ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ‘ಮ್ಯಾಂಗೋ ಪಚ್ಚ’ ಕೂಡ ಒಂದು. ಕಿಚ್ಚ ಸುದೀಪ್ ಕುಟುಂಬದ ಹಿನ್ನೆಲೆಯೊಂದಿಗೆ ಬರುತ್ತಿರುವ ಈ ಸಿನಿಮಾ ಜೂನ್ 5ರಂದು ಬಿಡುಗಡೆಯಾಗಲಿದ್ದು, ಚಿತ್ರತಂಡ ಈಗ ಪ್ರಚಾರ ಚಟುವಟಿಕೆಗಳನ್ನು ವೇಗಗೊಳಿಸಿದೆ.
ಸಂಚಿತ್ ಅಭಿನಯದ ಮೊದಲ ಸಿನಿಮಾವಾದ ‘ಮ್ಯಾಂಗೋ ಪಚ್ಚ’ ಮೈಸೂರು ಹಿನ್ನೆಲೆಯ ಕಥೆಯನ್ನು ಹೊಂದಿದ್ದು, 25 ವರ್ಷ ಹಿಂದಿನ ಕಾಲಘಟ್ಟವನ್ನು ತೆರೆಗೆ ತರಲು ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ. ರೆಟ್ರೋ ಲುಕ್, ಹಳೆಯ ಮೈಸೂರು ವಾತಾವರಣ ಮತ್ತು ಯುವಕರ ಭಾವನಾತ್ಮಕ ಕಥಾಹಂದರ ಚಿತ್ರದ ಪ್ರಮುಖ ಆಕರ್ಷಣೆ ಎನ್ನಲಾಗುತ್ತಿದೆ.
ಆದರೆ ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಬಝ್ ಸೃಷ್ಟಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬಂದಿದ್ದರೂ, ಪ್ರಚಾರ ಕಡಿಮೆ ಎನ್ನುವ ಚರ್ಚೆ ಸಿನಿ ವಲಯದಲ್ಲೇ ಶುರುವಾಗಿದೆ.
ಈ ಬಗ್ಗೆ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದು, “ನಾವು ಹಂತ ಹಂತವಾಗಿ ಪ್ರಚಾರ ಮಾಡುತ್ತಿದ್ದೇವೆ. ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿದ್ದೇವೆ. ಶೀಘ್ರದಲ್ಲೇ ಟ್ರೇಲರ್ ಬರುತ್ತದೆ. ಸಂಚಿತ್ ಸೇರಿದಂತೆ ಚಿತ್ರತಂಡ ಸಂದರ್ಶನಗಳು ಹಾಗೂ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ” ಎಂದು ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಧ್ವನಿಯಲ್ಲಿ ಬಂದಿರುವ ಚಿತ್ರದ ಪರಿಚಯ ಟೀಸರ್ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, “ಇವ್ನೇ ಪಚ್ಚ.. ಇದು ಇವನ ಕಥೆ” ಎನ್ನುವ ಡೈಲಾಗ್ ವೈರಲ್ ಆಗಿದೆ.
ವಿವೇಕ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಮಯೂರ್ ಪಟೇಲ್, ಉಗ್ರಂ ಮಂಜು, ಪ್ರಶಾಂತ್ ಹಿರೇಮಠ್ ಹಾಗೂ ಹಂಸ ನಾರಾಯಣಸ್ವಾಮಿ ತಾರಾಗಣದಲ್ಲಿ ಇದ್ದಾರೆ.
ಡಾಲಿ ಧನಂಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಹಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಟ್ರೇಲರ್ ಸಿನಿಮಾ ಹವಾ ಹೆಚ್ಚಿಸುವ ನಿರೀಕ್ಷೆಯಿದೆ.



