Home Blog Page 3286

ಸಿಇಎನ್ ಪೊಲೀಸರ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಗೋವಿಂದಪ್ಪ ಬಂಧನ……

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಒಣಗಿದ ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಯೊಬ್ಬನನ್ನು ಗದಗ ಸಿಇಎನ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿಹೊಸೂರು ಗ್ರಾಮದ ಬೆಳ್ಳಟ್ಟಿ-ಹೊಳೆ ಇಟಗಿ ರಸ್ತೆಯ ನೀರಿನ ಟ್ಯಾಂಕ್‌ ಬಳಿ ಆರೋಪಿತನಾದ ಶಿರಹಟ್ಟಿ ವಡವಿಹೊಸೂರ ಗ್ರಾಮದ ಗೋವಿಂದಪ್ಪ ಕೆಂಚಪ್ಪ ತಾಮ್ರಗುಂಡಿ ಎಂಬಾತ 1217 ಗ್ರಾಂ. ತೂಕದ ಎಲೆ, ಹೂ, ಬೀಜ, ಕಾಂಡವೂ ಒಳಗೊಂಡಂತೆ ಒಣಗಿದ ಗಾಂಜಾವನ್ನು ಗೊಬ್ಬರದ ಚೀಲದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಆತನಿಂದ 60,850 ರೂ. ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಸೋಮವಾರ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ

0

ಸಿದ್ಧತೆಗಳ ಪರೀಶಿಲನೆ ನಡೆಸಿದ ಶಾಸಕ ಕಳಕಪ್ಪ ಬಂಡಿ, ಡಿಸಿ ವೈಶಾಲಿ. ಎಂ.ಎಲ್

ವಿಜಯಸಾಕ್ಷಿ ಸುದ್ದಿ, ಗದಗ/ರೋಣ

ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನವು ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ರೋಣ‌ ಹೊರವಲಯದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳನ್ನು ಶಾಸಕರಾದ ಕಳಕಪ್ಪ ಬಂಡಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ಪರಿಶೀಲಿಸಿದರು.

ಕಾರ್ಯಕ್ರಮದ ಮುಖ್ಯ ವೇದಿಕೆ, ಫಲಾನುಭವಿ, ಸಾರ್ವಜನಿಕರ ಆಸನ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ಸೇರಿದಂತೆ ಸಮ್ಮೇಳನಕ್ಕೆ ಆಗಮಿಸುವ ಫಲಾನುಭವಿ ಹಾಗೂ ಸಾರ್ವಜನಿಕರಿಗೆ ಮಾಡಲಾದ ಊಟದ ವ್ಯವಸ್ಥೆ ಸಿದ್ಧತೆಯನ್ನು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಯಾವುದೇ ಅನಾನೂಕುಲಗಳಾಗದಂತೆ ನಿಗಾವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಅಪರ್ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ತಹಸೀಲ್ದಾರ್ ವೀಣಾ ಉಂಕಿ, ಆಹಾರ ಇಲಾಖೆ ಉಪನಿರ್ದೆಶಕ ಗಂಗಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸೋಮವಾರದಂದು ಜರುಗಲಿರುವ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೋಣ ಮತ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಜೊತೆಗೆ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಹಾಗೂ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಜರುಗಲಿದೆ.

ಆತ್ಮಹತ್ಯೆಗೆ ಪ್ರಚೋದನೆ; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಜಮೀನು ವಿಷಯವಾಗಿ ಕಿರುಕುಳ ಆರೋಪ……

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಜಮೀನಿನ ವಿಷಯವಾಗಿ ನಡೆಯುತ್ತಿದ್ದ ಸಣ್ಣ-ಪುಟ್ಟ ಕಿರಿಕಿರಿಯನ್ನೇ ಮನಸ್ಸಿಗೆ ಹಚ್ಚಿಕೊಂಡು, ಊರಿಗೆ ಹೋಗುತ್ತೇನೆಂದು ಹೇಳಿ ತನ್ನ ಪತಿ ಹೊಲದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಪತಿಯ ಮರಣಕ್ಕೆ ಮೂವರು ವ್ಯಕ್ತಿಗಳು ನೀಡಿದ ಕಿರುಕುಳ, ಪ್ರಚೋದನೆಯೇ ಕಾರಣವಾಗಿದೆ ಎಂದು ಮೃತರ ಪತ್ನಿ ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಯ ವಿವರ: ಠಾಣೆಯಲ್ಲಿ ದೂರು ನೀಡಿರುವ ಮಹಿಳೆ ಮಾಚೇನಳ್ಳಿ, ಶಿರಹಟ್ಟಿಯ ಚಂದನಾ ಶರಣಪ್ಪ ಮರಿಗೌಡ್ರ ಹಾಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಅಣಜಿಗೇರಿಯಲ್ಲಿ ವಾಸವಿದ್ದರು. ಇವರ ಅಜ್ಜನ ಹೆಸರಿನಲ್ಲಿ ಮಾಚೇನಳ್ಳಿ ಹದ್ದಿಯಲ್ಲಿ 3 ಎಕರೆ 1 ಗುಂಟೆ ಹಾಗೂ ನವೇ ಭಾವನೂರು ಹದ್ದಿಯಲ್ಲಿ ಮೃತ ವ್ಯಕ್ತಿ ಮೃತ ಶರಣಪ್ಪ ಶೇಖಪ್ಪ ಮರಿಗೌಡ್ರ ಇವರ ಹೆಸರಿನಲ್ಲಿ 3 ಎಕರೆ 16 ಗುಂಟೆ ಜಮೀನು ಇತ್ತು. ಈ ಹೊಲದ ವಿಷಯವಾಗಿ ಶರಣಪ್ಪರ ಅತ್ತೆಯ ಮಕ್ಕಳು, ತಮಗೂ ಪಾಲು ಬರುತ್ತದೆ ಎಂದು ಲಕ್ಷ್ಮೇಶ್ವರ ಜೆಎಂಎಫ್‌ಸಿಯಲ್ಲಿ ದಾವೆ ಹೂಡಿದ್ದರು.

ಈ ಸಂಬಂಧ ಶರಣಪ್ಪ ಆಗಾಗ ತಮ್ಮ ಹೊಲಕ್ಕೆ ಹೋದಾಗ ಅವರ ಅತ್ತೆಯ ಮಕ್ಕಳಾದ ಶಿರಹಟ್ಟಿ ತಾಲೂಕು ರಣತೂರಿನ ನಾಗಪ್ಪ, ಚನ್ನಪ್ಪ ಹಾಗೂ ಈಶಪ್ಪ ಸಣ್ಣ-ಪುಟ್ಟ ತಕರಾರು ಮಾಡುತ್ತಿದ್ದಾರೆ ಎಂದು ಹೇಳಿ ನೊಂದುಕೊಂಡಿದ್ದರು.

ಫಿರ್ಯಾದಿಯ ಪತಿ ಶರಣಪ್ಪ ವಾರದ ಹಿಂದೆ ದಾವಣಗೆರೆಯಿಂದ ತಮ್ಮೂರು ಮಾಚೇನಳ್ಳಿಗೆ ಹೊಲದ ಕೆಲಸಕ್ಕೆಂದು ಬಂದಿದ್ದರು. ಮಾರ್ಚ್.7ರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಊರಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು, ಮಾರ್ಚ್‌ 9ರ ಬೆಳಿಗ್ಗೆ 7.30ರ ನಡುವಿನ ಅವಧಿಯಲ್ಲಿ ತಮ್ಮ ಹೊಲದಲ್ಲಿ ಜಾಲಿ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆ ಸಮಯದಲ್ಲಿ ಮೃತನ ಕಿಸೆಯಲ್ಲಿ ʻನನ್ನ ಸಾವಿಗೆ ಅತ್ತೆಯ ಮಕ್ಕಳಾದ ರಣತೂರ ಗ್ರಾಮದ ನಾಗಪ್ಪ, ಚನ್ನಪ್ಪ, ಈಶಪ್ಪ ಇವರೇ ಕಾರಣʼ ಎಂದು ತನ್ನ ಕೈಯಾರೆ ಬರೆದ ಚೀಟಿ ಸಿಕ್ಕಿದ್ದು, ತನ್ನ ಪತಿಯ ಮರಣಕ್ಕೆ ಈ ಮೂವರು ಆರೋಪಿಗಳೇ ಕಾರಣರಾಗಿದ್ದಾರೆ ಎಂದು ಚಂದನಾ ಮರಿಗೌಡ್ರ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಶಿರಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶತಾಯುಷಿ ಲಿಂ. ಈರವ್ವ ಹಿರೇಮಠ ಕುಟಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ಮುನೇನಕೊಪ್ಪ

0

ನವಲಗುಂದ: ನವಲಗುಂದ ಪಟ್ಟಣದ ಜಂಗಮ ಸಮಾಜದ ಹಿರಿಯ ಜೀವಿ ಶತಾಯುಷಿ ಲಿಂ. ಶ್ರೀಮತಿ ಈರವ್ವ ಕೋಂ ಡಾ. ಬಸಯ್ಯ ಹಿರೇಮಠ ಇವರು ದಿನಾಂಕ 9/03/2023 ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಕಾರಣ ಇಂದು ಶನಿವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಮೃತರಾದ ಈರವ್ವ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು‌.

ಶತಾಯುಷಿಯನ್ನು ಕಳೆದುಕೊಂಡು ತೀವ್ರ ದುಃಖಿತರಾಗಿದ್ದ ಮೃತರ ಪುತ್ರರಲ್ಲಿ ಒಬ್ಬರಾದ ಪತ್ರಕರ್ತ ಚರಂತಯ್ಯ ಹಿರೇಮಠ ಅವರನ್ನು ಸಮಾಧಾನ ಪಡಿಸಿ ಭಗವಂತ ತಮ್ಮ ತಾಯಿಯವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಹಿರಿಯ ಪುತ್ರರಾದ ಡಾ. ಶೇಖರಯ್ಯ ಹಿರೇಮಠ, ಹಿರಿಯ ಪುತ್ರಿ ನಿವೃತ್ತ ಪ್ರಾಚಾರ್ಯರಾದ ಸರೋಜ ಹಿರೇಮಠ, ಓಣಿಯ ಮುಖಂಡರಾದ ಸಿದ್ಧಲಿಂಗಯ್ಯ ಸುಬೇದಾರಮಠ, ಶಿವು ಗರಗದಮಠ, ಈರಯ್ಯ ಗರಗದಮಠ, ಬಸು ಕೇರಿಮಠ, ರಾಜು ಭಾಂಡಗೆ, ತಾಲೂಕ ಬಿಜೆಪಿ ಅಧ್ಯಕ್ಷ ಎಸ್ ಬಿ ದಾನಪ್ಪಗೌಡರ, ಮುಖಂಡರಾದ ಶರಣಪ್ಪ ಹಕ್ಕರಕಿ, ನಾಗೇಶ ಬೆಂಡಿಗೇರಿ, ಬಸವರಾಜ ಕಾತರಕಿ ಇತರರು ಉಪಸ್ಥಿತರಿದ್ದರು.

ಶಾರ್ಟ್ ಸರ್ಕ್ಯೂಟ್; ಸುಟ್ಟು ಭಸ್ಮವಾದ ಬೆಳೆ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಗೋಧಿ (ಸದಕದ) ಬೆಳೆ ಸುಟ್ಟು ಭಸ್ಮವಾದ ಘಟನೆ ಜರುಗಿದೆ.

ತಾಲೂಕಿನ ರೆಡ್ಡೇರನಾಗನೂರ ಗ್ರಾಮದ ರೈತರಾದ ಮುದಿಗೌಡ ಶಂಕರಗೌಡ್ರ ಎಂಬುವರ ಜಮೀನಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಿಡಿಗಳು ಗೋದಿ ಬೆಳೆಯಲ್ಲಿ ಬಿದ್ದಿರುವ ಕಾರಣ 2.5 ಎಕರೆ ಗೋಧಿ ಜಾತಿಯ ಸದಕದ ಬೆಳೆಯು ನಾಶವಾಗಿದೆ.

ಈ ಕುರಿತು ಮಾತನಾಡಿರುವ ಜಮೀನಿನ ಅಕ್ಕಪಕ್ಕದ ರೈತರು, ಹೆಚ್ಚಿಗೆ ವೋಲ್ಟೇಜ್ ಬಂದಿರುವ ಕಾರಣ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿಯ ಕಿಡಿಗಳಿಂದ ಸದಕದ ಬೆಳೆ ನಾಶವಾಗಿದೆ ಎಂದು ಆರೋಪಿಸಿದರು.

ಸಾವಿರಾರು ರೂಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ, ಇನ್ನೇನು ಕೈಗೆ ಬಂದ ತುತ್ತು, ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ವಿಧಿ ಪೂರ್ತಿ ಬೆಳೆಯನ್ನ ನುಂಗಿ ಹಾಕಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದು, ಸರಕಾರದಿಂದ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ; ಶಾಲೆಯ ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕಾರ್ಯದರ್ಶಿ

ವಿಜಯಸಾಕ್ಷಿ ಸುದ್ದಿ, ಹೂವಿನ ಹಡಗಲಿ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಖಾಸಗಿ ಶಾಲೆಯ ಕಾರ್ಯದರ್ಶಿಯೊಬ್ಬರು ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೂವಿನಹಡಗಲಿ ಪಟ್ಟಣದಲ್ಲಿ ನಡೆದಿದೆ.

ನ್ಯಾಶನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿಯಾಗಿದ್ದ ಬಸಮ್ಮ ಬಸೆಟ್ಟಿ ಅಲಿಯಾಸ್ ರೂಪ ಗಂಡ ಅರ್ಜುನ್ ಪರಶೆಟ್ಟಿ (34) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಮಹಿಳೆ.

10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್
ಪರಶೆಟ್ಟಿ ಮದುವೆಯಾಗಿದ್ದರು. ಅರ್ಜುನ್ ಅವರು ಕೂಡ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೂ ಅರ್ಜುನ್ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ ದುಷ್ಕರ್ಮಿಗಳಿಂದ ಬ್ಲ್ಯಾಕ್ ಮೇಲ್?; ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ಪೊಲೀಸ್

ಮದುವೆ ಸಮಯದಲ್ಲಿ ಎಂಟು ತೊಲೆ ಬಂಗಾರ, ಎರಡು ಲಕ್ಷ ರೂಪಾಯಿ ನಗದು ಸೇರಿದಂತೆ ಮದುವೆ ಖರ್ಚಿಗೆ ಎಂಟು ಲಕ್ಷ ರೂ. ಹಣ ಕೊಟ್ಟು ಮದುವೆ ಮಾಡಲಾಗಿತ್ತು.

ಆದರೂ ಪದೇ ಪದೇ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆಗೆ ಗಂಡ ಅರ್ಜುನ್ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ  ಪೊಲೀಸ್ ಪೇದೆ ಆತ್ಮಹತ್ಯೆ ಪ್ರಕರಣ; ಇಬ್ಬರು ಪತ್ರಕರ್ತರು, ಎಎಸ್ಐ, ನಾಲ್ವರು ಪೊಲೀಸರು ಸೇರಿ 9 ಜನರ ಮೇಲೆ ಎಫ್‌ಐಆರ್

ಆದ್ರೆ, ರವಿವಾರ ಪರೀಕ್ಷೆಯ ಕೆಲಸವಿದೆ ಎಂದು ಹೇಳಿ ಬಸಮ್ಮ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಕುರಿತು ಮೃತಳ ತಾಯಿ ಪುಷ್ಪಾವತಿ ಬಶೆಟ್ಟಿ ಗಂಡ ಲೇಟ್ ಚಂದ್ರ ಮೌಳಿ ಬಶೆಟ್ಟಿ ಎಂಬುವರು ದೂರು ಕೊಟ್ಟ ಹಿನ್ನೆಲೆಯಲ್ಲಿ ಅರ್ಜುನ್ ಪರಶೆಟ್ಟಿ, ಅತ್ತೆ, ನಾದಿನಿ ಸೇರಿದಂತೆ 6 ಜನರ ವಿರುದ್ಧ ಹೂವಿನಹಡಗಲಿ ಠಾಣೆಯಲ್ಲಿ ಕೇಸ್ ನಂ29/2023 ಕಲಂ 498(A) 504, 306 R/w 149 ಐಪಿಸಿ 3,4 ಡಿಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ಬಸಮ್ಮ ಆರು ಜನರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು, ಡೆತ್​ ನೋಟ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

ಮನೆಯ ಬೀಗ ಮುರಿದು 1.35 ಲಕ್ಷ ರೂ. ಮೌಲ್ಯದ ಸೊತ್ತು ಲೂಟಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು, ಮನೆಯೊಳಗೆ ಪ್ರವೇಶಿಸಿ, ಅಲ್ಮೆರಾದಲ್ಲಿ ಇರಿಸಿದ್ದ ಬಂಗಾರದ ಆಭರಣ, ನಗದು ಹಣವನ್ನೂ ಸೇರಿ ಕಳ್ಳತನ ಮಾಡಿರುವ ಕುರಿತು ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದಿ.26.2.2023ರ ಮಧ್ಯಾಹ್ನ 3ಗಂಟೆಯಿಂದ ದಿ. 28.2.2023ರ ಸಾಯಂಕಾಲ 6 ಗಂಟೆಯ ನಡುವಿನ ಸಮಯದಲ್ಲಿ ದೂರುದಾರ ದೇವಿಹಾಳ ಗ್ರಾಮದ ಯಲ್ಲಪ್ಪ ರಾಮಣ್ಣ ಬಡ್ನಿ ಇವರ ಮನೆಯ

ಮುಂಚಿಬಾಗಿಲಿನ ಚಿಲಕದ ಕೊಂಡಿ ಮುರಿದು, ಬಾಗಿಲು ತೆರೆದು ಒಳ ಪ್ರವೇಶಿಸಿದ ಕಳ್ಳರು, ಅಲ್ಮೆರಾದಲ್ಲಿ ಇಟ್ಟಿದ್ದ 10 ಗ್ರಾಂ. ತೂಕದ 40 ಸಾವಿರ ರೂ. ಬೆಲೆಬಾಳುವ ಒಂದು ಜೊತೆ ಬಂಗಾರದ ಝುಮಕಿ ಹಾಗೂ 500 ರೂ. ಮುಖಬೆಲೆಯ 95 ಸಾವಿರ ರೂ. ನಗದು ಸೇರಿ ಒಟ್ಟೂ 1.35 ಲಕ್ಷ ರೂ. ಮೌಲ್ಯದ ಸೊತ್ತು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಿರಹಟ್ಟಿ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫೆ.22ರಂದು ಮಾಜಿ ಶಾಸಕ ಎನ್. ಎಚ್. ಕೋನರಡ್ಡಿ ಅಭಿಮಾನಿಗಳಿಂದ ಜನ್ಮದಿನಾಚರಣೆ

ಅಭಿಮಾನಿಗಳಿಂದ ಅದ್ಧೂರಿ ಆಚರಣೆಗೆ ನಿರ್ಧಾರ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅಭಿಮಾನಿ ಬಳಗದ ವತಿಯಿಂದ ಫೆ.22 ರಂದು ಸಂಜೆ 6 ಗಂಟೆಗೆ ಪಟ್ಟಣದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಎನ್.ಎಚ್.ಕೋನರಡ್ಡಿಯವರ 60ನೇ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಪ್ರಭಾಕರ ಮೋಹಿತೆ ತಿಳಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದ, ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ  ಅವರ ಅಪಾರ ಅಭಿಮಾನಿಗಳ ಒತ್ತಾಸೆ ಮೇರೆಗೆ ಹುಟ್ಟು ಹಬ್ಬವನ್ನು ಆಚರಿಸಲಾಗುತ್ತಿದೆ.

2013 ರಿಂದ 2018 ರ ವರೆಗೆ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸುಮಾರು ರೂ.3300 ಕೋಟಿ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಿಂದ ತಂದು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ರೈತಪರ ಯಾವುದೇ ಹೋರಾಟ ಇದ್ದರು ಬೀದಿಗಿಳಿದು ಹೋರಾಟ ಮಾಡುವ ರೈತರ ಆಶಾಕಿರಣವಾಗಿದ್ದಾರೆ. ಸುಮಾರು 600 ಕಿ.ಮೀ ಗೂ ಅಧಿಕ ಚಕ್ಕಡಿ ರಸ್ತೆಗಳನ್ನು ನಿರ್ಮಾಣ ಮಾಡಿ ರೈತರ ಹೊಲಗಳಿಗೆ ಸುಗಮವಾಗಿ ಸಂಚಾರ ಮಾಡಲು ದಾರಿಮಾಡಿಕೊಟ್ಟು ರೈತರ ಬದುಕು ಹಸನಾಗಿಸಿದರು. ಅವರ ಹುಟ್ಟು ಹಬ್ಬವನ್ನು ಅಧ್ಧೂರಿಯಾಗಿ ಆಚರಿಸಲು ನಮ್ಮೆಲ್ಲರ ಕರ್ತವ್ಯವಾಗಿದೆ.

ಎನ್.ಎಚ್.ಕೋನರಡ್ಡಿಯವರು ಫೆ.22 ರಂದು ಸಂಜೆ 6 ಕ್ಕೆ ನವಲಗುಂದದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಏರ್ಪಡಿಸಿರುವ ಅದ್ಧೂರಿ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪಟ್ಟಣದ ಪ್ರಮುಖ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂದು ಪ್ರಭಾಕರ ಮೋಹಿತೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಮಾಜಿ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಸ್ಥಾಯಿ ಸಮಿತಿ ಚೇರಮನ್ ಸುರೇಶ ಮೇಟಿ, ಸದಸ್ಯರಾದ ಹುಸೇನಭಿ ಧಾರವಾಡ, ಮುಖಂಡರಾದ ಆನಂದ ಹವಳಕೋಡ, ಸಂತೋಷಗೌಡ ಪಾಟೀಲ, ರಾಜು ಹಳ್ಯಾಳ ಉಪಸ್ಥಿತರಿದ್ದರು.

ಪ್ರತ್ಯೇಕ ಬ್ಯಾಂಕ್‌ಗಳಲ್ಲಿ ಕಳ್ಳತನಕ್ಕೆ ಯತ್ನ

ಟಾರ್ಗೆಟ್ ಮಾಡಿದ್ರಾ ಕಳ್ಳರು…….?

ವಿಜಯಸಾಕ್ಷಿ ಸುದ್ದಿ, ಗದಗ/ಬೆಟಗೇರಿ

ಗದಗ ಶಹರ ಪೊಲೀಸ್‌ ಠಾಣೆ ಹಾಗೂ ಬೆಟಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಸ್ಥಳಗಳ ಬ್ಯಾಂಕ್‌ಗಳಲ್ಲಿ ಕಳ್ಳರು ಶೆಟರ್ಸ್‌ ಮುರಿದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಫೆ.18ರ ಸಂಜೆ 6.30ರಿಂದ ಫೆ.19ರ ಮುಂಜಾನೆ 9 ಗಂಟೆಯ ನಡುವಿನ ಸಮಯದಲ್ಲಿ ಗದಗ ಮುಳಗುಂದ ರಸ್ತೆಯಲ್ಲಿರುವ ಕೆವಿಜಿ ಬ್ಯಾಂಕ್‌ನ ಶೆಟರ್ಸ್‌ಗೆ ಹಾಕಿದ ಬೀಗಗಳನ್ನು ಹಾಗೂ ಅದರ ಪಕ್ಕದಲ್ಲಿರುವ ಶಿವಲಲಿತ ಎಂಟರ್‌ಪ್ರೈಸಸ್‌ ಅಂಗಡಿಯ ಬೀಗವನ್ನು ಯಾವುದೋ ವಸ್ತುವಿನಿಂದ ಮೀಟಿ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕೆವಿಜಿ ಬ್ಯಾಂಕ್‌ನ ವ್ಯವಸ್ಥಾಪಕಿ ವೈ.ಅಲಕ್ಯಾ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಇನ್ನೊಂದು ಪ್ರಕರಣ ಬೆಟಗೇರಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಫೆ.18ರ ರಾತ್ರಿ 10 ಗಂಟೆಯಿಂದ ಫೆ.19ರ ಮುಂಜಾನೆ 6 ಗಂಟೆಯ ನಡುವಿನ ಸಮಯದಲ್ಲಿ ನಡೆದಿದ್ದು, ಇಲ್ಲಿನ ಹೆಡ್‌ಪೋಸ್ಟ್‌ ಆಫೀಸ್‌ ರಸ್ತೆಯಲ್ಲಿರುವ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತ, ಗದಗ ಶಾಖೆಯ ಶೆಟರ್ಸ್‌ ಬೀಗವನ್ನು ಮೀಟಿ, ಬ್ಯಾಂಕಿನೊಳಗೆ ಹೋಗಿ, ಯಾವುದೋ ಕಬ್ಬಿಣದ ವಸ್ತುವಿನಿಂದ ಲಾಕರ್‌ ಮುರಿದು ಹಣವನ್ನು ಕಳ್ಳತನ ಮಾಡಲು ಪ್ರಯತ್ನಿಸಿರುವ ಬಗ್ಗೆ ಬ್ಯಾಂಕ್‌ ವ್ಯವಸ್ಥಾಪಕ ಸಂಗಮೇಶ ಕೂಡ್ಲೆಪ್ಪ ಅಡಗಟ್ಟಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಆನ್‌ಲೈನ್‌ ವಂಚನೆ: ಲಕ್ಷಾಂತರ ರೂ. ಹಣ ಕಳೆದುಕೊಂಡ ಎಲೆಕ್ಟ್ರಿಷಿಯನ್

ಸೈಬರ್ ಕಳ್ಳರ ಕೈ ಚಳಕ…..

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆಯ ಪ್ರಕರಣಗಳು ನಿತ್ಯವೂ ನಡೆಯುತ್ತಿದ್ದು, ಪೊಲೀಸ್‌ ಇಲಾಖೆ ಎಷ್ಟೇ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಂಡರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಂಥಹುದೇ ವಂಚನೆಗೆ ಒಳಗಾದ ಎಲೆಕ್ಟ್ರಿಷಿಯನ್ ಒಬ್ಬರು ತಮ್ಮ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡು ವಂಚನೆಗೊಳಗಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಇಲ್ಲಿನ ತಾಜ್‌ ನಗರದ ಚಾಂದ್‌ಮುಕ್ತಾರ್‌ ಮಹಮದ್‌ಗೌಸ್‌ ಅಬ್ಬಿಗೇರಿ ಎಂಬುವರು ವಂಚನೆಗೊಳಗಾದವರಾಗಿದ್ದಾರೆ. ಇವರ ಮೊಬೈಲ್‌ಗೆ 17.2.2023ರಂದು 9431725653 ಸಂಖ್ಯೆಯಿಂದ ʻDear customer your sbi YONO account will be suspended by today please update your pan card now visit the link…ʼ ಎಂಬ ಸಂದೇಶದೊಂದಿಗೆ ಲಿಂಕ್‌ ಬಂದಿತ್ತು.

ಫಿರ್ಯಾದಿಯು ಮೋಸದ ಅರಿವಿಲ್ಲದೇ ಲಿಂಕ್‌ ತೆರೆದು ಅದರಲ್ಲಿ ಕೇಳಿದ ಮಾಹಿತಿಯನ್ನು ತುಂಬಿದ್ದರು. ಸದರಿ ಮಾಹಿತಿಯನ್ನು ಬಳಸಿಕೊಂಡಿರುವ ಸೈಬರ್‌ ಕಳ್ಳರು ಅವರ ಖಾತೆಯಿಂದ ಹಂತಹಂತವಾಗಿ ಒಟ್ಟೂ 1,21,999 ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಗದಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.