ರಸ್ತೆಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ರಜತ್ ಹಾಗೂ ಕಿಶನ್ ರಸ್ತೆಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ಬಗ್ಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐ ಆರ್ ದಾಖಲಾಗಿತ್ತು. ಬಳಿಕ ಇಬ್ಬರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು. ಈ ವೇಳೆ ಫೈಬರ್ ಮಚ್ಚನ್ನು ನೀಡಿ ಪೊಲೀಸರ ದಿಕ್ಕು ತಪ್ಪಿಸಲು ಇಬ್ಬರು ಮುಂದಾಗಿದ್ದರು. ಆ ಬಳಿಕ ಇಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಇಬ್ಬರಿಗೂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
24ನೇ ಎಸಿಎಂಎಂ ನ್ಯಾಯಾಲಯವು ರಜತ್ ಹಾಗೂ ವಿನಯ್ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇಂದು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪೊಲೀಸರಿಂದ ಮನವಿ ಮಾಡಿಕೊಂಡಿದ್ದರು. ಆದ್ರೆ, ಆರೋಪಿಗಳ ಪರ ವಕೀಲ ಪ್ರಕಾಶ್ ಅವರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ರಜತ್ ಹಾಗೂ ವಿನಯ್ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಪೊಲೀಸರ ಕಸ್ಟಡಿಯಲ್ಲಿದ್ದ ವಿನಯ್ ಮತ್ತು ರಜತ್ ಅವರನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಇಂದೇ ಷರತ್ತುಗಳನ್ನು ಪೂರೈಸಿ, ಜಾಮೀನು ಕಾಪಿಯನ್ನು ಸಂಜೆ ವೇಳೆಗೆ ಜೈಲಿಗೆ ಕೊಂಡೊಯ್ದರೆ ಇಂದೇ ವಿನಯ್ ಹಾಗೂ ರಜತ್ ಬಿಡುಗಡೆ ಆಗಲಿದೆ. ಇಲ್ಲವಾದರೆ ನಾಳೆ (ಮಾರ್ಚ್ 29) ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.