Home Blog Page 5

Expiry Date ಗಮನಿಸಿ: ಹಳೆಯ LPG ಸಿಲಿಂಡರ್ ಬಳಕೆ ಅಪಾಯಕಾರಿ, ಇಷ್ಟು ದಿನದೊಳಗೆ ಬಳಸಿ ಮುಗಿಸಬೇಕು!

0

ಮನೆ ಅಥವಾ ವಾಣಿಜ್ಯ ಬಳಕೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯವಾಗಿದೆ.

ಸಿಲಿಂಡರ್‌ಗಳ ಮೇಲೆ ನೀಡಲಾಗಿರುವ ‘ಎಕ್ಸ್‌ಪೈರಿ ಡೇಟ್’ ಬಗ್ಗೆ ಅರಿವು ಇರದೇ ಇರುವುದರಿಂದ ಕೆಲವೊಮ್ಮೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲ್ಭಾಗದಲ್ಲಿರುವ ಕಬ್ಬಿಣದ ಪಟ್ಟಿಗಳಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳ ಸಂಯೋಜನೆ (ಉದಾ: A-26, B-27, C-28, D-29) ಕಾಣಿಸುತ್ತದೆ. ಇದು ಸಿಲಿಂಡರ್‌ನ ಸುರಕ್ಷತಾ ಪರೀಕ್ಷೆಯ ಅವಧಿಯನ್ನು ಸೂಚಿಸುತ್ತದೆ. ಅಕ್ಷರಗಳು ತಿಂಗಳುಗಳನ್ನು ಸೂಚಿಸುತ್ತವೆ – A (ಜನವರಿ-ಮಾರ್ಚ್), B (ಏಪ್ರಿಲ್-ಜೂನ್), C (ಜುಲೈ-ಸೆಪ್ಟೆಂಬರ್), D (ಅಕ್ಟೋಬರ್-ಡಿಸೆಂಬರ್). ಅಂಕಿಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ A-26 ಎಂದರೆ 2026ರ ಮಾರ್ಚ್ ಒಳಗೆ ಸಿಲಿಂಡರ್ ಪರೀಕ್ಷೆಗೆ ಒಳಪಡಿಸಬೇಕು ಎಂದರ್ಥ. ಈ ಅವಧಿ ಕಳೆದ ಬಳಿಕ ಸಿಲಿಂಡರ್ ಬಳಸುವುದು ಅಪಾಯಕಾರಿ.

ಸಿಲಿಂಡರ್ ಸಂಗ್ರಹಿಸುವಾಗ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಗಾಳಿಯಾಡುವ ಜಾಗದಲ್ಲಿ ಇಡುವುದು ಮುಖ್ಯವಾಗಿದ್ದು, ಮುಚ್ಚಿದ ಕಪಾಟು ಅಥವಾ ನೆಲಮಾಳಿಗೆಯಲ್ಲಿ ಇಡುವುದನ್ನು ತಪ್ಪಿಸಬೇಕು. ಸಿಲಿಂಡರ್ ಅನ್ನು ಸದಾ ನೆಟ್ಟಗೆ ನಿಲ್ಲಿಸಬೇಕು; ಮಲಗಿಸಿ ಇಡುವುದು ಅಪಾಯಕಾರಿಯಾಗಿದೆ. ಜೊತೆಗೆ ಶಾಖದ ಮೂಲಗಳಿಂದ ಕನಿಷ್ಠ ಒಂದು ಮೀಟರ್ ದೂರದಲ್ಲಿರಿಸಬೇಕು. ಸ್ಟಾಕ್‌ನಲ್ಲಿ ಇಡುವ ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಸರಿಯಾಗಿ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಗ್ಯಾಸ್ ಸೋರಿಕೆ ಕಂಡುಬಂದಲ್ಲಿ ತಕ್ಷಣವೇ ರೆಗ್ಯುಲೇಟರ್ ಆಫ್ ಮಾಡಬೇಕು. ಮನೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಬೇಕು. ಯಾವುದೇ ಎಲೆಕ್ಟ್ರಿಕ್ ಸ್ವಿಚ್ ಅಥವಾ ಬೆಂಕಿ ಬಳಸದಿರುವುದು ಅತ್ಯಂತ ಮುಖ್ಯ. ಸಿಲಿಂಡರ್‌ಗೆ ಸುರಕ್ಷತಾ ಕ್ಯಾಪ್ ಹಾಕಿ, ಅದನ್ನು ತೆರೆದ ಜಾಗಕ್ಕೆ ಸ್ಥಳಾಂತರಿಸಬೇಕು.

ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಅನಾಹುತಗಳನ್ನು ತಪ್ಪಿಸಿ, ಗ್ಯಾಸ್ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಬಳಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

 

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಪ್ರಕರಣ: ತೀವ್ರ ಗಾಯಗೊಂಡಿದ್ದ ಇಂಜಿನಿಯರ್ ಸಾವು

ಚಿಕ್ಕಬಳ್ಳಾಪುರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸಮೀಪ ಎರಡು ದಿನಗಳ ಹಿಂದೆ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ನಿತಿನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ನಿತಿನ್ ಚಿಕ್ಕಬಳ್ಳಾಪುರ ನಗರದ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.

ಯುಗಾದಿ ಹಬ್ಬದ ಸಂದರ್ಭದಲ್ಲಿ ಸ್ನೇಹಿತನೊಂದಿಗೆ ಊಟಕ್ಕೆ ತೆರಳಿದ್ದ ನಿತಿನ್, ಬಳಿಕ ವಾಪಸ್ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಮುದ್ದೇನಹಳ್ಳಿ ಬಳಿಯ ವಿಟಿಯು ಕಾಲೇಜು ಸಮೀಪ ಅಪಘಾತ ಸಂಭವಿಸಿದೆ. ನಿತಿನ್ ಹಾಗೂ ಅವನ ಸ್ನೇಹಿತ ಬಜಾಜ್ ಚೇತಕ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ಬಂದ ಟಿವಿಎಸ್ ಬೈಕ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಯಿಂದ ನಿತಿನ್ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಜೊತೆಯಲ್ಲಿದ್ದ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ವಿಚಾರ: ರೈತರಿಗೆ ಗುಡ್ ನ್ಯೂಸ್, ದುರಸ್ತಿ ಕಾರ್ಯ ಆರಂಭ!

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ಒಡೆದ ಪರಿಣಾಮ ಬೆಳೆ ಹಾಗೂ ಜಮೀನು ಹಾನಿಗೊಳಗಾದ ರೈತರಿಗೆ ಸರ್ಕಾರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದು, ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದೆ.

ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕಾಲುವೆ ದುರಸ್ತಿ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ನೀರಿನ ಪೂರೈಕೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಬಸ್ಸಾಪುರ ಗ್ರಾಮದ ಸುತ್ತಮುತ್ತ ರೈತರು ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದ್ದು, ಜಮೀನಿನಲ್ಲಿ ಮರಳು ಮತ್ತು ಕಲ್ಲು ತುಂಬಿಕೊಂಡು ಗದ್ದೆಗಳು ಹಾಳಾಗಿವೆ. ಇದರಿಂದ ಆಕ್ರೋಶಗೊಂಡ ರೈತರು, ಕಾಲುವೆ ದುರಸ್ತಿ ಕಾಮಗಾರಿಗೆ ಬಂದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಪರಿಹಾರ ನೀಡದೇ ಕಾಮಗಾರಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಇದಾದ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎರಡು ದಿನಗಳ ಕಾಲ ಸಭೆ ನಡೆಸಿ ರೈತರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಇಂದಿನಿಂದ ದುರಸ್ತಿ ಕಾರ್ಯಗಳು ಆರಂಭಗೊಂಡಿವೆ. ಸದ್ಯ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್‌ಗಳನ್ನು ಬಳಸಿ ಕಾಲುವೆ ದುರಸ್ತಿ ಮಾಡಲಾಗುತ್ತಿದೆ.

ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆದರು. ಕಳೆದ ನಾಲ್ಕು ತಿಂಗಳಿಂದ ಕಾಲುವೆಯಲ್ಲಿ ಸಮಸ್ಯೆ ಇದ್ದರೂ ಸರಿಯಾದ ನಿರ್ವಹಣೆ ಆಗದ ಕಾರಣ ಈ ಘಟನೆ ಸಂಭವಿಸಿದೆ ಎಂದು ರೈತರು ಸಚಿವರ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಈಗಾಗಲೇ 92 ರೈತರು ಬೆಳೆ ಕಳೆದುಕೊಂಡಿರುವುದು ಗುರುತಿಸಲಾಗಿದ್ದು, ಪರಿಹಾರದ ಮೊತ್ತವನ್ನು ಶೀಘ್ರದಲ್ಲೇ ನಿಗದಿ ಮಾಡಿ ವಿತರಿಸಲಾಗುವುದು ಎಂದು ಹೇಳಿದರು. ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇನ್ನು ಎರಡರಿಂದ ಮೂರು ದಿನಗಳಲ್ಲಿ ತಾತ್ಕಾಲಿಕವಾಗಿ ಕಾಲುವೆ ದುರಸ್ತಿ ಪೂರ್ಣಗೊಳಿಸಿ, ಸುಮಾರು 2 ಸಾವಿರ ಕ್ಯೂಸೆಕ್ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಹರಿಸಲಾಗುವುದು. ಬಳಿಕ ಶಾಶ್ವತ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ, ರೈತರಿಗೆ ಪರಿಹಾರ ಶೀಘ್ರ ನೀಡಬೇಕು ಹಾಗೂ ಕಾಲುವೆ ಶಾಶ್ವತ ದುರಸ್ತಿ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಮುಂದುವರಿದಿದೆ.

ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ನೆರಡು ತಿಂಗಳಲ್ಲಿ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತ!

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದ್ದು, ನಗರದ ಪಿಂಕ್ ಲೈನ್ ಮೆಟ್ರೋ ಸಂಚಾರ ಮೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಪಿಂಕ್ ಲೈನ್ ಮೆಟ್ರೋವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ಆರಂಭಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಆರ್‌ಡಿಎಸ್‌ಓ ವತಿಯಿಂದ ವಿವಿಧ ತಾಂತ್ರಿಕ ತಪಾಸಣೆಗಳು ನಡೆಯಲಿವೆ. ಈ ವೇಳೆ ರೈಲಿನ ವೇಗ ಮತ್ತು ಲೋಡ್ ಟೆಸ್ಟ್, ಟ್ರ್ಯಾಕ್ ಪರಿಶೀಲನೆ, ಸ್ಟೇಷನ್‌ಗಳ ಪರಿಶೀಲನೆ ಹಾಗೂ ಪವರ್ ಸಿಸ್ಟಮ್‌ಗಳ ಚೆಕ್ಕಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಈ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡ ಬಳಿಕ, ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆ ಪಡೆಯಲು ಬಿಎಂಆರ್‌ಸಿಎಲ್ ವರದಿಯನ್ನು ಸಲ್ಲಿಸಲಿದೆ. ಅಂತಿಮ ಹಂತದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷತಾ ಅನುಮೋದನೆ ದೊರೆತ ಬಳಿಕ ಪಿಂಕ್ ಲೈನ್ ಮೆಟ್ರೋವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ.

ಒಟ್ಟು 21.26 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಮೊದಲ ಹಂತವಾಗಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗವನ್ನು ತಾವರೆಕೆರೆ ಮತ್ತು ಕಾಳೇನ ಅಗ್ರಹಾರ ನಡುವೆ ಆರಂಭಿಸಲಾಗುತ್ತದೆ. ಉಳಿದ 13 ಕಿಲೋಮೀಟರ್ ಅಂಡರ್‌ಗ್ರೌಂಡ್ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

ಈ ಮೂಲಕ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆ ಮತ್ತಷ್ಟು ವೇಗ ಪಡೆಯುತ್ತಿದ್ದು, ಸಾರ್ವಜನಿಕರಿಗೆ ಸಂಚಾರ ಸುಲಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ: ಬಿ. ಶ್ರೀ ರಾಮುಲು!

ರಾಯಚೂರು: ರಾಜ್ಯ ಸರ್ಕಾರದ ದುರ್ಬಲ ಆಡಳಿತದಿಂದ ಜನತೆ ಬೇಸತ್ತಿದ್ದು, ಮುಂದಿನ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಯೊಂದು ವಿಷಯಕ್ಕೂ ಹೈಕಮಾಂಡ್‌ನ್ನು ಉಲ್ಲೇಖಿಸುವುದು ಕಾಂಗ್ರೆಸ್ ಪಕ್ಷದ ಆಡಳಿತ ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಆಡಳಿತ ಕ್ರಮಗಳು ಜನಸಾಮಾನ್ಯರಿಗೆ ತೃಪ್ತಿಕರವಾಗಿಲ್ಲ, ಹೆಚ್ಚುತ್ತಿರುವ ತೆರಿಗೆಭಾರದಿಂದ ಜನರಲ್ಲಿ ಅಸಮಾಧಾನ ಮೂಡಿದೆ ಎಂದು ಹೇಳಿದರು.

ಮುಂದಿನ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ಪರ ಜನರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲಿದ್ದು, ಪಕ್ಷ ಬಹುಮತದಿಂದ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇನ್ನೂ ತುಂಗಭದ್ರಾ ಎಡದಂಡೆ ಕಾಲುವೆ ವಿಚಾರದಲ್ಲಿ ಸರ್ಕಾರ ಗಂಭೀರತೆ ತೋರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಕಾಲುವೆ ದುರಸ್ತಿ ಮಾಡಿ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕೆಂದು ಒತ್ತಾಯಿಸಿದರು.

2028ರ ವಿಧಾನಸಭೆ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ತಾನು ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷ ಸಂಘಟನೆ ದೃಷ್ಟಿಯಿಂದ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಪಕ್ಷ ಬಲಪಡಿಸುವ ಜವಾಬ್ದಾರಿ ವರಿಷ್ಠರು ನೀಡಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವನ್ನು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ ಎಂದು ಹೇಳಿದರು.

ಈ ಮೂಲಕ ಉಪಚುನಾವಣೆಗಳ ಮುನ್ನ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ನಾಯಕರು ಪರಸ್ಪರ ವಾಗ್ದಾಳಿ ಮುಂದುವರಿಸಿದ್ದಾರೆ.

ಎಷ್ಟೇ ಕ್ಲೀನ್ ಮಾಡಿದರೂ ಬಾತ್‌ರೂಮ್ ದುರ್ವಾಸನೆ ಹೋಗುತ್ತಿಲ್ಲವೇ? ಇಲ್ಲಿದೆ ಪರ್ಮನಂಟ್ ಸೊಲ್ಯೂಷನ್!

ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಕೆಲವೊಮ್ಮೆ ಸ್ನಾನಗೃಹದಿಂದ ದುರ್ವಾಸನೆ ಬರುವುದು ಸಾಮಾನ್ಯ ಸಮಸ್ಯೆಯಾಗುತ್ತಿದೆ.

ಪ್ರತಿದಿನ ಸ್ವಚ್ಛಗೊಳಿಸಿದರೂ ಸಹ ಈ ವಾಸನೆ ಸಂಪೂರ್ಣವಾಗಿ ಹೋಗದಿರುವುದು ಅನೇಕರಿಗೆ ತೊಂದರೆಯಾಗಿದ್ದು, ಅತಿಥಿಗಳ ಮುಂದೆ ಮುಜುಗರಕ್ಕೂ ಕಾರಣವಾಗುತ್ತದೆ.

ಸಾಮಾನ್ಯವಾಗಿ ಜನರು ಫಿನೈಲ್‌, ರೂಮ್ ಫ್ರೆಶ್ನರ್‌ಗಳಂತಹ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರ ನೀಡುವುದರಲ್ಲೇ ಸೀಮಿತವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಬಾತ್‌ರೂಮ್ ದುರ್ವಾಸನೆಗೆ ಮುಖ್ಯ ಕಾರಣವಾಗಿ ಒಳಚರಂಡಿಯಲ್ಲಿ ಸಂಗ್ರಹವಾಗುವ ಕೂದಲು, ಕಸ, ಸೋಪ್ ಅವಶೇಷಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಗುರುತಿಸಲಾಗಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಪರಿಣಾಮಕಾರಿ ಎಂದು ಸೂಚಿಸಲಾಗಿದೆ. ಅಡುಗೆ ಸೋಡಾ ವಾಸನೆ ನಿವಾರಣೆಗೆ ಸಹಕಾರಿ. ಬಿಳಿ ವಿನೆಗರ್‌ ಬಳಕೆ ಬ್ಯಾಕ್ಟೀರಿಯಾ ನಾಶಮಾಡಿ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

ಇದೇ ವೇಳೆ ಪುದೀನಾ ಮತ್ತು ಲ್ಯಾವೆಂಡರ್ ಎಣ್ಣೆಗಳನ್ನು ಬಳಸಿ ಸ್ನಾನಗೃಹಕ್ಕೆ ಸುಗಂಧ ನೀಡಬಹುದು. ನಿಂಬೆ ರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ವಾಸನೆ ನಿವಾರಣೆಗೆ ಸಹಾಯ ಮಾಡುತ್ತವೆ. ಕಾಫಿ ಬೀಜಗಳನ್ನು ನೀರಿನಲ್ಲಿ ಇಟ್ಟು ಸ್ನಾನಗೃಹದಲ್ಲಿ ಇರಿಸಿದರೆ ಸುಗಂಧ ವಾತಾವರಣ ನಿರ್ಮಾಣವಾಗುತ್ತದೆ.

ಅದೇ ರೀತಿ, ಸ್ನಾನಗೃಹದಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಇದು ಗಾಳಿಯ ಹರಿವನ್ನು ಸುಧಾರಿಸಿ ದುರ್ವಾಸನೆ ತಡೆಯಲು ಸಹಕಾರಿಯಾಗಿದೆ.

ಹೀಗಾಗಿ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸ್ನಾನಗೃಹವನ್ನು ಸದಾ ಸ್ವಚ್ಛ ಮತ್ತು ಸುಗಂಧಯುಕ್ತವಾಗಿರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ಪ್ರೀತಿ, ಮೋದಿ ಜತೆ ಮದುವೆ ಎಂದು ಟೀಕಿಸಿದ್ದ ಖರ್ಗೆಗೆ ಹೆಚ್.ಡಿ. ದೇವೇಗೌಡರ ತಿರುಗೇಟು

0

ನವದೆಹಲಿ: ನಮ್ಮ ಜತೆ ಪ್ರೀತಿ ಹೊಂದಿದ್ದರು, ಮೋದಿ ಅವರ ಜತೆ ಮದುವೆಯಾದರು ಎಂದು ತಮ್ಮ ಬಗ್ಗೆ ಟೀಕೆ ಮಾಡಿದ್ದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯಲ್ಲಿಯೇ ಸೋಮವಾರ ತಿರುಗೇಟು ನೀಡಿದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ದೇವೇಗೌಡರು, ನಾನು ಸದನದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ಖರ್ಗೆ ಅವರು ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ. ಅವರು ನಾನೇನೂ ಅವರಿಗೆ, ಅವರ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಅರ್ಥ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ, ನಿಜವಾಗಿಯೂ ಕಾಂಗ್ರೆಸ್ ಪಕ್ಷದಿಂದ ದ್ರೋಹ ಆಗಿರುವುದು ನಮಗೆ, ನಮ್ಮ ಪಕ್ಷಕ್ಕೆ ಎಂದು ಎಂದು ಹರಿಹಾಯ್ದರು.

ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷಕ್ಕೆ ಒಂದಲ್ಲ, ಎರಡಲ್ಲ.. ಅನೇಕ ಬಾರಿ ದ್ರೋಹ ಮಾಡಿದೆ. ಅದರ ಬಗ್ಗೆ ನಾನು ಸಾಕ್ಷಿ ಸಹಿತವಾಗಿ ಮಾತನಾಡಬಲ್ಲೆ. ಅದೆಲ್ಲವನ್ನು ಮರೆಮಾಚಲು ಖರ್ಗೆ ಅವರು ನನ್ನ ವಿಷಯ ಎಳೆದು ತಂದಿದ್ದಾರೆ. ಅದಕ್ಕೆ ನಾನು ಉತ್ತರ ನೀಡಬೇಕಿದೆ ಎಂದು ದೇವೇಗೌಡರು ಹೇಳಿದರು.

ಈ ಸಂದರ್ಭದಲ್ಲಿ ತಮ್ಮ ಕಾಲದ ಕರ್ನಾಟಕ ರಾಜ್ಯದ ರಾಜಕಾರಣವನ್ನು ಮೆಲುಕು ಹಾಕಿದ ಮಾಜಿ ಪ್ರಧಾನಿಗಳು; ನಿಜಲಿಂಗಪ್ಪ, ದೇವರಾಜ ಅರಸು, ಬಂಗಾರಪ್ಪ ಅವರಿಗೆ ಏನಾಯಿತು ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ಅವರು ಹೇಗೆ ಅಧಿಕಾರ ಕಳೆದುಕೊಂಡರು ಎಂಬುದನ್ನು ಖರ್ಗೆ ಅವರು ಹೇಳಬೇಕಾಗುತ್ತದೆ. ಅವರೆಲ್ಲರೂ ಅಧಿಕಾರ ಕಳೆದುಕೊಂಡಿದ್ದಕ್ಕೆ ನಾವು ಸಾಕ್ಷಿಗಳಾಗಿದ್ದೆವು ಎಂದು ಟೀಕಾ ಪ್ರಹಾರ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಒಳ್ಳೆಯ ವ್ಯಕ್ತಿ. ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಬೇಕೆಂದು ನಾವೆಲ್ಲರೂ ಆಶಿಸಿದ್ದೆವು. ಆದರೆ, ಅವರ ಸ್ವಂತ ಪಕ್ಷವೇ ಅವರನ್ನು ಸಿಎಂ ಆಗಲು ಬಿಡಲಿಲ್ಲ ಎಂಬ ಸಂಗತಿಯನ್ನು ಮಾಜಿ ಪ್ರಧಾನಿಗಳು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ನಿಜ ಹೇಳಬೇಕು ಎಂದರೆ, ನನ್ನ ಮತ್ತು ನರೇಂದ್ರ ಮೋದಿ ಅವರ ನಡುವಿನ ಮೈತ್ರಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಶುರುವಾಗಿದ್ದಲ್ಲ. 2014ರಲ್ಲಿಯೇ ಆರಂಭವಾಯಿತು. ನಾನು ಅವತ್ತಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರ ವಿರುದ್ಧ ಪ್ರಚಾರ ನಡೆಸಿದ್ದೆ.

ಅವರ ಬಗ್ಗೆ ಅತ್ಯಂತ ಕಟುವಾಗಿ ಮಾತನಾಡಿದ್ದೆ. ಅವರು ಅಧಿಕಾರಕ್ಕೆ ಬಂದರೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದೆ. ಬಳಿಕ ಅವರು ಗೆದ್ದ ನಂತರ ನಾನು ನಿಜವಾಗಿಯೂ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದೆ. ಆದರೆ, ಮೋದಿ ಅವರು ಹಾಗೆ ಮಾಡಬೇಡಿ ಎಂದು ತಡೆದರು. ನಾನು ಅವತ್ತಿನ ಅವರ ನಡಳಿವಳಿಕೆಯಿಂದ ಪ್ರಭಾವಿತನಾದೆ ಎಂದು ದೇವೇಗೌಡರು ಹೇಳಿದರು.

ಆ ಘಟನೆ ನಡೆದ ನಂತರ ನಾನು ಅವರ ಮೈತ್ರಿಯಲ್ಲಿ ಇದ್ದೇನೆ. ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಸದೃಢ ನಾಯಕತ್ವ ನೀಡಿದ್ದಾರೆ. ಜನರು ಕೂಡ ಅವರ ಮೇಲೆ ಅಪರಿಮಿತ ವಿಶ್ವಾಸ ಇರಿಸಿ ಸತತವಾಗಿ ಆಯ್ಕೆ ಮಾಡುತ್ತಾ ಬರುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಪ್ರಧಾನಿಗಳು ಒತ್ತಿ ಹೇಳಿದರು.

2018ರಲ್ಲಿ ಕಾಂಗ್ರೆಸ್ ಪಕ್ಷದ ಜತೆ ನಮ್ಮ ಪಕ್ಷ ಮೈತ್ರಿ ಹೊಂದಿದ್ದ ಕಾರಣಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಸಿಎಂ ಆಗದಂತೆ ತಡೆಯಿತು. ಆಗ ಮತ್ತೆ ಮನೆ ಬಾಗಿಲಿಗೆ ಬಂದು ಮೈತ್ರಿ ಹಸ್ತ ಚಾಚಿದ ಕಾಂಗ್ರೆಸ್ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವಂತೆ ಒತ್ತಡ ಹೇರಿತು. ಮತ್ತೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ನಮಗೆ ದ್ರೋಹ ಬಗೆಯಿತು. ಈ ಎಲ್ಲಾ ವಿವರಗಳು ಖರ್ಗೆ ಅವರಿಗೆ ಗೊತ್ತಿವೆ ಎಂದು ದೇವೇಗೌಡರು ಹೇಳಿದರು.

ಈ ಸದನದಲ್ಲಿ ಖರ್ಗೆ ಅವರು ಮಾತನಾಡಿದ ಸಂದರ್ಭದಲ್ಲಿ ನಾನು ಹಾಜರು ಇರಲಿಲ್ಲ. ಯುಗಾದಿ ಹಬ್ಬ ದಕ್ಷಿಣ ಭಾರತದಲ್ಲಿಯೇ ದೊಡ್ಡ ಹಬ್ಬ, ಹೀಗಾಗಿ ನಾನು ಬೆಂಗಳೂರಿಗೆ ಹೋಗಬೇಕಿತ್ತು. ಆ ಸಂದರ್ಭದಲ್ಲಿ ಖರ್ಗೆ ಅವರು ನಮ್ಮ ಮತ್ತು ಮೋದಿ ಅವರ ನಡುವಿನ ಮೈತ್ರಿ ಬಗ್ಗೆ ಮಾತಾಡಿದ್ದಾರೆ. ಅದಕ್ಕೆ ನಾನು ಉತ್ತರ ಕೊಡಬೇಕಿತ್ತು ಎಂದು ಅವರು ಹೇಳಿದರು.

1962ರಲ್ಲಿ ನಾನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ್ದೆ. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡುವುದಾಗಿ ಹೇಳಿತ್ತು. ನೀಲಂ ಸಂಜೀವರೆಡ್ಡಿ ಅವತ್ತಿನ ಎಐಸಿಸಿ ಅಧ್ಯಕ್ಷರಾಗಿದ್ದರು. ಆದರೆ, ನನಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತು. ನನ್ನ ರಾಜಕೀಯದ ಅಂತ್ಯಕಾಲದಲ್ಲಿ ನಾನಿದ್ದೇನೆ. ಈಗಲೂ ನಾನು ರಾಜ್ಯಸಭೆ ಸದಸ್ಯನಾಗಿ ಇಲ್ಲಿ ಕೂತಿದ್ದೇನೆ. ಇನ್ನೊಂದು ತಿಂಗಳಲ್ಲಿ ಈ ಸದಸ್ಯತ್ವದ ಅವಧಿ ಮುಗಿಯುತ್ತದೆ. ಹೀಗಾಗಿ ನಾನು ಖರ್ಗೆ ಅವರು ಎತ್ತಿರುವ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ಅವರು ಒತ್ತಿ ಹೇಳಿದರು.

ಘೋರ ದುರಂತ: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ಸಾವು!

ಮಂಡ್ಯ: ಈಜಲು ತೆರಳಿದ್ದ ಬಾಲಕ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದ ಶಿವಣ್ಣ ಅವರ ಪುತ್ರ ಪೃಥ್ವಿನ್ (15) ಎಂದು ಗುರುತಿಸಲಾಗಿದೆ. ಆತ ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಭಾನುವಾರ ಶಾಲೆಗೆ ರಜೆ ಇದ್ದ ಕಾರಣ, ಪೃಥ್ವಿನ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಮಧ್ಯಾಹ್ನ ಈಜಲು ತೆರಳಿದ್ದನು. ಆದರೆ ಸಂಜೆವರೆಗೆ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ಆರಂಭಿಸಿದರು.

ತನಿಖೆ ವೇಳೆ ಬಾಲಕ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಮಾಹಿತಿ ಲಭ್ಯವಾಯಿತು. ನಂತರ ನಂದೀಪುರ ಗ್ರಾಮದ ರಾಜೇಗೌಡ ಅವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸೋಮವಾರ ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಇರಾನ್ ಯುದ್ಧ: 5 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್

0

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಹಾರ್ಮುಜ್ ಜಲಸಂಧಿ ವಿಷಯವಾಗಿ ಅಮೆರಿಕ ಮತ್ತು ಇರಾನ್ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದ್ದ ನಡುವೆಯೇ ಈ ನಿರ್ಧಾರ ಹೊರಬಂದಿದೆ.

ಇದಕ್ಕೂ ಮೊದಲು, 48 ಗಂಟೆಗಳೊಳಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದರು. ಡೆಡ್ಲೈನ್ ಒಳಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿತ್ತು.

ಇರಾನ್ ಈ ಬೆದರಿಕೆಗೆ ಮಣಿಯದ ಹಿನ್ನೆಲೆ ಭಾರಿ ದಾಳಿ ನಡೆಯಬಹುದು ಎಂದು ನಿರೀಕ್ಷಿಸಲಾಗುತ್ತಿದ್ದ ಸಮಯದಲ್ಲೇ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದು ಅಚ್ಚರಿ ಮೂಡಿಸಿದೆ.

ಈ ಬೆಳವಣಿಗೆಗಳಿಂದ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ತಗ್ಗುವ ನಿರೀಕ್ಷೆ ಇದ್ದರೂ, ಮುಂದಿನ ಬೆಳವಣಿಗೆಗಳ ಮೇಲೆ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.

ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್: ಮುತ್ತಪ್ಪ ರೈ ಪುತ್ರನಿಗೆ ಬಿಗ್ ರಿಲೀಫ್!

ಬೆಂಗಳೂರು: ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಡ್ರಿಫ್ಟಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಪ್ರಕರಣದಲ್ಲಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಬಳಿಕ ರಿಕ್ಕಿ ರೈ ಬೆಂಗಳೂರಿನ 5ನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಂಬೋರ್ಗಿನಿ ಕಾರು ಶಿವಾಜಿನಗರ ಕಡೆಯಿಂದ ಅತಿ ವೇಗವಾಗಿ ಬಂದು ಅನಿಲ್ ಕುಂಬ್ಳೆ ವೃತ್ತದಲ್ಲಿ ಎರಡು ಸುತ್ತು ತಿರುಗಿದ ನಂತರ ಮತ್ತೆ ವೇಗವಾಗಿ ತೆರಳಿದ ಘಟನೆ ನಡೆದಿದೆ. ಈ ಅಪಾಯಕಾರಿ ಚಾಲನೆಯ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂತರ ವೈರಲ್ ಆಗಿದೆ.

ಪೊಲೀಸರು ಕಾರು ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ರಿಕ್ಕಿ ರೈ ಕಾರು ಚಾಲನೆ ಮಾಡಿರುವ ಸಾಧ್ಯತೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಎಂವಿ 184, 189 ಹಾಗೂ ಬಿಎನ್‌ಎಸ್ 281 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರದೇ ಎಂಬುದು ತಿಳಿದುಬಂದಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಿಂದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಘಟನೆಯ ಸಮಯದಲ್ಲಿ ಕಾರು ಯಾರಿಂದ ಚಾಲನೆ ಮಾಡಲ್ಪಟ್ಟಿತ್ತು ಎಂಬುದರ ಕುರಿತು ಪೊಲೀಸರು ಇನ್ನೂ ತನಿಖೆ ಮುಂದುವರೆಸಿದ್ದಾರೆ.

error: Content is protected !!