ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಸಂಚರಿಸಬೇಕಿದ್ದ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ.
ಕಗ್ಗಲಿಪುರ ಬಳಿಯ ತಾತಗುಣಿ ಸಮೀಪದ ಬ್ರಿಡ್ಜ್ ಪಕ್ಕದ ಕಾಂಪೌಂಡ್ ಪ್ರದೇಶದಲ್ಲಿ ಕಲ್ಲು ಕ್ವಾರಿಗಳಿಗೆ ಬಳಸುವ ಎರಡು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶವು ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ.
ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳು ಸಕ್ರಿಯ ಸ್ಥಿತಿಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ತಾತ್ಕಾಲಿಕ ನಿರಾಳತೆ ಕಂಡುಬಂದಿದೆ. ಆದರೂ ಘಟನೆಯನ್ನು ಭದ್ರತಾ ಲೋಪವಾಗಿ ಪರಿಗಣಿಸಿ ಪೊಲೀಸರು ಗಂಭೀರ ತನಿಖೆ ಆರಂಭಿಸಿದ್ದಾರೆ.
ಘಟನೆಯ ಮಾಹಿತಿ ದೊರೆತ ತಕ್ಷಣ ಕೇಂದ್ರ ವಿಭಾಗದ ಡಿಐಜಿ ಗಿರೀಶ್ ಅವರು ಕಗ್ಗಲಿಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಶ್ರೀನಿವಾಸ್ ಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಸ್ಫೋಟಕ ವಸ್ತುಗಳನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಬಿಟ್ಟುಹೋಗಿದ್ದಾರೆಯೇ ಅಥವಾ ಹಿಂದಿನ ದಿನಗಳಲ್ಲಿ ಎಸೆದಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶಂಕಿತರ ಪತ್ತೆಗೆ ಹುಡುಕಾಟ ಮುಂದುವರಿದಿದೆ.
ಪ್ರಧಾನಿ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಈ ಘಟನೆ ಹೆಚ್ಚಿನ ಭದ್ರತಾ ಮಹತ್ವ ಪಡೆದಿದ್ದು, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.



