ವಿಜಯಸಾಕ್ಷಿ ಸುದ್ದಿ, ಗದಗ: ಜೂನ್ 2ರಿಂದ 5ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 2ನೇ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಗದಗ ಜಿಲ್ಲೆಯ ಪ್ಯಾರಾ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಗದಗಿನ ಮಾಲತಿ ಇನಾಮತಿ ಅವರು ಈ ಬಾರಿಯೂ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ ಬಾರಿ ನಡೆದ ದಕ್ಷಿಣ ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡ ಚಿನ್ನದ ಪದಕ ಗೆದ್ದು ಸಾಧನೆ ಮಾಡಿತ್ತು.
ಇದೇ ವೇಳೆ ಬಿಂಕದಕಟ್ಟಿ ಗ್ರಾಮದ ಪ್ಯಾರಾ ಥ್ರೋಬಾಲ್ ಕ್ರೀಡಾಪಟುವಾದ ದೇವಮ್ಮಾ ಗರೇಬಾಳ ಅವರು ಕೂಡ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಗದಗಿನ ರಿಯಾಜ್ ಬಾನಿ ಅವರು ಭಾರತೀಯ ತಂಡದ ಸಹಾಯಕ ಕೋಚ್ ಆಗಿ ಮಲೇಷ್ಯಾಕ್ಕೆ ತೆರಳಲಿದ್ದಾರೆ. ಜಿಲ್ಲೆಯ ಕ್ರೀಡಾಪಟುಗಳ ಈ ಸಾಧನೆಗೆ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.



