Home Blog Page 9

ಪಾಕ್ ಆಟಗಾರನನ್ನು ₹2.34 ಕೋಟಿಗೆ ಖರೀದಿಸಿದ ಸನ್ ರೈಸರ್ಸ್: ಭುಗಿಲೆದ್ದ ಆಕ್ರೋಶ

0

ದಿ ಹಂಡ್ರೆಡ್ಕ್ರಿಕೆಟ್ ಟೂರ್ನಿಯ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದಕ್ಕೆ ಸನ್ರೈಸರ್ಸ್ ಲೀಡ್ಸ್ ತಂಡದ ಮಾಲಕಿ ಕಾವ್ಯ ಮಾರನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡೆತನದಲ್ಲಿರುವ ಸನ್ರೈಸರ್ಸ್ ಲೀಡ್ಸ್ ತಂಡವು 27 ವರ್ಷದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್ (ಸುಮಾರು 2.34 ಕೋಟಿ ರೂ.) ನೀಡಿ ಖರೀದಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದಿಲ್ಲ ಎಂಬುದು ಬಹುಕಾಲದಿಂದಲೂ ನಡೆದುಬರುತ್ತಿದೆ. ಆದರೆ ಅದಕ್ಕೆ ವಿರುದ್ಧವಾಗಿ ಸನ್ರೈಸರ್ಸ್ ಲೀಡ್ಸ್ ತಂಡ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.

2009ರಿಂದ ಪಾಕಿಸ್ತಾನದ ಕ್ರಿಕೆಟಿಗರು ಐಪಿಎಲ್ನಲ್ಲಿ ಆಡುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸಾಮಾನ್ಯವಾಗಿ ಐಸಿಸಿ ಆಯೋಜಿಸುವ ಟೂರ್ನಿಗಳು ಹಾಗೂ ಏಷ್ಯಾಕಪ್ ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ದಿ ಹಂಡ್ರೆಡ್ಟೂರ್ನಿಯು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ವಿಶಿಷ್ಟ ಕ್ರಿಕೆಟ್ ಸ್ಪರ್ಧೆಯಾಗಿದ್ದು, ಸಾಂಪ್ರದಾಯಿಕ ಟಿ20 ಕ್ರಿಕೆಟ್ಗೆ ಹೋಲಿಸಿದರೆ ವಿಭಿನ್ನ ನಿಯಮಗಳನ್ನು ಹೊಂದಿದೆ.

ಟೂರ್ನಿಯಲ್ಲಿ ಪ್ರತಿ ಇನ್ನಿಂಗ್ಸ್ಗೆ ಕೇವಲ 100 ಎಸೆತಗಳಿರುತ್ತವೆ. ಸಾಮಾನ್ಯವಾಗಿ ಸುಮಾರು 2.5 ಗಂಟೆಗಳೊಳಗೆ ಪಂದ್ಯ ಮುಗಿಯುತ್ತದೆ. 6 ಎಸೆತಗಳ ಬದಲು ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಎಂಡ್ ಬದಲಾಗುತ್ತದೆ. ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಎಸೆಯಬಹುದು. ಪಂದ್ಯದಲ್ಲಿ ಒಬ್ಬ ಬೌಲರ್ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಲು ಅವಕಾಶವಿರುತ್ತದೆ.

ಇನ್ನಿಂಗ್ಸ್ ಮೊದಲ 25 ಎಸೆತಗಳು ಪವರ್ಪ್ಲೇ ಆಗಿರುತ್ತದೆ. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಬಾರಿ ಜುಲೈ 21ರಿಂದ ಆಗಸ್ಟ್ 16ರವರೆಗೆ ಪಂದ್ಯಗಳು ನಡೆಯಲಿವೆ.

ಅಮೆರಿಕದಲ್ಲಿ ಭಾರತ ಮೂಲದ ಸೋದರರಿಂದ ಕೋಟ್ಯಂತರ ರೂಪಾಯಿ ವಂಚನೆ: 400 ವರ್ಷಗಳ ಜೈಲು ಶಿಕ್ಷೆ!

0

ವಾಷಿಂಗ್ಟನ್: ಭಾರತೀಯ ಮೂಲದ ಇಬ್ಬರು ಸಹೋದರರು ಅಮೆರಿಕದಲ್ಲಿ ಬಹುಕೋಟಿ ವಂಚನೆ ನಡೆಸಿರುವುದು ಸಾಬೀತಾಗಿದ್ದು, ಅವರಿಗೆ ಗರಿಷ್ಠ 400 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಪೆನ್ಸಿಲ್ವೇನಿಯಾದ ನಿವಾಸಿಗಳಾದ ಭಾಸ್ಕರ್ ಸವಾನಿ (60) ಮತ್ತು ಅರುಣ್ ಸವಾನಿ (58) ವೀಸಾ ವಂಚನೆ, ಆರೋಗ್ಯ ವಿಮೆ ವಂಚನೆ, ಅಕ್ರಮ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಪರಾಧಿಗಳೆಂದು ತೀರ್ಪು ಬಂದಿದೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ನ್ಯಾಯಾಲಯ ಘೋಷಿಸಬೇಕಿದೆ ಎಂದು ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

ಅಪರಾಧಿಗಳಾದ ಇಬ್ಬರು “ಸವಾನಿ ಗ್ರೂಪ್” ಎಂಬ ವೆಬ್‌ಸೈಟ್ ಮೂಲಕ ಕಾನೂನುಬಾಹಿರವಾಗಿ ಹಣ ಸಂಪಾದಿಸಿದ್ದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿದ್ದ ಭಾಸ್ಕರ್ ಸವಾನಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಂಚನೆಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿಗರನ್ನು ನೇಮಕ ಮಾಡಿಕೊಳ್ಳಲು ವೀಸಾ ಅರ್ಜಿಗಳಲ್ಲಿ ವಂಚನೆ ಮಾಡುವುದು, ಅಕ್ರಮ ಹಣ ವರ್ಗಾವಣೆ ನಡೆಸುವುದು, ವೈದ್ಯಕೀಯ ಕ್ಷೇತ್ರದ ವಂಚನೆ ಹಾಗೂ ತೆರಿಗೆ ತಪ್ಪಿಸಲು ಹಲವು ಖರ್ಚುಗಳನ್ನು ಮುಚ್ಚಿಹಾಕಿದ ಆರೋಪಗಳು ಇವರ ಮೇಲೆ ಸಾಬೀತಾಗಿವೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಲೆಕ್ಸಾಂಡ್ರಾ ರಾಡೋಮಿಯಾಕ್ ಎಂಬವರಿಗೂ ಅಪರಾಧ ಸಾಬೀತಾಗಿದ್ದು, ಅವರಿಗೆ ಸುಮಾರು 40 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಸಾಧ್ಯತೆ ಇದೆ.

World Sleep Day: ಇಂದು ವಿಶ್ವ ನಿದ್ರಾ ದಿನ; ನಿದ್ದೆಯೇ ನಮ್ಮನೆ ದೇವ್ರು.. ಬನ್ನಿ ನಿದ್ರೆ ಮಾಡೋಣ!

0

ನಮ್ಮ ಆರೋಗ್ಯಕ್ಕೆ ಆಹಾರ, ನೀರು ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಅದೇ ರೀತಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆ ಕೂಡ ಅಷ್ಟೇ ಅಗತ್ಯ. ಆದರೆ ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಅನೇಕರು ಸರಿಯಾಗಿ ನಿದ್ರೆ ಮಾಡುತ್ತಿಲ್ಲ.

ದಿನವಿಡೀ ಮೊಬೈಲ್ ಬಳಸುವುದರಿಂದ ನಿದ್ರೆಯ ಸಮಯ ಕಡಿಮೆಯಾಗುತ್ತಿದ್ದು, ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಜನರಲ್ಲಿ ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನ ಅನ್ನು ಆಚರಿಸಲಾಗುತ್ತದೆ.

ವಿಶ್ವ ನಿದ್ರಾ ದಿನದ ಇತಿಹಾಸ

ವಿಶ್ವ ನಿದ್ರಾ ದಿನವನ್ನು ವರ್ಲ್ಡ್ ಸ್ಲೀಪ್ ಸೊಸೈಟಿ ಪ್ರಾರಂಭಿಸಿತು. ಇದನ್ನು ಮೊದಲ ಬಾರಿಗೆ 2008ರಲ್ಲಿ ಆಚರಿಸಲಾಯಿತು. ಸಮರ್ಪಕ ನಿದ್ರೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು, ನಿದ್ರಾಹೀನತೆಯ ದುಷ್ಪರಿಣಾಮಗಳನ್ನು ಜನರಿಗೆ ತಿಳಿಸುವುದು ಹಾಗೂ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳ ತಡೆಗಟ್ಟುವಿಕೆ ಬಗ್ಗೆ ಅರಿವು ಮೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಿಶ್ವ ನಿದ್ರಾ ದಿನದ ಮಹತ್ವ

ನಿದ್ರೆಯ ಕೊರತೆ ಆಯಾಸ, ಕಿರಿಕಿರಿ, ರೋಗನಿರೋಧಕ ಶಕ್ತಿ ಕುಗ್ಗುವುದು ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಸಾಕಷ್ಟು ನಿದ್ರೆ ಪಡೆಯುವ ಅಗತ್ಯವನ್ನು ಈ ದಿನದ ಮೂಲಕ ಜನರಿಗೆ ತಿಳಿಸಲಾಗುತ್ತದೆ.

ಉತ್ತಮ ನಿದ್ರೆ ಯಾಕೆ ಮುಖ್ಯ?

ನಿದ್ರೆ ಎಂದರೆ ಕೇವಲ ವಿಶ್ರಾಂತಿ ಮಾತ್ರವಲ್ಲ; ದೇಹವನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯಾಗಿದೆ. ನಾವು ನಿದ್ರಿಸುವಾಗ ದೇಹವು ಸ್ನಾಯುಗಳನ್ನು ದುರಸ್ತಿ ಮಾಡುವುದು, ಮೆದುಳಿಗೆ ವಿಶ್ರಾಂತಿ ನೀಡುವುದು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಯ್ದುಕೊಳ್ಳುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಉತ್ತಮ ನಿದ್ರೆ ಸ್ಮರಣಾಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಕನಿಷ್ಠ 8ರಿಂದ 9 ಗಂಟೆಗಳ ನಿದ್ರೆ ಪಡೆಯುವುದು ಆರೋಗ್ಯಕ್ಕೆ ಅತ್ಯಂತ ಅಗತ್ಯ.

ಉತ್ತಮ ನಿದ್ರೆ ಪಡೆಯಲು ಕೆಲವು ಸಲಹೆಗಳು

ನಿಗದಿತ ಸಮಯದಲ್ಲಿ ಮಲಗು: ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ ಮತ್ತು ಏಳುವ ಅಭ್ಯಾಸ ಬೆಳೆಸಿಕೊಳ್ಳಿ.

ಮೊಬೈಲ್ ಬಳಕೆ ಕಡಿಮೆ ಮಾಡಿ: ಮಲಗುವ ಮುನ್ನ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿ ಬಳಕೆಯನ್ನು ಮಿತಿಗೊಳಿಸಿ.

ಹಗುರವಾದ ಆಹಾರ ಸೇವಿಸಿ: ರಾತ್ರಿ ಭಾರವಾದ ಅಥವಾ ಹೆಚ್ಚು ಖಾರವಾದ ಆಹಾರವನ್ನು ತಪ್ಪಿಸಿ.

ಶಾಂತ ವಾತಾವರಣ: ಮಲಗುವ ಮುನ್ನ ಕೋಣೆಯಲ್ಲಿ ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿ.

ನಿಯಮಿತ ವ್ಯಾಯಾಮ: ಪ್ರತಿದಿನ ಲಘು ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ಉತ್ತಮ ನಿದ್ರೆ ಪಡೆಯಲು ಸಹಾಯವಾಗುತ್ತದೆ.

ಭೀಕರ ಅಪಘಾತ| ಕಾರು ಪಲ್ಟಿಯಾಗಿ ಇಬ್ಬರು ಸಾವು: ಮತ್ತಿಬ್ಬರು ಗಂಭೀರ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಳಿಕೋಟೆ ಹೆದ್ದಾರಿಯ ಬಸವನಹಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ.

ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚಂದ್ರವ್ವ ಟಕ್ಕೆನ್ನವರ (70) ಹಾಗೂ ಕಾಮಪ್ಪ ಅವರಾದಿ (65) ಮೃತರು. ಇವರು ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ನಿವಾಸಿಗಳು ಎಂದು ತಿಳಿದು ಬಂದಿದೆ.

ಸ್ವಿಫ್ಟ್‌ ಡಿಜೈರ್ ಕಾರಿನಲ್ಲಿ ನಾಲ್ವರು ಕಾಗವಾಡದಿಂದ ಶ್ರೀಶೈಲಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇವಿ ಬೈಕ್ ಮಾರಾಟದ ಹೆಸರಿನಲ್ಲಿ ಕೋಟ್ಯಾಂತರ ವಂಚನೆ: ಇಬ್ಬರು ಆರೋಪಿಗಳು ಅರೆಸ್ಟ್!

ಬೆಂಗಳೂರು: ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಕೇಶ್ ಹಾಗೂ ಹನುಮಂತರಾಜು ಬಿಲ್ಕರ್ ಎಂದು ಗುರುತಿಸಲಾಗಿದೆ. ರಾಕೇಶ್‌ನನ್ನು ಪೀಣ್ಯ ಪೊಲೀಸರು ಬಂಧಿಸಿದ್ದು, ಹನುಮಂತರಾಜು ಬಿಲ್ಕರ್‌ನನ್ನು ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

‘ಮೋದಿ ಯೋಜನೆ’ ಹೆಸರಿನಲ್ಲಿ 3250 ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ನೆಪದಲ್ಲಿ ವಂಚನೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸುಮಾರು 35 ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಕ್ಕೆ ಒಂದೂವರೆ ಲಕ್ಷ ರೂಪಾಯಿ ಬಿಲ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಸರಕಾರದಿಂದ ನೆರವು ಸಿಗುತ್ತದೆ ಎಂದು ನಂಬಿಸಿ ಗ್ರಾಹಕರಿಂದ ಕೋಟಿ ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಹಕರಿಂದ ಕೇವಲ 20 ಸಾವಿರ ರೂಪಾಯಿ ಮುಂಗಡವಾಗಿ ಪಡೆದು ಅವರ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಬಳಿಕ ಆ ದಾಖಲೆಗಳನ್ನು ಬಳಸಿಕೊಂಡು ಗ್ರಾಹಕರ ಹೆಸರಿನಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಸಾಲ ಮಾಡಲಾಗುತ್ತಿತ್ತು. ಆ ಹಣವನ್ನು ದ್ವಿಚಕ್ರ ವಾಹನ ಪ್ರದರ್ಶನ ಮಂದಿರದ ಮಾಲೀಕರು ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

‘ಆಪ್ಕಿ ಇವಿ’ ಪ್ರದರ್ಶನ ಮಂದಿರದ ಮಾಲೀಕರಾದ ರಾಕೇಶ್ ಮತ್ತು ಹನುಮಂತರಾಜು ಈ ವಂಚನೆಯ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಬಾಗಲಗುಂಟೆ ಹಾಗೂ ಪೀಣ್ಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಯಾದಗಿರಿಯಲ್ಲಿ ಅಕ್ರಮ ಎಲ್‌ಪಿಜಿ ಬಳಕೆ ಪತ್ತೆ: 46 ಗೃಹಬಳಕೆಯ ಸಿಲಿಂಡರ್ ಜಪ್ತಿ

ಯಾದಗಿರಿ: ಜಿಲ್ಲೆಯ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸಲಾಗುತ್ತಿದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

ಮಾರ್ಚ್ 12ರಂದು ನಡೆದ ಈ ಕಾರ್ಯಾಚರಣೆಯಲ್ಲಿ ನಗರದಲ್ಲಿನ ಹಲವಾರು ಹೋಟೆಲ್‌ಗಳು ಮತ್ತು ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 46 ಗೃಹಬಳಕೆಯ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಅಕ್ರಮವಾಗಿ ಬಳಸುತ್ತಿರುವ ಕುರಿತು ಬಂದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಡಿಕೆಶಿ ಬೆನ್ನಲ್ಲೇ ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ ಸಿದ್ದರಾಮಯ್ಯ: ಕಾಂಗ್ರೆಸ್​ನಲ್ಲಿ ಮತ್ತೆ ಜೋರಾಯ್ತು ಡಿನ್ನರ್ ಪಾಲಿಟಿಕ್ಸ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೆ ಔತಣಕೂಟ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ವಿಶೇಷ ಭೋಜನ ಕೂಟ ಏರ್ಪಡಿಸಿದ್ದು, ಮಾರ್ಚ್ 16ರಂದು ಅವರ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಈ ಭೋಜನ ಕೂಟ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಉಪ ಮುಖ್ಯಮಂತ್ರಿ D. K. ಸಿದ್ದರಾಮಯ್ಯ ಅವರು ಶಾಸಕರಿಗಾಗಿ ಭೋಜನ ಸಭೆ ಏರ್ಪಡಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಶಾಸಕರಿಗೆ ಭೋಜನ ಕೂಟ ನೀಡಿದ್ದರು. ಅದರ ಬಳಿಕ ಮಾರ್ಚ್ 12ರಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪರವಾಗಿರುವ ಕೆಲವು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಆ ಸಭೆಯಲ್ಲಿ ಸಚಿವ ಸ್ಥಾನಕಾಂಕ್ಷಿಗಳು ಸಚಿವ ಸಂಪುಟ ಪುನರ್‌ವ್ಯವಸ್ಥೆ ಕುರಿತು ಒತ್ತಡ ತರಲು ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬೆಳವಣಿಗೆಗಳ ನಡುವೆಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಭೋಜನ ಕೂಟ ಏರ್ಪಡಿಸಿರುವುದು ಹಲವು ರೀತಿಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಸಭೆಯಲ್ಲಿ ಮುಂದಿನ ರಾಜಕೀಯ ನಡೆಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆ, ಒಳ ಮೀಸಲಾತಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದರ ಜೊತೆಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ ಕಾರ್ಯಗಳಲ್ಲಿ ಯಾರನ್ನು ಭಾಗಿಯಾಗಿಸಬೇಕು ಎಂಬ ವಿಷಯದಲ್ಲಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೋಜನ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿರುವ ಈ ಭೋಜನ ಕೂಟ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಆಂತರಿಕ ರಾಜಕೀಯದ ಮೇಲೆ ಇದರ ಪರಿಣಾಮ ಹೇಗಿರಲಿದೆ ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.

ಮನೆಯೊಳಗೆ ಸೂರ್ಯನ ಬೆಳಕು ಸರಿಯಾಗಿ ಬೀಳಬೇಕು: ಜ್ಯೋತಿಷ್ಯ ಹೇಳುವುದೇನು?

0

ಮನೆ, ಕಚೇರಿ, ವ್ಯಾಪಾರ ಸ್ಥಳ ಅಥವಾ ದೇವಾಲಯ ಯಾವುದು ಆದರೂ, ಸೂರ್ಯನ ಬೆಳಕು ಪ್ರವೇಶಿಸುವುದು ಅತ್ಯಂತ ಮುಖ್ಯವಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ದಿಕ್ಕಿನಿಂದ ಬರುವ ಸೂರ್ಯರಶ್ಮಿಯು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಪೂರ್ವ ದಿಕ್ಕಿನ ಬಾಗಿಲು ಇಲ್ಲದಿದ್ದರೂ, ಪೂರ್ವದಿಂದ ಬರುವ ಬೆಳಕು ಸಕಾರಾತ್ಮಕ ಶಕ್ತಿ, ಮಾನಸಿಕ ನೆಮ್ಮದಿ, ಉತ್ತಮ ಆರೋಗ್ಯ, ಶ್ರೇಷ್ಠ ಉದ್ಯೋಗ, ಆದಾಯದ ಏರಿಕೆ ಮತ್ತು ಸಕಾರಾತ್ಮಕ ಭಾವನೆಗಳಿಗೆ ಸಹಾಯ ಮಾಡುತ್ತದೆ.

ವಾಸ್ತು ಪ್ರಕಾರ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳಿಂದ ಬರುವ ಬೆಳಕು ಮನೆ, ಕಚೇರಿ ಅಥವಾ ದೇವಾಲಯದಲ್ಲಿ ಆರೋಗ್ಯ, ಕೀರ್ತಿ ಮತ್ತು ಪ್ರತಿಷ್ಠೆಗೆ ಸಹಕಾರಿಯಾಗಿದೆ. ಸೂರ್ಯನು ಆರಾಧ್ಯನಾಗಿ ಪರಿಗಣಿಸಲ್ಪಡುವುದರಿಂದ, ಸೂರ್ಯನ ಕಿರಣಗಳು ಆರೋಗ್ಯ ವೃದ್ಧಿಗೆ ಪೂರಕವೆಂದು ನಂಬಲಾಗುತ್ತದೆ. ಸಂಧ್ಯಾಕಾಲದಲ್ಲಿ, ಅಂದರೆ ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ದಿಕ್ಕಿನಿಂದ ಬೆಳಕು ಬೀಳುವುದೂ ಶುಭಕರವಾಗಿದೆ. ಆದರೆ ನೈಋತ್ಯ ದಿಕ್ಕಿನಿಂದ ಬರುವ ಬೆಳಕು ವಾಸ್ತು ಪ್ರಕಾರ ಮನೆ ಅಥವಾ ಕಚೇರಿಯಲ್ಲಿ ಶುಭಕರವಲ್ಲ; ಆದರೆ ದೇವಾಲಯ ಅಥವಾ ಪೂಜಾ ಸ್ಥಳದಲ್ಲಿ ಶ್ರದ್ಧಾಭಕ್ತಿಯಿಂದ ನೋಡಿದರೆ ಶುಭಫಲಗಳು ದೊರಕುತ್ತವೆ.

ಒಟ್ಟಾರೆಯಾಗಿ, ಮನೆ, ಕಚೇರಿ, ದೇವಾಲಯ, ಶಿಖರ, ಕಿಟಕಿ ಅಥವಾ ಬಾಗಿಲುಗಳ ಮೂಲಕ ಸೂರ್ಯರಶ್ಮಿಯ ಪ್ರವೇಶವು ವಾಸ್ತು ಶಕ್ತಿಯನ್ನು ಗಟ್ಟಿಗೊಳಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯಿಂದ ಸ್ಥಳವನ್ನು ಪರಿಪೂರ್ಣ ಮಾಡುತ್ತದೆ.

30 ವರ್ಷದಿಂದ ವ್ಯಕ್ತಿಯನ್ನು ಜೀತಕ್ಕೆ ಇರಿಸಿಕೊಂಡಿದ್ದ ವ್ಯಕ್ತಿ ಅರೆಸ್ಟ್!

ಉಡುಪಿ: ತಾಲ್ಲೂಕಿನ ಕನ್ಯಾನ ಗ್ರಾಮದ ಕಬ್ಬೈಲು ಪ್ರದೇಶದಲ್ಲಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸುಮಾರು 30 ವರ್ಷಗಳ ಕಾಲ ಜೀತದಾಳಾಗಿ ಕೆಲಸ ಮಾಡಿಸಿದ್ದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ.

65 ವಯಸ್ಸಿನ ಸಂತ್ರಸ್ತರು ಪರಿಶಿಷ್ಟ ಪಂಗಡ (ಕೊರಗ) ಸಮುದಾಯಕ್ಕೆ ಸೇರಿದವರು. ಅವರು ಸುಮಾರು 30 ವರ್ಷಗಳ ಹಿಂದೆ ಕುಂದಾಪುರದ ಹೆಮ್ಮಾಡಿ ಸಮೀಪದ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಅವರ ಮನೆಯಲ್ಲಿ ಘರ ಕೆಲಸಕ್ಕೆ ನೇಮಕಗೊಂಡಿದ್ದರು. ಸುಬ್ಬಣ್ಣ ಶೆಟ್ಟಿಯವರ ನಿಧನದ ಬಳಿಕ ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ಅವರು ಸಂತ್ರಸ್ತರನ್ನು ಮನೆಯ ದನ, ತೋಟದ ಕೆಲಸ, ಮನೆ ಶೌಚಾಲಯ ಸ್ವಚ್ಛತೆ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಂಡಿದ್ದಾರೆ.

ಅವರಿಂದ ದನ-ಎಮ್ಮೆ ನೋಡಿಕೊಳ್ಳುವುದು, ಸಗಣಿ ತೆಗೆದು ಗದ್ದೆ ಕೆಲಸ ಮಾಡುವುದು ಮತ್ತು ಮನೆಯಲ್ಲಿನ ಇತರ ಕೆಲಸಗಳನ್ನು ತಡೆಯದೆ ಬಲವಂತವಾಗಿ ಮಾಡಿಸುತ್ತಾ, ಸರಿಯಾದ ವೇತನ ನೀಡದೆ ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ದನದ ಕೊಟ್ಟಿಗೆಯಲ್ಲೇ ಮಲಗಲು ಒತ್ತಾಯಿಸಲಾಗುತ್ತಿದ್ದುದಾಗಿ ಆರೋಪಿಸಲಾಗಿದೆ. ಮನೆಯಿಂದ ಹೊರಗೆ ಹೋಗಲು ಅವಕಾಶ ನೀಡದೆ, ದೌರ್ಜನ್ಯ ಸಹ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಅಧಿಕಾರಿಗಳ ನಿರ್ದೇಶನದಲ್ಲಿ ಆರೋಪಿ ರಜನಿ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

ಬೆಂಗಳೂರು–ಮಂಗಳೂರು–ಮೈಸೂರಿನಲ್ಲಿ ಹೆಚ್ಚಿದ ಕಳಪೆ ಗಾಳಿ: ಸ್ಥಳೀಯರಲ್ಲಿ ಆತಂಕ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಹವಾಮಾನ ಹಾಗೂ ವಾತಾವರಣ ಪರಿಸ್ಥಿತಿ ಗಮನಾರ್ಹವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ ಕುಸಿತ ಕಂಡು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದು ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ವಾಯು ಗುಣಮಟ್ಟ 150 ದಾಟಿದ್ದು, ಕೆಲವು ಪ್ರದೇಶಗಳಲ್ಲಿ ಆರೋಗ್ಯಕ್ಕೆ ತೀವ್ರ ಹಾನಿಕರವಾಗಿರುವ ಮಟ್ಟವನ್ನು ತಲುಪಿದೆ. ಕೆಲ ದಿನಗಳ ಹಿಂದಿನ ತೀವ್ರ ಕಳಪೆ ಮಟ್ಟದಿಂದ ಏರ್ ಕ್ವಾಲಿಟಿ ಅಂಕೆಗಳು ಸಣ್ಣ ಏರುಪೇರು ಕಂಡರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

ಇತರ ಪ್ರಮುಖ ನಗರಗಳ ಏರ್ ಕ್ವಾಲಿಟಿ ಇಂತಿದೆ: ಬೆಂಗಳೂರು – 163, ಮಂಗಳೂರು – 184, ಮೈಸೂರು – 162, ಬೆಳಗಾವಿ – 154, ಕಲಬುರ್ಗಿ – 114, ಶಿವಮೊಗ್ಗ – 164, ಬಳ್ಳಾರಿ – 144, ಹುಬ್ಬಳ್ಳಿ – 153, ಉಡುಪಿ – 174, ವಿಜಯಪುರ – 136. ಈ ತಿಂಗಳು ಸಂಪೂರ್ಣವಾಗಿ ಈ ರೀತಿಯ ಬೇಗನೆ ಬಿಸಿಲು ಮತ್ತು ಕಳಪೆ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ವಾತಾವರಣ ಇಲಾಖೆ ಸೂಚಿಸಿದೆ.

 

error: Content is protected !!