ಕನ್ನಡ ಚಿತ್ರರಂಗದ ಜನಪ್ರಿಯ ನಟಿ, “ಡಿಂಪಲ್ ಕ್ವೀನ್” ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಕೊರಗಜ್ಜ ದೈವ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ್ದಾರೆ.
ತಾವು ಅಂದುಕೊಂಡ ಕೆಲಸಗಳು ನೆರವೇರಿದರೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದ ರಚಿತಾ ರಾಮ್ ಅವರು ಇದೀಗ ಆ ಹರಕೆಯನ್ನು ಪೂರ್ಣಗೊಳಿಸಿದ್ದಾರೆ. ಭಕ್ತಿಭಾವದ ವಾತಾವರಣದಲ್ಲಿ ಈ ಕಾರ್ಯಕ್ರಮ ನೆರವೇರಿದ್ದು, ಸ್ಥಳೀಯ ಭಕ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದಾರೆ.
ರಚಿತಾ ರಾಮ್ ಕನ್ನಡ ಚಿತ್ರರಂಗದ ಹಲವು ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಅವರು ಧ್ರುವ ಸರ್ಜಾ ಜೊತೆ “ಕ್ರಿಮಿನಲ್” ಹಾಗೂ ನಿನಾಸಂ ಸತೀಶ್ ಜೊತೆ “ಅಯೋಗ್ಯ 2” ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇದಲ್ಲದೆ ತಮಿಳು ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಯುತ್ತಿದ್ದು, ತೆಲುಗಿನಲ್ಲಿ ಎರಡು ಹೊಸ ಸಿನಿಮಾಗಳು ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.



