Home Blog Page 71

ಜಾತ್ರೆಗಳು ಸಹಬಾಳ್ವೆಯಿಂದ ಬದುಕಲು ಕಲಿಸುತ್ತವೆ: ಕೃಷ್ಣಗೌಡ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಮಾನವೀಯತೆ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಜಾತ್ರೆಗಳು ಸಾರುತ್ತವೆ. ಬದಲಾಗುತ್ತಿರುವ ಸಾಮಾಜಿಕ ಪರಿಸರದಲ್ಲಿ ಜಾತ್ರೆಗಳು ಸಾರುವ ಮೌಲ್ಯಗಳು ಹೊಸ ಸಮಾಜ ಕಟ್ಟಲು ಸಹಕಾರಿಯಾಗಲಿವೆ ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ 18 ವರ್ಷಗಳ ಬಳಿಕ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತ್ರೆಗಳು ಸಮಾಜದಲ್ಲಿ ರಚನಾತ್ಮಕ ಕಾರ್ಯಗಳಿಗೆ ಹಾಗೂ ಸೇವೆಯ ಮೂಲಕ ಸಾಮಾಜಿಕ ಬದಲಾವಣೆಗೆ ಅವಕಾಶ ಕಲ್ಪಿಸುವ ನೆಪವಾಗಿವೆ. ಆದರೆ ಪದ್ಧತಿ, ಸಂಸ್ಕೃತಿ ಒಂದೆಡೆಯಾದರೆ ಯುವಕರ ನಡೆ ಮತ್ತೊಂದೆಡೆ ಸಾಗುತ್ತಿರುವುದು ವಿಪರ್ಯಾಸ. ನಕಾರಾತ್ಮಕ ಮತ್ತು ಸಕಾರಾತ್ಮಕದ ನಡುವಿನ ಸೂಕ್ಷ್ಮ ಗೆರೆಯನ್ನು ಗಮನಿಸಿ ಯುವ ಸಮುದಾಯ ಮುನ್ನಡೆಯಬೇಕು. ಆಗ ಸಮಾಜದಲ್ಲಿ ಸಹಬಾಳ್ವೆ, ಭ್ರಾತೃತ್ವ ಹಾಗೂ ಒಗ್ಗಟ್ಟು ಬಲಗೊಳ್ಳಲಿದೆ ಎಂದರು.

ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸುವವರು ಇಂದು ಅಗತ್ಯವಾಗಿದ್ದಾರೆ. ಮತ್ತೊಬ್ಬರ ವಿಚಾರಧಾರೆಯನ್ನು ಒಪ್ಪಿ, ಸ್ವೀಕರಿಸಿ, ಗೌರವಿಸಿ ಮುನ್ನಡೆಯುವುದೇ ಭ್ರಾತೃತ್ವದ ಕಲ್ಪನೆ. ಇದನ್ನು ಸಮಾಜ ಸ್ವೀಕರಿಸಿದರೆ ಪ್ರಗತಿ ಸಾಧ್ಯ. ಭ್ರಾತೃತ್ವದ ಭಾವನೆ ವ್ಯಕ್ತಪಡಿಸಲು ಹಿಂಜರಿದರೆ ಸಮಾಜ ನಿರೀಕ್ಷಿಸಿದಷ್ಟು ಬದಲಾವಣೆ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಾತ್ರೆಗಳು ಸಾರುವ ಸಹೋದರತ್ವ, ಭ್ರಾತೃತ್ವ ಮತ್ತು ಮಾನವೀಯತೆಯ ಮೌಲ್ಯಗಳನ್ನು ಆಚರಣೆಗೆ ತರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿದರು.

ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಷರಸಾಬ ಬಬರ್ಚಿ, ನಗರಸಭಾ ಸದಸ್ಯರಾದ ಮೆಹಬೂಬಸಾಬ ನದಾಫ್ ಹಾಗೂ ಬರಕತ್ ಅಲಿ ಮುಲ್ಲಾ ಮಾತನಾಡಿ, ಹರಿಜಾತ್ರೆ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವ ಬೀರಿದೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಎಂತಹ ಕಾರ್ಯವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದಕ್ಕೆ ಜಾತ್ರೆ ನಿದರ್ಶನವಾಗಿದೆ ಎಂದರು.

ಪಂ. ಹೂಲಿ ಆಚಾರ್ಯ ಮಾತನಾಡಿ, ಮಹಾಭಾರತದಲ್ಲಿ ವೀರತ್ವ, ಬುದ್ಧಿ, ಧರ್ಮ, ಲೋಕನೀತಿ ಹಾಗೂ ವೇದಧರ್ಮದ ಸಾರವಿದೆ. ಮಹಾಭಾರತವನ್ನು ಓದುವುದರಿಂದ ಭಾವಶುದ್ಧಿಯಾಗುತ್ತದೆ. ಕರ್ಣನ ತ್ಯಾಗ, ಅರ್ಜುನನ ಶೌರ್ಯ, ಶ್ರೀಕೃಷ್ಣನ ಮಾರ್ಗದರ್ಶನ ಸೇರಿದಂತೆ ಕುರುಕ್ಷೇತ್ರ ಯುದ್ಧದ ಹಲವು ಪ್ರಸಂಗಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.

ಜಾತ್ರಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಮೋಹನ ಕಮತರ, ಶಿವಯೋಗಿ ತೆಂಗಿನಕಾಯಿ, ಸಿದ್ದಣ್ಣ ಸಂಗನಾಳ, ಬಸಪ್ಪ ವಜ್ರಬಂಡಿ, ವಿನೋದ ಮೊರಬದ, ಸಂತೋಷ ಕಬಾಡರ, ಈರಣ್ಣ ಮೇಟಿ, ಮಂಜುನಾಥ, ಶೇಖಪ್ಪ ಸುನೀತ, ವೆಂಕಣ್ಣ ಈರಣ್ಣ ಹೇಮಾದ್ರಿ, ರವಿ ಹುಡೇದ, ಈಶಪ್ಪ ಸೇರಿದಂತೆ ಗಣ್ಯರು, ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

ಶ್ರೀಮತಿ ವಿಜಯಲಕ್ಷ್ಮಿ ವೀರಶೆಟ್ಟರ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸಂಸ್ಕೃತಿಯೇ ನಮ್ಮ ಹೆಮ್ಮೆ. ಜಾತ್ರೆಗಳು ಸಹಬಾಳ್ವೆಯ ಅವಕಾಶವನ್ನು ಒದಗಿಸುತ್ತವೆ. ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅಡಿಯಲ್ಲಿ ನಡೆಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಸಂಕಲ್ಪವನ್ನು ಜಾತ್ರೆಗಳ ಮೂಲಕ ಅನುಷ್ಠಾನಗೊಳಿಸಬೇಕು.

— ಕೆ.ಎಚ್. ಪಾಟೀಲ

ಕಲಿಯುಗ ವಿನಾಶದ ಅಂಚಿನಲ್ಲಿದೆ ; ದೇವರು–ಧರ್ಮದ ಆರಾಧನೆ ಅಗತ್ಯ: ಅಭಿನವ ಸಿದ್ದಲಿಂಗ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ದೇವರು, ಧರ್ಮ ಹಾಗೂ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಕಲಿಯುಗ ವಿನಾಶದ ಅಂಚಿಗೆ ಬಂದು ನಿಂತಿದೆ. ಮಾನವ ಕುಲದ ರಕ್ಷಣೆ ಗುರು, ಧ್ಯಾನ, ದಾನ, ಧರ್ಮ ಹಾಗೂ ದೇವರ ಆರಾಧನೆಯಿಂದ ಮಾತ್ರ ಸಾಧ್ಯ ಎಂದು ಧಾರವಾಡದ ಸಿದ್ದಸುಕ್ಷೇತ್ರ ನಯಾನಗರದ ಶ್ರೀಗುರು ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧಿಕಾರ, ಜಾತಿ, ಗತ್ತು, ದೌಲತ್ತು ತಾಯಿಯ ಎದುರು ನಡೆಯುವುದಿಲ್ಲ. ತಾಯಿಗೆ ತಲೆಬಾಗಿ ನಡೆದರೆ ತಲೆ ಎತ್ತಿ ಬದುಕುವಂತಹ ಜೀವನವನ್ನು ಆಕೆ ನೀಡುತ್ತಾಳೆ. ದೇವರಿಗೆ ಶರಣಾದರೆ ಬದುಕು ಸುಂದರವಾಗುತ್ತದೆ. ಮಾನವ ಜೀವನದ ನಿಜವಾದ ಸುಖ ದೇವರು ಮತ್ತು ಗುರುವಿನ ಆಶೀರ್ವಾದವನ್ನು ಅವಲಂಬಿಸಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಹಿಂದಿನ ಪೂಜ್ಯರು ನುಡಿದಿದ್ದ ಹಲವು ಭವಿಷ್ಯವಾಣಿಗಳು ಇಂದಿನ ಕಾಲದಲ್ಲಿ ಸತ್ಯವಾಗುತ್ತಿವೆ. ‘ಕಲ್ಲುಕೋಳಿ ಕೂಗ್ಯಾವ’ ಎಂದರೆ ಮೊಬೈಲ್ ಹಾಗೂ ‘ಜೀವವಿಲ್ಲದ ಹಕ್ಕಿ ಹಾರಾವ’ ಎಂದರೆ ವಿಮಾನ ಎಂದು ಅವರು ವ್ಯಾಖ್ಯಾನಿಸಿದರು.

ಗವಿಸಿದ್ದೇಶ್ವರ ಶಾಖಾಮಠದ ಪೂಜ್ಯ ಶ್ರೀ ಶಿವಶಾಂತವೀರ ಮರಿಸ್ವಾಮೀಜಿ ಮಾತನಾಡಿ, ಶ್ರೀ ದ್ಯಾಮಮ್ಮ ಮತ್ತು ದುರ್ಗಮ್ಮ ದೇವಿಯರ ಜಾತ್ರೆ ಹರಕೆ ತೀರಿಸುವ ಜತೆಗೆ ಅರಿವಿನ ಹಾಗೂ ಅನ್ನದಾಸೋಹದ ಜಾತ್ರೆಯಾಗಿದೆ. ಇಂದಿನ ಮಕ್ಕಳು ಸಂಸ್ಕಾರ ಮರೆಯುತ್ತಿದ್ದು, ಪಾಲಕರು ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಹಾಗೂ ಅರಿವು ಮೂಡಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ದೇವರು ಕೊಟ್ಟಿದ್ದನ್ನು ಹಂಚಿಕೊಂಡು ಅದರಲ್ಲಿ ಸುಖಪಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದಕ್ಕಿಂತ ಪುಣ್ಯದ ಕಾರ್ಯ ಬೇರೊಂದಿಲ್ಲ ಎಂದು ಶಿವಶಾಂತವೀರ ಮರಿಸ್ವಾಮೀಜಿ ಹೇಳಿದರು.

ಒಗ್ಗಟ್ಟಿಗೆ ಸಾಕ್ಷಿಯಾದ ಹರಿಜಾತ್ರೆ

ರತ್ನಾಕರ ವಾಣಿ ದಿನಪತ್ರಿಕೆ ಸಂಪಾದಕ ಜಗದೀಶ ಪೂಜಾರ ಮಾತನಾಡಿ, 12 ವರ್ಷಗಳಿಗೊಮ್ಮೆ ನಡೆಯುವ ಈ ಹರಿಜಾತ್ರೆಯಲ್ಲಿ ದರ್ಶನ ಪಡೆಯುವುದೇ ಸೌಭಾಗ್ಯ. ಪ್ರತಿದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ, ವಿಶೇಷ ಸಾಲು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ದಾನಿಗಳು ತನು-ಮನದಿಂದ ಸೇವೆ ಸಲ್ಲಿಸುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಹರಿಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು. ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಶ್ರೀ ನೀಲಮ್ಮತಾಯಿ ಅಸುಂಡಿ, ಫಕ್ಕೀರಪ್ಪ ಹೆಬಸೂರ, ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ರಾಜಶೇಖರ ಕಲ್ಲೂರ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎಂಬುದಕ್ಕೆ ಈ ಹರಿಜಾತ್ರೆ ಸಾಕ್ಷಿಯಾಗಿದೆ. ಜಾತಿ-ಮತ ಭೇದ ಮರೆತು ಹಿರಿಯರು, ಕಿರಿಯರು ಒಗ್ಗೂಡಿ ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಒಂದಾಗುವುದಕ್ಕೆ ಈ ಜಾತ್ರೆ ನೆಪವಾಗಿದೆ.

— ಜಗದೀಶ ಪೂಜಾರ, ಸಂಪಾದಕ, ರತ್ನಾಕರ ವಾಣಿ ದಿನಪತ್ರಿಕೆ

ಸೆ. 21,22ಕ್ಕೆ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪೂರ–ಗದಗ ಹಾಗೂ ಕಪ್ಪತ್ತಗಿರಿ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎರಡು ದಿನಗಳ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಹಾಗೂ ವಿಚಾರ ಸಂಕಿರಣವನ್ನು ಸೆ.20 ಮತ್ತು 21ರಂದು ಗದಗ ನಗರದಲ್ಲಿ ಆಯೋಜಿಸಲಾಗಿದೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನ ನೀಡುವುದರ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಂತಹ ನಿಷ್ಠಾವಂತ, ಪ್ರಾಮಾಣಿಕ, ಪ್ರಬುದ್ಧ ಹಾಗೂ ಶೈಕ್ಷಣಿಕ ಪರಿಣಿತಿ ಹೊಂದಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಫೌಂಡೇಶನ್‌ನ ಪ್ರಮುಖ ಉದ್ದೇಶವಾಗಿದೆ.

ಈ ಉದ್ದೇಶದಿಂದ ಫೌಂಡೇಶನ್ ಪ್ರತಿವರ್ಷ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಉತ್ತಮ ಶಿಕ್ಷಕರನ್ನು ಗುರುತಿಸಿ ಅವರ ಸೇವೆಯನ್ನು ಗೌರವಿಸುತ್ತಾ ಬಂದಿದೆ. ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ ಹಾಗೂ ಗದಗ ಶಹರ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ.

ವಿಶೇಷವಾಗಿ, ಈ ವರ್ಷ ರಾಜ್ಯದ ಪ್ರತಿ ಜಿಲ್ಲೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಮಹತ್ವದ ಉದ್ದೇಶವನ್ನು ಫೌಂಡೇಶನ್ ಹೊಂದಿದೆ. ಕ್ರಿಯಾಶೀಲ ಹಾಗೂ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಫೌಂಡೇಶನ್ ವತಿಯಿಂದ ಗುರುತಿಸಿ, ಅವರು ಸೇವೆ ಸಲ್ಲಿಸುತ್ತಿರುವ ಶಾಲೆ, ಕಾಲೇಜು ಅಥವಾ ಮನೆ ವಿಳಾಸಕ್ಕೆ ಆಯ್ಕೆ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ.

ಸೆ.20ರಂದು ಭಾನುವಾರ ಹಾಗೂ ಸೆ.21ರಂದು ಸೋಮವಾರ ಎರಡು ದಿನಗಳ ಕಾಲ ಗದಗ ನಗರದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಮತ್ತು ವಿಚಾರ ಸಂಕಿರಣ ನಡೆಯಲಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಫೌಂಡೇಶನ್ ಸಂಚಾಲಕರಾದ ರಮೇಶ ನಾಯ್ಕ (ಮೊ. 9686611343), ತೋಟಯ್ಯ ಗುಡ್ಡಿಮಠ (ಮೊ. 9901132516) ಹಾಗೂ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ (ಮೊ. 7795293736) ಅವರನ್ನು ಸಂಪರ್ಕಿಸಬಹುದು.

ಪಾಂಡುರಂಗ ದೇವಸ್ಥಾನದಲ್ಲಿ ಜ್ಞಾನೇಶ್ವರಿ ಪಾರಾಯಣ ರಜತ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ ರಜತ ಮಹೋತ್ಸವ ಹಾಗೂ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರತಿಷ್ಠಾಪನಾ ಮಹೋತ್ಸವ ಆ.25ರಿಂದ 29ರವರೆಗೆ ಐದು ದಿನಗಳ ಕಾಲ ಭಕ್ತಿಭಾವದಿಂದ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಮಂಚರಿಗಾಥಾ ಭಜನೆ, ಪ್ರವಚನ, ನಾಮಜಪ, ಕೀರ್ತನೆ, ಜಾಗರ ಭಜನೆ ಹಾಗೂ ಭಾರೂಡ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಭಕ್ತರಿಗೆ ಉಪಹಾರ ಹಾಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಆ.26ರಂದು ಬೆಳಿಗ್ಗೆ 7.50ಕ್ಕೆ ಪಂಡರಪುರದ ಚೈತನ್ಯ ಸದ್ಗುರು ಶ್ರೀ ಗೋಪಾಲ ಮಹಾರಾಜ ಹಾಗೂ ಶ್ರೀ ಪ್ರಭಾಕರ ದಾದಾ ಭುಜಂಗರಾವ್ ಬೋಧಲೆ ಮಹಾರಾಜ ಅವರ ಅಮೃತಹಸ್ತದಿಂದ ಶ್ರೀ ಪಾಂಡುರಂಗ–ರಕುಮಾಯಿ ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ.

ಆ.28ರಂದು ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಕೀರ್ತನೆ ಹಾಗೂ ರಾತ್ರಿ ಜಾಗರ ಭಜನೆ, ಭಾರೂಡ ನಡೆಯಲಿದೆ. ಆ.29ರಂದು ಬೆಳಿಗ್ಗೆ ಕಾಕಡಾ ಆರತಿ, ಪಾರಾಯಣ ಹಾಗೂ ಮಂಚರಿಗಾಥಾ ಭಜನೆ ಬಳಿಕ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಹ.ಭ.ಪ. ಸುನೀಲ ಬಾಬರ ಗುರೂಜಿ, ಕಲಬುರಗಿ ಅವರಿಂದ ಕಾಲಾ ಕೀರ್ತನೆ ನಡೆಯಲಿದೆ.

ಬಳಿಕ ‘ವಾರಕರಿ ರತ್ನ’ ಹ.ಭ.ಪ. ತುಕಾರಾಮ ಪವಾರ, ಕೊಲ್ಲಾಪುರ ಅವರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಶಾಸಕ ರಾಮಣ್ಣ ಲಮಾಣಿ ಹಾಗೂ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಪಾಂಡುರಂಗ–ರಕುಮಾಯಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಕಪ್ಪತ್ತಗುಡ್ಡದ ಮಡಿಲಲ್ಲಿ ಕವಿತೆಗಳ ಕಂಪು: ಮಳೆಯ ನಡುವೆ ಕವಿ ಸಮ್ಮೇಳನಕ್ಕೆ ತೆರೆ

0

ವಿಜಯಸಾಕ್ಷಿ ಸುದ್ದಿ, ಗದಗ: ಮಳೆಯ ಸಿಂಚನದ ನಡುವೆಯೇ ಕವಿಗಳು ಕವಿತೆಗಳನ್ನು ವಾಚಿಸುವ ಮೂಲಕ ಕಪ್ಪತ್ತಗುಡ್ಡದ ಪರಿಸರದಲ್ಲಿ ನಡೆದ ಜಿಲ್ಲಾ ಮಟ್ಟದ ಕವಿ ಸಮ್ಮೇಳನದ ಸಮಾರೋಪ ಸಮಾರಂಭ ಗಮನ ಸೆಳೆಯಿತು.

ಕವಿಗಳು ಜನಮಾನಸವನ್ನು ತಿದ್ದುವ ಶಕ್ತಿ ಹೊಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕವಿಗಳಿಗೆ ಅಪಾರ ಮನ್ನಣೆ ಇದೆ. ಕಪ್ಪತ್ತಗುಡ್ಡದ ಪರಿಸರ ಹೊಸ ಕವಿಗಳಿಗೆ ಬರವಣಿಗೆಯ ಚೈತನ್ಯ ಹಾಗೂ ಸ್ಫೂರ್ತಿ ನೀಡಲಿ ಎಂದು ಬಸವಬೆಟ್ಟ ಕಡಕೋಳ-ಕಪ್ಪತಗಿರಿಯ ಶರಣೆ ಓಂಕಾರೇಶ್ವರಿ ಮಾತಾಜಿ ಹೇಳಿದರು.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿ ಕಪ್ಪತ್ತಗುಡ್ಡದ ಸೆರಗಿನ ದೇವರೆಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ನಡೆದ ಜಿಲ್ಲಾ ಮಟ್ಟದ ಕವಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಮ್ಮೇಳನದಲ್ಲಿ ವಾಚಿಸಲಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಉತ್ತಮ ಕವಿತೆಗಳು ಅಧ್ಯಯನಶೀಲತೆಯಿಂದ ಮೂಡಿಬರುತ್ತವೆ. ಕಮ್ಮಟಗಳನ್ನು ಸಂಘಟಿಸುವ ಮೂಲಕ ಯುವ ಕವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದೇವರೆಡ್ಡಿ ಅಗಸನಕೊಪ್ಪ, ಬಸವರಾಜ ಪಲ್ಲೇದ ಮಾಗಡಿ, ಸಮ್ಮೇಳನ ಸಂಯೋಜಕರಾದ ಸುರೇಶ ಕುಂಬಾರ, ರಮಾಕಾಂತ ಕಮತಗಿ, ಪಿ.ಆರ್. ಹಿರೇಮಠ, ನಿಂಗಪ್ಪ ಮಾಚೇನಹಳ್ಳಿ, ಶರಣಪ್ಪ ಹರ್ಲಾಪೂರ, ಪ್ರಗತಿಪರ ರೈತರಾದ ಯಲ್ಲಪ್ಪ ನಾವಿ, ಕಡಕೋಳ ಹಾಗೂ ತಿಪ್ಪಣ್ಣ ಕೆಳಗಡೆ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ರಾಷ್ಟ್ರಧ್ವಜಾರೋಹಣವನ್ನು ಸುಶೀಲಮ್ಮ ಅಗಸನಕೊಪ್ಪ, ನಾಡಧ್ವಜಾರೋಹಣವನ್ನು ಮಾಜಿ ಸಚಿವ ಎಸ್.ಎಸ್. ಪಾಟೀಲ ಕಲಕೇರಿ ಹಾಗೂ ಪರಿಷತ್ ಧ್ವಜಾರೋಹಣವನ್ನು ವಿವೇಕಾನಂದಗೌಡ ಪಾಟೀಲ ನೆರವೇರಿಸಿದರು.

ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಹಾಗೂ ಸಾಮರಸ್ಯ ನಡಿಗೆಯನ್ನು ನಂದಿವೇರಿಮಠದ ಶಿವಕುಮಾರಸ್ವಾಮಿಗಳ ಸಮ್ಮುಖದಲ್ಲಿ ಶ್ರೀ ಕಪ್ಪತ್ತಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಶಿರಹಟ್ಟಿ-ಕಡಕೋಳ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಕೆ.ಎ. ಬಳಿಗೇರ, ವೀರಣ್ಣ ಮಜ್ಜಗಿ, ರುದ್ರಣ್ಣ ಗುಳಗುಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಿತು.

ಭಾವಗಳು ಅರಳಿದಾಗಲೇ ಜಗತ್ತಿನಲ್ಲಿ ಶಾಂತಿ ಸಾಧ್ಯ: ತೋಂಟದ ಸಿದ್ಧರಾಮ ಶ್ರೀ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಈ ಬಹುತ್ವವೇ ಭಾರತದ ಅಸ್ಮಿತೆಯಾಗಿದೆ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2812ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ರಚಿಸಿರುವ ‘ಭಾವೈಕ್ಯತೆಯ ಬೆಳಕು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ನಿವೃತ್ತ ಶಿಕ್ಷಕ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ನಿವೃತ್ತ ಶಿಕ್ಷಕ ಎಸ್.ಎಂ. ವಾಲಿ ಅವರನ್ನು ಗೌರವಿಸಿ ಆಶೀರ್ವದಿಸಲಾಯಿತು.

ಜಗತ್ತಿನ ಹಲವು ಭಾಗಗಳಲ್ಲಿ ಇಂದು ಯುದ್ಧಗಳು ನಡೆಯುತ್ತಿದ್ದು, ಜನರು ಭಯಗ್ರಸ್ತ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ನೆಲೆಸಬೇಕಾದರೆ ಮನುಷ್ಯರ ನಡುವೆ ಭಾವನೆಗಳು ಅರಳಬೇಕು. ಪರಸ್ಪರ ಪ್ರೀತಿ, ದಯೆ ಮತ್ತು ಭ್ರಾತೃತ್ವದ ಭಾವನೆ ಬೆಳೆಸುವ ಅಗತ್ಯವಿದೆ ಎಂದರು.

ವಿವಿಧ ಕಾಲಘಟ್ಟಗಳಲ್ಲಿ ಸಮಾಜದ ಒಳಿತಿಗಾಗಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು ಹಾಗೂ ಹೋರಾಟಗಾರರು ಜನ್ಮತಳೆದಿದ್ದಾರೆ. ಅವರು ತಮ್ಮ ಜೀವನದ ಮೂಲಕ ಇಡೀ ಮನುಕುಲದ ಬಗ್ಗೆ ಪ್ರೀತಿ ಮತ್ತು ದಯೆ ಬೆಳೆಸುವ ಸಂದೇಶ ನೀಡಿದ್ದಾರೆ. ಮುಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಆದರ್ಶ ಮತ್ತು ಮೌಲ್ಯಗಳನ್ನು ಇಂದಿನ ಸಮಾಜ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಾನವೀಯ ಮೌಲ್ಯಗಳನ್ನು ‘ಭಾವೈಕ್ಯತೆಯ ಬೆಳಕು’ ಕೃತಿ ಒಳಗೊಂಡಿದೆ ಎಂದು ಹೇಳಿದರು.

ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಹಿರಿಯರನ್ನು ಗೌರವಿಸಿ ಮಾತನಾಡಿದ ಅವರು, ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ತಂದೆ-ತಾಯಿ, ಹಿರಿಯರು ಹಾಗೂ ಗುರುಗಳನ್ನು ಗೌರವಿಸುವ ಸಮಾಜವೇ ಸುಸಂಸ್ಕೃತ ಸಮಾಜ. ಹೊಸ ತಲೆಮಾರು ಹಿರಿಯರನ್ನು ಗೌರವಿಸುವ ಹಾಗೂ ಅವರ ಅನುಭವಗಳನ್ನು ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು. ಹಳೆ ಬೇರು, ಹೊಸ ಚಿಗುರು ಇದ್ದಾಗಲೇ ಮರ ಸೊಬಗಾಗಿರುವಂತೆ, ಮನೆಯಲ್ಲಿ ಹಿರಿಯರು ಇದ್ದಾಗ ಕುಟುಂಬಕ್ಕೆ ಶೋಭೆ ಬರುತ್ತದೆ ಎಂದರು.

ಕೃತಿ ಪರಿಚಯ ಮಾಡಿದ ಗದಗ ಜಮಾತ್-ಎ-ಇಸ್ಲಾಂ ಅಧ್ಯಕ್ಷ ಎ.ಐ. ಶೇಖ ಮಾತನಾಡಿ, ‘ಭಾವೈಕ್ಯತೆಯ ಬೆಳಕು’ ಎಲ್ಲರನ್ನು ಒಂದುಗೂಡಿಸುವ ಹಾಗೂ ಏಕತೆಯನ್ನು ಸಾಧಿಸುವ ಅಪರೂಪದ ಕೃತಿಯಾಗಿದೆ. ಲೇಖಕ ಡಾ. ಸಮುದ್ರಿ ಅವರು ಭಾರತದ ಬಹುತ್ವವನ್ನು ಎತ್ತಿಹಿಡಿದಿರುವುದರ ಜೊತೆಗೆ, ಮೊದಲು ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಪ್ರತಿಪಾದಿಸಿದ್ದಾರೆ. ಕೃತಿಯನ್ನು ಯುವಕರಿಗೆ ಅರ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಕೃತಿಯ ಲೇಖಕ ಡಾ. ಎಂ.ಡಿ. ಸಮುದ್ರಿ ಮಾತನಾಡಿ, ಕೃತಿ ರಚನೆಗೆ ತಂದೆ-ತಾಯಿ, ಕುಟುಂಬ, ಗುರುಗಳು ಸೇರಿದಂತೆ ಅನೇಕರು ನೀಡಿದ ಸಹಾಯ-ಸಹಕಾರವನ್ನು ಸ್ಮರಿಸಿ, ಅವರಿಗೆ ಚಿರಋಣಿಯಾಗಿರುವುದಾಗಿ ಹೇಳಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಕುಮಾರಿ ಸ್ಫೂರ್ತಿ ಸೈದಾಪುರ ಹಾಗೂ ವಚನ ಚಿಂತನವನ್ನು ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು. ದಾಸೋಹ ಸೇವೆಯನ್ನು ವಿವಿಧ ಕುಟುಂಬಗಳ ವತಿಯಿಂದ ಕೈಗೊಳ್ಳಲಾಯಿತು.

ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯದ ಕುರಿತು ಪ್ರವಚನ ನೀಡಿದರು. ಹಿರಿಯರಾದ ಡಾ. ಜಿ.ಬಿ. ಪಾಟೀಲ, ಶಿವನಗೌಡ ಗೌಡರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ವೀ. ಪುರದ ಸ್ವಾಗತಿಸಿದರು. ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ ಕಾರ್ಯಕ್ರಮ ನಿರೂಪಿಸಿದರು.

ಜಗತ್ತಿನಲ್ಲಿ ಶಾಂತಿ, ನೆಮ್ಮದಿ ಮತ್ತು ಪ್ರೀತಿ ಮೂಡಬೇಕಾದರೆ ಮನುಷ್ಯರ ಮಧ್ಯೆ ಭಾವಗಳು ಅರಳಬೇಕು. ಮುಹಮ್ಮದ್ ಪೈಗಂಬರ್, ಬಸವೇಶ್ವರ, ಬುದ್ಧ, ಮಹಾವೀರ ಸೇರಿದಂತೆ ಮಹನೀಯರ ಮಾನವೀಯ ಆದರ್ಶ ಮತ್ತು ಮೌಲ್ಯಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ

ಆ. 26ರಂದು ಪೈಗಂಬರ್ ಜಯಂತಿ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಈದ್ ಮಿಲಾದ್ ಕಮಿಟಿ ವತಿಯಿಂದ ಆ. 26ರಂದು ಹಜರತ್ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ನಗರದ ಉರ್ದು ಸೆಂಟ್ರಲ್ ಸ್ಕೂಲ್‌ನಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಜುಮನ್-ಏ-ಇಸ್ಲಾಂ ಕಮಿಟಿ ಸದಸ್ಯ ಬಾಷಾಸಾಬ್ ಮಲ್ಲಸಮುದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ನೇತೃತ್ವವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ವಹಿಸಲಿದ್ದು, ಜಮಿಯತೆ ಉಲ್ಮಾ ಕಮಿಟಿ ಅಧ್ಯಕ್ಷ ಮೌಲಾನಾ ಇನಾಯಿತುಲ್ಲಾಸಾಬ ಸಾನ್ನಿಧ್ಯ ವಹಿಸಲಿದ್ದಾರೆ. ಮೌಲಾನಾ ಅಬ್ದುಲ್ ರಹೀಂ ಚಂದುನವರ ಪ್ರಾರ್ಥನಾ ಗೀತೆ ಹಾಡಲಿದ್ದಾರೆ ಎಂದರು.

ಮಾಜಿ ಸಚಿವ, ಶಾಸಕ ಡಾ. ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಳಗಾವಿ ಜಮಿಯತೆ ಉಲ್ಮಾ ಜಿಲ್ಲಾ ಕಾರ್ಯದರ್ಶಿ ಹಜರತ್ ಮೌಲಾನಾ ಮಹಮ್ಮದ್ ಆರೀಫ್‌ಸಾಬ್ ಇನಾಮಿ ಉಪನ್ಯಾಸ ನೀಡಲಿದ್ದಾರೆ. ಎನ್‌ಡಬ್ಲ್ಯುಆರ್‌ಟಿಸಿ ಹುಬ್ಬಳ್ಳಿ ಮಾಜಿ ಉಪಾಧ್ಯಕ್ಷ ಪೀರಸಾಬ ಕೌತಾಳ ಬಟ್ಟೆ ವಿತರಿಸಲಿದ್ದಾರೆ. ಆಸೀಫ್ ದಂಡಿನ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಜಯಂತ್ಯುತ್ಸವದ ಅಂಗವಾಗಿ ಪಠ್ಯಪುಸ್ತಕ ವಿತರಣೆ, ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅವಳಿ ನಗರದ ಎಲ್ಲ ಮುಸ್ಲಿಂ ಜಮಾತ್‌ಗಳ ಮುತವಲ್ಲಿಗಳ ಸಹಯೋಗದಲ್ಲಿ ಮಸೀದಿಗಳ ಮುಅಜ್ಜಿನ್‌ಗಳಿಗೆ ಒಂದು ಜೊತೆ ಬಟ್ಟೆ ನೀಡಿ ಗೌರವಿಸಲಾಗುವುದು. ಸೂಫಿ ಸಂತರೂ ಸೇರಿದಂತೆ ಗಣ್ಯರನ್ನು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಪೈಗಂಬರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಜಯಂತ್ಯುತ್ಸವದ ಅಂಗವಾಗಿ ಯಾವುದೇ ಡಿಜೆ ಮೆರವಣಿಗೆ ಇರುವುದಿಲ್ಲ. ಸರ್ವಧರ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆಸೀಫ್ ದಂಡಿನ, ಯೂಸೂಫ್ ಡಂಬಳ, ಅಹ್ಮದ್ ಖಾಜಿ, ಆರೀಫ್ ಹುನಗುಂದ, ಯೂಸೂಫ್ ಕೊಟ್ಟೂರ, ಕರೀಮ್ ಸುಣಗಾರ, ಅಬೂಬಕರ್ ಅಣ್ಣಿಗೇರಿ, ಯೂಸೂಫ್ ನಮಾಜಿ, ರಝಾ ಡಂಬಳ, ಪಾಷಾ ಕಪಾಲಿ, ಶಮೀರ್ ಜಮಾದಾರ, ಶಬ್ಬಿರ ಅಹ್ಮದ್‌ಸಾಬ್ ಬೋದ್ಲೆಖಾನ್, ರಾಜು ಪೆಂಡಾರಿ, ಉಸ್ಮಾನ ಮಾಳೆಕೊಪ್ಪ, ಇಬ್ರಾಹಿಂ ಕಿಲ್ಲೇದಾರ, ಯಾಸೀನ್ ಖಾಜಿ ಸೇರಿದಂತೆ ಈದ್ ಮಿಲಾದ್ ಕಮಿಟಿ ಪದಾಧಿಕಾರಿಗಳು ಇದ್ದರು.

ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ಗೆ ಅವಕಾಶ ಬೇಡ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ವಕಾರುಸಾಲು ಸೇರಿದಂತೆ ವಿವಿಧ ನಗರಸಭೆ ಆಸ್ತಿಗಳನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿ, ಅಭಿವೃದ್ಧಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಅವಕಾಶ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರು ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ಪ್ರದೇಶಗಳಲ್ಲಿರುವ ನಗರಸಭೆ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಧಿಕಾರಕ್ಕೆ ನೀಡುವ ಬದಲು ಸ್ಥಳೀಯ ಜನರ ಹಿತಾಸಕ್ತಿಗೆ ಅನುಗುಣವಾಗಿ ಬಳಸಬೇಕು. ನಗರದಲ್ಲಿ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಇಂತಹ ಸಮಸ್ಯೆಗಳು ಬಗೆಹರಿಯದೆ ಇರುವಾಗ ದೊಡ್ಡ ವಾಣಿಜ್ಯ ಕಟ್ಟಡ, ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಆದ್ಯತೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಗರಸಭೆಯ ಆಸ್ತಿಗಳು ಸಾರ್ವಜನಿಕರ ಆಸ್ತಿಗಳಾಗಿವೆ. ಅವುಗಳ ಅಭಿವೃದ್ಧಿಯಿಂದ ನಗರಸಭೆಗೆ ಆದಾಯ ಹೆಚ್ಚುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳು ಸೃಷ್ಟಿಯಾಗಬೇಕು. ಆದರೆ, ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿದರೆ ಸ್ಥಳೀಯ ಸಣ್ಣ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ಗ್ಯಾರೇಜ್ ಮಾಲೀಕರು ಹಾಗೂ ಸಣ್ಣ ಉದ್ಯಮಿಗಳಿಗೆ ತೊಂದರೆಯಾಗಲಿದೆ ಎಂದರು.

ನಗರದಲ್ಲಿ ಸಣ್ಣ ಗ್ಯಾರೇಜ್, ಕಾರ್ ಪೇಂಟಿಂಗ್, ವೆಲ್ಡಿಂಗ್ ಸೇರಿದಂತೆ ವಿವಿಧ ವೃತ್ತಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳನ್ನು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸ್ಥಳಾಂತರಿಸಿರುವುದು ಸರಿಯಲ್ಲ. ಅಭಿವೃದ್ಧಿ ಕಾಮಗಾರಿಗಳಿಂದ ಸ್ಥಳೀಯರಿಗೆ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳು ದೊರೆಯುವಂತಿರಬೇಕು. ಹೊರಗಿನ ದೊಡ್ಡ ಕಂಪನಿಗಳಿಗೆ ಮಾತ್ರ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬಾರದು ಎಂದು ಹೇಳಿದರು.

ಗದಗದ ಹತ್ತಿ ವ್ಯಾಪಾರ ಸೇರಿದಂತೆ ಸಾಂಪ್ರದಾಯಿಕ ವಾಣಿಜ್ಯ ಚಟುವಟಿಕೆಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಸ್ಥಳೀಯ ವ್ಯಾಪಾರ ಮತ್ತು ಉದ್ಯಮಗಳಿಗೆ ಉತ್ತೇಜನ ನೀಡುವ ಬದಲು ಸಾರ್ವಜನಿಕ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವುದು ಗದಗದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ವಿವಿಧ ಕಾಮಗಾರಿಗಳನ್ನು ಕೈಗೊಂಡರೂ ನಗರದ ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ. ಹೀಗಿರುವಾಗ ಸಾರ್ವಜನಿಕ ಆಸ್ತಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಜನರ ಅಭಿಪ್ರಾಯ ಪಡೆಯಬೇಕು. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡು ಯೋಜನೆ ಮುಂದುವರಿಸಿದರೆ ಜನರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು. ಅಗತ್ಯಬಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ವೆಂಕನಗೌಡ ಗೋವಿಂದಗೌಡ್ರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಮ್. ಎಸ್. ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ ಸೇರಿದಂತೆ ಅನೇಕರಿದ್ದರು.

‘ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್’ ಸೀರತ್ ಅಭಿಯಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ದಿನದ ಪ್ರಯುಕ್ತ ಆ.26ರಿಂದ ಸೆ.6ರವರೆಗೆ ರಾಜ್ಯಾದ್ಯಂತ ‘ಕ್ರಾಂತಿಯ ಜ್ಯೋತಿ–ಪ್ರವಾದಿ ಮುಹಮ್ಮದ್ (ಸ)’ ಎಂಬ ಶೀರ್ಷಿಕೆಯಡಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ಗದಗ ಜಿಲ್ಲಾ ಅಧ್ಯಕ್ಷ ಕೆ.ಐ. ಶೇಖ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರು ಜಗತ್ತಿಗೆ ಸಾರಿದ ಸಂದೇಶವು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯನ್ನು ಆಧರಿಸಿತ್ತು. ಜನರ ಮನಸ್ಸುಗಳನ್ನು ಸಂಸ್ಕರಿಸಿ, ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ವ್ಯಕ್ತಿ ಹಾಗೂ ಸಮಾಜದ ಪರಿವರ್ತನೆಗೆ ಅವರು ಕಾರಣರಾದರು ಎಂದರು.

ಪ್ರವಾದಿ ಮುಹಮ್ಮದ್ (ಸ) ಅವರ ಕ್ರಾಂತಿ ಅಪ್ಪಟ ಮಾನವೀಯ ಕ್ರಾಂತಿಯಾಗಿದ್ದು, ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತ ಸೇರಿದಂತೆ ಮಾನವ ಜೀವನದ ವಿವಿಧ ಕ್ಷೇತ್ರಗಳನ್ನು ಒಳಗೊಂಡಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣವೇ ಅವರ ಗುರಿಯಾಗಿತ್ತು. ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶಗಳನ್ನು ಕನ್ನಡಿಗರಿಗೆ ಪರಿಚಯಿಸುವುದು, ಅವರ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಹಾಗೂ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಅಭಿಯಾನದ ಅಂಗವಾಗಿ ನಗರದ ನೌಕರ ಭವನ, ಶಹಾಪುರ ಪೇಟೆ, ರಾಜೀವಗಾಂಧಿ ನಗರ ಸೇರಿದಂತೆ ವಿವಿಧೆಡೆ ಸೀರತ್ ಅಭಿಯಾನದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ರಾಜ್ಯದ ವಿವಿಧೆಡೆ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಪ್ರದರ್ಶನ, ಸಮಾಜಸೇವಾ ಚಟುವಟಿಕೆ ಹಾಗೂ ಸೌಹಾರ್ದ ಸಂದೇಶ ರ‍್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ಬರೆದ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್ (ಸ)’ ಹಾಗೂ ವಾರ್ತಾ ಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಬರೆದ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಕೆ.ಎಂ. ಬಿಲ್ಲಿವಾಲೆ, ಜುನೈದ್ ಉಮಚಗಿ, ಮಹಮ್ಮದ್ ಮುಲ್ಲಾ, ಯೂಸುಫ್ ನಮಾಜಿ, ಡಾ. ಪ್ಯಾರಾಅಲಿ, ರಿಯಾಜ್ ಶೇಖ್, ಜಿ.ಬಿ. ಖಾಜಿ, ರಾಜೀಸಾಬ್ ಕಲ್ಮನಿ ಹಾಗೂ ಶಬ್ಬೀರ ಮೌಲಾನಾ ಇದ್ದರು.

ಹರಿಪುರದಲ್ಲಿ ಸಂಭ್ರಮದ ವೀರಭದ್ರೇಶ್ವರ ಅಗ್ನಿಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸಮೀಪದ ಹರಿಪುರದಲ್ಲಿ ಶ್ರೀ ವೀರಭದ್ರೇಶ್ವರ ದೇವರ 38ನೇ ವರ್ಷದ ಅಗ್ನಿಮಹೋತ್ಸವವು ಶ್ರಾವಣ ಮಾಸದ ದ್ವಾದಶಿ ದಿನವಾದ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು.

ಸಂಪ್ರದಾಯದಂತೆ ಬೆಳಿಗ್ಗೆ 6 ಗಂಟೆಗೆ ಶ್ರೀ ಶಂಕರಲಿಂಗೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವರಿಗೆ ಎಲೆಪೂಜೆ, ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಬೆಳಿಗ್ಗೆ 8 ಗಂಟೆಗೆ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವವು ನಂದಿಧ್ವಜ, ಸಮ್ಮಾಳಗಳು, ಮುತ್ತೈದೆಯರು ಹಾಗೂ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಪುರವಂತರು ವೀರಭದ್ರದೇವರ ಒಡಪುಗಳನ್ನು ಹೇಳುತ್ತಾ, ಶಸ್ತ್ರಗಳನ್ನು ಧರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಮಧ್ಯಾಹ್ನ 1 ಗಂಟೆಯ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ಅಗ್ನಿಕುಂಡದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಗ್ನಿಹಾಯ್ದು ಭಕ್ತಿ ಸಮರ್ಪಿಸಿದರು. ಈ ವೇಳೆ ಮೊಳಗಿದ ‘ಹರ ಹರ ಮಹಾದೇವ’ ಘೋಷ ಮುಗಿಲು ಮುಟ್ಟಿತು. ನಂತರ ಮಹಾಪ್ರಸಾದ ವಿತರಿಸಲಾಯಿತು.

ಅಗ್ನಿಮಹೋತ್ಸವದ ನೇತೃತ್ವವನ್ನು ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಂಕ್ರಪ್ಪ ಕಾಳಗಿ, ಚಂದ್ರಶೇಖರ ಕಾಳಗಿ, ಬಸವರಾಜ ದೇಸಾಯಿಪಟ್ಟಿ, ಶಂಭು ಕಾಳಗಿ, ಬಸವರಾಜ ಮೂರಶಿಳ್ಳಿ, ವಿಜಯಕುಮಾರ ದೇಸಾಯಿಪಟ್ಟಿ, ಪ್ರಸನ್ನ ಮೂರಶಿಳ್ಳಿ, ದೇವಪ್ಪ ಗದಗಿನ, ನೀಲಕಂಠಪ್ಪ ಕಾಳಗಿ, ಮಂಜುನಾಥ ಸೊಂಟನೂರ, ವೀರೇಶ ದೇಸಾಯಿಪಟ್ಟಿ, ಗಂಗಪ್ಪ ದೇಸಾಯಿಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.