ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳಿ ಖರ್ಗೆ ಅವರನ್ನು ಭೇಟಿಯಾಗಿದ್ದು, ಸಂಪುಟ ಪುನರ್‌ರಚನೆ ಕುರಿತು ಮನವಿ ಮಾಡಲಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಖರ್ಗೆ ಭರವಸೆ ನೀಡಿದ್ದಾರೆ. ಮೇ ಮೊದಲ ವಾರದಲ್ಲಿ ಪುನರ್‌ರಚನೆ ಸಾಧ್ಯತೆ ಇರುವುದಾಗಿ ಸೂಚನೆ ನೀಡಿದ್ದಾರೆ ಎಂದರು.
ಸಂಪುಟ ಪುನರ್‌ರಚನೆ ಸಿಎಂ ಪರಮಾಧಿಕಾರವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು ಎಂದು ಖರ್ಗೆ ಹೇಳಿದ್ದಾರೆ ಎಂದು ವಿವರಿಸಿದರು.
ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ನಾಯಕತ್ವ ಬದಲಾವಣೆ ಬೇಡಿಕೆ ಇಟ್ಟಿಲ್ಲ, ಆ ವಿಷಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ. ನಾವು ಕೇವಲ ಸಂಪುಟ ವಿಸ್ತರಣೆ ಬಗ್ಗೆ ಮಾತ್ರ ಮನವಿ ಮಾಡಿದ್ದೇವೆ ಎಂದು ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಇನ್ನು ಅಲ್ಪಸಂಖ್ಯಾತ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಜೀರ್, ಜಬ್ಬಾರ್ ಹಾಗೂ ಜಮೀರ್ ಅವರ ವಿರುದ್ಧ ಪಕ್ಷವಿರೋಧಿ ಚಟುವಟಿಕೆ ನಡೆಸಿದ ದೃಢ ದಾಖಲೆಗಳಿಲ್ಲ. ಸಣ್ಣಪುಟ್ಟ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.



