Home Blog Page 35

ಹಣ ದುರ್ಬಳಕೆ ಆರೋಪ: ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಹಿಳಾ ಕಾರ್ಯದರ್ಶಿ!

ಚಿಕ್ಕಮಗಳೂರು: ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಹಿನ್ನೆಲೆ ಮನನೊಂದು ಮಹಿಳಾ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾದ ಘಟನೆ ತರೀಕೆರೆ ತಾಲೂಕಿನ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಉಷಾ (45) ಮೃತ ಮಹಿಳೆ. ಕಿರುಕುಳ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋ ಮಾಡಿ ಅವರು ನೇಣಿಗೆ ಶರಣಾಗಿದ್ದಾರೆ. ವಿಡಿಯೋದಲ್ಲಿ, ಲೆಕ್ಕಪತ್ರ ಪುಸ್ತಕ ಕಳೆದುಹೋಗಿರುವುದು ತನ್ನಿಂದಾದ ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ.

ಕಳೆದ 10 ವರ್ಷಗಳಿಂದ ಹಣ ದುರುಪಯೋಗ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ನಡೆದಿದ್ದ ಪಂಚಾಯತಿಯಲ್ಲೂ ಲೆಕ್ಕಪತ್ರ ಮಿಸ್ಸಿಂಗ್​​ ಆಗಿರೋದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು ಎನ್ನಲಾಗಿದೆ. 2010ರಲ್ಲಿ ಸ್ಥಾಪನೆಯಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಆರಂಭದಿಂದಲೂ ಉಷಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಹಳೆಯ ಲೆಕ್ಕಪತ್ರಗಳನ್ನು ಕೇಳಲು ಪ್ರಾರಂಭಿಸಿದ್ದು, ಈ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಮೃತಳ ಪತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿಯ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಉಷಾ ಎಲ್ಲಾ ಲೆಕ್ಕಪತ್ರಗಳನ್ನು ನೀಡಿದ್ದರೂ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋದಲ್ಲಿ 10 ಜನರ ಹೆಸರುಗಳನ್ನು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಹೆಚ್. ಮಲ್ಲೇನಹಳ್ಳಿ ಗ್ರಾಮದ 10 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದೇವಸ್ಥಾನ ಮಾಹಿತಿ ಮರೆಮಾಚಿದ ಅಧಿಕಾರಿಗೆ 1 ಲಕ್ಷ ರೂ. ದಂಡ!

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆಡಳಿತ ಮೊಕ್ತೇಸರ ಕೆ.ಪಿ. ಗೋಪಾಲಕೃಷ್ಣರಾವ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯ ಹಿನ್ನೆಲೆ ಕರ್ನಾಟಕ ಮಾಹಿತಿ ಆಯೋಗವು ನಾಲ್ಕು ಪ್ರಕರಣಗಳಲ್ಲಿ ಒಟ್ಟು ಒಂದು ಲಕ್ಷ ರೂ. ದಂಡ ವಿಧಿಸಿದೆ.

ಜೊತೆಗೆ ಅರ್ಜಿದಾರರಿಗೆ 16 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಅರ್ಜಿದಾರ ಸೋಮನಾಥ ನಾಯಕ್ ಅವರು ದೇವಾಲಯಕ್ಕೆ ಸಂಬಂಧಿಸಿದ ಮಾಹಿತಿ ಕೋರಿದ್ದರೂ, ಸಂಬಂಧಿತ ಅಧಿಕಾರಿ ವಿಚಾರಣೆಗಳಿಗೆ ಹಾಜರಾಗದೆ ಹಾಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರೆಂದು ತಿಳಿದುಬಂದಿದೆ. ಈ ದೇವಾಲಯವು ಮುಜುರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಸರ್ಕಾರದಿಂದ ವಾರ್ಷಿಕ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಗೊಂಡಿರುವುದರಿಂದ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು.

ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಪ್ರತಿ ಪ್ರಕರಣಕ್ಕೆ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ಎರಡು ಪ್ರಕರಣಗಳಲ್ಲಿ ತಲಾ 5 ಸಾವಿರ ರೂ. ಹಾಗೂ ಇನ್ನೆರಡು ಪ್ರಕರಣಗಳಲ್ಲಿ ತಲಾ 3 ಸಾವಿರ ರೂ. ಪರಿಹಾರ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ನಿರ್ದೇಶನ ನೀಡಿದ್ದಾರೆ.

ಇದೇ ವೇಳೆ, ದಂಡ ಮೊತ್ತವನ್ನು ಸಂಬಂಧಿತ ಅಧಿಕಾರಿಯ ವೇತನದಿಂದ ವಸೂಲಿ ಮಾಡಿ ಸರ್ಕಾರದ ಖಾತೆಗೆ ಜಮಾ ಮಾಡುವಂತೆ ಉಡುಪಿ ಜಿಲ್ಲೆಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.

IPL 2026: ಆರ್‌ಸಿಬಿಗೆ ಆರಂಭಿಕ ಹೊಡೆತ! ಮೊದಲ ಪಂದ್ಯಕ್ಕೆ ಸ್ಟಾರ್ ಬೌಲರ್ ಅಲಭ್ಯ

0

ಐಪಿಎಲ್ 2026 ರ ಟೂರ್ನಿ ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7:30 ಕ್ಕೆ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನವೇ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೋಶ್ ಹೇಜಲ್‌ವುಡ್ ಅವರು ಫಿಟ್‌ನೆಸ್ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಕೋಚ್ ಆಂಡಿ ಫ್ಲವರ್ ತಿಳಿಸಿದ್ದಾರೆ.

ಗಾಯದ ನಡುವೆಯೂ ತಂಡವನ್ನು ಸೇರಿಕೊಂಡಿರುವ ಹೇಜಲ್‌ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಮೊದಲ ಪಂದ್ಯದಿಂದ ಹೊರಗಿಡಲಾಗಿದೆ. ನವೆಂಬರ್ 2025 ರಿಂದ ಕ್ರಿಕೆಟ್‌ನಿಂದ ದೂರವಿರುವ ಅವರು ಮಂಡಿರಜ್ಜು ಮತ್ತು ಅಕಿಲೀಸ್ ಸ್ನಾಯು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದಲ್ಲಿ ಹೇಜಲ್‌ವುಡ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಅನುಪಸ್ಥಿತಿ ತಂಡಕ್ಕೆ ಸವಾಲಾಗಬಹುದು. ಕಳೆದ ಆವೃತ್ತಿಯಲ್ಲಿ ಅವರು 12 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದು, 8.77 ಎಕಾನಮಿ ದರ ಹೊಂದಿದ್ದರು. ಇದೀಗ ಅವರ ಗೈರುಹಾಜರಿಯಲ್ಲಿ ಇತರ ವೇಗದ ಬೌಲರ್‌ಗಳ ಮೇಲೆ ಹೆಚ್ಚು ಹೊಣೆಗಾರಿಕೆ ಬೀಳಲಿದೆ.

ಇದರ ಮಧ್ಯೆ, ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡ ತವರಿನಲ್ಲಿ ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಪಂದ್ಯಕ್ಕಾಗಿ ಹೆಚ್ಚಿನ ನಿರೀಕ್ಷೆ ಮೂಡಿದೆ. ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದ್ದು, ಟಾಸ್ 7:00 ಗಂಟೆಗೆ ನಡೆಯಲಿದೆ.

ತೈಲ ಬಿಕ್ಕಟ್ಟು: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಅಂತರ-ಸಚಿವಾಲಯ ಸಮಿತಿ ರಚನೆ

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯನ್ನು ಸಮೀಪದಿಂದ ಗಮನಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಅಂತರಸಚಿವಾಲಯ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಹಾಗೂ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ಪ್ರಮುಖ ಸಚಿವರು ಸದಸ್ಯರಾಗಿದ್ದಾರೆ.

ಸಮಿತಿಯ ಉದ್ದೇಶ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ತಕ್ಷಣ ಪತ್ತೆಹಚ್ಚಿ ಪರಿಹರಿಸುವುದಾಗಿದೆ. ಇದರಿಂದ ಇಂಧನ ಕ್ಷೇತ್ರದ ಸ್ಥಿರತೆಯನ್ನು ಕಾಪಾಡಲು ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ.

ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ. ಜನರು ಆತಂಕಗೊಂಡು ಅನಗತ್ಯವಾಗಿ ಇಂಧನ ಸಂಗ್ರಹಿಸಬಾರದು ಎಂದು ಮನವಿ ಮಾಡಲಾಗಿದೆ.

ಇದೇ ವೇಳೆ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದರ ಪರಿಣಾಮವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದೆ. ಜಗತ್ತಿನ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಸುಮಾರು 20ರಿಂದ 25 ಶೇಕಡಾ ಮಾರ್ಗದ ಮೂಲಕ ಸಾಗುತ್ತದೆ. ಭಾರತಕ್ಕೂ ಸುಮಾರು 12ರಿಂದ 15 ಶೇಕಡಾ ಕಚ್ಚಾ ತೈಲ ಇದೇ ಮಾರ್ಗದಿಂದ ಬರುತ್ತಿತ್ತು.

ನಿರ್ಬಂಧದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್: ದಾವಣಗೆರೆ-ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ: ಸಿಎಂ ವಿಶ್ವಾಸ

ಬೆಂಗಳೂರು: ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಇಂದು ನಾಮಪತ್ರ ಹಿಂಪಡೆದಿದ್ದು , ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು. ಅವರು ಇಂದು ಕ್ವಿಂನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದರು.

ಸಾದಿಕ್ ಪೈಲ್ವಾನ್ ಅವರು ನನಗೆ ಬಹಳ ವರ್ಷಗಳಿಂದ ಪರಿಚಯದವರಾಗಿದ್ದಾರೆ. ಮೈಸೂರಿನ ಕುಸ್ತಿ ಅಖಾಡಗಳಲ್ಲಿ ಅವರು ಪಾಲ್ಗೊಂಡಾಗ ಭೇಟಿಯಾಗುತ್ತಿದ್ದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಅಭ್ಯರ್ಥಿಯಾಗಬೇಕೆಂದು ಬಯಸುವುದು ತಪ್ಪೇನಿಲ್ಲ ಎಂದರು.

ನಿನ್ನೆ 11 ಜನ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷದ ಕೋರಿಕೆ ಮೇರೆಗೆ ಸಾದಿಕ್ ಅವರು ನಾಮಪತ್ರ ಹಿಂಪಡೆದಿದ್ದರಿಂದ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಹೇಳಿದರು. ಶಾಸಕ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ನಜೀರ್ ಅಹ್ಮದ್ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ಅವರು ತಲುಪುವುದು ತಡವಾದ್ದರಿಂದ ನಾಮ ಪತ್ರ ಸಲ್ಲಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ ವಿಧಾನಪರಿಷತ್ ನಲ್ಲಿ ಉತ್ತರ ನೀಡಬೇಕಿದ್ದರಿಂದ ನಾನು ಖುದ್ದು ಭೇಟಿ ನೀಡಲಾಗಿಲ್ಲ ಎಂದರು.

ಪಕ್ಷದ ಕಟ್ಟಾಳು; ನಿಷ್ಠಾವಂತ ಕಾರ್ಯಕರ್ತರು

ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ ನಲ್ಲಿ ಸುಮಾರು 40 ವರ್ಷಗಳಿಂದ ಇದ್ದು, ಪಕ್ಷದ ಕಟ್ಟಾಳು, . ದಾವಣಗೆರೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಇದನ್ನು ಪರಿಶೀಲಿಸಿ, ಮೃತರಾದವರ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿಯಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿ.ಕೆ. ಶಿವಕುಮಾರ್

ಬೆಂಗಳೂರು: ಅನೇಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಈ ದೇಶ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿವೆ. ಅನೇಕ ನಾಯಕರನ್ನು ಹುಟ್ಟುಹಾಕಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು. ಜ್ಯೋತಿ ನಿವಾಸ್ ಶಿಕ್ಷಣ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಕಾಲೇಜು ದಿವಸ’ ದಲ್ಲಿ ಭಾಗವಹಿಸಿ ಮಾತನಾಡಿದರು.

“60 ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಜ್ಯೋತಿ ನಿವಾಸ ಸಂಸ್ಥೆ ಮಾಡಿದೆ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳನ್ನು ನಾನು ಬೇರೆ,‌ ಬೇರೆ ದೇಶಗಳಲ್ಲಿ ಭೇಟಿ ಮಾಡಿದ್ದೇನೆ. ಗ್ಲೋಬಲ್ ಮಟ್ಟದಲ್ಲಿ ಅನೇಕ ಪ್ರತಿಭಾವಂತರನ್ನು ಈ ಸಂಸ್ಥೆ ಕೊಡುಗೆಯಾಗಿ ಕೊಟ್ಟಿದೆ” ಎಂದರು.

“ಪ್ರತಿಭೆಯ ಜೊತೆಗೆ ಸಂವಹನ ಮುಖ್ಯವಾದುದು. ನಾನು ರಾಜಕಾರಣಿ ಇರಬಹುದು‌ ಆದರೆ ನಾನು ಶಿಕ್ಷಣ ಪ್ರೇಮಿ. ಅಂತಿಮವಾಗಿ ನಮ್ಮನ್ನೆಲ್ಲಾ ಕಾಪಾಡುವುದೇ ಶಿಕ್ಷಣ. ನೀವು ಉದಾಹರಣೆ ಕೊಡುವುದು ತುಂಬಾ ಸುಲಭ. ಅದೇ ಎಲ್ಲರಿಗೂ ಉದಾಹರಣೆಯಾಗಿ ಬೆಳೆಯುವುದು ಕಠಿಣ ಕೆಲಸ” ಎಂದರು.

“ನಾನು ಕನಕಪುರದ ಸಣ್ಣ ಹಳ್ಳಿಯಿಂದ ಬಂದವನು. ಮೊದಲು ಸೆಂಟ್ ಥಾಮಸ್ ಶಾಲೆಯಲ್ಲಿ ಕಲಿತೆ. ನಂತರ ಎನ್ ಪಿಎಸ್ ಸೇರಿದೆ ಅಲ್ಲಿಂದ ನನ್ನ ಕಿತ್ತು ಹಾಕಿದರು. ಪದವಿ ಓದುವಾಗ ಎಲೆಕ್ಷನ್ ಗೆ ನಿಂತ ಕಾರಣಕ್ಕೆ ಪೂರ್ಣಗೊಳಿಸಲು ಆಗಲಿಲ್ಲ. ಕಡಿಮೆ ವಯಸ್ಸಿಗೆ ಶಾಸಕನಾದೇ. ಸದನದಲ್ಲಿ ಘಟಾನುಘಟಿ ನಾಯಕರ ಮಾತನ್ನು ಕೇಳಿ ನಾನು ಓದಬೇಕು ಎಂದು 46 ನೇ ವಯಸ್ಸಿನಲ್ಲಿ ಪದವಿ ಓದಿದೆ” ಎಂದರು.

“ಹೊಸ ಮಹಿಳಾ ನಾಯಕಿಯರು ಬೆಳೆಯಬೇಕು. ಶೇ 33 ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ರದಲ್ಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ 50 ರಷ್ಟು ಮೀಸಲಾತಿ ನೀಡಲಾಗಿದೆ. ಭವಿಷ್ಯದಲ್ಲಿ ಈ ಕಾಲೇಜಿನಿಂದ ನಾಯಕಿಯರು ಹೊರಬರಬೇಕು ಎಂದು ಆಶಿಸುತ್ತೇನೆ” ಎಂದರು.

“ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಬೇರು ಗಟ್ಟಿಯಾಗಿರಬೇಕು ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಡಿಸಿಎಂ ಇರಬಹುದು ಆದರೆ ನನ್ನ ಗುರುಗಳು ಎದುರಾದಾಗ ಅವರಿಗೆ ನಮಸ್ಕರಿಸುತ್ತೇನೆ. “ನಾವೆಲ್ಲರೂ ಒಬ್ಬರಿಗೊಬ್ಬರು ಆಧಾರವಾಗಿದ್ದು ಬೆಳೆಯಬೇಕು. ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳಬಾರದು. ಜ್ಞಾನವನ್ನು ಹಂಚಬೇಕು. ಹಂಚಿದಾಗ ಮಾತ್ರ ಪ್ರಗತಿ ಸಾಧ್ಯ” ಎಂದರು.

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು

ನಾವೆಲ್ಲರೂ ಜ್ಞಾನ, ಸಂಪತ್ತನ್ನು ಹಂಚಿಕೊಂಡು ಬಾಳಬೇಕು. ಪ್ರತಿಯೊಬ್ಬ ಶಿಕ್ಷಕನೂ ವಿದ್ಯಾರ್ಥಿಯೇ ಏಕೆಂದರೆ ಶಿಕ್ಷಕ ಜ್ಞಾನವನ್ನ ತುಂಬಿಕೊಳ್ಳದೇ ಹೋದರೆ ಜ್ಞಾನವನ್ನು ಹಂಚಲು ಸಾಧ್ಯವಿಲ್ಲ. ಈಗ ಎಐ ಯುಗ ದಿನದಿಂದ ದಿನಕ್ಕೆ ಎಲ್ಲವೂ ಬದಲಾಗುತ್ತಿದೆ. ನನ್ನ ಮಾಧ್ಯಮ ಸಲಹೆಗಾರರು ಭಾಷಣ ನೀಡಲು ಬಂದಾಗ ನನ್ನ ಮಗಳು ಚಾಟ್ ಜಿಪಿಟಿ ಮೂಲಕ ಯಾವ ಮಾಹಿತಿ ಬೇಕಾದರೂ ನೀನು ಪಡೆಯಬಹುದು ಎಂದು ತೋರಿಸಿಕೊಟ್ಟಳು. ಇಂದಿನ ಜನಾಂಗ ತಾಂತ್ರಿಕವಾಗಿ ಬಹಳ ಮುಂದಿದ್ದಾರೆ. ನನಗೆ ಅಷ್ಟಾಗಿ ಕಂಪ್ಯೂಟರ್ ಬಳಕೆ ಅಷ್ಟಾಗಿ ತಿಳಿದಿಲ್ಲ. ಮೊಬೈಲ್ ಬಳಕೆಯೂ ಕಡಿಮೆ” ಎಂದರು.

“ಇದು ವಿದ್ಯಾರ್ಥಿಗಳ‌ ಕಾಲ ಅವರು ತಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುತ್ತಾರೆ. ಗುರುಗಳಿಗಿಂತ ಮುಂಚಿತವಾಗಿಯೇ ತಿಳಿದುಕೊಂಡಿರುತ್ತಾರೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ಸಮ್ಮೇಳನಕ್ಕೆ ತೆರಳಿದ್ದೆ. ಅಲ್ಲಿ ಅನೇಕ ದೇಶಗಳ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಎಲ್ಲರಿಗೂ ಬೆಂಗಳೂರು ಬಗ್ಗೆ ಜ್ಞಾನವಿದೆ.‌ ಬೆಂಗಳೂರು ಅತ್ಯುತ್ತಮ ಹವಾಗುಣ, ಸಂಸ್ಕೃತಿ, ಪ್ರತಿಭಾವಂತರನ್ನು ಹೊಂದಿರುವ ನಗರ” ಎಂದರು.

“ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಈ ಹಿಂದೆ ಹೇಳಿದ್ದರು. ಏಕೆಂದರೆ ಅಷ್ಟೊಂದು ಜ್ಞಾನವಂತರು, ಪ್ರತಿಭಾವಂತರು ಇಲ್ಲಿದ್ದಾರೆ. ಪ್ರತಿವರ್ಷ ಕರ್ನಾಟಕದಿಂದ ಅಂದಾಜು 1.6 ಲಕ್ಷ ಎಂಜಿನಿಯರ್ ಮುಗಿಸಿದವರು ಹೊರ ಬರುತ್ತಿದ್ದಾರೆ. 270 ಕ್ಕೂ ಹೆಚ್ಚು ಎಂಜಿನಿಯರಿಂಗ್, 1160 ಐಟಿಐ ಕಾಲೇಜುಗಳಿವೆ. 72 ಮೆಡಿಕಲ್ ಕಾಲೇಜುಗಳಿದ್ದು 13 ಸಾವಿರಕ್ಕೂ ಮಿಗಿಲಾಗಿ ವೈದ್ಯರನ್ನು ಕರ್ನಾಟಕ ತಯಾರು ಮಾಡುತ್ತಿದೆ. 26 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಜ್ಯೋತಿ ನಿವಾಸ, ಸೆಂಟ್ ಜೋಸೆಫ್, ಮೌಂಟ್ ಕಾರ್ಮೆಲ ನಂತಹ ಸಂಸ್ಥೆಗಳಿಂದ” ಎಂದು ಬಣ್ಣಿಸಿದರು.

“ನಾನು ತಂದೆಯಾಗಿ ಮಕ್ಕಳ ಹುಟ್ಟುಹಬ್ಬವನ್ನ ಮನೆಯಲ್ಲಿ ಆಚರಿಸುತ್ತೇನೆ. ಆದರೆ ನನಗೆ ನನ್ನ ಹುಟ್ಟುಹಬ್ಬ ಎಂದರೆ ಸ್ವಲ್ಪ ಹಿಂಜರಿಕೆ. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗ ಪ್ಯಾರಿಸ್ ಗೆ ತೆರಳಿದ್ದೆ. ಆ ದಿನ ನನ್ನ ಹುಟ್ಟುಹಬ್ಬ ಎಂದು ಹೇಗೋ ಅಲ್ಲಿದ್ದವರಿಗೆ ತಿಳಿದು ಹೋಯಿತು. ಆಗ ನನ್ನನ್ನು ವೇದಿಕೆ ಮೇಲೆ ಕರೆದರು. ನಾನು ಹಳ್ಳಿಗಾಡಿನಿಂದ ಬಂದ ವ್ಯಕ್ತಿ.‌ ಹುಟ್ಟುಹಬ್ಬ ಆಚರಿಸುವ ಸಂಸ್ಕೃತಿ ನಮ್ಮ ಕಡೆ ಇರಲಿಲ್ಲ. ಆದರೂ ಕೇಕ್ ತಂದು ಅದರ‌ ಮೇಲೆ ಮೇಣದಬತ್ತಿಯಿಟ್ಟು ಹಚ್ಚಿದ ನಂತರ ಅದನ್ನು ನಂದಿಸುವಂತೆ ತಿಳಿಸಿದರು.

“ಶಿವನ ಅವತಾರ” ಎಂದು ನಂಬಿಸಿ ಮಹಿಳೆ ಮೇಲೆ ರೇಪ್: ಸ್ವಯಂ ಘೋಷಿತ ದೇವಮಾನವ ಬಂಧನ

0

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ತಾನು ಶಿವನ ಅವತಾರ ಎಂದು ಹೇಳಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವನೊಬ್ಬ 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತನನ್ನು ಋಷಿಕೇಶ್ ವೈದ್ಯ (40) ಎಂದು ಗುರುತಿಸಲಾಗಿದೆ. ಪುಣೆಯ ಮಹಿಳೆ 2023ರಲ್ಲಿ ಫೇಸ್ಬುಕ್ ಮೂಲಕ ಆರೋಪಿಗೆ ಪರಿಚಯವಾಗಿದ್ದಳು. ಅದೇ ವರ್ಷದ ಡಿಸೆಂಬರ್‌ನಲ್ಲಿ, ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಪುಣೆಗೆ ಬಂದು, ಮಂಜರಿ ಪ್ರದೇಶದ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆಗೆ ಮಂಪರು ತರಿಸುವ ಔಷಧ ನೀಡಲಾಗಿದ್ದು, ದೌರ್ಜನ್ಯ ನಡೆಸುವ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆ ಚಿತ್ರಗಳನ್ನು ಬಳಸಿಕೊಂಡು ಆರೋಪಿಯು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ವಸೈಯಲ್ಲಿರುವ ಹೋಟೆಲ್‌ಗೆ ಕರೆದು ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ನಾಸಿಕ್‌ನ ‘ಕ್ಯಾಪ್ಟನ್ ಖರತ್’ ಪ್ರಕರಣದ ನಂತರ ಧೈರ್ಯ ಪಡೆದು ಮಹಿಳೆ ದೂರು ನೀಡಲು ಮುಂದಾಗಿದ್ದಾಳೆ ಎಂದು ಮಾಣಿಕ್ಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಹೀರಾಲಾಲ್ ಜಾಧವ್ ತಿಳಿಸಿದ್ದಾರೆ.

ಆರೋಪಿ ಇದೇ ರೀತಿಯಲ್ಲಿ ಇನ್ನೂ ಹಲವಾರು ಮಹಿಳೆಯರನ್ನು ಮೋಸಗೊಳಿಸಿ ಲೈಂಗಿಕವಾಗಿ ಶೋಷಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಾಥಮಿಕ ಅಪರಾಧ ಪುಣೆಯಲ್ಲಿ ನಡೆದಿರುವುದರಿಂದ, ಮಾಣಿಕ್ಪುರ ಪೊಲೀಸರು ‘ಶೂನ್ಯ ಎಫ್‌ಐಆರ್’ ದಾಖಲಿಸಿ, ಪ್ರಕರಣವನ್ನು ಪುಣೆಯ ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

SSLC ವಿದ್ಯಾರ್ಥಿಗಳೇ ಗಮನಿಸಿ.. ಇನ್ಮುಂದೆ 625 ಅಲ್ಲ, 525 ಅಂಕಗಳಿಗೆ ಮಾತ್ರ ರಿಸಲ್ಟ್!

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಹಾಗೂ ಅಂಕಪಟ್ಟಿಯಿಂದ ಹೊರಗಿಡಬೇಕು ಎಂಬ ಕನ್ನಡ ಪರ ಸಂಘಟನೆಗಳ ಒತ್ತಾಯದ ಹಿನ್ನೆಲೆ, ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದರಿಂದ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ. ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಅಂಕಗಳಲ್ಲಿ ಪರಿಗಣಿಸದೆ, ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ.

ಇನ್ನು ಮುಂದೆ ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಆದರೆ, ಈ ವಿಷಯಗಳ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ನಿಯಮ ಹೊಸ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

“ತ್ರಿಭಾಷಾ ನೀತಿ ಮುಂದುವರಿಯುತ್ತದೆ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ವಿಷಯದ ಅಂಕಗಳನ್ನು ಗ್ರೇಡ್ ರೂಪದಲ್ಲಿ (A, B, C, D) ನೀಡಲಾಗುತ್ತದೆ. ಒಟ್ಟು ಫಲಿತಾಂಶವನ್ನು 525 ಅಂಕಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆ” ಎಂದು  ಹೇಳಿದರು.

ಈಗವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 625 ಅಂಕಗಳಿಗೆ ನಡೆಯುತ್ತಿತ್ತು. ಇನ್ನು ಮುಂದೆ ಹಿಂದಿ ವಿಷಯದ 100 ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಈ ಬದಲಾವಣೆಗಳಿಂದ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಉಪಚುನಾವಣೆ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಲಿಖಿತ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಏ.10ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಒಟ್ಟು‌ 33 ಹುದ್ದೆಗಳಿಗೆ ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಅಂದು ಲಿಖಿತ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದು,

ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಒಟ್ಟು 2,500 ಮಂದಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಟಿಕೆಟ್ ಬೇಡಿಕೆ ತಪ್ಪಲ್ಲ: RCB, KSCA ತೀರ್ಮಾನಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ

ಬೆಂಗಳೂರು: ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು RCB ಮತ್ತು KSCA ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರಿಂದ RCB ಟಿಕೆಟ್ ಬೇಡಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, “ಸರ್ಕಾರ ಈ ವಿಷಯದಲ್ಲಿ ಎಷ್ಟು ಮಟ್ಟಿಗೆ ಭಾಗಿಯಾಗಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ಇದುವರೆಗೆ ಸರ್ಕಾರ ಮಧ್ಯಪ್ರವೇಶಿಸಿಲ್ಲ. ದುರಂತದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಅದರ ಶಿಫಾರಸುಗಳ ಆಧಾರದಲ್ಲಿ ಪಂದ್ಯಕ್ಕೆ ಅನುಮತಿ ನೀಡಿದ್ದೇವೆ” ಎಂದು ಹೇಳಿದರು.

ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳೂ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿವೆ. ಸರ್ಕಾರ ಕಾನೂನು ಚೌಕಟ್ಟಿನೊಳಗೆ ತೀರ್ಮಾನ ತೆಗೆದುಕೊಳ್ಳಲಿದೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಒಳಮೀಸಲಾತಿ ಕುರಿತ ವಿಶೇಷ ಸಂಪುಟ ಸಭೆಯನ್ನು ಮುಂದೂಡಿರುವ ಕುರಿತು ಮಾತನಾಡಿದ ಸಚಿವರು, ಅಟಾರ್ನಿ ಜನರಲ್ ಸಲಹೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. “ಈಗ ತೀರ್ಮಾನ ಕೈಗೊಂಡರೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದರು.

ಸಂಪುಟ ಪುನರ್‌ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಹೇಳಬೇಕು. ಹಲವರು ಸಭೆ ನಡೆಸಿ, ಚರ್ಚೆ ಮಾಡುತ್ತಿದ್ದಾರೆ. ಸಚಿವರಾಗಲು ಹಲವರು ಸಮರ್ಥರಾಗಿದ್ದು, ಅವಕಾಶ ಯಾರಿಗೆ ಸಿಗುತ್ತದೋ ಅವರು ಸಚಿವರಾಗುತ್ತಾರೆ” ಎಂದು ಹೇಳಿದರು.

error: Content is protected !!