Home Blog Page 6

ಪ್ರಕೃತಿಯ ಮಡಿಲಲ್ಲಿ ಒಂದು ಅವಿಸ್ಮರಣೀಯ ಪಯಣ

ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಗದ್ದಲದ ಬದುಕಿನಿಂದ ಕೆಲ ಕ್ಷಣ ದೂರ ಸರಿದು ಹಚ್ಚಹಸಿರು ಕಾಡು, ಬೆಟ್ಟ-ಗುಡ್ಡಗಳು, ಜಲಪಾತಗಳು ಮತ್ತು ಶುದ್ಧ ಗಾಳಿಯ ನಡುವೆ ಹೆಜ್ಜೆ ಹಾಕುವ ಅನುಭವ ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುವ ಅತ್ಯುತ್ತಮ ಚಟುವಟಿಕೆ ಟ್ರೆಕ್ಕಿಂಗ್. ಬಹುದಿನಗಳಿಂದ ದೂದ್‌ಸಾಗರ ಟ್ರೆಕ್ಕಿಂಗ್‌ಗೆ ಹೋಗಬೇಕೆಂಬ ಕನಸು ನನ್ನ ಮನಸ್ಸಿನಲ್ಲಿತ್ತು. ಇತ್ತೀಚೆಗೆ ನನ್ನ ಕಲ್ಪವೃಕ್ಷ ಮಾದರಿ ಶಾಲೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಆ ಕನಸನ್ನು ನನಸಾಗಿಸಿಕೊಳ್ಳುವ ಸುವರ್ಣಾವಕಾಶ ದೊರೆಯಿತು.

ಆರಂಭದಲ್ಲಿ 26 ಕಿಲೋಮೀಟರ್‌ಗಳ ಈ ಸುದೀರ್ಘ ಚಾರಣಕ್ಕೆ ಕೇವಲ ಆರು ಜನರು ಮಾತ್ರ ಸಿದ್ಧರಾಗಿದ್ದರು. ದಿನಗಳು ಕಳೆದಂತೆ ಉತ್ಸಾಹ ಹೆಚ್ಚುತ್ತಾ ಹೋಯಿತು. ಯುವಕರು, ಸಹೋದ್ಯೋಗಿಗಳು ಹಾಗೂ ಹಿರಿಯರು ಸೇರಿ ಕೊನೆಗೆ 29 ಜನರ ತಂಡ ರೂಪುಗೊಂಡಿತು. ಇಷ್ಟು ದೂರದ ಚಾರಣವನ್ನು ಎಲ್ಲರೂ ಯಶಸ್ವಿಯಾಗಿ ಪೂರ್ಣಗೊಳಿಸಬಹುದೇ ಎಂಬ ಸಣ್ಣ ಆತಂಕ ಮನಸ್ಸಿನಲ್ಲಿತ್ತು. ಕಾಡಿನ ಜಿಗಣೆಗಳು, ಜಾರುವ ಹಾದಿಗಳು, ಅನಿರೀಕ್ಷಿತ ಸವಾಲುಗಳು ಎಲ್ಲವೂ ಎದುರಾಗಬಹುದು ಎಂಬ ಯೋಚನೆ ಸಹಜವಾಗಿಯೇ ಕಾಡುತ್ತಿತ್ತು. ಆದರೆ “ಧೈರ್ಯಂ ಸರ್ವತ್ರ ಸಾಧನಂ” ಎಂಬ ಆತ್ಮವಿಶ್ವಾಸದೊಂದಿಗೆ ನಾವು ಪಯಣ ಆರಂಭಿಸಿದೆವು.

ಈ ಚಾರಣದ ಅತ್ಯಂತ ವಿಶೇಷ ಸಂಗತಿಯೆಂದರೆ ನನ್ನ ಜೀವನ ಸಂಗಾತಿಯೂ ನನ್ನೊಂದಿಗೆ ಹೆಜ್ಜೆ ಹಾಕಿದ್ದು. ಜೀವನದಲ್ಲಿ ಅನೇಕ ಸುಂದರ ಕ್ಷಣಗಳನ್ನು ನಾವು ಜೊತೆಯಾಗಿ ಕಳೆದಿದ್ದೇವೆ. ಆದರೆ ಪ್ರಕೃತಿಯ ಮಡಿಲಲ್ಲಿ, ಹಚ್ಚಹಸಿರು ಕಾಡಿನ ನಡುವೆ, ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಾ, ಆಯಾಸವನ್ನು ನಗುವಿನಲ್ಲೇ ಮರೆತು, ಕಲ್ಲಿನ ಹಾದಿಗಳಲ್ಲಿ ಕೈಹಿಡಿದು ಸಾಗಿದ ಆ ಕ್ಷಣಗಳು ನಮ್ಮ ದಾಂಪತ್ಯ ಜೀವನದ ಮರೆಯಲಾಗದ ನೆನಪುಗಳಾಗಿ ಉಳಿದಿವೆ. ಈ ಚಾರಣ ನಮ್ಮಿಬ್ಬರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಬೆಳಗಿನ ಜಾವ 5 ಗಂಟೆಗೆ ರಾಜಕುಮಾರ ಬಸ್‌ನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಬಸ್‌ನೊಳಗೆ ಹಾಡು, ನೃತ್ಯ, ಹರಟೆ, ನಗು ಹಾಗೂ ಸ್ನೇಹಿತರ ಮಾತುಕತೆಗಳು ಪ್ರಯಾಣದ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ಕಿಟಕಿಯಾಚೆ ಕಾಣುತ್ತಿದ್ದ ಹಸಿರು ಬೆಟ್ಟಗಳು, ದಟ್ಟ ಕಾಡು, ತಂಪಾದ ಗಾಳಿ ಹಾಗೂ ಪಕ್ಷಿಗಳ ಕಲರವ ಪ್ರಕೃತಿಯ ಮಡಿಲಿಗೆ ನಮ್ಮನ್ನು ಕರೆದೊಯ್ಯುತ್ತಿದ್ದವು. ಗಮ್ಯಸ್ಥಾನಕ್ಕಿಂತಲೂ ಪ್ರಯಾಣವೇ ಹೆಚ್ಚು ಸುಂದರವಾಗಿ ಭಾಸವಾಗುತ್ತಿತ್ತು. ಪ್ರತಿಯೊಂದು ತಿರುವಿನಲ್ಲೂ ಪ್ರಕೃತಿ ಹೊಸ ಸೊಬಗನ್ನು ಅನಾವರಣಗೊಳಿಸುತ್ತಿತ್ತು.

ಬೆಳಿಗ್ಗೆ ಸುಮಾರು 10.30ಕ್ಕೆ ಗೋವಾದ ಕುಲೆಂ ತಲುಪಿದೆವು. ಉಪಹಾರ ಸೇವಿಸಿ, ಮಧ್ಯಾಹ್ನದ ಊಟವನ್ನು ಪ್ಯಾಕ್ ಮಾಡಿಕೊಂಡು ಟ್ರೆಕ್ಕಿಂಗ್‌ಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆವು. ನಂತರ ಜೀಪ್‌ಗಳ ಮೂಲಕ ಅರಣ್ಯದ ಪ್ರವೇಶದ್ವಾರ ತಲುಪಿ ಸುಮಾರು 11 ಗಂಟೆಗೆ ನಿಜವಾದ ಚಾರಣ ಆರಂಭಿಸಿದೆವು.

ಆರಂಭದಲ್ಲಿ ಬೆಟ್ಟದ ಕಿರಿದಾದ ಹಾದಿಗಳಲ್ಲಿ ನಡೆಯುವುದು ಸ್ವಲ್ಪ ಕಷ್ಟವೆನಿಸಿತು. ಆದರೆ ಸ್ನೇಹಿತರ ಪ್ರೋತ್ಸಾಹ ಮತ್ತು ಪರಸ್ಪರ ಸಹಕಾರದಿಂದ ಹೆಜ್ಜೆಗೆ ಹೆಜ್ಜೆ ಸೇರಿಸುತ್ತಾ ಮುಂದೆ ಸಾಗುತ್ತಿದ್ದೆವು. ಹಾದಿಯುದ್ದಕ್ಕೂ ಹರಿಯುವ ಝರಿಗಳು, ಕಲ್ಲುಗಳ ನಡುವೆ ಕಲಕಲನೆ ಹರಿಯುವ ಹೊಳೆಗಳು, ಎತ್ತರದ ಮರಗಳು ಹಾಗೂ ದಟ್ಟವಾದ ಕಾಡಿನ ಸೊಬಗು ಮನಸ್ಸನ್ನು ಮಂತ್ರಮುಗ್ಧಗೊಳಿಸಿತು. ಕೆಲವೆಡೆ ಜಾರುವ ಕಲ್ಲುಗಳು ಮತ್ತು ಕಠಿಣ ಹಾದಿಗಳು ಸವಾಲು ಹಾಕಿದರೂ ಯಾರೂ ಧೈರ್ಯ ಕಳೆದುಕೊಳ್ಳಲಿಲ್ಲ.

ಫೋಟೋಗಳು, ಸೆಲ್ಫಿಗಳು, ವಿಡಿಯೊಗಳು ಹಾಗೂ ಮೋಜು-ಮಸ್ತಿಯ ನಡುವೆ ನಮ್ಮ ಪಯಣ ಸಾಗುತ್ತಲೇ ಇತ್ತು. ನದಿ ನೀರಿನ ನಿನಾದ, ಪುಟ್ಟ ಝರಿಗಳ ಕಲಕಲ ಶಬ್ದ ಹಾಗೂ ಸ್ಫಟಿಕದಷ್ಟು ನಿರ್ಮಲವಾದ ತಂಪು ನೀರು ನಮ್ಮ ಆಯಾಸವನ್ನು ಕ್ಷಣಾರ್ಧದಲ್ಲಿ ದೂರ ಮಾಡುತ್ತಿತ್ತು. ಪ್ರಕೃತಿಯೇ ತನ್ನ ಅಮೃತವನ್ನು ಉಣಬಡಿಸುತ್ತಿರುವಂತೆ ಭಾಸವಾಗುತ್ತಿತ್ತು.

ಸುಮಾರು 15 ಕಿಲೋಮೀಟರ್ ನಡೆದ ಬಳಿಕ ಒಂದು ಪುಟ್ಟ ಗುಡಿಸಲು ಕಂಡಿತು. ಅಲ್ಲಿ ಚಹಾ ಮತ್ತು ಮ್ಯಾಗಿ ದೊರೆಯುತ್ತಿತ್ತು. ನಾವು ತಂದಿದ್ದ ತಿಂಡಿಗಳನ್ನು ಸೇವಿಸಿ ಮತ್ತೆ ಪಯಣ ಮುಂದುವರಿಸಿದೆವು. ಹ್ಯಾಂಗಿಂಗ್ ಬ್ರಿಜ್, ಉಕ್ಕಿನ ಸೇತುವೆ, ರಭಸವಾಗಿ ಹರಿಯುವ ನೀರು, ದಾರಿಗೆ ಅಡ್ಡಬಿದ್ದ ಮರಗಳು ಹಾಗೂ ಅಲ್ಲಲ್ಲಿ ಕಂಡುಬರುವ ವಾನರಸೇನೆ ನಮ್ಮ ಗಮನ ಸೆಳೆಯಿತು. ಆಹಾರದ ಚೀಲಗಳ ಮೇಲೆ ಕಣ್ಣಿಟ್ಟಿದ್ದ ಆ ವಾನರಗಳು ಪ್ರವಾಸಿಗರಿಗೆ ಹೊಸ ಅನುಭವವನ್ನೇ ನೀಡುತ್ತಿದ್ದವು.

ಆಯಾಸಗೊಂಡ ದೇಹ ಮುಂದೆ ಸಾಗಲು ಹಿಂಜರಿಯುತ್ತಿದ್ದರೂ ಪ್ರಕೃತಿಯ ಸೌಂದರ್ಯವೇ ನಮ್ಮ ಹೆಜ್ಜೆಗಳಿಗೆ ಹೊಸ ಚೈತನ್ಯ ತುಂಬುತ್ತಿತ್ತು. ಇದು ಸಾಮಾನ್ಯ ಟ್ರೆಕ್ಕಿಂಗ್ ಅಲ್ಲ ಎಂಬುದು ಆಗಲೇ ಮನದಟ್ಟಾಯಿತು. ಇಲ್ಲಿಗೆ ಬರಬೇಕಾದರೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ದೃಢತೆಯೂ ಅತ್ಯಗತ್ಯ.

ಜಲಪಾತಕ್ಕೆ ಇನ್ನೂ ಎರಡು ಕಿಲೋಮೀಟರ್ ಬಾಕಿಯಿದ್ದಾಗ ಚೆಕ್‌ಪೋಸ್ಟ್ ತಲುಪಿದೆವು. ಅಲ್ಲಿ ಮಾರ್ಗದರ್ಶಕರಿಲ್ಲದೆ ಯಾರಿಗೂ ಪ್ರವೇಶವಿರಲಿಲ್ಲ. ನಮ್ಮ ಮಾರ್ಗದರ್ಶಕರು ಬಂದ ನಂತರವೇ ಮುಂದಿನ ಪಯಣ ಆರಂಭವಾಯಿತು. ಅಲ್ಲಿ ಶೌಚಾಲಯ, ಕುಡಿಯುವ ನೀರು ಹಾಗೂ ಸಣ್ಣ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗಿತ್ತು.

ಸುದೀರ್ಘ ಚಾರಣದಲ್ಲಿ ತಂಡದ ಸದಸ್ಯರು ತಮ್ಮ ತಮ್ಮ ವೇಗಕ್ಕೆ ಅನುಗುಣವಾಗಿ ಚದುರಿಕೊಂಡಿದ್ದರು. ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಎಲ್ಲರೂ ಮತ್ತೆ ಒಂದಾಗಿ ತಂದಿದ್ದ ಊಟವನ್ನು ಸೇವಿಸಿ ಸ್ವಲ್ಪ ವಿಶ್ರಾಂತಿ ಪಡೆದೆವು. ಬಳಿಕ ವಾಚ್ ಟವರ್ ಏರಿದಾಗ ದೂರದಲ್ಲಿ ಹಾಲಿನ ಹೊಳೆಯಂತೆ ಧುಮ್ಮಿಕ್ಕುತ್ತಿದ್ದ ದೂದ್‌ಸಾಗರ ಜಲಪಾತ ಕಣ್ಣಿಗೆ ಬಿತ್ತು. ಆ ಒಂದು ದೃಶ್ಯವೇ ಬಳಲಿದ್ದ ದೇಹಕ್ಕೆ ಹೊಸ ಚೈತನ್ಯ ತುಂಬಿತು.

ಮತ್ತೆ ಅಲ್ಲಿಂದ ಜಲಪಾತದತ್ತ ಹೆಜ್ಜೆ ಹಾಕಿದೆವು. ಮುಂದಿನ ದಾರಿ ಇನ್ನಷ್ಟು ಕಠಿಣವಾಗಿತ್ತು. ಬೃಹತ್ ಕಲ್ಲುಬಂಡೆಗಳ ನಡುವೆ ಅತ್ಯಂತ ಎಚ್ಚರಿಕೆಯಿಂದ ಸಾಗಬೇಕಾಯಿತು. ಕೊನೆಗೂ ಸುಮಾರು 310 ಮೀಟರ್ (1,017 ಅಡಿ) ಎತ್ತರದಿಂದ ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕಿ ಹರಿಯುವ ದೂದ್‌ಸಾಗರ ಜಲಪಾತ ತನ್ನ ಸಂಪೂರ್ಣ ವೈಭವದೊಂದಿಗೆ ಕಣ್ಣೆದುರು ಅನಾವರಣಗೊಂಡಿತು.

ಹಾಲಿನ ಸಾಗರದಂತೆ ಕಾಣುವ ಈ ಜಲಪಾತಕ್ಕೆ ‘ದೂದ್‌ಸಾಗರ’ ಎಂಬ ಹೆಸರು ಎಷ್ಟು ಸೂಕ್ತ ಎಂಬುದು ಅಲ್ಲಿಗೆ ಹೋದಾಗಲೇ ಅರಿವಾಗುತ್ತದೆ. ಜಲಪಾತದ ಮಧ್ಯೆ ಹಾದುಹೋಗುವ ರೈಲು ಸೇತುವೆ, ನಿಧಾನವಾಗಿ ಚಲಿಸುವ ರೈಲು, ಹಚ್ಚಹಸಿರು ಬೆಟ್ಟಗಳು, ಮಂಜಿನ ಹನಿಗಳು ಮತ್ತು ಧುಮ್ಮಿಕ್ಕುವ ನೀರಿನ ರಭಸ – ಇವೆಲ್ಲವೂ ಸೇರಿ ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಕಾಣುತ್ತಿತ್ತು. ಆ ಕ್ಷಣದಲ್ಲಿ ಕ್ಯಾಮೆರಾ ಸೆರೆಹಿಡಿದದ್ದು ಕೇವಲ ದೃಶ್ಯವಷ್ಟೇ, ಆದರೆ ಮನಸ್ಸು ಸೆರೆಹಿಡಿದದ್ದು ಜೀವಮಾನವಿಡೀ ಮರೆಯಲಾಗದ ಅನುಭವ.

ಈ ಭವ್ಯ ಜಲಪಾತವು ಮಂಡೋವಿ (ಮಹಾದಾಯಿ) ನದಿಯಿಂದ ನಿರ್ಮಾಣವಾಗಿದೆ. ಕರ್ನಾಟಕದ ಭೀಮಗಡ ವನ್ಯಜೀವಿ ಅಭಯಾರಣ್ಯದ ಪಶ್ಚಿಮ ಘಟ್ಟದಲ್ಲಿ ಉಗಮಿಸುವ ಮಹಾದಾಯಿ ನದಿ ಕರ್ನಾಟಕ–ಗೋವಾ ಗಡಿಭಾಗದಲ್ಲಿ ಸುಮಾರು 310 ಮೀಟರ್ ಎತ್ತರದಿಂದ ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕಿ ಈ ಅದ್ಭುತ ಜಲಪಾತವನ್ನು ಸೃಷ್ಟಿಸುತ್ತದೆ. ಅಲ್ಲಿಂದ ಮುಂದೆ ಗೋವಾದ ಮೂಲಕ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಪ್ರಕೃತಿಯ ವೈಭವ ಮತ್ತು ಭೌಗೋಳಿಕ ವಿಶೇಷತೆಗಳ ಸಂಗಮವೇ ದೂದ್‌ಸಾಗರ.

ಆ ಸೌಂದರ್ಯವನ್ನು ಕಣ್ತುಂಬಿಕೊಂಡೆವು. ಮನತುಂಬ ಆಸ್ವಾದಿಸಿದೆವು. ಅಲ್ಲಿಂದ ಹೊರಡಲು ಮನಸ್ಸೇ ಒಪ್ಪುತ್ತಿರಲಿಲ್ಲ. ಆದರೂ ಸಂಜೆ ಸುಮಾರು 4.15ಕ್ಕೆ ಭಾರವಾದ ಮನಸ್ಸಿನಿಂದ ಹಿಂದಿರುಗುವ ಪಯಣ ಆರಂಭಿಸಿದೆವು.

ಹಿಂತಿರುಗುವ ದಾರಿ ಇನ್ನಷ್ಟು ಸವಾಲಿನಿಂದ ಕೂಡಿತ್ತು. ವಿಪರೀತ ಮಳೆ ಸುರಿಯತೊಡಗಿತು. ಹೋಗುವಾಗ ಸಣ್ಣದಾಗಿ ಹರಿಯುತ್ತಿದ್ದ ಝರಿಗಳು ಈಗ ಉಕ್ಕಿ ಹರಿಯುತ್ತಿದ್ದವು. ಕತ್ತಲು ನಿಧಾನವಾಗಿ ಆವರಿಸುತ್ತಿದ್ದಂತೆ ನಮ್ಮ ಹೆಜ್ಜೆಗಳ ವೇಗವೂ ಹೆಚ್ಚಾಯಿತು. ಆಯಾಸ, ಮಳೆ, ಜಾರುವ ಹಾದಿ—ಎಲ್ಲವೂ ಇದ್ದರೂ ಯಾರೊಬ್ಬರೂ ಧೈರ್ಯ ಕಳೆದುಕೊಳ್ಳಲಿಲ್ಲ. ಮೊಬೈಲ್ ಟಾರ್ಚ್ ಬೆಳಕನ್ನು ಆಸರೆಯಾಗಿಸಿಕೊಂಡು, ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಾ, ಪರಸ್ಪರ ಸಹಾಯ ಮಾಡುತ್ತಾ ಸುರಕ್ಷಿತವಾಗಿ ಆರಂಭದ ಸ್ಥಳಕ್ಕೆ ಹಿಂದಿರುಗಿದೆವು. ಆ ಕ್ಷಣದಲ್ಲಿ ನಮ್ಮ ತಂಡದ ಒಗ್ಗಟ್ಟು ಮತ್ತು ಸಹಕಾರವೇ ನಮ್ಮ ದೊಡ್ಡ ಶಕ್ತಿಯಾಗಿತ್ತು.

ನಂತರ ಅಲ್ಪೋಪಹಾರ ಸೇವಿಸಿ ಜೀಪ್ ಮೂಲಕ ಬಸ್ ತಲುಪಿದೆವು. ರಾತ್ರಿ ಸುಮಾರು 8 ಗಂಟೆಗೆ ಬಸ್‌ನಲ್ಲಿ ಪ್ರಯಾಣ ಆರಂಭವಾಯಿತು. ಎಲ್ಲರೂ ವಿಪರೀತ ಆಯಾಸಗೊಂಡಿದ್ದರೂ ಮುಖದಲ್ಲಿ ಯಶಸ್ಸಿನ ಮಂದಹಾಸವಿತ್ತು. ದಾರಿಮಧ್ಯೆ ರಾತ್ರಿ ಊಟ ಮುಗಿಸಿ ಬಸ್‌ನಲ್ಲಿ ಕುಳಿತ ಕೆಲವೇ ಕ್ಷಣಗಳಲ್ಲಿ ಎಲ್ಲರೂ ನಿದ್ರೆಯ ಮಡಿಲಿಗೆ ಜಾರಿದರು. ಮತ್ತೆ ಕಣ್ಣು ತೆರೆದಾಗ ಮಧ್ಯರಾತ್ರಿ ಸುಮಾರು 3 ಗಂಟೆಗೆ ಬೈಲಹೊಂಗಲ ತಲುಪಿದ್ದೆವು.

ಈ ಟ್ರೆಕ್ಕಿಂಗ್ ನನಗೆ ಕೇವಲ 26 ಕಿಲೋಮೀಟರ್ ಚಾರಣವಾಗಿರಲಿಲ್ಲ. ಅದು ಆತ್ಮವಿಶ್ವಾಸದ ಪರೀಕ್ಷೆಯಾಗಿತ್ತು; ತಂಡದ ಸಹಕಾರದ ಮಹತ್ವವನ್ನು ಅರಿಯುವ ಅವಕಾಶವಾಗಿತ್ತು; ಪ್ರಕೃತಿಯ ಎದುರು ಮನುಷ್ಯ ಎಷ್ಟು ಚಿಕ್ಕವನು ಎಂಬುದನ್ನು ಮನದಟ್ಟು ಮಾಡಿದ ಪಯಣವಾಗಿತ್ತು. ಪ್ರತಿಯೊಂದು ಹೆಜ್ಜೆಯೂ ತಾಳ್ಮೆ ಕಲಿಸಿತು. ಪ್ರತಿಯೊಂದು ಬೆಟ್ಟವೂ ಧೈರ್ಯ ತುಂಬಿತು. ಪ್ರತಿಯೊಂದು ಝರಿಯೂ ಬದುಕಿಗೆ ಹೊಸ ಚೈತನ್ಯ ನೀಡಿತು.

ಈ ಚಾರಣ ಪ್ರಕೃತಿಯ ಮೇಲಿನ ನನ್ನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಪ್ರಕೃತಿಯ ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಅರಿವನ್ನೂ ಮೂಡಿಸಿತು. ಜೀವನದಲ್ಲಿ ಗುರಿ ಎಷ್ಟೇ ಕಠಿಣವಾಗಿದ್ದರೂ ದೃಢಸಂಕಲ್ಪ, ಪರಿಶ್ರಮ ಮತ್ತು ಪರಸ್ಪರ ಸಹಕಾರ ಇದ್ದರೆ ಅದನ್ನು ಸಾಧಿಸಬಹುದು ಎಂಬ ಅಮೂಲ್ಯ ಪಾಠವನ್ನು ಈ ಪಯಣ ಕಲಿಸಿತು.

ಒಟ್ಟಾರೆಯಾಗಿ, ದೂದ್‌ಸಾಗರ ಟ್ರೆಕ್ಕಿಂಗ್ ನನ್ನ ಜೀವನದ ಅತ್ಯಂತ ಅಮೂಲ್ಯ ಅನುಭವಗಳಲ್ಲಿ ಒಂದಾಗಿದೆ. ಬೆಟ್ಟಗಳು, ಕಾಡುಗಳು, ಜಲಪಾತಗಳು, ಮಳೆಯ ಹನಿಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ನನ್ನ ಜೀವನ ಸಂಗಾತಿಯೊಂದಿಗೆ ಕಳೆದ ಆ ಕ್ಷಣಗಳು ಎಂದೆಂದಿಗೂ ಹಸಿರಾಗಿಯೇ ಉಳಿಯಲಿವೆ.

ನಿಜಕ್ಕೂ, “ಪ್ರಕೃತಿಯ ಮಡಿಲಲ್ಲಿ ಕಳೆದ ಒಂದು ದಿನ ಸಾವಿರ ದಿನಗಳ ಸಂತೋಷವನ್ನು ನೀಡುತ್ತದೆ” ಎಂಬ ಮಾತಿನ ಸತ್ಯವನ್ನು ನಾನು ಈ ಚಾರಣದಲ್ಲಿ ಮನಸಾರೆ ಅನುಭವಿಸಿದೆ.

-ಮಲ್ಲಿಕಾರ್ಜುನ ಕೆ.
ಶಿಕ್ಷಕರು, ಕಲ್ಪವೃಕ್ಷ ಮಾದರಿ ಶಾಲೆ, ಬೈಲಹೊಂಗಲ

26 ವರ್ಷದ ದಾಂಪತ್ಯಕ್ಕೆ ಅಂತ್ಯ: ಒಮರ್ ಅಬ್ದುಲ್ಲಾ ದಂಪತಿಗೆ ಸುಪ್ರೀಂ ಕೋರ್ಟ್ʼನಿಂದ ವಿಚ್ಛೇದನ ಮಂಜೂರು

0

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರ ದಾಂಪತ್ಯ ಜೀವನಕ್ಕೆ ಅಧಿಕೃತ ಅಂತ್ಯ ಸಿಕ್ಕಿದೆ. ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವನ್ನು ವಿಸರ್ಜಿಸಲು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ದಂಪತಿ ತಮ್ಮ ನಡುವಿನ ಎಲ್ಲ ವೈಯಕ್ತಿಕ ಹಾಗೂ ಕಾನೂನು ಸಂಬಂಧಿತ ವಿವಾದಗಳನ್ನು ಪರಸ್ಪರ ಒಪ್ಪಂದದ ಮೂಲಕ ಬಗೆಹರಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಒಪ್ಪಂದದ ಷರತ್ತುಗಳಂತೆ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.

ಈ ಹಿಂದೆ ಒಮರ್ ಅಬ್ದುಲ್ಲಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು 2024ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಒಮರ್ ಅಬ್ದುಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಇಬ್ಬರೂ ತಮ್ಮ ತಮ್ಮ ಸ್ವತಂತ್ರ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದು, ಪರಸ್ಪರ ಒಪ್ಪಿಗೆಯ ಇತ್ಯರ್ಥದ ಎಲ್ಲ ದಾಖಲೆಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ, ಒಪ್ಪಂದದ ಪ್ರಕಾರವೇ ಆದೇಶ ಹೊರಡಿಸಲಾಗುವುದು. ಜೊತೆಗೆ, ದಂಪತಿ ನಡುವಿನ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಸಹ ಹಿಂಪಡೆಯಲಾಗುವುದು ಎಂದು ತಿಳಿಸಿತು.

ಜುಲೈ 22ರಂದು ವಿಚ್ಛೇದನಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಿಗೆಯ ಷರತ್ತುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ವಿವಾಹವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ನ್ಯಾಯಾಲಯ ಇದೀಗ ಅದಕ್ಕೆ ಅನುಮೋದನೆ ನೀಡಿದೆ.

‘ಮಹಾ’ ಮಳೆಗೆ ತುಂಬಿ ಹರಿಯುತ್ತಿರುವ ಭೀಮೆ..! ಯಾದಗಿರಿಯಲ್ಲಿ ಪ್ರವಾಹ ಭೀತಿ, ದೇವಾಲಯಗಳಿಗೆ ಜಲದಿಗ್ಬಂಧನ

ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು, ಒಂದೇ ದಿನದಲ್ಲಿ ನದಿ ಮೈದುಂಬಿ ಹರಿಯುತ್ತಿದೆ. ಬತ್ತಿಹೋಗಿದ್ದ ನದಿ ಇದೀಗ ಜೀವಕಳೆ ಪಡೆದುಕೊಂಡಿದ್ದು, ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಗುರುಸಣಗಿ ಬ್ಯಾರೇಜ್‌ನಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ಯಾದಗಿರಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚಿಸಿದ್ದಾರೆ.

ಭಾರೀ ನೀರಿನ ಹರಿವಿನಿಂದ ನದಿ ತೀರದಲ್ಲಿರುವ ವೀರಾಂಜನೇಯ ಹಾಗೂ ಕಂಗಳೇಶ್ವರ ದೇವಾಲಯಗಳಿಗೆ ಜಲದಿಗ್ಬಂಧನ ಉಂಟಾಗಿದೆ. ದೇವಾಲಯಗಳ ಸುತ್ತ ನೀರು ಆವರಿಸಿರುವುದರಿಂದ ಭಕ್ತರು ದೇವಾಲಯದೊಳಗೆ ತೆರಳಲು ಸಾಧ್ಯವಾಗದೆ, ದೂರದಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ.

ಇನ್ನೊಂದೆಡೆ, ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದು ರೈತರಿಗೆ ಸಂತಸದ ಸುದ್ದಿಯಾಗಿದೆ. ನೀರಿನ ಲಭ್ಯತೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಮುಂಗಾರು ಬೆಳೆಗಳಿಗೆ ಇದು ವರದಾನವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಭಾರತೀಯ ಕ್ರಿಕೆಟ್ʼಗೆ ನೀನು ನೀಡಿದ ಕೊಡುಗೆ ಅಮೂಲ್ಯ: ಅಜಿಂಕ್ಯ ರಹಾನೆ ನಿವೃತ್ತಿಗೆ ಸಚಿನ್-ಕೊಹ್ಲಿ ಭಾವುಕ ಸಂದೇಶ!

0

ಭಾರತ ತಂಡದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಹಾಗೂ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ವಿದಾಯ ಹೇಳಿದ್ದು, ಭಾರತೀಯ ಕ್ರಿಕೆಟ್‌ನ ಒಂದು ಸ್ಮರಣೀಯ ಅಧ್ಯಾಯ ಅಂತ್ಯಗೊಂಡಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸಿದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ 38 ವರ್ಷದ ರಹಾನೆ ತಮ್ಮ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ.

ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ, ಆರು ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದರು. ಮುಂಬೈ ಪರ ದೇಶೀಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಮಿಂಚಿದ ಅವರು, ಸಂಕಷ್ಟದ ಸಂದರ್ಭಗಳಲ್ಲಿ ಭಾರತ ತಂಡದ ನಂಬಿಗಸ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ರಹಾನೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜರು ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. “ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಅಜಿಂಕ್ಯ. ನಾವು ಮೊದಲ ಬಾರಿಗೆ ಮುಂಬೈ ಪರ ಜೊತೆಯಾಗಿ ಬ್ಯಾಟಿಂಗ್ ಮಾಡಿದಾಗಲೇ, ಅವಕಾಶಗಳ ಹಿಂದೆ ಓಡುವ ವ್ಯಕ್ತಿಯಲ್ಲ, ಅವಕಾಶಗಳನ್ನು ತನ್ನತ್ತ ಸೆಳೆಯುವ ಆಟಗಾರನನ್ನು ನಾನು ನಿನ್ನಲ್ಲಿ ಕಂಡಿದ್ದೆ.

ತಂಡಕ್ಕಾಗಿ ದುಡಿಯುವ ನಿನ್ನ ಮನೋಭಾವವೇ ನಿನ್ನನ್ನು ಈ ಮಟ್ಟಕ್ಕೆ ಕರೆತಂದಿತು. ತಾಳ್ಮೆ ಮತ್ತು ಆತ್ಮವಿಶ್ವಾಸದ ಮೂಲಕ ನೀನು ತಂಡಕ್ಕೆ ಬಲ ನೀಡಿದ್ದೆ. ನಿನ್ನ ಅದ್ಭುತ ವೃತ್ತಿಜೀವನಕ್ಕೆ ಮತ್ತೊಮ್ಮೆ ಅಭಿನಂದನೆಗಳು,” ಎಂದು ಸಚಿನ್ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ, ರಹಾನೆ ಜೊತೆ ಹಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ ವಿರಾಟ್ ಕೊಹ್ಲಿ ಕೂಡ ವಿಶೇಷ ಸಂದೇಶದ ಮೂಲಕ ತಮ್ಮ ಸ್ನೇಹಿತನಿಗೆ ಶುಭ ಕೋರಿದ್ದಾರೆ. “ಜಿಂಕ್ಸ್, ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ಭಾರತೀಯ ಕ್ರಿಕೆಟ್‌ಗಾಗಿ ನೀನು ನೀಡಿರುವ ಕೊಡುಗೆ ಅಮೂಲ್ಯ.

ನಿನ್ನ ಸಾಧನೆಯ ಬಗ್ಗೆ ಸದಾ ಹೆಮ್ಮೆಪಡಬಹುದು. ಸ್ಲಿಪ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಫೀಲ್ಡರ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಸಂಗಾತಿ ನೀನೇ. ದೇವರು ನಿನ್ನ ಮುಂದಿನ ಜೀವನವನ್ನು ಸುಖಮಯವಾಗಿರಿಸಲಿ,” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ರಹಾನೆಯ ಸೇವೆಯನ್ನು ಸ್ಮರಿಸಿ ವಿಶೇಷ ಸಂದೇಶ ಪ್ರಕಟಿಸಿದೆ. “ಒಂದು ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ಇಂದು ತೆರೆ ಬಿದ್ದಿದೆ. ಭಾರತೀಯ ಕ್ರಿಕೆಟ್‌ಗೆ ನೀಡಿದ ಅಮೂಲ್ಯ ಸೇವೆ ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಉಳಿಯುವ ಅನೇಕ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು. ನಿಮ್ಮ ಮುಂದಿನ ಜೀವನಕ್ಕೆ ಹಾರ್ದಿಕ ಶುಭಾಶಯಗಳು,” ಎಂದು ಬಿಸಿಸಿಐ ತಿಳಿಸಿದೆ.

ಅಜಿಂಕ್ಯ ರಹಾನೆ ತಮ್ಮ ಶಾಂತ ಸ್ವಭಾವ, ತಾಳ್ಮೆಯ ಬ್ಯಾಟಿಂಗ್ ಹಾಗೂ ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ವಿಶೇಷವಾಗಿ 2020–21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ ಅವರ ನಾಯಕತ್ವ ಇಂದಿಗೂ ಭಾರತೀಯ ಕ್ರಿಕೆಟ್‌ನ ಸುವರ್ಣ ಕ್ಷಣಗಳಲ್ಲಿ ಒಂದಾಗಿ ನೆನಪಾಗುತ್ತದೆ. ಅವರ ನಿವೃತ್ತಿಯೊಂದಿಗೆ ಭಾರತೀಯ ಕ್ರಿಕೆಟ್‌ನ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಯುಗವೊಂದು ಅಧಿಕೃತವಾಗಿ ಅಂತ್ಯಗೊಂಡಿದೆ.

ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

“ಕಾವೇರಿ ನೀರಿನ ವಿಚಾರದಲ್ಲಿ ನಿತ್ಯ 3500 ಕ್ಯೂಸೆಕ್ ನೀರುನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ ಇಂತಹ ಸಂಕಷ್ಟ ಕಾಲದಲ್ಲಿ ಅನೇಕ ತೀರ್ಮಾನ ಬಂದಿವೆ. 2016, 2017, 2018, 2023ರಲ್ಲಿ ಇಂತಹ ಆದೇಶ ಬಂದಿವೆ.

ಕಳೆದ 3 ವರ್ಷಗಳಲ್ಲಿ ಮಳೆ ಬಹಳ ಸಂತುಷ್ಟಿಯಾಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೆವು. ಕಳೆದ ವರ್ಷ ಉತ್ತಮ ಮಳೆ ಬೆಳೆ ಆಗಿತ್ತು. ಕಳೆದ ವರ್ಷ 177 ಟಿಎಂಸಿ ಬದಲಾಗಿ 400ಕ್ಕೂ ಹೆಚ್ಚು ಟಿಎಂಸಿ ನೀರು ಹರಿಸಲಾಗಿತ್ತು. ಅನೇಕ ಪ್ರಮಾಣದ ನೀರು ಸಮುದ್ರವನ್ನು ಸೇರಿದೆ” ಎಂದು ತಿಳಿಸಿದರು.

“ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರನ್ನು ಹರಿಸಲು ನೀಡಿರುವ ಆದೇಶದ ವಿರುದ್ಧ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ನಮ್ಮ ವಿರೋಧ ಪಕ್ಷಗಳ ಸ್ನೇಹಿತರು, ಅಧಿಕಾರಿಗಳು ಹೋಗಿಲ್ಲ ಎಂದು ಆರೋಪ ಮಾಡಿದರು.

ನಾನು ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಆದರೆ ರಾಜ್ಯದ ಜನರಿಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಾಗಿದೆ. ನಿನ್ನೆ ಸಿಡಬ್ಲ್ಯೂಎಂಎ ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದ ಸಲಹೆಗಾರರನ್ನೇ ನಾವು ಮುಂದುವರಿಸಿದ್ದೇವೆ. ಅವರು ಸಭೆಯಲ್ಲಿ ಭಾಗವಹಿಸಿದ್ದರು” ಎಂದರು.

“ನೀರು ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿ, ನೀರು ಬಿಡುವ ತೀರ್ಮಾನವನ್ನು ಮುಂದಕ್ಕೆ ಹಾಕಿ, ನಮಗೆ ಕಾಲಾವಕಾಶ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ತಮಿಳುನಾಡಿನವರು ನಿಮಗೆ ಹೆಚ್ಚಿನ ನೀರು ಬರುತ್ತಿದೆ. ನೀವು ಹೆಚ್ಚಿನ ನೀರು ಬಿಡಬೇಕು ಎಂದು ವಾದ ಮಂಡಿಸಿದರು.

ನಮ್ಮ ಅಧಿಕಾರಿಗಳು ನಮಗೆ ಸಮಾಧಾನ ತರುವಂತೆ ಸಿಡಬ್ಲ್ಯೂಎಂಎ ಮುಂದೆ ವಾದ ಮಂಡಿಸಿದರು. ನಮ್ಮ ಅಡ್ವೋಕೇಟ್ ಜನರಲ್, ಎಸಿಎಸ್ ಅವರು ವಾದ ಮಂಡಿಸಿದ್ದಾರೆ. ಆದರೆ ಪ್ರಾಧಿಕಾರ, ನಿಮಗೆ ಒಳಹರಿವು ಇದ್ದು, ನಿಮಗೆ ಬಿಡಲು ಹೇಳಿರುವ ನೀರು ಕಡಿಮೆ ಪ್ರಮಾಣದ್ದಾಗಿದೆ ಎಂದು ಹೇಳಿದ್ದಾರೆ” ಎಂದರು.

ರಾಜ್ಯದಲ್ಲಿ ಒಳಹರಿವು ಚೇತರಿಕೆ, ಸಮಾಧಾನಕರ ವಿಚಾರ

“ಕಾವೇರಿ ಪ್ರಾಧಿಕಾರದವರಿಗೆ, ತಮಿಳುನಾಡಿನವರಿಗೆ, ಮಾಧ್ಯಮವರರು ಸೇರಿದಂತೆ ಎಲ್ಲರಿಗೂ ಪ್ರತಿ ಅಣೆಕಟ್ಟಿನ ಒಳಹರಿವಿನ ಮಾಹಿತಿ ಇದ್ದು, ಹಾರಂಗಿ ಜಲಾಶಯ 95%, ಕಬಿನಿ 83%, ಕೆಆರ್ಎಸ್ 36%, ಹೇಮಾವತಿಯಲ್ಲಿ 67% ನೀರು ಶೇಖರಣೆಯಾಗಿದೆ. ಈ ಮಾಹಿತಿಯನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ.

ಪ್ರತಿನಿತ್ಯ 3,500 ಕ್ಯೂಸೆಕ್ ನಂತೆ 15 ದಿನಕ್ಕೆ 4.5 ಟಿಎಂಸಿ ನೀರು ಹರಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಳಹರಿವು ಚೇತರಿಕೆ ಕಂಡಿರುವುದು ಸಮಾಧಾನಕರ ವಿಚಾರ. ನಮ್ಮ ಅಣೆಕಟ್ಟುಗಳ ಒಳಹರಿವು 25 ಸಾವಿರ ಕ್ಯೂಸೆಕ್ ನಷ್ಟಿದ್ದು, ಅದರಲ್ಲಿ 3,500 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದಾರೆ. ಈ ಮಾಹಿತಿಗಳನ್ನು ಸಮಿತಿ ಹಾಗೂ ಪ್ರಾಧಿಕಾರ ಎರಡೂ ತನ್ನ ಆದೇಶದಲ್ಲಿ ಸೂಚಿಸಿವೆ.

ಆದರೂ ನಮ್ಮ ರಾಜ್ಯದ ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ನಾವು ನಮ್ಮ ರಾಜ್ಯದ ರೈತರ ರಕ್ಷಣೆ ಮಾಡುತ್ತೇವೆ. ನಾವು ಶಾಸಕರನ್ನು ಕರೆದು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸುವ ರಕ್ಷಣೆ ನೀಡಿದ್ದೇವೆ. ಬಂಗಾರಪ್ಪನವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ನಾವು ರಾಜ್ಯದ ಹಿತಕ್ಕೆ ಅಗತ್ಯ ರಕ್ಷಣೆ ನೀಡಲು ಬದ್ಧತೆ ತೋರಿದ್ದೇವೆ. ಈಗಲೂ ನಾವು ನಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇವೆ” ಎಂದರು.

ಕೇಂದ್ರ ಸಚಿವರು ಹಾಗೂ ಸಂಸದರಿಂದ ಉತ್ತಮ ಸಹಕಾರ:

“ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ಅನೇಕ ಮಾರ್ಗದರ್ಶನ ನೀಡಿದ್ದಾರೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಕೇಂದ್ರ ಸಂಸದರು ಹಾಗೂ ಕೇಂದ್ರ ಸಚಿವರ ಸರ್ವಪಕ್ಷ ಸಭೆ ಮಾಡಿದ್ದೆ. ಎಲ್ಲಾ ಪಕ್ಷದ ಸಂಸದರು ಬಹಳ ಗೌರವದಿಂದ ರಾಜ್ಯದ ನೆಲ, ಜಲ ವಿಚಾರದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದಾರೆ.

3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರು ಭಾಗವಹಿಸಿದ್ದರು. ನಾನು ಪ್ರಹ್ಲಾದ್ ಜೋಷಿ ಹಾಗೂ ಸಂಸದರ ಜತೆ ಚರ್ಚೆ ಮಾಡಿದ್ದೆ. ನಮ್ಮ ಮೇಲ್ಮನವಿ ಅರ್ಜಿಯನ್ನು ನಾವು ಜೋಷಿ ಅವರು, ಸೋಮಣ್ಣ ಹಾಗೂ ಶೋಭ ಕರಂದ್ಲಾಜೆ ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರು ಕೂಡ ತಮ್ಮ ಪ್ರಯತ್ನ ಮಾಡಿದ್ದಾರೆ. ಅವರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ” ಎಂದರು.

“ತಮಿಳುನಾಡಿನವರು 9.94 ಟಿಎಂಸಿ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ.

ಕಾನೂನು ತಂಡದ ಜೊತೆಗೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ”

100 ವರ್ಷಗಳಲ್ಲಿ ಈ ವರ್ಷವೇ ತಮಿಳುನಾಡಿಗೆ ಅತಿ ಕಡಿಮೆ ನೀರು (ಜುಲೈ ಅಂತ್ಯದ ವೇಳೆಗೆ) ಬಿಟ್ಟಿದ್ದೇವೆ

“ನಾನು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು, ರಾಜ್ಯದ ಹಿತಕ್ಕೆ ಅವರ ಸಲಹೆ ಪಡೆಯುತ್ತೇವೆ. ಸರ್ವಪಕ್ಷ ಸಭೆಯಲ್ಲಿ ಅವರು ಬರಲಿ, ಅವರ ಸಲಹೆ ನೀಡಲಿ. ರಾಜ್ಯದ ಹಿತಕ್ಕೆ ನಾವು ಬದ್ಧರಾಗೋಣ. ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ 0.6 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಹರಿಸಿದ್ದು, ಕಳೆದ 100 ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಲಾಗಿರುವ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ.

ಇದುವರೆಗೂ ಹರಿದಿರುವ ನೀರು ಅಣೆಕಟ್ಟುಗಳಿಂದ ಬಿಟ್ಟಿರುವ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ಹರಿದು ಹೋಗಿರುವ ನೀರಿನ ಪ್ರಮಾಣ. ಇಷ್ಟಾದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 13ರಂದು ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾವೇ ನಿಮ್ಮ ಪರವಾಗಿದ್ದು, ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ” ಎಂದು ತಿಳಿಸಿದರು.

ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ

“ಬಂದ್, ಪ್ರತಿಭಟನೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ನ್ಯಾಯಾಲಯದ ತೀರ್ಮಾನಗಳಿದ್ದು, ಈ ಬಂದ್ ಮಾಡಬಾರದ ಎಂದು ಸರ್ಕಾರದ ಪರವಾಗಿ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದ ಹಿತದ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರು ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನಿಮ್ಮ ಕಾಲದಲ್ಲಿ ನೀವು ಅನೇಕ ತೀರ್ಮಾನ ಮಾಡಿದ್ದೀರಿ. ನಾಗೇಗೌಡರು, ಜೆ ಹೆಚ್ ಪಟೇಲರು ನೀರಾವರಿ ಮಂತ್ರಿಯಾಗಿದ್ದಾಗ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅನೇಕ ತೀರ್ಮಾನ ಮಾಡಲಾಗಿತ್ತು, ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ, ಅದರ ಅಗತ್ಯವೂ ಇಲ್ಲ” ಎಂದು ತಿಳಿಸಿದರು.

ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಆರೋಪ: ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಮಾಜಿ ಸಚಿವ ಎ. ಮಂಜು ಆಗ್ರಹ

ಬೆಂಗಳೂರು: ಪಶುವೈದ್ಯರ ನೇಮಕಾತಿ ವಿಚಾರದಲ್ಲಿ ಅಕ್ರಮ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಪರೀಕ್ಷೆ ಇಲ್ಲದೆ ಮೆರಿಟ್ ಮತ್ತು ರೋಸ್ಟರ್ ಆಧಾರದಲ್ಲಿ ಪಶುವೈದ್ಯರನ್ನು ನೇರವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎ. ಮಂಜು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಅಕ್ರಮ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಪಶುವೈದ್ಯರ ಹುದ್ದೆಗೆ 80 ಲಕ್ಷ ರೂಪಾಯಿ ಹಣ ಪಡೆದು ಕೆಲಸ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಹೇಳಿದ್ದಾರೆ.

2017ರ ಸೆಪ್ಟೆಂಬರ್‌ನಲ್ಲಿ ತಾವು ಸಚಿವರಾಗಿದ್ದ ಸಂದರ್ಭದಲ್ಲಿ 650 ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ ನೀಡಲಾಗಿತ್ತು. ಮೀಸಲಾತಿ ನಿಯಮದಂತೆ ನೇರ ನೇಮಕಾತಿ ನಡೆಸಿ ರೈತರ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ, ಈಗಿನ ಸರ್ಕಾರ ಪಶುವೈದ್ಯರ ನೇಮಕಾತಿಯನ್ನು ನೇರವಾಗಿ ಏಕೆ ಮಾಡಿಲ್ಲ ಎಂಬ ಪ್ರಶ್ನೆ ಮೂಡುತ್ತಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ರೋಸ್ಟರ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೆರಿಟ್ ಇರುವವರಿಗೆ ನೇರ ನೇಮಕಾತಿ ಮಾಡದೆ ಇದ್ದರೆ, ಇದರ ಹಿಂದೆ ಬೇರೆ ಉದ್ದೇಶವಿದೆ ಎಂಬ ಅನುಮಾನ ಮೂಡುತ್ತದೆ. ಎಲ್ಲಾ ವೆಟರ್ನರಿ ವೈದ್ಯರಿಗೆ ಅಗತ್ಯ ಅವಕಾಶ ನೀಡಲಾಗಿತ್ತು. ಹೀಗಾಗಿ ಕೂಡಲೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದೇ ವೇಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿಯೂ ಮಾತನಾಡಿದ ಎ. ಮಂಜು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾವೇರಿ ಕೊಳ್ಳದ ಪ್ರದೇಶದಲ್ಲಿ ನೀರಿನ ಪ್ರಮಾಣ ಶೇ.60ರಷ್ಟು ಕಡಿಮೆಯಾಗಿದೆ. ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕಿಯಾರಾ ಜನ್ಮದಿನಕ್ಕೆ ‘ಟಾಕ್ಸಿಕ್’ ಹೊಸ ಚಿತ್ರ ಬಿಡುಗಡೆ: ‘ನಾಡಿಯಾ’ ಲುಕ್‌ಗೆ ಸಿನಿಪ್ರಿಯರು ಫಿದಾ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಮತ್ತೊಮ್ಮೆ ಸುದ್ದಿಯಲ್ಲಿದೆ. ಬಾಲಿವುಡ್ ಸ್ಟಾರ್ ನಟಿ ಕಿಯಾರಾ ಅಡ್ವಾಣಿ ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಭಿತ್ತಿಚಿತ್ರ ಸಿನಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಚಿತ್ರದಲ್ಲಿ ‘ನಾಡಿಯಾ’ ಪಾತ್ರ ನಿರ್ವಹಿಸುತ್ತಿರುವ ಕಿಯಾರಾ ಅಡ್ವಾಣಿ ಅವರ ಹೊಸ ರೂಪ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಕೆಂಪು ಬಣ್ಣದ ವೇಷಭೂಷಣ, ಆಕರ್ಷಕ ಮೇಕಪ್ ಹಾಗೂ ಗಂಭೀರ ಭಾವಭಂಗಿಯೊಂದಿಗೆ ಕಾಣಿಸಿಕೊಂಡಿರುವ ಕಿಯಾರಾ ಅವರ ಈ ಲುಕ್ ಚಿತ್ರದ ಪಾತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಹಿಂದೆ ಬಿಡುಗಡೆಯಾದ ‘ತಬಾಹಿ’ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದವು. ಚಿತ್ರದಲ್ಲಿ ಕಿಯಾರಾ ಸರ್ಕಸ್‌ನ ಪ್ರಮುಖ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದು, ಕಥೆಯ ಕೇಂದ್ರಬಿಂದುವಾಗಿರುವ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.

ಒಂದು ಸಂದರ್ಶನದಲ್ಲಿ ಮಾತನಾಡಿದ್ದ ಕಿಯಾರಾ, ‘ಟಾಕ್ಸಿಕ್’ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವಿಶಿಷ್ಟ ಸಿನಿಮಾ ಎಂದು ಹೇಳಿದ್ದರು. ಯಶ್ ಅಭಿನಯದ ಮಾಸ್ ಸಿನಿಮಾವನ್ನು ಮಹಿಳಾ ಪ್ರಧಾನ ಕಥೆಯೆಂದು ಅವರು ವಿವರಿಸಿದ್ದರಿಂದ ಚಿತ್ರದ ಕಥಾಹಂದರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ. ಯಶ್ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರಣದಿಂದಲೇ ‘ಟಾಕ್ಸಿಕ್’ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ರಾವಣನ ಎದುರು ರಾಧಿಕಾ ಪಂಡಿತ್ ಪೋಸ್: ಯಶ್ ಅಭಿಮಾನಿಗಳಲ್ಲಿ ಹೊಸ ಚರ್ಚೆ

ಬೆಂಗಳೂರು: ‘ರಾಮಾಯಣ’ ಟ್ರೇಲರ್ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ, ನಟಿ ರಾಧಿಕಾ ಪಂಡಿತ್ ಅವರ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸುತ್ತಿರುವ ಸಮಯದಲ್ಲೇ ರಾವಣನ ಬೃಹತ್ ಪ್ರತಿಮೆಯ ಮುಂದೆ ತೆಗೆಸಿಕೊಂಡ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ.

ಸಮುದ್ರ ತೀರದಲ್ಲಿರುವ ದಶಮುಖ ರಾವಣನ ಪ್ರತಿಮೆಯ ಎದುರು ಸ್ಟೈಲಿಷ್ ಆಗಿ ನಿಂತಿರುವ ಫೋಟೋಗೆ “ಗೊತ್ತಿರೋರಿಗೆ ಮಾತ್ರ ಗೊತ್ತು” ಎಂದು ಕ್ಯಾಪ್ಶನ್ ನೀಡಿರುವುದು ಅಭಿಮಾನಿಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

‘ರಾಮಾಯಣ’ ಟ್ರೇಲರ್‌ನಲ್ಲಿ ಯಶ್ ಅವರ ರಾವಣನ ಲುಕ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಪೋಸ್ಟ್‌ನ್ನು ಅಭಿಮಾನಿಗಳು ಚಿತ್ರದ ಜೊತೆ ಸಂಪರ್ಕಿಸಿ ವ್ಯಾಖ್ಯಾನಿಸುತ್ತಿದ್ದಾರೆ. “ಇವರೇ ನಮ್ಮ ರಾವಣನ ಮಂಡೋದರಿ”, “ರಾವಣನಿಗೆ ಪರ್ಫೆಕ್ಟ್ ಸಪೋರ್ಟ್” ಎಂಬ ಕಾಮೆಂಟ್‌ಗಳು ವೈರಲ್ ಆಗಿವೆ.

ಬಿಳಿ ಬಣ್ಣದ ಲಾಂಗ್ ಫ್ರಾಕ್ ಹಾಗೂ ಕಪ್ಪು ಕನ್ನಡಕದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದು, ಅವರ ಸ್ಟೈಲ್ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಟ್ರೇಲರ್‌ನಿಂದ ಈಗಾಗಲೇ ಭಾರೀ ಹೈಪ್ ಸೃಷ್ಟಿಸಿರುವ ‘ರಾಮಾಯಣ’ ಚಿತ್ರದ ಚರ್ಚೆಯನ್ನು ರಾಧಿಕಾ ಅವರ ಈ ಪೋಸ್ಟ್ ಮತ್ತಷ್ಟು ಉತ್ತುಂಗಕ್ಕೇರಿಸಿದೆ.

‘ಇದು ಸೂಕ್ತ ಸಮಯವಲ್ಲ’: ತಮಿಳುನಾಡು ಸಿಎಂ ವಿಜಯ್ ಭೇಟಿ ಮುಂದೂಡಲು ಡಿಕೆ ಶಿವಕುಮಾರ್ ಮನವಿ

ಬೆಂಗಳೂರು: ಆಗಸ್ಟ್‌ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕರ್ನಾಟಕ ಭೇಟಿಯನ್ನು ಮುಂದೂಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ನಿರ್ಮಾಣವಾಗಿರುವ ಸೂಕ್ಷ್ಮ ಪರಿಸ್ಥಿತಿಯಲ್ಲಿ ಈ ಭೇಟಿ ಸೂಕ್ತವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಈ ವಾತಾವರಣದಲ್ಲಿ ವಿಜಯ್ ಅವರನ್ನು ಕರೆಸುವುದು ಸರಿಯಲ್ಲ. ನಾನು ಆಹ್ವಾನ ನೀಡುವುದು, ಕೆಲವರು ಪ್ರತಿಭಟನೆ ಅಥವಾ ಮುತ್ತಿಗೆ ಹಾಕುವುದು ಯಾವುದೇ ದೃಷ್ಟಿಯಿಂದಲೂ ಸಮಂಜಸವಲ್ಲ. ಈ ವಿಚಾರದಲ್ಲಿ ಕೆಲವರು ನಡೆದುಕೊಳ್ಳುತ್ತಿರುವ ರೀತಿ ನನಗೆ ಸಮಾಧಾನ ತರುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಸ್ವತಃ ಕರ್ನಾಟಕಕ್ಕೆ ಬಂದು ಸೌಹಾರ್ದಯುತವಾಗಿ ಚರ್ಚೆ ನಡೆಸಲು ಆಸಕ್ತಿ ತೋರಿದ್ದರು ಎಂದು ತಿಳಿಸಿದ ಅವರು, ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೂ ಮಾತುಕತೆ ನಡೆಸಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ ಎಂದರು. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿ, ಆಗಸ್ಟ್‌ 3ರ ನಿಗದಿತ ಭೇಟಿಯನ್ನು ಮುಂದೂಡುವಂತೆ ವಿಜಯ್ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಿಡಬ್ಲ್ಯೂಎಂಎ 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ. ಆದರೆ ಭಾನುವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ರಾಜಕೀಯ ಅಖಾಡಕ್ಕೆ? ವಕೀಲ ಸುನೀಲ್ ಹೇಳಿದ್ದೇನು? 

ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಹೈಕೋರ್ಟ್‌ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವುದರ ಜೊತೆಗೆ, ಕೆಳಹಂತದ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ. ಬಸವರಾಜ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಅವರಿಗೆ 5 ಲಕ್ಷ ರೂಪಾಯಿ ಬಾಂಡ್ ಹಾಗೂ ಶ್ಯೂರಿಟಿ ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ವಿನಯ್ ಕುಲಕರ್ಣಿ ಪರ ವಕೀಲ ಸುನೀಲ್ ಮಾತನಾಡಿ, ಇದು ಕಾನೂನು ಹೋರಾಟದ ಒಂದು ಮಧ್ಯಂತರ ಜಯ ಎಂದು ಹೇಳಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೂ ವಿನಯ್ ಕುಲಕರ್ಣಿಗೂ ಯಾವುದೇ ಸಂಬಂಧವಿಲ್ಲ. ಸಿಬಿಐ ತನಿಖೆಯ ಬಳಿಕ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದು ತಮ್ಮ ಪ್ರಮುಖ ವಾದವಾಗಿತ್ತು ಎಂದು ತಿಳಿಸಿದ್ದಾರೆ.

ಸೆಷನ್ಸ್ ನ್ಯಾಯಾಲಯವು ವಿನಯ್ ಕುಲಕರ್ಣಿಗೆ ಶಿಕ್ಷೆ ವಿಧಿಸುವಾಗ ಅಪ್ರೂವರ್ ಸಾಕ್ಷಿಯ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಅಲ್ಲದೇ, ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಕೇವಲ ಸಿಬಿಐ ಚಾರ್ಜ್‌ಶೀಟ್ ಆಧರಿಸಿ ತೀರ್ಪು ನೀಡಲಾಗಿದೆ ಎಂದು ವಕೀಲರು ವಾದಿಸಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್, ವಿನಯ್ ಕುಲಕರ್ಣಿ ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಆರೋಪಿಗಳಿದ್ದು, ಚನ್ನಕೇಶವ ಟಿಂಗರಿಕರ್ ಸೇರಿದಂತೆ ಕೆಲ ಆರೋಪಿಗಳಿಗೆ ಜಾಮೀನು ದೊರೆತಿದೆ. ಆದರೆ ಎಲ್ಲ ಆರೋಪಿಗಳಿಗೂ ಇನ್ನೂ ಜಾಮೀನು ಮಂಜೂರಾಗಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.

ಇನ್ನು ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಸ್ಪೀಕರ್ ಆದೇಶದಲ್ಲಿ ಹೈಕೋರ್ಟ್‌ನ ಅಂತಿಮ ತೀರ್ಪಿನ ಮೇಲೆ ಅನರ್ಹತೆ ನಿರ್ಧಾರವಾಗಲಿದೆ ಎಂದು ತಿಳಿಸಲಾಗಿತ್ತು. ಇದೀಗ ಹೈಕೋರ್ಟ್ ಶಿಕ್ಷೆಗೆ ತಡೆ ನೀಡಿರುವ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ಅಗತ್ಯ ಶ್ಯೂರಿಟಿ ಸಲ್ಲಿಸಿದ ಬಳಿಕ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.