HomeKarnataka Newsಮೂವರ ಎನ್‌ಕೌಂಟರ್‌ಗೆ ಟ್ವಿಸ್ಟ್: ಘಟನಾ ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ ಬಗ್ಗೆ ACF ಹೇಳಿದ್ದೇನು?

ಮೂವರ ಎನ್‌ಕೌಂಟರ್‌ಗೆ ಟ್ವಿಸ್ಟ್: ಘಟನಾ ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ ಬಗ್ಗೆ ACF ಹೇಳಿದ್ದೇನು?

For Dai;y Updates Join Our whatsapp Group

ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಜಪ್ತಿ ಮಾಡಲಾದ ವಸ್ತುಗಳು ಹಲವು ಅನುಮಾನಗಳಿಗೆ ಕಾರಣವಾಗಿವೆ.

ವಿಶೇಷವಾಗಿ, ಸ್ಟಿಕ್ಕರ್ ಕೂಡ ಕಳಚದ ಹೊಸ ಚಪ್ಪಲಿ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಬಗ್ಗೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಎರಡು ಚೀಲಗಳು ಪತ್ತೆಯಾಗಿದ್ದು, ಅವುಗಳಲ್ಲಿ ಮಾಂಸ, ಬಂದೂಕು, ಚಪ್ಪಲಿ, ಟಾರ್ಚ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಘಟನಾ ಸ್ಥಳದಲ್ಲಿ ಹೊಸ ಚಪ್ಪಲಿ ಪತ್ತೆಯಾಗಿರುವ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಕಾಡಿಗೆ ಬೇಟೆಗೆ ತೆರಳಿದವರು ಹೊಸ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಿದ್ದರೇ? ಅವುಗಳನ್ನು ಬಳಸದೇ ಏಕೆ ಬಿಟ್ಟು ಹೋಗಿದ್ದರು ಎಂಬ ಅನುಮಾನಗಳು ವ್ಯಕ್ತವಾಗಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಎಫ್ ಮರಿಸ್ವಾಮಿ, “ನಮ್ಮ ಸಿಬ್ಬಂದಿ ಅಲ್ಲಿಗೆ ಹೊಸ ಚಪ್ಪಲಿ ತೆಗೆದುಕೊಂಡು ಹೋಗಿ ಇಟ್ಟಿಲ್ಲ. ಘಟನಾ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿಗಳು ಸಿಕ್ಕಿವೆ. ಕಿತ್ತುಹೋದರೆ ಇರಲಿ ಎಂದು ತಂದಿಟ್ಟುಕೊಂಡಿರಬಹುದು” ಎಂದು ತಿಳಿಸಿದ್ದಾರೆ.

ಬ್ಯಾಗ್‌ಗಳಲ್ಲಿ ದಿನಸಿ ಪದಾರ್ಥಗಳು, ಟಾರ್ಚ್ ಸೇರಿದಂತೆ ಬೇಟೆಗೆ ಬಳಸುವ ಸಲಕರಣೆಗಳು ಪತ್ತೆಯಾಗಿವೆ. ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು ಎಂದು ಹೇಳಿದ್ದಾರೆ.

“ಅವರು ದನ ಮೇಯಿಸಲು ಅಥವಾ ಹುಡುಕಲು ಅರಣ್ಯಕ್ಕೆ ಪ್ರವೇಶಿಸಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯಕ್ಕೆ ಬಂದಿದ್ದರು. ಅವರು ಸುಮಾರು 8ರಿಂದ 10 ಕಿಲೋಮೀಟರ್‌ವರೆಗೆ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದರು. ಎನ್‌ಕೌಂಟರ್ ನಡೆದ ಸ್ಥಳದಿಂದ ಸುಮಾರು 75 ಮೀಟರ್ ದೂರದಲ್ಲಿ ಎರಡು ಬ್ಯಾಗ್‌ಗಳಲ್ಲಿ ಮಾಂಸ ಪತ್ತೆಯಾಗಿದೆ ಎಂದು ಎಸಿಎಫ್ ಮಾಹಿತಿ ನೀಡಿದ್ದಾರೆ.

ಒಬ್ಬನೇ ಸಿಬ್ಬಂದಿ ಗುಂಡು ಹಾರಿಸಿದ್ದ?

ಮೂವರ ಮೇಲೆ ಗುಂಡು ಹಾರಿಸಿದವರು ಒಬ್ಬನೇ ಅರಣ್ಯ ಸಿಬ್ಬಂದಿ. ಉಳಿದ ಸಿಬ್ಬಂದಿ ಆತನೊಂದಿಗೆ ಇದ್ದರು ಎಂದು ಅವರು ತಿಳಿಸಿದ್ದಾರೆ.

ಆತ್ಮರಕ್ಷಣೆಗಾಗಿ ಶೂಟೌಟ್ ನಡೆಸಲಾಗಿದೆ ಎಂಬುದು ಅರಣ್ಯ ಇಲಾಖೆಯ ನಿಲುವಾಗಿದ್ದು, ಪ್ರಕರಣದ ಕುರಿತು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ವಿವಿಧ ಪ್ರಶ್ನೆಗಳು ಕೇಳಿಬಂದಿವೆ.

ಶೂಟೌಟ್ ಪ್ರಕರಣದ ಬಳಿಕ ಅರಣ್ಯ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ವಿಚಾರವೂ ಚರ್ಚೆಗೆ ಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಎಸಿಎಫ್, ಯಾವುದೇ ದುರ್ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದ್ದಾರೆ.

“ಅವರು ಹೆದರಿ ಓಡುವ ಪರಿಸ್ಥಿತಿ ಇಲ್ಲ. ತನಿಖಾ ತಂಡದ ಮುಂದೆ ಹಾಜರುಪಡಿಸಿ ಹೇಳಿಕೆ ಪಡೆಯಲಾಗಿದೆ” ಎಂದು ಮರಿಸ್ವಾಮಿ ಹೇಳಿದ್ದಾರೆ.

ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಪ್ರಾಥಮಿಕ ವರದಿ ಇಂದು ಅಥವಾ ನಾಳೆ ಸಲ್ಲಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶೂಟೌಟ್ ನಡೆಸಿದ ಅರಣ್ಯ ಸಿಬ್ಬಂದಿಯನ್ನೂ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿ ಘಟನೆಯ ಕುರಿತು ಹೇಳಿಕೆ ಪಡೆಯಲಾಗಿದೆ.

ಘಟನಾ ಸ್ಥಳದಲ್ಲಿ ಪತ್ತೆಯಾದ ವಸ್ತುಗಳು, ಶೂಟೌಟ್ ನಡೆದ ಸಂದರ್ಭ, ಅರಣ್ಯ ಸಿಬ್ಬಂದಿಯ ಹೇಳಿಕೆಗಳು ಹಾಗೂ ಮೃತರ ಹಿನ್ನೆಲೆ ಸೇರಿದಂತೆ ಹಲವು ಅಂಶಗಳನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ತನಿಖಾ ವರದಿ ಬಳಿಕ ಶೂಟೌಟ್ ಪ್ರಕರಣದಲ್ಲಿ ನಿಜವಾಗಿ ಯಾರ ತಪ್ಪಿದೆ ಎಂಬುದು ಸ್ಪಷ್ಟವಾಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img