ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ.
2019ರಲ್ಲಿ ಸಲಹೆಗಾರರಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಗಂಗೂಲಿ ಕೈಜೋಡಿಸಿದ್ದರು. ಬಳಿಕ ಪುರುಷರ ಹಾಗೂ ಮಹಿಳಾ ತಂಡಗಳ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಇದೀಗ ಮುಂಬರುವ ಐಪಿಎಲ್ ಆವೃತ್ತಿಗೆ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ಸಂತಸ ಹಂಚಿಕೊಂಡಿರುವ ಸೌರವ್ ಗಂಗೂಲಿ, ಐಪಿಎಲ್‌ನಲ್ಲಿ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾಗಿದೆ. ತಂಡದ ಮಾಲೀಕರು, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಹಾಗೂ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ್ದಾರೆ.
ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಇತ್ತೀಚಿನ ವರ್ಷಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅತ್ಯುತ್ತಮ ಕ್ರಿಕೆಟ್ ಆಡಿದೆ. ಹೊಸ ಸೀಸನ್‌ನಲ್ಲಿ ಇಡೀ ತಂಡದೊಂದಿಗೆ ಕೆಲಸ ಮಾಡಿ, ಬಲಿಷ್ಠ ಹಾಗೂ ನಿರ್ಭೀತ ತಂಡವನ್ನು ಕಟ್ಟಲು ಕಾತರನಾಗಿದ್ದೇನೆ ಎಂದು ಗಂಗೂಲಿ ಹೇಳಿದ್ದಾರೆ.
‘ದಾದಾ’ ಬಗ್ಗೆ ಪಾರ್ಥ್ ಜಿಂದಾಲ್ ಮೆಚ್ಚುಗೆ
ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಹಾಗೂ ಸಹ-ಮಾಲೀಕ ಪಾರ್ಥ್ ಜಿಂದಾಲ್ ಕೂಡ ಸೌರವ್ ಗಂಗೂಲಿ ಅವರ ನೇಮಕದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ದಾದಾ ಯಾವಾಗಲೂ ಡೆಲ್ಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ ಇದೀಗ ತಂಡದ ಮುಖ್ಯ ಕೋಚ್ ಆಗಿ ಕೋಚಿಂಗ್ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪಾರ್ಥ್ ಜಿಂದಾಲ್ ತಿಳಿಸಿದ್ದಾರೆ.
ಗಂಗೂಲಿ ಅವರ ಅಪಾರ ಅನುಭವ, ನಾಯಕತ್ವದ ಗುಣಗಳು ಹಾಗೂ ದೂರದೃಷ್ಟಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಮುನ್ನಡೆಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ತಂಡದ ಆಟಗಾರರು ಹಾಗೂ ಸಿಬ್ಬಂದಿ ಕೂಡ ಗಂಗೂಲಿ ಅವರಿಂದ ಸಾಕಷ್ಟು ಕಲಿಯಲು ಉತ್ಸುಕರಾಗಿದ್ದಾರೆ ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ.
ಹೀಗಾಗಿ ಸೌರವ್ ಗಂಗೂಲಿ ಅವರ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.



