ಬಹುಭಾಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಇದೀಗ ಜೀವನದ ಮತ್ತೊಂದು ಮಹತ್ವದ ಗುರಿಯನ್ನು ಸಾಧಿಸಿದ್ದಾರೆ. ಸಿನಿಮಾ ಮತ್ತು ನೃತ್ಯದ ನಡುವೆಯೇ ಎಂಬಿಬಿಎಸ್ ಪೂರ್ಣಗೊಳಿಸಿದ ಅವರು, ಡಿವೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ವೈದ್ಯ ಪದವಿ ಪಡೆದಿದ್ದಾರೆ.
ಕನ್ನಡ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದ ಶ್ರೀಲೀಲಾ, ಬಾಲಿವುಡ್ನಲ್ಲೂ ಒಟ್ಟಿಗೆ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ತಮಿಳು ಚಿತ್ರರಂಗದಲ್ಲೂ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ.
ಪದವಿ ಸಮಾರಂಭದಲ್ಲಿ ವೈದ್ಯರ ಪ್ರತಿಜ್ಞೆ ಸ್ವೀಕರಿಸುತ್ತಿರುವ ಹಾಗೂ ಅಧಿಕೃತ ಘೋಷಣೆ ನಂತರ ಸಂತಸದಿಂದ ನಗುತ್ತಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿನಿಮಾ ಕ್ಷೇತ್ರದಲ್ಲಿ ಓದಿನ ಹಿನ್ನೆಲೆ ಕಡಿಮೆ ಎನ್ನುವ ಕಲ್ಪನೆಗೆ ಅವರು ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ನಂತರ ಇದೀಗ ಶ್ರೀಲೀಲಾ ಸಹ ವೈದ್ಯೆಯಾಗಿರುವುದು ವಿಶೇಷ. ಚಿತ್ರರಂಗದಲ್ಲಿ ಎಂಜಿನಿಯರ್ ಹಾಗೂ ವೈದ್ಯ ಪದವಿಧರರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ.
ಪ್ರಸ್ತುತ ಅವರು ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ, ತಮಿಳಿನಲ್ಲಿ ಧನುಶ್ ಹಾಗೂ ಪ್ರದೀಪ್ ರಂಗನಾಥನ್ ಜೊತೆ, ಹಿಂದಿಯಲ್ಲಿ ‘ಆಶಿಖಿ 3’ ಹಾಗೂ ರಣ್ವೀರ್ ಸಿಂಗ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದೆಡೆ ವೈದ್ಯೆ, ಮತ್ತೊಂದೆಡೆ ಸ್ಟಾರ್ ನಟಿ — ಎರಡೂ ಜಗತ್ತನ್ನೂ ಸಮತೋಲನಗೊಳಿಸುತ್ತಿರುವ ಶ್ರೀಲೀಲಾ ಇದೀಗ ಯುವಜನತೆಗೆ ಪ್ರೇರಣೆಯಾಗಿದ್ದಾರೆ.



