Home Blog Page 32

ಭಕ್ತಿ–ಜ್ಞಾನದ ದಾರಿದೀಪ ಗುರುಸಾರ್ವಭೌಮರು: ಲಕ್ಷ್ಮೇಶ್ವರದಲ್ಲಿ ಆರಾಧನಾ ಮಹೋತ್ಸವಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಮೂರು ದಿನಗಳ ಆರಾಧನಾ ಮಹೋತ್ಸವದ ಸಮಾರೋಪದ ಅಂಗವಾಗಿ ಸೋಮವಾರ ರಾಯರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರ ವೇದಘೋಷ, ವಾದ್ಯವೈಭವ ಹಾಗೂ ಭಕ್ತಿ ಸಂಗೀತದ ನಡುವೆ ನಡೆದ ರಥೋತ್ಸವದಲ್ಲಿ ಭಕ್ತರು ತಾಳಕ್ಕೆ ಹೆಜ್ಜೆ ಹಾಕುತ್ತ ರಥವನ್ನು ಎಳೆದು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ, ಶ್ರೀ ರಾಘವೇಂದ್ರ ಗುರುಸಾರ್ವಭೌಮರು ಭಕ್ತಿ, ಜ್ಞಾನ, ಧರ್ಮನಿಷ್ಠೆ ಹಾಗೂ ಸದಾಚಾರದ ದಾರಿದೀಪವಾಗಿದ್ದಾರೆ. ಅವರ ಆರಾಧನೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಅವರು ತೋರಿದ ಧರ್ಮಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದರು.

ರಾಘವೇಂದ್ರ ಸ್ವಾಮಿಗಳು ಪ್ರಹ್ಲಾದರಾಜರಾಗಿ, ಬಳಿಕ ವ್ಯಾಸರಾಜರಾಗಿ ಭಕ್ತಿ–ಜ್ಞಾನವನ್ನು ಪ್ರಸಾರ ಮಾಡಿ, ರಾಘವೇಂದ್ರ ತೀರ್ಥರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ರಥೋತ್ಸವದ ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರಾಧನಾ ಮಹೋತ್ಸವಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.

ಸಮಾಜದ ಹಿರಿಯ ಮುಖಂಡ ಕೃಷ್ಣ ಕುಲಕರ್ಣಿ ಮಾತನಾಡಿ, ನಂಬಿದ ಭಕ್ತರನ್ನು ರಾಯರು ಕೈಬಿಟ್ಟ ಉದಾಹರಣೆಗಳಿಲ್ಲ. 306 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಮಠದಲ್ಲಿ ಎಲ್ಲ ಸಮಾಜ ಬಾಂಧವರ ಸಹಕಾರದಿಂದ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸೇವೆ ಸಲ್ಲಿಸುವವರಿಗೆ ರಾಯರು ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಆಶಿಸಿದರು.

ಶನಿವಾರದಿಂದಲೇ ನೂರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ಹೊಂಬಳ ಮನೆತನದವರಿಂದ ಪೂಜಿಸಲ್ಪಡುತ್ತಿರುವ ಈ ಮಠದ ಆರಾಧನಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ವೈಭವ ಪಡೆಯುತ್ತಿದೆ. ವಿವಿಧ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ರಾಯರ ವೃಂದಾವನದ ದರ್ಶನ ಪಡೆದ ಭಕ್ತರು ಕಣ್ತುಂಬಿಕೊಂಡರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಮಹೇಶ ಹೊಗೆಸೊಪ್ಪಿನ, ಶರಣು ಗೋಡಿ, ನೀಲಪ್ಪ ಕರ್ಜೆಕಣ್ಣವರ, ಎ.ಪಿ. ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲಕುಲಕರ್ಣಿ, ವೇದವ್ಯಾಸ ಹೊಂಬಳ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ಮನೋಜ ಹೊಂಬಳ, ದಿಗಂಬರ ಪೂಜಾರ, ಅನಿಲ ಕುಲಕರ್ಣಿ, ಬಾಬು ಅಳವಂಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಪ್ರಾಣೇಶ ಬೆಳ್ಳಟ್ಟಿ, ಗಂಗಾಧರ ಮ್ಯಾಗೇರಿ, ಕಿರಣ ನವಲೆ, ರಾಮು ಪೂಜಾರ, ರಾಘವೇಂದ್ರ ಗೊಗ್ಗಿ, ನಾಗರಾಜ ಪೂಜಾರ, ಕೃಷ್ಣಕುಮಾರ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಗಂಗಾಧರ ಗೋಡಿ, ರಮೇಶ ತೊರಗಲ್, ರವೀಂದ್ರ ರಾಯಚೂರ, ನಿಂಗಪ್ಪ ತಹಸೀಲ್ದಾರ, ಬಸವರಾಜ ಚಕ್ರಸಾಲಿ, ಗಂಗಾಧರ ಹಳ್ಳಿಕೇರಿ, ರಾಘವೇಂದ್ರ ಮಿಸ್ಕಿನ್, ವೆಂಕಟೇಶ ಮಾತಾಡೆ ಸೇರಿದಂತೆ ವಿವಿಧ ಮುಖಂಡರು, ಗಣ್ಯರು ಹಾಗೂ ನೂರಾರು ಮಹಿಳೆಯರು ಮತ್ತು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗುರುವಿನ ಆರಾಧನೆಯ ನಿಜವಾದ ಅರ್ಥ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ. ದುಷ್ಟ ಗುಣಗಳನ್ನು ತ್ಯಜಿಸಿ ಹರಿಭಕ್ತಿ, ಶಾಸ್ತ್ರನಿಷ್ಠೆ ಹಾಗೂ ಧರ್ಮಮಾರ್ಗದಲ್ಲಿ ಸಾಗಿದಾಗ ಮಾತ್ರ ಗುರುರಾಯರ ಆರಾಧನೆ ಸಾರ್ಥಕವಾಗುತ್ತದೆ.

ಹನುಮಂತಾಚಾರ್ಯ ಹೊಂಬಳ

ಶೇರುದಾರರು ಫೋಟ್ ನಿಯಮ ಪಾಲಿಸಿ ಸಹಕಾರಿಯ ಪ್ರಗತಿಗೆ ಕೈಜೋಡಿಸಿ: ಮಹೇಶ ಕೋಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ಸಂಘ-ಸಂಸ್ಥೆಗಳು ಪ್ರಗತಿ ಹೊಂದಲು ಸದಸ್ಯರು ಹಾಗೂ ಶೇರುದಾರರು ಫೋಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯವಾಗಿದೆ ಎಂದು ಗದುಗಿನ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ ಕೋಟಿ ಹೇಳಿದರು.

ನಗರದ ಕಲ್ಯಾಣ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ರವಿವಾರ ಜರುಗಿದ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘದಲ್ಲಿ ಸಾಲ ಪಡೆದ ಸಾಲಗಾರರಷ್ಟೇ ಜಾಮೀನುದಾರರೂ ಜವಾಬ್ದಾರರಾಗಿರುತ್ತಾರೆ. ಸದಸ್ಯರು ಸಹಕಾರಿಯ ಫೋಟ್ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಸಹಕಾರಿ ಬೈಲಾ ಪ್ರಕಾರ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಸಾಲಗಾರರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಜಾಮೀನುದಾರರು ಸಹ ಸಾಲ ಮರುಪಾವತಿ ಕುರಿತು ನಿಗಾ ವಹಿಸಬೇಕು. ಹಿರಿಯರ ಪರಿಶ್ರಮದಿಂದ ಸ್ಥಾಪನೆಯಾದ ಈ ಸಹಕಾರಿ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ನಿರ್ದೇಶಕರು ಹಾಗೂ ಶೇರುದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.

728 ಶೇರುದಾರರನ್ನು ಹೊಂದಿರುವ ಸಹಕಾರಿಯು 11 ಲಕ್ಷ 26 ಸಾವಿರ ರೂ.ಗಳ ಶೇರು ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ ಸಹಕಾರಿಯು 3 ಕೋಟಿ 10 ಲಕ್ಷ 57 ಸಾವಿರ ರೂ.ಗಳ ವ್ಯವಹಾರ ನಡೆಸಿ, 11 ಲಕ್ಷ 44 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಶೇರುದಾರರಿಗೆ ಶೇ.8ರಷ್ಟು ಲಾಭಾಂಶ ನೀಡಲಾಗುವುದು ಎಂದು ವಾರ್ಷಿಕ ವರದಿ ಮಂಡಿಸಿ ಮಹೇಶ ಕೋಟಿ ತಿಳಿಸಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಬಸವರಾಜ ರಾಮನಕೊಪ್ಪ, ಬಸವರಾಜ ಕೊರ್ಲಹಳ್ಳಿ, ಗಂಗಾಧರ ಮೇಲಗಿರಿ, ತೋಂಟೇಶ ಮಾನ್ವಿ, ಶಂಭು ಕಾರಕಟ್ಟಿ, ಸುಶೀಲಾ ಕೋಟಿ, ಸುರೇಖಾ ಪಿಳ್ಳಿ, ಕಲ್ಯಾಣಪ್ಪ ಕೋಟಿ, ಶರಣಬಸವ ಮಠದ ಹಾಗೂ ಶೈಲೇಶ ಬಾಗಮಾರ ಉಪಸ್ಥಿತರಿದ್ದರು. ಸೌಹಾರ್ದ ಫೆಡರೇಷನ್ ಗದಗ ಜಿಲ್ಲಾ ಸಂಯೋಜಕಿ ಗಂಗಮ್ಮ ನಾಯಕ ಭಾಗವಹಿಸಿದ್ದರು.

ಸುಶೀಲಾ ಕೋಟಿ ಸ್ವಾಗತಿಸಿದರು. ಸುರೇಖಾ ಪಿಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಮೇಲಗಿರಿ ವಂದಿಸಿದರು.

ಸಭೆಯಲ್ಲಿ ನಗರಸಭೆಯ ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಶಿವಪುತ್ರಪ್ಪ ಕುಂದಗೋಳ, ಸಂಧ್ಯಾ ಕೋಟಿ, ಚೈತ್ರಾ ಕೋಟಿ, ಅಶೋಕ ಕುಡತಿನ್ನಿ, ಈರಪ್ಪ ಕೋಟ್ನೇಕಲ್ಲ, ಎಸ್.ಟಿ. ಪಾಟೀಲ, ಮಹಾರುದ್ರಪ್ಪ ನರಗುಂದ, ಮಲ್ಲಿಕಾರ್ಜುನ ಕೆಂಧೂಳಿ, ರಾಜಣ್ಣ ಬೇಲೇರಿ, ಸಿದ್ಧಮಲ್ಲಪ್ಪ ಕಾವೇರಿ, ರಮೇಶ ಪಿಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಮಾಜವನ್ನು ತಿದ್ದಿ ಮಾರ್ಗದರ್ಶನ ನೀಡುವವರು ಜಂಗಮರು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಹಿಂಡಾಗಿರುವ ಗುಂಪಿಗೆ ಸಮಾಜ ಎನ್ನಲಾಗದು. ಸಂಸ್ಕಾರ ಹಾಗೂ ಧರ್ಮಾಚರಣೆ ಇರುವ ಸಮುದಾಯವೇ ನಿಜವಾದ ಸಮಾಜವಾಗಿದ್ದು, ಸಮಾಜವನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಜಂಗಮರ ಮೇಲಿದೆ ಎಂದು ನರೇಗಲ್‌ನ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿರುವ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ರವಿವಾರ ಅಖಿಲ ಭಾರತ ಜಂಗಮ ಸೇವಾ ಸಮಿತಿ ಗದಗ ಹಾಗೂ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್, ನರಸಾಪುರ–ಗದಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ, ಸಮಿತಿಯ ವಾರ್ಷಿಕೋತ್ಸವ, ‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಂಗಮ ಸಮಾಜ ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಹಿಂದುಳಿದಿಲ್ಲವಾದರೂ ಆರ್ಥಿಕವಾಗಿ ಹಿಂದುಳಿದಿದೆ. ದುಶ್ಚಟಗಳಿಂದ ಸಮಾಜ ಹಾಳಾಗುತ್ತಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಹಳ್ಳಿಗಳಲ್ಲಿರುವ ಹಳೆಯ ಮಠಗಳನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಬೇಕು. ಪಾಲಕರು ಮಕ್ಕಳಿಗೆ ಧಾರ್ಮಿಕ ಗ್ರಂಥಗಳನ್ನು ಓದಿಸುವ ಮೂಲಕ ಸಂಸ್ಕಾರ ಹಾಗೂ ಧರ್ಮಾಚರಣೆಯ ಮಹತ್ವ ತಿಳಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಗ್ರಾಹಕ ನ್ಯಾಯ ಪೀಠದ ನಿವೃತ್ತ ಸದಸ್ಯ ಎಫ್.ಪಿ. ಲಕ್ಷ್ಮೇಶ್ವರಮಠ ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು, ಸಮಾಜಸೇವಕರು ಹಾಗೂ ಸರ್ಕಾರಿ ನೌಕರರು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದರು.

ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಟಯ್ಯ ಗಡ್ಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯು ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ 64 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 35 ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರ, 100ಕ್ಕೂ ಹೆಚ್ಚು ವಟುಗಳಿಗೆ ಅಯ್ಯಾಚಾರ–ಲಿಂಗದೀಕ್ಷೆ ನೀಡುವುದರ ಜತೆಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಗವಿಮಠದ ಪೂಜ್ಯಶ್ರೀ ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳು ಹಾಗೂ ಅಸೂಟಿಯ ರೇವಣಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ರುದ್ರಾರಾಧ್ಯ ಶಾಸ್ತ್ರಿಗಳು ಚೌಕಿಮಠ, ವೀರಯ್ಯ ಶಾಸ್ತ್ರಿಗಳು ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಅಮೃತಹನಿ ಸಂಸ್ಥಾಪಕ ಫಕೀರಯ್ಯ ಹಿರೇಮಠ, ಸಾಮಾಜಿಕ ಕಾರ್ಯಕರ್ತ ಶಿವಾನಂದಯ್ಯ ಹಿರೇಮಠ, ಆನಂದಯ್ಯ ವಿರಕ್ತಮಠ, ಎಂ.ಎನ್. ಶಿರೋಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕುಮಾರಸ್ವಾಮಿ ಹಿರೇಮಠ ಹಾಗೂ ತಂಡದವರು ಪ್ರಾರ್ಥಿಸಿದರು. ಉಮಾಪತಿ ಭೂಸನೂರಮಠ ಕಾರ್ಯಕ್ರಮ ನಿರೂಪಿಸಿದರು.

‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ

ಸಾಹಿತ್ಯ, ಸಾಮಾಜಿಕ ಸೇವೆ, ವೈದಿಕ, ಕೃಷಿ, ಸಂಗೀತ, ಉದ್ಯಮ, ಶಿಕ್ಷಣ, ದಾಸೋಹ, ವೈದ್ಯಕೀಯ, ಕಲೆ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರುದ್ರಾರಾಧ್ಯ ಶಾಸ್ತ್ರಿಗಳು ಚೌಕಿಮಠ, ರೇವಣಸಿದ್ದಯ್ಯ ಸ್ವಾಮಿಗಳು ಹಿರೇಮಠ, ವೀರಯ್ಯ ಶಾಸ್ತ್ರಿಗಳು ಹಿರೇಮಠ, ಬಸಯ್ಯ ಸಾಸ್ವಿಹಳ್ಳಿಮಠ, ಡಾ. ಶಿವಬಸಯ್ಯ ಗಡ್ಡದಮಠ, ಕಳಕನಗೌಡ ಪಾಟೀಲ, ವೀರಭದ್ರಯ್ಯ ಹಿರೇಮಠ, ಚಂದ್ರಕಲಾ ಇಟಗಿಮಠ, ವಿನಯಕುಮಾರ ಗಂಧದ, ಈಶ್ವರಯ್ಯ ಹಿರೇಮಠ, ಶಿವಕುಮಾರ ಸ್ವಾಮಿಮಠ, ಶಿವಯ್ಯ ಅಲ್ಲಮಯ್ಯನವರ, ಧನಲಕ್ಷ್ಮೀ ಹಾಲ್ಮಠ, ಡಾ. ತೇಜಸ್ವಿನಿ ಹಿರೇಮಠ, ಅನುಸೂಯ ಹೊಸೂರುಮಠ, ಫಕ್ಕಿರಗೌಡ ಪಾಟೀಲ ಹಾಗೂ ಷಡಕ್ಷರಯ್ಯ ಹಿರೇಮಠ ಅವರಿಗೆ ‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದೇಶ, ಸಮಾಜಕ್ಕಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು: ವಿನಾಯಕ ತಳಗೇರಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂಗಳ ಬಗ್ಗೆ ಹಿಂದೂಗಳು ದೇಶವ್ಯಾಪಿ ಜಾಗೃತರಾಗಬೇಕು. ಪ್ರತಿಯೊಬ್ಬ ಹಿಂದೂ ಪ್ರಜೆಯೂ ದೇಶ ಹಾಗೂ ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ ಎಂಬ ಸಂಕಲ್ಪ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಳಗೇರಿ ಹೇಳಿದರು.

ಪಟ್ಟಣದ ಶಂಕರ ಭಾರತಿಮಠದ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಕ್ಷ್ಮೇಶ್ವರ ಘಟಕದಿಂದ ಶನಿವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಗಳಿಗೆ ಹಿಂದೂಗಳು ಸಮಯ ನೀಡಬೇಕು ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ಮನೆಯಲ್ಲೂ ಹಿಂದೂ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.

ಗೋಹತ್ಯೆ, ಮತಾಂತರ ಹಾಗೂ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ದೇಶದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯೂ ಇದೆ. ಯುವಶಕ್ತಿಯನ್ನು ಬೇರೆಡೆ ಸೆಳೆಯಲು ಷಡ್ಯಂತ್ರಗಳು ನಡೆಯುತ್ತಿದ್ದು, ಇಂತಹ ಪ್ರಯತ್ನಗಳಿಗೆ ಹಿಂದೂ ಸಮಾಜ ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ರಕ್ಷಾ ಬಂಧನ ಹಬ್ಬವನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ಪರಸ್ಪರ ಸಹೋದರತ್ವ, ಏಕತೆ ಹಾಗೂ ಎಲ್ಲರೂ ಒಂದೇ ಎಂಬ ಭಾವನೆಯನ್ನು ಸಾರುತ್ತದೆ. ಕಷ್ಟದ ದಿನಗಳಲ್ಲಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದುಬಂದಿದೆ. ಇಂದು ಸಂಘದ ಚಟುವಟಿಕೆಗಳಿಗೆ ಮುಕ್ತ ಅವಕಾಶ ದೊರೆತಿದ್ದು, ವಿದೇಶಗಳಲ್ಲಿಯೂ ರಾಮನ ಜಪ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಶಾರದಾ ಸಂಗೀತ ಗುರುಕುಲದ ಸಂಸ್ಥಾಪಕ ಕೃಷ್ಣಕುಮಾರ ಕುಲಕರ್ಣಿ ಮಾತನಾಡಿ, ದೇಶ ಹಾಗೂ ಸಮಾಜಕ್ಕೆ ಕಂಟಕ ಎದುರಾದಾಗಲೆಲ್ಲ ರಕ್ಷಾ ಬಂಧನದಂತಹ ಹಬ್ಬಗಳು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಯುವಜನರು ದೇಶದ ಪ್ರಗತಿಗಾಗಿ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಮುನ್ನಡೆದರೆ ಆದರ್ಶ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಹಂಪಣ್ಣವರ, ತಾಲೂಕು ಕಾರ್ಯವಾಹ ಶಿವರಾಜ ಗುಜರಿ, ಸುನೀಲ ಮೆಡ್ಲೇರಿ, ಉಮೇಶ ಮಡಿವಾಳರ, ಪಾಂಡುರಂಗ ಕಾಕಡೆ, ಗುರು ಮೆಡ್ಲೇರಿ, ರಾಜು ಅರಳಿ, ಪ್ರವೀಣ, ವೈ.ಕೆ. ಲಿಂಗಶೆಟ್ಟಿ, ರೋಹಿತ ಬಾಕಳೆ, ಮುರುಗೇಶ ದುಂಡಿ, ಯಲ್ಲಪ್ಪ ಶಿರಬಡಗಿ, ಶಂಕರ ಬ್ಯಾಡಗಿ, ಮಂಜುನಾಥ ಬೆಂಗಳೂರು, ಸಂತೋಷ ಬಡಿಗೇರ ಹಾಗೂ ಕೊಟ್ರೇಶ ಅಳವಂಡಿ ಉಪಸ್ಥಿತರಿದ್ದರು.

ಮನೆಬಾಗಿಲಿಗೆ ಆಡಳಿತ: ಸೆ.5ರಿಂದ ‘ಪ್ರಜಾಸೇವಾ ಅಭಿಯಾನ’

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಆಡಳಿತ ವ್ಯವಸ್ಥೆಯನ್ನೇ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’ ಆರಂಭಿಸುತ್ತಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.

ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಹಾಗೂ ಬಾಕಿ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಅಧಿಕಾರಿಗಳ ಉತ್ತರದಾಯಿತ್ವವನ್ನು ಹೆಚ್ಚಿಸುವ ಮೂಲಕ ಜನಪರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ಯೋಜನೆ ರೂಪಿಸಿದೆ.

ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಪ್ರಜಾಸೇವಾ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುವುದು. ಮುಂದಿನ ಮೂರರಿಂದ ನಾಲ್ಕು ತಿಂಗಳ ಕಾರ್ಯಕ್ರಮಗಳನ್ನು ಒಳಗೊಂಡ ಏಕೀಕೃತ ಕ್ಯಾಲೆಂಡರ್ ಕೂಡ ಸಿದ್ಧಪಡಿಸಲಾಗುತ್ತಿದೆ.

ಸಭೆಯ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನ ಮುಂಚಿತವಾಗಿ ಮನೆ-ಮನೆಗೆ ಕರಪತ್ರ ವಿತರಿಸಲಾಗುವುದು. ಸಭೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸೆಂಟರ್ ಮೂಲಕವೂ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಮತ್ತು ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಸಭಾ ಸ್ಥಳದಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಗತ್ಯ ವ್ಯವಸ್ಥೆ ಇರಲಿದೆ.

ಸಭೆಯ ದಿನ ಹೊಸ ಅಹವಾಲುಗಳು ಹಾಗೂ ಈಗಾಗಲೇ ಸಲ್ಲಿಸಿದ್ದರೂ ಪರಿಹಾರವಾಗದ ಪ್ರಕರಣಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಕಾಲ, ಸಿಎಸ್‌ಸಿ ಅಥವಾ ಐಪಿಜಿಆರ್‌ಎಸ್‌ನಲ್ಲಿ ನೋಂದಾಯಿಸಿ 21 ದಿನಗಳಾದರೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆಯೂ ಇರಲಿದೆ.

ಪ್ರತಿ ಬುಧವಾರ ಅರ್ಜಿಗಳು ಮತ್ತು ಅಹವಾಲುಗಳ ಪ್ರಗತಿಯನ್ನು ಮೂರು ಹಂತಗಳಲ್ಲಿ ಪರಿಶೀಲಿಸಲಾಗುವುದು. ಬೆಳಿಗ್ಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು, ನಂತರ ಉಪವಿಭಾಗ ಮಟ್ಟದಲ್ಲಿ ಸಹಾಯಕ ಆಯುಕ್ತರು ಮತ್ತು ಮಧ್ಯಾಹ್ನ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಬಾಕಿ ಪ್ರಕರಣಗಳ ಪರಿಶೀಲನೆ ನಡೆಸಲಿದ್ದಾರೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳನ್ನು ಸ್ವಯಂಚಾಲಿತವಾಗಿ ಮೇಲಧಿಕಾರಿಗಳ ಹಂತಕ್ಕೆ ವರ್ಗಾಯಿಸಲಾಗುವುದು.

ಸಭಾ ಸ್ಥಳಗಳಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ, ಸರ್ಕಾರಿ ಯೋಜನೆಗಳು ಹಾಗೂ ಅರ್ಹತಾ ಮಾನದಂಡಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು 1902 ಸಹಾಯವಾಣಿ ಸಂಖ್ಯೆ ಅಥವಾ ಐಪಿಜಿಆರ್‌ಎಸ್ ಪೋರ್ಟಲ್ ಮೂಲಕವೂ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು.

ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಬದಲು ಆಡಳಿತ ವ್ಯವಸ್ಥೆಯೇ ಜನರ ಬಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ರೂಪಿಸಲಾಗಿದೆ. ಅಹವಾಲುಗಳ ತ್ವರಿತ ಪರಿಹಾರ, ಅಧಿಕಾರಿಗಳ ಹೊಣೆಗಾರಿಕೆ ಹಾಗೂ ಪಾರದರ್ಶಕ ಆಡಳಿತವನ್ನು ಖಚಿತಪಡಿಸುವ ಮೂಲಕ ಜನಪರ ಸರ್ಕಾರದ ಆಶಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.

ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ

ಕ್ಯಾಮೆರಾ ಕಣ್ಣಿನ ಸಾಧಕನಿಗೆ ಭಾವಪೂರ್ಣ ನಮನ: ಮುಂಡರಗಿಯಲ್ಲಿ ಛಾಯಾಗ್ರಹಣ ದಿನಾಚರಣೆ

0

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮುಂಡರಗಿ ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸಂಘದ 14ನೇ ವಾರ್ಷಿಕೋತ್ಸವ ಹಾಗೂ ಹಿರಿಯ ಚೇತನ ದಿ. ಬಿ. ಬಾಬು ಅವರಿಗೆ ನುಡಿ ನಮನ ಕಾರ್ಯಕ್ರಮ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡರಗಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವೀರೇಶ ಹಡಗಲಿ ವಹಿಸಿದ್ದರು.

ಹಿರಿಯ ಛಾಯಾಗ್ರಾಹಕರಾಗಿದ್ದ ದಿ. ಬಿ. ಬಾಬು ಅವರ ಸ್ಮರಣಾರ್ಥ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗದಗ ಜಿಲ್ಲಾ ಕಾರ್ಯದರ್ಶಿ ಎ.ಕೆ. ಮುಲ್ಲಾನವರ ವಿಶೇಷ ಉಪನ್ಯಾಸ ನೀಡಿ, ಛಾಯಾಗ್ರಹಣ ಕ್ಷೇತ್ರಕ್ಕೆ ಬಾಬು ಅವರು ಸಲ್ಲಿಸಿದ ಸೇವೆ ಹಾಗೂ ಸಂಘದ ಬೆಳವಣಿಗೆಯಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಬಳಿಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದಿ. ಬಿ. ಬಾಬು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಅವರೊಂದಿಗಿನ ಆತ್ಮೀಯ ಒಡನಾಟ ಮತ್ತು ಸೇವೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗಲಿಂಗಪ್ಪ ಅರ್ಕಸಾಲಿ, ಮಾಜಿ ಗೌರವಾಧ್ಯಕ್ಷ ಕಾಶಿನಾಥ ಕಲಬುರ್ಗಿ, ಹಿರಿಯ ಛಾಯಾಗ್ರಾಹಕ ಅಂದಪ್ಪ ಕುರುಡಗಿ, ಕಾರ್ಯದರ್ಶಿ ಸಂತೋಷ ಅಳವಂಡಿ, ಖಜಾಂಚಿ ಮಾರುತಿ ಯಾವಗಲ್, ಸಹಕಾರ್ಯದರ್ಶಿ ರಾಜು ಚಿಕ್ಕಣ್ಣವರ, ನಿಂಗಪ್ಪ ಮೇಟಿ, ಶಂಭುಲಿಂಗ ಹರಪನಹಳ್ಳಿ, ಪರಶು ಡೊಗ್ನಾರ್, ನಾಗರಾಜ ಪಾಟೀಲ, ತೋಟೇಶ್ ಬೆಳದಡಿ, ದತ್ತ ಕಲಬುರ್ಗಿ ಸೇರಿದಂತೆ ಮುಂಡರಗಿ ತಾಲೂಕಿನ ಅನೇಕ ಛಾಯಾಗ್ರಾಹಕ ಬಂಧುಗಳು ಭಾಗವಹಿಸಿದ್ದರು.

ಸಂಘಟನಾ ಕಾರ್ಯದರ್ಶಿ ರಂಗನಾಥ ಕಂದಗಲ್ ಸ್ವಾಗತಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

‘ಸ್ಲಂ ನಿವಾಸಿಗಳಿಗೆ ಭೂಹಕ್ಕು ಖಾತ್ರಿ ಸರ್ಕಾರದ ಜವಾಬ್ದಾರಿ’: ಸ್ಲಂ ಸಮಿತಿ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯದ ಅಘೋಷಿತ ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆ–1973ರಡಿ ಗುರುತಿಸಿ ಘೋಷಣೆ ಮಾಡಬೇಕು. ಘೋಷಿತ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಭೂಮಿ ಹಕ್ಕನ್ನು ಖಾತ್ರಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಸ್ಲಂ ಪ್ರದೇಶದ ಮುಖಂಡರಿಗೆ ಸ್ಲಂ ಕಾಯ್ದೆ ಕುರಿತು ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಸ್ಲಂ ಕಾಯ್ದೆಯಡಿ ಘೋಷಣೆ ಮಾಡಲಾಗಿದ್ದು, ಇನ್ನೂ 80ಕ್ಕೂ ಹೆಚ್ಚು ಗುಡಿಸಲು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು. ಆದರೆ ಘೋಷಿತ ಕೊಳಗೇರಿ ಪ್ರದೇಶಗಳಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಸುಮಾರು 70 ವರ್ಷಗಳಿಂದ ಜನರು ವಾಸಿಸುತ್ತಿರುವ ಜಿಲ್ಲೆಯ ಹಲವಾರು ಕೊಳಗೇರಿ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊಳಗೇರಿ ಅಭಿವೃದ್ಧಿ ಮತ್ತು ವಸತಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅನುದಾನದ ದುರ್ಬಳಕೆಯಿಂದ ಗದಗ ಜಿಲ್ಲೆಯ ಹಲವು ಸ್ಲಂ ಪ್ರದೇಶಗಳು ಇಂದಿಗೂ ಸೌಲಭ್ಯ ವಂಚಿತವಾಗಿವೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಕೀಲ ಎಂ.ಬಿ. ನದಾಫ, ಗದಗ ಜಿಲ್ಲಾ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡ ಮೌಲಾಸಾಬ ಗಚ್ಚಿ, ರೋಣ ತಾಲೂಕು ಮಟ್ಟದ ಮುಖಂಡರಾದ ಬಸವರಾಜ ಕುರಿ, ರಹಿಮಾನಬಿ ಕೊಲಕಾರ, ಹುಸೇನಬಿ ಸರಖವಾಸ, ಭಾಗ್ಯ ಗೊಲ್ಲರ, ಶಮಶಾದ್ ಪೊಲಾವಾಲೆ, ಶಾಮೀದ್ ಚೌಧರಿ, ಅಲ್ಲಾಬಿ ಚೌಧರಿ, ಫರೀದಾ ಮೀರಾನಾಯ್ಕ, ಮಾಳವ್ವ ಹಿರೇಮನಿ, ಈರಪ್ಪ ಗದುಗಿನ, ಜಹರಾಬಿ ಚೌಧರಿ, ಶಮಶಾದ್ ಇಟಗಿ, ಮೀನಾಕ್ಷಿ ಗುಡಿಮನಿ, ಶಂಕ್ರಪ್ಪ ಮುಂಡರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರೋಣ ತಾಲೂಕು ಸ್ಲಂ ಸಮಿತಿ ಘಟಕವನ್ನು ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿ ಸದಸ್ಯ ಮೌಲಾಸಾಬ ಎಸ್. ಗಚ್ಚಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗದಗ ಜಿಲ್ಲಾ ಸ್ಲಂ ಸಮಿತಿಯು ಕಳೆದ ಎರಡು ದಶಕಗಳಿಂದ ಕೊಳಗೇರಿ ಜನರ ಸಂವಿಧಾನಬದ್ಧ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಲಂ ಸಮಿತಿಯನ್ನು ವಿಸ್ತರಿಸಿ, ಸ್ಲಂ ಜನರ ಪರವಾಗಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು.

ಇಮ್ತಿಯಾಜ್ ಆರ್. ಮಾನ್ವಿ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ

ಬರಪಟ್ಟಿಯಿಂದ ಮೂರು ತಾಲೂಕು ಕೈಬಿಟ್ಟಿದ್ದಕ್ಕೆ ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ವಿವಿಧ ರೈತ ಸಂಘಟನೆಗಳು ಹಾಗೂ ಕರವೇ ಸಂಘಟನೆಯವರು ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬರ ಪರಿಸ್ಥಿತಿ ವೀಕ್ಷಣೆ ಹಾಗೂ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲಕ್ಷ್ಮೇಶ್ವರದಲ್ಲಿ ಮನವಿ ಸಲ್ಲಿಸಲಾಯಿತು.

ಮನವಿ ಪತ್ರದಲ್ಲಿ, ಮುಂಗಾರು ಮಳೆಯ ಕೊರತೆಯಿಂದ ಮೂರು ತಾಲೂಕುಗಳಲ್ಲೂ ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ. ಬೀಜ, ಗೊಬ್ಬರ, ಉಳುಮೆ ಹಾಗೂ ಕೂಲಿ ಸೇರಿದಂತೆ ಕೃಷಿಗೆ ಮಾಡಿದ ಖರ್ಚು ಕೂಡ ಮರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಪರಿಸ್ಥಿತಿ ಪರಿಶೀಲಿಸಿ ಬರ ಘೋಷಣೆಯ ಭರವಸೆ ನೀಡಿದ್ದರೂ, ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅನ್ಯಾಯವಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಳೆನಷ್ಟಕ್ಕೆ ಎಕರೆಗೆ ₹೫೦ ಸಾವಿರ ಪರಿಹಾರಕ್ಕೆ ಒತ್ತಾಯ

ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ, ಜಂಟಿ ಬೆಳೆನಷ್ಟ ಸಮೀಕ್ಷೆ ನಡೆಸಬೇಕು. ಪ್ರತಿ ಎಕರೆಗೆ ಕನಿಷ್ಠ ₹೫೦ ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ₹೧ ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬೆಳೆ ವಿಮೆ ಹಾಗೂ ಎಸ್‌ಡಿಆರ್‌ಎಫ್ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಆರಂಭಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಿ, ಕೂಲಿಯನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಗ್ರಾಮೀಣ ಜನರ ಗುಳೆ ತಡೆಯಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಹೊನ್ನಪ್ಪ ವಡ್ಡರ, ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಸೋಮಣ್ಣ ಡಾಣಗಲ್, ಚನ್ನಪ್ಪ ಷಣ್ಮುಖಿ, ಚಂದ್ರು ಮಾಗಡಿ, ಬಸವರಾಜ ಹಿರೇಮನಿ, ಮಂಜು ಮುಳಗುಂದ, ಸುರೇಶ ಹಟ್ಟಿ, ಭರಮಣ್ಣ ರೊಟ್ಟಿಗವಾಡ, ಎಚ್.ಎಚ್. ಪಾಟೀಲ, ಬಿ.ಎನ್. ಉಮಚಗಿ, ಶಿವಪ್ಪ ಹುಲಕೋಟಿ, ಬಸಣ್ಣ ಹಂಜಿ, ದ್ಯಾಮಪ್ಪ ಮತ್ತೂರ, ಬಸವರಾಜ ಪ್ಯಾಟಿ, ಶಿವಾನಂದ ಲಿಂಗಶೆಟ್ಟಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.

ರಸ್ತೆಯಲ್ಲೇ ಸಂತೆ, ಸಂಚಾರಕ್ಕೆ ಸಂಕಷ್ಟ: ಎಪಿಎಂಸಿ ಮಾರುಕಟ್ಟೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದಲ್ಲಿ ದಿನನಿತ್ಯ ಹಾಗೂ ರವಿವಾರ ನಡೆಯುತ್ತಿರುವ ಸಂತೆ ಮಾರುಕಟ್ಟೆಯನ್ನು ಸ್ಥಳಾಂತರಿಸಿ, ಪಾಳುಬಿದ್ದಿರುವ ಎಪಿಎಂಸಿ ಮಾರುಕಟ್ಟೆಯನ್ನು ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ, ಸಂತೆ ಮಾರುಕಟ್ಟೆಯಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಿಂದ ವಿವಿಧ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುವ ಜನರು ಪೊಲೀಸ್ ಠಾಣೆ, ತಾಲೂಕು ಆಸ್ಪತ್ರೆ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ರೇಷ್ಮೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಮಾರುಕಟ್ಟೆ ಮಾರ್ಗವಾಗಿಯೇ ತೆರಳಬೇಕಾದ ಅನಿವಾರ್ಯತೆ ಇದೆ ಎಂದರು.

ಇಕ್ಕಟ್ಟಾದ ರಸ್ತೆಯಲ್ಲಿ ಮಾರುಕಟ್ಟೆ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ ಎಂದು ತಿಳಿಸಿದರು.

ಬಸ್ ನಿಲ್ದಾಣದ ಸಮೀಪದಲ್ಲಿರುವ ಸರ್ಕಾರದ ಎಪಿಎಂಸಿ ಜಾಗೆ ಪಾಳುಬಿದ್ದು ಕಸ ಶೇಖರಣಾ ಘಟಕವಾಗಿ ಮಾರ್ಪಟ್ಟಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಎಪಿಎಂಸಿ ಮಾರುಕಟ್ಟೆಯನ್ನು ಕೂಡಲೇ ದುರಸ್ತಿಗೊಳಿಸಿ ದಿನನಿತ್ಯ ಹಾಗೂ ರವಿವಾರ ನಡೆಯುವ ಸಂತೆಯನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ರೈತರ ವ್ಯಾಪಾರ–ವಹಿವಾಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟದ ಮೂಲಕ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ, ಫಕ್ಕೀರೇಶ ರಟ್ಟಿಹಳ್ಳಿ, ವಿಠ್ಠಲ ಭಿಡವೆ, ಸಂತೋಷ ತೋಡೆಕಾರ, ಬಸವರಾಜ ಕಲ್ಯಾಣಿ, ಚಂದ್ರು ಜೋಗೇರ, ಜಗದೀಶ ತೇಲಿ, ಗಣೇಶ ಬಿಢವೆ, ಪರಶುರಾಮ ಡೊಂಕಬಳ್ಳಿ, ಲಕ್ಷ್ಮಣ ಪವಾರ, ಹನಮಂತ ಕುರಿ, ಮಾರುತಿ ಕೋಳಿ, ವಿಶ್ವನಾಥ ಧಳವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Bigg Boss Kannada 13: ಅನುಮತಿ ಇಲ್ಲದೆ ಶೋ ಆರಂಭವಾಗುತ್ತಾ? ಜಿಲ್ಲಾಧಿಕಾರಿ ಹೇಳಿದ್ದೇನು?

0

ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಕಾರ್ಯಕ್ರಮ ನಡೆಸಲು ಅಗತ್ಯ ಅನುಮತಿಗಳ ವಿಚಾರದಲ್ಲಿ ಗೊಂದಲ ಉಂಟಾಗಿದೆ.

ಸೆಪ್ಟೆಂಬರ್ 6ರಂದು ಶೋ ಆರಂಭಿಸುವುದಾಗಿ ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಘೋಷಣೆ ಮಾಡಿದ್ದರೂ, ಜಿಲ್ಲಾಡಳಿತಕ್ಕೆ ಈವರೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಿಳಿಸಿದ್ದಾರೆ.

ಬಿಗ್ ಬಾಸ್ ಶೋ ನಡೆಯುವ ಜಾಲಿವುಡ್‌ ಸಂಸ್ಥೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಕನ್ಸೆಂಟ್ ಫಾರ್ ಎಸ್ಟಾಬ್ಲಿಷ್‌ಮೆಂಟ್’ಗೆ ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಅನುಮೋದನೆ ಮಂಡಳಿಯಲ್ಲಿ ಬಾಕಿಯಿದ್ದು, ಪರಿಸರ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಸೂಚನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದರೆ ಬಿಗ್ ಬಾಸ್ ಶೋ ನಡೆಸಲು ಜಿಲ್ಲಾಡಳಿತದಿಂದ ಅನುಮತಿ ಪಡೆಯುವ ಸಂಬಂಧ ಯಾವುದೇ ಅರ್ಜಿ ಬಂದಿಲ್ಲ ಎಂದು ಯಶವಂತ್ ಗುರುಕರ್ ಸ್ಪಷ್ಟಪಡಿಸಿದ್ದಾರೆ.

‘ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಅಪ್ಲಿಕೇಷನ್ ಬಂದಿಲ್ಲ. ಅರ್ಜಿ ಬಂದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ಅನುಮತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಲು ಅಗತ್ಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಆಯೋಜಕರು ಸಲ್ಲಿಸುವ ಅರ್ಜಿಯಲ್ಲಿರುವ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅರ್ಜಿಯಲ್ಲಿರುವ ಅಂಶಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಯಮಾನುಸಾರ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಕಳೆದ ವರ್ಷವೂ ಬಿಗ್ ಬಾಸ್ ಕನ್ನಡ ಶೋಗೆ ಅಗತ್ಯ ಅನುಮತಿಗಳ ವಿಚಾರದಲ್ಲಿ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಅನುಮತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕಾರ್ಯಕ್ರಮ ಆರಂಭಿಸುವ ಘೋಷಣೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಸೆಪ್ಟೆಂಬರ್ 6ರಿಂದ ಆರಂಭವಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಕನ್ನಡದ ಜತೆಗೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಬಿಗ್ ಬಾಸ್ ಆವೃತ್ತಿಗಳೂ ಇದೇ ದಿನ ಆರಂಭವಾಗಬೇಕಿವೆ.

ಆದರೆ ಕನ್ನಡ ಬಿಗ್ ಬಾಸ್ ಆಯೋಜಕರು ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಪಡೆಯಲು ಈವರೆಗೆ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ, ನಿಗದಿತ ದಿನಾಂಕದಂದು ಕಾರ್ಯಕ್ರಮ ಆರಂಭವಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಅನುಮತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಶೋ ಆರಂಭಕ್ಕೆ ಅಂತಿಮ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.