಿನಲ್ಲಿರುವ ಮಾಲೆಯನ್ನು ತೆಗೆಯಬಾರದು ಎಂದೂ ಅಜ್ಜನವರು ಹೇಳಿದ್ದರು ಎಂದು ವಿವರಿಸಿದರು.

ಮುಖ್ಯಮಂತ್ರಿ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಮಠದ ಆವರಣದಿಂದ ಹೊರಗಡೆ ಕಳುಹಿಸಲಾಗಿತ್ತು.

ಬರ ಪರಿಶೀಲನೆಗೆ ಆಗಮಿಸಿದ್ದ ಡಿಕೆಶಿಗೆ ಕ್ವಿಂಟಲ್‌ಗೂ ಹೆಚ್ಚು ತೂಕದ ಸೇಬಿನ ಮಾಲೆ, ಅದ್ದೂರಿ ಸ್ವಾಗತ!

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬರ ಪರಿಸ್ಥಿತಿ ಪರಿಶೀಲನೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಮುಗಿಸಿದ ಬಳಿಕ ಹೆಲಿಕಾಪ್ಟರ್ ಮೂಲಕ ಲಕ್ಷ್ಮೇಶ್ವರಕ್ಕೆ ಆಗಮಿಸಿ ರೈತರು ಹಾಗೂ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿದರು.

ಬಳಿಕ ಕಾರಿನಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ತೆರಳಿ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಶ್ರೀಗಳ ಅಜ್ಜಯ್ಯನ ಕೃತ್ಯ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಶಿಗ್ಲಿ ನಾಕಾದಲ್ಲಿ ಕಾಂಗ್ರೆಸ್‌ನ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.

ಕ್ರೇನ್ ಮೂಲಕ ಸೇಬಿನ ಮಾಲೆ!

ಡಿ.ಕೆ. ಶಿವಕುಮಾರ್ ಅವರ ಸ್ವಾಗತಕ್ಕಾಗಿ ಕಾರ್ಯಕರ್ತರು ೧ ಕ್ವಿಂಟಲ್ ೨೫ ಕೆಜಿ ತೂಕದ ಬೃಹತ್ ಸೇಬಿನ ಹಣ್ಣಿನ ಮಾಲೆಯನ್ನು ಸಿದ್ಧಪಡಿಸಿದ್ದರು. ಕ್ರೇನ್ ಮೂಲಕ ಬೃಹತ್ ಮಾಲೆಯನ್ನು ಹಾಕಿ ಕಾರ್ಯಕರ್ತರು ತಮ್ಮ ಅಭಿಮಾನ ಮೆರೆದರು.

ಈ ವೇಳೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆರತಿ ಮೂಲಕ ಸ್ವಾಗತಿಸಿದರು.

ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದಲೂ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ರೈತರು ಸೇರಿದಂತೆ ಸಾರ್ವಜನಿಕರಿಂದ ವಿವಿಧ ಮನವಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮುಕ್ತಿಮಂದಿರ ಧರ್ಮಕ್ಷೇತ್ರದತ್ತ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಶಿಗ್ಲಿ ನಾಕಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಈ ವೇಳೆ ಜಿ.ಎಸ್. ಗಡ್ಡೆದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡೆದೇವರಮಠ, ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ಪದ್ಮರಾಜ ಪಾಟೀಲ, ಜಿ.ಆರ್. ಕೊಪ್ಪದ, ಮಹೇಶ ಲಮಾಣಿ, ದೀಪಕ ಲಮಾಣಿ, ಮಂಜುನಾಥ ಶೆರಸೂರಿ, ಮುದಕಣ್ಣ ಗದ್ದಿ, ಯಲ್ಲಪ್ಪ ಹಂಜಿ, ನೀಲಪ್ಪ ಶೆರಸೂರಿ, ಶರಣು ಗೋಡಿ, ಯಲ್ಲಪ್ಪ ತಳವಾರ, ಗೋವಿಂದಗೌಡ ಪಾಟೀಲ, ಅಫಜಲ್‌ಖಾನ್ ರಿತ್ತಿ, ವಿರೇಂದ್ರಗೌಡ ಪಾಟೀಲ, ಮುತ್ತಣ್ಣ ಗಡೆಪ್ಪನವರ, ಶಿದ್ದು ಪೂಜಾರ, ಭರತ ಬಳಿಗಾರ, ಮಂಜಣ್ಣ ಶೆರಸೂರಿ, ರಾಮಣ್ಣ ರಿತ್ತಿ, ಅಣ್ಣಪ್ಪ ರಾಮಗೇರಿ, ಬಸವರೆಡ್ಡಿ ಹನುಮರೆಡ್ಡಿ, ಕೊಟೆಪ್ಪ ವರ್ದಿ, ನೀಲಪ್ಪ ಪಡಗೇರಿ, ರಾಜು ಕುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರೈತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ: ಡಿ.ಕೆ. ಶಿವಕುಮಾರ್

0

ವಿಜಯಸಾಕ್ಷಿ ಸುದ್ದಿ, ಗದಗ: ಭೀಕರ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಗದಗ ಜಿಲ್ಲೆಯ ವಾಸ್ತವಿಕ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ, ಮುಂದಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಸಾಧ್ಯವಾದಷ್ಟು ಹೆಚ್ಚಿನ ತಾಲೂಕುಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಗದಗ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ ಜಿಲ್ಲೆಯ ಒಂದು ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಾಗಿದೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೆಳೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಶೇ.95ರಷ್ಟು ಪ್ರದೇಶದಲ್ಲಿ ಹಸಿರು ಕಾಣದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಗದಗ ಜಿಲ್ಲೆಯ ವಿವಿಧ ಕಟ್ಟಡಗಳು ವಿಭಿನ್ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಜಿಲ್ಲೆ ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು. ಜಿಲ್ಲೆಯ ಮಹತ್ವಾಕಾಂಕ್ಷೆಯ ಮುಕ್ತಿವನ ಯೋಜನೆಯನ್ನು ಸರ್ಕಾರದ ನೂರು ದಿನಗಳ ವರದಿಯಲ್ಲಿ ಸೇರಿಸಲಾಗುವುದು ಎಂದರು.

ನಶಾಮುಕ್ತ ದೇಶ ನಿರ್ಮಾಣಕ್ಕೆ ಯುವಜನರನ್ನು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ ಅವರು, ಈ ಉದ್ದೇಶಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದರು. ಈ ಅನುದಾನವನ್ನು ಬಳಸಿಕೊಂಡು ಯುವಜನರಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ‘ತೇಗದ ಸಿರಿ’ ಯೋಜನೆ ಜಾರಿಗೆ ತರಲಾಗುತ್ತಿದ್ದು, ರಸ್ತೆ ಬದಿಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ತೇಗದ ಮರಗಳನ್ನು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚುವರಿ ಆದಾಯದ ಮೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಲಭ್ಯವಿರಬೇಕು ಎಂದು ಸೂಚಿಸಿದ ಮುಖ್ಯಮಂತ್ರಿ, ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೂ ಉತ್ತಮ ಹೆಸರು ಬರುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಈಗಾಗಲೇ ಗದಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರೋಢೀಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರ ಬೆಳೆಗಳು ಸಂಪೂರ್ಣವಾಗಿ ಬಾಧಿತವಾಗಿವೆ. ಸಕಾಲಕ್ಕೆ ಮಳೆಯಾಗದ ಕಾರಣ ಹಲವು ರೈತರು ಬಿತ್ತನೆ ಮಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಶಾಸಕ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ರೈತರ ನೈಜ ಪರಿಸ್ಥಿತಿಯನ್ನು ಅರಿತು ಅವರ ಸಮಸ್ಯೆಗಳ ಪರಿಹಾರಕ್ಕೆ ಅಧ್ಯಯನಶೀಲವಾಗಿ ಸ್ಪಂದಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ಕಿತ್ತೂರು ಕರ್ನಾಟಕ ಭಾಗದಲ್ಲಿ ಹೋಬಳಿಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದ ಅವರು, ರೈತರ ಬೆಳೆ ವಿಮೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಗದಗ ಭಾಗದ ವಿಶಿಷ್ಟ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡ್ರೋನ್ ಮೂಲಕ ಮೋಡ ಬಿತ್ತನೆ ನಡೆಸುವ ಸಾಧ್ಯತೆ ಕುರಿತು ಅಧ್ಯಯನ ಮಾಡಲು ಅನುದಾನ ನೀಡುವಂತೆಯೂ ಅವರು ಮನವಿ ಮಾಡಿದರು.

ಶಾಸಕ ಸಿ.ಸಿ. ಪಾಟೀಲ ಅವರು ನರಗುಂದ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಮಾಡಿದರು.

ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರವು ಮೂರು ತಾಲೂಕುಗಳನ್ನು ಒಳಗೊಂಡಿದ್ದು, ಮಳೆಯ ಅಭಾವದಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹9 ಕೋಟಿ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದರು. ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು. ಈ ಕುರಿತು ಕೆಡಿಪಿ ಸಭೆಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದರೂ ಬಹುದಿನಗಳ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ ಎಂದು ತಿಳಿಸಿದರು.

ರಾಜ್ಯ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಡಿಜಿಟಲೀಕರಣದ ಮೂಲಕ ಪಾವತಿ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ (ಪ್ರಕೃತಿ ವಿಕೋಪ) ವಿಭಾಗದ ಕಾರ್ಯದರ್ಶಿ ಹಾಗೂ ಪರಿಹಾರ ಆಯುಕ್ತ ಮನೋಜ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೆಳೆಗಳು ತೀವ್ರ ಹಾನಿಗೊಳಗಾಗಿದ್ದು, ವಾಸ್ತವಿಕ ಪರಿಸ್ಥಿತಿಯ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮುಂದಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ ಸಾಧ್ಯವಾದಷ್ಟು ಹೆಚ್ಚಿನ ತಾಲೂಕುಗಳನ್ನು ಸೇರ್ಪಡೆಗೊಳಿಸಿ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸಲಿದೆ.

— ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

ಬರದ ಬವಣೆ ಕಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಹಾಗೂ ಮುಂಡರಗಿ ತಾಲೂಕಿನ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ರೈತರ ಸಂಕಷ್ಟವನ್ನು ಪರಿಶೀಲಿಸಿದರು.

ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಸರ್ವೇ ನಂ.437/5ರ ಶಂಕರಪ್ಪ ಗಾವರವಾಡ ಅವರ ಜಮೀನಿನ ಸೂರ್ಯಕಾಂತಿ ಬೆಳೆ, ಸರ್ವೇ ನಂ.434/2ಎರ ಸುನೀತಾ ಈರಪ್ಪ ಪೂಜಾರ ಅವರ ಜಮೀನಿನ ಮೆಕ್ಕೆಜೋಳ ಹಾಗೂ ಸರ್ವೇ ನಂ.434/1ಎರ ಕಲ್ಲಪ್ಪ ಕಾಡಪ್ಪಗೋಳ ಅವರ ಜಮೀನಿನ ಹತ್ತಿ ಬೆಳೆಗಳನ್ನು ಮುಖ್ಯಮಂತ್ರಿ ವೀಕ್ಷಿಸಿದರು.

ನಂತರ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಸರ್ವೇ ನಂ.303ರ ಶ್ರೀನಾಥ್ ಮಾರ್ತಾಂಡಗೌಡ ಅವರ ಜಮೀನಿನ ಶೇಂಗಾ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಳನ್ನು ಪರಿಶೀಲಿಸಿದರು. ಹುಲಕೋಟಿ ಗ್ರಾಮದ ಸರ್ವೇ ನಂ.154/12ರ ಹನುಮಂತಪ್ಪ ಸೋಗಿನ ಅವರ ಜಮೀನಿನ ಮೆಕ್ಕೆಜೋಳ ಬೆಳೆಗೂ ಭೇಟಿ ನೀಡಿ, ಸ್ಥಳೀಯ ರೈತರೊಂದಿಗೆ ಚರ್ಚಿಸಿದರು.

ಈ ಬಾರಿ ಮಳೆಯ ಕೊರತೆಯಿಂದ ಬೆಳೆಗಳು ಹಾಳಾಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಘೋಷಣೆಯಾಗದ ಉಳಿದ ಆರು ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ರೈತರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕರಾದ ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ, ಎನ್.ಎನ್. ಕೋನರಡ್ಡಿ, ಪ್ರಾದೇಶಿಕ ಆಯುಕ್ತೆ ಜಾನಕಿ ಎಸ್., ಐಜಿಪಿ ಸಂದೀಪ್ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಒ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಡಿಸಿಎಫ್ ಸಂತೋಷ ಕುಮಾರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲೆಯ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸುತ್ತಿದ್ದೇವೆ. ಇನ್ನಷ್ಟು ಪ್ರದೇಶಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಕೇಂದ್ರದ ಮಾರ್ಗಸೂಚಿಯಂತೆ ಬರಪೀಡಿತ ತಾಲೂಕುಗಳ ಘೋಷಣೆ ಕುರಿತು ಕ್ರಮ ಕೈಗೊಳ್ಳಲಾಗುವುದು.

— ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

ಗದಗಕ್ಕೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್‌ಗೆ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ಗದಗ: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಡಾ. ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಡಿ.ಆರ್. ಪಾಟೀಲ, ವಿನಯ ಕುಲಕರ್ಣಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಮಾಜಿ ಶಾಸಕ ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ ಸೇರಿದಂತೆ ಮಿಥುನ ಪಾಟೀಲ, ಬಿ.ಬಿ. ಅಸೂಟಿ, ವಾಸಣ್ಣ ಕುರುಡಗಿ ಹಾಗೂ ಇತರ ಗಣ್ಯರು ಮತ್ತು ಜನಪ್ರತಿನಿಧಿಗಳು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಾನಕಿ ಎಸ್., ಐಜಿಪಿ ಸಂದೀಪ್ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಡಿಸಿಎಫ್ ಸಂತೋಷಕುಮಾರ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗದಗ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಪೂರ್ವಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಹೆಲಿಪ್ಯಾಡ್‌ನಲ್ಲಿ ಪೊಲೀಸ್ ಇಲಾಖೆಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ವಿಕಲಚೇತನರ ಪಿಂಚಣಿಗೆ ಲಂಚ ಪಡೆದ ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು, ₹40 ಸಾವಿರ ದಂಡ!

0

ಶಿವಮೊಗ್ಗ: ವಿಕಲಚೇತನರ ಪಿಂಚಣಿ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಉಪ ತಹಶೀಲ್ದಾರ್‌ಗೆ ನ್ಯಾಯಾಲಯ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಷ್ಪಲತಾ ಶಿಕ್ಷೆಗೆ ಗುರಿಯಾದ ಅಧಿಕಾರಿಯಾಗಿದ್ದಾರೆ.

ಡಿ.ಬಿ.ಹಳ್ಳಿ ನಿವಾಸಿ ಗಿರೀಶ್ ಅವರು ತಮ್ಮ ಮೂಕ ಹಾಗೂ ವಿಕಲಚೇತನ ತಂದೆಗೆ ಅಂಗವಿಕಲರ ಪಿಂಚಣಿ ಮಂಜೂರು ಮಾಡಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದರು. ಪಿಂಚಣಿ ಮಂಜೂರು ಮಾಡಿಕೊಡಲು ಉಪ ತಹಶೀಲ್ದಾರ್ ಪುಷ್ಪಲತಾ ಅವರು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.

ಲಂಚದ ಬೇಡಿಕೆ ಹಿನ್ನೆಲೆಯಲ್ಲಿ ಗಿರೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, 2017ರ ಸೆಪ್ಟೆಂಬರ್ 21ರಂದು ₹5 ಸಾವಿರ ಮುಂಗಡ ಲಂಚ ಸ್ವೀಕರಿಸುತ್ತಿದ್ದ ವೇಳೆ ಪುಷ್ಪಲತಾ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖಾಧಿಕಾರಿ ಹೆಚ್.ಎಸ್. ತಿಪ್ಪೇಸ್ವಾಮಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಲಭ್ಯವಿದ್ದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್ ಪುಷ್ಪಲತಾ ಅವರಿಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು. ವಿಕಲಚೇತನರ ಪಿಂಚಣಿ ಮಂಜೂರು ಮಾಡಲು ಲಂಚ ಪಡೆದ ಪ್ರಕರಣದಲ್ಲಿ ಹಲವು ವರ್ಷಗಳ ಬಳಿಕ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಗಮನಾರ್ಹವಾಗಿದೆ.

ಸಂಭ್ರಮ–ಸಡಗರದಲ್ಲಿ ಜಕ್ಕಲಿಯ ಕಲ್ಮೇಶ್ವರ ಹುಚ್ಚಯ್ಯ ತೇರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ರಾಧ್ಯ ದೈವ ಕಲ್ಮೇಶ್ವರ ದೇವರ ಹುಚ್ಚಯ್ಯ ತೇರು ಉತ್ಸವ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವ ಮತ್ತು ಸಂಭ್ರಮ-ಸಡಗರದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಗ್ರಾಮದ ಮಹಿಳೆಯರು ಮನೆಗಳಲ್ಲಿ ತಯಾರಿಸಿದ ವಿಶೇಷ ಸಿಹಿ ಅಡುಗೆಯ ಎಡೆಯನ್ನು ದೇವರಿಗೆ ಅರ್ಪಿಸಿ ಭಕ್ತಿಭಾವ ಮೆರೆದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನದಾಸೋಹವೂ ಏರ್ಪಡಿಸಲಾಗಿತ್ತು.

ಸಂಜೆ ವೀರಭದ್ರೇಶ್ವರ ದೇವಸ್ಥಾನದಿಂದ ನಂದಿಕೋಲನ್ನು ಮೆರವಣಿಗೆಯಲ್ಲಿ ಕಲ್ಮೇಶ್ವರ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಶಿವಶರಣರಾದ ಅಣ್ಣಯ್ಯ–ತಮ್ಮಯ್ಯನವರ ಮನೆಯಿಂದ ಕಳಸವನ್ನು ತಂದು ವಿಶೇಷ ಪೂಜೆ ಸಲ್ಲಿಸಿ ಹುಚ್ಚಯ್ಯ ತೇರಿಗೆ ಜೋಡಿಸಲಾಯಿತು. ಶಿವಶರಣರ ಮರಿ ಮೊಮ್ಮಕ್ಕಳು ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡ ಭವ್ಯ ತೇರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ‘ಶ್ರೀ ಕಲ್ಮೇಶ್ವರ ಮಹಾರಾಜ್ ಕೀ ಜೈ’, ‘ಹರ ಹರ ಮಹಾದೇವ’ ಎಂಬ ಭಕ್ತರ ಜಯಘೋಷಗಳು ಮೊಳಗಿದವು. ಉತ್ತತ್ತಿ ಎಸೆದು, ನಮಸ್ಕರಿಸಿ ಭಕ್ತರು ತೇರನ್ನು ಎಳೆದರು.

ದುರ್ಗಾದೇವಿ ಹಾಗೂ ಬೀರದೇವರ ಡೊಳ್ಳು ಮೇಳದ ಡೊಳ್ಳು ಕುಣಿತ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ಯುವಕರ ತಂಡ ನಂದಿಕೋಲನ್ನು ಒಂದೇ ಕೈಯಲ್ಲಿ ಎತ್ತಿ ಹಿಡಿದು ಪ್ರದರ್ಶಿಸಿದ್ದು ನೆರೆದಿದ್ದವರ ಗಮನ ಸೆಳೆಯಿತು.

ವೀರಭದ್ರೇಶ್ವರ ದೇವಸ್ಥಾನದ ಬಳಿ ಸಾಂಪ್ರದಾಯಿಕ ಒಡಪುಗಳ ಘೋಷ ಮೊಳಗುತ್ತಿದ್ದಂತೆ ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಿದರು. ತಳಿರು-ತೋರಣಗಳು ಹಾಗೂ ದೇವಸ್ಥಾನದ ಗೋಪುರ, ದೀಪಸ್ತಂಭ ಮತ್ತು ನವಗ್ರಹ ಮಂಟಪಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರ ಜಾತ್ರೆಯ ರಾತ್ರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

ಗ್ರಾಮದ ಪ್ರಮುಖ ದೇವಸ್ಥಾನಗಳು ಹಾಗೂ ಬೀದಿಗಳಲ್ಲಿ ಸಂಚರಿಸಿದ ಹುಚ್ಚಯ್ಯ ಉತ್ಸವವು ಭೋರ್ಗಲ್‌ವರೆಗೆ ತೆರಳಿ ಮರಳಿ ಸ್ವಸ್ಥಾನ ತಲುಪಿದಾಗ ಭಕ್ತರು ಸಂಭ್ರಮಿಸಿದರು.

ಹುಲಕೋಟಿಗೆ ಸಿಎಂ ಡಿಕೆಶಿ ಭೇಟಿ : ಗ್ರಾಪಂ ಅಧ್ಯಕ್ಷರು, ಸದಸ್ಯರೊಂದಿಗೆ ಮಾತುಕತೆ

ಗದಗ: ತಾಲೂಕಿನ ಹುಲಕೋಟಿ ಗ್ರಾಮ ಪಂಚಾಯಿತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಗದಗ ಶಾಸಕ ಡಾ. ಎಚ್.ಕೆ. ಪಾಟೀಲ, ಹುಲಕೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಭಕ್ತಿ–ಜ್ಞಾನದ ದಾರಿದೀಪ ಗುರುಸಾರ್ವಭೌಮರು: ಲಕ್ಷ್ಮೇಶ್ವರದಲ್ಲಿ ಆರಾಧನಾ ಮಹೋತ್ಸವಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಮೂರು ದಿನಗಳ ಆರಾಧನಾ ಮಹೋತ್ಸವದ ಸಮಾರೋಪದ ಅಂಗವಾಗಿ ಸೋಮವಾರ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರ ವೇದಘೋಷ, ವಾದ್ಯವೈಭವ ಹಾಗೂ ಭಕ್ತಿ ಸಂಗೀತದ ನಡುವೆ ನಡೆದ ರಥೋತ್ಸವದಲ್ಲಿ ಭಕ್ತರು ತಾಳಕ್ಕೆ ಹೆಜ್ಜೆ ಹಾಕುತ್ತ ರಥವನ್ನು ಎಳೆದು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ, ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಭಕ್ತಿ, ಜ್ಞಾನ, ಧರ್ಮನಿಷ್ಠೆ ಹಾಗೂ ಸದಾಚಾರದ ದಾರಿದೀಪವಾಗಿದ್ದಾರೆ. ಅವರ ಆರಾಧನೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಅವರು ತೋರಿದ ಧರ್ಮಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದರು.

ರಾಘವೇಂದ್ರ ಸ್ವಾಮಿಗಳು ಪ್ರಹ್ಲಾದರಾಜರಾಗಿ, ಬಳಿಕ ವ್ಯಾಸರಾಜರಾಗಿ ಭಕ್ತಿ–ಜ್ಞಾನವನ್ನು ಪ್ರಸಾರ ಮಾಡಿ, ರಾಘವೇಂದ್ರ ತೀರ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ರಥೋತ್ಸವದ ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರಾಧನಾ ಮಹೋತ್ಸವಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.

ಸಮಾಜದ ಹಿರಿಯ ಮುಖಂಡ ಕೃಷ್ಣ ಕುಲಕರ್ಣಿ ಮಾತನಾಡಿ, ನಂಬಿದ ಭಕ್ತರನ್ನು ರಾಯರು ಕೈಬಿಟ್ಟ ಉದಾಹರಣೆಗಳಿಲ್ಲ. 306 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಮಠದಲ್ಲಿ ಎಲ್ಲ ಸಮಾಜ ಬಾಂಧವರ ಸಹಕಾರದಿಂದ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸೇವೆ ಸಲ್ಲಿಸುವವರಿಗೆ ರಾಯರು ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಆಶಿಸಿದರು.

ಶನಿವಾರದಿಂದಲೇ ನೂರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಹೊಂಬಳ ಮನೆತನದವರಿಂದ ಪೂಜಿಸಲ್ಪಡುತ್ತಿರುವ ಈ ಮಠದ ಆರಾಧನಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವೈಭವ ಪಡೆಯುತ್ತಿದೆ. ವಿವಿಧ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ರಾಯರ ವೃಂದಾವನದ ದರ್ಶನ ಪಡೆದ ಭಕ್ತರು ಕಣ್ತುಂಬಿಕೊಂಡರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ನೀಲಪ್ಪ ಕರ್ಜೆಕಣ್ಣವರ, ಎ.ಪಿ. ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲಕುಲಕರ್ಣಿ, ವೇದವ್ಯಾಸ ಹೊಂಬಳ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ಮನೋಜ ಹೊಂಬಳ, ದಿಗಂಬರ ಪೂಜಾರ, ಅನಿಲ ಕುಲಕರ್ಣಿ, ಬಾಬು ಅಳವಂಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಪ್ರಾಣೇಶ ಬೆಳ್ಳಟ್ಟಿ, ಗಂಗಾಧರ ಮ್ಯಾಗೇರಿ, ಕಿರಣ ನವಲೆ, ರಾಮು ಪೂಜಾರ, ರಾಘವೇಂದ್ರ ಗೊಗ್ಗಿ, ನಾಗರಾಜ ಪೂಜಾರ, ಕೃಷ್ಣಕುಮಾರ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಗಂಗಾಧರ ಗೋಡಿ, ರಮೇಶ ತೊರಗಲ್, ರವೀಂದ್ರ ರಾಯಚೂರ, ನಿಂಗಪ್ಪ ತಹಸೀಲ್ದಾರ, ಬಸವರಾಜ ಚಕ್ರಸಾಲಿ, ಗಂಗಾಧರ ಹಳ್ಳಿಕೇರಿ, ರಾಘವೇಂದ್ರ ಮಿಸ್ಕಿನ್, ವೆಂಕಟೇಶ ಮಾತಾಡೆ ಸೇರಿದಂತೆ ವಿವಿಧ ಮುಖಂಡರು, ಗಣ್ಯರು ಹಾಗೂ ನೂರಾರು ಮಹಿಳೆಯರು ಮತ್ತು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗುರುವಿನ ಆರಾಧನೆಯ ನಿಜವಾದ ಅರ್ಥ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ. ದುಷ್ಟ ಗುಣಗಳನ್ನು ತ್ಯಜಿಸಿ ಹರಿಭಕ್ತಿ, ಶಾಸ್ತ್ರನಿಷ್ಠೆ ಹಾಗೂ ಧರ್ಮಮಾರ್ಗದಲ್ಲಿ ಸಾಗಿದಾಗ ಮಾತ್ರ ಗುರುರಾಯರ ಆರಾಧನೆ ಸಾರ್ಥಕವಾಗುತ್ತದೆ.

ಹನುಮಂತಾಚಾರ್ಯ ಹೊಂಬಳ

ಶೇರುದಾರರು ಫೋಟ್ ನಿಯಮ ಪಾಲಿಸಿ ಸಹಕಾರಿಯ ಪ್ರಗತಿಗೆ ಕೈಜೋಡಿಸಿ: ಮಹೇಶ ಕೋಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ಸಂಘ-ಸಂಸ್ಥೆಗಳು ಪ್ರಗತಿ ಹೊಂದಲು ಸದಸ್ಯರು ಹಾಗೂ ಶೇರುದಾರರು ಫೋಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯವಾಗಿದೆ ಎಂದು ಗದುಗಿನ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ ಕೋಟಿ ಹೇಳಿದರು.

ನಗರದ ಕಲ್ಯಾಣ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ರವಿವಾರ ಜರುಗಿದ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘದಲ್ಲಿ ಸಾಲ ಪಡೆದ ಸಾಲಗಾರರಷ್ಟೇ ಜಾಮೀನುದಾರರೂ ಜವಾಬ್ದಾರರಾಗಿರುತ್ತಾರೆ. ಸದಸ್ಯರು ಸಹಕಾರಿಯ ಫೋಟ್ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಸಹಕಾರಿ ಬೈಲಾ ಪ್ರಕಾರ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಸಾಲಗಾರರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಜಾಮೀನುದಾರರು ಸಹ ಸಾಲ ಮರುಪಾವತಿ ಕುರಿತು ನಿಗಾ ವಹಿಸಬೇಕು. ಹಿರಿಯರ ಪರಿಶ್ರಮದಿಂದ ಸ್ಥಾಪನೆಯಾದ ಈ ಸಹಕಾರಿ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ನಿರ್ದೇಶಕರು ಹಾಗೂ ಶೇರುದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.

728 ಶೇರುದಾರರನ್ನು ಹೊಂದಿರುವ ಸಹಕಾರಿಯು 11 ಲಕ್ಷ 26 ಸಾವಿರ ರೂ.ಗಳ ಶೇರು ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ ಸಹಕಾರಿಯು 3 ಕೋಟಿ 10 ಲಕ್ಷ 57 ಸಾವಿರ ರೂ.ಗಳ ವ್ಯವಹಾರ ನಡೆಸಿ, 11 ಲಕ್ಷ 44 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಶೇರುದಾರರಿಗೆ ಶೇ.8ರಷ್ಟು ಲಾಭಾಂಶ ನೀಡಲಾಗುವುದು ಎಂದು ವಾರ್ಷಿಕ ವರದಿ ಮಂಡಿಸಿ ಮಹೇಶ ಕೋಟಿ ತಿಳಿಸಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಬಸವರಾಜ ರಾಮನಕೊಪ್ಪ, ಬಸವರಾಜ ಕೊರ್ಲಹಳ್ಳಿ, ಗಂಗಾಧರ ಮೇಲಗಿರಿ, ತೋಂಟೇಶ ಮಾನ್ವಿ, ಶಂಭು ಕಾರಕಟ್ಟಿ, ಸುಶೀಲಾ ಕೋಟಿ, ಸುರೇಖಾ ಪಿಳ್ಳಿ, ಕಲ್ಯಾಣಪ್ಪ ಕೋಟಿ, ಶರಣಬಸವ ಮಠದ ಹಾಗೂ ಶೈಲೇಶ ಬಾಗಮಾರ ಉಪಸ್ಥಿತರಿದ್ದರು. ಸೌಹಾರ್ದ ಫೆಡರೇಷನ್ ಗದಗ ಜಿಲ್ಲಾ ಸಂಯೋಜಕಿ ಗಂಗಮ್ಮ ನಾಯಕ ಭಾಗವಹಿಸಿದ್ದರು.

ಸುಶೀಲಾ ಕೋಟಿ ಸ್ವಾಗತಿಸಿದರು. ಸುರೇಖಾ ಪಿಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಮೇಲಗಿರಿ ವಂದಿಸಿದರು.

ಸಭೆಯಲ್ಲಿ ನಗರಸಭೆಯ ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಶಿವಪುತ್ರಪ್ಪ ಕುಂದಗೋಳ, ಸಂಧ್ಯಾ ಕೋಟಿ, ಚೈತ್ರಾ ಕೋಟಿ, ಅಶೋಕ ಕುಡತಿನ್ನಿ, ಈರಪ್ಪ ಕೋಟ್ನೇಕಲ್ಲ, ಎಸ್.ಟಿ. ಪಾಟೀಲ, ಮಹಾರುದ್ರಪ್ಪ ನರಗುಂದ, ಮಲ್ಲಿಕಾರ್ಜುನ ಕೆಂಧೂಳಿ, ರಾಜಣ್ಣ ಬೇಲೇರಿ, ಸಿದ್ಧಮಲ್ಲಪ್ಪ ಕಾವೇರಿ, ರಮೇಶ ಪಿಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.