Home Blog Page 69

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ಅಪಘಾತ: ತಲೆಯ ಮೇಲೆ ಟ್ರಕ್ ಹರಿದು ಕಾರ್ಮಿಕ ಸಾವು

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಟ್ಟಡ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನ ತಲೆಯ ಮೇಲೆ ಟ್ರಕ್‌ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬಿಹಾರ ಮೂಲದ ಬಾಬುಜೀ ಮಿಯಾ (45) ಎಂದು ಗುರುತಿಸಲಾಗಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಾಬುಜೀ ಮಿಯಾ, ಇಂದು ಕೆಲಸಕ್ಕೆಂದು ಉತ್ತರಹಳ್ಳಿಯಿಂದ ಸರ್ಜಾಪುರದ ಕಡೆಗೆ ತೆರಳುತ್ತಿದ್ದರು.

ಈ ವೇಳೆ ಎಲೆಕ್ಟ್ರಾನಿಕ್ ಸಿಟಿಯ ನೈಸ್‌ ಟೋಲ್‌ ಬಳಿ ಅಪಘಾತ ಸಂಭವಿಸಿದೆ. ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಬಾಬುಜೀ ಮಿಯಾ ಅವರ ತಲೆಯ ಮೇಲೆ ಟ್ರಕ್‌ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಪಘಾತದ ಬಳಿಕ ಟ್ರಕ್‌ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಸೆಂಟ್‌ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತಕ್ಕೆ ಕಾರಣ ಹಾಗೂ ಪರಾರಿಯಾಗಿರುವ ಟ್ರಕ್‌ ಚಾಲಕನ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹನೂರು ಶೂಟೌಟ್ ಬೆನ್ನಲ್ಲೇ ‘ವೈರಲ್ ಆಡಿಯೋ’ ಬಾಂಬ್: ತಮಿಳು ಸಮುದಾಯದ ಹೆಸರಿನಲ್ಲಿ ಪ್ರಚೋದನೆ ಆರೋಪ

0

ಚಾಮರಾಜನಗರ: ಹನೂರು ಎನ್‌ಕೌಂಟರ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳಿರುವ ಆಡಿಯೋವೊಂದು ವೈರಲ್ ಆಗಿದೆ. ‘ಟೈಗರ್ ಆಫ್ ಜಸ್ಟೀಸ್’ ಸಂಘಟನೆಯ ಅಧ್ಯಕ್ಷ ದಿವ್ಯಾನಂದ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋದಲ್ಲಿ ಜಾತಿ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಜನರನ್ನು ಒಗ್ಗೂಡಿಸುವ ಮತ್ತು ರಾಜಕೀಯವಾಗಿ ಪ್ರಚೋದಿಸುವ ರೀತಿಯ ಹೇಳಿಕೆಗಳಿವೆ ಎಂಬ ಆರೋಪ ಕೇಳಿಬಂದಿದೆ.

ವೈರಲ್ ಆಡಿಯೋದಲ್ಲಿ ತಮಿಳು ಸಮುದಾಯದ ಮೇಲೆ ಅನ್ಯಾಯ ನಡೆಯುತ್ತಿದೆ ಎಂಬ ಆರೋಪ ಮಾಡಲಾಗಿದೆ. ತಮಿಳುನಾಡಿನಿಂದ ವಲಸೆ ಬಂದವರಿಗೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿ, ಕನ್ನಡಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ರೀತಿಯ ಹೇಳಿಕೆಗಳಿವೆ ಎನ್ನಲಾಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿಂದೆ ಹೋಗದಂತೆ ಕರೆ ನೀಡಿರುವ ಧ್ವನಿ, ತಮ್ಮದೇ ಆದ ಸಂಘಟನೆ ಕಟ್ಟಿಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ ಎನ್ನಲಾಗಿದೆ.

ಪ್ರದೇಶದಲ್ಲಿ ಸುಮಾರು 65 ಸಾವಿರ ಮತಗಳಿವೆ ಎಂದು ಉಲ್ಲೇಖಿಸಿರುವ ಆಡಿಯೋದಲ್ಲಿ, ತಮಿಳು ಸಮುದಾಯದ ವ್ಯಕ್ತಿಗೆ ತೊಂದರೆಯಾದರೆ ಯಾವುದೇ ರಾಜಕೀಯ ಪಕ್ಷಕ್ಕೂ ಮತ ಹಾಕಬಾರದು ಎಂಬ ರೀತಿಯ ರಾಜಕೀಯ ಕರೆ ನೀಡಲಾಗಿದೆ ಎಂಬ ಆರೋಪವೂ ಇದೆ.

ತಮಿಳು ಪಡಿಯಾಚ್ಚಿ ಕ್ರಿಶ್ಚಿಯನ್ನರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿರುವುದರ ಜೊತೆಗೆ, ಚರ್ಚ್‌ಗಳು ತಮ್ಮ ಬೆಂಬಲಕ್ಕೆ ನಿಂತಿವೆ ಎಂದು ಧ್ವನಿಯಲ್ಲಿ ಹೇಳಲಾಗಿದೆ ಎನ್ನಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿದರೂ ಕಾನೂನು ಹೋರಾಟ ನಡೆಸುವುದಾಗಿ ಸವಾಲು ಹಾಕಿರುವ ಹೇಳಿಕೆಯೂ ಆಡಿಯೋದಲ್ಲಿದೆ ಎನ್ನಲಾಗಿದೆ.

ಆದರೆ, ವೈರಲ್ ಆಗಿರುವ ಆಡಿಯೋದ ಸತ್ಯಾಸತ್ಯತೆ, ಅದು ಯಾರಿಂದ ಮತ್ತು ಯಾವ ಸಂದರ್ಭದಲ್ಲಿದೆ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗಳ ಆಧಾರದ ಮೇಲೆ ಯಾವುದೇ ಅಂತಿಮ ನಿರ್ಣಯಕ್ಕೆ ಬರುವಂತಿಲ್ಲ.

ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಈ ಆಡಿಯೋ ಪ್ರಕರಣವೂ ತನಿಖಾ ವ್ಯಾಪ್ತಿಗೆ ಬರಲಿದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಅನೈತಿಕ ಸಂಬಂಧದ ಶಂಕೆ; ವಾಟ್ಸಾಪ್ ಸ್ಟೇಟಸ್ ನೋಡಿ ಕೆರಳಿದ ದಂಪತಿ, ವ್ಯಕ್ತಿಯ ಕೊಲೆ!

0

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ಅನೈತಿಕ ಸಂಬಂಧದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ದಂಪತಿ ಸೇರಿ ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.

ಮೃತನನ್ನು ಗುಜನಟ್ಟಿ ಗ್ರಾಮದ ರಮೇಶ್ ಬಂಟ್ರೋಳಿ ಎಂದು ಗುರುತಿಸಲಾಗಿದೆ. ಕಲ್ಲೋಳಿ ಗ್ರಾಮದ ಬನಪ್ಪ ಒಡೆಯರ್ ಮತ್ತು ಆತನ ಪತ್ನಿ ಲಕ್ಷ್ಮೀ ಒಡೆಯರ್ ಕೊಲೆ ಆರೋಪಿಗಳಾಗಿದ್ದಾರೆ.

ರಮೇಶ್‌ಗೆ ಲಕ್ಷ್ಮೀ ಜೊತೆ ಅನೈತಿಕ ಸಂಬಂಧವಿದೆ ಎಂದು ಬನಪ್ಪ ಶಂಕಿಸಿದ್ದ ಎನ್ನಲಾಗಿದೆ. ರಮೇಶ್ ಮತ್ತು ಲಕ್ಷ್ಮೀ ಜೊತೆಯಲ್ಲಿದ್ದ ಫೋಟೋ ತೆಗೆದುಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದ. ಇದನ್ನು ನೋಡಿದ ಬನಪ್ಪ ಹಾಗೂ ಲಕ್ಷ್ಮೀ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಬಳಿಕ ಕಲ್ಲೋಳಿ ಗ್ರಾಮದ ಮನೆಯ ಹಿಂಭಾಗದ ಸೋಯಾಬಿನ್ ಜಮೀನಿನಲ್ಲಿ ರಮೇಶ್‌ನನ್ನು ಕುಡುಗೋಲಿನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬನಪ್ಪ ಹಾಗೂ ಲಕ್ಷ್ಮೀ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂಜಾನೆಯಿಂದಲೇ ‘ಟಾಕ್ಸಿಕ್’ ಜೋಶ್: ಬಳ್ಳಾರಿ-ದಾವಣಗೆರೆ ಥಿಯೇಟರ್‌ಗಳ ಮುಂದೆ ಯಶ್ ಫ್ಯಾನ್ಸ್ ಅಬ್ಬರ!

ಬಳ್ಳಾರಿ/ದಾವಣಗೆರೆ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರುತ್ತಿದ್ದಂತೆ ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಥಿಯೇಟರ್‌ಗಳೇ ಸಾಕ್ಷಿಯಾಗಿವೆ. ಬೆಳಗ್ಗೆ 6 ಗಂಟೆಯ ಶೋಗೆ ಮುನ್ನವೇ ಚಿತ್ರಮಂದಿರಗಳತ್ತ ಹರಿದುಬಂದ ಸಾವಿರಾರು ಅಭಿಮಾನಿಗಳು ಪಟಾಕಿ, ಡೋಲು, ಘೋಷಣೆ ಹಾಗೂ ಹೂಮಳೆಯೊಂದಿಗೆ ರಾಕಿಂಗ್ ಸ್ಟಾರ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ಬಳ್ಳಾರಿಯಲ್ಲಿ ನಗರದ ಮೂರು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯಿಂದ ‘ಟಾಕ್ಸಿಕ್’ ಶೋ ಆರಂಭವಾಗಿದೆ. ಶಿವ-ಗಂಗಾ ಮತ್ತು ನಟರಾಜ್ ಚಿತ್ರಮಂದಿರಗಳ ಬಳಿ ಬೆಳಗ್ಗಿನಿಂದಲೇ ಅಭಿಮಾನಿಗಳ ದಂಡು ಸೇರಿದ್ದು, ಚಿತ್ರಮಂದಿರಗಳ ಆವರಣ ಕಿಕ್ಕಿರಿದು ತುಂಬಿತ್ತು.

ಯಶ್ ಅವರ ಪೋಸ್ಟರ್‌ಗಳನ್ನು ಹಿಡಿದು ಜೈಕಾರ ಹಾಕಿದ ಫ್ಯಾನ್ಸ್, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿನಿಮಾ ಆರಂಭವಾಗಿ ಯಶ್ ತೆರೆ ಮೇಲೆ ಕಾಣಿಸಿಕೊಂಡ ಕ್ಷಣವೇ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿದ್ದು, ಸ್ಕ್ರೀನ್ ಎದುರು ಚಪ್ಪಾಳೆ, ಜೈಕಾರ ಮತ್ತು ಹರ್ಷೋದ್ಗಾರ ಮೊಳಗಿದೆ.

ದಾವಣಗೆರೆಯಲ್ಲೂ ಇದೇ ರೀತಿಯ ಅಭಿಮಾನಿಗಳ ಕ್ರೇಜ್ ಕಂಡುಬಂದಿದೆ. ನಗರದ ಮೂರು ಚಿತ್ರಮಂದಿರಗಳು ಹಾಗೂ ಎಸ್‌ಎಸ್ ಮಾಲ್‌ನಲ್ಲಿ ‘ಟಾಕ್ಸಿಕ್’ ಬಿಡುಗಡೆಯಾಗಿದ್ದು, ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಭರ್ಜರಿ ಸೆಲೆಬ್ರೇಷನ್ ನಡೆಸಿದ್ದಾರೆ.

ನಾಸಿಕ್ ಡೋಲ್‌ಗಳ ಸದ್ದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು, ಪಟಾಕಿ ಸಿಡಿಸಿ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಸ್ಕ್ರೀನ್ ಬಳಿ ಜಮಾಯಿಸಿ ಯಶ್ ಎಂಟ್ರಿಗೆ ಹೂಮಳೆ ಸುರಿಸಿದ್ದಾರೆ.

ಇಷ್ಟೇ ಅಲ್ಲದೆ, ಕುಂಬಳಕಾಯಿ ಹಿಡಿದು ಆರತಿ ಬೆಳಗಿದ ಅಭಿಮಾನಿಗಳು ‘ಜೈ ಯಶ್’, ‘ಜೈ ರಾಕಿಂಗ್ ಸ್ಟಾರ್’ ಘೋಷಣೆಗಳೊಂದಿಗೆ ತಮ್ಮ ನೆಚ್ಚಿನ ನಟನಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ.

ಮೀನುಗಳಂತೆ ತೇಲಿಬಂದ ಮನುಷ್ಯರ ಶವಗಳು! ‘ಹೆಣಗಳ’ ರಾಶಿ ಕಂಡು ಬೆಚ್ಚಿಬಿದ್ದ ವಿಜಯಪುರ ಮಂದಿ

0

ವಿಜಯಪುರ: ನಗರದ ಹೊರವಲಯದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳು ಸೇರಿದಂತೆ ಆರು ಮಂದಿಯ ಶವಗಳು ಪತ್ತೆಯಾಗಿವೆ.

ಮೃತರು ವಿಜಯಪುರ ತಾಲೂಕಿನ ತೊರವಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ.

ಆಗಸ್ಟ್ 24ರಂದು ಶೋಭಾ ಜಾಲಗೇರಿ ಹಾಗೂ ಮಕ್ಕಳು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇದೀಗ ಭೂತನಾಳ ಕೆರೆಯ ಅಂಚಿನಲ್ಲಿ ಆರು ಮಂದಿಯ ಶವಗಳು ತೇಲಿ ಬಂದಿರುವುದು ಪತ್ತೆಯಾಗಿದೆ.

ಶೋಭಾ ಅವರು ಪತಿ ಮಲಕಾರಿ ಭೀಮರಾಯ ಜಾಲಗೇರಿ ಅವರೊಂದಿಗೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಹೊರಗೆ ಬಂದಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆರೆಯಿಂದ ಶವಗಳನ್ನು ಹೊರತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಪ್ರಕರಣದ ಕುರಿತು ಆದರ್ಶ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ʼಗೆ ಹೊಸ ಕ್ರಶ್ ಎಂಟ್ರಿ; 20 ವರ್ಷದ ಮೇಧಾವಿ ಬಿಧುರಿ ಬೌಲಿಂಗ್ ಜೊತೆಗೆ ಬ್ಯೂಟಿಯಿಂದಲೂ ಫೇಮಸ್!

0

ನವದೆಹಲಿ: 2026ನೇ ಸಾಲಿನ ಮಹಿಳಾ ಡೆಲ್ಲಿ ಪ್ರೀಮಿಯರ್ ಲೀಗ್‌ ಟೂರ್ನಿಯ ಆರಂಭದಲ್ಲೇ ಯುವ ಕ್ರಿಕೆಟರ್ ಮೇಧಾವಿ ಬಿಧುರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದ್ದಾರೆ. ತಮ್ಮ ಬೌಲಿಂಗ್ ಕೌಶಲ್ಯದ ಜೊತೆಗೆ ವಿಶಿಷ್ಟ ವಿಕೆಟ್ ಸೆಲಿಬ್ರೇಷನ್ ಮೂಲಕವೂ ಅಭಿಮಾನಿಗಳ ಗಮನ ಸೆಳೆದಿರುವ 20 ವರ್ಷದ ಡೆಲ್ಲಿ ಮೂಲದ ಆಟಗಾರ್ತಿ ಇದೀಗ ಟೂರ್ನಿಯ ಹೊಸ ಚರ್ಚೆಯ ವಿಷಯವಾಗಿದ್ದಾರೆ.

ಮೇಧಾವಿ ಬಿಧುರಿ ಡೆಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಈಗಾಗಲೇ ಉದಯೋನ್ಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಲಗೈ ಲೆಗ್ ಸ್ಪಿನ್ನರ್ ಆಗಿರುವ ಅವರು, ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ತಂಡದ ಪರ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. 2024ರ ವುಮೆನ್ಸ್ ಪ್ರೀಮಿಯರ್ ಲೀಗ್‌ ಆಟಗಾರ್ತಿಯರ ಹರಾಜಿಗೂ ಅವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.

ಮಹಿಳಾ ಡೆಲ್ಲಿ ಪ್ರೀಮಿಯರ್ ಲೀಗ್‌ನ ಪಂದ್ಯವೊಂದರಲ್ಲಿ ಎದುರಾಳಿ ಆಟಗಾರ್ತಿ ನಿಶಿಕಾ ಅವರ ವಿಕೆಟ್ ಕಬಳಿಸಿದ ಬಳಿಕ ಮೇಧಾವಿ ಬಿಧುರಿ ಮಾಡಿದ ವಿಶೇಷ ‘6-7 ಸೆಲಿಬ್ರೇಷನ್’ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಜೆರ್ಸಿ ನಂಬರ್ 67 ಆಗಿರುವುದೇ ಈ ವಿಶಿಷ್ಟ ಸಂಭ್ರಮಾಚರಣೆಯ ಹಿಂದಿರುವ ಕಾರಣವಾಗಿದೆ.

ವಾಸ್ತವವಾಗಿ, ಮೇಧಾವಿ ಅವರ ಜೆರ್ಸಿ ನಂಬರ್ 12 ಆಗಿತ್ತು. ಆದರೆ ಆ ನಂಬರ್ ಅನ್ನು ಮತ್ತೊಬ್ಬ ಆಟಗಾರ್ತಿ ಈಗಾಗಲೇ ಬಳಸುತ್ತಿದ್ದ ಕಾರಣ, ತಮ್ಮ ತಂಗಿಯ ಸಲಹೆಯ ಮೇರೆಗೆ ಮೇಧಾವಿ 67ನೇ ಸಂಖ್ಯೆಯ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡರು ಎನ್ನಲಾಗಿದೆ. ಹೀಗಾಗಿ ವಿಕೆಟ್ ಪಡೆದಾಗಲೆಲ್ಲಾ ತಮ್ಮ ಜೆರ್ಸಿ ನಂಬರ್ ಅನ್ನು ಸೂಚಿಸುವ ರೀತಿಯಲ್ಲಿ 6-7 ಸೆಲಿಬ್ರೇಷನ್ ಮಾಡಲು ಆರಂಭಿಸಿದ್ದಾರೆ.

ಈ ವಿಶಿಷ್ಟ ಸಂಭ್ರಮಾಚರಣೆ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೇಧಾವಿ ಬಿಧುರಿ ಅವರ ಕುರಿತಾದ ಪೋಸ್ಟ್‌ಗಳು ಹಾಗೂ ಚರ್ಚೆಗಳು ಹೆಚ್ಚಾಗಿವೆ. ಕೆಲವರು ಅವರನ್ನು ಡೆಲ್ಲಿ ಪ್ರೀಮಿಯರ್ ಲೀಗ್‌ನ ಹೊಸ ‘ಕ್ರಶ್’ ಎಂದು ಕರೆದಿದ್ದಾರೆ.

ಮೇಧಾವಿ ಅವರ ಬೌಲಿಂಗ್ ಪ್ರದರ್ಶನದ ಜೊತೆಗೆ ಅವರ ಆಟದ ಶೈಲಿ ಹಾಗೂ ಆತ್ಮವಿಶ್ವಾಸದ ಸೆಲಿಬ್ರೇಷನ್‌ಗೂ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಭಾರತದ ಅತ್ಯಂತ ಸುಂದರ ಮಹಿಳಾ ಕ್ರಿಕೆಟರ್‌ಗಳಲ್ಲಿ ಒಬ್ಬರು ಎಂದು ಹೊಗಳುತ್ತಿದ್ದಾರೆ.

ಆದರೆ, ಮೇಧಾವಿ ಬಿಧುರಿಯವರ ಗಮನ ಸದ್ಯ ತಮ್ಮ ಕ್ರಿಕೆಟ್ ಪ್ರದರ್ಶನದ ಮೇಲೆಯೇ ಇದೆ. ಬೌಲಿಂಗ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಸ್ಥಾನವನ್ನು ಗಟ್ಟಿಗೊಳಿಸುವ ಗುರಿಯನ್ನು ಅವರು ಹೊಂದಿದ್ದಾರೆ.

ಮದುವೆ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ; ಖತರ್ನಾಕ್ ತಾಯಿ-ಮಗ ಅರೆಸ್ಟ್!

0

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮದುವೆಗೆ ವರನ ಹುಡುಕಾಟದಲ್ಲಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಗುರುತಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಇವರನ್ನು ಕೇರಳದ ವಯನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಮೂಲತಃ ಮೈಸೂರಿನವರಾದ ತಾಯಿ-ಮಗ, ಶಾದಿ ಡಾಟ್ ಕಾಮ್ ಸೇರಿದಂತೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಶ್ರೀಮಂತ ಕುಟುಂಬದವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ಪ್ರದೀಪ್ ಜೋಸೆಫ್ ತಾನು ಪಿಎಚ್‌ಡಿ ಮಾಡಿರುವ ಡಾಕ್ಟರೇಟ್ ಪದವೀಧರ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಮೈಸೂರಿನ ಬಾಡಿಗೆ ಬಂಗಲೆಯೊಂದನ್ನು ತನ್ನದೇ ಆಸ್ತಿ ಎಂದು ಹೇಳಿಕೊಂಡು ವಧುವಿನ ಕುಟುಂಬವನ್ನು ನಂಬಿಸುತ್ತಿದ್ದ ಎನ್ನಲಾಗಿದೆ.

ಮದುವೆ ಮಾತುಕತೆ ನಡೆದು ಸಂಬಂಧ ಕುದುರಿದ ಬಳಿಕ, ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿ ವಧುವಿನ ಕುಟುಂಬದಿಂದ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಪರಾರಿಯಾಗುವುದು ಇವರ ವಂಚನೆಯ ವಿಧಾನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಮೂಲದ ಕುಟುಂಬವೊಂದು ಕೂಡ ಆರೋಪಿಯ ಮಾತುಗಳನ್ನು ನಂಬಿ ತಮ್ಮ ಮಗಳ ಮದುವೆಗೆ ಸಿದ್ಧತೆ ಮಾಡಿಕೊಂಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಲಾಗಿತ್ತು.

ಈ ವೇಳೆ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾಕ್ಷ್ಯಾಧಾರಗಳೊಂದಿಗೆ ಆರೋಪಿಯ ಅಸಲಿ ಮುಖವನ್ನು ವಧುವಿನ ಕುಟುಂಬಕ್ಕೆ ತಿಳಿಸಿದ್ದು, ಕುಟುಂಬಕ್ಕೆ ಆಘಾತ ಎದುರಾಗಿದೆ.

ತನಿಖೆ ವೇಳೆ ಇದೇ ರೀತಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಯನಾಡಿನಲ್ಲಿ ತಾಯಿ-ಮಗನ ಬಂಧನ:

ವಧುವಿನ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ಆರೋಪಿಗಳಿಗಾಗಿ ಮೈಸೂರಿಗೆ ತೆರಳಿದ್ದರು. ಆದರೆ ಪೊಲೀಸರ ದಾಳಿ ವೇಳೆ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು.

ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇರಳದ ವಯನಾಡಿನಲ್ಲಿ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ವಧು-ವರರ ಹುಡುಕಾಟ ನಡೆಸುವವರು ಅಪರಿಚಿತರ ಮಾತುಗಳನ್ನು ನಂಬುವ ಮುನ್ನ ಅವರ ಹಿನ್ನೆಲೆ, ಉದ್ಯೋಗ, ಆಸ್ತಿ ಹಾಗೂ ಇತರ ವಿವರಗಳನ್ನು ಪರಿಶೀಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೆಆರ್‌ಎಸ್‌ಗೆ ಭಾರೀ ನೀರು; 9,438 ಕ್ಯೂಸೆಕ್‌ಗೆ ಒಳಹರಿವು, ಶೀಘ್ರದಲ್ಲೇ ಡ್ಯಾಂ ಭರ್ತಿ!

0

ಮಂಡ್ಯ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವು 9,438 ಕ್ಯೂಸೆಕ್‌ಗೆ ಏರಿಕೆಯಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 108.63 ಅಡಿ ನೀರು ಸಂಗ್ರಹವಾಗಿದ್ದು, 30.367 ಟಿಎಂಸಿ ನೀರು ಲಭ್ಯವಿದೆ.

ಕೆಆರ್‌ಎಸ್‌ ಜಲಾಶಯದಿಂದ ಸದ್ಯ 4,478 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿದು ಒಳಹರಿವು ಹೆಚ್ಚಾದರೆ, ಶೀಘ್ರದಲ್ಲೇ ಕೆಆರ್‌ಎಸ್‌ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಕೆಆರ್‌ಎಸ್‌ಗೆ ಒಳಹರಿವು ಮತ್ತಷ್ಟು ಹೆಚ್ಚಾದರೆ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿಯೂ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ.

ಸೂರ್ಯಪೇಟೆಯಲ್ಲಿ ಭೀಕರ ಅಪಘಾತ; ಟ್ರಕ್‌ಗೆ ಖಾಸಗಿ ಬಸ್ ಡಿಕ್ಕಿ, 6 ಮಂದಿ ಸಾವು!

0

ಹೈದರಾಬಾದ್: ಖಾಸಗಿ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.

ಬುಧವಾರ ಮುಂಜಾನೆ ಸುಮಾರು 5.20ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ವಿಜಯವಾಡದತ್ತ ತೆರಳುತ್ತಿದ್ದ ಖಾಸಗಿ ಬಸ್, ದುರ್ಗಾಪುರಂ ಸ್ಟೇಜ್ ಬಳಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 43 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

‘ಟಾಕ್ಸಿಕ್’ ಅಬ್ಬರ ಶುರು; 4 ವರ್ಷಗಳ ಬಳಿಕ ಯಶ್ ನೋಡಿ ಫ್ಯಾನ್ಸ್ ಫಿದಾ!

0

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ.

ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ.

ಮುಂಜಾನೆ 6 ಗಂಟೆಯಿಂದಲೇ ಹಲವು ಚಿತ್ರಮಂದಿರಗಳಲ್ಲಿ ಶೋ ಆರಂಭವಾಗಿದ್ದು, ನೆಚ್ಚಿನ ನಟ ಯಶ್ ಅವರನ್ನು ತೆರೆ ಮೇಲೆ ಕಂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಚಿತ್ರಮಂದಿರಗಳ ಎದುರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಯಶ್ ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಿನಿಮಾ ಬಿಡುಗಡೆ ಹಬ್ಬವನ್ನು ಆಚರಿಸಿದ್ದಾರೆ.

ವಿಶ್ವಾದ್ಯಂತ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ:

‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ 12 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ ಎನ್ನಲಾಗಿದ್ದು, ಕರ್ನಾಟಕದಲ್ಲೇ 1,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಮುಂಜಾನೆಯಿಂದಲೇ ಶೋ ಆರಂಭವಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ಸಿನಿಮಾಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಯಶ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಅಡ್ವಾನ್ಸ್ ಬುಕಿಂಗ್‌ನಲ್ಲೇ ಭರ್ಜರಿ ಕಲೆಕ್ಷನ್?

ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ‘ಟಾಕ್ಸಿಕ್’ ಭರ್ಜರಿ ಸದ್ದು ಮಾಡಿದೆ. ಅಡ್ವಾನ್ಸ್ ಬುಕಿಂಗ್ ಮೂಲಕವೇ ಸುಮಾರು ₹70 ಕೋಟಿ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಚಿತ್ರಕ್ಕೆ ಸಿಕ್ಕಿರುವ ಕ್ರೇಜ್ ಹಾಗೂ ಬೃಹತ್ ಸ್ಕ್ರೀನ್ ಕೌಂಟ್ ಗಮನಿಸಿದರೆ ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿ ಗಡಿ ದಾಟುವ ಸಾಧ್ಯತೆ ಇದೆ ಎಂಬ ಅಂದಾಜುಗಳು ಕೇಳಿಬರುತ್ತಿವೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಮತ್ತು ಬಾಲಾಜಿ ಮನೋಹರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸಂಜೀದಾ ಶೇಖ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ಅವರೊಂದಿಗೆ ಸೇರಿ ಚಿತ್ರಕಥೆ ಬರೆದಿದ್ದಾರೆ. ಕೆ.ವಿ.ಎನ್. ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶ್ ಚಿತ್ರವನ್ನು ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ, ನಾಲ್ಕು ವರ್ಷಗಳ ಬಳಿಕ ಯಶ್ ಅವರನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳ ಸಂಭ್ರಮಕ್ಕೆ ‘ಟಾಕ್ಸಿಕ್’ ಬಿಡುಗಡೆ ಮತ್ತಷ್ಟು ಕಳೆ ತಂದಿದೆ.