ವಿಜಯಸಾಕ್ಷಿ ಸುದ್ದಿ, ಗದಗ: ಮೇ 2026ರಲ್ಲಿ ನಡೆದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ನಗರದ ಒಕ್ಕಲಗೇರಿ ಓಣಿಯ ರೋಹನ ರವಿ ಜೋಗಿನ ಅವರು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೆಇಬಿಯ ಪ್ರಥಮ ದರ್ಜೆ ಗುತ್ತಿಗೆದಾರ ರವಿ ಜೋಗಿನ ಅವರ ಪುತ್ರರಾಗಿರುವ ರೋಹನ, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಈ ಯಶಸ್ಸು ಸಾಧಿಸಿದ್ದಾರೆ.
ಅವರು ತಮ್ಮ ಎಸ್‌ಎಸ್‌ಎಲ್‌ಸಿ ಶಿಕ್ಷಣವನ್ನು ನಗರದ ಕೆ.ಎಲ್.ಇ. ಪ್ರೌಢಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಎ.ಎಸ್.ಎಸ್. ಕಾಲೇಜಿನಲ್ಲಿ ಪೂರ್ಣಗೊಳಿಸಿ, ಬಳಿಕ ಸಿಎ ವ್ಯಾಸಂಗದಲ್ಲಿ ತೊಡಗಿಸಿಕೊಂಡಿದ್ದರು.
ದೇಶದ ಅತ್ಯಂತ ಸವಾಲಿನ ವೃತ್ತಿಪರ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿರುವ ರೋಹನ ಅವರ ಸಾಧನೆಗೆ ಗುರು-ಹಿರಿಯರು, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.



