Home Blog Page 4

ಭೀಕರ ರಸ್ತೆ ಅಪಘಾತ| ಇಬ್ಬರು ಯುವಕರು ಸ್ಥಳದಲ್ಲೇ ಸಾವು!

ಹುಬ್ಬಳ್ಳಿ:- ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಗೋಕುಲ್ ರಸ್ತೆಯಲ್ಲಿರುವ ಅರ್ಬನ್ ಓಯಸಿಸ್ ಮಾಲ್ ಸಮೀಪ ಜರುಗಿದೆ.

ಫಯಾಜ್ (25) ಮತ್ತು ಮೋಹಿದ್ ಮೃತರು. ರಸ್ತೆ ಮೇಲೆ ಕೇಬಲ್ ವೈರ್ ಹರಿದು ಬಿದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಸಾಗುತ್ತಿದ್ದ ಇಬ್ಬರು ಯುವಕರು, ಆ ವೈರ್‌ಗೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

125 ಜನರಿದ್ದ ವಿಮಾನ ಪತನ: 34 ಜನ ಸಾವು ಶಂಕೆ!? 20ಕ್ಕೂ ಅಧಿಕ ಮಂದಿ ನಾಪತ್ತೆ!

0

ಕೊಲಂಬಿಯಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯಾದ ವಾಯುಪಡೆಯ ವಿಮಾನ ಪತನಗೊಂಡು ಕನಿಷ್ಠ ಮೂವತ್ತನಾಲ್ಕು ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಸೋಮವಾರ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ತೀವ್ರವಾಗಿದೆ. ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ವಿಮಾನವು ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿತ್ತು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲಕ್ಕೆ ಅಪ್ಪಳಿಸಿ ನಂತರ ಅದು ಸ್ಫೋಟಗೊಂಡಿತು ಮತ್ತು ಪರಿಣಾಮವಾಗಿ, ವಿಮಾನವು ಬೆಂಕಿಗೆ ಆಹುತಿಯಾಯಿತು ಎಂದು ವರದಿ ತಿಳಿಸಿದೆ.

ದಾವಣಗೆರೆ ದಕ್ಷಿಣ: ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಮುಸ್ಲಿಮ್ ನಾಯಕರಿಂದ ಪ್ರತಿಭಟನೆ

0

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನಿಯೋಜನೆ ಸಂಬಂಧಾಗಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕಾಂಗ್ರೆಸ್ ವಿರುದ್ಧ ಬಂಡಾಯ ಸೂಚಿಸಿದ್ದಾರೆ. 23 ಮಂದಿ ಮುಸ್ಲಿಮ್ ನಾಯಕರು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸಮುದಾಯದ ಬೇಡಿಕೆಗೆ ಸ್ಪಂದಿಸದೇ, ಎಸ್‌ಎಸ್ ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಿರುವುದು ಈ ಪ್ರಚಂಡ ಪ್ರತಿಭಟನೆಯ ಕಾರಣವಾಗಿದೆ. ನಾಮಪತ್ರ ಸಲ್ಲಿಸಿದ ಮುಖಂಡರು, “ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕೆಂದು ನಾವು ವೀಕ್ಷಿಸುತ್ತಿದ್ದೆವು, ಆದರೆ ನಮ್ಮ ಬೇಡಿಕೆ ನಿರಾಕರಿಸಲಾಗಿದೆ” ಎಂದು ಹೇಳಿದರು.

ಕಟ್ಟುನಿಟ್ಟಿನ ಪ್ರಸ್ತುತಿಯಲ್ಲಿ, 100ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಬೇಕೆಂದು ಮುಸ್ಲಿಮ್ ಸಮುದಾಯ ಕರೆ ನೀಡಿದ್ದು, 23 ಮಂದಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಪ್ರತಿಕ್ರಿಯಿಸಿ, “ಎಲ್ಲಾವತ್ತು ನಾವು ಹಿಂದೆಗೆ ಸರಿಯುವುದಿಲ್ಲ. ಶಿಷ್ಯತ್ವದಲ್ಲಿ ಶ್ರಮಿಸಿದ್ದೇವೆ, ಗುರುಗಳ ಮಾರ್ಗದರ್ಶನದಲ್ಲಿ ಮುಂದೆ ಸಾಗುತ್ತೇವೆ” ಎಂದು ಹೇಳಿದರು.

ಈ ಘಟನೆ ದಾವಣಗೆರೆ ದಕ್ಷಿಣದ ಚುನಾವಣಾ ಹವಾಮಾನದಲ್ಲಿ ಪ್ರಮುಖ ತಾತ್ಸಾರವನ್ನು ಹುಟ್ಟಿಸಿದೆ.

ರೈತರ ಸಾಲ ಮನ್ನಾ ಇಲ್ಲ: ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರದ ಮುಂದೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ರೈತರಿಗೆ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದ ರೈತರಿಗೆ ಹೆಚ್ಚುವರಿ ಪ್ರೋತ್ಸಾಹಕಗಳೂ ಲಭ್ಯವಾಗುತ್ತವೆ ಎಂದು ಸಚಿವೆ ಹೇಳಿದರು.

ಇದಲ್ಲದೆ, ಭದ್ರತೆ ರಹಿತ ಅಲ್ಪಾವಧಿ ಕೃಷಿ ಸಾಲದ ಮಿತಿ 1.60 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಸೌಲಭ್ಯ ಪಶುಸಂಗೋಪನೆ ಸೇರಿದಂತೆ ಕೃಷಿಗೆ ಪೂರಕ ಚಟುವಟಿಕೆಗಳಿಗೂ ಅನ್ವಯವಾಗುತ್ತದೆ ಎಂದು ಅವರು ವಿವರಿಸಿದರು.

ಆರ್‌ಬಿಐನ ಆದ್ಯತಾ ಕ್ಷೇತ್ರದ ಸಾಲ ಮಾರ್ಗಸೂಚಿಗಳ ಪ್ರಕಾರ ಕೃಷಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಸಮರ್ಪಕ ಹಣದ ಹರಿವು ಖಚಿತಪಡಿಸಲಾಗುತ್ತಿದೆ ಎಂದರು.

ಇದರ ಜೊತೆಗೆ, ಬೆಳೆ ವಿಮೆ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರಿಗೆ ನೇರ ಹಣ ವರ್ಗಾವಣೆ ಸೌಲಭ್ಯವೂ ಕಲ್ಪಿಸಲಾಗಿದೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ! ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಬೆಂಗಳೂರು: ನಗರದಲ್ಲಿ ಆಡಳಿತಾತ್ಮಕ ವೈಫಲ್ಯದ ಗಂಭೀರ ಉದಾಹರಣೆ ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಕಿಡಿಕಾರಿದೆ. ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಅದರ ಕುರಿತು ಮಾ.25ರೊಳಗೆ ಹಿಂಬರಹ ಸಲ್ಲಿಸುವಂತೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಡಿ. ಮೆಹಬೂಬ್ ಬಾಷಾ ಎಂಬವರು ಜೀವಂತವಾಗಿದ್ದರೂ, 2025ರ ಏಪ್ರಿಲ್ 23ರಂದು ಬಿಬಿಎಂಪಿ ಚಿಕ್ಕಪೇಟೆ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು ಅವರ ಹೆಸರಿನಲ್ಲಿ ತಾತ್ಕಾಲಿಕ ಮರಣ ಪ್ರಮಾಣ ಪತ್ರ ನೀಡಿರುವುದು ಪ್ರಕರಣದ ಮೂಲವಾಗಿದೆ. ಇದನ್ನು ರದ್ದುಪಡಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆಹೋದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಓ. ಅಶ್ವಿನಿ, “ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅವರ ಆಧಾರ್ ಕಾರ್ಡ್ ಪಡಿತರ ಚೀಟಿಗೆ ಲಿಂಕ್ ಆಗಿರುವುದರಿಂದ, ಇದೀಗ ಅವರಿಗೆ ಪಡಿತರ ಸಿಗುತ್ತಿಲ್ಲ” ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ, “ಮರಣ ಪ್ರಮಾಣ ಪತ್ರವನ್ನು ತಕ್ಷಣ ರದ್ದುಪಡಿಸಿ, ಬುಧವಾರದೊಳಗೆ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದೆ.

ಇದೇ ವೇಳೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಸಂಬಂಧಿತ ಅಧಿಕಾರಿಗಳು, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.

21ನೇ ಶತಮಾನದಲ್ಲೂ ಜಾತಿ ವೈಷಮ್ಯ: ನೀರಿನ ವಿಚಾರಕ್ಕೆ ಗದಗದಲ್ಲಿ ಗುಂಪು ಘರ್ಷಣೆ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ನೀರು ಕುಡಿದ ವಿಷಯಕ್ಕೆ ಎರಡು ಸಮುದಾಯಗಳ ನಡುವೆ ಉದ್ಭವಿಸಿದ ವಿವಾದ ಕಲ್ಲು ತೂರಾಟದ ಮಟ್ಟಕ್ಕೆ ಏರಿದ ಪರಿಣಾಮ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ಪ್ರಕಾರ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ರೈತನ ಜಮೀನಿನಲ್ಲಿ ಯುವಕನೊಬ್ಬ ನೀರು ಕುಡಿದಿದ್ದಾನೆ. ಆತ ಎಸ್ಸಿ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಈ ವಿಷಯ ಊರಿನಲ್ಲೆಲ್ಲ ಹರಡಿ, ಎರಡು ಸಮುದಾಯಗಳ ನಡುವೆ ತೀವ್ರ ವಾಗ್ವಾದ ಶುರುವಾಗಿದೆ.

ಈ ವಾಗ್ವಾದವು ನಂತರ ಗಲಾಟೆಗೆ ತಿರುಗಿ, ಎರಡೂ ಗುಂಪಿನವರು ಪರಸ್ಪರ ಹೊಡೆದಾಟ ನಡೆಸಿ ಕಲ್ಲು ತೂರಾಟಕ್ಕೆ ಮುಂದಾದರು. ಘಟನೆಯ ಪರಿಣಾಮವಾಗಿ ಎರಡೂ ಸಮುದಾಯಗಳ ಸೇರಿ ಸುಮಾರು 15 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

https://www.facebook.com/reel/1249793023467525

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸಾಮಾಜಿಕ ಸಮಾನತೆ ಮತ್ತು ಕಾನೂನುಗಳಿದ್ದರೂ, ಅಲ್ಪ ಕಾರಣಕ್ಕೂ ಜಾತಿ ಆಧಾರಿತ ಸಂಘರ್ಷಗಳು ನಡೆಯುತ್ತಿರುವುದು ಚಿಂತಾಜನಕವಾಗಿದೆ.

ಬೆಲೆ ಏರಿಕೆಯೂ ಅಡ್ಡಿಯಾಗಲಿಲ್ಲ: ಗದಗದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಏರಿಕೆ

0

ಗದಗ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ 2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆ ಪ್ರಮಾಣದ ಆದಾಯ ಹರಿದುಬಂದಿದ್ದು, ಮದ್ಯ ಮಾರಾಟದಿಂದ ಸುಮಾರು ₹400 ಕೋಟಿ ವಹಿವಾಟು ನಡೆದಿದೆ.  ಬರಪೀಡಿತ ಪ್ರದೇಶವಾಗಿದ್ದರೂ ಜಿಲ್ಲೆಯ ಮದ್ಯಪ್ರಿಯರು ಖರೀದಿಯಲ್ಲಿ ಹಿಂದೇಟು ಹಾಕದಿರುವುದು ಗಮನಾರ್ಹವಾಗಿದೆ.

ರಾಜ್ಯ ಸರ್ಕಾರ 2025ರ ಏಪ್ರಿಲ್‌ನಿಂದ ಮದ್ಯ ಹಾಗೂ ಬಿಯರ್ ದರಗಳನ್ನು ಏರಿಸಿದ್ದರೂ, ಇದರಿಂದ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಾಣಿಸಲಿಲ್ಲ. ಬಾಕ್ಸ್‌ಗಳ ಲೆಕ್ಕದಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದಲ್ಲಿ ಸ್ವಲ್ಪ ಇಳಿಕೆ ಕಂಡರೂ, ಬೆಲೆ ಏರಿಕೆಯ ಪರಿಣಾಮ ಒಟ್ಟು ಆದಾಯದಲ್ಲಿ ಏರಿಕೆ ಕಂಡುಬಂದಿದೆ.

2024-25ನೇ ಸಾಲಿನಲ್ಲಿ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) 8.40 ಲಕ್ಷ ಬಾಕ್ಸ್ ಮಾರಾಟವಾಗಿ ₹306.34 ಕೋಟಿ ಆದಾಯ ಬಂದಿತ್ತು. 2025-26ರಲ್ಲಿ ಇದು 8.35 ಲಕ್ಷ ಬಾಕ್ಸ್‌ಗೆ ಇಳಿದಿದ್ದರೂ, ₹340.54 ಕೋಟಿ ವ್ಯವಹಾರ ದಾಖಲಾಗಿದೆ. ಅಂದರೆ, ಬಾಕ್ಸ್‌ಗಳ ಪ್ರಮಾಣ ಕಡಿಮೆಯಾದರೂ ₹35 ಕೋಟಿ ಹೆಚ್ಚುವರಿ ಆದಾಯ ಲಭ್ಯವಾಗಿದೆ.

ಇನ್ನು ಬಿಯರ್ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. 2024-25ರಲ್ಲಿ 4.09 ಲಕ್ಷ ಬಾಕ್ಸ್ ಮಾರಾಟದಿಂದ ₹50.05 ಕೋಟಿ ಆದಾಯ ಬಂದಿದ್ದರೆ, 2025-26ರಲ್ಲಿ 3.38 ಲಕ್ಷ ಬಾಕ್ಸ್ ಮಾರಾಟದಿಂದ ₹47.05 ಕೋಟಿ ಆದಾಯ ಮಾತ್ರ ಬಂದಿದೆ. ಬಿಯರ್ ಬೆಲೆಯಲ್ಲಿ ಭಾರಿ ಏರಿಕೆಯೇ ಈ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಜಿಲ್ಲೆಯ ವಿವಿಧ ವಲಯಗಳಲ್ಲೂ ಮದ್ಯ ಮಾರಾಟದಲ್ಲಿ ಅಲ್ಪ ವ್ಯತ್ಯಾಸ ಕಂಡುಬಂದಿದೆ. ಗದಗ, ಮುಂಡರಗಿ, ನರಗುಂದ, ರೋಣ ಮತ್ತು ಶಿರಹಟ್ಟಿ ವಲಯಗಳಲ್ಲಿ ಲಿಕ್ಕರ್ ಹಾಗೂ ಬಿಯರ್ ಮಾರಾಟದ ಪ್ರಮಾಣದಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡರೂ, ಒಟ್ಟು ಆದಾಯದಲ್ಲಿ ಏರಿಕೆ ದಾಖಲಾಗಿದೆ.

“ಮದ್ಯ ಮಾರಾಟದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ, ಒಟ್ಟಾರೆ ಆರ್ಥಿಕ ವಹಿವಾಟು ಉತ್ತಮವಾಗಿದೆ. ಇಲಾಖೆ ನಿಗದಿ ಮಾಡಿದ ಗುರಿ ಸಾಧಿಸಲಾಗಿದೆ” ಎಂದು ಅಬಕಾರಿ ಡಿಸಿ ಲಕ್ಷ್ಮಿ ಎನ್ ತಿಳಿಸಿದ್ದಾರೆ.

ಬಿರುಗಾಳಿ ಮಳೆ ಅಬ್ಬರ: ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತ!

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆ ಭಾರೀ ಅನಾಹುತದ ಭೀತಿ ಮೂಡಿಸಿತು.

ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮರಗಳು ರಸ್ತೆಯ ಮೇಲೆ ಬಿದ್ದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.

ನಗರದ ಗೌರಿಶಂಕರ ನಗರದಲ್ಲಿ ಮಳೆ ಅಬ್ಬರದಿಂದ ಮನೆಗಳ ಮುಂಭಾಗ ಹಾಗೂ ರಸ್ತೆ ಮೇಲೆ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದವು. ಅದೃಷ್ಟವಶಾತ್ ಮಳೆ ಬೀಳುವ ವೇಳೆ ಜನ ಸಂಚಾರ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ.

ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದರು. ಅಲ್ಲದೆ ರಸ್ತೆಗಳ ಮೇಲೆ ಕಂಬಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಸುದ್ದಿ ತಿಳಿಯುತ್ತಿದ್ದಂತೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ದುರಸ್ತಿ ಕಾರ್ಯ ಕೈಗೊಂಡರು. ಇದೇ ವೇಳೆ ನಗರದ ಗಡಾದ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ.

ಮಳೆ ವೇಳೆ ಆಟೋವನ್ನು ಮರದ ಕೆಳಗೆ ನಿಲ್ಲಿಸಿದ್ದ ಮಾಲೀಕ ಜಬೀಯುಲ್ಲಾ, ತನ್ನ ವಾಹನ ನಾಶವಾಗಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬಿರುಗಾಳಿ ಮಳೆಯಿಂದ ಉಂಟಾದ ಹಾನಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

IPL ಕ್ರೇಜ್ ಹೆಚ್ಚಿಸಲು 11 ರಾಜ್ಯಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ; ಯಾವಾಗ, ಎಲ್ಲಿ?

2026ರ ಐಪಿಎಲ್ ಟೂರ್ನಿ ಇದೇ ಮಾರ್ಚ್ 28ರಿಂದ ಆರಂಭವಾಗಲಿದ್ದು, ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದ ಅಭಿಮಾನಿಗಳಿಗೆ ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಿದೆ.

ದೇಶದ ವಿವಿಧ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸುವ ಮೂಲಕ ಅಭಿಮಾನಿಗಳಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ. ಟಿಕೆಟ್ ಕೊರತೆ ಅಥವಾ ಹೆಚ್ಚಾದ ದರಗಳಿಂದ ಮೈದಾನಕ್ಕೆ ಹೋಗಲು ಸಾಧ್ಯವಾಗದ ಅಭಿಮಾನಿಗಳು ಫ್ಯಾನ್ ಪಾರ್ಕ್‌ಗಳಲ್ಲಿ ದೊಡ್ಡ ಪರದೆಗಳ ಮೂಲಕ ಪಂದ್ಯಗಳನ್ನು ವೀಕ್ಷಿಸಬಹುದು. ಈ ಬಾರಿ ಒಟ್ಟು 11 ರಾಜ್ಯಗಳ 15 ನಗರಗಳನ್ನು ಫ್ಯಾನ್ ಪಾರ್ಕ್‌ಗಳಿಗೆ ಆಯ್ಕೆ ಮಾಡಲಾಗಿದೆ.

ಮಾರ್ಚ್ 28 ಮತ್ತು 29ರಂದು ನಡೆಯುವ ಮೊದಲ ವಾರದಲ್ಲಿ ರೋಹ್ಟಕ್, ಭೋಪಾಲ್, ನಾಗ್ಪುರ, ತುಮಕೂರು ಮತ್ತು ಕೃಷ್ಣನಗರದಲ್ಲಿ ಫ್ಯಾನ್ ಪಾರ್ಕ್‌ಗಳು ತೆರೆಯಲಿವೆ. ಏಪ್ರಿಲ್ 4 ಮತ್ತು 5ರಂದು ಮಥುರಾ, ಜೋಧಪುರ, ನಿಜಾಮಾಬಾದ್, ಮೈಸೂರು ಹಾಗೂ ಭುವನೇಶ್ವರದಲ್ಲಿ ಎರಡನೇ ಹಂತ ನಡೆಯಲಿದೆ. ಏಪ್ರಿಲ್ 11 ಮತ್ತು 12ರಂದು ಮೀರತ್, ನಾಡಿಯಾಡ್, ರತ್ನಗಿರಿ, ಕೊಯಮತ್ತೂರು ಮತ್ತು ರೂರ್ಕೆಲಾದಲ್ಲಿ ಮೂರನೇ ಹಂತದ ಫ್ಯಾನ್ ಪಾರ್ಕ್‌ಗಳು ನಡೆಯಲಿವೆ.

ಫ್ಯಾನ್ ಪಾರ್ಕ್‌ಗಳು ಕೇವಲ ಪಂದ್ಯ ವೀಕ್ಷಣೆಗೆ ಸೀಮಿತವಾಗಿಲ್ಲ. ಇಲ್ಲಿ ಸಂಗೀತ ಕಾರ್ಯಕ್ರಮಗಳು, ಮನರಂಜನೆ, ವಿವಿಧ ಆಹಾರ ಮಳಿಗೆಗಳು, ಮಕ್ಕಳಿಗಾಗಿ ಆಟದ ಜಾಗ, ವರ್ಚುವಲ್ ಬ್ಯಾಟಿಂಗ್, ಬೌಲಿಂಗ್ ನೆಟ್‌ಗಳು ಹಾಗೂ ಫೇಸ್ ಪೇಂಟಿಂಗ್ ಸೇರಿದಂತೆ ಹಲವು ಆಕರ್ಷಣೆಗಳನ್ನು ಒದಗಿಸಲಾಗುತ್ತದೆ. ಇದರಿಂದ ಅಭಿಮಾನಿಗಳಿಗೆ ಮಿನಿ ಕಾರ್ನಿವಲ್ ಅನುಭವ ಸಿಗಲಿದೆ.

ಬಿಸಿಸಿಐ 2015ರಲ್ಲಿ ಫ್ಯಾನ್ ಪಾರ್ಕ್ ಪರಿಕಲ್ಪನೆಯನ್ನು ಆರಂಭಿಸಿದ್ದು, ಕ್ರೀಡಾಂಗಣಗಳಿಂದ ದೂರವಿರುವ ನಗರಗಳಲ್ಲೂ ಐಪಿಎಲ್ ಕ್ರೇಜ್ ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿದೆ. 2026ರಲ್ಲಿಯೂ ಇದೇ ಉತ್ಸಾಹವನ್ನು ಮುಂದುವರಿಸುತ್ತಾ, ಇನ್ನಷ್ಟು ತಂತ್ರಜ್ಞಾನ ಹಾಗೂ ಸೌಲಭ್ಯಗಳೊಂದಿಗೆ ಅಭಿಮಾನಿಗಳನ್ನು ಸೆಳೆಯಲು ಸಜ್ಜಾಗಿದೆ.

 

ಚಿನ್ನದ ದರ ದಿಢೀರ್ ಕುಸಿದಿದ್ದು ಯಾಕೆ!? ಗೋಲ್ಡ್ ಇಳಿಕೆಗೆ ಇದು ಕಾರಣವೇ?

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ಜಾಗತಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.

ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್ ಮೌಲ್ಯದ ಹೂಡಿಕೆ ಕರಗಿದೆಯೆಂದು ಅಂತರರಾಷ್ಟ್ರೀಯ ಹಣಕಾಸು ವಿಶ್ಲೇಷಣಾ ವರದಿಗಳು ತಿಳಿಸಿವೆ.

ಸಾಮಾನ್ಯವಾಗಿ ಷೇರು ಮಾರುಕಟ್ಟೆ ಕುಸಿದಾಗ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಆದರೆ ಈ ಬಾರಿ ವಿಭಿನ್ನ ಬೆಳವಣಿಗೆ ಕಂಡುಬಂದಿದ್ದು, ಷೇರು ಮಾರುಕಟ್ಟೆಯ ಜೊತೆಗೆ ಚಿನ್ನ ಮತ್ತು ಬೆಳ್ಳಿ ದರವೂ ಕುಸಿದಿರುವುದು ಗಮನಾರ್ಹವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಸಾಮಾನ್ಯ ಪರಿಸ್ಥಿತಿ ಉಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ನೀಡಿದ ಎಚ್ಚರಿಕೆ ಹಾಗೂ ಹಾರ್ಮುಜ್ ಜಲಸಂಧಿ ಕುರಿತ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದು ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿರುವುದರಿಂದ ಅಮೆರಿಕದ ಬಾಂಡ್‌ಗಳ ಮೇಲೆ ಹೂಡಿಕೆ ಹೆಚ್ಚಾಗಿದೆ. 10 ವರ್ಷದ ಬಾಂಡ್ ಇಳುವರಿ ಏರಿಕೆಯಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದವರು ಡಾಲರ್ ಆಧಾರಿತ ಹೂಡಿಕೆಗಳತ್ತ ತಿರುಗುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದ್ದು, ಹಲವಾರು ದೇಶಗಳಲ್ಲಿ ಇಂಧನ ದರ ಹೆಚ್ಚಾಗಿದೆ. ಇದರಿಂದ ಕೆಲವು ರಾಷ್ಟ್ರಗಳು ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ ಎಂಬ ವರದಿಗಳು ಬಂದಿವೆ. ಜೊತೆಗೆ ವಿಮಾನ ಸಂಚಾರ ವ್ಯತ್ಯಯಗೊಂಡಿರುವುದರಿಂದ ಚಿನ್ನದ ವ್ಯಾಪಾರಕ್ಕೂ ತೊಂದರೆ ಉಂಟಾಗಿದೆ.

ಭಾರತದಲ್ಲಿಯೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ದರಗಳು ಕುಸಿತ ಕಂಡಿವೆ. ಕಳೆದ ವಾರ 10 ಗ್ರಾಂ ಚಿನ್ನದ ಫ್ಯೂಚರ್ ದರ 1,44,492 ರೂ. ಇದ್ದರೆ, ಈಗ ಸುಮಾರು 10 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದ್ದು 1,29,595 ರೂ. ಮಟ್ಟಕ್ಕೆ ಬಂದಿದೆ.

ಈ ಬೆಳವಣಿಗೆ ಹೂಡಿಕೆದಾರರಲ್ಲಿ ಆತಂಕವನ್ನುಂಟುಮಾಡಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

error: Content is protected !!