Home Blog Page 84

ರೇಣುಕಾಸ್ವಾಮಿ ಕೇಸ್‌ನಲ್ಲಿ ಇಂದು ಮಹತ್ವದ ದಿನ: ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದೆ. ಆರೋಪಿ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಹೈಕೋರ್ಟ್‌ ಆದೇಶದ ನಿರೀಕ್ಷೆಯ ನಡುವೆಯೇ, ಪ್ರದೋಷ್‌ ಅವರ ಮಾಫಿ ಸಾಕ್ಷಿ ಹೇಳಿಕೆ ಕೂಡ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಕೊಲೆ ಪ್ರಕರಣದಲ್ಲಿ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಈ ಹಿಂದೆ ಅಂಗೀಕರಿಸಿತ್ತು. ಬಳಿಕ ಸೆಪ್ಟೆಂಬರ್ 2ರಂದು ಸಾಕ್ಷಿ ಹೇಳಿಕೆ ದಾಖಲಿಸಲು ವಿಟ್ನೆಸ್‌ ಸಮನ್ಸ್‌ ಜಾರಿಗೊಳಿಸಲಾಗಿತ್ತು.

ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಪ್ರದೋಷ್‌ಗೆ ಸಮನ್ಸ್‌ ಜಾರಿ ಮಾಡಲು ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು. ಹೀಗಾಗಿ ಇಂದು ಮಧ್ಯಾಹ್ನ ಪ್ರದೋಷ್‌ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆಯೇ ಎಂಬುದೇ ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.

ಇದರ ನಡುವೆ, ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್‌ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ದರ್ಶನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್‌ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ ಕಾಸ್‌ ಲಿಸ್ಟ್‌ನಲ್ಲಿ 49ನೇ ಮ್ಯಾಟರ್‌ ಆಗಿದೆ.

ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಹೊರಬೀಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಮಧ್ಯಾಹ್ನ 12ರ ವೇಳೆಗೆ ಪ್ರದೋಷ್‌ ಹೇಳಿಕೆ ದಾಖಲಿಸಲು ಕೋರ್ಟ್‌ ಸಿದ್ಧತೆ ನಡೆಸಿದೆ. ಹೈಕೋರ್ಟ್‌ ಆದೇಶ ಹಾಗೂ ಪ್ರದೋಷ್‌ ಸಾಕ್ಷಿ ಹೇಳಿಕೆ—ಎರಡೂ ಬೆಳವಣಿಗೆಗಳು ಒಂದೇ ದಿನ ನಡೆಯುವ ಸಾಧ್ಯತೆಯಿಂದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿದೆ.

ಓವರ್‌ಟೇಕ್ ವಿಚಾರಕ್ಕೆ ಗಲಾಟೆ: ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ, ಹಲ್ಲೆ ಆರೋಪ- ದೂರು ದಾಖಲು

ಬೆಂಗಳೂರು: ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಇದೀಗ ಅಪಹರಣ ಮತ್ತು ಹಲ್ಲೆ ಆರೋಪದವರೆಗೆ ತಲುಪಿದೆ. ನಟ ‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ತನ್ನ ಸಹಪಾಠಿ ಮನೀಶ್ ಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡಿರುವ ಮನೀಶ್ ಗೌಡ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಸಂಜೆ ರಾಜರಾಜೇಶ್ವರಿನಗರದಲ್ಲಿ ಘಟನೆಗೆ ಮುನ್ನ ಇಬ್ಬರು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ತೆರಳುತ್ತಿದ್ದಾಗ, ಮನೀಶ್ ಗೌಡ ಮತ್ತು ಆತನ ಸ್ನೇಹಿತರು ಐ20 ಕಾರಿನಲ್ಲಿ ಬಂದು ಸಾಮ್ರಾಟ್ ಚಲಾಯಿಸುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡಿದ್ದರು. ಇದರಿಂದಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂದು ಮಧ್ಯಾಹ್ನ ಮೈಸೂರು ರಸ್ತೆಯ ಆರ್‌ವಿ ಯೂನಿವರ್ಸಿಟಿ ಹೊರಭಾಗದಲ್ಲಿದ್ದ ಮನೀಶ್ ಗೌಡನನ್ನು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಮನೀಶ್ ಗೌಡ ಮತ್ತು ಸಾಮ್ರಾಟ್ ಇಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಪ್ರಕರಣದ ಕುರಿತು ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನೀಶ್ ಪರ ವಕೀಲ ಮಂಜುನಾಥ್ ಮಾತನಾಡಿ, ಸಾಮ್ರಾಟ್ ವಿಜಯ್ ಅವರನ್ನು ಎ-1 ಆರೋಪಿಯನ್ನಾಗಿ ಹೆಸರಿಸಿ ಒಟ್ಟು ಆರು ಜನರ ವಿರುದ್ಧ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಸಣ್ಣ ವಿಚಾರಕ್ಕೆ ನಡೆದಿದ್ದ ಹಿಂದಿನ ದಿನದ ಗಲಾಟೆಯ ಬಳಿಕ ಸಾಮ್ರಾಟ್ ಹಾಗೂ ಆತನ ತಂಡ ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಅಪಹರಿಸಿ ಹಲ್ಲೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

“ನಿನ್ನೆ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಗಲಾಟೆ ನಡೆದಿತ್ತು. ಇಂದು ಸಾಮ್ರಾಟ್ ಹಾಗೂ ಆತನ ಕಡೆಯವರು ಸಫಾರಿ ಕಾರಿನಲ್ಲಿ ಬಂದು ಮನೀಶ್‌ನನ್ನು ಕರೆದೊಯ್ದು, ಆರು ಜನರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ” ಎಂದು ವಕೀಲ ಮಂಜುನಾಥ್ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಬಗ್ಗೆ ಕೆಲ ಗೊಂದಲಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವಕೀಲರು ಹೇಳಿದ್ದಾರೆ.

53ನೇ ಬರ್ತ್‌ಡೇಗೆ ಕಿಚ್ಚ ಸುದೀಪ್ ಮಾಸ್ ಗಿಫ್ಟ್: ‘ಬಿಲ್ಲ ರಂಗ ಬಾಷಾ’ ಫ್ಯೂಚರಿಸ್ಟಿಕ್ ಲುಕ್ ವೈರಲ್

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಸಂಭ್ರಮಕ್ಕೆ ‘ಬಿಲ್ಲ ರಂಗ ಬಾಷಾ’ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ನೀಡಿದೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಬೈಕ್ ಮೇಲೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪೋಸ್ಟರ್‌ನಲ್ಲಿ ಸುದೀಪ್ ಗಾಗಲ್ಸ್ ಧರಿಸಿ, ವಿಭಿನ್ನ ವಿನ್ಯಾಸದ ಕೋಟ್‌ನಲ್ಲಿ ಬೈಕ್ ರೈಡ್ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಹಿಮದ ನಡುವೆ ಬೈಕ್ ವೇಗವಾಗಿ ಸಾಗುತ್ತಿದ್ದರೆ, ಆಕಾಶದಲ್ಲಿ ಹೆಲಿಕಾಪ್ಟರ್ ಹಾರುತ್ತಿರುವುದು ಕಾಣಿಸುತ್ತದೆ. ಇದರ ಜೊತೆಗೆ ವಿಮಾನ ಹಾಗೂ ರೈಲು ಪಲ್ಟಿಯಾಗುತ್ತಿರುವ ದೃಶ್ಯಗಳು ಚಿತ್ರದ ಆ್ಯಕ್ಷನ್ ಪ್ರಮಾಣದ ಬಗ್ಗೆ ಕುತೂಹಲ ಮೂಡಿಸಿವೆ.

ಸುದೀಪ್ ಅವರ ಈ ಲುಕ್ ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಿದೆ. ಸಾಮಾನ್ಯ ಮಾಸ್ ಲುಕ್‌ಗಿಂತ ಭಿನ್ನವಾಗಿ ಫ್ಯೂಚರಿಸ್ಟಿಕ್ ಹಾಗೂ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.

‘ವಿಕ್ರಾಂತ್ ರೋಣ’ ಮೂಲಕ ಯಶಸ್ಸು ಕಂಡ ಸುದೀಪ್-ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ‘ಬಿಲ್ಲ ರಂಗ ಬಾಷಾ’ ಇವರ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ.

ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ. ಚಿತ್ರವು ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.

ಕಾರಣಾಂತರಗಳಿಂದ ಶೂಟಿಂಗ್ ವಿಳಂಬಗೊಂಡಿದ್ದ ಸಿನಿಮಾ, ಜೂನ್‌ನಲ್ಲಿ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಪಡೆದುಕೊಂಡಿದೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಚರ್ಚೆ ಜೋರಾಗಿದೆ. ‘ಬಿಲ್ಲ ರಂಗ ಬಾಷಾ’ 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ವರದಾನ; ಮಂಡ್ಯ ಮಿಮ್ಸ್‌ನಲ್ಲಿ ಮಿಲ್ಕ್ ಬ್ಯಾಂಕ್‌ ಸ್ಥಾಪನೆ!

0

ಮಂಡ್ಯ: ಹುಟ್ಟುತ್ತಲೇ ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಂಡ್ಯ ಮಿಮ್ಸ್‌ ಆಸ್ಪತ್ರೆಯಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲಾಗಿದೆ.

ಜಾಗೃತಿ ಕಾರ್ಯಕ್ರಮಗಳಿಗಾಗಿ ಪೋಸ್ಟರ್‌ಗಳಿಗೆ ಖರ್ಚಾಗುತ್ತಿದ್ದ ಹಣವನ್ನು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಬಳಸಿರುವ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಮಿಮ್ಸ್‌ನಲ್ಲಿ ಎದೆಹಾಲು ಶೇಖರಣಾ ಘಟಕ ಸ್ಥಾಪಿಸಲು ಮಂಡ್ಯ ಜಿಲ್ಲಾ ಪಂಚಾಯತ್‌ ಸಿಇಒ ಕೆ.ಆರ್. ನಂದಿನಿ ಮುಂದಾಗಿದ್ದಾರೆ. ವೈದ್ಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕೊಠಡಿಯನ್ನೇ ಸ್ವಚ್ಛಗೊಳಿಸಿ, ಸುಮಾರು ₹24.50 ಲಕ್ಷ ವೆಚ್ಚದಲ್ಲಿ ಮಿಲ್ಕ್ ಬ್ಯಾಂಕ್‌ ಸಿದ್ಧಪಡಿಸಲಾಗಿದೆ.

ತಿಂಗಳಿಗೆ 250ಕ್ಕೂ ಹೆಚ್ಚು ನವಜಾತ ಶಿಶುಗಳ ದಾಖಲು:

ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಪ್ರತಿ ತಿಂಗಳು ಸುಮಾರು 250ಕ್ಕೂ ಹೆಚ್ಚು ನವಜಾತ ಶಿಶುಗಳು ದಾಖಲಾಗುತ್ತವೆ. ಈ ಪೈಕಿ ಕನಿಷ್ಠ 50ರಿಂದ 60 ಶಿಶುಗಳಿಗೆ ತಾಯಿಯ ಎದೆಹಾಲು ಲಭ್ಯವಾಗದ ಪರಿಸ್ಥಿತಿ ಎದುರಾಗುತ್ತಿತ್ತು.

ಈ ಸಮಸ್ಯೆಯನ್ನು ಮನಗಂಡು ಮಿಲ್ಕ್ ಬ್ಯಾಂಕ್‌ ಸ್ಥಾಪಿಸಲಾಗಿದ್ದು, ತಾಯಿಯ ಎದೆಹಾಲು ಸಿಗದ ಶಿಶುಗಳಿಗೆ ದಾನಿ ತಾಯಂದಿರಿಂದ ಸಂಗ್ರಹಿಸಿದ ಎದೆಹಾಲು ಒದಗಿಸುವ ವ್ಯವಸ್ಥೆ ಮಾಡಲು ಮುಂದಾಗಿದೆ.

ಈ ಸತ್ಕಾರ್ಯಕ್ಕೆ ಜಿಲ್ಲೆಯ ಶಾಸಕರು ಕೂಡ ₹10.50 ಲಕ್ಷ ಅನುದಾನ ನೀಡಿ ಬೆಂಬಲ ನೀಡಿದ್ದಾರೆ. ಇದರೊಂದಿಗೆ ಮಂಡ್ಯದಲ್ಲಿ ಸ್ಥಾಪನೆಯಾಗುತ್ತಿರುವ ಈ ಮಿಲ್ಕ್ ಬ್ಯಾಂಕ್‌ ರಾಜ್ಯದಲ್ಲೇ ಸ್ಥಾಪನೆಯಾಗುತ್ತಿರುವ 5ನೇ ಎದೆಹಾಲು ಶೇಖರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಮ್ಸ್‌ ಆಸ್ಪತ್ರೆಯಲ್ಲಿ ಮಿಲ್ಕ್ ಬ್ಯಾಂಕ್‌ಗಾಗಿ ಕೊಠಡಿ ಸಿದ್ಧವಾಗಿದ್ದು, ಸಿಬ್ಬಂದಿಯನ್ನೂ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಎದೆಹಾಲನ್ನು ಸುರಕ್ಷಿತವಾಗಿ ಸಂಗ್ರಹಿಸಿ ಸಂರಕ್ಷಿಸಲು ಅಗತ್ಯವಿರುವ ಮೂರು ಪ್ರಮುಖ ಯಂತ್ರಗಳು ಇನ್ನೂ ಅಳವಡಿಕೆಯಾಗಬೇಕಿದೆ.

ಪಾಶ್ಚರೈಸರ್, ವರ್ಟಿಕಲ್ ಲ್ಯಾಮಿನಾರ್ ಮತ್ತು ಡೀಪ್ ಫ್ರೀಜರ್ ಯಂತ್ರಗಳನ್ನು ಅಳವಡಿಸಲು ಸುಮಾರು ₹36 ಲಕ್ಷ ಅನುದಾನದ ಅಗತ್ಯವಿದೆ.

ಈ ಯಂತ್ರಗಳು ಅಳವಡಿಕೆಯಾದ ಬಳಿಕ ದಾನಿ ತಾಯಂದಿರಿಂದ ಸಂಗ್ರಹಿಸುವ ಎದೆಹಾಲನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಅಗತ್ಯವಿರುವ ನವಜಾತ ಶಿಶುಗಳಿಗೆ ನೀಡಲು ಸಾಧ್ಯವಾಗಲಿದೆ. ಸಂಗ್ರಹಿಸಿದ ಎದೆಹಾಲನ್ನು ಸುಮಾರು 6 ತಿಂಗಳವರೆಗೆ ಸಂರಕ್ಷಿಸಿಡಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ.

ತಾಯಿಯ ಎದೆಹಾಲಿನಿಂದ ವಂಚಿತವಾಗುವ ನವಜಾತ ಶಿಶುಗಳಿಗೆ ಪೌಷ್ಟಿಕ ಆಹಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ಮಿಲ್ಕ್ ಬ್ಯಾಂಕ್‌ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಮಹಿಳೆಯರೇ ಎಚ್ಚರ! ಮೆನೋಪಾಸ್‌ಗೂ ಮುನ್ನವೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು; ನಿರ್ಲಕ್ಷ್ಯ ಬೇಡ

0

ಮಹಿಳೆಯರ ಜೀವನದಲ್ಲಿ ಮೆನೋಪಾಸ್‌ ಒಂದು ಸಹಜ ಹಾರ್ಮೋನಲ್ ಬದಲಾವಣೆಯ ಹಂತ. ಆದರೆ ಮೆನೋಪಾಸ್‌ ಏಕಾಏಕಿ ಆರಂಭವಾಗುವುದಿಲ್ಲ.

ಅದಕ್ಕೂ ಹಲವು ವರ್ಷಗಳ ಮುನ್ನವೇ ಮಹಿಳೆಯರ ದೇಹದಲ್ಲಿ ಹಾರ್ಮೋನ್‌ಗಳ ಏರಿಳಿತ ಆರಂಭವಾಗಬಹುದು. ಈ ಪರಿವರ್ತನಾ ಹಂತವನ್ನೇ ಪೆರಿಮೆನೋಪಾಸ್‌ ಎಂದು ಕರೆಯಲಾಗುತ್ತದೆ.

ಈ ಅವಧಿಯಲ್ಲಿ ಪಿರಿಯಡ್ಸ್‌ ಅನಿಯಮಿತವಾಗುವುದು, ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು, ರಾತ್ರಿ ವೇಳೆ ಅತಿಯಾಗಿ ಬೆವರುವುದು, ನಿದ್ರೆಯ ಸಮಸ್ಯೆ, ಮೂಡ್ ಬದಲಾವಣೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಬಹುತೇಕ ಮಹಿಳೆಯರು ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ಭಾವಿಸಿ ನಿರ್ಲಕ್ಷ್ಯ ಮಾಡುತ್ತಾರೆ.

ಆದರೆ ಪೆರಿಮೆನೋಪಾಸ್‌ ಅವಧಿಯಲ್ಲಿ ದೇಹದಲ್ಲಿ ಹಲವು ಹಾರ್ಮೋನಲ್ ಬದಲಾವಣೆಗಳು ಸಂಭವಿಸುವುದರಿಂದ ಈ ಬಗ್ಗೆ ಮಹಿಳೆಯರು ಅರಿವು ಹೊಂದಿರುವುದು ಅಗತ್ಯ ಎಂದು ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ರುಚಿ ಭಂಡಾರಿ ಸಲಹೆ ನೀಡಿದ್ದಾರೆ.

ಪೆರಿಮೆನೋಪಾಸ್‌ ಎಂದರೇನು?

ಮೆನೋಪಾಸ್‌ಗೂ ಮುನ್ನ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಳಿತ ಆರಂಭವಾಗುತ್ತದೆ. ಈ ಹಂತವೇ ಪೆರಿಮೆನೋಪಾಸ್‌.

ಸತತ 12 ತಿಂಗಳ ಕಾಲ ಪಿರಿಯಡ್ಸ್‌ ಆಗದೇ ಇರುವ ಸ್ಥಿತಿಯನ್ನು ಮೆನೋಪಾಸ್‌ ಎಂದು ಕರೆಯಲಾಗುತ್ತದೆ. ಅದಕ್ಕೂ ಮುನ್ನ ನಡೆಯುವ ಪರಿವರ್ತನಾ ಅವಧಿಯೇ ಪೆರಿಮೆನೋಪಾಸ್‌.

ಪಿರಿಯಡ್ಸ್‌ನಲ್ಲಿ ಬದಲಾವಣೆ”

ಪೆರಿಮೆನೋಪಾಸ್‌ನ ಪ್ರಮುಖ ಲಕ್ಷಣಗಳಲ್ಲಿ ಪಿರಿಯಡ್ಸ್‌ನಲ್ಲಿ ಆಗುವ ಬದಲಾವಣೆಯೂ ಒಂದು.

  • ಪಿರಿಯಡ್ಸ್‌ ಬೇಗ ಅಥವಾ ತಡವಾಗಿ ಬರಬಹುದು.
  • ಎರಡು ಪಿರಿಯಡ್ಸ್‌ಗಳ ನಡುವಿನ ಅಂತರ ಹೆಚ್ಚಾಗಬಹುದು.
  • ಕೆಲವು ತಿಂಗಳು ಪಿರಿಯಡ್ಸ್‌ ಆಗದೇ ಇರಬಹುದು.
  • ರಕ್ತಸ್ರಾವದ ಪ್ರಮಾಣ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು.

ಆದರೆ ಪಿರಿಯಡ್ಸ್‌ ಅನಿಯಮಿತವಾಗಿರುವುದೆಲ್ಲವೂ ಪೆರಿಮೆನೋಪಾಸ್‌ನ ಲಕ್ಷಣ ಎಂದೇನಲ್ಲ. ಬೇರೆ ಆರೋಗ್ಯ ಸಮಸ್ಯೆಗಳೂ ಇದಕ್ಕೆ ಕಾರಣವಾಗಿರಬಹುದು.

ಹಠಾತ್ ದೇಹದಲ್ಲಿ ಬಿಸಿ ಹೆಚ್ಚಾಗುವುದು:

ಯಾವುದೇ ಕಾರಣವಿಲ್ಲದೆ ದೇಹದಲ್ಲಿ ಏಕಾಏಕಿ ಬಿಸಿ ಹೆಚ್ಚಾದಂತೆ ಅನಿಸುವುದನ್ನು ಹಾಟ್ ಫ್ಲ್ಯಾಶ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮುಖ, ಕುತ್ತಿಗೆ ಹಾಗೂ ಎದೆಯ ಭಾಗದಲ್ಲಿ ಬಿಸಿ ಹೆಚ್ಚಾಗಿ ನಂತರ ಬೆವರು ಕಾಣಿಸಿಕೊಳ್ಳಬಹುದು.

ರಾತ್ರಿ ವೇಳೆ ಅತಿಯಾಗಿ ಬೆವರುವುದು:

ನಿದ್ರೆಯಲ್ಲಿರುವಾಗ ಅತಿಯಾಗಿ ಬೆವರುವುದು ಕೂಡ ಪೆರಿಮೆನೋಪಾಸ್‌ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಇದರಿಂದ ಪದೇಪದೇ ನಿದ್ರೆ ಕೆಡುವುದು, ಬೆಳಗ್ಗೆ ಎದ್ದಾಗ ದಣಿವಿನ ಅನುಭವವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ನಿದ್ರೆಯ ಸಮಸ್ಯೆ:

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ನಿದ್ರೆ ಬರಲು ಕಷ್ಟವಾಗಬಹುದು. ಮಧ್ಯರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ಬೆಳಗ್ಗೆ ಬೇಗ ಎಚ್ಚರವಾಗುವುದು ಕೂಡ ಸಂಭವಿಸಬಹುದು.

ಹಾಟ್ ಫ್ಲ್ಯಾಶ್‌, ರಾತ್ರಿ ಬೆವರು, ಮೂಡ್ ಬದಲಾವಣೆ ಮತ್ತು ಆತಂಕದಂತಹ ಸಮಸ್ಯೆಗಳು ನಿದ್ರೆಯ ಗುಣಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಬಹುದು.

ಮೂಡ್ ಬದಲಾವಣೆ ಮತ್ತು ಕಿರಿಕಿರಿ:

ಹಾರ್ಮೋನಲ್ ಬದಲಾವಣೆಗಳಿಂದ ಕೆಲ ಮಹಿಳೆಯರಲ್ಲಿ ಕಿರಿಕಿರಿ, ಆತಂಕ, ಮೂಡ್ ಸ್ವಿಂಗ್‌ ಹಾಗೂ ಭಾವನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳಬಹುದು.

ಸಾಕಷ್ಟು ನಿದ್ರೆ ಮಾಡಿದರೂ ದೇಹದಲ್ಲಿ ಶಕ್ತಿ ಇಲ್ಲದಂತೆ ಅನಿಸುವುದು ಅಥವಾ ದಿನವಿಡೀ ಆಯಾಸವಾಗಿರುವ ಅನುಭವವೂ ಕಾಣಿಸಿಕೊಳ್ಳಬಹುದು. ಹಾರ್ಮೋನಲ್ ಬದಲಾವಣೆ ಮತ್ತು ನಿದ್ರೆಯ ಕೊರತೆ ಇದಕ್ಕೆ ಕಾರಣವಾಗಬಹುದು.

ಪೆರಿಮೆನೋಪಾಸ್‌ ಅವಧಿಯಲ್ಲಿ ಕೆಲ ಮಹಿಳೆಯರಿಗೆ ಬ್ರೇನ್ ಫಾಗ್ ರೀತಿಯ ಅನುಭವವಾಗಬಹುದು. ಅಂದರೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ವಿಷಯಗಳನ್ನು ನೆನಪಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದು ಮುಂತಾದ ಬದಲಾವಣೆಗಳು ಕಂಡುಬರಬಹುದು.

ಈಸ್ಟ್ರೋಜನ್‌ ಮಟ್ಟದಲ್ಲಿನ ಬದಲಾವಣೆಯಿಂದ ಕೆಲ ಮಹಿಳೆಯರಲ್ಲಿ ಯೋನಿ ಒಣತನ ಉಂಟಾಗಬಹುದು. ಇದರಿಂದ ಅಸಹಜತೆ ಅಥವಾ ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.

ಈ ರೀತಿಯ ಸಮಸ್ಯೆ ಎದುರಾದರೆ ಮುಜುಗರಪಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ತೂಕದಲ್ಲೂ ಬದಲಾವಣೆಯಾಗಬಹುದು:

ಪೆರಿಮೆನೋಪಾಸ್‌ ಸಮಯದಲ್ಲಿ ಹಾರ್ಮೋನಲ್ ಬದಲಾವಣೆಗಳ ಜೊತೆಗೆ ವಯಸ್ಸು, ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಮತ್ತು ನಿದ್ರೆಯಂತಹ ಅಂಶಗಳಿಂದ ತೂಕದಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು.

ಮಿಡ್‌ಲೈಫ್‌ ನಂತರ ಮಹಿಳೆಯರು ಕೇವಲ ಪಿರಿಯಡ್ಸ್‌ ಬದಲಾವಣೆಗಳತ್ತ ಮಾತ್ರ ಗಮನ ಹರಿಸದೆ ಮೂಳೆಗಳ ಆರೋಗ್ಯ, ರಕ್ತದೊತ್ತಡ, ತೂಕ ಮತ್ತು ಹೃದಯದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಯುಕ್ತ ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗಗಳಾಗಿವೆ.

ಮಹಿಳೆಯರು 35-40ರ ವಯಸ್ಸಿನ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ. ವಿಶೇಷವಾಗಿ ತುಂಬಾ ಅಧಿಕ ರಕ್ತಸ್ರಾವ, ಅಸಹಜ ರಕ್ತಸ್ರಾವ, ದೀರ್ಘಕಾಲ ಪಿರಿಯಡ್ಸ್‌ ನಿಂತ ಬಳಿಕ ಮತ್ತೆ ರಕ್ತಸ್ರಾವವಾಗುವುದು ಅಥವಾ ಯಾವುದೇ ಲಕ್ಷಣಗಳು ದಿನನಿತ್ಯದ ಜೀವನಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಸೂಚನೆ: ಈ ಮಾಹಿತಿ ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಪೆರಿಮೆನೋಪಾಸ್‌ ಅಥವಾ ಮೆನೋಪಾಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದರೆ ವೈಯಕ್ತಿಕ ಚಿಕಿತ್ಸೆ ಪಡೆಯುವ ಮೊದಲು ಅರ್ಹ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆಯಾ? KRSನಿಂದ 5,500 ಕ್ಯೂಸೆಕ್ ನೀರು ಹೊರಕ್ಕೆ

0

ಮಂಡ್ಯ: ರಾಜ್ಯದಲ್ಲಿ ನೀರಿನ ಅಭಾವದ ಆತಂಕ ಎದುರಾಗಿರುವ ನಡುವೆಯೇ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ, ಕೆಆರ್‌ಎಸ್‌ನಿಂದ ಹೊರಹೋಗುತ್ತಿರುವ ನೀರಿನ ಪ್ರಮಾಣ ಇದೀಗ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ಪ್ರಸ್ತುತ 3,864 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ಆದರೆ ಜಲಾಶಯದಿಂದ ಬರೋಬ್ಬರಿ 8,544 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ಪೈಕಿ ಸುಮಾರು 5,500 ಕ್ಯೂಸೆಕ್‌ ನೀರು ನದಿಯ ಮೂಲಕ ತಮಿಳುನಾಡಿನತ್ತ ಹರಿಯುತ್ತಿದೆ ಎನ್ನಲಾಗಿದೆ.

KRSನಲ್ಲಿ ಎಷ್ಟು ನೀರಿದೆ?

124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 109.32 ಅಡಿ ನೀರು ಸಂಗ್ರಹವಾಗಿದೆ. ಟಿಎಂಸಿ ಲೆಕ್ಕದಲ್ಲಿ ಸುಮಾರು 31.044 ಟಿಎಂಸಿ ನೀರು ಜಲಾಶಯದಲ್ಲಿದೆ.

ಒಂದೆಡೆ ಮಳೆಯ ಕೊರತೆಯಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಒಳಹರಿವಿಗಿಂತ ದುಪ್ಪಟ್ಟಿಗೂ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದು ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಹೆಚ್ಚಿಸಿದೆ.

ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದ ಸರ್ಕಾರ:

ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ಆದರೆ ಕೆಆರ್‌ಎಸ್‌ನಿಂದ ಕಾವೇರಿ ನದಿಗೆ ಹರಿಸಲಾಗುತ್ತಿರುವ ನೀರಿನ ಒಂದು ಭಾಗ ನದಿಯ ಮೂಲಕ ತಮಿಳುನಾಡಿಗೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಹೊರಹರಿವು ಮುಂದುವರಿದರೆ, ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗುತ್ತಿದೆ.

ಹೀಗಾಗಿ ಕೆಆರ್‌ಎಸ್‌ ಜಲಾಶಯದ ಒಳಹರಿವು, ಹೊರಹರಿವು ಹಾಗೂ ನೀರಿನ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಅಕ್ರಮ ವಾಸ ಆರೋಪ: ಬೆಂಗಳೂರಿನಲ್ಲಿ ಬಂಧಿತರಾಗಿದ್ದ 31 ಬಾಂಗ್ಲಾದೇಶಿ ಪ್ರಜೆಗಳು ಗಡಿಪಾರು!

0

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದ ಒಟ್ಟು 31 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ.

ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ 31 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರ ದಾಖಲೆಗಳು ಹಾಗೂ ಭಾರತದಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಗಡಿಪಾರು ಮಾಡಲಾಗಿದೆ.

ಪೊಲೀಸ್ ಭದ್ರತೆಯೊಂದಿಗೆ 31 ಮಂದಿಯನ್ನು ಬೆಂಗಳೂರಿನ ರೈಲ್ವೆ ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ಸುಮಾರು 20 ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಅವರನ್ನು ರೈಲಿನ ಮೂಲಕ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ದ ಪೊಲೀಸರು, ಅಲ್ಲಿಂದ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಕುರಿತು ಪೊಲೀಸರು ನಡೆಸಿದ ಪರಿಶೀಲನೆ ಹಾಗೂ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಬಂಧಿತ 31 ಮಂದಿಯ ದಾಖಲೆಗಳು, ಭಾರತದಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಅವರ ಹಿನ್ನೆಲೆಯನ್ನು ಪರಿಶೀಲಿಸಿದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಗಡಿಪಾರು ಮಾಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ.

ವಿಜಯಪುರದಲ್ಲಿ ತಡರಾತ್ರಿ ಎಟಿಎಂಗೆ ಕನ್ನ; ಲಕ್ಷಾಂತರ ನಗದು ಸಮೇತ ಮಷಿನ್ ಹೊತ್ತೊಯ್ದ ಮುಸುಕುಧಾರಿ ಕಳ್ಳರು!

0

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ತಡರಾತ್ರಿ ಎಟಿಎಂ ಕಳ್ಳತನ ನಡೆದಿರುವ ಘಟನೆ ನಡೆದಿದೆ.

ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್‌ಗೆ ಸೇರಿದ ಎಟಿಎಂ ಅನ್ನು ಮುಸುಕುಧಾರಿಗಳ ಗುಂಪೊಂದು ಕಳ್ಳತನ ಮಾಡಿಕೊಂಡು ಪರಾರಿಯಾಗಿದೆ. ತಡರಾತ್ರಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು, ಎಟಿಎಂ ಮಷಿನ್‌ನ್ನೇ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಎಟಿಎಂ ಮಷಿನ್‌ನಲ್ಲಿ ಲಕ್ಷಾಂತರ ರೂಪಾಯಿ ನಗದು ಇತ್ತು ಎಂದು ಶಂಕಿಸಲಾಗಿದೆ. ಕಳ್ಳರು ಎಟಿಎಂ ಮಷಿನ್‌ ಸಮೇತ ಪರಾರಿಯಾಗಿರುವುದರಿಂದ ನಗದು ಎಷ್ಟು ಇತ್ತು ಎಂಬುದು ಪೊಲೀಸ್‌ ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.

ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ದಾರುಣ ಕೃತ್ಯ: ಅವಳಿ ಹೆಣ್ಣು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ!

0

ಬೆಂಗಳೂರು: ಬೆಂಗಳೂರಿನ ತಲಘಟ್ಟಪುರದ ವಾಜರಹಳ್ಳಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ.

ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ತಾಯಿ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ವಾಜರಹಳ್ಳಿಯ ನಿವಾಸಿ ಉಮಾದೇವಿ (42) ಎಂಬುವವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. IVF ಮೂಲಕ ದಂಪತಿ ಅವಳಿ ಹೆಣ್ಣು ಮಕ್ಕಳನ್ನು ಪಡೆದಿದ್ದರು. ಆದರೆ ಮಕ್ಕಳ ಜನನದ ಬಳಿಕ ಉಮಾದೇವಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಸಂಜೆ ಮಕ್ಕಳನ್ನು ಕೊಂದು ಬಳಿಕ ಉಮಾದೇವಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಗೆ ಬಂದ ಪತಿ ಪತ್ನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮಾಹಿತಿ ತಿಳಿದು ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಉಮಾದೇವಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಮಕ್ಕಳ ಸಾವಿನ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಇಂದು ಮಹತ್ವದ ದಿನ; ದರ್ಶನ್‌ಗೆ ಮತ್ತೆ ಟೆನ್ಷನ್! ಇಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?

0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ.

ಪ್ರಕರಣದಲ್ಲಿ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಅರ್ಜಿಯನ್ನು 59ನೇ ಸಿಸಿಹೆಚ್‌ ನ್ಯಾಯಾಲಯ ಅಂಗೀಕರಿಸಿದ್ದು, ಇಂದು ಅವರ ಸಾಕ್ಷಿ ಹೇಳಿಕೆ ದಾಖಲಾಗುತ್ತಾ ಎಂಬ ಕುತೂಹಲ ಮೂಡಿದೆ.

ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 2ರಂದು ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ವಿಟ್ನೆಸ್‌ ಸಮನ್ಸ್‌ ಜಾರಿಗೊಳಿಸಲಾಗಿತ್ತು. ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಸಮನ್ಸ್‌ ಜಾರಿ ಮಾಡುವಂತೆ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು.

ಇದರ ಬೆನ್ನಲ್ಲೇ ಇಂದು ಪ್ರದೋಷ್‌ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ಹೇಳಿಕೆ ನೀಡುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಪ್ರದೋಷ್‌ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದರೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಅದು ಮಹತ್ವದ ಬೆಳವಣಿಗೆಯಾಗಲಿದೆ.

ಇದೇ ವೇಳೆ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್‌ ಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಆರೋಪಿ ದರ್ಶನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ದರ್ಶನ್‌ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನ ಪಟ್ಟಿಯಲ್ಲಿ 49ನೇ ಮ್ಯಾಟರ್‌ ಆಗಿದೆ. ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಯ ಕುರಿತು ಆದೇಶ ಹೊರಬೀಳುವ ಸಾಧ್ಯತೆಯಿದೆ.

ಹೀಗಾಗಿ ಹೈಕೋರ್ಟ್‌ನ ಆದೇಶದ ಬಳಿಕ ಮಧ್ಯಾಹ್ನ 12ರ ಸುಮಾರಿಗೆ ಪ್ರದೋಷ್‌ ಅವರ ಹೇಳಿಕೆ ದಾಖಲಿಸಲು ಕೆಳ ನ್ಯಾಯಾಲಯದಲ್ಲಿ ಸಿದ್ಧತೆ ನಡೆಯುತ್ತಿದೆ. ಹೈಕೋರ್ಟ್‌ ಆದೇಶ ಏನಾಗಲಿದೆ? ಪ್ರದೋಷ್‌ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡುತ್ತಾರಾ? ಎಂಬುದರ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.