Home Blog Page 46

ಫೋಟೋ ತೆಗೆಯಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ: ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯ

0

ಮಂಡ್ಯ: ಕಾವೇರಿ ನದಿ ತೀರದ ಮುತ್ತತ್ತಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿರುವ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ. ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ನದಿಗೆ ಇಳಿದಿದ್ದ ವೇಳೆ ಸಂಭವಿಸಿದ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬುಧವಾರ ಸಂಜೆ ನಡೆದ ಘಟನೆಯ ನಂತರ ಶೋಧ ಕಾರ್ಯಾಚರಣೆಯಲ್ಲಿ ಐವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಗುರುವಾರ ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರನ್ನು ಚೈತ್ರಾ, ಶ್ವೇತಾ, ವಿಜಯಮ್ಮ, ಪ್ರಿಯಾಂಕಾ ಹಾಗೂ ಮಹೇಶ್ ಎಂದು ಗುರುತಿಸಲಾಗಿದೆ.

ಘಟನೆ ನಂತರ ಆಸ್ಪತ್ರೆಯ ಶವಗಾರದಲ್ಲಿ ಕುಟುಂಬಸ್ಥರ ಆಕ್ರಂದನ ದೃಶ್ಯಗಳು ಮನಕಲಕುವಂತಾಗಿದ್ದವು. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬ ಸದಸ್ಯರು ಭಾವುಕರಾಗಿ ದುಃಖ ವ್ಯಕ್ತಪಡಿಸಿದರು.

ಪಾರಾದ ರವಿ ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬವು ಮುತ್ತತ್ತಿಗೆ ಭೇಟಿ ನೀಡಿದ್ದು ಫೋಟೋ ಸೆಷನ್ ವೇಳೆ ವಿಜಯಮ್ಮ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಿದ ಇತರರು ಸಹ ನದಿಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ಪ್ರದೇಶದಲ್ಲಿ ಸುರಕ್ಷತಾ ಸೂಚನೆ ಫಲಕಗಳ ಕೊರತೆ ಹಾಗೂ ಜೀವ ರಕ್ಷಕ ಸಿಬ್ಬಂದಿಯಿಲ್ಲದಿರುವ ಬಗ್ಗೆ ಸ್ಥಳೀಯರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿರುವ ಮುತ್ತತ್ತಿಯಲ್ಲಿ ಮೂಲಭೂತ ಸುರಕ್ಷತಾ ವ್ಯವಸ್ಥೆಗಳ ಕೊರತೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿ, ಘಟನೆಯನ್ನು ಅಚಾತುರ್ಯ ಎಂದು ವರ್ಗೀಕರಿಸಿದ್ದು, ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ ತಾಪಂಡ ನಿವಾಸದಲ್ಲಿ ನೇಣಿಗೆ ಶರಣಾದ ಗೆಳೆಯ ವೈಶಾಖ್: ತನಿಖೆ ಆರಂಭಿಸಿದ ಪೊಲೀಸರು

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲಿ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದ್ದು, ಅವರ ಆಪ್ತ ಗೆಳೆಯ ಹಾಗೂ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ವ್ಯಾಪ್ತಿಯಲ್ಲಿರುವ ನಟಿಯ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ವೈಶಾಕ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆರ್‌ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ವೈಶಾಕ್ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿದೆಯೇ ಎಂಬ ಕುರಿತು ಪೊಲೀಸರು ಮಾಹಿತಿ ಬಹಿರಂಗಪಡಿಸಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರದ ಬಿಗ್ ರಿಲೀಫ್; 1.30 ಲಕ್ಷ ಮೆಟ್ರಿಕ್ ಟನ್ ತೋತಾಪುರಿಗೆ ಸಹಾಯಧನ ಘೋಷಣೆ

ಬೆಂಗಳೂರು: ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆಯಲ್ಲಿ ಭಾರೀ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ತೋತಾಪುರಿ ಮಾವು ಬೆಳೆಗಾರರಿಗೆ ಕೇಂದ್ರ ಸರ್ಕಾರ ಮಹತ್ವದ ನೆರವು ಘೋಷಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ ₹1,750 ಸಹಾಯಧನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಕುರಿತು ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಗಮನಿಸಿ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಾವು ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ರೈತರಿಗೆ ನೆರವು ನೀಡುವಂತೆ ಮನವಿ ಮಾಡಿದ್ದೆ. ಆ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇದೀಗ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಜೋಶಿ ತಿಳಿಸಿದ್ದಾರೆ.

ರಾಜ್ಯದ ಸಾವಿರಾರು ಮಾವು ಬೆಳೆಗಾರರಿಗೆ ಈ ನಿರ್ಧಾರ ಆರ್ಥಿಕ ಬಲ ತುಂಬಲಿದ್ದು, ಬೆಲೆ ಕುಸಿತದಿಂದ ಉಂಟಾಗಿರುವ ನಷ್ಟವನ್ನು ಭಾಗಶಃ ಸರಿದೂಗಿಸಲು ನೆರವಾಗಲಿದೆ. ವಿಶೇಷವಾಗಿ ತೋತಾಪುರಿ ಮಾವು ಉತ್ಪಾದಕರಿಗೆ ಇದು ದೊಡ್ಡ ಮಟ್ಟದ ಪರಿಹಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತ ನಿರ್ಧಾರ ಕೈಗೊಂಡಿರುವುದಕ್ಕೆ ಪ್ರಹ್ಲಾದ್ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ರೈತರ ಕಲ್ಯಾಣಕ್ಕೆ ನಿರಂತರ ಆದ್ಯತೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ರೈತರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾವಿನ ಬೆಲೆ ಕುಸಿತ ಮತ್ತು ಮಾರುಕಟ್ಟೆ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಈ ನಿರ್ಧಾರವು ಮಹತ್ವದ ಆರ್ಥಿಕ ಆಸರೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಫುಟ್ ಪಾತ್ ಒತ್ತುವರಿ ತೆರವಿಗೆ ಡೆಡ್ ಲೈನ್ ಘೋಷಿಸಿದ ಕೃಷ್ಣ ಭೈರೇಗೌಡ! ನಿಯಮ ಉಲ್ಲಂಘಿಸಿದರೆ 10 ಸಾವಿರ ರೂ. ದಂಡ

ಬೆಂಗಳೂರು: ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು “ಸುರಕ್ಷಿತ ಪಾದಚಾರಿ ಅಭಿಯಾನ”ಕ್ಕೆ ಚಾಲನೆ ನೀಡಿದ್ದು, ನಗರದ ಸುಮಾರು 2,000 ಕಿಲೋಮೀಟರ್ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಆದ್ಯತೆ ಮೇರೆಗೆ ಗುರುತಿಸಲಾಗಿದೆ.

ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವವರಿಗೆ ಜುಲೈ 1ರವರೆಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಅವಕಾಶ ನೀಡಲಾಗಿದೆ. ಗಡುವಿನ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಜುಲೈ 1ರಿಂದ ಜಾರಿಗೆ ಬರುವ ಪ್ರಮುಖ ನಿಯಮಗಳು

  • ಫುಟ್‌ಪಾತ್ ಒತ್ತುವರಿ ತೆರವುಗೊಳಿಸದಿದ್ದರೆ ₹250 ರಿಂದ ₹10,000ವರೆಗೆ ದಂಡ ವಿಧಿಸಲಾಗುವುದು.
  • ಪಾದಚಾರಿ ಮಾರ್ಗಗಳಲ್ಲಿ ಜಾಹೀರಾತು ಫಲಕಗಳು ಅಥವಾ ಬೋರ್ಡ್‌ಗಳನ್ನು ಅಳವಡಿಸಿದರೆ ದಂಡ ಹಾಕಲಾಗುವುದು.
  • ಅಂಗಡಿಗಳು ಫುಟ್‌ಪಾತ್ ಅತಿಕ್ರಮಿಸಿಕೊಂಡಿರುವುದು ಕಂಡುಬಂದರೆ, ಅಗತ್ಯವಿದ್ದಲ್ಲಿ ವ್ಯಾಪಾರ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಬಹುದು.
  • ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
  • ಫುಟ್‌ಪಾತ್ ಮೇಲೆ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು.

ಬಿಡಾಡಿ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ

ನಗರದ ರಸ್ತೆ ಬದಿಗಳು ಹಾಗೂ ಫುಟ್‌ಪಾತ್‌ಗಳಲ್ಲಿ ವಾರಸುದಾರರಿಲ್ಲದೆ ಬಿಟ್ಟುಹೋಗಿರುವ ವಾಹನಗಳ ವಿರುದ್ಧವೂ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.

  • ಜುಲೈ 1ರಿಂದ ಇಂತಹ ವಾಹನಗಳಿಗೆ ಸ್ಟಿಕರ್ ಅಂಟಿಸಿ ನೋಟಿಸ್ ನೀಡಲಾಗುವುದು.
  • ಜುಲೈ 10ರೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಹರಾಜು ಪ್ರಕ್ರಿಯೆ ಆರಂಭಿಸಲಿದ್ದಾರೆ.

ಬಸ್ ನಿಲ್ದಾಣಗಳಿಗೂ ಹೊಸ ನಿಯಮ

ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳನ್ನು ಸ್ಥಾಪಿಸಬಾರದು ಎಂಬ ನಿಯಮವನ್ನೂ ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ್ದಾರೆ.

ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಸಂಚಾರ ಹಾಗೂ ಸಾರ್ವಜನಿಕ ಸ್ಥಳಗಳ ಸಮರ್ಪಕ ಬಳಕೆಗೆ ಈ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ನಾಗರಿಕರು ನಿಯಮ ಪಾಲನೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಕ್ರಮ ಬಡ್ಡಿ ದಂಧೆಕೋರ ಮನೋಹರ ಕಟ್ಟಿಮನಿ ಬಂಧನ..!

ಗದಗ: ಅಕ್ರಮ ಬಡ್ಡಿ ದಂಧೆ ವಿರುದ್ಧ ಸಮರ ಸಾರಿರುವ ಗದಗ ಜಿಲ್ಲಾ ಪೊಲೀಸರಿಗೆ ಮತ್ತೊಂದು ಮಹತ್ವದ ಯಶಸ್ಸು ಸಿಕ್ಕಿದ್ದು, ನಿನ್ನೆ ಬೆಟಗೇರಿ ಭಾಗದಲ್ಲಿ ನಡೆದ ಭರ್ಜರಿ ದಾಳಿಯ ಬೆನ್ನಲ್ಲೇ ಅಕ್ರಮ ಹಣಕಾಸು ವ್ಯವಹಾರದ ಪ್ರಮುಖ ಆರೋಪಿ ಮನೋಹರ ಕಟ್ಟಿಮನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮುರ್ತಾಜಾ ಖಾದ್ರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯ ವಿರುದ್ಧ ಮಹತ್ವದ ದಾಖಲೆಗಳು ಮತ್ತು ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಂಧನ ಕ್ರಮ ಕೈಗೊಳ್ಳಲಾಗಿದೆ.

ನಿನ್ನೆ ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಪೊಲೀಸರು, ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ನೂರಾರು ಚೆಕ್‌ಗಳು, ಖಾಲಿ ಬಾಂಡ್‌ಗಳು, ಒಪ್ಪಂದ ಪತ್ರಗಳು, ಪಾಸ್‌ಬುಕ್‌ಗಳು, ಎಟಿಎಂ ಕಾರ್ಡ್‌ಗಳು, ಲೆಕ್ಕವಿಲ್ಲದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ ಕಾಯ್ದೆಯಡಿ ದಬ್ಬಾಳಿಕೆ (Extortion), ಬೆದರಿಕೆ (Criminal Intimidation) ಹಾಗೂ ಮೈಕ್ರೋಫೈನಾನ್ಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ, ತನಿಖೆ ಚುರುಕುಗೊಳಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬೆಟಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧೀರಜ್ ಸಿಂಧೆ, ಬಡಾವಣೆ ಠಾಣೆಯ ಪಿಎಸ್‌ಐ ಮಾರುತಿ ಜೋಗದಂಡಕರ್, ಬೆಟಗೇರಿ ಠಾಣೆಯ ಪಿಎಸ್‌ಐ ಆರಿ, ಎಎಸ್‌ಐ ಗುಡ್ಲಾನೂರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ಮತ್ತು ಸಮಾಜಕ್ಕೆ ಹಾನಿಕಾರಕವಾಗಿರುವ ಅಕ್ರಮ ಹಣಕಾಸು ವ್ಯವಹಾರಗಳ ವಿರುದ್ಧ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಎಸ್‌ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.

ಪೀಠಾಧಿಪತಿಗೇ ಜೀವ ಬೆದರಿಕೆ..! ಕಣ್ಣೀರಿಟ್ಟ ಕಲ್ಲಯ್ಯಜ್ಜನವರ ಗಂಭೀರ ಆರೋಪ

0

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಗಂಭೀರ ಆರೋಪ ಮಾಡಿದ್ದು, ಮಠದ ಮೂವರು ಟ್ರಸ್ಟಿಗಳು ಹಾಗೂ ಶಿಕ್ಷಣ ಸಂಸ್ಥೆಯ ಮೂವರು ಸದಸ್ಯರಿಂದ ಜೀವ ಬೆದರಿಕೆ ಮತ್ತು ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.

ನಗರದ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಕ್ಷಣದಲ್ಲಾದರೂ ನನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ. ನನಗೆ ಏನಾದರೂ ಅನಾಹುತವಾದರೆ ಅದಕ್ಕೆ ಈ ಆರು ಜನರೇ ಹೊಣೆ” ಎಂದು ಆತಂಕ ವ್ಯಕ್ತಪಡಿಸಿದರು.

ಮಠದ ಆರ್ಥಿಕ ವ್ಯವಹಾರಗಳ ಕುರಿತು ಮಾತನಾಡಿದ ಕಲ್ಲಯ್ಯಜ್ಜನವರು, “ನಾನು ಪೀಠಾಧಿಪತಿಯಾದಾಗ ಆಶ್ರಮಕ್ಕೆ 59 ಲಕ್ಷ ರೂ. ಸಾಲವಿತ್ತು. ಅದನ್ನು ಸಂಪೂರ್ಣ ತೀರಿಸಿ, ಈಗ 4 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದೇನೆ. ದೇಣಿಗೆಯಾಗಿ ಬಂದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇಟ್ಟಿದ್ದೇನೆ. ಎಲ್ಲ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನಿರ್ವಹಿಸಿದ್ದೇನೆ” ಎಂದು ಹೇಳಿದರು.

ಇದೇ ವಿಚಾರ ಕೆಲವರಿಗೆ ಅಸಮಾಧಾನ ಉಂಟುಮಾಡಿದೆ ಎಂದು ಆರೋಪಿಸಿದ ಅವರು, “ಟ್ರಸ್ಟಿಯೊಬ್ಬರು ನನಗೆ 10 ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಮಠದ ಹಣವನ್ನು ವೈಯಕ್ತಿಕವಾಗಿ ನೀಡಲು ನಾನು ನಿರಾಕರಿಸಿದ್ದರಿಂದ ನನ್ನ ವಿರುದ್ಧ ಸುಳ್ಳು ಆರೋಪ, ಅಪಪ್ರಚಾರ ನಡೆಸಿ ತೇಜೋವಧೆಗೆ ಯತ್ನಿಸುತ್ತಿದ್ದಾರೆ” ಎಂದು ದೂರಿದರು.

“ಅನೇಕ ವರ್ಷಗಳಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಈಗ ಭಕ್ತರು ಹಾಗೂ ಟ್ರಸ್ಟ್ ಸಮಿತಿಯ ಗಮನಕ್ಕೆ ತರಲು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಈ ಸಂಬಂಧ ಶೀಘ್ರದಲ್ಲೇ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಇದೇ ವೇಳೆ, “ನನ್ನ ವಿರುದ್ಧ ಮಾಡಿರುವ ಆರೋಪಗಳು ಸಾಬೀತಾದರೆ ಪೀಠ ತ್ಯಾಗಕ್ಕೂ ನಾನು ಸಿದ್ಧ” ಎಂದು ಘೋಷಿಸಿದ ಕಲ್ಲಯ್ಯಜ್ಜನವರು, ಆರೋಪಗಳಿಂದ ಮನನೊಂದು ಸುದ್ದಿಗೋಷ್ಠಿಯಲ್ಲೇ ಭಾವುಕರಾಗಿ ಕಣ್ಣೀರು ಹಾಕಿದರು.

AI ಬಳಸಿ ಗೃಹಿಣಿಯ ಅಶ್ಲೀಲ ಫೋಟೋ ಸೃಷ್ಟಿಸಿ ₹30 ಲಕ್ಷಕ್ಕೆ ಬೇಡಿಕೆ: ಬ್ಲ್ಯಾಕ್ ಮೇಲ್ʼನಿಂದ ಮನನೊಂದು ಆತ್ಮಹತ್ಯೆಗೆ ಯತ್ನ

0

ಚಿಕ್ಕಮಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗೃಹಿಣಿಯೊಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬ್ಲ್ಯಾಕ್‌ಮೇಲ್‌ಗೆ ಮಣಿಯದ ಹಿನ್ನೆಲೆಯಲ್ಲಿ ಆರೋಪಿಗಳು ಎಡಿಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದರಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಎಐ ತಂತ್ರಜ್ಞಾನ ಬಳಸಿ ಗೃಹಿಣಿಯ ಫೋಟೋಗಳನ್ನು ವಿಕೃತವಾಗಿ ಪರಿವರ್ತಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಮಹಿಳೆಯ ಮೊಬೈಲ್‌ಗೆ ಕಳುಹಿಸಿ ₹30 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡದಿದ್ದರೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆದರೆ ಗೃಹಿಣಿ ಹಾಗೂ ಅವರ ಕುಟುಂಬಸ್ಥರು ಈ ಬೆದರಿಕೆಗೆ ಮಣಿಯದಿದ್ದಾಗ, ಆರೋಪಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಎಡಿಟ್ ಮಾಡಿದ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೆ, ಮಹಿಳೆಯ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಮಾಹಿತಿಯನ್ನು ಪ್ರಕಟಿಸಿರುವ ಆರೋಪವೂ ಕೇಳಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರಿನಲ್ಲಿ ಹರಿದಾಡಿದ ವಿಕೃತ ಚಿತ್ರಗಳನ್ನು ಕಂಡು ಗೃಹಿಣಿ ತೀವ್ರವಾಗಿ ಮನನೊಂದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಸಂತ್ರಸ್ತೆಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾವಿಕೆರೆ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ಎಂಬ ಇಬ್ಬರು ಯುವಕರ ವಿರುದ್ಧ ನೇರ ಆರೋಪ ಮಾಡಲಾಗಿದೆ. ಗೃಹಿಣಿಯ ಮೊಬೈಲ್‌ಗೆ ಬಂದಿದ್ದ ಸಂದೇಶಗಳು ಹಾಗೂ ಸಂಪರ್ಕ ಸಂಖ್ಯೆಗಳ ಆಧಾರದ ಮೇಲೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ದೂರಿನಲ್ಲಿ, ಇದೇ ಆರೋಪಿಗಳು ಈ ಹಿಂದೆ ಕೂಡ ಇತರ ಮಹಿಳೆಯರನ್ನು ಇದೇ ರೀತಿಯಲ್ಲಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ರೀತಿಯ ಕೃತ್ಯಗಳ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯನ್ನೂ ಕುಟುಂಬಸ್ಥರು ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ಉಂಟುಮಾಡಿ, ಮಾನಸಿಕ ಹಿಂಸೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಮೂಕ ಜೀವಿಗಳಿಗೂ ನ್ಯಾಯ ಬೇಕು: 9 ನಾಯಿಗಳನ್ನು ಪೇಟಾ ವಶದಲ್ಲೇ ಇರಿಸಲು ಆದೇಶಿಸಿದ ಹೈಕೋರ್ಟ್

ಬೆಂಗಳೂರು: ಪ್ರಾಣಿಗಳಿಗೆ ಮಾತು ಬಾರದಿದ್ದರೂ ಅವು ನೋವು, ಯಾತನೆ ಮತ್ತು ಭಾವನೆಗಳನ್ನು ಅನುಭವಿಸುತ್ತವೆ. ಆದ್ದರಿಂದ ಅವುಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಯಿಗಳಿಗೆ ಹಿಂಸೆ ನೀಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಅವುಗಳ ಕಸ್ಟಡಿ ನೀಡಲು ನಿರಾಕರಿಸಿರುವ ನ್ಯಾಯಾಲಯ, ಒಂಬತ್ತು ನಾಯಿಗಳನ್ನು ಪ್ರಾಣಿ ದಯಾ ಸಂಸ್ಥೆಯ ವಶದಲ್ಲೇ ಇರಿಸಲು ಆದೇಶಿಸಿದೆ.

ನಾಯಿಗಳನ್ನು ಮಾಲೀಕನಿಗೆ ಹಸ್ತಾಂತರಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಪರಿಶೀಲಿಸಿದ ನ್ಯಾಯಾಲಯ, ನಾಯಿಗಳಿಗೆ ಕ್ರೂರವಾಗಿ ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಉಲ್ಲೇಖಿಸಿದೆ. ಇಂತಹ ಸಂದರ್ಭದಲ್ಲೂ ನಾಯಿಗಳ ಕಸ್ಟಡಿಯನ್ನು ಹಿಂಸೆ ನೀಡಿದ ವ್ಯಕ್ತಿಗೆ ಹಸ್ತಾಂತರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಾಣಿಗಳಿಗೂ ಹಿಂಸೆಯಿಂದ ಮುಕ್ತವಾಗಿ ಬದುಕುವ ಹಕ್ಕಿದೆ. ಅವು ಮನುಷ್ಯರಂತೆ ಮಾತನಾಡಲು ಸಾಧ್ಯವಾಗದಿದ್ದರೂ ನೋವು ಮತ್ತು ಸಂಕಟವನ್ನು ಅನುಭವಿಸುವ ಜೀವಿಗಳಾಗಿವೆ. ಕಾನೂನು ಸಹ ಪ್ರಾಣಿಗಳನ್ನು ಕೇವಲ ಮನುಷ್ಯರ ಉಪಯೋಗಕ್ಕಾಗಿ ಇರುವ ವಸ್ತುಗಳೆಂದು ಪರಿಗಣಿಸುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಾಣಿಗಳು ಸಹ ಘನತೆ, ಕರುಣೆ ಹಾಗೂ ರಕ್ಷಣೆಗೆ ಅರ್ಹವಾದ ಜೀವಿಗಳು. ಒಂದು ನಾಗರಿಕ ಸಮಾಜದ ಮೌಲ್ಯವನ್ನು ಅದು ತನ್ನ ಸಹಮಾನವರೊಂದಿಗೆ ಹೇಗೆ ವರ್ತಿಸುತ್ತದೆ ಎಂಬುದರ ಜೊತೆಗೆ ಮೂಕ ಜೀವಿಗಳೊಂದಿಗೆ ಎಷ್ಟು ಕರುಣೆ ಮತ್ತು ನ್ಯಾಯದಿಂದ ನಡೆದುಕೊಳ್ಳುತ್ತದೆ ಎಂಬುದರ ಆಧಾರದ ಮೇಲೂ ಅಳೆಯಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರತಿ ಪ್ರಾಣಿಯ ಮೇಲಿನ ಕ್ರೌರ್ಯವು ಕೇವಲ ಆ ಜೀವಿಯ ಮೇಲಿನ ದೌರ್ಜನ್ಯವಲ್ಲ, ಅದು ಸಮಾಜದ ಮಾನವೀಯತೆ ಮತ್ತು ಆತ್ಮಸಾಕ್ಷಿಯ ಮೇಲಿನ ಕಳಂಕವಾಗಿದೆ. ಪ್ರಾಣಿಗಳ ಜೀವವನ್ನು ರಕ್ಷಿಸುವುದು ದಾನವಲ್ಲ, ಅದು ಸಾಂವಿಧಾನಿಕ ನೈತಿಕತೆಯನ್ನು ಕಾಪಾಡುವ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಬೆಂಗಳೂರು ನಗರದ ನಾಗಸಂದ್ರ ನಿವಾಸಿ ಕೆ.ಇ. ರಮೇಶ್ ಅವರ ಬಳಿ ವಿವಿಧ ತಳಿಯ ಒಂಬತ್ತು ನಾಯಿಗಳಿದ್ದವು. ಅವರು ನಾಯಿಗಳ ಮೇಲೆ ಪದೇ ಪದೇ ವೈರ್ ಹಾಗೂ ಪೈಪ್‌ಗಳಿಂದ ಹಲ್ಲೆ ನಡೆಸುತ್ತಿರುವುದನ್ನು ನೆರೆಹೊರೆಯವರು ಗಮನಿಸಿ, ಅದರ ವಿಡಿಯೊಗಳನ್ನು ಪೇಟಾ ಸಂಸ್ಥೆಗೆ ನೀಡಿದ್ದರು.

ದೂರಿನ ಮೇರೆಗೆ ಪೇಟಾ ಸಂಸ್ಥೆ ನಾಯಿಗಳನ್ನು ರಕ್ಷಿಸಿ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಬಳಿಕ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಸೆಕ್ಷನ್ 325 ಮತ್ತು 62 ಹಾಗೂ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ನಾಯಿಗಳ ಮಾಲೀಕ ರಮೇಶ್ ನ್ಯಾಯಾಲಯದ ಮೊರೆ ಹೋಗಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಾಯಿಗಳನ್ನು ಹಿಂತಿರುಗಿಸಲು ಅನುಮತಿ ನೀಡಿದ್ದರೂ, ಅದನ್ನು ಪ್ರಶ್ನಿಸಿ ಪೇಟಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಾಯಿಗಳನ್ನು ಮಾಲೀಕನಿಗೆ ಒಪ್ಪಿಸಲು ನಿರಾಕರಿಸಿ, ಅವುಗಳನ್ನು ಪೇಟಾ ಸಂಸ್ಥೆಯ ವಶದಲ್ಲೇ ಇರಿಸಲು ಆದೇಶಿಸಿದೆ.

ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೊಸ ಸಾರಥ್ಯ! ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಮರಾಠೆ ಅವಿರೋಧ ಆಯ್ಕೆ; ಗೌರವ ಅಧ್ಯಕ್ಷರಾಗಿ ಕುಮಾರ ಕಟ್ಟಿಮನಿ

0

ಗದಗ: ಜಿಲ್ಲಾ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಮಂಜುನಾಥ ಮರಾಠೆ ಹಾಗೂ ಗೌರವ ಅಧ್ಯಕ್ಷರಾಗಿ ಕುಮಾರ ಕಟ್ಟಿಮನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಪದಾಧಿಕಾರಿಗಳಿಂದ ಗುಪ್ತವಾಗಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ರಾಜ್ಯ ಘಟಕದ ಸದಸ್ಯ ಕಳಕೇಶ್ ಉಳಕ್ಕಿ ಅವರು ನೂತನ ಪದಾಧಿಕಾರಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.

ಸಂಘದ ಉಪಾಧ್ಯಕ್ಷರಾಗಿ ಚಂದ್ರು ಪಾಟೀಲ್, ಜಿಲ್ಲಾ ಉಪಾಧ್ಯಕ್ಷೆಯಾಗಿ ಶಿಲ್ಪಾ ಬಂಡಿಹಾಳ್, ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಾಂತ್ (ಶ್ರೂಕಾಂತ್) ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ್ ಈರಣ್ಣವರ, ಖಜಾಂಚಿಯಾಗಿ ಪ್ರದೀಪ್ ಹಿರೇಮಠ್ ಆಯ್ಕೆಯಾದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಧರ್ಮೇಂದ್ರ ಇಟಗಿ, ಶೇಖಸಾಬ್ ಕಾತರಕಿ, ಪ್ರವೀಣ್‌ಕುಮಾರ್ ಕನ್ಯಾಳ್, ಜಗದೀಶ್ ಬಳಿಗೇರ್, ಗಾಳೆಪ್ಪ ಹರಿಜನ್, ಶಿವಯೋಗಿ ಭಾವಿ ಹಾಗೂ ಪ್ರದೀಪ್ ಕನ್ಯಾಳ್ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ರಾಜ್ಯ ಘಟಕದ ಸದಸ್ಯ ಕಳಕೇಶ್ ಉಳಕ್ಕಿ, ಪತ್ರಕರ್ತರು ಹಲವು ಸಂಕಷ್ಟಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸಂಘದ ಪದಾಧಿಕಾರಿಗಳು ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಪ್ರತಿಯೊಬ್ಬ ಪತ್ರಕರ್ತರಿಗೂ ತಲುಪುವಂತೆ ಸಂಘ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ನೂತನ ಪದಾಧಿಕಾರಿಗಳು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಪತ್ರಕರ್ತರ ಹಿತಾಸಕ್ತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಕೇವಲ 60 ಸೆಕೆಂಡ್ ಅಂತರದಲ್ಲಿ ಎರಡು ಭೀಕರ ಭೂಕಂಪಗಳು: ಕಟ್ಟಡಗಳು ಕುಸಿತ, ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ!

0

ಕ್ಯಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ದೇಶವನ್ನೇ ತಲ್ಲಣಗೊಳಿಸಿದ್ದು, ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದು ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಅವಶೇಷಗಳಡಿ ಸಾವಿರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ.

ಬುಧವಾರ ಸಂಜೆ ಅಲ್ಪಾವಧಿಯ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿವೆ. 7.2 ಹಾಗೂ 7.5 ತೀವ್ರತೆಯ ಭೂಕಂಪಗಳು ಸಂಭವಿಸಿದ ಪರಿಣಾಮ ರಾಜಧಾನಿಯ ಅನೇಕ ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಭೂಕಂಪದ ಹೊಡೆತಕ್ಕೆ ಭಯಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬೀದಿಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅವಘಡದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ಹಲವು ಹೃದಯವಿದ್ರಾವಕ ದೃಶ್ಯಗಳು ಬೆಳಕಿಗೆ ಬಂದಿವೆ. ಕ್ಯಾರಕಾಸ್‌ನ 22 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಸ್ಥಳದಲ್ಲಿ, ಅವಶೇಷಗಳಡಿ ಸಿಲುಕಿರುವ ಮಗನಿಗಾಗಿ ತಾಯಿ ನಡೆಸಿದ ಕೂಗು ಎಲ್ಲರ ಮನಕಲಕುವಂತಿತ್ತು.

“ಅಂತೋನಿಯೋ… ನಾನು ನಿನ್ನ ಅಮ್ಮ… ಇಲ್ಲಿ ಇದ್ದೇನೆ…” ಎಂದು ತಾಯಿ ಕೂಗುತ್ತಿರುವ ದೃಶ್ಯ ಸ್ಥಳದಲ್ಲಿದ್ದವರ ಕಣ್ಣೀರಿಗೂ ಕಾರಣವಾಗಿದೆ. ಆದರೆ ಅವಶೇಷಗಳಡಿಯಿಂದ ಯಾವುದೇ ಪ್ರತಿಕ್ರಿಯೆ ಕೇಳಿಬರದ ಕಾರಣ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಇನ್ನೊಂದು ಪ್ರದೇಶವಾದ ಲಾಸ್ ಪಾಲೋಸ್ ಗ್ರಾಂಡಿಸ್‌ನ ಪೆಟುನಿಯಾ ವಸತಿ ಸಮುಚ್ಚಯದಲ್ಲೂ ಭಾರೀ ಹಾನಿ ಸಂಭವಿಸಿದೆ. ಸಾಮಾನ್ಯವಾಗಿ ಜನಜಂಗುಳಿಯಿಂದ ಕೂಡಿರುವ ಈ ಪ್ರದೇಶ ಭೂಕಂಪದ ಬಳಿಕ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿದೆ. ಅಲ್ಲಿಯೂ “ತಾನಿಯಾ… ತಾನಿಯಾ…” ಎಂದು ತಮ್ಮವರಿಗಾಗಿ ಹುಡುಕುತ್ತಿರುವವರ ನೋವಿನ ಕೂಗು ಕೇಳಿಬಂದಿದೆ.

ಸ್ಥಳೀಯರು ಹಾಗೂ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಹಲವರು ಟಾರ್ಚ್‌ಗಳ ನೆರವಿನಿಂದ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಕೆಲವೆಡೆ ರಕ್ಷಣಾ ಸಿಬ್ಬಂದಿ ತಲುಪುವ ಮುನ್ನವೇ ಸ್ಥಳೀಯರು ಸ್ವಯಂಪ್ರೇರಿತವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಭೂಕಂಪದ ಬಳಿಕ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಮತ್ತು ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ನಿಖರ ಹಾನಿಯ ಪ್ರಮಾಣ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಜೀವಂತವಾಗಿ ರಕ್ಷಿಸಲು ಹರಸಾಹಸ ಪಡುತ್ತಿವೆ.