ವಿಜಯಸಾಕ್ಷಿ ಸುದ್ದಿ, ಗದಗ: ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚಳಿಗಾಲದ ಅಧಿವೇಶನದ ಸ್ಥಳ ಬದಲಾವಣೆ ಕುರಿತು ಸಚಿವ ಸಂಪುಟದಲ್ಲಿ ಇನ್ನೂ ಯಾವುದೇ ಚರ್ಚೆ ಅಥವಾ ನಿರ್ಣಯವಾಗಿಲ್ಲ. ಮೇ 29ರಂದು ನಡೆಯುವ ಸಾಧ್ಯತೆಯಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬಹುದು” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡಿದ ಸಚಿವರು, “ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ತೊಂದರೆ ಉಂಟಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ” ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾನದ ಹಕ್ಕು ಕಳೆದುಕೊಂಡರೆ ಗ್ಯಾರಂಟಿ ಸೌಲಭ್ಯಗಳು ನಿಲ್ಲುತ್ತವೆ ಎಂಬ ಆತಂಕ ಜನರಲ್ಲಿ ಇದೆ. ಜಿಎಸ್‌ಟಿ ಸಂಬಂಧಿತ ಕಾರಣಗಳಿಂದ ಕೆಲವರ ಯೋಜನೆಗಳು ಸ್ಥಗಿತಗೊಂಡಿದ್ದರೂ, ಸ್ಪಷ್ಟೀಕರಣ ನೀಡಿದ ಪ್ರಕರಣಗಳನ್ನು ಮರುಪರಿಶೀಲಿಸಿ ಸೌಲಭ್ಯ ಮರುಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಟೀಕಿಸಿದ ಸಚಿವರು, “ದೇಶದ ಆರ್ಥಿಕ ಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡದೇ, ಈಗ ಎರಡು–ಮೂರು ದಿನಕ್ಕೊಮ್ಮೆ ದರ ಹೆಚ್ಚಿಸಲಾಗುತ್ತಿದೆ. ಜನರ ಬದುಕಿನೊಂದಿಗೆ ಕೇಂದ್ರ ಸರ್ಕಾರ ಚಲ್ಲಾಟ ಆಡಬಾರದು” ಎಂದು ವಾಗ್ದಾಳಿ ನಡೆಸಿದರು.



