ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರು ಮಳೆಯ ಕೊರತೆಯಿಂದ ರೈತರು ಆತಂಕದಲ್ಲಿರುವ ಹಿನ್ನೆಲೆಯಲ್ಲಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಜನಜೀವನ ಸುಭಿಕ್ಷವಾಗಲೆಂದು ಲಕ್ಷ್ಮೇಶ್ವರ ಪಟ್ಟಣದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತಾಲೂಕು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುತ್ತೈದೆಯರು ದೇವಿಗೆ ಕುಂಕುಮ, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ, ಉತ್ತಮ ಮಳೆ, ಉತ್ತಮ ಬೆಳೆ, ಕುಟುಂಬದ ಸುಖ-ಶಾಂತಿ ಹಾಗೂ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಧಾರ್ಮಿಕ ವಾತಾವರಣದಲ್ಲಿ ನಡೆದ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಮಾಗಡಿ, ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಐಕ್ಯತೆ, ವಿಶ್ವಾಸ ಮತ್ತು ರೈತರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ. ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ರೈತರ ಬದುಕು ಹಸನಾಗಲಿ ಹಾಗೂ ಲೋಕಕಲ್ಯಾಣವಾಗಲಿ ಎಂಬ ಆಶಯದಿಂದ ರೈತರು ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು, ಗುರು-ಹಿರಿಯರು, ತಾಯಂದಿರು, ಯುವಕರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.



