Home Blog Page 3285

ಗದಗ ಜಿಲ್ಲೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ; ಕಂತೆ ಕಂತೆ ಹಣ ಜಪ್ತಿ, ನರಸಿಂಗಸಾ ತಂಬಾಕು ಸೀಜ್

ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ನಾಲ್ವರು ‌ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಎಸ್ಪಿ ಬಿ. ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ ವಿವಿಧ ಚೆಕ್ ಪೋಸ್ಟ್ ಸಿಬ್ಬಂದಿಯ ಚಾಣಾಕ್ಷತನದಿಂದ ಲಕ್ಷಾಂತರ ರೂ.ಮೌಲ್ಯದ ತಂಬಾಕು ಹಾಗೂ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಕಂತೆ ಕಂತೆ ಹಣ ಸಿಕ್ಕಿದೆ.

ಗದಗ ಶಹರದ ಮುಳಗುಂದ ರಸ್ತೆಯಲ್ಲಿ ಇರುವ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಗಳು ಪತ್ತೆಯಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರಿನಿಂದ ದೇವದುರ್ಗಕ್ಕೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು ವಿಶೇಷವಾಗಿದೆ.

ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇನ್ನೊಂದು ಪ್ರಕರಣದಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ಚೆಕ್ ಪೋಸ್ಟ್ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಸುಪ್ರಸಿದ್ಧ ತಂಬಾಕು ಸಿಕ್ಕಿದೆ.

ಗದಗನಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳ ಜಿಲ್ಲೆಯ ಕಡೆ ಹೊರಟಿದ್ದ ಗೂಡ್ಸ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೇ 1ಲಕ್ಷ 84 ಸಾವಿರ ರೂ.ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದ್ದು, ಶಿರಾಜ್ ನಾಗರಕಟ್ಟಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್ ಪೋಸ್ಟ್ ನಲ್ಲಿ ಕೂಡ 1ಲಕ್ಷ 10 ಸಾವಿರ ರೂ. ಮೌಲ್ಯದ ತಂಬಾಕು ಸಿಕ್ಕಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಿಂದ ಶಿರಹಟ್ಟಿ ಕಡೆ ಈ ತಂಬಾಕು ತುಂಬಿದ ರಿಕ್ಷಾ ಬರುತ್ತಿತ್ತು ಎನ್ನಲಾಗಿದೆ. ಶ್ಯಾಮ್ ನವಲೆ ಎಂಬುವರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಗದಗ ಎಸ್ಪಿ ಬಿ. ಎಸ್.ನೇಮಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪೊಲೀಸರ ಭರ್ಜರಿ ಕಾರ್ಯಾಚರಣೆ; ಮುಳಗುಂದ ಚೆಕ್ ಪೋಸ್ಟ್ ನಲ್ಲಿ 24 ಲಕ್ಷ ರೂ. ಸೀಜ್

ಗದಗ ಎಸ್ಪಿ ಬಿ.ಎಸ್ ನೇಮಗೌಡ ಭೇಟಿ, ಪರಿಶೀಲನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 24 ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದೆ.

ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಳಿಯ ಬಸಾಪುರ ಚೆಕ್ ಪೋಸ್ಟ್‌ನಲ್ಲಿ ಈ ಹಣ ಸೀಜ್ ಮಾಡಲಾಗಿದೆ. ಎರಡು ಪ್ರತ್ಯೇಕ ವಾಹನದಲ್ಲಿ ಹಣ ಸಾಗಿಸುವಾಗ, ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡುವಾಗ ಹಣ ಸಿಕ್ಕಿದೆ. ಈ ಹಣಕ್ಕೆ ಸೂಕ್ತ ದಾಖಲೆ ಇಲ್ಲ ಎನ್ನಲಾಗಿದೆ.

ಎರಡು ಪ್ರತ್ಯೇಕ ವಾಹನದಲ್ಲಿ ದಾವಣಗೆರೆಯಿಂದ ಗದಗ ಕಡೆಗೆ ಹಣ ತಗೆದುಕೊಂಡು ಹೊರಟಿದ್ದ ಪ್ರಯಾಣಿಕರ ಕಾರಲ್ಲಿ 20 ಲಕ್ಷ 50 ಸಾವಿರ ಹಾಗೂ ಬದಾಮಿ ತಾಲೂಕಿನ ಜಾಲಿಹಾಳದಿಂದ ಲಕ್ಷ್ಮೇಶ್ವರ ಕಡೆಗೆ ಹೊರಟಿದ್ದ ಕಾರಲ್ಲಿ 4 ಲಕ್ಷ ನಗದು ಸೀಜ್‌‌ ಮಾಡಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಗದಗ ಎಸ್ಪಿ ಬಾಬಾಸಾಹೇಬ ಎಸ್ ನೇಮಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ವಾಹನ ಖರೀದಿಗಾಗಿ ಹಾಗೂ ಆಸ್ತಿ ಖರೀದಿಸಲು ಈ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ವಾಹನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಸದಲಗಿ, ಪಿಎಸ್ಐ ಎಸ್. ಆರ್. ಕಣವಿ, ಸಿಬ್ಬಂದಿಗಳಾದ ವಿಜಯ ಪೂಜಾರ, ಅಬಕಾರಿ ಪೊಲೀಸ್ ನಜೀರ್ ಖುದಾವಂದ, ಜಿ.ಪಂ ಸಿಬ್ಬಂದಿ ಅರವಿಂದ್ ಬಂಡಿ ಇದ್ದರು.

ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕಳ್ಳರ ಕೈ ಚಳಕ; ಒಂದೇ ದಿನ ಎರಡು ಮನೆ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಸಾರಿಗೆ ನಗರದಲ್ಲಿ ಘಟನೆ……

ವಿಜಯಸಾಕ್ಷಿ ಸುದ್ದಿ, ಗದಗ

ಒಂದೇ ದಿನ ಒಂದೇ ಏರಿಯಾದ ಎರಡು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜರುಗಿದೆ.

ಗದಗ ತಾಲೂಕಿನ ಕಳಸಾಪೂರ ರಸ್ತೆಯಲ್ಲಿ ಬರುವ ಸಾರಿಗೆ ನಗರದಲ್ಲಿ ಈ ಕಳ್ಳತನ ನಡೆದಿದೆ.

ಪ್ರಕರಣ ಒಂದರಲ್ಲಿ ಮನೆಯೊಂದರ ಮುಂದಿನ ಬಾಗಿಲಿನ ಲಾಕರ್‌ ಕೀಲಿ ಮೀಟಿ ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಟ್ರೆಝರಿಯಲ್ಲಿರಿಸ್ದ 1.15 ಲಕ್ಷ ರೂ ಬೆಲೆಬಾಳುವ ಆಭರಣಗಳನ್ನು ದೋಚಿದ್ದಾರೆ.

ಪಾರ್ವತಿ ಮಾರುತೆಪ್ಪ ಜೋಗಿನ ಎಂಬುವರು ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಾರ್ಚ್‌ 16ರ ರಾತ್ರಿ 10 ಗಂಟೆಯಿಂದ ಮಾರ್ಚ್‌ 17ರ ನಸುಕಿನ 5.30ರ ನಡುವಿನ ಸಮಯದಲ್ಲಿ ಕಳ್ಳರು ಕೈಚಳಕ ತೋರಿದ್ದು, ಟ್ರೆಝರಿಯಲ್ಲಿದ್ದ 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಬಾಳುವ ಬಂಗಾರದ ಉಂಗುರ, 2.5 ಗ್ರಾಂ. ತೂಕದ 15 ಸಾವಿರ ರೂ. ಬೆಲೆಬಾಳುವ 3 ಸಣ್ಣ ಉಂಗುರ, 25 ಸಾವಿರ ರೂ. ಬೆಲೆಯ 5 ಗ್ರಾಂ ತೂಕದ ಬಂಗಾರದ ಸುತ್ತುಂಗುರ, 25 ಸಾವಿರ ರೂ. ಬೆಲೆಬಾಳುವ 5 ಗ್ರಾಂ ತೂಕದ ಡಿಸೈನ್‌ ಉಂಗುರ, 5 ಗ್ರಾಂ. ತೂಕದ 25 ಸಾವಿರ ರೂ ಬೆಲೆಯ ಬುಗಡಿ ಹೀಗೆ ಒಟ್ಟೂ ಅಂದಾಜು 1,15,000 ರೂ ಬೆಲೆಬಾಳುವ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮನೆಯೊಂದರ ಬಾಗಿಲಿನ ಚಿಲಕದ ಕೊಂಡಿ ಮೀಟಿ ತೆಗೆದು ಮನೆಯೊಳಗೆ ಟ್ರೆಝರಿಯಲ್ಲಿಟ್ಟಿದ್ದ 1.80 ಲಕ್ಷ ರೂ. ಬೆಲೆಬಾಳುವ ಆಭರಣ ಹಾಗೂ 50 ಸಾವಿರ ರೂ. ನಗದು ಹಣವನ್ನು ಕಳ್ಳತನ ನಡೆಸಿರುವ ಬಗ್ಗೆ ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ವಿಜಯಲಕ್ಷ್ಮೀ ರುದ್ರಪ್ಪ ಬಂಗಾರಿಯವರಿಗೆ ಸೇರಿರುವ ಮನೆಯೇ ಕಳ್ಳತನವಾಗಿದೆ. ವಾಸದ ಮನೆಯ ಚಿಲಕದ ಕೊಂಡಿ ಮೀಟಿ ತೆರೆದು, ಟ್ರೆಝರಿಯಲ್ಲಿದ್ದ 15 ಗ್ರಾಂ.ನ 75 ಸಾವಿರ ರೂ. ಬೆಲೆಯ ಬಂಗಾರದ ಚೈನ್‌, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಸುತ್ತುಂಗುರ, 5 ಗ್ರಾಂ. ತೂಕದ 25 ಸಾವಿರ ರೂ. ಬೆಲೆಯ ಬಂಗಾರದ ಬಿಳಿ ಹರಳಿನ ಉಂಗುರ, 15 ಸಾವಿರ ರೂ ಬೆಲೆಯ ಬಂಗಾರದ ಬೆಂಡವಾಲಿ, 15 ಸಾವಿರ ರೂ ಬೆಲೆಯ ಬಂಗಾರದ ಮೂಗುಬೊಟ್ಟು, 2 ಗ್ರಾಂ. ತೂಕದ 10 ಸಾವಿರ ರೂ ಬೆಲೆಯ ಚಿನ್ನದ ಸಣ್ಣ ಉಂಗುರ, 15 ಸಾವಿರ ರೂ. ಬೆಲೆಬಾಳುವ ಬೆಳ್ಳಿಯ ಆಭರಣಗಳು ಹಾಗೂ 50 ಸಾವಿರ ರೂ. ನಗದು ಹೀಗೆ ಒಟ್ಟೂ 2,30,000 ರೂ. ಬೆಲೆಬಾಳುವ ಬಂಗಾರ ಹಾಗೂ ನಗದನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿಶುನಾಳದಿಂದ ಗಾಂಜಾ ತಂದು ಮಾರುತ್ತಿದ್ದ ಆರೋಪಿ: 18 ಸಾವಿರ ರೂ. ಮೌಲ್ಯದ ಗಾಂಜಾ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ದೋಭಿ ಘಾಟ್‌ ಬಳಿಯ ಸಾರ್ವಜನಿಕ ರಸ್ತೆಯ ಮೇಲೆ ಅನಧಿಕೃತವಾಗಿ ಸ್ವಂತ ಲಾಭಕ್ಕೋಸ್ಕರ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗದಗ ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿತನಾದ ಹುಡ್ಕೋ ಕಾಲನಿ ಅಂಬಾ ಭವಾನಿ ದೇವಸ್ಥಾನ ಬಳಿಯ ನಿವಾಸಿ ಶ್ರೀಧರ ಯಂಕೂಸಾ ಭಾಂಡಗೆ ಈತನು ಮಾರ್ಚ್‌ 17ರಂದು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಶಿಶುನಾಳದಿಂದ ತಂದ 18 ಸಾವಿರ ರೂ. ಬೆಲೆಬಾಳುವ 180 ಗ್ರಾಂ. ತೂಕದ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಮಯದಲ್ಲಿ ಗದಗ ಶಹರ ಪೊಲೀಸ್‌ ಠಾಣೆಯ ಪಿಎಸ್‌ಐ ಎಸ್.ಸಿ. ಗುರುಭೆಟ್ಟಿ ಇವರು ದಾಳಿ ನಡೆಸಿ ಹಿಡಿದಿದ್ದಾರೆ.

ಕಲಂ20(ಬಿ) ಎನ್‌ಡಿಪಿಎಸ್‌ ಕಾಯ್ದೆ-1985ರ ಪ್ರಕಾರ ಸರಕಾರದ ಪರವಾಗಿ ನೀಡಿದ್ದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸೂಕ್ತ ದಾಖಲೆ ನೀಡದ ವ್ಯಾಪಾರಿಗಳು….ಕೋಟ್ಯಾಂತರ ರೂ. ಬೆಲೆಬಾಳುವ ಬಂಗಾರದ ಆಭರಣಗಳೊಂದಿಗೆ ಮುಂಬೈನ ಇಬ್ಬರು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋಟ್ಯಂತರ ರೂ. ಬೆಲೆಬಾಳುವ ಆಭರಣಗಳೊಂದಿಗೆ ಅನುಮಾನಾಸ್ಪದವಾಗಿ ನಗರದ ಅಂಗಡಿಯೊಂದರ ಎದುರು ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ಗದಗ ಶಹರ ಪೊಲೀಸರು ಆಭರಣಗಳೊಂದಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಾರ್ಚ್‌ 15, ಬುಧವಾರ ಸಂಜೆ 4.10ರ ಸಮಯಕ್ಕೆ ನಗರದ ಟಾಂಗಾಕೂಟ್‌ ಬಳಿಯಿರುವ ಶ್ರೀ ಸಾರಿ ಸೆಂಟರ್‌ ಎದುರಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 33 ವರ್ಷದ ಮುಂಬೈ-ಮಜಗಾಂವ್‌ನ ಅಭಿಷೇಕ ರಾಮಣಲಾಲ ಜೈನ್‌ ಹಾಗೂ 27 ವರ್ಷದ ಮುಂಬೈ-ವಿರಾರದ ಮಾಹೀಪಾಲ ಹಿಮ್ಮತಲಾಲ ಜೈನ್‌ ಇವರಿಬ್ಬರೂ 4 ಕೆ.ಜಿ. 46 ಗ್ರಾಂ ತೂಕದ 1,71,65,100 ರೂ. ಬೆಲೆಬಾಳುವ ಬಂಗಾರದ ಆಭರಣಗಳೊಂದಿಗೆ ಸುಳಿದಾಡುತ್ತಿದ್ದರು.

ಅನುಮಾನಗೊಂಡ ಶಹರ ಠಾಣೆಯ ಪಿಎಸ್ಐ ಎಸ್.ಬಿ.ಸಿಂಧೆ ಈ ಇಬ್ಬರು ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಬಂಗಾರದ ವ್ಯಾಪಾರಿಗಳೆಂದು ತಿಳಿದರೂ, ತಮ್ಮ ಬಳಿಯಿರುವ ಬಂಗಾರದ ಆಭರಣಗಳ ಬಗ್ಗೆ ಸೂಕ್ತ ಉತ್ತರ ನೀಡದೇ, ರಿಸಿಪ್ಟ್/ಬಿಲ್‌ಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಸದರಿ ಆಭರಣಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿ ಸಂಪಾದಿಸಿ ತಂದಿರಬಹುದು ಎಂಬ ಅನುಮಾನದ ಮೇಲೆ ಎನ್‌.ಸಿ ನಂ. 06/2023 ಕಲಂ. 98 ಕೆಪಿ ಕಾಯ್ದೆಯ ಪ್ರರಕಾರ ಸರ್ಕಾರಿ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಬೈಕ್‌ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಗ್ರಾಮೀಣ ಕಾರ್ಯಕರ್ತರ ಬೈಕ್‌ಗಳಿಗೆ ಉಚಿತ ಪೆಟ್ರೋಲ್!?

ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಕಾರ್ಯಕರ್ತರು…….

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಪಾರ್ವತಿ ಪೆಟ್ರೋಲ್‌ ಬಂಕ್‌ನಲ್ಲಿ ನೂರಾರು ಬೈಕ್‌ಗಳು ಪೆಟ್ರೋಲ್‌ ಹಾಕಿಸಿಕೊಳ್ಳಲು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದವು. ಇದೇನು, ರಾತ್ರೋರಾತ್ರಿ ಪೆಟ್ರೋಲ್‌ ಬೆಲೆಯಲ್ಲಿ ಏರಿಕೆಯಾಗಲಿರುವ ಮುನ್ಸೂಚನೆಯಾ ಅಂದುಕೊಳ್ಳುವಂತಿಲ್ಲ!

ಗದಗ ನಗರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯ ಬೈಕ್ ರ‌್ಯಾಲಿಯಲ್ಲಿ ಭಾಗಿಯಾದ ಕಾರ್ಯಕರ್ತರ ಬೈಕ್‌ಗಳಿಗೆ ಉಚಿತ ಪೆಟ್ರೋಲ್ ಹಾಕಿಸುವ ಆಫರ್‌ ನೀಡಲಾಗಿತ್ತು, ಈ ಸಂಬಂಧ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಪಾರ್ವತಿ ಪೆಟ್ರೋಲಿಂನಲ್ಲಿ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿತ್ತು.

https://youtu.be/2HTNBDxb_lk

ಕಾರ್ಯಕತರು ತಮ್ಮ ಬೈಕ್‌ಗಳಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಪಾಳಿ ಹಿಡಿದು ನಿಂತಿದ್ದರು.
ಸ್ಪ್ಲೆಂಡರ್‌ನಂಥಹ 100 ಸಿಸಿ ಬೈಕ್‌ಗಳಿಗೆ 100 ರೂ, ಪಲ್ಸರ್ ಇತ್ಯಾದಿ ಬೈಕ್‌ಗಳಿಗೆ 200 ರೂ. ಪೆಟ್ರೋಲ್ ತುಂಬಿಸುವ ಆಫರ್‌ ನೀಡಲಾಗಿದ್ದು, ಗ್ರಾಮೀಣ ಭಾಗದ ಕಾರ್ಯಕರ್ತರು ಈ ಮೊದಲೇ ತಮಗೆ ನೀಡಲಾದ ಚೀಟಿಯನ್ನು ಹಿಡಿದು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.

ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಭಾಗಿಯಾಗಲಿರುವ ಈ ಸಮಾವೇಶದ ಬೈಕ್‌ ರ‌್ಯಾಲಿಯಲ್ಲಿ ಭಾಗಿಯಾಗಲು ಕಾರ್ಯಕರ್ತರು ಹುಮ್ಮಸ್ಸಿನಿಂದ ಸಿದ್ಧವಾಗಿದ್ದು ಕಂಡುಬಂದಿತು.

ಅಂಚೆ ಕಛೇರಿಯಲ್ಲಿ ಪ್ರತ್ಯಕ್ಷವಾದ ಅಪರೂಪದ ಅತಿಥಿ! 30 ವರ್ಷಗಳ ನಂತರ ಮತ್ತೆ ನೋಡಿ ಅಚ್ಚರಿಗೊಂಡ ಉರಗತಜ್ಞ ಸ್ನೇಕ್‌ ಬುಡ್ಡಾ…

0

ವಿಜಯಸಾಕ್ಷಿ ಸುದ್ದಿ, ನರಗುಂದ

ಅಂದು ನರಗುಂದದ ಅಂಚೆ ಕಚೇರಿಯಲ್ಲಿ ಎಂದಿಗಿಂತ ಹೆಚ್ಚು ಗಡಿಬಿಡಿಯಿತ್ತು. ಸಾಮಾನ್ಯವೇ ಅಲ್ಲವಾ ಅನ್ನಿಸಬಹುದು. ಆದರೆ, ಗಡಿಬಿಡಿಗೆ ಕಾರಣವಾಗಿದ್ದು ಕೆಸಲದೊತ್ತಡವಲ್ಲ, ಕಚೇರಿಯಲ್ಲಿ ಕಾಣಿಸಿಕೊಂಡ ಒಂದು ಹಾವು!

ಅಪರೂಪದ ಈ ಹಾವು ಅದು ಹೇಗೋ ಅಂಚೆ ಕಚೇರಿಯಲ್ಲಿ ಸೇರಿಕೊಂಡಿತ್ತು. ಏನು ಮಾಡಬೇಕೆಂದು ದಿಕ್ಕು ತೋಚದ ಕಚೇರಿಯ ಸಿಬ್ಬಂದಿಗಳು, ಹಾಗೂ ಹೀಗೂ ಆ ಹಾವಿನ ಮೇಲೆ ಪ್ಲಾಸ್ಟಿಕ್‌ ಬುಟ್ಟಿಯೊಂದನ್ನು ಮುಚ್ಚಿಟ್ಟು, ಉರಗತಜ್ಞ ಸ್ನೇಕ್‌ ಬುಡ್ಡಾರನ್ನು ಫೋನ್‌ ಮಾಡಿ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಸ್ನೇಕ್‌ ಬುಡ್ಡಾ ಕೂಡ ಈ ಅಪರೂಪದ ಹಾವನ್ನು ಆ ಸ್ಥಳದಲ್ಲಿ ಕಂಡು ಚಕಿತರಾಗಿದ್ದರು!

ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಉತ್ತರ ಕನ್ನಡ ಭಾಗಗಳಲ್ಲಷ್ಟೇ ಕಂಡುಬರುವ ಇಂಡಿಯನ್‌ ಕೊರೊಲ್‌ ಸ್ನೇಕ್‌ ಎಂದು ಹೆಸರಿಸುವ ಈ ಹಾವು ಹೆಚ್ಚೆಂದರೆ 20-21 ಇಂಚ್‌ಗಳಷ್ಟು ಮಾತ್ರ ಬೆಳೆಯುತ್ತದೆ. ಮೈಯ ಮೇಲ್ಭಾಗ ಕಂದು ಬಣ್ಣವಿದ್ದು, ಅಡಿಭಾಗದಲ್ಲಿ ಕಿತ್ತಳೆ ಬಣ್ಣವಿರುತ್ತದೆ.

ತಲೆ ಹಾಗೂ ಬಾಲದ ಭಾಗ ಕಪ್ಪಾಗಿರುತ್ತದೆ. ನಾಗರ ಹಾವಿನಷ್ಟೇ ವಿಷಕಾರಿಯಾಗಿರುವ ಈ ಹಾವು ನ್ಯುರೋ ಟಾಕ್ಸಿನ್‌ ವಿಷವನ್ನೇ ಹೊಂದಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಹಾವಾಗಿದೆ. ಇದರಲ್ಲೇ ಇನ್ನೊಂದು ವಿಷಕಾರಿಯಲ್ಲದ ಹಾವೂ ಇದ್ದು, ಎರಡೂ ಒಂದೇ ರೀತಿ ಕಾಣಿಸುತ್ತವೆ. ಮಳೆ ಹಾತೆ, ಗೆದ್ದಲು ಹುಳಗಳು ಈ ಹಾವಿನ ಪ್ರಮುಖ ಆಹಾರವಾಗಿದೆ ಎಂದು ವಿವರಿಸಿದ ಸ್ನೇಕ್‌ ಬುಡ್ಡಾ, ಸುಮಾರು 30 ವರ್ಷಗಳ ನಂತರ ಮತ್ತೆ ಈ ಹಾವನ್ನು ರಕ್ಷಿಸುತ್ತಿದ್ದೇನೆ, ಅಷ್ಟು ಅಪರೂಪದ ಹಾವು ಇದಾಗಿದೆ ಎಂದು ವಿವರಣೆ ನೀಡಿದರು.

ಕಡಲ ಹಾವು/ಹವಳದ ಹಾವು ಎಂದೂ ಕರೆಯಲ್ಪಡುವ ಈ ಹಾವು ನೆರೆ ರಾಜ್ಯಗಳಿಂದ ಬೀಜ, ಗೊಬ್ಬರಗಳನ್ನು ತರುವ ಲಾರಿಗಳಲ್ಲಿ ಸೇರಿ ಇಲ್ಲಿ ತಲುಪಿರಬಹುದು ಎಂದು ಅಭಿಪ್ರಾಯಪಟ್ಟ ಸ್ನೇಕ್‌ ಬುಡ್ಡಾ ಹಾವನ್ನು ರಕ್ಷಿಸಿ, ಸುರಕ್ಷಿತ ಜಾಗಕ್ಕೆ ಬಿಟ್ಟುಬಂದಿದ್ದಾರೆ.

ಅದು ವಿಜಯ ಸಂಕಲ್ಪ ಯಾತ್ರೆ ಅಲ್ಲ, ಬಿಜೆಪಿಯ ಸೋಲಿನ ಯಾತ್ರೆ; ಸೈಯದ್ ಖಾಲಿದ್ ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಗೆ ಸರಿಯಾದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೀಡಲು ಆಗದ ಬಿಜೆಪಿ ಸರ್ಕಾರ ಈಗ ಅದ್ಯಾವ ಮುಖವಿಟ್ಟುಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಯುವ ಮುಖಂಡ ಸೈಯದ್ ಖಾಲಿದ್ ಕೊಪ್ಪಳ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕೊಪ್ಪಳ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಅವರು ವರ್ಷ ಪೂರ್ತಿ ಜನರ ಸಮಸ್ಯೆಯನ್ನು ಆಲಿಸಲಿಲ್ಲ. ರೈತರ, ಕಾರ್ಮಿಕರು ಸಹ ಸಚಿವ ಪಾಟೀಲ್ ಅವರನ್ನು ಭೇಟಿ ಮಾಡಲು ಪರದಾಡುವಂತಾಗಿದೆ ಎಂದು ಖಾಲಿದ್ ಕೊಪ್ಪಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದಿಂದ ಗದಗ ಜಿಲ್ಲೆಗೆ ಶೂನ್ಯ ಕೊಡುಗೆ ಸಿಕ್ಕಿದ್ದು, ಈಗ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆ ಅದೊಂದು ಸೋಲಿನ ಯಾತ್ರೆ ಆಗಲಿದೆ ಎಂದು ಸೈಯದ್ ಖಾಲಿದ್ ಕೊಪ್ಪಳ ಟೀಕಿಸಿದ್ದಾರೆ.

ಪ್ರೇಮ ಪ್ರಕರಣ; ಮಾನಕ್ಕಂಜಿ ನೇಣಿಗೆ ಶರಣಾದ ರೈಲ್ವೆ ಉದ್ಯೋಗಿ

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವತಿ……

ವಿಜಯಸಾಕ್ಷಿ ಸುದ್ದಿ, ಗದಗ

ಸಹೋದ್ಯೋಗಿ ಒಬ್ಬನನ್ನು ಪ್ರೀತಿಸುತ್ತಿದ್ದ ರೈಲ್ವೆ ನೌಕರಳೊಬ್ಬ ಮಾನಕ್ಕಂಜಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಜರುಗಿದೆ.

ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ನಿವಾಸಿ 26 ವರ್ಷದ ಪಾರ್ವತಿ ಎಂಬ ಯುವತಿ ಬೆಡ್ ರೂಂ ನಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದ್ದು, ಅದರಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನ ಹೆಸರು, ಬರೆದು ನಾನು ಆತನನ್ನು ಪ್ರೀತಿ ಮಾಡುತ್ತಿದ್ದೆ, ಅದರ ಫಲವಾಗಿ
ನಾನು ಗರ್ಭಿಣಿಯಾಗಿದ್ದೇನೆ, ಇದರಿಂದಾಗಿ ನಮ್ಮ ಮನೆಯ ಮರ್ಯಾದೆ ಹೋಗಬಾರದು ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರೈಲ್ವೆ ಟ್ರ್ಯಾಕ್ ಮೆಂಟೇನರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ವಿಭಾಗದಲ್ಲಿ ಹಾವೇರಿ ಮೂಲದ ಯುವಕ ಹಾಗೂ ಪಾರ್ವತಿ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಿಇಎನ್ ಪೊಲೀಸರ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಗೋವಿಂದಪ್ಪ ಬಂಧನ……

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಒಣಗಿದ ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಯೊಬ್ಬನನ್ನು ಗದಗ ಸಿಇಎನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿಹೊಸೂರು ಗ್ರಾಮದ ಬೆಳ್ಳಟ್ಟಿ-ಹೊಳೆ ಇಟಗಿ ರಸ್ತೆಯ ನೀರಿನ ಟ್ಯಾಂಕ್‌ ಬಳಿ ಆರೋಪಿತನಾದ ಶಿರಹಟ್ಟಿ ವಡವಿಹೊಸೂರ ಗ್ರಾಮದ ಗೋವಿಂದಪ್ಪ ಕೆಂಚಪ್ಪ ತಾಮ್ರಗುಂಡಿ ಎಂಬಾತ 1217 ಗ್ರಾಂ. ತೂಕದ ಎಲೆ, ಹೂ, ಬೀಜ, ಕಾಂಡವೂ ಒಳಗೊಂಡಂತೆ ಒಣಗಿದ ಗಾಂಜಾವನ್ನು ಗೊಬ್ಬರದ ಚೀಲದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಆತನಿಂದ 60,850 ರೂ. ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.