Home Blog Page 7

ರಾಜ್ಯಾದ್ಯಂತ ಕಾವೇರಿ ಹೋರಾಟ: ಆಗಸ್ಟ್‌ 13 ರಂದು ಅಖಂಡ ಕರ್ನಾಟಕ ಬಂದ್‌!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶಗಳ ವಿರುದ್ಧ ರಾಜ್ಯದಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿವೆ.

ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ನಡೆಸಲು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕನ್ನಡ ಒಕ್ಕೂಟಗಳ ಸಭೆ ನಡೆದಿದ್ದು, ಸಭೆಯ ಬಳಿಕ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಬಂದ್ ನಿರ್ಧಾರವನ್ನು ಪ್ರಕಟಿಸಿದರು.

ಆಗಸ್ಟ್ 13ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ರಾಜ್ಯಾದ್ಯಂತ ಸಂಪೂರ್ಣ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಬಂದ್‌ಗೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಸಾರಿಗೆ ಚಾಲಕರ ಸಂಘಗಳು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಕಾವೇರಿ ನೀರು ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಪಾಡಬೇಕು. CWRC ಹಾಗೂ CWMA ಆದೇಶಗಳನ್ನು ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ.

ಸರ್ವಪಕ್ಷ ಸಭೆಗೂ ಮುನ್ನ ತಮಿಳುನಾಡಿಗೆ ನೀರಿಲ್ಲ: ರಾಮಲಿಂಗಾ ರೆಡ್ಡಿ ಖಡಕ್ ಘೋಷಣೆ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಸರ್ವಪಕ್ಷ ಸಭೆ ನಡೆಯುವವರೆಗೂ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಖಡಕ್‌ವಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್‌ ನೀರು ಹರಿಸುವಂತೆ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯಿಸಿದರು.

“CWMA ಆದೇಶ ನೀಡಿದೆ. ಕಳೆದ 30 ವರ್ಷಗಳಿಂದ ಯಾವ ವಿಚಾರದಲ್ಲಿ ವಾದ ನಡೆಯುತ್ತಿದೆಯೋ ಅದೇ ವಿಚಾರ ಮುಂದುವರಿದಿದೆ. ಆದರೆ ಸದ್ಯ ಮುಖ್ಯಮಂತ್ರಿಗಳು ಭಾನುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಸಭೆ ಮುಗಿಯುವವರೆಗೂ ನೀರು ಬಿಡುವುದಿಲ್ಲ” ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಸದ್ಯ ಸಮಸ್ಯೆ ಇಲ್ಲವಾದರೂ, ರೈತರ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವುದು ಸವಾಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ. ರೈತರ ಹಿತದೃಷ್ಟಿಯಿಂದ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದೇವೆ. ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದೇವೆ. ನೆಲ, ಜಲ, ಭಾಷೆ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು” ಎಂದರು.

ರಾಜ್ಯಕ್ಕೆ ಪ್ರತಿವರ್ಷ ಕುಡಿಯುವ ನೀರಿಗಾಗಿ ಸುಮಾರು 40 ಟಿಎಂಸಿ ನೀರು ಅಗತ್ಯವಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಸಮಸ್ಯೆ ಎದುರಾಗಲಿಲ್ಲ. ಆದರೆ ಈ ಬಾರಿ ಮಳೆ ಕೊರತೆ ಇರುವುದರಿಂದ ಪರಿಸ್ಥಿತಿ ಸವಾಲಾಗಿದೆ ಎಂದು ತಿಳಿಸಿದರು.

ಮೆಟ್ಟೂರು ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದು, ತಮಿಳುನಾಡಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದ ಸಚಿವರು, ಮೇಕೆದಾಟು ಯೋಜನೆ ವಿಚಾರದಲ್ಲೂ ಪ್ರತಿಕ್ರಿಯಿಸಿದರು.

“ಮೇಕೆದಾಟು ಡಿಪಿಆರ್‌ ಅನ್ನು ವಾಪಸ್ ಕಳುಹಿಸಲಾಗಿದೆ. ಅಲೊಕೇಶನ್ ಆಗಿರುವುದರಿಂದ ಡಿಪಿಆರ್‌ ಸಲ್ಲಿಸಿ ಎಂದು ಸೂಚಿಸಿದ್ದಾರೆ. ಒಂದು ವಾರದೊಳಗೆ ಸರಿಪಡಿಸಿ ಮತ್ತೆ ಸಲ್ಲಿಸಲಾಗುವುದು” ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ವಸಂತ್ ನಾಯ್ಕ್ ಹತ್ಯೆ ಪ್ರಕರಣ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಆರೋಪಿಗಳ ಜಾಮೀನು ಅರ್ಜಿ ವಜಾ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದ್ದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಏಳು ಆರೋಪಿಗಳಿಗೆ ಶಿರಸಿಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮಹತ್ವದ ಹಿನ್ನಡೆ ನೀಡಿದೆ. ಮಧ್ಯಂತರ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, ಆರೋಪಿಗಳು ಸದ್ಯ ಜೈಲಿನಲ್ಲೇ ಮುಂದುವರಿಯಬೇಕಾಗಿದೆ.

ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಈ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಬಂಧಿತರಲ್ಲಿ ಒಬ್ಬರಿಗೆ ಈಗಾಗಲೇ ಜಾಮೀನು ದೊರೆತಿದ್ದು, ಉಳಿದ ಏಳು ಆರೋಪಿಗಳು ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್, ಮೊಹಮ್ಮದ್ ಮೆಹಫೂಜ್, ಮೊಹಮ್ಮದ್ ಫೈಸಲ್, ಇರ್ಫಾನ್ ಹಾಗೂ ಆಕಾಶ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಶಿರಸಿಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದೆ.

ಇದರೊಂದಿಗೆ ಕಳೆದ ಆರು ತಿಂಗಳಿಂದ ಕಾರವಾರ ಜೈಲಿನಲ್ಲಿರುವ ಆರೋಪಿಗಳಿಗೆ ಸದ್ಯ ಯಾವುದೇ ಕಾನೂನು ಪರಿಹಾರ ದೊರಕದಂತಾಗಿದೆ.

ಈ ನಡುವೆ ಕಮಲಾಕರ್ ಭಟ್ ವಿರುದ್ಧ ಮತ್ತೊಂದು ಗಂಭೀರ ಪ್ರಕರಣವೂ ದಾಖಲಾಗಿದೆ. ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಆ ಸಂಬಂಧವೂ ನ್ಯಾಯಾಂಗ ಪ್ರಕ್ರಿಯೆ ಮುಂದುವರಿದಿದೆ. ಹೀಗಾಗಿ ಕಮಲಾಕರ್ ಭಟ್ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಕೆಲಸದ ಬಾಕಿ ಹಣ ಕೇಳಿದ್ದಕ್ಕೆ ಬೆದರಿಕೆ? ಕಲಬುರಗಿಯಲ್ಲಿ ವ್ಯಕ್ತಿ ಆತ್ಮಹತ್ಯೆ! ಕಾಂಗ್ರೆಸ್ ಮುಖಂಡ ವಿರುದ್ಧ FIR

0

ಕಲಬುರಗಿ: ಗುತ್ತಿಗೆ ಕಾಮಗಾರಿಯ ಬಾಕಿ ಹಣ ಕೇಳಿದ ಹಿನ್ನೆಲೆಯಲ್ಲಿ ಬೆದರಿಕೆ ಮತ್ತು ಕಿರುಕುಳ ಎದುರಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ನಿವಾಸಿ ಖದೀರ್ ಪಾಷಾ (38) ಆತ್ಮಹತ್ಯೆ ಮಾಡಿಕೊಂಡವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್ ಹಾಗೂ ಅವರ ಅಳಿಯ ಅಮಿತ್ ರಾಠೋಡ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಸೇಡಂನ ಸಿಮೆಂಟ್ ಕಾರ್ಖಾನೆಯ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅರವಿಂದ್ ಚವ್ಹಾಣ್ ಅವರು ಕಾಮಗಾರಿಗೆ ಖದೀರ್ ಪಾಷಾ ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲಸ ಪೂರ್ಣಗೊಂಡ ಬಳಿಕ ಬಾಕಿ ಹಣವನ್ನು ಕೇಳಿದಾಗ, ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಕಿರುಕುಳದಿಂದ ಮನನೊಂದ ಖದೀರ್ ಪಾಷಾ ಅವರು ರಟಕಲ್ ಗ್ರಾಮದ ಜಮೀನೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬ ಆರೋಪಿಸಿದೆ.

ಮೃತರ ಪತ್ನಿ ಅನೀಸಾ ಬೇಗಂ ನೀಡಿದ ದೂರಿನ ಆಧಾರದ ಮೇಲೆ ಅರವಿಂದ್ ಚವ್ಹಾಣ್ ಹಾಗೂ ಅಮಿತ್ ರಾಠೋಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅರವಿಂದ್ ಚವ್ಹಾಣ್ ಅವರು 2028ರ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಆರೋಪಗಳ ಸತ್ಯಾಸತ್ಯತೆಯನ್ನು ಪೊಲೀಸರು ತನಿಖೆ ಮೂಲಕ ಪರಿಶೀಲಿಸುತ್ತಿದ್ದಾರೆ.

ಆಗಸ್ಟ್ 1ರಿಂದ ಹೊಸ ರೂಲ್ಸ್: ಸಿಲಿಂಡರ್ ಬುಕ್ಕಿಂಗ್‌ʼನಿಂದ ಹೊಸ ಸಂಪರ್ಕದವರೆಗೆ ಏನೆಲ್ಲ ಬದಲಾಗಲಿದೆ?

ಬೆಂಗಳೂರು: ಆಗಸ್ಟ್ 1ರಿಂದ ದೇಶಾದ್ಯಂತ ಹಣಕಾಸು, ಬ್ಯಾಂಕಿಂಗ್, ರೈಲ್ವೆ ಹಾಗೂ ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಈ ಬದಲಾವಣೆಗಳು ಸಾರ್ವಜನಿಕರ ದೈನಂದಿನ ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುತ್ತಿರುವ ಪ್ರಮುಖ ಐದು ಬದಲಾವಣೆಗಳ ವಿವರ ಇಲ್ಲಿದೆ.

1. ತತ್ಕಾಲ್ ರೈಲು ಟಿಕೆಟ್ ಬುಕ್ಕಿಂಗ್‌ಗೆ ಹೊಸ ವ್ಯವಸ್ಥೆ

ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಹೊಸ ವ್ಯವಸ್ಥೆ ಜಾರಿಗೆ ತರುತ್ತಿದೆ. ಬುಕ್ಕಿಂಗ್ ಕೌಂಟರ್‌ಗಳಲ್ಲಿ ದೀರ್ಘ ಸಾಲು ತಪ್ಪಿಸಲು ಮುಂಗಡ ಟೋಕನ್ ವಿತರಣೆ ಮಾಡಲಾಗುತ್ತದೆ. ಇದರಿಂದ ನೂಕುನುಗ್ಗಲು ಕಡಿಮೆಯಾಗುವ ಜೊತೆಗೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಹೆಚ್ಚು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಯಲಿದೆ.

2. ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ

ಪ್ರಮುಖ ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ಸೇವಾ ನಿಯಮಗಳನ್ನು ಪರಿಷ್ಕರಿಸುತ್ತಿವೆ. ರಿವಾರ್ಡ್ ಪಾಯಿಂಟ್‌ಗಳ ಮೌಲ್ಯ, ಮೈಲ್‌ಸ್ಟೋನ್ ಪ್ರಯೋಜನಗಳು, ಆನ್‌ಲೈನ್ ಯುಟಿಲಿಟಿ ಬಿಲ್ ಪಾವತಿಗಳ ನಿಯಮಗಳು, ಎಸ್‌ಎಂಎಸ್ ಸೇವಾ ಶುಲ್ಕ ಹಾಗೂ ವಾರ್ಷಿಕ ನಿರ್ವಹಣಾ ಶುಲ್ಕಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

3. CKYC 2.0 ಜಾರಿ

ಬ್ಯಾಂಕಿಂಗ್, ವಿಮೆ ಮತ್ತು ಮ್ಯೂಚುವಲ್ ಫಂಡ್ ಕ್ಷೇತ್ರಗಳಲ್ಲಿ ಡಿಜಿಟಲ್ ಭದ್ರತೆ ಹೆಚ್ಚಿಸುವ ಉದ್ದೇಶದಿಂದ CKYC 2.0 ವ್ಯವಸ್ಥೆ ಜಾರಿಗೆ ಬರುತ್ತಿದೆ. ಗ್ರಾಹಕರ KYC ದಾಖಲೆಗಳನ್ನು ಕೇಂದ್ರ ನೋಂದಣಿ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಇದರಿಂದ ಹೊಸ ಖಾತೆ ತೆರೆಯುವಾಗ ಅಥವಾ ವಿಮೆ ಪಡೆಯುವಾಗ ಪದೇ ಪದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯ ಇರುವುದಿಲ್ಲ.

4. LPG ಸಿಲಿಂಡರ್ ದರ ಪರಿಷ್ಕರಣೆ

ಪ್ರತಿ ತಿಂಗಳ ಮೊದಲ ದಿನದಂತೆ ಆಗಸ್ಟ್ 1ರಂದು ಕೂಡ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ LPG ಸಿಲಿಂಡರ್‌ಗಳ ಹೊಸ ದರಗಳನ್ನು ಪ್ರಕಟಿಸಲಿವೆ. ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಮತ್ತು ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ಬೆಲೆ ಪರಿಷ್ಕರಣೆ ನಡೆಯಲಿದೆ.

5. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವು

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವವರಿಗೆ ಪ್ರಮುಖ ಗಡುವುಗಳು ಅನ್ವಯವಾಗುತ್ತವೆ. ವೇತನದಾರರಿಗೆ ಜುಲೈ 31 ಕೊನೆಯ ದಿನವಾಗಿದ್ದರೆ, ಸ್ವಯಂ ಉದ್ಯೋಗಿಗಳು, ಫ್ರೀಲಾನ್ಸರ್‌ಗಳು ಮತ್ತು ಸಣ್ಣ ಉದ್ಯಮಿಗಳಿಗೆ ಆಗಸ್ಟ್ 31ರವರೆಗೆ ಅವಕಾಶ ನೀಡಲಾಗಿದೆ.

ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುತ್ತಿರುವ ಈ ಬದಲಾವಣೆಗಳ ಬಗ್ಗೆ ಸಾರ್ವಜನಿಕರು ಮುಂಚಿತವಾಗಿಯೇ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ.

ಮುಂದಿನ ಮೂರು ದಿನ ರಾಜ್ಯಕ್ಕೆ ಭಾರೀ ಮಳೆ ಎಚ್ಚರಿಕೆ: 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಎಂಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ತೀವ್ರಗೊಳ್ಳುವ ಮುನ್ಸೂಚನೆ ನೀಡಿರುವ ಇಲಾಖೆ, ಸಾರ್ವಜನಿಕರು ಮತ್ತು ಮೀನುಗಾರರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಇದೇ ವೇಳೆ ಕೊಡಗು, ಹಾಸನ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಕರಾವಳಿ ಭಾಗದಲ್ಲಿ ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ತೆರಳುವ ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ. ತಗ್ಗು ಪ್ರದೇಶದ ನಿವಾಸಿಗಳು ಹಾಗೂ ಸಾರ್ವಜನಿಕರು ಕೂಡ ಹವಾಮಾನ ಮುನ್ಸೂಚನೆ ಗಮನಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಕಾವೇರಿ ಕಿಡಿಗೆ ಕನ್ನಡ ಚಿತ್ರರಂಗದ ಸಾಥ್! ‘ಯಾವ ಹೋರಾಟಕ್ಕೂ ಸಿದ್ಧ’ ಎಂದ ಫಿಲ್ಮ್ ಚೇಂಬರ್

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಪರ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗ ಅಧಿಕೃತವಾಗಿ ಬೀದಿಗಿಳಿಯಲು ಸಜ್ಜಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಪ್ರತಿದಿನ 3,500 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ನೀಡಿರುವ ನಿರ್ದೇಶನಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದೆ.

ಗುರುವಾರ ನಡೆದ ಮಹತ್ವದ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ಪ್ರದರ್ಶಕರ, ವಿತರಕರ ಹಾಗೂ ಫಿಲ್ಮ್ ಚೇಂಬರ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಒಮ್ಮತದ ನಿರ್ಧಾರ ಕೈಗೊಂಡರು.

ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಘೋಷಿಸುವ ಯಾವುದೇ ಪ್ರತಿಭಟನೆ, ಚಳುವಳಿ ಅಥವಾ ಹೋರಾಟಕ್ಕೂ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಭೆಯಲ್ಲಿ ಘೋಷಿಸಲಾಯಿತು.

“ನೆಲ, ಜಲ ಮತ್ತು ಭಾಷೆಯ ವಿಷಯ ಬಂದಾಗ ಕನ್ನಡ ಚಿತ್ರೋದ್ಯಮ ಎಂದಿಗೂ ಹಿಂದೆ ಸರಿಯುವುದಿಲ್ಲ. ಡಾ. ರಾಜ್‌ಕುಮಾರ್ ಅವರ ಕನ್ನಡಾಭಿಮಾನವೇ ನಮ್ಮ ಮಾರ್ಗದರ್ಶಕ” ಎಂದು ಅಧ್ಯಕ್ಷೆ ಜಯಮಾಲಾ ಸ್ಪಷ್ಟ ಸಂದೇಶ ನೀಡಿದರು.

ರಾಕ್‌ಲೈನ್ ವೆಂಕಟೇಶ್ ಮಾತನಾಡಿ, ಅಗತ್ಯವಿದ್ದರೆ ಕನ್ನಡ ಚಿತ್ರರಂಗದ ತಾರೆಯರು ಒಂದೇ ವೇದಿಕೆಯಲ್ಲಿ ಸೇರಿ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರು ಹಾಗೂ ಕನ್ನಡಪರ ಹೋರಾಟಗಾರರು, ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಹೋರಾಟಕ್ಕೂ ಫಿಲ್ಮ್ ಚೇಂಬರ್ ಹೆಗಲಿಗೆ ಹೆಗಲು ನೀಡಿ ನಿಲ್ಲಲಿದೆ ಎಂದು ಘೋಷಿಸಿದರು.

ಕಾವೇರಿ ನೀರಿನ ವಿವಾದ ಮತ್ತೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ಕಾವೇರಿಯಾಗಿ ಉಕ್ಕುತ್ತಿರುವ ಹೊತ್ತಿನಲ್ಲಿ, ಕನ್ನಡ ಚಿತ್ರರಂಗದ ಈ ಅಧಿಕೃತ ಬೆಂಬಲ ಹೋರಾಟಕ್ಕೆ ಹೊಸ ಆಯಾಮ ನೀಡುವ ಬೆಳವಣಿಗೆಯಾಗಿ ಪರಿಣಮಿಸಿದೆ.

ನಿಷೇಧ ಮುಗಿದರೂ ಸಂಕಷ್ಟ ತಪ್ಪಿಲ್ಲ! ಹವಾಮಾನ ವೈಪರೀತ್ಯದಿಂದ ಉತ್ತರ ಕನ್ನಡ ಮೀನುಗಾರರಿಗೆ ಆದಾಯದ ಮೇಲೆ ಕರಿನೆರಳು

ಕಾರವಾರ: ಉತ್ತರ ಕನ್ನಡ ಕರಾವಳಿಯಲ್ಲಿ ಎರಡು ತಿಂಗಳ ಮೀನುಗಾರಿಕೆ ನಿಷೇಧ ಶುಕ್ರವಾರದಿಂದ ಅಧಿಕೃತವಾಗಿ ಅಂತ್ಯಗೊಳ್ಳುತ್ತಿದ್ದು, ಹೊಸ ಮೀನುಗಾರಿಕೆ ಋತುವಿಗೆ ಮೀನುಗಾರರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಹವಾಮಾನ ಇಲಾಖೆ ನೀಡಿರುವ ಸಮುದ್ರ ಪ್ರಕ್ಷುಬ್ಧದ ಎಚ್ಚರಿಕೆ ಹಾಗೂ ಸಮುದ್ರದಲ್ಲಿನ ಬಿಸಿಗಾಳಿಯ ಪರಿಣಾಮ ಈ ಬಾರಿ ಉತ್ತಮ ಮೀನುಗಾರಿಕೆಯ ನಿರೀಕ್ಷೆಗೆ ದೊಡ್ಡ ಹೊಡೆತ ನೀಡಿದೆ.

ನಿಷೇಧ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೀನುಗಾರರು ಬೋಟುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಮುದ್ರಕ್ಕಿಳಿಯಲು ಸಜ್ಜಾಗಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಎಂಜಿನ್, ಬಲೆ ಹಾಗೂ ಇತರ ಉಪಕರಣಗಳನ್ನು ದುರಸ್ತಿ ಮಾಡಿಕೊಂಡಿರುವ ಮೀನುಗಾರರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಆದರೆ ಆಗಸ್ಟ್ ಮೊದಲ ವಾರದಲ್ಲೇ ಸಮುದ್ರ ಕ್ಷೋಭೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಸಮುದ್ರದ ಉಷ್ಣಾಂಶ ಏರಿಕೆ ಮತ್ತು ಬಿಸಿಗಾಳಿಯ ಪರಿಣಾಮ ಈ ಬಾರಿ ಮೀನುಗಳ ಲಭ್ಯತೆ ಗಣನೀಯವಾಗಿ ಕುಸಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಳೆದ ವರ್ಷವೂ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ಹಲವು ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು. ಬೋಟುಗಳು ಬಂದರಿನಲ್ಲೇ ಲಂಗರು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮೀನುಗಾರರು ಭಾರೀ ನಷ್ಟ ಅನುಭವಿಸಿದ್ದರು. ಇದೇ ಪರಿಸ್ಥಿತಿ ಮತ್ತೊಮ್ಮೆ ಎದುರಾದರೆ ಈ ವರ್ಷದ ಹೂಡಿಕೆ ಮತ್ತು ಆದಾಯ ಎರಡೂ ತೀವ್ರ ಹೊಡೆತ ಅನುಭವಿಸುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ರೈತರಿಗೆ ಘೋಷಿಸಿದ ರೀತಿಯಲ್ಲೇ ಮತ್ಸೋದ್ಯಮಕ್ಕೂ ಸಾಲಮನ್ನಾ ಅಥವಾ ಕನಿಷ್ಠ ಬಡ್ಡಿ ಮನ್ನಾ ಸೇರಿದಂತೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಮೀನುಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎರಡು ತಿಂಗಳ ನಿರೀಕ್ಷೆಯ ಬಳಿಕ ಸಮುದ್ರ ಮತ್ತೆ ಮೀನುಗಾರರಿಗೆ ತೆರೆದುಕೊಳ್ಳುತ್ತಿದ್ದರೂ, ಪ್ರಕೃತಿಯ ವೈಪರೀತ್ಯವೇ ಈ ಬಾರಿಯ ಮೀನುಗಾರಿಕೆ ಋತುವಿನ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸಲಿದೆ.

ಸ್ಟೀಫನ್ ಫ್ಲೆಮಿಂಗ್ ಬಳಿಕ ಹೊಸ ಕೋಚ್ ನೇಮಕ: ಜೋಬರ್ಗ್ ಸೂಪರ್ ಕಿಂಗ್ಸ್ʼಗೆ ಆಲ್ಬಿ ಮೊರ್ಕೆಲ್ ಸಾರಥ್ಯ

0

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ ಬಳಿಕ, ಸೂಪರ್ ಕಿಂಗ್ಸ್ ಫ್ರಾಂಚೈಸಿಯ ವಿವಿಧ ತಂಡಗಳಲ್ಲಿ ಕೋಚಿಂಗ್ ವಿಭಾಗದಲ್ಲಿ ಬದಲಾವಣೆಗಳು ಆರಂಭವಾಗಿವೆ.

ಇದರ ಭಾಗವಾಗಿ ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿ ಕಣಕ್ಕಿಳಿಯುವ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ಹೊಸ ಮುಖ್ಯ ಕೋಚ್ ಆಗಿ ಮಾಜಿ ಆಲ್‌ರೌಂಡರ್ ಆಲ್ಬಿ ಮೊರ್ಕೆಲ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಜುಲೈ 30ರಂದು ಜೋಬರ್ಗ್ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, SA20 ಲೀಗ್‌ನ ಐದನೇ ಆವೃತ್ತಿಯಲ್ಲಿ ಮೊರ್ಕೆಲ್ ಮೊದಲ ಬಾರಿಗೆ ಮುಖ್ಯ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಆದಾಗ್ಯೂ, ಇದು ಮೊರ್ಕೆಲ್‌ಗೆ ಹೊಸ ತಂಡವಲ್ಲ. SA20 ಲೀಗ್ ಆರಂಭವಾದ ಮೊದಲ ಆವೃತ್ತಿಯಿಂದಲೇ ಅವರು ಜೋಬರ್ಗ್ ಸೂಪರ್ ಕಿಂಗ್ಸ್ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದು, ತಂಡದ ತಂತ್ರಗಾರಿಕೆ ರೂಪಿಸುವುದು ಹಾಗೂ ಆಟಗಾರರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಅನುಭವ ಮತ್ತು ತಂಡದೊಂದಿಗೆ ಹೊಂದಿರುವ ನಿಕಟ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಇದೀಗ ಮುಖ್ಯ ಕೋಚ್ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗಿದೆ.

ಆಲ್ಬಿ ಮೊರ್ಕೆಲ್ ಹೆಸರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಚಿರಪರಿಚಿತ. ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಹಲವು ವರ್ಷಗಳ ಕಾಲ ಆಡಿದ್ದ ಅವರು, ತಮ್ಮ ಸ್ಪೋಟಕ ಬ್ಯಾಟಿಂಗ್ ಹಾಗೂ ಪರಿಣಾಮಕಾರಿ ಬೌಲಿಂಗ್ ಮೂಲಕ ತಂಡದ ಅನೇಕ ಐತಿಹಾಸಿಕ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಟಗಾರನಾಗಿ ತಂಡದ ಯಶಸ್ಸಿನಲ್ಲಿ ಮಹತ್ವದ ಕೊಡುಗೆ ನೀಡಿದ್ದ ಮೊರ್ಕೆಲ್, ಇದೀಗ ಕೋಚ್ ಆಗಿಯೂ ಸೂಪರ್ ಕಿಂಗ್ಸ್ ಕುಟುಂಬದ ಯಶಸ್ಸನ್ನು ಮುಂದುವರಿಸುವ ಹೊಣೆ ಹೊತ್ತಿದ್ದಾರೆ.

ಐಪಿಎಲ್‌ನಲ್ಲಿ ಆಲ್ಬಿ ಮೊರ್ಕೆಲ್ 91 ಪಂದ್ಯಗಳನ್ನು ಆಡಿದ್ದು, 24ಕ್ಕೂ ಹೆಚ್ಚು ಸರಾಸರಿಯಲ್ಲಿ 974 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿರುವ ಅವರು 85 ವಿಕೆಟ್‌ಗಳನ್ನು ಕಬಳಿಸಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ದಕ್ಷಿಣ ಆಫ್ರಿಕಾ ಪರ ಉತ್ತಮ ಸೇವೆ ಸಲ್ಲಿಸಿರುವ ಮೊರ್ಕೆಲ್, 58 ಏಕದಿನ, 50 ಟಿ20 ಹಾಗೂ ಒಂದು ಟೆಸ್ಟ್ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಇದೀಗ ಆಟಗಾರನಾಗಿ ಗಳಿಸಿದ ಅನುಭವವನ್ನು ಕೋಚ್ ಆಗಿ ಬಳಸಿಕೊಂಡು ಜೋಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ಸಿನತ್ತ ಮುನ್ನಡೆಸುವ ಸವಾಲನ್ನು ಸ್ವೀಕರಿಸಿದ್ದಾರೆ.

ಮೋದಿ ವಿರುದ್ಧ ಆಕ್ಷೇಪಾರ್ಹ AI ಪೋಸ್ಟ್: ಮೆಟಾ ಇಂಡಿಯಾ ಮುಖ್ಯಸ್ಥ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು!

0

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳು, ಮಾರ್ಫ್ ಮಾಡಿದ ಚಿತ್ರಗಳು ಹಾಗೂ ಎಐ (AI) ವಿಡಿಯೊಗಳನ್ನು ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಮೆಟಾ ಇಂಡಿಯಾ ಮುಖ್ಯಸ್ಥರು ಸೇರಿದಂತೆ ಹಲವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾರ್ಫ್ ಮಾಡಿದ ಚಿತ್ರಗಳು, ಎಐ ವಿಡಿಯೊಗಳು ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿತ್ತು. ಈ ಪೋಸ್ಟ್‌ಗಳಲ್ಲಿ ಅವಹೇಳನಕಾರಿ ಭಾಷೆ, ಅಪಹಾಸ್ಯ ಮತ್ತು ಅಸಭ್ಯ ಹೇಳಿಕೆಗಳನ್ನು ಬಳಸಲಾಗಿದ್ದು, ಇದು ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ಆಕ್ರಮಣಕಾರಿ ವರ್ತನೆಗೆ ಉತ್ತೇಜನ ನೀಡುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಉದ್ಯಮಿ ಎಸ್. ಅರವಿಂದ್ ರೆಡ್ಡಿ ಹಾಗೂ ತೆಲಂಗಾಣ ಬಿಜೆಪಿ ಕಾರ್ಯಕರ್ತ ಟಿ. ಸಾಯಿಕಿರಣ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಮೆಟಾ ಇಂಡಿಯಾದ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಸೇರಿದಂತೆ ಹಲವು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲತೆ, ನಿಂದನೆ ಮತ್ತು ಅವಹೇಳನಕಾರಿ ಪೋಸ್ಟ್‌ಗಳು ಹಾಗೂ ಕಾಮೆಂಟ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ಪ್ರತಿಭಟನೆ ಸಂದರ್ಭದಲ್ಲಿ ಪ್ರಧಾನಮಂತ್ರಿಯನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಕೆಲವು ಸುದ್ದಿ ಪೋರ್ಟಲ್‌ಗಳ ಸಾಮಾಜಿಕ ಜಾಲತಾಣ ಖಾತೆಗಳು ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಖಾತೆಯಿಂದ ಪ್ರಕಟಿಸಲಾಗಿದ್ದ ವಿಡಿಯೊವೊಂದನ್ನು ಫೇಸ್‌ಬುಕ್‌ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಬಳಿಕ ಅದು ತಾಂತ್ರಿಕ ದೋಷದಿಂದ ಸಂಭವಿಸಿದ ತಪ್ಪು ಎಂದು ಮೆಟಾ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿತ್ತು.