ದಾವಣಗೆರೆ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಕೆ. ಕಲ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ-48 ಸಮೀಪದ ಅಡಿಕೆ ತೋಟದಲ್ಲಿರುವ ಗೋದಾಮಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಅನಿಲ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಶಿವಕುಮಾರ್ ಅವರಿಗೆ ಸೇರಿದ ಗೋದಾಮನ್ನು ಅನಿಲ್ ಗುತ್ತಿಗೆಗೆ ಪಡೆದಿದ್ದರು. ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಲಾಗಿದ್ದು, ಅನಿಲ ಸೋರಿಕೆಯಿಂದ ಏಕಾಏಕಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಫೋಟದ ತೀವ್ರತೆಗೆ ಹಲವು ಸಿಲಿಂಡರ್‌ಗಳು ಗಾಳಿಗೆ ಹಾರಿ ಚದುರಿಹೋಗಿದ್ದು, ಕೆಲವು ಪಕ್ಕದ ಜಮೀನುಗಳಿಗೂ ಬಿದ್ದಿವೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗೋದಾಮಿನಲ್ಲಿ ಇನ್ನೂ ಕೆಲವು ಸಿಲಿಂಡರ್‌ಗಳು ಇರುವ ಶಂಕೆಯಿಂದ ಮತ್ತಷ್ಟು ಸ್ಫೋಟ ಸಂಭವಿಸುವ ಭೀತಿ ಕೆಲಕಾಲ ಕಾಡಿತ್ತು.
ಸದ್ಯ ಸ್ಥಳವನ್ನು ಭದ್ರತಾ ವಲಯವನ್ನಾಗಿ ಘೋಷಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಸಿಲಿಂಡರ್‌ಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿತ್ತು ಹಾಗೂ ಸ್ಫೋಟಕ್ಕೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



