Home Blog Page 71

ಬಿಡದಿ ಟೌನ್ ಶಿಪ್ ವಿರೋಧಿಸಿ ನಾಳೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೂನ್ 21ರಂದು (ಭಾನುವಾರ) ಬೃಹತ್ ಪಾದಯಾತ್ರೆ ನಡೆಯಲಿದೆ. ರೈತರ ಭೂಮಿ ಹಾಗೂ ಜೀವನೋಪಾಯವನ್ನು ಉಳಿಸುವ ಉದ್ದೇಶದಿಂದ ಈ ಹೋರಾಟ ಆಯೋಜಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ಅಂಚಿಪುರ ಗ್ರಾಮದಿಂದ ಆರಂಭವಾಗಲಿರುವ ಪಾದಯಾತ್ರೆಯು ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಎಂಟು ಗ್ರಾಮಗಳ ಮೂಲಕ ಹೊಸೂರುವರೆಗೆ ಸಾಗಲಿದೆ. ಪಾದಯಾತ್ರೆಯ ಸಮಾರೋಪ ಹೊಸೂರಿನಲ್ಲಿ ನಡೆಯಲಿರುವ ಬಹಿರಂಗ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಈ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ನಮ್ಮ ಭೂಮಿ, ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ರೈತರ ಬದುಕು ಮತ್ತು ಕೃಷಿ ಚಟುವಟಿಕೆಗಳನ್ನು ಉಳಿಸಲು ಈ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ಅಂಚಿಪುರ, ಬನ್ನಿಗಿರಿ, ಗೊಲ್ಲಹಳ್ಳಿ ಸೇರಿದಂತೆ ಎಂಟು ಗ್ರಾಮಗಳ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆಯಡಿ ಅಂಚಿಪುರ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 518 ಎಕರೆ ಕೃಷಿ ಭೂಮಿಗೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಇದರ ಜೊತೆಗೆ ಹೆಚ್ಚುವರಿ 7,481 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂದು ನಿಖಿಲ್ ಆರೋಪಿಸಿದರು.

ಈ ಯೋಜನೆಯಿಂದ 755 ರೈತ ಕುಟುಂಬಗಳು, ತಿಂಗಳಿಗೆ ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ತೀವ್ರ ಹಾನಿಯಾಗಲಿದ್ದು, ಸುಮಾರು 10 ಲಕ್ಷ ಹಸಿರು ಮರಗಳು ನಾಶವಾಗುವ ಆತಂಕವಿದೆ ಎಂದು ಅವರು ಹೇಳಿದರು.

ಕಳೆದ 450 ದಿನಗಳಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇನ್ನೂ ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಈ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ, ಪಕ್ಷಾತೀತವಾಗಿ ರೈತರ ಹಕ್ಕುಗಳಿಗಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ರೈತರ ಜಮೀನನ್ನು ಉಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ಜೂನ್ 21ರಂದು ಅಂಚಿಪುರದಿಂದ ಹೊಸೂರಿಗೆ ನಡೆಯುವ ಪಾದಯಾತ್ರೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಬೀದರ್‌ನಲ್ಲಿ ಉಪ ಲೋಕಾಯುಕ್ತರ ದಿಢೀರ್ ದಾಳಿ: ಆಸ್ಪತ್ರೆ ಅವ್ಯವಸ್ಥೆ ಬಯಲು, ಸಿಬ್ಬಂದಿ ಬಳಿ ಲಕ್ಷಾಂತರ ಹಣ ಪತ್ತೆ!

0

ಬೀದರ್: ಸರ್ಕಾರಿ ಸೇವೆಗಳ ಗುಣಮಟ್ಟ ಮತ್ತು ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸಲು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ಬೀದರ್‌ನಲ್ಲಿ ನಡೆಸಿದ ದಿಢೀರ್ ಪರಿಶೀಲನೆ ವೇಳೆ ಆಸ್ಪತ್ರೆ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿನ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.

ಬ್ರಿಮ್ಸ್ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯಗಳ ಕೊರತೆ, ಹಳೆಯ ಹಾಗೂ ಕಳಪೆ ಬೆಡ್‌ಗಳು, ದಿಂಬುಗಳ ದುಸ್ಥಿತಿ, ಕುಡಿಯುವ ನೀರಿನ ಅಭಾವ ಮತ್ತು ರೋಗಿಗಳ ಸಂಬಂಧಿಕರಿಗೆ ಸೂಕ್ತ ವ್ಯವಸ್ಥೆಗಳಿಲ್ಲದಿರುವುದನ್ನು ಕಂಡು ನ್ಯಾಯಮೂರ್ತಿ ವೀರಪ್ಪ ಆಸ್ಪತ್ರೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ ಅವರು, ನಿಯಮಿತ ಪರಿಶೀಲನೆಯ ಕೊರತೆಯೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಅಭಿಪ್ರಾಯಪಟ್ಟರು.

ಪರಿಶೀಲನೆಯ ವೇಳೆ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಸಂಜುಕುಮಾರ್ ಬಳಿ ₹1 ಲಕ್ಷ ನಗದು ಹಾಗೂ ₹1 ಲಕ್ಷ ಮೊತ್ತದ ಚೆಕ್ ಪತ್ತೆಯಾಗಿದ್ದು, ಹಣದ ಮೂಲದ ಬಗ್ಗೆ ಸ್ಪಷ್ಟನೆ ನೀಡಲು ಆತ ವಿಫಲನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪತ್ತೆಯಾದ ಹಣವನ್ನು ವಶಪಡಿಸಿಕೊಳ್ಳುವಂತೆ ಹಾಗೂ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಂತರ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರ ತಂಡ, ಅಲ್ಲಿನ ಅಸ್ವಚ್ಛತೆ, ನಿರ್ವಹಣಾ ವೈಫಲ್ಯ ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿತು. ಬಸ್ ನಿಲ್ದಾಣದಲ್ಲಿನ ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ತೃಪ್ತಿಕರವಾಗಿಲ್ಲವೆಂದು ಕಂಡುಬಂದ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಉಪ ಲೋಕಾಯುಕ್ತರ ದಿಢೀರ್ ಪರಿಶೀಲನೆಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಮತ್ತೆ ಪ್ರಶ್ನೆಗೆ ಒಳಗಾಗಿದೆ.

‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ’: ದರ್ಶನ್ ‘ಡೆವಿಲ್’ಗೆ OTT ದಾರಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಆರು ತಿಂಗಳು ಕಳೆದ ಬಳಿಕ ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಡಿಜಿಟಲ್ ವೇದಿಕೆಗೆ ಕಾಲಿಡಲು ಸಜ್ಜಾಗಿದೆ. ಚಿತ್ರದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಜೀ5 ಪಡೆದುಕೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಪ್ರೇಕ್ಷಕರ ಮನೆಮನೆ ತಲುಪಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ದರ್ಶನ್ ಜೈಲಿನಲ್ಲಿದ್ದಾಗಲೇ ‘ಡೆವಿಲ್’ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಪ್ರಚಾರ ಜವಾಬ್ದಾರಿಯನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಹೊತ್ತುಕೊಂಡಿದ್ದರು. ನಿರೀಕ್ಷಿತ ಮಟ್ಟದ ಯಶಸ್ಸು ಸಿಗದಿದ್ದರೂ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.

ಜೀ5 ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಆಗಮನದ ಕುರಿತು ಸುಳಿವು ನೀಡಿದ್ದು, ದರ್ಶನ್ ಅವರ ಜನಪ್ರಿಯ ಸಂಭಾಷಣೆಯನ್ನು ಬಳಸಿ ಪ್ರಚಾರ ಆರಂಭಿಸಿದೆ. ಇದರಿಂದ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಚಿತ್ರದ ನಿರ್ಮಾಣ ಹಂತದಲ್ಲೇ ದರ್ಶನ್ ಬಂಧನವಾಗಿದ್ದರಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ನಂತರ ಹೈಕೋರ್ಟ್ ನೀಡಿದ ಜಾಮೀನಿನ ಅವಧಿಯಲ್ಲಿ ಅವರು ಉಳಿದ ಕೆಲಸಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಜಾಮೀನು ರದ್ದಾದ ಹಿನ್ನೆಲೆ ಮತ್ತೆ ಜೈಲು ಸೇರಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಡುಗಡೆಯಾದ ‘ಡೆವಿಲ್’ ಇದೀಗ ಒಟಿಟಿ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದೆ.

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದು, ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ 3 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮತ್ತೆ ಆರಂಭವಾಗಿದ್ದು, ಮುಂದಿನ ಮೂರು ಗಂಟೆಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ನಗರದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಹಗಲಿನ ವೇಳೆಯಲ್ಲೇ ಕತ್ತಲೆ ಆವರಿಸಿದಂತ ವಾತಾವರಣ ಕಂಡುಬಂದಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯಂತೆ, ಮುಂದಿನ ಕೆಲ ಗಂಟೆಗಳವರೆಗೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಈಗಾಗಲೇ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್ ಸುತ್ತಮುತ್ತ ಮಳೆ ಆರಂಭವಾಗಿದ್ದು, ಪ್ಯಾಲೆಸ್ ಗ್ರೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಕೆಲವೆಡೆ ವಾಹನ ಸಂಚಾರ ನಿಧಾನಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯ ಪ್ರಕಾರ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ಮರಗಳ ಕೆಳಗೆ ನಿಲ್ಲುವುದು, ಅಗತ್ಯವಿಲ್ಲದಿದ್ದರೆ ಹೊರಗಡೆ ಸಂಚರಿಸುವುದನ್ನು ತಪ್ಪಿಸುವುದು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸಲಹೆ ನೀಡಲಾಗಿದೆ.

ಜುಲೈ 6ಕ್ಕೆ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ

ಬೆಂಗಳೂರು: ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ಇತ್ಯಾದಿ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಭಾಗವಾಗಿ ಆಪ್ಷನ್ (ಆಯ್ಕೆ/ಇಚ್ಛೆ) ಗಳನ್ನು ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.

ಜೂನ್ 30ರ ಬೆಳಿಗ್ಗೆ 10ರವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್ ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜುಲೈ‌ 6ರಂದು ಬೆಳಿಗ್ಗೆ 11ಕ್ಕೆ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ಜುಲೈ 9ರವರೆಗೆ ಇಚ್ಛೆ/ಆಯ್ಕೆ ಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು/ಮಾರ್ಪಡಿಸಲು ಅವಕಾಶ ನೀಡಲಾಗುತ್ತದೆ. ಅದಾದ ಮೂರು ದಿನಗಳ ನಂತರ ಜುಲೈ 15ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಸೋಮವಾರದ ನಂತರ ಆಪ್ಷನ್ಸ್ ದಾಖಲಿಸಲಿ. ಸದ್ಯ ನೀಟ್ ಪರೀಕ್ಷೆ ಕಡೆಗೆ ಗಮನ ಇರಲಿ ಎಂದು ಅವರು ಸಲಹೆ‌ ನೀಡಿದ್ದಾರೆ. ಕೃಷಿ, ಪಶು ವೈದ್ಯಕೀಯ, ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದೆ.

ಎಂಜಿನಿಯರಿಂಗ್ ಕೋರ್ಸ್ ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅಂತಿಮ ಪಟ್ಟಿಗೆ ಕಾಯುತ್ತಿದ್ದೇವೆ. ಬಂದ ನಂತರ ಎಲ್ಲ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುವುದು. ಅಲ್ಲಿಯವರೆಗೂ ಅಭ್ಯರ್ಥಿಗಳು ಕಾಯುವ ಅಗತ್ಯ ಇಲ್ಲ. ಬದಲಿಗೆ ಪರ್ಯಾಯವಾಗಿ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ವಿವರಿಸಿದರು.

ಪ್ರೀ ಸುತ್ತಿನ ಕೌನ್ಸೆಲಿಂಗ್ ಇಲ್ಲ:

ನೀಟ್ ಮರು ಪರೀಕ್ಷೆ ಕಾರಣಕ್ಕೆ ವೈದ್ಯಕೀಯ ಅಲ್ಲದೆ ಇತರ ಕೋರ್ಸ್ ಓದುವ ಅಭ್ಯರ್ಥಿಗಳಿಗೆ ಆಗುತ್ತಿದ್ದ ವಿಳಂಬ ತಪ್ಪಿಸಲು ಪ್ರೀ ಸುತ್ತಿನ ಸೀಟು ಹಂಚಿಕೆಗೆ ಮಾಡಿದ್ದ ತೀರ್ಮಾನವನ್ನು ಕೈಬಿಟ್ಟಿದ್ದು, ಈ ಮೊದಲಿನ ಹಾಗೆಯೇ‌ ಮೊದಲ ಸುತ್ತಿನಿಂದಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಸನ್ನ ಅವರು ತಿಳಿಸಿದ್ದಾರೆ.

ಯಾರಿಗೆ ಇಚ್ಛೆ ಪ್ರಕಾರ ಸೀಟು ಸಿಗುತ್ತದೊ ಅಂತಹವರಿಗೆ ಹೋಗಿ ಪ್ರವೇಶ ಪಡೆಯಲು ಪ್ರೀ ಸುತ್ತಿನಲ್ಲಿ ಅವಕಾಶ ನೀಡುವ ಯೋಜನೆ ಇತ್ತು. ಆದರೆ ಈ ಬಗ್ಗೆ ಅನೇಕರು ಪ್ರೀ ಸುತ್ತಿನಲ್ಲಿ ಸೀಟು ಉನ್ನತೀಕರಣ ಸೇರಿದಂತೆ ಮೊದಲ ಸುತ್ತಿನಲ್ಲಿರುವ ಛಾಯ್ಸ್ ಗೆ ಅವಕಾಶ ನೀಡಬೇಕೆನ್ನುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕೃಷಿ ಅಧಿಕಾರಿ: ದಿನಾಂಕ ವಿಸ್ತರಣೆ:

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 25ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ. ಬಿ.ಇ ಬಯೊಟೆಕ್ನಾಲಜಿ ಪದವಿಯನ್ನು ಬಿ.ಟೆಕ್ ಬಯೋಟೆಕ್ನಾಲಜಿ ಪದವಿಗೆ ಸಮಾನವೆಂದು ಸರ್ಕಾರ ಪರಿಗಣಿಸಿದೆ. ಹೀಗಾಗಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಇ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ಜನರ ಅಹವಾಲುಗಳಿಗೆ ಸರ್ಕಾರದ ಹೊಸ ವೇದಿಕೆ: ‘ಪ್ರಜಾಸೇವೆ ಇಲಾಖೆ’ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ರಾಜ್ಯದ ಜನಸಾಮಾನ್ಯರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟ ಸಭೆಯಲ್ಲಿ ‘ಪ್ರಜಾಸೇವೆ ಇಲಾಖೆ’ ಎಂಬ ಹೊಸ ಇಲಾಖೆಯನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಈ ಹೊಸ ಇಲಾಖೆಯನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು. ಈ ಇಲಾಖೆ ಕೇವಲ ಅಹವಾಲುಗಳನ್ನು ಸಂಗ್ರಹಿಸುವ ಮಟ್ಟಕ್ಕೆ ಸೀಮಿತವಾಗದೆ, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

ಸರ್ಕಾರದ ಯೋಜನೆಯಂತೆ, ಪ್ರಜಾಸೇವೆ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಿಸಲಾಗುವುದು. ಜೊತೆಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇಲಾಖೆಯ ಆಡಳಿತ ಮತ್ತು ಕಾರ್ಯನಿರ್ವಹಣೆಯ ಜವಾಬ್ದಾರಿ ವಹಿಸಲಿದ್ದಾರೆ. ಈ ಇಲಾಖೆ ‘ಪೋಸ್ಟ್‌ಮ್ಯಾನ್’ ರೀತಿಯಲ್ಲಿ ಕೇವಲ ಅರ್ಜಿಗಳನ್ನು ರವಾನಿಸುವ ಕೆಲಸ ಮಾಡುವುದಿಲ್ಲ. ಬದಲಿಗೆ ಜನರ ಅಹವಾಲುಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಹೊಸ ವ್ಯವಸ್ಥೆಯಡಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರು ಸ್ಥಳೀಯ ಶಾಸಕರೊಂದಿಗೆ ವಾರಕ್ಕೊಮ್ಮೆ ಸಭೆ ನಡೆಸಲಿದ್ದಾರೆ. ಈ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಇಲಾಖೆಗಳ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಈ ಹಿಂದೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಇದೀಗ ಸಚಿವ ಸಂಪುಟವೂ ಅದಕ್ಕೆ ಅಧಿಕೃತ ಅನುಮೋದನೆ ನೀಡಿದ್ದು, ಇಲಾಖೆಗೆ ‘ಪ್ರಜಾಸೇವೆ ಇಲಾಖೆ’ ಎಂದು ನಾಮಕರಣ ಮಾಡಲಾಗಿದೆ.

ಈ ಇಲಾಖೆಯ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳು, ಅಹವಾಲುಗಳು ಹಾಗೂ ಬೇಡಿಕೆಗಳನ್ನು ಅಧಿಕೃತವಾಗಿ ಸಲ್ಲಿಸಲು ಅವಕಾಶ ದೊರೆಯಲಿದೆ. ಅರ್ಜಿಗಳನ್ನು ಹೇಗೆ ಸಲ್ಲಿಸಬೇಕು, ಯಾರನ್ನು ಸಂಪರ್ಕಿಸಬೇಕು, ಇಲಾಖೆಯ ಕಾರ್ಯವೈಖರಿ ಹೇಗಿರಲಿದೆ ಎಂಬುದರ ಕುರಿತು ಸರ್ಕಾರ ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಮುಖ್ಯಮಂತ್ರಿ, ರಾಜ್ಯದಲ್ಲಿ ಪ್ರತಿದಿನ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸೂಕ್ತ ಪರಿಹಾರ ನೀಡುವ ಉದ್ದೇಶದಿಂದಲೇ ಈ ಹೊಸ ಇಲಾಖೆಯನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾನು ಅಡ್ಡ ಮತದಾನ ಮಾಡಿಲ್ಲ: ಚಂದ್ರು ಲಮಾಣಿ ಸ್ಪಷ್ಟನೆ

0

ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪದ ಬಗ್ಗೆ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸ್ಪಷ್ಟನೆ ನೀಡಿದ್ದು, ಆರೋಪಗಳನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ.

ತಮ್ಮ ವಿರುದ್ಧ ಹರಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ ಅವರು, ಪಕ್ಷದಿಂದ ಜಾರಿ ಮಾಡಲಾದ ವಿಪ್ ಪ್ರಕಾರವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಚಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ಒಟ್ಟು 60 ಶಾಸಕರಿಗೆ ಮತದಾನ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದರು.

ಪಕ್ಷದ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆ. ಯಾವುದೇ ಅಡ್ಡ ಮತದಾನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ಹೆಸರುಗಳನ್ನು ಅನಗತ್ಯವಾಗಿ ವಿವಾದಕ್ಕೆ ಎಳೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡುವುದು ತಪ್ಪು ಎಂದು ಹೇಳಿದರು.

ಸಿ.ಟಿ. ರವಿ ನೇತೃತ್ವದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿಯ ತನಿಖೆಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಭರ್ಜರಿ ಸುದ್ದಿ: ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌

ಬೆಂಗಳೂರು: ಮೈಸೂರು–ಫಂಡರಾಪುರ ನಡುವೆ ಸಂಚರಿಸುವ ಪ್ರಮುಖ ರೈಲು ಸೇವೆಯಾದ ಗೋಲಗುಂಬಜ್ ಎಕ್ಸ್‌ಪ್ರೆಸ್‌ಗೆ ರೈಲ್ವೆ ಮಂಡಳಿ ಮಹತ್ವದ ಅನುಮೋದನೆ ನೀಡಿದೆ. ಇನ್ನು ಮುಂದೆ ಈ ರೈಲು ಹುಬ್ಬಳ್ಳಿ ಹಾಗೂ ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸಲಿದ್ದು, ಪ್ರಯಾಣಿಕರಿಗೆ ವೇಗ ಹಾಗೂ ಅನುಕೂಲ ಹೆಚ್ಚಲಿದೆ.

ರೈಲ್ವೆ ಮಂಡಳಿಯ ಈ ನಿರ್ಧಾರದಿಂದ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ದೀರ್ಘಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಬೈಪಾಸ್ ಮಾರ್ಗದ ಅನುಮೋದನೆಗಾಗಿ ಹಲವು ಬಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯ ಪ್ರಕಾರ, ಗೋಲಗುಂಬಜ್ ಎಕ್ಸ್‌ಪ್ರೆಸ್ ಈಗ ಹುಬ್ಬಳ್ಳಿ ಹಾಗೂ ಗದಗ ನಗರಗಳ ಒಳನಿಲ್ದಾಣಗಳಿಗೆ ಪ್ರವೇಶಿಸುವುದಿಲ್ಲ. ಬದಲಾಗಿ ಹುಬ್ಬಳ್ಳಿ ದಕ್ಷಿಣ ಹಾಗೂ ಗದಗ ಬೈಪಾಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುವುದು. ಇದರಿಂದ ರೈಲು ಸಂಚಾರ ಹೆಚ್ಚು ಸುಗಮವಾಗಲಿದ್ದು, ಪ್ರಯಾಣ ಅವಧಿ ಸುಮಾರು 55 ನಿಮಿಷ ಕಡಿಮೆಯಾಗಲಿದೆ.

ಸಚಿವರ ಪ್ರಕಾರ, ಬೈಪಾಸ್ ಮಾರ್ಗ ಜಾರಿಗೆ ಬಂದ ನಂತರ ಮೈಸೂರು–ಫಂಡರಾಪುರ ನಡುವೆ ಪ್ರಯಾಣದ ಸಮಯದಲ್ಲಿ ಗಣನೀಯ ಉಳಿತಾಯವಾಗಲಿದೆ. ಹೊಸ ವೇಳಾಪಟ್ಟಿಯಂತೆ, ಮೈಸೂರಿನಿಂದ ಮಧ್ಯಾಹ್ನ 3:50ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 10:05ಕ್ಕೆ ಫಂಡರಾಪುರ ತಲುಪಲಿದೆ. ಫಂಡರಾಪುರದಿಂದ ಮಧ್ಯಾಹ್ನ 1:15ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 11:30ಕ್ಕೆ ಮೈಸೂರು ತಲುಪಲಿದೆ.

ಇದಲ್ಲದೆ, ವಿಜಯಪುರ–ಬೆಂಗಳೂರು ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ವಿಶೇಷ ರೈಲನ್ನು ಕಾಯಂ ಸೇವೆಯಾಗಿ ಪರಿವರ್ತಿಸುವಂತೆ ಸಚಿವರು ರೈಲ್ವೆ ಮಂಡಳಿಗೆ ಒತ್ತಾಯಿಸಿದ್ದಾರೆ. ಈ ನಿರ್ಧಾರದಿಂದ ಉತ್ತರ ಕರ್ನಾಟಕದ ರೈಲು ಸಂಪರ್ಕ ಮತ್ತಷ್ಟು ಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನ ಆಧಾರಿತ ಡಾಕ್ಯುಮೆಂಟರಿ ಮಾಡಲು ಸಜ್ಜಾದ ನಟ ಆಮಿರ್ ಖಾನ್

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ಪೂರ್ತಿದಾಯಕ ಜೀವನವನ್ನು ತೆರೆಗೆ ತರುವ ಮಹತ್ವದ ಪ್ರಯತ್ನಕ್ಕೆ ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ಆಮಿರ್ ಖಾನ್ ಮುಂದಾಗಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ವಿಶೇಷ ಡಾಕ್ಯುಮೆಂಟರಿಯನ್ನು ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ನಿರ್ದೇಶಿಸುತ್ತಿದ್ದಾರೆ.

ದ್ರೌಪದಿ ಮುರ್ಮು ಅವರ ಬಾಲ್ಯ, ಒಡಿಶಾದ ಗ್ರಾಮೀಣ ಬದುಕು, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿನ ಅವರ ಏರಿಕೆ ಮತ್ತು ರಾಷ್ಟ್ರಪತಿ ಹುದ್ದೆವರೆಗೆ ತಲುಪಿದ ಐತಿಹಾಸಿಕ ಪಯಣವನ್ನು ಡಾಕ್ಯುಮೆಂಟರಿ ದಾಖಲಿಸಲಿದೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣಗಳ ಜೊತೆಗೆ, ವೈಯಕ್ತಿಕ ಬದುಕಿನ ಕಷ್ಟಕರ ಅಧ್ಯಾಯಗಳನ್ನೂ ಚಿತ್ರದಲ್ಲಿ ಒಳಗೊಂಡಿರಲಿದೆ.

ಮೂಲಗಳ ಪ್ರಕಾರ, ಡಾಕ್ಯುಮೆಂಟರಿಯ ಪ್ರಮುಖ ಚಿತ್ರೀಕರಣವನ್ನು ಒಡಿಶಾದಲ್ಲೇ ನಡೆಸಲಾಗಿದೆ. ದ್ರೌಪದಿ ಮುರ್ಮು ಅವರ ಬಾಲ್ಯದ ನೆನಪುಗಳನ್ನು ಜೀವಂತಗೊಳಿಸುವ ಉದ್ದೇಶದಿಂದ ಸ್ಥಳೀಯ ಕಲಾವಿದರ ನೆರವಿನಿಂದ ಹಲವಾರು ದೃಶ್ಯಗಳನ್ನು ಮರುನಿರ್ಮಿಸಲಾಗಿದೆ.

2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು, ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಹಾಗೂ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ್ದರು. ಅವರ ಈ ಅಸಾಧಾರಣ ಸಾಧನೆಯ ಹಿಂದಿನ ಹೋರಾಟವನ್ನು ಡಾಕ್ಯುಮೆಂಟರಿ ಮೂಲಕ ಜಗತ್ತಿಗೆ ಪರಿಚಯಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ಇದೀಗ ಆಮಿರ್ ಖಾನ್ ಪ್ರೊಡಕ್ಷನ್ಸ್ ಹಲವು ಮಹತ್ವದ ಯೋಜನೆಗಳಲ್ಲಿ ತೊಡಗಿಕೊಂಡಿದ್ದು, ದ್ರೌಪದಿ ಮುರ್ಮು ಕುರಿತ ಈ ಡಾಕ್ಯುಮೆಂಟರಿ ಅವರ ನಿರ್ಮಾಣ ಸಂಸ್ಥೆಯ ಮತ್ತೊಂದು ಗಮನಾರ್ಹ ಪ್ರಯತ್ನವಾಗಿ ಹೊರಹೊಮ್ಮಿದೆ.

‘ಡಾನ್ 3’ ಗದ್ದಲಕ್ಕೆ ಫುಲ್ ಸ್ಟಾಪ್? 18 ತಿಂಗಳು ಇಂಟರ್ವ್ಯೂ ಇಲ್ಲ: ರಣವೀರ್ ಸಿಂಗ್‌ನಿಂದ ಸೈಲೆಂಟ್ ಸ್ಟ್ರಾಟೆಜಿ

ಮುಂಬೈ: ‘ಡಾನ್ 3’ ಚಿತ್ರದಿಂದ ಹೊರಬಂದಿರುವುದಾಗಿ ಹರಿದಾಡುತ್ತಿರುವ ವರದಿಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳ ನಡುವೆ ಬಾಲಿವುಡ್ ನಟ ರಣವೀರ್ ಸಿಂಗ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮುಂದಿನ 18 ತಿಂಗಳ ಕಾಲ ಯಾವುದೇ ಮಾಧ್ಯಮ ಸಂದರ್ಶನ ನೀಡದಿರಲು ಅವರು ನಿರ್ಧರಿಸಿದ್ದು, ಈ ಮೂಲಕ ಸಾರ್ವಜನಿಕ ಚರ್ಚೆಗಳಿಂದ ಸಂಪೂರ್ಣ ದೂರ ಉಳಿಯಲಿದ್ದಾರೆ.

ರಣವೀರ್ ತಂಡದ ಮೂಲಗಳ ಪ್ರಕಾರ, ‘ಡಾನ್ 3’ ವಿವಾದದ ಕುರಿತು ಯಾವುದೇ ವೇದಿಕೆಯಲ್ಲಿ ಮಾತನಾಡದಿರಲು ನಟ ತೀರ್ಮಾನಿಸಿದ್ದಾರೆ. ಈ ಸಂಬಂಧ ಮಾಧ್ಯಮ ಸಂಸ್ಥೆಗಳಿಂದ ಬಂದಿರುವ ಎಲ್ಲಾ ಸಂದರ್ಶನ ಮನವಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇತ್ತೀಚೆಗೆ ರಣವೀರ್ ಸಿಂಗ್ ಅವರ ಆಪ್ತ ವಲಯ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ, ನಟ ಸದ್ಯ ತಮ್ಮ ವೃತ್ತಿಜೀವನದ ಮುಂದಿನ ಯೋಜನೆಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದು, ವಿವಾದಗಳಿಗೆ ಪ್ರತಿಕ್ರಿಯಿಸುವ ಬದಲು ಮೌನದ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.

ಸದ್ಯ ಅವರು ಜೈ ಮೆಹ್ತಾ ನಿರ್ದೇಶನದ ‘ಪ್ರಳಯ’ ಸಿನಿಮಾದ ಚಿತ್ರೀಕರಣ ಹಾಗೂ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ಕೋವಿಡ್ ಕಾಲಘಟ್ಟದ ಹಿನ್ನೆಲೆಯ ಜಾಂಬಿ ಡ್ರಾಮಾ ಶೈಲಿಯ ಈ ಸಿನಿಮಾ ರಣವೀರ್ ವೃತ್ತಿಜೀವನದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.

‘ಪ್ರಳಯ’ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಪ್ರಚಾರಾತ್ಮಕ ಸಂದರ್ಶನ ಅಥವಾ ಮಾಧ್ಯಮ ಸಂವಾದದಲ್ಲಿ ಭಾಗವಹಿಸದಿರಲು ರಣವೀರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ‘ಡಾನ್ 3’ ವಿವಾದದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವೂ ಇದಾಗಿದೆ ಎಂದು ಬಾಲಿವುಡ್ ವಲಯ ವಿಶ್ಲೇಷಿಸುತ್ತಿದೆ.