Home Blog Page 82

ಇಂದು ರಾಜ್ಯದೆಲ್ಲೆಡೆ ಶುಷ್ಕ ವಾತಾವರಣ; ಬೆಂಗಳೂರಿನ ತಾಪಮಾನದಲ್ಲಿ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮುಂದುವರಿದಿರುವ ಬಿಸಿಲಿನ ತೀವ್ರತೆ ನಡುವೆ ಇಂದು ಕೂಡ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿದ್ದು, ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉಷ್ಣಾಂಶ ಹೆಚ್ಚಾಗಿದ್ದು, ಒಣ ಗಾಳಿಯೇ ಆವರಿಸಿದೆ. ಇಂದಿನಿಂದ ಇನ್ನೂ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳು ಕಾಣಿಸದಿದ್ದು, ಒಣ ಹವೆ ಮುಂದುವರಿಯಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಮಾರ್ಚ್ ಎರಡನೇ ವಾರದ ಬಳಿಕ ನಗರದಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಲಾಗಿದೆ.

ಹೀಟ್ ಸ್ಟ್ರೋಕ್ ಹಾಗೂ ದೇಹದ ನೀರಿನ ಕೊರತೆ (ಡಿಹೈಡ್ರೇಶನ್) ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ವಿಶೇಷ ಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್! ಗದಗ, ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ

ಬೆಂಗಳೂರು: ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ, ಗದಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.

ಬೆಳಿಗ್ಗೆ 6 ಗಂಟೆಯಿಂದಲೇ ಹಲವಾರು ತಂಡಗಳಾಗಿ ವಿಭಜನೆಗೊಂಡು ಕಾರ್ಯಾಚರಣೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ವೆಟರ್ನರಿ ಕಾಲೇಜು ಹೆಬ್ಬಾಳದ ಅಸಿಸ್ಟೆಂಟ್ ಪ್ರೊಫೆಸರ್ ಇಂದರೇಶ್ ಮತ್ತು ಸಿಂಗನಾಯಕನಹಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಶಶಿಧರ್ ಮನೆ ಮತ್ತು ಕಚೇರಿಗಳ ಮೇಲೆ ಪರಿಶೀಲನೆ ನಡೆದಿದೆ.

ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವಿರೇಶ್ ಹಿರೇಮಠ್ ಅವರ ನಿವಾಸದ ಮೇಲೂ ದಾಳಿ ನಡೆದಿದ್ದು, ಮಂಡ್ಯದಲ್ಲಿ PWD ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಅವರ ಮನೆ ಮತ್ತು ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದೆ.

ಧಾರವಾಡದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡ, ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ ಮತ್ತು ಮೈಸೂರಿನ ಜಲಮಂಡಳಿಯ ಎಇಇ ಆಶಿಫ್ ಇಕ್ಬಾಲ್ ಹಾಗೂ ವಿಜಯಪುರದ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ. ಅವರ ಮನೆಗಳಲ್ಲಿಯೂ ಪರಿಶೀಲನೆ ನಡೆದಿದ್ದು, ಕೆಲವು ಸ್ಥಳಗಳಲ್ಲಿ ಅಧಿಕಾರಿಗಳು ಬಾಗಿಲು ತೆರೆಯದೆ ಹೈಡ್ರಾಮ ಸ್ಥಿತಿ ಉಂಟಾಯಿತು.

ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ದಾಖಲಾತಿ ಪರಿಶೀಲನೆಗಿಂತ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಬಿಸಿಎಂ ಶಿರಹಟ್ಟಿ ತಾಲ್ಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ!

0

ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮರಿಗೌಡ ಸುರಕೋಡ ಅವರ ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಗದಗ ನಗರದ ಕಳಸಾಪೂರ ರಸ್ತೆಯ ಹೆರಕಲ್ ಲೇಔಟ್‌ನಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದ್ದು, ಗದಗ ಮತ್ತು ಧಾರವಾಡ ಸೇರಿ ಆರು ತಂಡಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ಪಿ ವಿಜಯ ಬಿರಾದಾರ ಸೇರಿದಂತೆ ಹಲವು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿ ವೇಳೆ ಅಪಾರ ಪ್ರಮಾಣದ ಬೇನಾಮಿ ಆಸ್ತಿ ದಾಖಲೆಗಳು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅಳಿಯ ಸೇರಿದಂತೆ ಹಲವರ ಹೆಸರಿನಲ್ಲಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದೆ. ಇದಲ್ಲದೆ, ಕಚೇರಿ ಸಿಬ್ಬಂದಿಯ ಪತ್ನಿಯ ಹೆಸರಲ್ಲಿ ಆಸ್ತಿ ಇರುವ ಸಾದ್ಯತೆ ಇದ್ದು, ಸಂಬಂಧಿತ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಗದಗ ನಿವಾಸದ ಜೊತೆಗೆ ಶಿರಹಟ್ಟಿ ಕಚೇರಿ ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಂಗಳ ಗ್ರಾಮದಲ್ಲಿರುವ ಮನೆ ಮೇಲೂ ದಾಳಿ ನಡೆಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.

ಮರಕ್ಕೆ ಡಿಕ್ಕಿ ಹೊಡೆದ ಟಾಟಾ ಏಸ್‌ ವಾಹನ: ಇಬ್ಬರು ಸ್ಥಳದಲ್ಲೇ ಸಾವು, 8ಜನರಿಗೆ ಗಾಯ

ಆರ್ಕೆಸ್ಟ್ರಾ ನೋಡಿ ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ

ಗದಗ: ಜಿಲ್ಲೆಯ ಗದಗ–ಹರ್ತಿ ಮಾರ್ಗದಲ್ಲಿ ಗುರುವಾರ ಬೆಳಿಗ್ಗೆ ಟಾಟಾ ಏಸ್ ವಾಹನವು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿಂಗಪ್ಪ ಹನುಮಂತ ಯಳವತ್ತಿ (36) ಹಾಗೂ ಮುತ್ತಪ್ಪ ಶಂಕ್ರಪ್ಪ ಸತ್ತಿಗೇರಿ (35) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ತಕ್ಷಣವೇ ಸಮೀಪದ ಜಿಮ್ಸ್  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಮಾಹಿತಿಯಂತೆ, ಟಾಟಾ ಏಸ್ ವಾಹನದಲ್ಲಿ ಗೊಜುನೂರು ಗ್ರಾಮಕ್ಕೆ ಆರ್ಕೇಸ್ಟ್ರಾ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದವರು ವಾಪಸ್ಸು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಚಾಲಕ ನಿದ್ರೆ ಅಮಲಿನಲ್ಲಿದ್ದ ಕಾರಣದಿಂದ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹೇಮಾವತಿ ಸಂಪರ್ಕ ಕಾಲುವೆ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ

ಬೆಂಗಳೂರು: ಹೇಮಾವತಿ ಸಂಪರ್ಕ ಕಾಲುವೆ ಯೋಜನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಕೇಳಿದ ಹಿನ್ನೆಲೆಯಲ್ಲಿ ಅನುದಾನ ನೀಡಲಾಗಿದೆ. ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಸತ್ತೇಗಾಲದಿಂದ ನೀರು ಬರುವ ಸಮಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲುವೆ ಕಾಮಗಾರಿ ನಡೆಯುತ್ತಿದೆ. ತಾವು ಸ್ವತಃ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆಲಸ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ವಿದೇಶ ಪ್ರವಾಸದಿಂದ ವಾಪಸ್ಸಾದ ಶಾಸಕರು ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹಲವರು ಭೇಟಿ ಮಾಡಿ ಪ್ರವಾಸದಲ್ಲಿ ಕಂಡ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಜೆಟ್ ಕುರಿತು ಪ್ರಶ್ನಿಸಿದಾಗ, ನಮ್ಮ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಬಜೆಟ್ ಮೇಲೆ ಅವಲಂಬಿತವಾಗಿಲ್ಲ. ಪೆನ್ನು–ಕಾಗದ ನನ್ನ ಕೈಯಲ್ಲಿದೆ. ಬಜೆಟ್ ಇರಲಿ, ಇಲ್ಲದಿರಲಿ ಜಿಲ್ಲೆಯ ಕೆಲಸಗಳು ಮುಂದುವರಿಯುತ್ತವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪ್ರತಿ ಶಾಲೆಗೆ 15 ಕೋಟಿ ರೂ. ವೆಚ್ಚದಲ್ಲಿ 25 ಕೆಪಿಎಸ್ ಶಾಲೆಗಳು ನಿರ್ಮಾಣವಾಗುತ್ತಿವೆ. ಈ ಯೋಜನೆಯನ್ನು ನಾವು ಬಜೆಟ್‌ನಲ್ಲಿ ಸೇರಿಸಿಲ್ಲ. ರಾಜ್ಯದಾದ್ಯಂತ 2 ಸಾವಿರ ಶಾಲೆ ನಿರ್ಮಾಣ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡಲಾಗಿತ್ತು. ನಂತರದ ಸರ್ಕಾರ ಅದನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿತು. ಈಗ ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳಿಗೆ ವೈದ್ಯಕೀಯ ಮಹಾವಿದ್ಯಾಲಯ ನೀಡಿದ್ದೇವೆ. ಚನ್ನಪಟ್ಟಣದಲ್ಲೂ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುಮತಿ ನೀಡಲಾಗಿದೆ. ಕನಕಪುರ ಮತ್ತು ರಾಮನಗರ ನಡುವಿನ ದಯಾನಂದ ಸಾಗರ್ ವೈದ್ಯಕೀಯ ಮಹಾವಿದ್ಯಾಲಯವೂ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋಲಾರ: ಶ್ರೀನಿವಾಸಪುರದಲ್ಲಿ ಭೀಕರ ಅಪಘಾತ – ಕಾರು ಪಲ್ಟಿ, ಓರ್ವ ಸಾವು

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಆಂಧ್ರಪ್ರದೇಶ ಮೂಲದ ಬಶೀರ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ರಾಯಲ್ಪಾಡು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಪಟ್ಟಣದಾದ್ಯಂತ ಮುಗಿಲು ಮುಟ್ಟಿದ ಹಲಗೆ ನಾದ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಾ. 3ರ ಮಧ್ಯರಾತ್ರಿಯಿಂದ ಮಾ. 4ರ ಸಂಜೆಯವರೆಗೂ ಶಿರಹಟ್ಟಿ ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಬೃಹತ್ ಹುಲ್ಲುಗಾಮನ ಮೆರವಣಿಗೆ, ಕಾಮದಹನ ಮತ್ತು ಓಕುಳಿ ಹಬ್ಬವು ಸಡಗರ-ಸಂಭ್ರಮದಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಯಿತು.

ಸಂಪ್ರದಾಯದಂತೆ ಹೋಳಿ ಹುಣ್ಣಿಮೆಯ ದಿನವಾದ ಬುಧವಾರ ಮಧ್ಯರಾತ್ರಿ 11 ಗಂಟೆ ಸುಮಾರಿಗೆ ಕುಂಬಾರ ಓಣಿಯಲ್ಲಿ ಹುಲ್ಲಿನಿಂದ ತಯಾರಿಸಿದ ಬೃಹತ್ ಕಾಮನ ಮೂರ್ತಿಯನ್ನು ಸಕಲ ವೇಷಭೂಷಣಗಳೊಂದಿಗೆ ಸಿಂಗರಿಸಿ, ಅಲಂಕೃತ ಬಂಡಿ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಹಸಿರು ತೋರಣಗಳಿಂದ ಅಲಂಕರಿಸಿ ಹಲಗೆಗಳ ಝೇಂಕಾರಗಳ ಮಧ್ಯೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಚಾಲನೆ ನೀಡಲಾಯಿತು. ಬಡಿಗೇರ ಓಣಿ, ಕೆಳಗೇರಿ ಓಣಿ, ಬಜಾರ ರಸ್ತೆ, ದರ್ಗಾ ರಸ್ತೆ, ಮಸೀದಿ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಮಾ. 4ರ ಬೆಳಗಿನ ಜಾವ 9 ಗಂಟೆಗೆ ಮತ್ತೆ ಅದೇ ವೃತ್ತದಲ್ಲಿ ಕಾಮದಹನ ನಡೆಸಲಾಯಿತು.

ಮಂಗಳವಾರ ಮಧ್ಯರಾತ್ರಿಯಿಂದಲೇ ಪಟ್ಟಣದಾದ್ಯಂತ ಹಲಗೆಗಳ ಝೇಂಕಾರ ಮುಗಿಲು ಮುಟ್ಟುವಂತಿತ್ತು. ಕಾಮದಹನ ಮತ್ತು ಓಕುಳಿಯಲ್ಲಿ ಯುವಕರು ತಂಡೋಪತಂಡವಾಗಿ ಹಲಗೆಗಳನ್ನು ಬಾರಿಸುತ್ತಿದ್ದರು. ಯಾರು ಎಷ್ಟೇ ಹೇಳಿದರೂ ತಮಗೆ ಸಾಕಾಗುವವರೆಗೂ ಹಲಗೆಗಳನ್ನು ಬಾರಿಸುತ್ತಾ, ಕುಣಿದು ಕುಪ್ಪಳಿಸಿ, ಬಾಯಿ ಬಡಿದುಕೊಂಡು ಹಬ್ಬದಲ್ಲಿ ತಮ್ಮನ್ನೇ ತಾವು ಮರೆತಂತಿದ್ದರು.

ಬುಧವಾರ ಓಕುಳಿ ಪ್ರಯುಕ್ತ ಓಣಿಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ತಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಪರಸ್ಪರ ಬಣ್ಣ ಹಚ್ಚುವುದರ ಮೂಲಕ ಓಕುಳಿಯನ್ನು ಆಚರಿಸಿದರು. ಯುವಕರು ಅಣಕು ಶವಯಾತ್ರೆ ನಡೆಸಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದರು.

ಮುನ್ನೆಚ್ಚರಿಕಾ ಕ್ರಮವಾಗಿ ಡಿಎಸ್‌ಪಿಗಳಾದ ಮುರ್ತುಜಾ ಖಾದ್ರಿ ಹಾಗೂ ವಿದ್ಯಾಧರ ನಾಯಕ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿದ್ದರು. ಸ್ಥಳೀಯ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಹೋರಾತ್ರಿ ಬಂದೋಬಸ್ತ್‌ನಲ್ಲಿ ನಿಯೋಜಿತರಾಗಿದ್ದರು.

ಬಿಗಿ ಬಂದೋಬಸ್ತ್

ಹೋಳಿ ಹಬ್ಬದ ಮುನ್ನಾದಿನ ಪಟ್ಟಣಕ್ಕೆ ಎಸ್‌ಪಿ ರೋಹನ್ ಜಗದೀಶ ಭೇಟಿ ನೀಡಿ ಮೆರವಣಿಗೆ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣಕ್ಕೆ 2 ಡಿಎಸ್‌ಪಿ, 4 ಸಿಪಿಐ, 6 ಪಿಎಸ್‌ಐ, 6 ಎಎಸ್‌ಐ, 60 ಎಚ್‌ಸಿ, 60 ಹೋಮ್‌ಗಾರ್ಡ್‌ಗಳು, 2 ಕೆಎಸ್‌ಆರ್‌ಪಿ ತುಕಡಿಗಳು, 2 ಡಿಎಆರ್ ತುಕಡಿಗಳು ನಿಯೋಜಿಸಲ್ಪಟ್ಟಿದ್ದರು. ಜೊತೆಗೆ ಬ್ಯಾರಿಕೇಡ್‌ಗಳು, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾ, 20 ಹ್ಯಾಂಡಿ ಕ್ಯಾಮೆರಾ ಮತ್ತು ಡ್ರೋನ್‌ಗಳ ಬಳಕೆ, ಸೋಶಿಯಲ್ ಮೀಡಿಯಾ ಮೇಲೆ ನಿಗಾವಹಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

5ಕೆ ಮ್ಯಾರಥಾನ್ ಪೂರ್ಣಗೊಳಿಸಿದ ಕೆ.ಎಸ್. ಪಲ್ಲೇದ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗದಗ ಶಾಖೆ ಇವರ ಸಹಯೋಗದಲ್ಲಿ ‘ಮಾದಕ ವಸ್ತು ಮುಕ್ತ ಕರ್ನಾಟಕ, ಎಲ್ಲರಿಗೂ ಆರೋಗ್ಯ ಮತ್ತು ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಧ್ಯೇಯವಾಕ್ಯಗಳನ್ನು ಜನತೆಯಲ್ಲಿ ಜಾಗೃತಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್-2026 ಸ್ಪರ್ಧೆಯಲ್ಲಿ ಬಸವ ಯೋಗ ಮಹಾವಿದ್ಯಾಲಯದ ಯೋಗಗುರು ಕೆ.ಎಸ್. ಪಲ್ಲೇದ ಭಾಗವಹಿಸಿ 5 ಕಿ.ಮೀ. ಅಂತರದ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇದಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಅವರು ಕೆ.ಎಸ್. ಪಲ್ಲೇದರನ್ನು ಅಭಿನಂದಿಸಿ ಗೌರವಿಸಿದರು.

ಸ್ಪರ್ಧೆಯಲ್ಲಿ ಸಾರ್ವಜನಿಕರು, ಹಿರಿಯ ನಾಗರಿಕರು, ಕ್ರೀಡಾಪಟುಗಳು, ಇಲಾಖಾ ನೌಕರರು ಹಾಗೂ ಮಾಧ್ಯಮ ಮಿತ್ರರು ಭಾಗವಹಿಸಲು ಅವಕಾಶವಿತ್ತು.

ಸಂಘಟಕರು ಆಯೋಜಿಸಿದ ಈ ಕಾರ್ಯ ಯಶಸ್ಸಿಗಾಗಿ ಹಾಗೂ ತಾನು ಮಾಡಿದ ಯೋಗ ಸಾಧನೆಯ ಪರೀಕ್ಷೆಯ ದೃಷ್ಟಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ನೀವೂ ಯೋಗಾಭ್ಯಾಸ ಮಾಡಿ ದುಶ್ಚಟ, ದುರಭ್ಯಾಸಗಳಿಂದ ದೂರವಿದ್ದು ಆರೋಗ್ಯವಂತರಾಗಿರಿ ಎಂದು ಕೆ.ಎಸ್. ಪಲ್ಲೇದ ತಿಳಿಸಿದರು. ಕಾರ್ಯಕ್ರಮದ ಸಂಘಟಕರಿಗೆ ಅವರು ಅಭಿನಂದನೆ ಸಲ್ಲಿಸಿದರು.

ಬೇಸಿಗೆಯಲ್ಲಿ ದೇಹ ಕೂಲ್‌ ಕೂಲ್‌ ಆಗಿರಿಸಲು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು!

0

ಮಾರ್ಚ್ ತಿಂಗಳ ಆರಂಭದೊಂದಿಗೆ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವಾಗಿ ನಿರ್ಜಲೀಕರಣ, ಶಾಖದ ಹೊಡೆತ ಮತ್ತು ಆಯಾಸದಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸಾಕಷ್ಟು ನೀರು ಕುಡಿಯುವುದರ ಜೊತೆಗೆ ನೀರಿನಾಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ.

ಬೇಸಿಗೆಯಲ್ಲಿ ಸೇವಿಸಬಹುದಾದ ಪ್ರಮುಖ ಹಣ್ಣುಗಳು:

ಕಲ್ಲಂಗಡಿ:
ಸುಮಾರು ಶೇ.92ರಷ್ಟು ನೀರಿನಾಂಶ ಹೊಂದಿರುವ ಕಲ್ಲಂಗಡಿ ದೇಹವನ್ನು ತಂಪಾಗಿಡಲು ಸಹಕಾರಿ. ಚರ್ಮದ ಆರೋಗ್ಯ ಕಾಪಾಡುವುದರ ಜೊತೆಗೆ ನಿರ್ಜಲೀಕರಣ ತಡೆಯುತ್ತದೆ.

ದಾಳಿಂಬೆ:
ಕಬ್ಬಿಣಾಂಶ ಸಮೃದ್ಧವಾಗಿರುವ ದಾಳಿಂಬೆ ರಕ್ತಹೀನತೆ ತಡೆಯಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸಿ ಶಾಖದ ಹೊಡೆತದಿಂದ ರಕ್ಷಿಸುತ್ತದೆ.

ಕಿತ್ತಳೆ:
ವಿಟಮಿನ್ ‘ಸಿ’ ಸಮೃದ್ಧ ಕಿತ್ತಳೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಆಯಾಸ ಕಡಿಮೆ ಮಾಡಿ ನೀರಿನ ಕೊರತೆಯನ್ನು ನೀಗಿಸುತ್ತದೆ.

ದ್ರಾಕ್ಷಿ:
ಶೇ.70ಕ್ಕಿಂತ ಹೆಚ್ಚು ನೀರಿನಾಂಶ ಹೊಂದಿರುವ ದ್ರಾಕ್ಷಿ ದೇಹಕ್ಕೆ ಜಲಸಂಚಯನ ಒದಗಿಸುತ್ತದೆ. ಬೇಸಿಗೆಯಲ್ಲಿ ಶಾಖದ ಹೊಡೆತ ತಡೆಯಲು ಸಹಕಾರಿ.

ಸೌತೆಕಾಯಿ:
ಜೀರ್ಣಕ್ರಿಯೆ ಸುಧಾರಿಸುವ ಸೌತೆಕಾಯಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿದ್ದು ನಿರ್ಜಲೀಕರಣ ತಡೆಯುತ್ತದೆ.

ತೆಂಗಿನ ನೀರು:
ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿರುವ ತೆಂಗಿನ ನೀರು ದೇಹವನ್ನು ನೈಸರ್ಗಿಕವಾಗಿ ಹೈಡ್ರೇಟ್ ಮಾಡುತ್ತದೆ. ಆಯಾಸ ನಿವಾರಣೆಗೂ ಸಹಕಾರಿ.

ಪಪ್ಪಾಯಿ:
ಜೀರ್ಣಕ್ರಿಯೆ ಸುಧಾರಿಸಿ ದೇಹವನ್ನು ಚೈತನ್ಯಪೂರ್ಣವಾಗಿಡುತ್ತದೆ. ಬೇಸಿಗೆಯಲ್ಲಿ ತಂಪು ನೀಡುವ ಹಣ್ಣುಗಳಲ್ಲಿ ಇದು ಕೂಡ ಒಂದು.

ಲಿಚಿ:
ನೀರಿನಲ್ಲಿ ಸಮೃದ್ಧವಾಗಿರುವ ಲಿಚಿ ದೇಹವನ್ನು ತಂಪಾಗಿಡಲು ಸಹಕಾರಿ. ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ಅಂಶಗಳು ಶಕ್ತಿ ನೀಡುತ್ತವೆ.

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀರು ಮತ್ತು ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆ ಅತ್ಯಂತ ಮುಖ್ಯವಾಗಿದೆ.

ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಲು ಕಾರ್ಯಾಗಾರ ಸಹಕಾರಿ: ಬಿ.ಬಿ. ಅಸೂಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ಉದ್ಯೋಗ ತರಬೇತಿಯ ಜೊತೆಗೆ ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಲು ಸಹಕರಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ 2023ರ ಚುನಾವಣೆ ಪೂರ್ವದಲ್ಲಿಯೇ 5 ಗ್ಯಾರಂಟಿಗಳನ್ನು ಉಚಿತವಾಗಿ ನೀಡುವ ಕುರಿತು ಭರವಸೆ ನೀಡಿತ್ತು. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ. ಮತ್ತು ಡಿಪ್ಲೋಮಾ ಹೊಂದಿರುವವರಿಗೆ 1,500 ರೂ. ಮಾಸಿಕ ಭತ್ಯೆಯನ್ನು ಗರಿಷ್ಠ 2 ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ಒದಗಿಸಲಾಗುತ್ತದೆ. ಯುವನಿಧಿ ಯೋಜನೆಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯೋಗಕ್ಕೆ ಸಹಾಯಕವಾಗುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಯುವನಿಧಿ ಯೋಜನೆಯ ಕುರಿತು ಅರಿವು ಮೂಡಿಸುವುದು ಹಾಗೂ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಯುವಕರಿಗೆ ಪದವಿ ಮುಗಿದ ನಂತರ ಉದ್ಯೋಗ ಸಿಗುವವರೆಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಯುವಕರು ಯೋಜನೆಯ ಈ ಹಣವನ್ನು ಪಾಕೆಟ್ ಮನಿ ಎಂದು ಬಳಸಿಕೊಳ್ಳದೇ ಉದ್ಯೋಗಕ್ಕೆ ಸಹಾಯಕವಾಗುವ ಕೌಶಲ್ಯವನ್ನು ಬೆಳೆಸಿಕೊಳ್ಳಲು ಉಪಯೋಗಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಕೌಶಲ್ಯವನ್ನು ಬೆಳೆಸಿಕೊಳ್ಳಲು ಹಾಗೂ ಸ್ವಯಂ ಉದ್ಯೋಗ, ಯುವನಿಧಿ ಯೋಜನೆಯ ಮಾಹಿತಿಗಾಗಿ ಇಂತಹ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಆನಂದ ಹೊಂಬಳ ಅವರು ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಹಾಗೂ ಸ್ವಯಂ ಉದ್ಯೋಗ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಪಿ.ಡಿ. ಕರಿಗಾರ ಮಾತನಾಡಿ, ಯುವನಿಧಿ ಯೋಜನೆಯ ಕುರಿತ ಕಾರ್ಯಾಗಾರವು ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಉದ್ಯೋಗ ವಿನಿಮಯ ಅಧಿಕಾರಿ ಬಸವಂತಪ್ಪ ಪಿ., ಮೆಹಬೂಬ ಅರೀಫ್ ಸೇರಿದಂತೆ ಕಾಲೇಜಿನ ಶಿಕ್ಷಕ ವೃಂದದವರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಎಸ್.ಯು. ಸಜ್ಜನಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಶೇ. 99.79ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯುವಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಗ್ಯಾರಂಟಿ ಸಮಿತಿಯ ಕಚೇರಿಗಳಿಗೆ ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಗದಗ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂಬುದು ಹೆಮ್ಮೆಯ ವಿಷಯ ಎಂದು ಬಿ.ಬಿ. ಅಸೂಟಿ ತಿಳಿಸಿದರು.

error: Content is protected !!